Sunday, 19th May 2024

ಶಿವಲಿಂಗಕ್ಕೆ ಪೂಜೆ ಸಲ್ಲಿಸುವಲ್ಲಿ ಜಟಾಪಟಿ: ಮಾ.5ರವರೆಗೆ ನಿಷೇಧಾಜ್ಞೆ

ಕಲಬುರಗಿ: ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರದಲ್ಲಿ ಜಟಾಪಟಿ ನಡೆದಿದೆ. ಇದರಿಂದಾಗಿ ಪಟ್ಟಣ ಉದ್ವಿಗ್ನಗೊಂಡಿದ್ದು, ಮಾ.5ರ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹಿಂದೂ-ಮುಸ್ಲಿಂ ಸಂಘಟನೆಗಳ ವಿವಾದದ ಕೇಂದ್ರವಾದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿನ ಶಿವ ಲಿಂಗಕ್ಕೆ ಪೂಜೆ ಸಲ್ಲಿಸಲು ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಬಸವರಾಜ ಮುತ್ತಿ ಮೂಡ, ರಾಜಕುಮಾರ ಪಾಟೀಲ್ ತೇಲ್ಕೂರ ಮುಂತಾದವರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ನಾಯಕರು, ಹಿಂದೂ ಸಂಘಟನೆಗಳ ಸದಸ್ಯರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಸಚಿವ, ಶಾಸಕರು, ಜಿಲ್ಲಾಧಿ ಕಾರಿ, ಎಸ್‌ಪಿ ಕಾರುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದರು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಎರಡೂ ಸಮುದಾಯದ ಅಪಾರ ಜನರು ಸೇರಿದ್ದರು.

ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಎರಡೂ ಕಡೆಯವರ ಜೊತೆ ಮಾತುಕತೆ ನಡೆಸಿದರು. 12 ಜನರು ದರ್ಗಾ ಒಳಗೆ ಹೋಗಿ ಲಿಂಗದ ಶುದ್ಧೀಕರಣ ಮಾಡಲು ಒಪ್ಪಿಗೆ ನೀಡಿದರು. ದರ್ಗಾದವರು ಇದಕ್ಕೆ ಒಪ್ಪಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಇತ್ತೀಚೆಗೆ ಕಿಡಿಗೇಡಿಯೊಬ್ಬ ಲಿಂಗದ ಬಳಿ ಗಲೀಜು ಮಾಡಿದ್ದ. ಇದರಿಂದಾಗಿ, ಬಿಜೆಪಿ, ಶ್ರೀರಾಮ ಸೇನೆ ಕಾರ್ಯ ಕರ್ತರು ತೀವ್ರ ಹೋರಾಟ ನಡೆಸಿದ್ದರು.

ಶಿವರಾತ್ರಿ ದಿನವಾದ ಮಂಗಳವಾರ ಶಿವಲಿಂಗ ಶುದ್ಧೀಕರಣ ಮಾಡಿ ಪೂಜೆ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದರು. ಮಾ.೧ರಂದು ಜೇವರ್ಗಿ ತಾಲೂಕಿನ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಳಂದ ಚಲೋಗೆ ಕರೆ ಕೊಟ್ಟಿದ್ದರು. ಜಿಲ್ಲಾಡಳಿತ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ ಅವರನ್ನು ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೇಂದ್ರ ಸಚಿವ ಭಗವಂತ ಖೂಬಾ ಮುಂತಾದ ನಾಯಕರು ಮಂಗಳವಾರ ನಗರದಲ್ಲಿ ಬೃಹತ್ ಜಾಥಾ ಮೂಲಕ ದುರ್ಗಾಕ್ಕೆ ಆಗಮಿಸಿದರು. ದರ್ಗಾ ಆವರಣದಲ್ಲಿ ಎರಡೂ ಕಡೆಯವರು ಮುಖಾಮುಖಿಯಾದರು. ಇದರಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣ ವಾಯಿತು.

ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಇತರರು ಒಳಹೋಗಿ ಶಿವಲಿಂಗ ಶುದ್ಧೀಕರಣ ಮಾಡಿ ಪೂಜೆ ಸಲ್ಲಿಸಿದರು.

error: Content is protected !!