Wednesday, 1st May 2024

ಪಾಲಿಕೆ ವ್ಯಾಪ್ತಿಯಲ್ಲಿ ನೂರರಷ್ಟು ಮತದಾನಕ್ಕೆ ಕ್ರಮ: ಜಿಲ್ಲಾಧಿಕಾರಿ

ತುಮಕೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಶೇ.೧೦೦ ರಷ್ಟು ಮತದಾನವಾಗಬೇಕು. ಈ ಹಿನ್ನೆಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ಸಭಾಂಗಣದಲ್ಲಿ ಬುಧವಾರ ಜರುಗಿದ ಸ್ವೀಪ್ ಸಮಿತಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಪಾಲಿಕೆ ವ್ಯಾಪ್ತಿಯ ವಾರ್ಡುಗಳಲ್ಲಿ ತಪ್ಪದೆ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕ್ರಮವನ್ನು ಏರ್ಪಡಿಸಬೇಕು. ಹಿಂದಿನ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವ ವಾರ್ಡುಗಳಿಗೆ ಆದ್ಯತೆ ನೀಡಬೇಕು, ಅಧಿಕಾರಿಗಳು ಹಿಂದಿನ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಲು ಕಾರಣವನ್ನು ಕಂಡುಕೊಳ್ಳಬೇಕು. ಮತದಾನ ಮಾಡುವ ಮತಗಟ್ಟೆಯ ಮಾಹಿತಿ ಕೊರತೆಯಿಂದ ಅಥವಾ ಮತಗಟ್ಟೆ ದೂರವಿದೆ ಎಂದು ಕೆಲವು ಮತದಾರರು ಮತದಾನದಿಂದ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಮತದಾರರ ಚೀಟಿಯನ್ನು ವಿತರಿಸಿ ಮತಗಟ್ಟೆಗಳ ಮಾಹಿತಿಯನ್ನು ಮತದಾರರಿಗೆ ನೀಡಬೇಕು, ಬೆಂಗಳೂರು ಮತ್ತಿತರ ಪ್ರದೇಶಗಳಿಗೆ ಉದ್ಯೋಗ, ವ್ಯಾಸಂಗಕ್ಕಾಗಿ ತೆರಳಿರುವ ೧೮ ವರ್ಷ ಮೇಲ್ಪಟ್ಟ ಕುಟುಂಬ ಸದಸ್ಯರನ್ನು ಮತದಾನ ದಿನದಂದು ಸ್ವಗ್ರಾಮಕ್ಕೆ ಬಂದು ಮತ ಚಲಾಯಿಸುವ ಬಗ್ಗೆ ಸ್ಥಳೀಯ ಮತದಾರರಿಗೆ ತಿಳಿ ಹೇಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿ.ಪಂ. ಸಿಇಒ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಪ್ರತಿದಿನ ಬೆಳಿಗ್ಗೆ ಕಸದ ವಾಹನಗಳಲ್ಲಿ ಜಾಗೃತಿ ಗೀತೆಗಳ ಮೂಲಕ ಮತದಾನ ಮಾಡುವ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಮತದಾನ ಜಾಗೃತಿ ಮೂಡಿಸುವ ಬಗ್ಗೆ ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಸೆಳೆಯಬೇಕು ಎಂದು ಸಲಹೆ ನೀಡಿದರು. ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್ ಮಾತನಾಡಿ, ೧೮ ವರ್ಷ ಮೇಲ್ಪಟ್ಟ ಯುವ ಮತದಾರರಿಂದ ಮತದಾನ ಜಾಗೃತಿ ಸಂದೇಶವನ್ನು ವಿಡಿಯೋ ಚಿತ್ರೀಕರಣ ಮಾಡಿ ವಿಡಿಯೋ ತುಣುಕನ್ನು ಹಂಚಿಕೊಳ್ಳುವುದರಿಂದ ಯುವ ಮತದಾರರನ್ನು ಮತದಾನ ಮಾಡುವತ್ತ ಸೆಳೆಯಬಹುದು ಎಂದು ಸಲಹೆ ನೀಡಿದರು.
ಪಾಲಿಕೆ ಉಪ ಆಯುಕ್ತೆ(ಕಂದಾಯ) ಸುಮತಿ, ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ತೋಟಗಾರಿಕೆ ಉಪನಿರ್ದೇಶಕ ರಘು, ರೇಷ್ಮೆ ಉಪನಿರ್ದೇಶಕ ಬಾಲಕೃಷ್ಣಪ್ಪ, ಡಾ. ರಕ್ಷಿತ್, ಪಾಲಿಕೆ ಚುನಾವಣಾ ಶಾಖೆಯ ನಾಗಭೂಷಣ್, ಜಿ.ಪಂ. ಇಂಜಿನಿಯರ್ ಶ್ರೀನಿವಾಸ್, ಮತ್ತಿತರ ಅಧಿಕಾರಿಗಳು ಉಪಸ್ಥಿತ ರಿದ್ದರು.
error: Content is protected !!