Raghavendra Rayalapadu Column: ಬದುಕು ಎಂದರೆ ಓದು ಬರಹ ಮಾತ್ರ ಅಲ್ಲ !
ಇಬ್ಬರೂ ವೃತ್ತಿಯಲ್ಲಿದ್ದುದರಿಂದ ಹೊಸ ಶೈಕ್ಷಣಿಕ ವರ್ಷದ ಆರಂಭವಾಗಿದ್ದ ನಿಮಿತ್ತ ಮದು ವೆಗೆ ಹೆಚ್ಚಿನ ದಿನಗಳ ರಜೆ ಸಿಕ್ಕಿರಲಿಲ್ಲ. ಮದುವೆಯಾದ ಕೆಲವೇ ದಿನಗಳಿಗೆ ನಮ್ಮ ಕೆಲಸಗಳಿಗೆ ಹಾಜರಾದೆವು. ಕಾಲೇಜಿನ ವಸತಿ ನಿಲಯದಲ್ಲಿದ್ದ ನಾನು ವಾರಾಂತ್ಯದ ರಜೆಯಲ್ಲಿ ಅವರಿದ್ದೆ ಡೆಗೆ ಹೋಗಬಹುದಿತ್ತಷ್ಟೆ. ಪ್ರವಾಸದ ಉದ್ದೇಶಕ್ಕೆ ಹೆಚ್ಚು ರಜೆ ಹಾಕುವ ಅವಕಾಶವೂ ಇರಲಿಲ್ಲ.


ರಾಘವೇಂದ್ರ ರಾಯಲಪಾಡು
ಮದುವೆಯಾದ ನವಜೋಡಿಯು ಹನಿಮೂನ್ ಹೋಗುವುದು ಸಾಮಾನ್ಯ. ಹನಿ ಮೂನ್ ಬದಲಿಗೆ, ತನ್ನ ಮಡದಿಯೊಡನೆ ತೇಜಸ್ವಿಯರ ಮನೆಗೆ ಭೇಟಿ ನೀಡಿದ ಅಪರೂಪದ ಉದಾಹರಣೆ ಇಲ್ಲಿದೆ! ಇದು 1994ರ ಒಂದು ‘ಪ್ರವಾಸಾನುಭವ’. ಸಾಹಿತ್ಯಾಸಕ್ತಿಯು ನಮ್ಮೀರ‍್ವರ ಸಮಾನಾಸಕ್ತಿಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ನನ್ನ ಲೇಖನ, ಕವಿತೆಗಳನ್ನು ರುಕ್ಮಿಣಿ ಓದಿದ್ದರು. ಅವರ ಬರೆಹಗಳನ್ನು ನಾನೂ ಓದಿ ಮೆಚ್ಚಿಕೊಂಡಿದ್ದೆ; ಬೆಂಗಳೂರಿನಲ್ಲಿ ನನ್ನ ಗೆಳೆಯರ (ಅವರಣ್ಣನ) ಕೊಠಡಿಯಲ್ಲಿ, ಅರಸೀ ಕೆರೆಯ ರುಕ್ಮಿಣಿ ಅವರ ಪರಿಚಯವಾದಾಗ ಇಬ್ಬರಲ್ಲೂ ಪರಸ್ಪರ ಅಭಿಮಾನ ಮೆಚ್ಚುಗೆ ಯಿತ್ತು. ಕ್ರಮೇಣ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ 1994 ಮೇ 26 ರಂದು ನಾವು ದಂಪತಿಗಳಾದೆವು. ಇಬ್ಬರೂ ವೃತ್ತಿಯಲ್ಲಿದ್ದುದರಿಂದ ಹೊಸ ಶೈಕ್ಷಣಿಕ ವರ್ಷದ ಆರಂಭ ವಾಗಿದ್ದ ನಿಮಿತ್ತ ಮದುವೆಗೆ ಹೆಚ್ಚಿನ ದಿನಗಳ ರಜೆ ಸಿಕ್ಕಿರಲಿಲ್ಲ.
ಇದನ್ನೂ ಓದಿ: Hari Paraak Column: ನಾವೇನ್ ಗ್ಯಾರಂಟಿ ಕೊಟ್ಟಿದ್ವಾ ಬೆಲೆ ಏರಿಕೆ ಮಾಡಲ್ಲ ಅಂತ ?
ಮದುವೆಯಾದ ಕೆಲವೇ ದಿನಗಳಿಗೆ ನಮ್ಮ ಕೆಲಸಗಳಿಗೆ ಹಾಜರಾದೆವು. ಕಾಲೇಜಿನ ವಸತಿ ನಿಲಯದಲ್ಲಿದ್ದ ನಾನು ವಾರಾಂತ್ಯದ ರಜೆಯಲ್ಲಿ ಅವರಿದ್ದೆಡೆಗೆ ಹೋಗಬಹುದಿತ್ತಷ್ಟೆ. ಪ್ರವಾಸದ ಉದ್ದೇಶಕ್ಕೆ ಹೆಚ್ಚು ರಜೆ ಹಾಕುವ ಅವಕಾಶವೂ ಇರಲಿಲ್ಲ.
ಹೀಗಿರಲು ಮನೆಯ ಹಿರಿಯರು ‘ಮದುವೆಯಾಗಿ ಇಷ್ಟು ದಿನವಾಯಿತು, ಹನಿಮೂನ್‌ಗೆ ಹೋಗದಿದ್ದರೆ ಹೋಗಲಿ; ಶನಿವಾರ,ಭಾನುವಾರಗಳಂದು ಕನಿಷ್ಟ ಯಾವುದಾದರೂ ಪುಣ್ಯಕ್ಷೇತ್ರಕ್ಕಾದರೂ ಹೋಗಿ ಬನ್ನಿ’ ಎಂದು ಒಂದೇ ಸಮನೆ ವರಾತ ಮಾಡಿದರು.
ಆಗ ನನ್ನ ಮನಸಿಗೆ ಹೊಳೆದದ್ದು ಹೇಗಾದರೂ ಮಾಡಿ, ನವಮಡದಿಗೆ ಇದನ್ನು ಒಂದು ಆಶ್ಚರ್ಯಭರಿತ ಸುಂದರ ಮತ್ತು ಅರ್ಥಪೂರ್ಣ ಸಂದರ್ಭವಾಗಿಸಬೇಕೆಂದು. ಹಾಗೆ ಯೋಚಿಸಿ, ಒಂದು ದಿನ ಬಸ್ ಹತ್ತಿದೆವು; ನಾವು ಹೊರಟಿದ್ದು ಧರ್ಮಸ್ಥಳದ ಭೇಟಿಗೆ ಎಂದು!
ಹಲವು ಗಂಟೆಗಳ ಪ್ರಯಾಣದ ನಂತರ ಮೂಡಿಗೆರೆಯಲ್ಲಿ ಬಸ್ ಇಳಿದೆ; ರುಕ್ಮಿಣಿಯೂ ಇಳಿದರು. ಮೂಡಿಗೆರೆಯ ಬಸ್ ನಿಲ್ದಾಣದಲ್ಲಿ ಹೆಜ್ಜೆ ಹಾಕಿದಾಗ ರುಕ್ಮಿಣಿ ‘ಇದೇನ್ರಿ, ಇಲ್ಲಿ ಇಳಿದಿರಿ? ಇದೇನಾ ಧರ್ಮಸ್ಥಳ? ಯಾವುದೋ ಬೇರೆ ಊರಿನ ರೀತಿ ಕಾಣಿಸುತ್ತಿದೆ’ ಎಂದಿದ್ದರು ಮುಗ್ಧವಾಗಿ!
‘ಬನ್ನಿ, ಇಲ್ಲಿ ನಿಮಗೊಂದು ಅಚ್ಚರಿ ಕಾದಿದೆ’ ಎಂದು ಉತ್ತರಿಸಿ, ‘ನಿರುತ್ತರ’ದ ಎದುರು ಕರೆದೊಯ್ದು ನಿಲ್ಲಿಸಿದೆ! ಮನೆಯ ಹೆಸರನ್ನು ಓದಿದ ಅವರು, ತುಸು ಗಲಿಬಿಲಿಗೆ ಒಳಗಾ ದವರಂತೆ, ‘ರೀ, ಇದು ತೇಜಸ್ವಿಯವರ ಮನೆ ಅಲ್ವಾ, ನಾನು ಬರಲ್ಲಪ್ಪಾ! ಭಯವಾಗುತ್ತೆ! ಬೇಡ. ಬನ್ನಿ, ವಾಪಸ್ ಹೋಗೋಣ!’ ಎಂದರೂ ಮುಖದಲ್ಲಿ ಸಂತೋಷ ತುಳುಕಿತ್ತು.
‘ಅಲ್ರೀ, ಅವರ ಜೊತೆ ಏನು ಮಾತಾಡೋದು... ಅವರ ಒಂದೆರಡು ಕಾದಂಬರಿಗಳನ್ನು ಮತ್ತೊಮ್ಮೆ ಆದ್ರೂ ಓದಿಕೊಂಡು ಬರಬೇಕಿತ್ತು. ಅವರ ಸಮಯ ಹಾಳು ಮಾಡೋದು ಬೇಡ, ಅವರಿಗೆ ಸಿಟ್ಟು ಜಾಸ್ತಿ ಅಂತೆ; ಅವರ ಕೃತಿ ಓದದೇ ಬಂದಿದ್ದೇವೆ ಎಂದು ಬೈದು ಬಿಟ್ಟರೆ!’ ಎಂದರು. ರುಕ್ಮಿಣಿಯವರಿಗೆ ಮನದಾಳದಲ್ಲಿ ತೇಜಸ್ವಿಯವರನ್ನು ಕಂಡು ಮಾತ ನಾಡುವ ಆಸೆಯಿದ್ದರೂ, ಅವರೇನನ್ನುವರೋ ಎಂಬ ಭಯ. ಈ ಭಯ ನನಗೂ ಇತ್ತು.
ತೇಜಸ್ವಿಯವರ ದಿಢೀರ್ ಕೋಪ, ದಿಢೀರ್ ಶಾಂತ ಸ್ಥಿತಿ ಆಗ ಸಾಕಷ್ಟು ಪ್ರಚಾರ ಪಡೆದಿತ್ತು! ಮದುವೆಯಾದ ನವಜೋಡಿಯನ್ನು ನೋಡಿ ಸ್ವಲ್ಪ ಮೃದುವಾಗಿ ವ್ಯವಹರಿಸುವರೆಂಬ ಆಲೋಚನೆ ನನ್ನದಾಗಿತ್ತು! ತೇಜಸ್ವಿಯರ ತೋಟದೊಳಕ್ಕೆ ಪ್ರವೇಶಿಸಿದಾಗ, ಇಳಿಜಾರು ರಸ್ತೆಯಲ್ಲಿ ಬಹಳ ದೂರ ಸಾಗಬೇಕಾಯಿತು.
ಬಹಳ ಎಚ್ಚರಿಕೆಯಿಂದ ನಡೆದೆವು. ಬಹುಶಃ ತೇವವಿದ್ದುದರಿಂದ ಜಾರಿಕೆಯಿತ್ತು. ‘ನಿರುತ್ತರ’ ದ ಅಂಗಳಕ್ಕೆ ಹೋದಾಗ, ಮನೆಯಲ್ಲಿ ಯಾರೂ ಇರಲಿಲ್ಲ. ತೇಜಸ್ವಿಯವರ ಪ್ರೀತಿಯ ಕಿವಿ ನಾಯಿ ಸಹ ಕಾಣಲಿಲ್ಲ. ಹಾಗೇ ಸ್ವಲ್ಪ ಹಿಂಜರಿಕೆಯಿಂದ ಮನೆಯ ಹಿಂಭಾಗದಲ್ಲಿ, ಮರ ಗಳು ತುಂಬಿದ್ದ ಕಾಡಿನಂತಹ ಜಾಗಕ್ಕೆ ಹೋದೆವು. ಪಕ್ಕದಲ್ಲಿ ಒಂದು ಹಳ್ಳ ಹರಿಯುತ್ತಿತ್ತು.
ಆ ಹಳ್ಳಕ್ಕೆ ನೀರೆತ್ತುವ ಒಂದು ಯಂತ್ರ ಜೋಡಿಸಲಾಗಿತ್ತು; ಅದು ಸದ್ದು ಮಾಡುತ್ತ ಕೆಲಸ ಮಾಡುತ್ತಿದ್ದುದು ತಿಳಿಯಿತು. ಅದು ಯಾವುದೋ ಕೊಂಡು ತಂದ, ಬ್ರಾಂಡೆಡ್ ಮೋಟರು ತರಹ ಅನಿಸಲಿಲ್ಲ. ಸ್ವತಃ ಜೋಡಿಸಿ ಮಾಡಿದ ಒಂದು ಯಂತ್ರವೆಂದು ತೋರಿತು!
ಅಲ್ಲಿ ಗಂಡಾಳೊಬ್ಬ ಅನಿತು ದೂರದಲ್ಲಿ ಹೆಣ್ಣಾಳೊಬ್ಬಾಕೆ ಕೆಲಸದಲ್ಲಿ ಮಗ್ನರಾಗಿದ್ದರು. ಅವರಿಗೆ ನಮ್ಮತ್ತ ಹೆಚ್ಚಿನ ಗಮನವಿರಲಿಲ್ಲ; ಬಹುಶಃ ನಮ್ಮ ರೀತಿ, ತೇಜಸ್ವಿಯವರ ಅಭಿ ಮಾನಿಗಳು ಅಲ್ಲಿ ಬರುವುದು ಅವರಿಗೆ ಸಾಮಾನ್ಯ ಸಂಗತಿ ಎನಿಸಿರಬಹುದು. ನಾವು ಕೇಳಿದ ಪ್ರಶ್ನೆಗಳಿಗೆ ಕ್ಲಪ್ತವಾಗಿ ಉತ್ತರಿಸಿದರು ಅಷ್ಟೇ.
ನಾವು ನಿರುತ್ತರಕ್ಕೆ ಹೋದಾಗ ಅವರು ಮನೆಯಲ್ಲಿರಲಿಲ್ಲ; ಕೆಲವು ನಿಮಿಷ ಕಾದೆವು; ತೇಜಸ್ವಿ ಬಂದರು. ಆಗ ತಾನೇ ಮೊಮ್ಮಗಳಿಗೆ ಪೊಲಿಯೋ ಹನಿಗಳನ್ನು ಹಾಕಿಸಿಕೊಂಡು ಹಿಂದಿರುಗಿದ ತೇಜಸ್ವಿಯವರು ಅಂದು ಆರಾಮ ಕುರ್ಚಿಯಲ್ಲಿ ಕೂತು ಸುಮಾರು ಒಂದು ತಾಸು ನಮ್ಮೊಡನೆ ಆರಾಮವಾಗಿ ಹರಟಿದರು. ತೇಜಸ್ವಿಯವರು ಬಂದ ನಂತರ, ಅವರ ಮನೆಯ ಅಂಗಳದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತ ಅವರೆದು, ನಾವೂ ಕುರ್ಚಿಯಲ್ಲಿ ಕುಳಿತು ಹರಟಿದೆವು.
‘ಅಲ್ರೀ, ಯಾರ್ರೀ ಹೇಳಿದ್ದು ನಾನು ಸಿಡುಕು ಮೂತಿಯವನು ಅಂತ? ನಿಮಗೆ ಹಾಗೆ ಅನಿಸಿತಾ...’ ಎಂದು ಅಂದು ನಗಾಡಿದ್ದರು ಪೂರ್ಣ ಚಂದ್ರ ತೇಜಸ್ವಿ. ‘ಕೋಲಾರದ ಕಡೆ ಯವರು ಒಬ್ರು ಆಗಾಗ ಬರ‍್ತಿರ‍್ತಾರೆ, ಒಳ್ಳೆ ಫೋಟೋಗ್ರಾಫರ್’ ಎಂದು ನನಗೆ ಪರಿಚಿತರೂ ಆಗಿದ್ದ ಶಿಡ್ಲಘಟ್ಟದ ಡಿ.ಜಿ.ಮಲ್ಲಿಕಾರ್ಜುನರನ್ನು ನೆನಪಿಸಿಕೊಂಡಿದ್ದರು. ನಂತರ ಅವರ ಮಾತು ಸರ್ಕಾರಿ ಕಚೇರಿಗಳಲ್ಲಿನ ಹೆಚ್ಚಾಗಿದ್ದ ಭ್ರಷ್ಟಾಚಾರದತ್ತ ಹೊರಳಿತ್ತು.
‘ಕಚೇರಿಗಳ ಮುಂದೆ ಯಾವ ಕೆಲಸಕ್ಕೆ ಎಷ್ಟು ಅಂತ ಒಂದು ಬೆಲೆ ಪಟ್ಟಿಯನ್ನಾದರೂ ಹಾಕಿಬಿಟ್ಟರೆ ಜನರಿಗೆ ಒಂಚೂರು ಸಮಯವಾದರೂ ಉಳಿಯುತ್ತೆ’ ಅಂತ ರೇಗಾಡಿದ್ದರು. ‘ಅಲ್ಲಾ ಸಾರ್ ನಿಮಗೂ ಆ ಮಟ್ಟಿಗಿನ ಅನುಭವ ಆಗಿದೆಯಾ?’ ಅಂದಿದ್ದಕ್ಕೆ, ‘ದುರಾಸೆ ಕಣ್ರೀ, ಯಾರನ್ನೂ ಲೆಕ್ಕಿಸಲ್ಲ, ಸ್ವಂತ ಜನರಾದರೂ ಅಷ್ಟೇ’ ಎಂದಿದ್ದರು.
ಹೊರಗೆ ಬಂದು ನಮ್ಮೊಡನೆ ಮಾತಿಗೆ ಸೇರಿದ ರಾಜೇಶ್ವರಿ ಅವರು ‘ಪದಾರ್ಥ ಎಲ್ಲಾ ಸಿದ್ದವಿದೆ, ಕೊಂಚ ಅನ್ನಕ್ಕಿಟ್ಟರೆ ಆಯ್ತು; ಇಲ್ಲೇ ಊಟ ಮಾಡಿ ಹೋಗಿ ಆಯ್ತಾ... ಬೆಳ್ತಕ್ಕಿ ಆಗಬಹುದಲ್ಲಾ... ಹೊಸ ಜೋಡಿ ಊಟ ಮಾಡಿಯೇ ಹೋಗಬೇಕು’ ಎಂದು ತಾಕೀತು ಮಾಡಿ ಒಳ ನಡೆದಿದ್ದರು. ಅವರ ತೋಟ, ಅವರು ಮಾಡಿಕೊಂಡ ಸ್ವಂತ ಸಂಶೋಧನೆಯ ನೀರೆತ್ತುವ ಯಂತ್ರ ಇತ್ಯಾದಿಯೆಲ್ಲಾ ನೋಡಿದೆವು.
ಅಂದು ತೇಜಸ್ವಿಯವರನ್ನು ಕಂಡು ಮಾತನಾಡಿದ ನೆನಪು ನಮ್ಮೀರ‍್ವರ ಬದುಕಿನ ರಸ ಮಯ ನೆನಪಾಗಿ ಸದಾ ಉಳಿದಿದೆ. ಆನಂತರ ಆ ದಾರಿಯಲ್ಲಿ ಹಲವು ಬಾರಿ ಪ್ರಯಾಣ ಮಾಡಿದ್ದೆವಾರೂ ಅಂದಿನ ಪ್ರಯಾಣದ ಅನುಭವ ನಮಗಂತೂ ಅಮೂಲ್ಯ, ಅದ್ವಿತೀಯ!
ಹಕ್ಕಿಗಳ ಗ್ರೀಟಿಂಗ್ ಕಾರ್ಡ್
ಅವರ ಪ್ರಕಾಶನದ ಚಟುವಟಿಕೆ ನಡೆಸುವ ಕೊಠಡಿ ಅಲ್ಲೇ ಸನಿಹದಲ್ಲಿ ಇತ್ತು;ಅದನ್ನು ನಿರ್ವಹಿಸುತ್ತಿರುವ ಹುಡುಗ ಬಹಳ ಒಳ್ಳೆಯವನೆಂದೂ ಅವರ ಹೆಸರೂ ರಾಘವೇಂದ್ರ ಎಂದೂ ಹೇಳಿದ್ದು ನೆನಪಿದೆ! ನನ್ನ ಹೆಸರೂ ರಾಘವೇಂದ್ರ ತಾನೆ, ಆದ್ದರಿಂದ, ಆ ಹೆಸರು ಇನ್ನೂ ಚೆನ್ನಾಗಿ ನೆನಪಿದೆ. ನಾವು ಅಲ್ಲಿಗೆ ಹೋಗಿದ್ದ ಸಮಯದಲ್ಲಿ, ತೇಜಸ್ವಿಯವರು ತಾವೇ ಕ್ಲಿಕ್ಕಿಸಿದ ಹಕ್ಕಿಗಳ ಚಿತ್ರಗಳನ್ನು ಬಳಸಿ, ಶುಭಾಶಯ ಪತ್ರಗಳನ್ನು ತಯಾರಿಸುವ ಹವ್ಯಾಸದಲ್ಲಿ ತೊಡಗಿದ್ದರು; ಮನೆಯಲ್ಲೇ ತಯಾರಿಸಿದಂತೆ ಇದ್ದ ಅಂತಹ ಕೆಲವು ಗ್ರೀಟಿಂಗ್ ಕಾರ್ಡುಗಳನ್ನು ನಾವೂ ಖರೀದಿಸಿ, ಊರಿಗೆ ಬಂದ ನಂತರ, ಗೆಳೆಯರಿಗೆ ಕಳಿಸಿ ದೆವು.
ಭೇಟಿ ಮಾಡಲು ಸಣ್ಣಗೆ ಭಯ
ತೇಜಸ್ವಿಯವರನ್ನು ಮಾತನಾಡಿಸಲು ನನ್ನ ಮಡದಿಗೆ ಒಂದು ರೀತಿಯ ಸಂಕೋಚ, ಭಯ. ‘ರುಕ್ಮಿಣಿ ನಿಮ್ಮನ್ನು ಭೇಟಿಯಾಗಲು ಹೆದರಿದರು; ನೀವು ಬೇಗ ಸಿಟ್ಟಾಗಿ ರೇಗಾಡುವಿರೆಂದು ಹೆದರಿದ್ದಳು’ ಎಂದು ನಾನು ಅವರಿಗೆ ಹೇಳಿದೆ. ಅದಕ್ಕೆ ಅವರು ನಗಾಡಿದ್ದರು. ‘ಹಾಗೆಂದು ನನ್ನ ಬಗ್ಗೆ ಆಡಿಕೊಳ್ಳುವುದು ನನಗೂ ಗೊತ್ತಿದೆ. ಆದರೆ ಯಾವಾಗಲೂ ಯಾರಾದರೊ ಬ್ಬರು ಹಾಗೆ ಇರಲು ಸಾಧ್ಯವೇ?’ಎಂದರು. ಅವರ ಪುಸ್ತಕಗಳನ್ನು ಓದಿರದ ಬಗ್ಗೆಯೂ ಮಾತು ಬಂದಿತ್ತು. ‘ಇಲ್ಲಿಗೆ ಸಾಹಿತಿಗಳಲ್ಲದವರೂ, ಸಾಹಿತ್ಯಾಸಕ್ತರಲ್ಲದವರೂ, ಅನಕ್ಷರ ಸ್ತರೂ ಬರುತ್ತಿರುತ್ತಾರೆ; ಬದುಕೆಂದರೆ ಕೇವಲ ಓದು ಬರೆಹ ಅಲ್ಲ ಕಣ್ರೀ!’ ಎಂದೇನೋ ನುಡಿದಿದ್ದರು.