Sunday, 19th May 2024

ರಾಜತಾಂತ್ರಿಕ ಸಂಧಾನಕ್ಕೆ ಭಾರತ ಸಜ್ಜಾದೀತೇ ?

ವಿಶ್ವವಿಹಾರ

ಡಾ.ಜಗದೀಶ ಮಾನೆ

jspurti@gmail.com

ಎರಡು ಪವರ್‌ಪುಲ್ ದೇಶಗಳು ಯುದ್ಧಕ್ಕೆ ಅಣಿಯಾದರೆ ಅವು ಪರಸ್ಪರ ಸಹಾಯ ಮಾಡಿಕೊಂಡಿರೋ ಸಂದರ್ಭ ಬರುವುದಿಲ್ಲ. ಅವರಿಗೆ ತಮ್ಮದೇ ಆದ ರಕ್ಷಣಾ ಜವಾಬ್ದಾರಿ ಇರುತ್ತದೆ. ಹೀಗಾಗಿ ಚೀನಾವನ್ನು ಒಂದು ಕಡೆ ಎಂಗೇಜ್ ಮಾಡಿಕೊಂಡರೆ ಮತ್ತೊಂದೆಡೆ ರಷ್ಯಾ ವನ್ನು ಸುಲಭವಾಗಿ ಮಟ್ಟಹಾಕಬಹುದು ಅನ್ನೊದು ಅಮೆರಿಕದ ಲೆಕ್ಕಾಚಾರ.

ರಷ್ಯಾ-ಉಕ್ರೇನ್ ದೇಶಗಳ ನಡುವಣ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತ ಹೋಗುತ್ತಿದೆ. ಪರಿಣಾಮ ಎರಡೂ ದೇಶಗಳೀಗ ಯುದ್ಧಕ್ಕೆ ಸನ್ನದ್ಧವಾಗಿವೆ. ಇಡೀ ಜಗತ್ತು ರಷ್ಯಾ ಯಾವಾಗ ಬೇಕಾ ದರೂ ಉಕ್ರೇನ್ ಮೇಲೆ ದಾಳಿ ನಡೆಸಬಹುದು ಅನ್ನೊ ಆತಂಕದಲ್ಲಿದೆ. ವಾತಾವರಣ ಉದ್ವಿಗ್ನ ಗೊಳ್ಳುತ್ತಿದ್ದಂತೆ ಅಮೇರಿಕ, ಭಾರತ, ಇಸ್ರೇಲ್ ಹಾಗೂ ಇನ್ನುಳಿದ ದೇಶಗಳು ಉಕ್ರೇನ್‌ನಲ್ಲಿರುವ ತಮ್ಮತಮ್ಮ ನಾಗರಿಕ ಹಾಗೂ ವಿಧ್ಯಾರ್ಥಿಗಳಿಗೆ ಕೂಡಲೇ ಅಲ್ಲಿನ ರಾಯಭಾರಿ ಕಚೇರಿಗೆ ಸಂಪರ್ಕ ಮಾಡಿ ವಾಪಸ್ ಬರಲು ಸೂಚಿಸಿದ್ದಾರೆ.

ಉಕ್ರೇನಿನಲ್ಲಿ ಸುಮಾರು ೪೫ ಸಾವಿರದಷ್ಟು ಭಾರತೀಯರಿದ್ದಾರೆ. ಅದರಲ್ಲಿ ಬಹುತೇಕ ವಿದ್ಯಾರ್ಥಿಗಳಿದ್ದು ಉಳಿದವರು ವ್ಯಾಪಾರಸ್ಥರು. ಅಲ್ಲಿರುವರ ಪೈಕಿ ಹೆಚ್ಚಾಗಿ ನೆಲೆಸಿದ್ದು ಉಕ್ರೇನಿನ ಡಾನ್‌ಬಾಸ್ ನಗರದಲ್ಲಿ. ಸದ್ಯಕ್ಕೆ ಉಕ್ರೇನ್ ಕೂಡ ಯುದ್ಧ ಆರಂಭಿ ಸುವುದು ಈ ಡಾನ್‌ಬಾಸ್ ಪ್ರದೇಶದಿಂದ. ಯಾಕೆಂದರೆ ಈ ಪ್ರದೇಶವು ಹೆಸರಿಗೆ ಮಾತ್ರ ಉಕ್ರೇನಿನ ಭೂ ಪ್ರದೇಶದಲ್ಲಿದೆ. ಆದರೆ ಇದರ ಮೇಲೆ ಹಿಡಿತವಿರುವುದು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಕೈಯಲ್ಲಿ.

ಹಲವು ವರ್ಷಗಳಿಂದ ಡಾನ್‌ಬಾಸ್ ಪ್ರದೇಶವನ್ನು ಉಕ್ರೇನಿಂದ ಬೇರ್ಪಡಿಸಿ ರಷ್ಯಾಗೆ ಸೇರಿಸುವ ಪಣ ತೊಟ್ಟಿದ್ದಾರೆ ಅವರು. ಹಾಗಾಗಿ ಅವರಿಗೆ ಬೇಕಾದ ಎಲ್ಲ ಆಯುಧ, ಹಣಕಾಸಿನ ವ್ಯವಸ್ಥೆಯನ್ನು ರಷ್ಯಾ ಮಾಡುತ್ತಿದೆ. ಎರಡನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ರಚನೆಯಾದಂತೆ ಈಗಲೂ ಬಣಗಳ ರಚನೆ ಶುರುವಾಗಿದೆ. ಉಕ್ರೇನ್ ಅನ್ನು ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್, ಪ್ರಾನ್ಸ್, ಜರ್ಮನಿ ಯಂತಹ ಮಿತ್ರದೇಶಗಳು ಬೆಂಬಲಿಸುತ್ತಿವೆ. ಯುರೋಪಿಯನ್ ಒಕ್ಕೂಟ ರಷ್ಯಾದ ವಿರುದ್ಧವಿದೆ. ಇತ್ತ ರಷ್ಯಾನೇತೃತ್ವದಲ್ಲಿಯೂ ಮತ್ತೊಂದು ಬಣ ರಚಣೆಯಾಗುತ್ತಿದೆ.

ಇದೇ ರೀತಿ ಜರ್ಮನಿ, ಇಟಲಿ, ಜಪಾನ್ ಕೂಡಾ ಗುಂಪು ರಚಿಸಿಕೊಂಡೇ ಎರಡನೇ ಜಾಗತಿಕ ಯುದ್ಧ ಶುರು ಮಾಡಿದ್ದರು. ಬೀಜಿಂಗ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಚೀನಾಗೆ ತೆರಳಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಅವರು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದರು. ಇದರಿಂದ ಚೀನಾ, ರಷ್ಯಾಗೆ ನೇರವಾಗಿ ಬೆಂಬಲ ಸೂಚಿಸಿತ್ತು. ಮತ್ತೊಂದೆಡೆ ಉತ್ತರ ಕೊರಿಯಾ ಕೂಡ ಚೀನಾ ಹಾಗೂ ರಷ್ಯಾದೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದೆ. ಈ ಮೂರು ರಾಷ್ಟ್ರಗಳು ಕಮ್ಯುನಿಸ್ಟ್ ವಿಚಾರಧಾರೆಯ ರಾಷ್ಟ್ರಗಳು.

ಉಕ್ರೇನಿಗೆ ನ್ಯಾಟೊ ಸದಸ್ಯತ್ವ ಸಿಗದೆ ಇದ್ದರೂ ಅಮೆರಿಕ ಮತ್ತು ಅದರ ಮಿತ್ರ ಪಡೆಗಳು ಉಕ್ರೇನನ್ನು ರಕ್ಷಿಸುವ ಶಪಥ ಮಾಡಿವೆ. ಈ ನಿಟ್ಟಿನಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವನ್ನು ಶಾಂತಗೊಳಿಸಲು ಅಮೆರಿಕ, ಭಾರತದ ಸಹಾಯ ಹಸ್ತ ಕೇಳಿದೆ. ಭಾರತ ಹಲವಾರು ವರ್ಷಗಳಿಂದ ರಷ್ಯಾ ಹಾಗೂ ಉಕ್ರೇನಿ ಜತೆ ವ್ಯಾಪಾರ ನಡೆಸುತ್ತಿದೆ. ಭಾರತ ಮತ್ತು ಉಕ್ರೇನ್ ನಡುವೆ 1992ರಿಂದ
ಉತ್ತಮ ಸಂಬಂಧವಿದೆ. ಆ ವರ್ಷವೇ ಭಾರತ ಉಕ್ರೇನಿನ ರಾಜಧಾನಿ ‘ಕೇವ್’ ಪ್ರದೇಶದಲ್ಲಿ ತನ್ನ ರಾಯಭಾರಿ ಕಚೇರಿಯನ್ನು ತೆರೆದಿತ್ತು. ಅಂತೆಯೇ ಉಕ್ರೇನ್ ಕೂಡ 1993ರಲ್ಲಿ ಭಾರತದಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಆರಂಭಿಸಿತ್ತು.

ಇದು ಏಷ್ಯಾದಲ್ಲಿನ ಉಕ್ರೇನಿನ ಮೊಟ್ಟಮೊದಲ ರಾಯಭಾರಿ ನಡೆ. ಹಾಗಾಗಿ ಭಾರತದೊಂದಿಗೆ ಉಕ್ರೇನ್ ಅಂದಿನಿಂದಲೂ ಚೆನ್ನಾಗಿಯೇ ಇದೆ. ರಷ್ಯಾಜತೆಗಂತೂ ಭಾರತ ಸ್ವಾತಂತ್ರ್ಯಾ ನಂತರದಿಂದಲೂ ಮಿತ್ರ ರಾಷ್ಟ್ರವಾಗುಳಿದಿದೆ. ಇದನ್ನು ಉಪಯೋಗಿಸಿ ಕೊಂಡು ಪುಟಿನ್ ಮೇಲೆ ಒತ್ತಡ ತರುವ ಪ್ರಯತ್ನವನ್ನು ಅಮೇರಿಕ ಬಹಳ ಚಾಣಾಕ್ಷತನದಿಂದ ಮಾಡುತ್ತಿದೆ. ಭಾರತ ಕೂಡ ರಷ್ಯಾ ಜತೆಗೆ ಶಾಂತಿ ಮಾತುಕತೆಗಳನ್ನು ಆರಂಭಿಸಿದೆ.

ಇಂಥ ಸನ್ನಿವೇಶದಲ್ಲಿ ಭಾರತ ಯಾವ ನಿಲುವನ್ನು ಪ್ರಕಟಿಸಬಹುದು ಎನ್ನುವುದು ಕೂಡ ಮಹತ್ತರ ವಿಚಾರ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ರಷ್ಯಾಕ್ಕಾಗಲಿ ಅಥವಾ ಅಮೆರಿಕಕ್ಕಾಗಲೀ ಒನ್ ವೇ ಬೆಂಬಲ ಸೂಚಿಸುವ ಪರಿಸ್ಥಿತಿಯಲ್ಲಿಲ್ಲ. ಇತ್ತೀಚೆಗಷ್ಟೇ ಅಮೆರಿಕ ಹಾಗೂ ಅದರ ಸುತ್ತಮುತ್ತಲಿನ ರಾಷ್ಟ್ರಗಳೊಂದಿಗೂ ಭಾರತ ತನ್ನ ಭಾಂದವ್ಯ ವೃದ್ಧಿಸಿಕೊಳ್ಳುತ್ತಿದೆ. ಅದನ್ನು ಕಳೆದುಕೊಳ್ಳಲು ಭಾರತ ತಯಾರಿಲ್ಲ. ಅಮೆರಿಕ ಕೂಡ ಈ ಭಾಗದಲ್ಲಿ ಭಾರತ ನಮಗೆ ತುಂಬಾ ಮಹತ್ವದ ಪಾಲುದಾರ, ಕ್ವಾಡ್‌ನ ಡ್ರೈವಿಂಗ್ ಪೋರ್ಸನ ಲೀಡರ್ ಭಾರತ ಅಂತ ಹೇಳಿ ಹೊಗಳುತ್ತಿದೆ.

ಹಾಗಂತ ಭಾರತ ರಷ್ಯಾದ ವಿರುದ್ಧ ಹೋಗುವುದಕ್ಕೂ ತಯಾರಿಲ್ಲ. ಯಾಕೆಂದರೆ ರಷ್ಯಾ ಅಮೆರಿಕಕ್ಕಿಂತಲೂ ಭಾರತಕ್ಕೆ ಹಳೆಯ ಸ್ನೇಹಿತ. ಕಷ್ಟ ಕಾಲದಲ್ಲಿ, ಈ ಹಿಂದೆ ಪಾಕ್ ಯುದ್ಧದ ಸಂದರ್ಭದಲ್ಲಿ ನಮಗೆ ಸಹಾಯ ಮಾಡಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ ಭಾರತದಲ್ಲಿರುವ ಬಹುತೇಕ ಶಸ್ತ್ರಾಸ್ತ್ರಗಳು ರಷ್ಯಾದಿಂದ ಖರೀದಿಸಿದ್ದು. ಇತ್ತೀಚಿಗೆ S400 ಕ್ಷಿಪಣಿ ನಿರೋಧಕಗಳನ್ನು ಕೂಡ ರಷ್ಯಾ ದಿಂದ ಭಾರತ ಖರೀದಿಸುತ್ತಿದೆ. ಇಂತಹ ಹೊತ್ತಿನಲ್ಲಿ ಭಾರತದೊಂದಿಗಿನ ಸಂಬಂಧದಲ್ಲಿ ಹುಳಿ ಹಿಂಡಿಕೊಳ್ಳುವುದಕ್ಕೆ ಭಾರತ ತಯಾರಿಲ್ಲ.

ಇದೇ ಕಾರಣಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದರೂ ಭಾರತ ಭಾರತ ದಿಂದ S400 ಕ್ಷಿಪಣಿಗಳನ್ನು ಖರೀದಿ ಮಾಡುವ ಡೀಲ್ ನಿಂದ ಹಿಂದೆ ಸರಿಯಲ್ಲ ಅಂತ ಅನಿಸುತ್ತದೆ. ಭಾರತ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ವೋಟಿಂಗ್ ಸಂದರ್ಭ ಬಂದಾಗಲೂ ಭಾರತ ಗೈರು ಹಾಜರಾಗುವ ಮೂಲಕ ತಟಸ್ಥ ರಾಜತಾಂತ್ರಿಕ ಧೋರಣೆ ತಳೆದಿತ್ತು. ಹಾಗಂತ ಸದ್ಯಕ್ಕೆ ಭಾರತ -ಭಾರತದ ಸಂಬಂಧ ಮೊದಲಿನ ಹಾಗೇನೂ ಇಲ್ಲ. ಭಾರತ ಈ ಮೊದಲು ಭಾರತದ ಪರ ನಿಲ್ಲುತ್ತಿತ್ತು. ಇತ್ತೀಚಿಗೆ ಅದು ಚೀನಾಕ್ಕೆ ಬಹಳ ಹತ್ತಿರವಾಗಿಬಿಟ್ಟಿದೆ.

ನಮಗೆ ಮಾರುತ್ತಿದ್ದ ಶಸಾಸಗಳನ್ನು ನಮ್ಮ ಶತ್ರು ರಾಷ್ಟ್ರ ಚೀನಾಕ್ಕೂ ಮಾರುತ್ತಿದೆ. ಇನ್ನು ಸ್ವಲ್ಪ ವರ್ಷ ಕಳೆದರೆ ಪಾಕಿಸ್ತಾನಕ್ಕೂ ಮಾರಾಟ ಮಾಡೊದಕ್ಕೆ ಹಿಂದೇಟು ಹಾಕುವುದಿಲ್ಲ! ಪಕ್ಕದ ಪಾಕಿಸ್ತಾನ ಯಾರ ಪರ ಹೋಗಬಹುದು ಎಂಬ ಪ್ರಶ್ನೆ ಕೂಡ ನಮ್ಮ ಮುಂದಿದೆ. ಪಾಕಿಸ್ತಾನ ಮೊದಲು ಅಮೆರಿಕದಿಂದ ಸಾಕಷ್ಟು ಸಹಾಯ ಪಡೆದುಕೊಂಡಿದೆ. ಆದರೆ ಇದೀಗ ಅದು ತನ್ನ ನೆರವನ್ನು ಸಂಪೂರ್ಣ ನಿಲ್ಲಿಸಿದ್ದರಿಂದ ಸದ್ಯ ಪಾಕಿಸ್ತಾನ, ದೂರ ಸರಿದು ಚೀನಾದ ಬೂಟ್ ನೆಕ್ಕು ತ್ತಿದೆ. ಅಷ್ಟೇ ಅಲ್ಲದೆ ರಷ್ಯಾದೊಂದಿಗೂ ಉತ್ತಮ ಸಂಬಂಧ ಹೊಂದಲು ಪ್ರಯತ್ನ ನಡೆಸುತ್ತಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್, ರಷ್ಯಾ ಪ್ರವಾಸ ಕೈಗೊಳ್ಳಲಿರುವುದಾಗಿಯೂ ವರದಿಯಾಗಿದೆ.

ಇದನ್ನ ಗಮನಿಸಿದರೆ, ಸದ್ಯದ ಪರಿಸ್ಥಿತಿಯಲ್ಲಿ ಒಂದು ವೇಳೆ ಯುದ್ಧವೇನಾದರೂ ನಡೆದರೆ ಪಾಕಿಸ್ತಾನ ರಷ್ಯಾದ ಪರ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ಇದೀಗ ಉಕ್ರೇನಿನ ವಿಚಾರದಲ್ಲಿ ರಷ್ಯಾಬಹುದೊಡ್ಡ ಯೋಜನೆ ರೂಪಿಸಿಕೊಂಡಿದೆ. ಒಂದು ವೇಳೆ ಉಕ್ರೇನಿನ
ಕಾರಣದಿಂದ ಅಮೆರಿಕ ಏನಾದರೂ ಆರ್ಥಿಕ ದಿಗ್ಭಂದನ ವಿಧಿಸಿದರೆ ಅದರಿಂದ ಪಾರಾಗುವ ವಿಚಾರದ ಕುರಿತು ರಷ್ಯಾ ಈಗಾಗಲೇ ಲೆಕ್ಕಾಚಾರ ಹಾಕಿಕೊಂಡಿದೆ. ಒಂದೊಮ್ಮೆ ಐರೋಪ್ಯ ರಾಷ್ಟ್ರಗಳು ರಷ್ಯಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ನಿಲ್ಲಿಸಿಬಿಟ್ಟರೆ, ಆ ವಸ್ತುಗಳನ್ನು ರಷ್ಯಾ, ಚೀನಾಗೆ ಮಾರಾಟ ಮಾಡುತ್ತದೆ. ಆ ಮೂಲಕ ಚೀನಾ ಹಾಗೂ ರಷ್ಯಾಗಳು ಮತ್ತಷ್ಟು ಹತ್ತಿರ ಆಗುತ್ತವೆ.

ರಷ್ಯಾ ತನ್ನ ನ್ಯಾಚುರಲ್ ಗ್ಯಾಸ್ ಅನ್ನು ಸಂಪೂರ್ಣ ನಿಲ್ಲಿಸಿಬಿಟ್ಟರೆ ಐರೋಪ್ಯ ದೇಶಗಳು ಬಹಳ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ. ಅದೇ
ಗ್ಯಾಸನ್ನು ಪೆಟ್ರೋಲಿಯಂ ಪ್ರಾಡಕ್ಟ್ ಹಾಗೂ ಕಲ್ಲಿದ್ದಲನ್ನು ಚೀನಾ ಖರೀದಿ ಮಾಡುವುದರಿಂದ ರಷ್ಯಾ ಆರ್ಥಿಕ ಸಂಕಷ್ಟದಿಂದ ಪಾರಾಗು ತ್ತದೆ. ಇದಕ್ಕೆ ಚೀನಾದ ಒಪ್ಪಿಗೆ ಕೂಡ ಇದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದಿಂದ ಆಗುತ್ತಿರುವ ಸಮಸ್ಯೆಗೆ ಈ ಮೂಲಕ ಹೊಡೆತ ಕೊಡಲು ಚೀನಾ ಸಿದ್ಧತೆಗಳನ್ನು ನಡೆಸಿದೆ. ರಷ್ಯಾದ ಈ ಮಾಸ್ಟರ್ ಪ್ಲ್ಯಾನ್ ನಿಂದಾಗಿ ಅಮೆರಿಕ ಇದೀಗ ತಕ್ಕ ಮಟ್ಟಿಗೆ ಕಂಗಾಲಾಗು ವಂತಾಗಿದೆ. ಈ ಎಲ್ಲ ಯೋಜನೆಗಳಿಂದಾಗಿ ಸದ್ಯಕ್ಕೆ ಅಮೆರಿಕದ ಸ್ಥಿತಿ ‘ಉಕ್ರೇನ್ ಅನ್ನೊ ಬಿಸಿ ತುಪ್ಪ’ವನ್ನು ಬಾಯಲ್ಲಿ ಇಟ್ಟು ಕೊಂಡಂತಾದೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಹುಡುಕಿ ಅಂತ ಅಮೆರಿಕ ಭಾರತವನ್ನು ಗೋಗರೆಯುತ್ತಿದೆ.

ಹೇಗಿದ್ದರೂ ಚೀನಾವನ್ನು ಕಟ್ಟಿಹಾಕೊದಕ್ಕೆ ಭಾರತವೇ ಅತಿಮುಖ್ಯ ಅನ್ನೋದನ್ನು ಅಮೆರಿಕ ಬಹಳ ಸ್ಪಷ್ಟವಾಗಿ ಅರ್ಥಮಾಡಿ ಕೊಂಡಂತಿದೆ. ಅದರಲ್ಲೂ 2020 ರಲ್ಲಿ ನಡೆದ ಗಲ್ವಾರ್ ಕಣಿವೆ ಸಂಘರ್ಷದಲ್ಲಿ ಭಾರತವು ಚೀನಾದ ವಿರುದ್ಧ ತಿರುಗಿ ಬಿದ್ದಿದ್ದ ಸಂದರ್ಭ ವನ್ನು ಕಂಡಿರುವ ಅಮೆರಿಕ ಈ ಬಾರಿ ಭಾರತವನ್ನು ಚೀನಾದ ವಿರುದ್ಧ ನಿಲ್ಲಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಮತ್ತೊಂದೆಡೆ ತೈವಾನ್ ವಿಚಾರವನ್ನು ಹೆಚ್ಚು ಮಾಡುವ ಮೂಲಕ ಚೀನಾ, ರಷ್ಯಾದ ಬೆನ್ನಿಗೆ ನಿಲ್ಲದ ಹಾಗೆ ಮಾಡುವುದು ಅಮೆರಿಕದ ಯೋಜನೆ.

ಸದ್ಯ ಯುದ್ಧಕ್ಕೂ ಮುನ್ನವೇ ಶೇರು ಮಾರುಕಟ್ಟೆ ಯಂತೂ ಸಂಪೂರ್ಣವಾಗಿ ಮುಗ್ಗರಿಸಿ ಹೊಗಿದೆ. ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಬಾರಿ ತಲ್ಲಣ ಉಂಟಾಗಿದೆ. ಪರಿಣಾಮ ಭಾರತದ ಶೇರು ಮಾರುಕಟ್ಟೆಯಲ್ಲೂ ಅಸ್ಥಿರತೆ ಇದೆ. ಅಮೆರಿಕದಲ್ಲೂ ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಪೂರೈಕೆದಾರರ ಶೇರುಗಳ ಮೌಲ್ಯ ಮಾತ್ರ ಜಾಸ್ತಿ ಆಗುತ್ತಿದೆ. ಕಚ್ಚಾ ತೈಲಗಳ ಬೆಲೆ ಈಗಲೇ ಗಗನಕ್ಕೆರಿದೆ. ಈ
ಹಿನ್ನೆಲೆಯಲ್ಲಿ ಯುರೋಪಿಯನ್ ದೇಶಗಳು ಇದೀಗ ತೈಲ ಸಮೃದ್ಧ ದೇಶವಾದ ಕತಾರ್ ಪೆಟ್ರೋಲಿಯಂ ಕಡೆಗೆ ಮುಖ ಮಾಡಿವೆ. ಇತ್ತೀಚಿಗೆ ಕತಾರ್ ಅಧ್ಯಕ್ಷ ಅಮೀರ್ ತಮಿಮ್ ಬಿನ್ ಅಹ್ಮದ್ ಅಲ್ತನಿ ಅವರು ಅಮೆರಿಕ ಪ್ರವಾಸ ಕೈಗೊಂಡಾಗಲೆ ಜರ್ಮನ್ ಪ್ರಧಾನಿ ಕೂಡ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ರಷ್ಯಾ ಏನಾದರೂ ಕೈಕೊಟ್ಟರೆ ಕತಾರ್ ಆ ಕೊರತೆ ತುಂಬಿಕೊಡಲು
ವೇದಿಕೆ ಸಿದ್ಧಮಾಡಲಾಗಿದೆ.

ನ್ಯಾಚುರಲ್ ಗ್ಯಾಸ್ ಪೂರೈಸಲ್ಲ ಅಂತ ಆಟ ಆಡಿದರೆ ’North Stream’ ಪೈಪ್ ಲೈನ್ ಸಂಪೂರ್ಣ ಧ್ವಂಸ ಮಾಡಿಬಿಡುತ್ತೇವೆ ಎಂದು ಅಮೆರಿಕ ಅದ್ಯಕ್ಷ ಖಡಕ್ ಆಗಿ ಎಚ್ಚರಿಕೆ ಸಹ ಕೊಟ್ಟಿದ್ದಾರೆ. ಇದೇ ಕಾರಣದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿರಂತರವಾಗಿ ಜಾಸ್ತಿ ಆಗುತ್ತಿದೆ. ಶೀಘ್ರ ಪ್ರತಿ ಬ್ಯಾರಲ್ ತೈಲದ ಬಡೆಲೆ 100 ಡಾಲರ್ ದಾಟಿದರೂ ಅಚ್ಚರಿ ಇಲ್ಲ. ಯುದ್ಧವೇನಾದರೂ ಆದರೆ ತೈಲ ಮಾರುಕಟ್ಟೆಯ ಬೆಲೆ ಇನ್ನೂ ಗಗನಕ್ಕೆರಬಹುದು.

ಇನ್ನೂ ಗುಟ್ಟೇನು ಗೊತ್ತೇ? ಉಕ್ರೇನ್ ಜತೆ ರಷ್ಯಾ ಸಂಘರ್ಷದ ಮರ್ಮವೇನೆಂದರೆ ಪುಟಿನ್ ಮತ್ತೊಮ್ಮೆ ತಮ್ಮ ಬಲವನ್ನು ಜಗತ್ತಿನೆದುರು ತೋರಿಸಲು ಸಜ್ಜಾಗಿರುವುದು ಈ ಹಿಂದೆ ಯುಎಸ್‌ಎಸ್‌ಆರ್ ಎಷ್ಟು ಬಲಿಷ್ಠ ಆಗಿತ್ತೋ, ಈಗಲೂ ರಷ್ಯಾ ಅಷ್ಟೇ ಬಲಿಷ್ಠ ಆಗಿದೆ ಎಂಬುದನ್ನು ವಿಶ್ವದ ಎದುರು ತೊರಿಸಬೇಕಾಗಿದೆ. ಈಗಾಗಲೇ ಸಾಕಷ್ಟು ದೇಶಗಳು ಅಮೆರಿಕದ ಸ್ನೇಹ ತೊರೆದು ರಷ್ಯಾದ ತೆಕ್ಕೆಗೆ ಬಿಳ್ಳುತ್ತಿವೆ. ಅಮೆರಿಕದ ಬೆಂಬಲ ಇದೆ ಅನ್ನೊ ಕಾರಣದಿಂದ ರಷ್ಯಾದ ಮೇಲೆ ಮುನಿಸಿಕೊಂಡ ಉಕ್ರೇನಿಗೆ ತಕ್ಕ ಪಾಠ ಕಲಿಸುವ ಮೂಲಕ ವಿರೋಧಿ ಗಳಿಗೆ ಎಚ್ಚರಿಕೆ ಕೊಡಲು ಪುಟಿನ್ ಆಟ ಹೂಡಿದ್ದಾರೆ ಅನ್ನೋದರಲ್ಲಿ ಅನುಮಾನ ಇಲ್ಲ.

ಒಂದೊಮ್ಮೆ ಭಾರತ ರಷ್ಯಾದೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿ ಸಂಘರ್ಷ ತಿಳಿ ಮಾಡಲು ಪ್ರಯತ್ನ ಪಟ್ಟರೆ, ಪುಟಿನ್ ಮನ ವೊಲಿಸಿ, ಉಕ್ರೇನ್ ಗಡಿಯಿಂದ ಸೈನ್ಯವನ್ನು ಹಿಂದಕ್ಕೆ ಪಡೆಯುವಂತೆ ಮಾಡಿದರೆ ಅದು ಭಾರತದ ರಾಜತಾಂತ್ರಿಕ ಗೆಲವಾಗುತ್ತದೆ.

error: Content is protected !!