ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: 3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

ಡೊನಾಲ್ಡ್ ಟ್ರಂಪ್ ಎಂಬ ‘ಸುಂಕದ ಸರದಾರ’ ಕಳೆದ ಕೆಲ ದಿನಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಅಮೆರಿಕದಿಂದ ಅತಿರೇಕದ ಸುಂಕ ಹೇರಿಕೆಯ ಪ್ರಸ್ತಾವ ಹೊರಬೀಳುತ್ತಲೇ ಜಗತ್ತು ತಲ್ಲಣಗೊಂಡಿತು. ನಂತರದಲ್ಲಿ ಭಾರತ ಸೇರಿದಂತೆ ವಿಶ್ವದ ವಿವಿಧೆಡೆಯ ಷೇರು ಮಾರುಕಟ್ಟೆಗಳು ಕುಸಿದಿದ್ದೂ ಆಯಿತು, ಸರಕು ಮಾರುಕಟ್ಟೆಗಳಲ್ಲೂ ಅನಿಶ್ಚಿತತೆ ತಲೆದೋರುವಂತಾಯಿತು.

3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

ಡೊನಾಲ್ಡ್ ಟ್ರಂಪ್ ಎಂಬ ‘ಸುಂಕದ ಸರದಾರ’ ಕಳೆದ ಕೆಲ ದಿನಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಅಮೆರಿಕದಿಂದ ಅತಿರೇಕದ ಸುಂಕ ಹೇರಿಕೆಯ ಪ್ರಸ್ತಾವ ಹೊರಬೀಳುತ್ತಲೇ ಜಗತ್ತು ತಲ್ಲಣ ಗೊಂಡಿತು. ನಂತರದಲ್ಲಿ ಭಾರತ ಸೇರಿದಂತೆ ವಿಶ್ವದ ವಿವಿಧೆಡೆಯ ಷೇರು ಮಾರುಕಟ್ಟೆಗಳು ಕುಸಿದಿದ್ದೂ ಆಯಿತು, ಸರಕು ಮಾರುಕಟ್ಟೆಗಳಲ್ಲೂ ಅನಿಶ್ಚಿತತೆ ತಲೆದೋರುವಂತಾಯಿತು. ಹೀಗಾಗಿ ‘ಸುಂಕ-ಸಂತ್ರಸ್ತ’ ದೇಶಗಳು ಸೇರಿದಂತೆ ಒಂದಿಡೀ ವಿಶ್ವಸಮೂಹ ಅಮೆರಿಕದೆಡೆಗೆ ಕೆಂಗ ಣ್ಣು ಬೀರುವಂತಾಯಿತು. ತಮ್ಮ ಕ್ರಮಕ್ಕೆ ಹೀಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದನ್ನು ಮನಗಂಡ ಟ್ರಂಪ್, ಮಹತ್ವದ ಬೆಳವಣಿಗೆಯೊಂದರಲ್ಲಿ ಸದರಿ ಸುಂಕ ಹೇರಿಕೆ ಪ್ರಕ್ರಿಯೆಗೆ ತಾತ್ಕಾಲಿಕ ವಿರಾಮ ಹೇರಿದ್ದಾರೆ. ಈ ಬೆಳವಣಿಗೆಯ ಆಸುಪಾಸಿನ ಸಂಗತಿಗಳ ಕಿರುನೋಟ ಇಲ್ಲಿದೆ.

ಚೀನಾ ಮಲತಾಯಿ ಮಗ!

ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಕ್ಕೆ ಆಗುವ ಉತ್ಪನ್ನಗಳ ಆಮದಿನ ಮೇಲೆ ಹೇರಲಾಗುವ ಸುಂಕವನ್ನು ಅತಿರೇಕ ಎಂಬಷ್ಟರ ಮಟ್ಟಿಗೆ ಹೆಚ್ಚಿಸಿದ ಡೊನಾಲ್ಡ್ ಟ್ರಂಪ್ ಕ್ರಮಕ್ಕೆ ವಿಶ್ವಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಸುಂಕ ಹೇರಿಕೆ ಪ್ರಕ್ರಿಯೆಗೆ ಟ್ರಂಪ್ 90 ದಿನಗಳ ವಿರಾಮ ಘೋಷಿಸಿದ್ದಾರಾದರೂ, ಚೀನಾ ಸೇರಿದಂತೆ ಕೆಲ ದೇಶಗಳನ್ನು ಈ ವಿನಾಯಿತಿಯಿಂದ ಹೊರಗಿಟ್ಟಿದ್ದಾರೆ. ಎಂಬುದು ಗಮನಾರ್ಹ. ಟ್ರಂಪ್ ಹೀಗೆ 90 ದಿನಗಳ ವಿರಾಮವನ್ನು ನೀಡಿರುವುದ ರಿಂದಾಗಿ, ಸದರಿ ಸುಂಕ ಏರಿಕೆಯ ಬೆಳವಣಿಗೆಯನ್ನು ನಿಭಾಯಿಸೋದು ಹೇಗೆ ಎಂಬ ಲೆಕ್ಕಾಚಾರ ದಲ್ಲಿದ್ದ ವಿಶ್ವದ ವಿವಿಧ ರಾಷ್ಟ್ರಗಳಿಗೆ ಈಗ ಕೂಲಂಕಷವಾಗಿ ಅವಲೋಕಿಸಿ ಮುಂದಿನ ಹೆಜ್ಜೆ ಇಡಲು ಸಮಯ ಸಿಕ್ಕಂತಾಗಿದೆ.

ನೀ ಕೊಡೆ, ನಾ ಬಿಡೆ!

ಮೂರು ತಿಂಗಳ ‘ಸುಂಕ ವಿರಾಮ’ದ ಮೂಲಕ ವಿಶ್ವದ ಮಿಕ್ಕ ದೇಶಗಳೆಡೆಗೆ ‘ಸಾಫ್ಟ್‌ -ಕಾರ್ನರ್’ ಧೋರಣೆ ವ್ಯಕ್ತಪಡಿಸಿರುವ ಟ್ರಂಪ್, ಚೀನಾದ ವಿರುದ್ಧ ಮಾತ್ರ ತಮ್ಮ ಕತ್ತಿಯನ್ನು ಮತ್ತಷ್ಟು ಹರಿತ ಗೊಳಿಸಿರುವುದು ಹಲವರ ಹುಬ್ಬೇರಿಸಿದ್ದರೂ, ಇದು ನಿರೀಕ್ಷಿತವೇ ಆಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಕೆಂಡ ಕಾರಿರುವ ಟ್ರಂಪ್, “ಚೀನಾ ಇನ್ನೂ ನಮ್ಮ ದೇಶವನ್ನು ಸುಲಿಗೆ ಮಾಡುತ್ತಿದೆ.

ಇದನ್ನೂ ಓದಿ: Yagati Raghu Nadig Column: ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ಜಾಗತಿಕ ಮಾರುಕಟ್ಟೆಗಳೆಡೆಗೆ ಚೀನಾ ತೋರಿಸಿದ ಅಗೌರವವನ್ನು ಪರಿಗಣಿಸಿ, ಅದರ ಮೇಲೆ ವಿಧಿಸ ಲಾಗುತ್ತಿರುವ ಒಟ್ಟಾರೆ ಸುಂಕವನ್ನು ಶೇ.125ರ ಪ್ರಮಾಣಕ್ಕೆ ಏರಿಸುತ್ತಿದ್ದೇನೆ. ಅಮೆರಿಕ ಹಾಗೂ ಇತರ ದೇಶಗಳನ್ನು ಸುಲಿಗೆ ಮಾಡುವ ತನ್ನ ಧೋರಣೆ ಇನ್ನು ಮುಂದೆ ಸ್ವೀಕಾರಾರ್ಹವಾಗುವುದಿಲ್ಲ ಎಂಬುದನ್ನು ಚೀನಾ ಇನ್ನಾದರೂ ಅರಿಯಲಿ ಎಂದು ಆಶಿಸುತ್ತೇನೆ. ಇದು ಚೀನಾ ಮಾತ್ರವಲ್ಲದೆ, ಅಮೆರಿಕದ ಮೇಲೆ ಅತಿರೇಕದ ಸುಂಕ ಹೇರುವ ದೇಶಗಳಿಗೂ ಪಾಠವಾಗಲಿದೆ" ಎಂದಿದ್ದಾರೆ.

ಹೀಗಾಯ್ತು ಹಗ್ಗ ಜಗ್ಗಾಟ

ಅಮೆರಿಕದ ಸರಕುಗಳ ಮೇಲೆ ವಿಧಿಸಿದ್ದ ಶೇ.34ರಷ್ಟು ಪ್ರತೀಕಾರದ ಸುಂಕವನ್ನು 24 ಗಂಟೆಯೊಳಗೆ ಹಿಂಪಡೆಯದಿದ್ದರೆ, ಚೀನಾದ ಸರಕುಗಳ ಮೇಲಿನ ಒಟ್ಟಾರೆ ಸುಂಕವನ್ನು ಮತ್ತಷ್ಟು ಹೆಚ್ಚಿಸ ಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದುಂಟು. ಅವರು ನೀಡಿದ್ದ ಗಡುವನ್ನು ಚೀನಾ ನಿರ್ಲಕ್ಷಿದ್ದು ಮಾತ್ರವಲ್ಲದೆ, ತಾನೂ ಪ್ರತಿಸುಂಕವನ್ನು ಹೇರಿತು. ಇದರಿಂದ ಕೆರಳಿದ ಟ್ರಂಪ್ ಏಪ್ರಿಲ್ 9ರಿಂದಲೇ ಜಾರಿಗೆ ಬರುವಂತೆ ಚೀನಾದ ಸರಕುಗಳ ಮೇಲಿನ ಸುಂಕವನ್ನು ಶೇ.104ಕ್ಕೆ ಏರಿಸುವ ಮೂಲಕ ಮತ್ತೊಮ್ಮೆ ಬರೆಹಾಕಿದ್ದರು. ಇದಕ್ಕೆ ಜಗ್ಗದ ಚೀನಾ, ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ.84ಕ್ಕೆ ಏರಿಸಿತು. ಚೀನಾದ ಈ ನಡೆಯಿಂದ ಮತ್ತಷ್ಟು ವ್ಯಗ್ರರಾದ ಟ್ರಂಪ್, ಚೀನಾದ ಸರಕುಗಳ ಮೇಲಿನ ಒಟ್ಟಾರೆ ಸುಂಕದ ಪ್ರಮಾಣವನ್ನು ಶೇ.125ಕ್ಕೆ ಏರಿಸಿ ಕೈತೊಳೆದುಕೊಂಡಿದ್ದಾರೆ!

ಈ ಸಂಬಂಧ ಅಮೆರಿಕದ ಶ್ವೇತಭವನದಿಂದ ಘೋಷಣೆ ಹೊರಬೀಳುತ್ತಿದ್ದಂತೆಯೇ ಚೀನಾದಲ್ಲಿ ತಳಮಳ ಶುರುವಾಗಿದೆ. ಅಲ್ಲಿನ ದುಡ್ಡು-ಕಾಸಿನ ವಹಿವಾಟು ವಲಯದಲ್ಲಿ ಚೀನಾದ ಕರೆನ್ಸಿ ಯುವಾನ್ ಬುಧವಾರ ತನ್ನ ಸಾರ್ವಕಾಲಿಕ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿ ಹೂಡಿಕೆ ದಾರರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ಭಾರತದೆಡೆಗೆ ಚೀನಾ ಲೈನು!

ಚೀನಿ ಸರಕುಗಳ ಮೇಲಿನ ಒಟ್ಟಾರೆ ಸುಂಕದ ಮಟ್ಟವನ್ನು ಶೇ.125ಕ್ಕೆ ಏರಿಸುವ ಘೋಷಣೆ ಅಮೆರಿಕ ದಿಂದ ಹೊಮ್ಮುತ್ತಿದ್ದಂತೆಯೇ, ಭಾರತದೆಡೆಗೆ ಲೈನು ಹೊಡೆಯಲು ಶುರುಮಾಡಿದೆ ಚೀನಾ! ಹೌದು, ಚೀನಾ ವಿದೇಶಾಂಗ ಸಚಿವೆಯು ಈ ಕುರಿತು ಮಾತನಾಡುತ್ತಾ, “ಭಾರತ ಮತ್ತು ಚೀನಾ ನಡುವಿನ ವಾಣಿಜ್ಯಿಕ ಬಾಂಧವ್ಯಗಳು ಉತ್ತಮವಾಗಿವೆ; ಟ್ರಂಪ್ ಸುಂಕ ಹೇರಿಕೆಯಿಂದ ಜಾಗತಿಕ ವ್ಯಾಪಾರ ವಲಯದಲ್ಲಾಗಿರುವ ತಲ್ಲಣಗಳನ್ನು ತೊಡೆದುಹಾಕಲು ಭಾರತ ಮತ್ತು ಚೀನಾ ಪರಸ್ಪರ ಕೈಜೋಡಿ ಸಿ ನಡೆಯಬೇಕು" ಎಂದು ರಾಗ ಹಾಡಿದ್ದರೆ, ‘ನೆರೆರಾಷ್ಟ್ರ’ ಗಳೊಂದಿಗೆ ಉತ್ತಮವಾದ ವ್ಯಾಪಾರ ಬಾಂಧವ್ಯವನ್ನು ಸಾಧಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ!

ದನಿಗೂಡಿಸಿದ ಜೈಶಂಕರ್

ಚೀನಾ ವಿದೇಶಾಂಗ ಸಚಿವೆಯ ಮಾತಿಗೆ ಸ್ಪಂದಿಸಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, “ಭಾರತ ಹಾಗೂ ಚೀನಾದ ನಡುವಿನ ವಿವಿಧ ನೆಲೆಗಟ್ಟಿನ ಬಾಂಧವ್ಯಗಳು ಸಕಾರಾತ್ಮಕವಾಗೇ ಮುಂದುವರಿದಿದ್ದು, ದ್ವಿಪಕ್ಷೀಯ ಸಂಬಂಧ ಹಿಂದೆಂದಿಗಿಂತ ಉತ್ತಮವಾಗಿದೆ. ಗಡಿಭಾಗದ ಸಮಸ್ಯೆಗಳು ನಿವಾರಣೆಯಾಗಿರುವುದರ ಜತೆಗೆ, ಎರಡೂ ದೇಶಗಳ ನಡುವಿನ ವಿಮಾನ ಸಂಚಾರ ಪುನರಾರಂಭಗೊಳ್ಳಲಿದೆ.

ಮಾನಸ ಸರೋವರ ಯಾತ್ರೆಗೂ ಚೀನಾದಿಂದ ಸಹಮತ-ಸಹಕಾರ ವ್ಯಕ್ತವಾಗಿದೆ" ಎಂದು ಪ್ರತಿ ಕ್ರಿಯಿಸಿದ್ದಾರೆ. ವಿದೇಶಾಂಗ ಸಚಿವರಿಬ್ಬರ ಈ ಪರಸ್ಪರರ ಸೌಹಾರ್ದದ ಮಾತುಗಳು, ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯದ ಮೇಲೆ ಯಾವ ಪರಿಣಾಮ ಬೀರುವುದೋ ಕಾದು ನೋಡಬೇಕು!

ಐರೋಪ್ಯ ಒಕ್ಕೂಟ ಅಖಾಡಕ್ಕೆ

ಒಂದೆಡೆ ಅಮೆರಿಕ ಮತ್ತು ಚೀನಾನಡುವಿನ ಕೋಳಿಜಗಳ ತಾರಕಕ್ಕೇರಿದ್ದರೆ, ಮತ್ತೊಂದೆಡೆ ಐರೋಪ್ಯ ಒಕ್ಕೂಟ ಕೂಡ ತಾನೇನು ಕಮ್ಮಿ ಇಲ್ಲ ಎಂಬಂತೆ ‘ಸುಂಕ ಸಮರ’ ದಲ್ಲಿ ಭಾಗಿಯಾಗಿದೆ. ಅಕ್ಕಿ, ಜೋಳ, ಹಣ್ಣುಗಳು, ಸೋಯಾ ಬೀನ್, ಮರ, ಮೋಟಾರ್ ಸೈಕಲ್, ವಿದ್ಯುತ್ ಉಪಕರಣಗಳು ಸೇರಿದಂತೆ 20 ಬಿಲಿಯನ್ಯೂ ರೋಗಳಿಗಿಂತ ಹೆಚ್ಚಿನ ಮೌಲ್ಯದ ಅಮೆರಿಕನ್ ಸರಕುಗಳನ್ನು ಗುರಿ ಯಾಗಿಸಿಕೊಂಡು ಐರೋಪ್ಯ ಒಕ್ಕೂಟವು ಬುಧವಾರ ಹೆಚ್ಚುವರಿ ಸುಂಕವನ್ನು ಹೇರಿದೆ.

ನಾವೇನೂ ಕಮ್ಮಿಯಿಲ್ಲ !

ಅಮೆರಿಕ ವಿಧಿಸಿರುವ ಅತಿರೇಕದ ಸುಂಕಕ್ಕೆ ಪ್ರತಿಸುಂಕ ಹೇರುವ ಮೂಲಕ ‘ನಾವು ಯಾರಿಗೇನು ಕಡಿಮೆ?’ ಎಂದು ಬೀಗಿವೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಲ್ಯುಮಿನಿಯಂ ಹಾಗೂ ಉಕ್ಕಿನ ಆಮದಿನ ಮೇಲೆ ಬರೋಬ್ಬರಿ ಶೇ.25ರಷ್ಟು ಸುಂಕ ವಿಧಿಸಿರುವುದಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಯಿದು. ಅಮೆರಿಕದಿಂದ ಆಮದಾಗುವ ವೈವಿಧ್ಯಮಯ ಉತ್ಪನ್ನಗಳ ಮೇಲೆ ಪ್ರತಿಸುಂಕ ವಿಧಿಸುವ ನಿರ್ಣಯಕ್ಕೆ ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರ ಗಳು ಒಪ್ಪಿಗೆ ನೀಡಿವೆ. ಆದರೆ ಯಾವ ಉತ್ಪನ್ನಕ್ಕೆ ಎಷ್ಟು ಸುಂಕ ವಿಧಿಸಲಾಗುವುದು ಎಂಬ ವಿವರ ವನ್ನು ಸದರಿ ರಾಷ್ಟ್ರಗಳು ಹಂಚಿಕೊಂಡಿಲ್ಲ. ಸುಂಕ ಸಮರದಿಂದ ಉದ್ಭವಿಸಿರುವ ಸಮಸ್ಯೆಯನ್ನು ಪರಸ್ಪರ ಸಮಾಲೋಚನೆ/ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಮಾರ್ಗಕ್ಕೆ ತಮ್ಮ ಆದ್ಯತೆ ಯಿದೆ ಎಂಬುದನ್ನು ಈ ರಾಷ್ಟ್ರಗಳು ಪುನರುಚ್ಚರಿಸಿವೆ ಎಂಬುದು ಗಮನಾರ್ಹ ಸಂಗತಿ.

ವಾಪಸ್‌ ಬಂದುಬಿಡ್ರಪ್ಪ

ತನ್ನ ವಿರುದ್ಧ ತೊಡೆತಟ್ಟಿರುವ ಚೀನಾವನ್ನು ಹಣಿಯಲು ಅಮೆರಿಕ ಇನ್ನಿಲ್ಲದಂತೆ ಹರಸಾಹಸ ಪಡುತ್ತಿದೆ. ಶೇ.34ರಷ್ಟಿದ್ದ ಪ್ರತೀಕಾರದ ಸುಂಕವನ್ನು ಹಿಂತೆಗೆದುಕೊಳ್ಳುವುದಕ್ಕೆ ತಾನು ನೀಡಿದ್ದ ಗಡುವನ್ನು ಮೀರಿದ್ದಲ್ಲದೆ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ.84ಕ್ಕೆ ಹೆಚ್ಚಿಸಿದ ಚೀನಾದ ಧೋರಣೆ ಅಮೆರಿಕವನ್ನು ಮತ್ತಷ್ಟು ವ್ಯಗ್ರಗೊಳಿಸಿದೆ. ಈ ಬೆಳವಣಿಗೆಗೆ ಕೊಂಚ ವಿಭಿನ್ನ ರೀತಿಯಲ್ಲಿ ಮದ್ದು ಅರೆಯಲು ಮುಂದಾಗಿರುವ ಟ್ರಂಪ್, ಚೀನಾದ ಅತಿರೇಕದ ಸುಂಕಗಳನ್ನು ತಪ್ಪಿಸಿ ಕೊಳ್ಳಲು ಅಮೆರಿಕಕ್ಕೆ ಸ್ಥಳಾಂತರಗೊಳ್ಳುವಂತೆ ಕಂಪನಿಗಳಿಗೆ ಕರೆ ನೀಡಿ, “ಆಪಲ್ ಸಂಸ್ಥೆ ಯಂತೆ ನಿಮ್ಮ ಕಂಪನಿಯನ್ನು ಅಮೆರಿಕಕ್ಕೆ ಸ್ಥಳಾಂತರಿಸಲು ಇದು ಒಳ್ಳೆಯ ಸಮಯ; ಸಾಕಷ್ಟು ಕಂಪನಿಗಳು ದಾಖಲೆಯ ಸಂಖ್ಯೆಯಲ್ಲಿ ಈ ಹೆಜ್ಜೆಯಿಡುತ್ತಿವೆ" ಎಂದಿದ್ದಾರೆ.