IPL 2025: ಐಪಿಎಲ್ ಪಂದ್ಯಗಳ ನೇರಪ್ರಸಾರಕ್ಕೆ ಮುಂದಾದ ಐನಾಕ್ಸ್
ಕಳೆದ ವರ್ಷ ನಡೆದಿದ್ದ ಐಸಿಸಿ ಪುರುಷರ ಟಿ20 ವಿಶ್ವಕಪ್ನ ಟೀಮ್ ಇಂಡಿಯಾದ ಎಲ್ಲ ಪಂದ್ಯಗಳು ಹಾಗೂ ಸೆಮಿ, ಫೈನಲ್ ಪಂದ್ಯವನ್ನು ದೇಶದಾದ್ಯಂತ ಇರುವ ಐನಾಕ್ಸ್ ಮೂಲಕ ನೇರಪ್ರಸಾರ ಮಾಡಿತ್ತು. ಸದ್ಯ ಐಪಿಎಲ್ನಲ್ಲಿ ನಾಲ್ಕು ಪಂದ್ಯಗಳು ಮುಕ್ತಾಯ ಕಂಡಿದ್ದು, ಇಂದು(ಮಾ.25) ಐದನೇ ಪಂದ್ಯ ನಡೆಯಲಿದೆ.


ಮುಂಬಯಿ: ಸ್ಟಾರ್ ನಟರ ಹೊಸ ಸಿನಿಮಾ ಬಿಡುಗಡೆಯಾದ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಿವಿಆರ್ ಐನಾಕ್ಸ್(PVR Inox) ಸಂಸ್ಥೆ ಇದೀಗ ತನ್ನ ಆದಾಯಕ್ಕೆ ಬೇರೆ ದಾರಿ ಕಂಡುಕೊಂಡಿದ್ದು, ದೇಶದಾದ್ಯಂತ ಇರುವ ಐನಾಕ್ಸ್ ಮೂಲಕ ಪ್ರಸಕ್ತ ಸಾಗುತ್ತಿರುವ ಐಪಿಎಲ್(IPL 2025) ಪಂದ್ಯಾವಳಿಯನ್ನು ನೇರಪ್ರಸಾರ ಮಾಡಲು ಮುಂದಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಕುರಿತು ಐನಾಕ್ಸ್ ಬಿಸಿಸಿಐ(BCCI) ಜತೆ ಲೀಸರ್ ಲಿಮಿಟೆಡ್ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಿದೆ ಎನ್ನಲಾಗಿದೆ. ದೇಶದಾದ್ಯಂತ 30ಕ್ಕೂ ಹೆಚ್ಚು ನಗರಗಳಲ್ಲಿ ಪಂದ್ಯವನ್ನು ನೇರಪ್ರಸಾರ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ವೀಕೆಂಡ್ ಮ್ಯಾಚ್, ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳ ಪ್ರದರ್ಶನಕ್ಕೆ ಪಿವಿಆರ್ ನಿರ್ಧರಿಸಿದೆ. ಈ ಮೊದಲು ಕೆಲವು ಪಂದ್ಯಗಳನ್ನು ಪಿವಿಆರ್ ಬಿಗ್ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಮಾಡಿದ್ದು, ಆಗ ಸಿನಿಮಾ ವಲಯದಿಂದ ವಿರೋಧ ವ್ಯಕ್ತವಾಗಿತ್ತು.
ಕಳೆದ ವರ್ಷ ನಡೆದಿದ್ದ ಐಸಿಸಿ ಪುರುಷರ ಟಿ20 ವಿಶ್ವಕಪ್ನ ಟೀಮ್ ಇಂಡಿಯಾದ ಎಲ್ಲ ಪಂದ್ಯಗಳು ಹಾಗೂ ಸೆಮಿ, ಫೈನಲ್ ಪಂದ್ಯವನ್ನು ದೇಶದಾದ್ಯಂತ ಇರುವ ಐನಾಕ್ಸ್ ಮೂಲಕ ನೇರಪ್ರಸಾರ ಮಾಡಿತ್ತು. ಸದ್ಯ ಐಪಿಎಲ್ನಲ್ಲಿ ನಾಲ್ಕು ಪಂದ್ಯಗಳು ಮುಕ್ತಾಯ ಕಂಡಿದ್ದು, ಇಂದು(ಮಾ.25) ಐದನೇ ಪಂದ್ಯ ನಡೆಯಲಿದೆ.
ಈ ಬಾರಿ ಐಪಿಎಲ್ ಟೂರ್ನಿ ದೇಶದ ವಿವಿಧ 13 ನಗರಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. 10 ಐಪಿಎಲ್ ತಂಡಗಳು ತಮ್ಮ ತವರಿನ ಮೈದಾನದಲ್ಲಿ ಕ್ರಿಕೆಟ್ ಆಡುವುದು ಮಾತ್ರವಲ್ಲದೇ ತಮ್ಮ ತವರಿನಾಚೆ ಅಂದರೆ ವಿಶಾಖಪಟ್ಟಣಂ, ಗುವಾಹಟಿ ಹಾಗೂ ಧರ್ಮಶಾಲಾ ಮೈದಾನದಲ್ಲಿಯೂ ಕೆಲವು ಐಪಿಎಲ್ ಪಂದ್ಯಗಳನ್ನು ಆಡಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಮ್ಮ ಪಾಲಿನ ಕೆಲವು ಪಂದ್ಯಗಳನ್ನು ಈ ಮೂರು ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲಿವೆ.
50 ನಗರಗಳಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ
ಐಪಿಎಲ್(IPL 2025) ಪಂದ್ಯಗಳನ್ನು ಮೈದಾನದಲ್ಲಿ ನೇರವಾಗಿ ವೀಕ್ಷಿಸಲು ಅವಕಾಶ ಇಲ್ಲದ ಪ್ರೇಕ್ಷಕರಿಗಾಗಿ ಬಿಸಿಸಿಐ(BCCI) ದೊಡ್ಡ ಮಟ್ಟದಲ್ಲೇ ಫ್ಯಾನ್ ಪಾರ್ಕ್(IPL 2025 Fan Parks) ವ್ಯವಸ್ಥೆ ಮಾಡಿದೆ. ದೇಶದ 23 ರಾಜ್ಯಗಳ 50 ನಗರಗಳಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ ಮಾಡಿದೆ. ಕರ್ನಾಟಕದಲ್ಲಿ ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಮತ್ತು ತುಮಕೂರಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಒಟ್ಟು 10 ವಾರಗಳ ಕಾಲ ಈ ಫ್ಯಾನ್ ಪಾರ್ಕ್ ಇರಲಿದೆ. ಈ ಮೂಲಕ ಐಪಿಎಲ್ನ ರೋಮಾಂಚನವನ್ನು ದೇಶದ ಮೂಲೆ ಮೂಲೆಗಲ್ಲಿ ಅಭಿಮಾನಿಗಳು ಆನಂದಿಸಬಹುದಾಗಿದೆ.
ಪಂದ್ಯದ ನೇರ ಪ್ರದರ್ಶನದ ವೇಳೆ ಸಂಗೀತ, ಮನರಂಜನೆ, ಫುಡ್ ಕೋರ್ಟ್ಗಳು, ಮಕ್ಕಳ ಆಟದ ವಲಯ ಮತ್ತು ವರ್ಚುವಲ್ ಬ್ಯಾಟಿಂಗ್ ವಲಯ, ನೆಟ್ ಮೂಲಕ ಬೌಲಿಂಗ್, ಫೇಸ್-ಪೇಂಟಿಂಗ್ ವಲಯಗಳು ಸೇರಿದಂತೆ ಅತ್ಯಾಕರ್ಷಕ ಚಟುವಟಿಕೆಗಳು ಇರಲಿದೆ.