ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tej Pratap Yadav: ಡ್ಯಾನ್ಸ್‌ ಮಾಡಿಲ್ಲಾಂದ್ರೆ ಸಸ್ಪೆಂಡ್‌ ಮಾಡಿಸ್ತೇನೆ; ಪೊಲೀಸ್‌ ಅಧಿಕಾರಿಗೆ ಬೆದರಿಕೆ ಹಾಕಿದ ಲಾಲು ಪುತ್ರ ತೇಜ್‌ ಪ್ರತಾಪ್‌ ಯಾದವ್‌

Tej Pratap Yadav: ಹೋಳಿ ಆಚರಣೆ ವೇಳೆ ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳದ ನಾಯಕ, ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ದರ್ಪ ಮೆರೆದಿದ್ದು, ಡ್ಯಾನ್ಸ್‌ ಮಾಡದಿದ್ದರೆ ಅಮಾನತು ಮಾಡಿಸುತ್ತೇನೆ ಎಂದು ಕಾನ್ಸ್‌ಟೇಬಲ್‌ಗೆ ಬೆದರಿಕೆ ಹಾಕಿರುವ ವಿಡಿಯೊ ಇದೀಗ ವೈರಲ್‌ ಆಗುತ್ತಿದೆ.

ಪೊಲೀಸ್‌ ಅಧಿಕಾರಿಗೆ ಬೆದರಿಕೆ ಹಾಕಿದ ಲಾಲು ಪುತ್ರ ತೇಜ್‌ ಪ್ರತಾಪ್‌

Profile Ramesh B Mar 15, 2025 9:45 PM

ಪಾಟ್ನಾ: ದೇಶಾದ್ಯಂತ ಹೋಳಿ (Holi) ಸಂಭ್ರಮ ಮನೆ ಮಾಡಿದೆ. ಅದರಲ್ಲಿಯೂ ಉತ್ತರ ಭಾರತ ಬಣ್ಣದೋಕುಳಿಯಲ್ಲಿ ಮಿಂದೇಳುತ್ತಿದೆ. ಬೀದಿ ಬೀದಿಗಳಲ್ಲಿ ಜನ ಗುಂಪುಗೂಡಿ, ಹಾಡು ಹಾಕಿ ಡ್ಯಾನ್ಸ್‌ ಮಾಡುತ್ತ, ಪರಸ್ಪರ ಬಣ್ಣ ಎರಚಿ ಖುಷಿಯಿಂದ ಹಬ್ಬ ಆಚರಿಸುತ್ತಿದ್ದಾರೆ. ಈ ಮಧ್ಯೆ ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (RJD)ದ ನಾಯಕ, ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ (Tej Pratap Yadav) ದರ್ಪ ಮೆರೆದಿದ್ದಾರೆ. ಶನಿವಾರ (ಮಾ. 15) ಪಾಟ್ನಾದ ತಮ್ಮ ನಿವಾಸದಲ್ಲಿ ನಡೆದ ಹೋಳಿ ಆಚರಣೆ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿದ್ದಾರೆ. ಡ್ಯಾನ್ಸ್‌ ಮಾಡದಿದ್ದರೆ ಅಮಾನತು ಮಾಡಿಸುತ್ತೇನೆ ಎಂದು ಕಾನ್ಸ್‌ಟೇಬಲ್‌ಗೆ ಬೆದರಿಕೆ ಹಾಕಿರುವ ವಿಡಿಯೊ ಇದೀಗ ವೈರಲ್‌ ಆಗುತ್ತಿದೆ.

ಪಾಟ್ನಾದಲ್ಲಿರುವ ತಮ್ಮ ನಿವಾಸದಲ್ಲಿ ತೇಜ್‌ ಪ್ರತಾಪ್‌ ಯಾದವ್‌ ಪಕ್ಷದ ಕಾರ್ಯಕರ್ತರಿಗಾಗಿ ಹೋಳಿ ಹಬ್ಬ ಆಯೋಜಿಸಿದ್ದರು. ಈ ವೇಳೆ ಡ್ಯಾನ್ಸ್‌ ಮಾಡುವಂತೆ ಪೊಲೀಸ್‌ ಅಧಿಕಾರಿ ಬಳಿ ಒತ್ತಾಯಿಸಿದ್ದಾರೆ.

ವೈರಲ್‌ ಆದ ವಿಡಿಯೊ ಇಲ್ಲಿದೆ



ಘಟನೆ ವಿವರ

ಭದ್ರತೆಗಾಗಿ ಪೊಲೀಸರು ನಿಯೋಜಿಸಲಾಗಿತ್ತು. ಸೋಫಾದಲ್ಲಿ ಕುಳಿತ ತೇಜ್‌ ಪ್ರತಾಪ್‌ ಯಾದವ್‌, ʼʼಹೇ ಕಾನ್ಸ್‌ಟೇಬಲ್‌ ದೀಪಕ್‌, ನಾನೀಗ ಹಾಡು ಪ್ಲೇ ಮಾಡುತ್ತೇನೆ. ನೀನು ಡ್ಯಾನ್ಸ್‌ ಮಾಡ್ಲೇಬೇಕು. ಪರ್ವಾಗಿಲ್ಲ ಇದು ಹೋಳಿ. ಒಂದು ವೇಳೆ ನೀನು ಡ್ಯಾನ್ಸ್‌ ಮಾಡಿಲ್ಲ ಎಂದಾದರೆ ಅಮಾನತುಗೊಳಿಸುತ್ತೇನೆʼʼ ಎಂದಿದ್ದಾರೆ. ಬಳಿಕ ಕಾನ್ಸ್‌ಟೇಬಲ್‌ ನೃತ್ಯ ಮಾಡಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಅಲ್ಲದೆ ಹೋಳಿ ಆಚರಣೆ ವೇಳೆ ತೇಜ್‌ ಪ್ರತಾಪ್‌ ಯಾದವ್‌ ಮನೆ ಹೊರಗೆ ಸ್ಕೂಟರ್‌ನಲ್ಲಿ ಸುತ್ತಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ವಿಮಾನದಲ್ಲಿ ಹೋಳಿ ಡ್ಯಾನ್ಸ್ ಮಾಡಿದ ಸ್ಪೈಸ್ ಜೆಟ್ ಕ್ಯಾಬಿನ್ ಸಿಬ್ಬಂದಿ; ವಿಡಿಯೊ ವೈರಲ್

ಕಿಡಿಕಾರಿದ ಬಿಜೆಪಿ

ಸದ್ಯ ತೇಜ್‌ ಪ್ರತಾಪ್‌ ಯಾದವ್‌ ಅವರು ಪೊಲೀಸ್‌ ಅಧಿಕಾರಿಗೆ ಬೆದರಿಕೆ ಹಾಕಿರುವ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ, ಜೆಡಿಯು ನಾಯಕರು ಅವರ ನಡೆಗೆ ಕಿಡಿಕಾರಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಪ್ರತಿಕ್ರಿಯಿಸಿ, "ಕಾನೂನನ್ನು ಉಲ್ಲಂಘಿಸುವುದು, ಸಾಂವಿಧಾನಿಕ ಹುದ್ದೆಗಳಲ್ಲಿರುವ ಸಿಬ್ಬಂದಿಯನ್ನು ಗೇಲಿ ಮಾಡುವುದು, ಸಂವಿಧಾನವನ್ನು ಪದೇ ಪದೆ ಅವಮಾನಿಸುವುದು ಮತ್ತು ಜನರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಆರ್‌ಜೆಡಿಯ ಸಂಸ್ಕೃತಿ" ಎಂದು ಹೇಳಿದ್ದಾರೆ.

"ಆರ್‌ಜೆಡಿಯ ಸಿದ್ಧಾಂತ ಎಂದಿಗೂ ಬದಲಾಗುವುದಿಲ್ಲʼʼ ಎಂದು ವಾಗ್ದಾಳಿ ನಡೆಸಿದ್ದಾರೆ. ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಕುಮಾರ್ ಝಾ ಮಾತನಾಡಿ, "ಬಿಹಾರದ ಜನರು ಆರ್‌ಜೆಡಿಯ ಸ್ಥಿತಿಯನ್ನು ನೋಡುತ್ತಿದ್ದಾರೆ. ಜನರು ಅಭಿವೃದ್ಧಿಗಾಗಿ ಮಾತ್ರ ಮತ ಚಲಾಯಿಸುತ್ತಾರೆʼʼ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, "ತಂದೆಯಂತೆ ಮಗ. ಆಗಿನ ಮುಖ್ಯಮಂತ್ರಿ ತಂದೆ (ಲಾಲು ಪ್ರಸಾದ್‌ ಯಾದವ್‌) ಕಾನೂನನ್ನು ತಮಗೆ ಬೇಕಾದಂತೆ ಬದಲಾಯಿಸುತ್ತಿದ್ದರು. ಬಿಹಾರವನ್ನು ಜಂಗಲ್ ರಾಜ್ ಆಗಿ ಪರಿವರ್ತಿಸುತ್ತಿದ್ದರು. ಈಗ ಮಗ ಅಧಿಕಾರದಿಂದ ಹೊರಗಿದ್ದರೂ ಬೆದರಿಕೆ ಮತ್ತು ಒತ್ತಡದ ಮೂಲಕ ಕಾನೂನುಗಳು ಮತ್ತು ಕಾನೂನಿನ ರಕ್ಷಕರನ್ನು ಕುಣಿಸಲು ಯತ್ನಿಸುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

"ತೇಜ್‌ ಪ್ರತಾಪ್‌ ಯಾದವ್‌ ಡ್ಯಾನ್ಸ್‌ ಮಾಡದಿದ್ದರೆ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಆರ್‌ಜೆಡಿ ಜಂಗಲ್ ರಾಜ್‌ನಲ್ಲಿ ನಂಬಿಕೆ ಇಟ್ಟಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಅವರು ಅಪ್ಪಿ ತಪ್ಪಿ ಅಧಿಕಾರಕ್ಕೆ ಬಂದರೆ ಇದೇ ರೀತಿ ಕಾನೂನನ್ನು ಉಲ್ಲಂಘಿಸುತ್ತಾರೆ. ಇದು ಟ್ರೈಲರ್ ಇದ್ದಂತೆ. ಆದ್ದರಿಂದ ಅವರನ್ನು ಅಧಿಕಾರದಿಂದ ದೂರವಿಡಬೇಕುʼʼ ಎಂದು ಕರೆ ನೀಡಿದ್ದಾರೆ.