Sunday, 19th May 2024

‘ಗ್ರೀನ್ ಕಾರ್ಡ್’ ಪಡೆಯಲು ಅರ್ಜಿ ಸಲ್ಲಿಸಿದ ಗೊಟಬಯ ರಾಜಪಕ್ಸ

ಸಿಂಗಾಪುರ: ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

ರಾಜಪಕ್ಸ ಅವರ ಪತ್ನಿ ಲೋಮಾ ರಾಜಪಕ್ಸ ಅವರು ಅಮೆರಿಕ ನಿವಾಸಿ ಯಾಗಿದ್ದು, ಅಲ್ಲಿಯ ಪೌರತ್ವ ಪಡೆದಿದ್ದಾರೆ. ಹೀಗಾಗಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಗೊಟಬಯ ಅವರು ಅರ್ಹರಾಗಿದ್ದಾರೆ. ‘ಗ್ರೀನ್ ಕಾರ್ಡ್’ ಪಡೆಯಲು ರಾಜಪಕ್ಸ ಅವರ ವಕೀಲರು ಕಳೆದ ತಿಂಗಳು ಅರ್ಜಿ ಸಲ್ಲಿಸಿ, ಪ್ರಕ್ರಿಯೆ ಪ್ರಾರಂಭಿ ಸಿದ್ದಾರೆ.

ಶ್ರೀಲಂಕಾ ಸೇನೆಯಲ್ಲಿದ್ದ ರಾಜಪಕ್ಸ ಅವರು ನಿವೃತ್ತಿ ಪಡೆದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದತ್ತ ಮುಖ ಮಾಡಿ, 1998 ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು.

ನಂತರ 2005 ರಲ್ಲಿ ಶ್ರೀಲಂಕಾಕ್ಕೆ ಮರಳಿದ್ದರು. ಬಳಿಕ ರಾಜಪಕ್ಸ ಅವರು 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅಮೆರಿಕ ಪೌರತ್ವ ತ್ಯಜಿಸಿದ್ದರು.

ಪ್ರಸ್ತುತ ಬ್ಯಾಂಕಾಕ್‌ನಲ್ಲಿ ತಮ್ಮ ಪತ್ನಿಯೊಂದಿಗೆ ತಂಗಿರುವ 73 ವರ್ಷದ ಮಾಜಿ ಅಧ್ಯಕ್ಷ ಕನಿಷ್ಠ ನವೆಂಬರ್‌ವರೆಗೆ ಥೈಲ್ಯಾಂಡ್‌ ನಲ್ಲಿ ಉಳಿಯುವ ಯೋಚನೆಯನ್ನು ಕೈಬಿಟ್ಟಿದ್ದು, ಆ.25ರಂದು ಶ್ರೀಲಂಕಾಕ್ಕೆ ಹಿಂತಿರುಗಲಿದ್ದಾರೆ.

ಗೊಟಬಯ ಶ್ರೀಲಂಕಾಕ್ಕೆ ಮರಳಿದ್ದೇ ಆದರೆ, ಮಾಜಿ ಅಧ್ಯಕ್ಷರಿಗೆ ನೀಡಲಾಗುವ ಭದ್ರತೆ ಒದಗಿಸುವ ಬಗ್ಗೆ ಸಚಿವ ಸಂಪುಟವು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ.

ದೇಶದ ಆರ್ಥಿಕ ದುಸ್ಥಿತಿಯ ಕಾರಣಕ್ಕೆ ಜನರಿಂದ ಎದುರಾದ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಗೊಟಬಯ ರಾಜಪಕ್ಸ ಅವರು ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಥಾಯ್ಲೆಂಡ್‌ ಗೆ ಪಲಾಯನ ಮಾಡಿದ್ದರು.

error: Content is protected !!