Sunday, 19th May 2024

ಹರ್ಷ ಕುಟುಂಬಸ್ಥರಿಗೆ 25 ಲಕ್ಷ ರೂ.ನ ಪರಿಹಾರದ ಚೆಕ್ ನೀಡಿದ ಬಿಎಸ್’ವೈ

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ನಿವಾಸಕ್ಕೆ ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ರಾಜ್ಯ ಸರಕಾರದ ಪರವಾಗಿ 25 ಲಕ್ಷ ರೂ.ನ ಪರಿಹಾರದ ಚೆಕ್ ನೀಡಿದರು.

ಸೀಗೆಹಟ್ಟಿಯಲ್ಲಿ ಹರ್ಷ ಕುಟುಂಬಸ್ಥರ ಭೇಟಿ ಮಾಡಿ ಮಾತನಾಡಿದ ಯಡಿಯೂರಪ್ಪ, ಹರ್ಷ ಎಲ್ಲರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ. ಹಿಂದೂ ಯುವ ಮುಖಂಡನಾಗಿ ಹರ್ಷ ಬೆಳೆಯುತ್ತಿದ್ದ. ಇದನ್ನೂ ಸಹಿಸಕ್ಕಾಗದೇ ಕೆಲವು ಕಿಡಿಗೇಡಿಗಳು ಕೊಲೆ ಮಾಡಿ ದ್ದಾರೆ. ಹರ್ಷನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಸರಕಾರದ ಕಡೆಯಿಂದ 25 ಲಕ್ಷ ರೂ. ಚೆಕ್ ಅನ್ನು ಅವರಿಗೆ ಕೊಟ್ಟಿದ್ದೇನೆ. ಹರ್ಷನನ್ನು ಕಳೆದುಕೊಂಡ ಕುಟುಂಬದ ನೋವು ದೊಡ್ಡದು. ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂಬ ಪ್ರಾರ್ಥನೆ ಬಿಟ್ಟರೇ ನಮ್ಮ ಕೈಯಲ್ಲಿ ಏನೂ ಇಲ್ಲ ಎಂದರು.

ಹಿಂದೂ, ಮುಸ್ಲಿಮ್‍, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ಸಣ್ಣಪುಟ್ಟ ಕಾರಣಕ್ಕೆ ಕೊಲೆ, ಗೊಂದಲ ಉಂಟು ಮಾಡಬಾರದು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕಬೇಕು ಎಂಬುದು ಪ್ರಧಾನಿ ಹಾಗೂ ನಮ್ಮ ಅಪೇಕ್ಷೆ. ಈ ರೀತಿಯ ಘಟನೆಗಳು ಮತ್ತೇ ನಡೆಯದಂತೆ ಎಚ್ಚರ ವಹಿಸಬೇಕು. ಸುತ್ತಮುತ್ತಲಿನ ಜನರು ದುರ್ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಯಡಿಯೂರಪ್ಪರೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!