Monday, 20th May 2024

ಯಕ್ಷಗಾನದ ಬಲಿಪ ಪ್ರಸಾದ್ ಭಾಗವತ ವಿಧಿವಶ

ಮಂಗಳೂರು: ಯಕ್ಷಗಾನದ ಏರು ಪದ್ಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಬಲಿಪ ಪ್ರಸಾದ್ ಭಾಗವತರು ಗಂಟಲಿನ ಕ್ಯಾನ್ಸರ್‌ಗೆ ಒಳಗಾಗಿದ್ದು ಚಿಕಿತ್ಸೆ ಫಲಕಾರಿಯಾ ಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದರು.

ಮೂಡಬಿದಿರೆ ತಾಲೂಕಿನ ಮಾರೂರು ನಿವಾಸಿ ಬಲಿಪ ಪ್ರಸಾದ್ (46) ಕಟೀಲು ಮೇಳದ ಹಿರಿಯ ಭಾಗವತರಾಗಿದ್ದರು. ಪ್ರಸಾದ್ ಬಲಿಪರ ಅಗಲಿಕೆ ಇಡೀ ಯಕ್ಷ ಪ್ರೇಮಿಗಳಲ್ಲಿ ದಿಗ್ಭ್ರಮೆ ಮೂಡಿಸಿದ್ದು, ಯಕ್ಷಗಾನ ಸಂಘಟಕ ಶಾಂತರಾಮ ಕುಡ್ವ ನುಡಿ ನಮನ ಬರೆದಿದ್ದಾರೆ.

1976ರಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತರು ಹಾಗೂ ಜಯಲಕ್ಷ್ಮಿ ದಂಪತಿಗಳ ನಾಲ್ಕನೇ ಸುಪುತ್ರ. ತಮ್ಮ ತಂದೆಯವರಿಂದಲೇ ಭಾಗವತಿಕೆ ಕಲಿತರು. ತಮ್ಮ ತಂದೆಯ “ಬಲಿಪ ಶೈಲಿ” ಯನ್ನು ಕರಗತ ಮಾಡಿ, ರಾಗ, ತಾಳ ಹಾಗೂ ಲಯದ ಸೂಕ್ಷ್ಮತೆಯನ್ನು ಕರಗತ ಮಾಡಿಕೊಂಡರು.

1996 ರಲ್ಲಿ ತಮ್ಮ 20ನೇ ವಯಸ್ಸಿನಲ್ಲೇ ಕಟೀಲು ಮೇಳ ಸೇರಿ, ಮುಂದೆ ಕಟೀಲು ಎರಡನೇ ಮೇಳದ ಪ್ರಧಾನ ಭಾಗವತರಾದರು.‌ ಶೃಂಗಾರ, ಕರುಣ, ವೀರ, ಶಾಂತ ರಸಗಳ ಬಳಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಪ್ರಸಂಗಗಳ ಯಶಸ್ಸಿಗೆ ಕಾರಣರಾಗಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಪ್ರಸಾದರು ಅಜಾತ ಶತ್ರು ಎಂದೇ ಗುರುತಿಸಿ ಕೊಂಡಿದ್ದರು.

25 ವರ್ಷಗಳ ಕಾಲ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಪ್ರಸಾದ್ ಬಲಿಪರು ಕಳೆದ ವರ್ಷದ ತಿರುಗಾಟದ ನಂತರ ವಿಧಿಯ ಕ್ರೂರ ದೃಷ್ಟಿಯಿಂದಾಗಿ ಅಸೌಖ್ಯಕ್ಕೆ ಒಳಗಾಗಿ, ಈ ವರ್ಷದ ತಿರುಗಾಟ ಮಾಡಿರಲಿಲ್ಲ. ದೇಶ ವಿದೇಶಗಳಲ್ಲೂ ತಮ್ಮ ಭಾಗವತಿಕೆಯ ಕಂಪನ್ನು ಹರಡಿಸಿದ ಪ್ರಸಾದ್ ಬಲಿಪರು ನೂರಾರು ಸನ್ಮಾನಗಳನ್ನು ಪಡೆದಿದ್ದರು.

ತಮ್ಮ ತಂದೆ 85 ವರ್ಷದ ಯಕ್ಷರಂಗದ ದಂತಕಥೆ, ಯಕ್ಷರಂಗದ. ಅಪೂರ್ವ ಸಂಪನ್ಮೂಲ ವ್ಯಕ್ತಿ ಎನಿಸಿದ ಬಲಿಪ ನಾರಾಯಣ ಭಾಗವತರು, ತಮ್ಮ ಧರ್ಮಪತ್ನಿ, ಮೂವರು ಹೆಣ್ಣು ಮಕ್ಕಳು, ಮಾಧವ ಬಲಿಪ, ಶಿವಶಂಕರ ಬಲಿಪ ( ಇವರೂ ಭಾಗವತರು), ಶಶಿಧರ ಬಲಿಪ ಮೂವರು ಸಹೋದರರು ಸಹಿತ ಬಂಧು ಬಳಗ ಹಾಗೂ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ.

error: Content is protected !!