ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 1st Test: ಮೊದಲ ಇನಿಂಗ್ಸ್‌ನಲ್ಲಿ 6 ರನ್‌ ಮುನ್ನಡೆ ಸಾಧಿಸಿದ ಭಾರತ

ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಆಟಗಾರರ ಕಳಪೆ ಫೀಲ್ಡಿಂಗ್‌ ಎಷ್ಟರಮಟ್ಟಿಗೆ ಇತ್ತೆಂದರೆ ಒಟ್ಟು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಈ ಎಲ್ಲ ಕ್ಯಾಚ್‌ಗಳು ಬುಮ್ರಾ ಓವರ್‌ನಲ್ಲಿ ಕಂಡುಬಂತು. ದ್ವಿತೀಯ ಇನಿಂಗ್ಸ್‌ನಲ್ಲಿಯೂ ಭಾರತೀಯರು ಇದೇ ರೀತಿಯ ಕ್ಯಾಚ್‌ ಕೈಚೆಲ್ಲಿದರೆ ಸೋಲು ಭೀತಿಗೂ ಸಿಲುಕಬಹುದು.

ಮೊದಲ ಇನಿಂಗ್ಸ್‌ನಲ್ಲಿ 6 ರನ್‌ ಮುನ್ನಡೆ ಸಾಧಿಸಿದ ಭಾರತ

Profile Abhilash BC Jun 22, 2025 8:45 PM

ಲೀಡ್ಸ್‌: ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರ 5 ವಿಕೆಟ್‌ ಸಾಧನೆಯಿಂದ ಇಂಗ್ಲೆಂಡ್‌ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ(IND vs ENG 1st Test) ಭಾರತ 6 ರನ್‌ ಅಂತರದ ಮುನ್ನಡೆ ಸಾಧಿಸಿದೆ. ಭಾರತದ 471 ರನ್‌ ಬೆನ್ನಟ್ಟಿದ ಇಂಗ್ಲೆಂಡ್‌ 465ರನ್‌ ಸರ್ವಪತನ ಕಂಡಿತು. 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್‌ಗೆ ಹ್ಯಾರಿ ಬ್ರೂಕ್ಸ್‌ ಆಸರೆಯಾದರು. ಅವರು 99 ರನ್‌ ಗಳಿಸಿ ಕೇವಲ ಒಂದು ರನ್‌ ಅಂತರದಿಂದ ಶತಕ ವಂಚಿತರಾದರು.

ಶತಕ ಬಾರಿಸಿದ್ದ ಓಲಿ ಪೋಪ್‌ ಅವರ ವಿಕೆಟ್‌ ಭಾನುವಾರ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಉರುಳಿಸಿದರು. ಈ ವಿಕೆಟ್‌ ಪತನದೊಂದಿಗೆ ಇಂಗ್ಲೆಂಡ್‌ ದಿಢೀರ್‌ ಕುಸಿತ ಕಂಡಿತು. ನಾಯಕ ಬೆನ್‌ ಸ್ಟೋಕ್ಸ್‌ 20 ರನ್‌ ಗಳಿಸಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಬ್ರೂಕ್‌ ಇನ್ನೇನು ಶತಕ ಬಾರಿಸುತ್ತಾರೆ ಎನ್ನುವಷ್ಟರಲ್ಲಿ ಪ್ರಸಿದ್ಧ್‌ ಅವರ ಎಸೆತಕ್ಕೆ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ಶಾರ್ದೂಲ್‌ ಠಾಕೂರ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು.

4 ಕ್ಯಾಚ್‌ ಕೈಚೆಲ್ಲಿದ ಭಾರತೀಯರು

ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಆಟಗಾರರ ಕಳಪೆ ಫೀಲ್ಡಿಂಗ್‌ ಎಷ್ಟರಮಟ್ಟಿಗೆ ಇತ್ತೆಂದರೆ ಒಟ್ಟು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಈ ಎಲ್ಲ ಕ್ಯಾಚ್‌ಗಳು ಬುಮ್ರಾ ಓವರ್‌ನಲ್ಲಿ ಕಂಡುಬಂತು. ದ್ವಿತೀಯ ಇನಿಂಗ್ಸ್‌ನಲ್ಲಿಯೂ ಭಾರತೀಯರು ಇದೇ ರೀತಿಯ ಕ್ಯಾಚ್‌ ಕೈಚೆಲ್ಲಿದರೆ ಸೋಲು ಭೀತಿಗೂ ಸಿಲುಕಬಹುದು.

24.4 ಓವರ್‌ ಬೌಲಿಂಗ್‌ ದಾಳಿ ನಡೆಸಿದ ಬುಮ್ರಾ 83ರನ್‌ ವೆಚ್ಚದಲ್ಲಿ 5 ವಿಕೆಟ್‌ ಉರುಳಿಸಿದರು. ಇದೇ ವೇಳೆ ಬುಮ್ರಾ ವಿದೇಶಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 5 ವಿಕೆಟ್‌ ಗೊಂಚಲು ಪಡೆದ ಕಪಿಲ್‌ದೇವ್‌ ಸಾಧನೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಒಟ್ಟು 12 ಬಾರಿ ಈ ಸಾಧನೆ ಮಾಡಿದ್ದಾರೆ. ಕಪಿಲ್‌ 66 ಪಂದ್ಯಗಳಿಂದ ಈ ಸಾಧನೆ ಮಾಡಿದ್ದರೆ, ಬುಮ್ರಾ ಕೇವಲ 34 ಟೆಸ್ಟ್‌ಗಳಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದಾರೆ. ಬುಮ್ರಾ ಹೊರತುಪಡಿಸಿ ಪ್ರಸಿದ್ಧ್‌ ಕೃಷ್ಣ ಮೂರು, ಮೊಹಮ್ಮದ್‌ ಸಿರಾಜ್‌ ಎರಡು ವಿಕೆಟ್‌ ಪಡೆದರು.