Wednesday, 1st May 2024

ಸುಡು ಬಿಸಿಲಲ್ಲೂ ತಂಪು ಸೂಸುವ ಕಾಡು ಹೂಗಳು

ಶಶಾಂಕಣ

ಮಳೆಗಾಳಿಗೆ ಮೈಒಡ್ಡಿ, ಮಳೆಯ ನೀರನ್ನೇ ಕುಡಿಯುತ್ತಾ, ತನ್ನಪಾಡಿಗೆ ಬೆಳೆಯತ್ತಿರುವ, ಯಾರೂ ನೀರನ್ನು ಎರೆಯದೇ ಬೆಳೆದುಕೊಂಡ
ಕಾಡಿನ ಕಿಬ್ಬದಿಯ ಮರಗಳಿಗೆ, ಇದೇ ಸಮಯದಲ್ಲಿ ಹೂಬಿಡಬೇಕೆಂದು ಹೇಳಿಕೊಟ್ಟವರು ಯಾರು?

ವಸಂತನಾಗಮನ ಇನ್ನೂ ತಡವಿದೆ; ಸಣ್ಣಗೆ ಚಳಿ ಬೆಳಗಿನ ಹೊತ್ತಿನಲ್ಲಿ ಅಲ್ಲಲ್ಲಿ ಕಚಗುಳಿ ಇಡುತ್ತಿದೆ. ಇತ್ತ ನಡು ಮಧ್ಯಾಹ್ನದ ಹೊತ್ತಿನಲ್ಲಿ ಸೂರ್ಯನೂ ತನ್ನ ಕೈಚಳಕ ತೋರಲು ಆರಂಭಿಸಿದ್ದಾನೆ. ಸಂಕ್ರಮಣ ಕಳೆದು ಒಂದು ತಿಂಗಳಾಗಿದ್ದರೂ, ಇದೂ ಒಂದು ಸಂಕ್ರಮಣ ಕಾಲ. ಏಕೆ ಗೊತ್ತೆ? ಚಳಿಗಾಲ ಮುಗಿದು ಬೇಸಿಗೆ ಇನ್ನೇನು ಮೆಲ್ಲಗೆ ಕಾಲಿಡುತ್ತಿದೆ ಎಂಬಂತಹ ಸಮ ಯದಲ್ಲಿ ನೀವು ಗಮನಿಸಿರಬಹುದು – ಮುಂಜಾನೆ ಅಥವಾ ಸಂಜೆ ಸಮಯದಲ್ಲಿ ಬೀಸುವ ಗಾಳಿಯ ವಿಶಿಷ್ಟ ಛಾಪನ್ನು. ಅದನ್ನು ಕುಳಿರ್ಗಾಳಿ ಎನ್ನಲಾಗದು, ಬಿಸಿಗಾಳಿ ಎನ್ನಲಾಗದು, ಬೀಸುಗಾಳಿ ಎಂದು ಸಹಾ ಹೇಳಲಾಗದು – ಅತ್ತ ತಣ್ಣನೆಯ ಗಾಳಿಯೂ ಅಲ್ಲ, ಇತ್ತ ಬಿಸಿ ಗಾಳಿಯೂ ಅಲ್ಲ, ತುಸು ಬೆಚ್ಚಗಿನ ಗಾಳಿ ಅದು. ಬೆಳಗಿನ ಹೊತ್ತಿನಲ್ಲಿ ಬೀಸಿಬರುವ ಆ ಗಾಳಿಯು ಮನಸ್ಸಿನಲ್ಲಿ ಬೆಚ್ಚನೆಯ ಮಧುರ ಭಾವನೆಗಳನ್ನು ಮೂಡಿಸುತ್ತದೆ. ಈಗ ನಮ್ಮೂರಿನಲ್ಲಿ, ನಿಮ್ಮೂರಿನಲ್ಲಿ ಇಂತಹ ಗಾಳಿ ಬೀಸುತ್ತಿದೆ, ಹಲವು ಮಧುರ ನೆನಪುಗಳನ್ನು ಹೊತ್ತು ತರುತ್ತಿದೆ.

ಅಂತಹ ಗಾಳಿಗೆ ನಮ್ಮ ಹಳ್ಳಿಯ ಹಿರಿಯರು ಒಂದು ಹೆಸರನ್ನು ಕೊಡುತ್ತಿದ್ದರು ‘ಹಾಂ, ಫಲಗಾಳಿ ಬೀಸತ್ ಕಾಣಿ’. ಮುಂಜಾನೆ ಅಥವಾ ಸಂಜೆ ಹೊತ್ತಿನಲ್ಲಿ ಅದೆಲ್ಲಿಂದಲೋ ಸಣ್ಣಗೆ, ಕೆಲವೊಮ್ಮೆ ತುಸು ಬಿರುಸಾಗಿಯೇ ಬೀಸಿ ಬರುವ ಆ ಗಾಳಿಗೆ ‘ಫಲಗಾಳಿ’ ಎಂಬ ಹೆಸರು. ಅದನ್ನು ನಮ್ಮ ಹಿರಿಯರು ತಾವೇ ಸ್ವತಃ ಸಂಶೋಧನೆ ಮಾಡಿ ದ್ದೇನಲ್ಲ, ಅವರ ಹಿಂದಿನ ಪೀಳಿಗೆಯವರು ಅನುಭವದ ಆಧಾರದ ಮೇಲೆ, ಅಂತಹ ಗಾಳಿಗೆ ಮಾಡಿದ ನಾಮಕರಣ ಅದು. ಪ್ರತಿ ವರ್ಷ ಸಾಕಷ್ಟು ನಿಖರವಾಗಿಯೇ, ಚಳಿಯ ದಿನಗಳು ಮುಗಿಯುವ ಸಮಯಕ್ಕೆ ಸರಿಯಾಗಿ, ಅದೆಲ್ಲಿಂದಲೋ ಬೀಸಿ ಬರುವ ಆ ಗಾಳಿಯಲ್ಲಿ, ನಮಗೆ ಅರಿವಾಗದ ಅದೆಂಹತದೋ ಗೂಢ ಸಂದೇಶ ಇರಲೇ ಬೇಕು.

ಏಕೆಂದರೆ, ‘ಫಲ ಗಾಳಿ’ ಬೀಸಲು ತೊಡಗಿದ ಕೆಲವೇ ಗಂಟೆಗಳಲ್ಲಿ ಪ್ರಕೃತಿಯಲ್ಲಿ ಸಣ್ಣ, ಆದರೆ ಸ್ಪಷ್ಟವಾದ ಬದಲಾವಣೆಯನ್ನು ಗುರುತಿಸಬಹುದು; ಬಹುಷ ಪ್ರಕೃತಿ ಮಾತೆಯು ಆ ಗಾಳಿಗೆ ಸಂಭ್ರಮಿಸುವ ಪರಿ ಅದಾಗಿರಬೇಕು. ಫಲಗಾಳಿಗೆ ಮೈಒಡ್ಡಿದ ಗಿಡಮರಗಳು, ಕೆಲವೇ ದಿನಗಳಲ್ಲಿ ಹೂ ಬಿಟ್ಟು, ಇಡೀ ಜಗತ್ತನ್ನೇ ಬದಲಿಸುವ ಸಂಭ್ರಮ ಅದು; ಅದಾಗಿ ಕೆಲವು ದಿನಗಳ ನಂತರ ಮರಗಿಡಗಳೆಲ್ಲವೂ ಫಲಭರಿತವಾಗುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು, ಗುರುತಿಸಿದ್ದರು.

ಅತ್ತ ಫಲಗಾಳಿ ಬೀಸುತ್ತಿದ್ದಂತೆಯೇ, ಇತ್ತ ನಮ್ಮೂರಿನ ಹಾಡಿಯ ಅಂಚಿನಲ್ಲೋ, ರಸ್ತೆ ಬದಿಯಲ್ಲೋ, ತೋಡೊಂದರ ಅಂಚಿನಲ್ಲೋ, ಊರಾಚೆಯ ತೋಪಿನಲ್ಲೋ ಅನಾಮಿಕನಾಗಿ ಜೀವನಸಾಗಿಸುತ್ತಿರುವ ಕಾಟು ಮಾವಿನ ಮರಗಳಿಗೆ ಹೊಸ ರೂಪ ಬರುತ್ತದೆ. ಮಳೆಗಾಳಿಗೆ ಮೈಒಡ್ಡಿ ತನ್ನಪಾಡಿಗೆ ಬೆಳೆದ, ಯಾರೂ ನೀರನ್ನು ಎರೆಯದೇ ಬೆಳೆದುಕೊಂಡ ಕಾಟು ಮಾವಿನ ಮರದ ಕೊಂಬೆರೆಂಬೆಗಳ ತುಂಬೆಲ್ಲಾ ಜೊಂಪೆ ಜೊಂಪೆ ಹೂವುಗಳು! ಮುಗಿಲೆತ್ತರಕ್ಕೆ ಬೆಳೆದ ಕೆಲವು ಕಾಟು ಮಾವಿನ ಮರಗಳಲ್ಲಂತೂ, ಅಂಬರ ಚುಂಬಿತ ಕೊಂಬೆಗಳಲ್ಲಿನ ಎಲೆಗಳೂ ಕಾಣದಂತೆ ನಸು ಬಿಳಿಯ
ಹೂವಿನ ರಾಶಿ. ತಲೆ ತುಂಬಾ, ಮೈತುಂಬಾ ಹೂವುಗಳನ್ನು ಸಿಂಗರಿಸಿಕೊಂಡು, ದೂರದಿಂದಲೇ ಕಾಣುವ ಕಾಡು ಮಾವಿನ ಮರಗಳ ಹೊಸ ರೂಪವನ್ನು ಕಂಡು ಮೋಹಿತಗೊಳ್ಳುವವರ ಸಂಖ್ಯೆ ಕಡಿಮೆ ಏನಿಲ್ಲ! ಆ ಹೂವಿನಲ್ಲಿರುವ ಮಧುವನ್ನು ಹೀರಲು ಬಯಸುವ ದುಂಬಿ, ಜೇನು, ಜೀರುಂಡೆ, ಕೀಟಗಳ ಗುಂಪು, ತಮ್ಮದೇ ಭಾಷೆಯಲ್ಲಿ ಕಿಲ ಕಿಲ ನಗುತ್ತಾ, ನಸು ನಗುತ್ತಾ, ಜುಂಯ್ ಎಂದು ಸದ್ದು ಮಾಡುತ್ತಾ ಮೊದಲಿಗೆ ಮರದ ಸುತ್ತ ಹಾರತೊಡಗುತ್ತವೆ; ನಿಧಾನವಾಗಿ ಮರದ ರೆಂಬೆ ಕೊಂಬೆಗಳ ಹತ್ತಿರ ಸುಳಿಯುತ್ತವೆ; ಮತ್ತೂ ಮುಂದುವರಿದು ಮರದ ಕ್ಯಾನೊಪಿಯ ಒಳಗೂ ಹೊರಗೂ ದುಂಬಿಗಳ ಓಡಾಟ, ಜೇನು ಹುಳಗಳ ಸುಳಿದಾಟ.

ಸಾಕಷ್ಟು ಪರಿಚಯವಾದ ನಂತರ, ಸುಗಂಧ ಭರಿತ ಹೂವಿನ ಮೇಲೆ ಕುಳಿತು, ಸಿಹಿ ಸಿಹಿ ಮಧುವನ್ನು ಹೀರಲು ಆರಂಭಿಸುತ್ತವೆ, ಈ ಆಗಂತುಕರ ದಂಡು. ದುಂಬಿಗಳ ಈ ಭೋಜನ ಎಂದರೆ ಮರಕ್ಕೂ ಪ್ರೀತಿ, ಭೂಮಿತಾಯಿಯಂತಹ ಅಕ್ಕರೆ; ಎಷ್ಟೇ ಸಂಖ್ಯೆಯ ಅತಿಥಿಗಳು ಬಂದರೂ, ಯಾರಿಗೂ ತಾರ ತಮ್ಯ ಮಾಡದೇ, ಎಲ್ಲರಿಗೂ ತನ್ನಲ್ಲಿನ ಮಧುವನ್ನು ಹೀರಲು ಅನುಮತಿ, ಅವಕಾಶ ನಿಡುತ್ತದೆ – ಪ್ರೀತಿಯಿಂದ.

ಜೇನು ನೊಣಗಳು, ದುಂಬಿಗಳು ಹೂವಿನ ಮೇಲೆ ಮೆತ್ತಗೆ ಕುಳಿತು, ತಮ್ಮ ನಾಲಗೆಯ ತುದಿಯನ್ನು ಹೂವಿನೊಳಗಿನ ಪುಷ್ಪಪಾತ್ರೆಗೆ ಅದ್ದಿ, ಅಲ್ಲಿನ ಸಿಹಿ ದ್ರವವನ್ನು ಹೀರುತ್ತವೆ; ಪುಷ್ಪವತಿಯಾದ ಕಾಟು ಮಾವಿನ ಮರದ ಹೂವುಗಳು ಈಗ ಸಾರ್ಥಕತೆಯನ್ನು ಪಡೆದುಕೊಳ್ಳುತ್ತವೆ. ಈ ಪ್ರಕ್ರಿಯೆಯು
ಒಂದು ಮಧುರ ಕಾವ್ಯ, ಪ್ರೇಮ ಕವನ, ಪ್ರೀತಿಯ ಒಸಗೆ, ಒಲವಿನ ಓಲೆ!

ಇದು ಕಾಟು ಮಾವಿನ ಮರದ ಸಂಭ್ರಮವಾದರೆ, ನಮ್ಮೂರಿನ ಹಾಡಿಯಲ್ಲಿ ಕೇವಲ ಕಾಟು ಮಾವಿನ ಮರ ಮಾತ್ರವಲ್ಲ, ಇನ್ನೂ ಅದೆಷ್ಟೊ ಮರಗಿಡಗಳು ಇದೇ ಸಮಯದಲ್ಲಿ ಹೂವು ಬಿಡುವ ರೀತಿಯು ಒಂದು ವಿಸ್ಮಯ. ಫಲಗಾಳಿಯು ತಂದ ರಹಸ್ಯ ಸಂದೇಶದ ಪ್ರಭಾವವೇ? ಅಥವಾ
ಸೂರ್ಯನು ತನ್ನ ಬಿರುಸಾಗುತ್ತಿರುವ ಕಿರಣಗಳ ಮೂಲಕ ತೂರಿಸಿ ಬಿಟ್ಟ ಬೆಚ್ಚನೆಯ ಭಾವದ ಪ್ರಭಾವವೆ? ಆ ಸುತ್ತಲಿನ ದೂಪ, ಕಿರಾಲು ಬೋಗಿ, ಹಿರಾಲು ಬೋಗಿ, ಕಂಕುಳು, ಮುರಿಯ, ಅಮಟೆ, ದುಗಳು ದೂಪ, ಅಂಡಾರು, ಹಾಲೆ, ಬೂರುಗ, ಸೀಗೆ, ದಿಂಡಿನ ಮರ, ಹೆಬ್ಬಲಸು – ಈ ರೀತಿಯ ಸಕಲೆಂಟು ಮರಗಿಡಗಳಲ್ಲೂ ಹೂವುಗಳು.

ಕೆಲವು ಮರಗಳ ತುಂಬಾ ಹೂವಿನ ರಾಶಿ ಎನಿಸಿದರೆ, ಇನ್ನು ಕೆಲವು ಮರಗಳಿಗೆ ತುಸು ನಾಚಿಗೆ, ಕೆಲವೇ ಹೂವುಗಳನ್ನು ಎಲೆಯ ಮರೆಯಲ್ಲೇ
ಅರಳಿಸಿ, ಹೌದೋ ಅಲ್ಲವೋ ಎಂಬಂತೆ ಹೊರ ಲೋಕಕ್ಕೆ ತೋರಿಸುವ ಸಂಕೋಚ . ಆದರೆ ದುಂಬಿಗಳಿಗೆ, ಜೇನು ಹುಳಗಳಿಗೆ, ಅದಾವುದೋ
ಪ್ರಭೇದದ ಹಲವು ಕೀಟಗಳಿಗೆ ಅಂತಹ ಸಂಕೋಚವೇನಿಲ್ಲ! ಮಧುಪಾತ್ರೆಯನ್ನಿಟ್ಟು ಆಹ್ವಾನಿಸುತ್ತಿರುವ ವೃಕ್ಷಮಾತೆಯ ಬಳಿ ಸಾರಿ, ಸಿಹಿ ಸಿಹಿ
ಮಕರಂದವನ್ನು ಹೀರಲು ಸಂಕೋಚ ಮಾಡಿಕೊಂಡರೆ ಆಗುತ್ತದೆಯೆ – ಆ ಹೊತ್ತಿನಲ್ಲಿ ಧೈರ್ಯವೇ ಬತ್ತಳಿಕೆ – ಮುನ್ನುಗ್ಗುವಿಕೆಯೇ
ಬಾಣ. ಎಲ್ಲಾ ಗಿಡಮರಗಳಿಗೆ ಎಗ್ಗಿಲ್ಲದೇ ಭೇಟಿ ಕೊಡುವ ಜೇನು ಸಂಕುಲ, ದುಂಬಿ ಸಂಕುಲವು,  ಬಹಿರಂಗವಾಗಿರಲಿ, ಎಲೆಯ ಮರೆಯಲ್ಲಿಯೇ ಇರಲಿ, ಅಂತಹ ಎಲ್ಲಾ ಪುಷ್ಪಗಳನ್ನು ಹುಡುಕಿ, ಮಧುಪಾತ್ರೆಗೆ ನಾಲಗೆಯನ್ನಿಳಿಬಿಟ್ಟು ಮಕರಂದ ಹೀರಲು ಮುಂದಾಗುತ್ತವೆ.

ಇದಾಗಿ ಕೆಲವೇ ದಿನಗಳಲ್ಲಿ, ಮರಗಳಲ್ಲಿ ಹೂವುಗಳು ಗರ್ಭಕಟ್ಟುತ್ತವೆ, ಹೀಚುಗಳಾಗುತ್ತವೆ, ಕ್ರಮೇಣ ಕಾಯಿಗಳಾಗಿ ಬೆಳೆಯುತ್ತವೆ, ಹಣ್ಣು
ಗಳನ್ನು ನೀಡುತ್ತವೆ. ಫಲವತಿಯಾದ ಮರವು ಬೀಜವನ್ನು ಸೃಷ್ಟಿಸಿ, ತನ್ನ ಪೀಳಿಗೆಯ ಮುಂದುವರಿಕೆಗೆ ನಾಂದಿ ಹಾಡುತ್ತದೆ. ಇದು ನಮ್ಮೂರಿನ
ಹಾಡಿಯಲ್ಲಿ ಪ್ರತಿ ವರ್ಷ ಕಾಣುವ ಸೃಷ್ಟಿ ಕ್ರಿಯೆ; ಇದಕ್ಕೆ ಮೂಲವೆಂದರೆ ಚಳಿಗಾಲ ಮುಗಿಯುವಾಗ ಬೀಸುವ ಫಲಗಾಳಿ. ಇದು ನಮ್ಮೂರಿನಲ್ಲಿ ಮಾತ್ರವಲ್ಲ, ಈ ಭೂಮಿಯ ಮೇಲೆ ಅನಾದಿ ಕಾಲದಿಂದ ನಡೆದು ಬಂದ ಜೀವಜನ್ಮದ ಪ್ರಗಾಥ; ಹೂವಿನಲ್ಲಿನ ಮಕರಂದ, ಪಕ್ಕದಲ್ಲೇ ಇರುವ ಪರಾಗ, ಅಲ್ಲಿಗೆ ಬರುವ ಜೇನು, ಅದು ಹೀರುವ ಸಿಹಿ ಸಿಹಿ ದ್ರವ, ಅದರ ಮೈಗೆ ಅಂಟುವ ಪರಾಗ, ಆ ಪರಾಗವನ್ನು ಇನ್ನೊಂದು ಹೂವಿಗೆ ತಾಗಿಸುವ ಜೇನು, ಅದರಿಂದ ಕಾಯಿ ಕಟ್ಟುವಿಕೆ, ಬೀಜೋತ್ಪಾದನೆ – ಹೀಗೆ ಯೋಚಿಸುತ್ತಾ ಹೋದರೆ ಅದೊಂದು ವಿಸ್ಮಯ, ಅದ್ಭುತ ಎನಿಸುತ್ತದೆ, ಅಲ್ಲವೆ!

ನಮ್ಮೂರಿನ ಕಾಟು ಮಾವಿನ ಮರದ ಜೊಂಪೆ ಜೊಂಪೆ ಹೂವುಗಳಿಗೆ ತಕ್ಕ ಮಟ್ಟಿಗಿನ ಸ್ಪರ್ಧೆಯನ್ನು ಒಡ್ಡುವ ಮರ ಎಂದರೆ ಗೋಡಂಬಿ ಮರ. ಇಡೀ
ಮರದ ತುಂಬಾ ಒಮ್ಮೆಗೇ ಸಾವಿರಾರು ಹೂವುಗಳನ್ನು ಅರಳಿಸಿಕೊಳ್ಳುವ ಗೋಡಂಬಿಯೂ, ಆ ನಿಟ್ಟಿನಲ್ಲಿ ಪುಷ್ಪಮಾತೆಯೇ ಸರಿ! ಮಾವಿನ
ಹೂವಿಗಿಂತಲೂ ತುಸು ಗಡುಸಾಗಿ ಕಾಣಿಸುವ ಗೋಡಂಬಿ ಹೂವುಗಳು, ಕೆಲವು ಬಾರಿ, ಮರದ ಎಲೆಗಳನ್ನು ಪೂರ್ತಿ ಮರೆಮಾಚುವಷ್ಟು ಅರಳಿ ಕೊಳ್ಳುವುದುಂಟು.

ಗೋಡಂಬಿ ಮರದ ಹೂವುಗಳಲ್ಲಿರುವ ಮಧುವನ್ನು ಹೀರಲು ಎಂದಿನಂತೆ ಜೇನುಹುಳುಗಳು, ದುಂಬಿಗಳು ಹಾರಿಬರುವುದು ಸದಾ ಇದ್ದದ್ದೇ. ಆ ಸಮಯದಲ್ಲಿ, ಪಕ್ಕದಲ್ಲೇ ಅರಳಿರುವ ಹಸಿರು ತುಂಬಿದ ಧೂಪ ಮರದ ರೆಂಬೆ ಕೊಂಬೆಗಳಲ್ಲಿ ಅರಳಿದ ಹೂವುಗಳು ಈ ಕೀಟಗಳನ್ನು ಹೆಚ್ಚು ಆಕರ್ಷಿಸುತ್ತವೆ, ಏಕೆಂದರೆ, ತುಸು ದೊಡ್ಡ ದಾದ, ಹೆಚ್ಚು ಬಿಳಿಯದಾದ ಧೂಪದ ಹೂವುಗಳು ಕೀಟಗಳ ಕಣ್ಣಿಗೆ ಬೇಗನೆ ಕಣ್ಣಿಗೆ ಬೀಳುವುದರಿಂದಾಗಿ.
ಹಾಗೆ ನೋಡಹೋದರೆ, ಮಾವು ಮೊದಲಾದ ಪರಿಚಿತ ಮರಗಳ ಹೂಬಿಡುವ ಪ್ರಕ್ರಿಯೆಯನ್ನು ಮಾತ್ರ ನಾವು ಹೆಸರಿಸಿದರೆ, ಸಸ್ಯಕುಲದ ಇತರ
ಸಾವಿರಾರು ಗಿಡಮರಗಳ ಸಂಭ್ರಮಕ್ಕೆ ಅಪಚಾರ ಮಾಡಿದಂತೆಯೇ ಅನ್ನಬಹುದು.

ಚಳಿ ಕಳೆದು, ಬೇಸಗೆ ಮೂಡುವ ಸಮಯದಲ್ಲಿ ಹಾಡಿಯ ಮತ್ತು ಅರಣ್ಯದ ಮರಗಿಡಬಳ್ಳಿಗಳು ವಸಂತನನ್ನು ಬರಮಾಡಿಕೊಳ್ಳುವ ಸಂಭ್ರಮವನ್ನು ಪೂರ್ತಿಯಾಗಿ ವರ್ಣಿಸಿದಾಗ ಮಾತ್ರ, ಎಲ್ಲಾ ಸಸ್ಯಗಳಿಗೆ ತುಸು ನ್ಯಾಯ ಒದಗಿಸಿದಂತಾಗುತ್ತದೆ. ಕಾಡಿಗೆ ಕಾಡೇ, ಕಣಿವೆಗೆ ಕಣಿವೆಯೇ, ಬ್ಯಾಣಕ್ಕೆ ಬ್ಯಾಣವೇ, ತೋಪಿಗೆ ತೋಪೇ ಒಮ್ಮೆಗೇ ಹೂಬಿಡುವ ಅತ್ಯಾಕರ್ಷಕ ಪ್ರಕ್ರಿಯೆಗೆ ನಾಂದಿ ಹಾಡುವುದು ಈ -ಫಲಗಾಳಿಯೇ ಇರಬಹುದೇ? ಅದೇನಿದ್ದರೂ, ಒಮ್ಮೆ ಗೇ ಅರಳುವ ನೂರಾರು ಮರಗಳ ಹೂವುಗಳು ಕಾಡಿನ ಬಣ್ಣವನ್ನೇ ಬದಲಿಸುವ ಚೋದ್ಯವನ್ನು ನೋಡಬೇಕೆಂದರೆ, -ಲಗಾಳಿ ಬೀಸುವ ಸಂಕ್ರಮಣ ಕಾಲದಲ್ಲಿ ಆ ಕಾಡಿನ ಕಿಬ್ಬದಿಯಲ್ಲಿ ಸಂಚರಿಸಿದಾಗ ಮಾತ್ರ ಸಾಧ್ಯ.

ಇದುವರೆಗೆ ನಮ್ಮೂರಿನ ಹಾಡಿ, ಹಕ್ಕಲು, ಬ್ಯಾಣ, ಹರ, ಬೆಟ್ಟ, ಗುಡ್ಡಗಳಲ್ಲಿ ಅರಳುವ, ಹೂ ಬಿಡುವ ಗಿಡ ಮರಗಳ ಕುರಿತು ಬರೆದೆ, ಅಲ್ಲಿ
ಭೂದೇವಿಯು ಹೂವಿನ ಮೆರವಣಿಗೆಯಲ್ಲಿ ಮುಳುಗುವ ಸಂತಸದ ದಿನಗಳನ್ನು ನೆನಪಿಸಿಕೊಂಡೆ. ಈ ರೀತಿಯ ಪ್ರಕೃತಿಯ ಸಂತಸವು ನಮ್ಮೂರು
ಮಾತ್ರವಲ್ಲ, ನಿಮ್ಮೂರಿನಲ್ಲೂ ಇರಬಹುದು, ಇರಲೇಬೇಕು. ಬಯಲು ಸೀಮೆಯಲ್ಲೂ, ಒಣ ಪ್ರದೇಶಗ ಳಲ್ಲೂ ಪ್ರಕೃತಿಯು ತನ್ನದೇ ರೀತಿಯಲ್ಲಿ
ಅರಳುತ್ತದೆ, ಬೀಜೋತ್ಪಾದನೆಗೆ ತೊಡಗುತ್ತದೆ. ಇತ್ತ, ದೊಡ್ಡ ನಗರಗಳಲ್ಲಿ ಹೂ ಬಿಡುವ ಮರಗಿಡಗಳು ಸಹಾ ತಮ್ಮದೇ ಆವರ್ತನ ಕಾಲವನ್ನು ಗುರುತಿಸಿಕೊಂಡಿವೆ.

ಮೊದಲಿಗೆ, ಬೀದಿ ಬದಿಯ ಮರಗಳು ಚಳಿಯಿಂದ ದೂರಾಗಲು ಮೈಕೊಡವುವಂತೆ, ತಮ್ಮ ಎಲೆಗಳನ್ನು ಉದುರಿಸಿಕೊಳ್ಳುತ್ತವೆ. ಆಗ ಬೀದಿಯ ಇಕ್ಕೆಲಗಳಲ್ಲೂ, ಹಣ್ಣೆಲೆಗಳ ರಾಶಿ! ಅಂತಹ ದಿನಗಳಲ್ಲಿ ರಸ್ತೆಯ ಮೇಲೆ ಬೀಳುವ ಹಣ್ಣೆಲೆ, ಒಣಗಿದ ಎಲೆಗಳನ್ನು ತೆಗೆದು ರಾಶಿ ಹಾಕುವುದೇ
ಆಚೀಚೆ ವಾಸಿಸುವ ಮನೆಗಳವರ ಕೆಲಸ. ನಾಲ್ಕಾರು ದಿನಗಳ ಅವಧಿಯಲ್ಲೇ ಅದೆಷ್ಟು ಎಲೆಗಳು ನೆಲಕ್ಕೆ ಉರುಳುತ್ತವೆ ಎಂದು ಸುತ್ತಲಿದ್ದವ ರಿಗೆ ಅಚ್ಚರಿಯೂ ಆದೀತು! ಕೆಲವು ಮರಗಳಂತೂ ಒಂದೂ ಎಲೆಯನ್ನು ಉಳಿಸಿಕೊಳ್ಳದೇ, ಕೇವಲ ಕಡ್ಡಿ ಕಡ್ಡಿ ಕೊಂಬೆಗಳನ್ನು ಬಿಟ್ಟುಕೊಳ್ಳುತ್ತವೆ. ನಂತರ ಚಿಗುರುವ ಸಂಭ್ರಮ.

ಅದಾಗಿ ಕೆಲವು ದಿನಗಳಲ್ಲೇ, ಅಥವಾ ಜೊತೆ ಜೊತೆಯಲ್ಲೇ ಹೂ ಬಿಡುವ ಅಕ್ಕಪಕ್ಕದ ಮರಗಳು ಇಡೀ ಬೀದಿಗೆ ಬಣ್ಣದ ಸಿಂಚನವನ್ನು ಮಾಡಿ,
ದಾರಿಯ ಪಕ್ಕದಲ್ಲಿ ನಡೆಯುವ ಅನುಭವವನ್ನು ವಿನೂತನವನ್ನಾಗಿಸುತ್ತವೆ. ಎಲೆ ಉದುರಿಸಿಕೊಂಡು, ಬೋಳು ರೆಂಬೆ ಕೊಂಬೆಯಲ್ಲೇ ಮೈತುಂಬಾ ಹೂಬಿ ಡುವ, ಆ ಹಳದಿ ಹೂವಿನ ಮರದ ಸಂಭ್ರಮವನ್ನು, ಸೌಂದರ್ಯವನ್ನು ವರ್ಣಿಸಲು ಈ ಪದಗಳಿಂದ ಸಾಧ್ಯವೇ? ತಲೆಯಿಂದ ಬುಡದ ತನಕ ಕೇವಲ ಹೂವುಗಳ ಬಣ್ಣವನ್ನೇ ತುಂಬಿಕೊಂಡುರುವ ಆ ದೃಶ್ಯವನ್ನು ಕಣ್ಣಿನಿಂದ ನೋಡಿ, ಸಂತಸ ಪಡದೇ ಇರುವ ಮನ ಇರಲಿಕ್ಕಿಲ್ಲ; ಎಂತಹದೇ ಧಾವಂತದ ಲ್ಲಿದ್ದರೂ, ಟ್ರಾಫಿಕ್ ಸಿಗ್ನಲ್‌ಗೆ ಅಷ್ಟು ದೂರದಲ್ಲಿ ಇಡೀ ಮರವೇ ಹೂಬಿಟ್ಟು ಅರಳಿದ ಸೊಬಗನ್ನು ನೋಡದೇ ಇರಲು ಸಾಧ್ಯವೆ? ಸುಡುವ
ಬಿಸಿಲಿನಲ್ಲೂ ತಂಪು ಸೂಸುವ ಹೂವುಗಳು ಈ ಜಗದ ವಿಸ್ಮಯ.

error: Content is protected !!