Sunday, 19th May 2024

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಇಂದು ಚಾಲನೆ

ಧಾರವಾಡ: ಸಾವಿನ ರಸ್ತೆ ಖ್ಯಾತಿಯ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಸೋಮ ವಾರ ಚಾಲನೆ ಸಿಗಲಿದೆ. 1014.79 ಕೋಟಿ ರೂ. ವೆಚ್ಚದಲ್ಲಿ 6 ಪಥದ ರಸ್ತೆ ನಿರ್ಮಾಣವಾಗಲಿದೆ.

ಸುಮಾರು 30.6 ಕಿ. ಮೀ. ರಸ್ತೆಯ ಅಗಲೀಕರಣ ಕಾಮಗಾರಿ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಿದ್ದಾರೆ.

ಹುಬ್ಬಳ್ಳಿಯ ಗಬ್ಬೂರು ಎನ್‌. ಎಚ್. 4 ರಸ್ತೆಯ 402.6 ಕಿ. ಮೀ. ಇಂದ ಧಾರವಾಡದ ನರೇಂದ್ರ ಕ್ರಾಸ್‌ನ 433.2 ಕಿ. ಮೀ. ವರೆಗೆ 6 ಪಥದ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ನಿರ್ಮಾಣಕ್ಕೆ 800 ಕೋಟಿ ಮತ್ತು ಭೂ ಸ್ವಾಧೀನ, ಡಿಪಿಆರ್ ತಯಾರಿಕೆ ಸೇರಿದಂತೆ ಇತರ ಕಾರ್ಯಗಳಿಗೆ 400 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ನಿರ್ಮಾಣಕ್ಕೆ ಇಪಿಸಿ ಮಾದರಿಯಲ್ಲಿ ಟೆಂಡರ್ ಕರೆಯಲು ಒಪ್ಪಿಗೆ ನೀಡಲಾಗಿತ್ತು.

ಬೈಪಾಸ್ ರಸ್ತೆಯನ್ನು 6 ಪಥದ ರಸ್ತೆಯಾಗಿ ನಿರ್ಮಾಣ ಮಾಡುವುದರಿಂದ ನಗರದೊಳಗೆ ಸಂಚರಿಸುವ ವಾಹನಗಳ ಸಂಚಾರ ಕಡಿಮೆಯಾಗಲಿದೆ.

ಹುಬ್ಬಳ್ಳಿ-ಧಾರವಾಡ ರಸ್ತೆ ಬೈಪಾಸ್ ಅಗಲೀಕರಣಕ್ಕೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಬೆಂಗಳೂರು-ಪುಣೆ ನಡುವೆ 6 ಪಥದ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ಬೈಪಾಸ್‌ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದವು. ಈ ರಸ್ತೆ ಸಾವಿನ ರಸ್ತೆ ಎಂದೇ ಖ್ಯಾತಿ ಪಡೆದಿತ್ತು.

error: Content is protected !!