Saturday, 27th April 2024

ರಾಷ್ಟ್ರೀಯ ಏಕತಾ ದಿನ ಆಚರಣೆ ಇಂದು, ಪ್ರಧಾನಿಯಿಂದ ಜಲ ಅರ್ಚನೆ, ಪುಷ್ಪಾರ್ಚನೆ

ನವದೆಹಲಿ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಸೋಮವಾರ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಏಕತಾ ಪ್ರತಿಮೆಗೆ ಭೇಟಿ ಜಲ ಅರ್ಚನೆ ಮತ್ತು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಗುಜರಾತ್ ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತೆಯ ಪ್ರತಿಮೆಯಿದ್ದು, ಅಲ್ಲಿಗೆ ಪ್ರಧಾನಿ ಭೇಟಿ ನೀಡಿ ಗೌರವ ಸಲ್ಲಿಸಿದರು.

ರಾಷ್ಟ್ರೀಯ ಏಕತಾ ದಿನವನ್ನು ಪ್ರತಿವರ್ಷ ಅ.31ರಂದು ಆಚರಿಸಲಾಗುತ್ತದೆ. ದೇಶದ ಉಕ್ಕಿನ ಮನುಷ್ಯ ಎಂದೇ ಜನಪ್ರಿಯರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದಾಗಿ 2014ರಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.

ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಭಾರತದ ಏಕೀಕರಣಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲರು ಸಾಕಷ್ಟು ಶ್ರಮಿಸಿದ್ದರು.

ಸ್ವತಂತ್ರ ಭಾರತದಲ್ಲಿ ಪಟೇಲರು ಈ ದೇಶ ಕಂಡ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹ ಸಚಿವ. ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಪಟೇಲರು ಕಂಡಿದ್ದ ಕನಸು ಮತ್ತು ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಗುರುತಿಸಿ ಕೇಂದ್ರ ಸರ್ಕಾರ ಅವರ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿವಸ ಎಂದು ಜಾರಿಗೆ ತಂದಿದೆ.

2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿ ಸರ್ದಾರ ಅಣೆಕಟ್ಟಿನ ಎದುರಿಗೆ ಸರ್ದಾರ್ ವಲ್ಲಭಬಾಯಿ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ(597 ಅಡಿ)ಯನ್ನು ಉದ್ಘಾಟಿಸಿದ್ದರು.

error: Content is protected !!