Monday, 20th May 2024

ಕಲಾವಿದ ಕುಂಬ್ಳೆ ಸುಂದರ್ ರಾವ್ ವಿಧಿವಶ

ಮಂಗಳೂರು: ಯಕ್ಷಗಾನ ಹಾಗೂ ತಾಳ ಮದ್ದಲೆ ಕಲಾವಿದ ಕುಂಬ್ಳೆ ಸುಂದರ್ ರಾವ್ (88) ಬುಧವಾರ ವಿಧಿವಶರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂಬ್ಳೆ ಸುಂದರ್ ರಾವ್ ಅವರು, ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಂದರ್ ರಾವ್ ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಅದ್ಭುತ ವಾಕ್ ಚಾತುರ್ಯದಿಂದ ಪ್ರಸಿದ್ಧವಾಗಿದ್ದ ಕುಂಬ್ಳೆ ಸುಂದರ್ ರಾವ್ ಅವರು, ಪ್ರಾಸಬದ್ಧ ಸಂಭಾಷಣೆಯಿಂದಲೆ ಹೆಸರು ವಾಸಿಯಾಗಿದ್ದರು. ಯಕ್ಷಗಾನದ ತೆಂಕುತಿಟ್ಟು ಕಲಾವಿದರಾಗಿದ್ದ ಅವರು, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳದಲ್ಲಿ ಕಲಾವಿದ ರಾಗಿ ಸೇವೆ ಮಾಡಿದ್ದರು.

ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕುಂಬ್ಳೆ ಸುಂದರ್ ರಾವ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ, ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018-19ನೇ ಸಾಲಿನ ಯಕ್ಷ ಮಂಗಳ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸುಮಾರು ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ಕುಂಬ್ಳೆ ಸುಂದರ್ ರಾವ್ ಅವರ ನಿಧನಕ್ಕೆ ಮಂಗಳೂರಿನ ಯಕ್ಷ ಕಲಾರಂಗದವರು ಸಂತಾಪ ಸೂಚಿಸಿದ್ದಾರೆ.

ಇನ್ನು ಕುಂಬ್ಳೆ ಸುಂದರ್ ರಾವ್ ಅವರು, 1994ರಿಂದ 1999ರವರೆಗೆ ಸುರತ್ಕಲ್‌ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿದ್ದರು.

ಇನ್ನು ಮೃತರ ಅಂತ್ಯಸಂಸ್ಕಾರ ಗುರುವಾರ ನಡೆಯಲಿದೆ ಎಂದು ಕುಂಬ್ಳೆ ಸುಂದರ್ ರಾವ್ ಅವರ ಪುತ್ರ ತಿಳಿಸಿದ್ದು, ಮಂಗ ಳೂರಿನ ಪಂಪ್‌ವೆಲ್‌ನಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

error: Content is protected !!