Saturday, 27th April 2024

ಟಾಂಗಾ ತಪ್ಪಿಸಿಕೊಂಡು ಐದು ಕಿಲೋ ಮೀಟರ್‌ ನಡೆದ ಕಥೆ

ಶಂಕರ್‌ ಬಿದರಿ- ಸತ್ಯಮೇವ ಜಯತೆ -ಭಾಗ ೮

ಇಂಡಿಯಿಂದ ರೈಲ್ವೆ ಸ್ಟೇಷನ್‌ಗೆ ಹೋಗಿ-ಬರುವವರು ಇಂಡಿಯಿಂದ ಸ್ಟೇಷನ್‌ಗೆ ಬರಲು ಟಾಂಗಾಗಳಲ್ಲಿ ಸಂಚರಿಸ ಬೇಕಿತ್ತು. ಅಂದು ನಾನು ನೀರು ಕುಡಿದು ಬರುವಷ್ಟರಲ್ಲಿ ಎಲ್ಲ ಟಾಂಗಾಗಳೂ ಇಂಡಿಗೆ ಹೋಗಿ ಬಿಟ್ಟಿದ್ದವು. ನಾನು ಅಲ್ಲಿ ವಿಚಾರಿಸಿದಾಗ, ಮರುದಿನ ಬೆಳಗ್ಗೆಯೇ ಟಾಂಗಾಗಳು ಬರುವುದು ಎಂದು ತಿಳಿಸಿದರು. ಆಗ ರಾತ್ರಿ ಸುಮಾರು ೧೦ ಗಂಟೆಯಾಗಿತ್ತು. ಮುಂದೇನು ಮಾಡುವುದೋ ತೋಚದಾಗಿತ್ತು…

ನೇಮಕ ಆದೇಶ ಬಂದ ತಕ್ಷಣ ಎರಡು ಪ್ಯಾಂಟು, ಎರಡು ಶರ್ಟು ಹೊಲಿಸಿಕೊಂಡೆ. ಬೆಂಗಳೂರಿನಲ್ಲಿ ಎಲ್ಲಿ ವಾಸವಿರಬೇಕು ಎಂದು ಯೋಚನೆ ಮಾಡಿದಾಗ ನಮ್ಮ ಊರಿನ ಸಮೀಪ ಹನಗಂಡಿ ಗ್ರಾಮದವರಾದ ಚಂದ್ರಶೇಖರ ಯಲಕಾರ ಮತ್ತು ಚಿಕ್ಕೋಡಿಯ ಕರಾಳೆ ಎಂಬುವವರು ಬೆಂಗಳೂರಿನಲ್ಲಿ ರಿಸರ್ವ್ ಬ್ಯಾಂಕ್‌ನಲ್ಲಿ ನೋಟು ಮತ್ತು ನಾಣ್ಯ ಪರೀಕ್ಷಕರಾಗಿ ಕೆಲಸ ಮಾಡುತ್ತಿರುವ ವಿಷಯ ತಿಳಿಯಿತು.

ಅವರ ವಿಳಾಸ ಪತ್ತೆ ಹಚ್ಚಿ ನನಗೆ ನೇಮಕ ಆಗಿದ್ದು, ನಾನು ಮೂರು ತಿಂಗಳು ಬೆಂಗಳೂರಿ ನಲ್ಲಿ ಇರಬೇಕಾಗುತ್ತದೆ ಎಂದೂ, ನನಗೆ ವಸತಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೋರಿದೆ. ಅವರು ಅದಕ್ಕೆ ಉತ್ತರ ಬರೆದು ‘ನೀವು ನಮ್ಮ ಮನೆಗೇ ಬನ್ನಿ, ನಮ್ಮೊಂದಿಗೇ ಇರಬಹುದು’ ಎಂದು ತಿಳಿಸಿದರು. ೨೫, ಜುಲೈ ೧೯೭೧ರಂದು ನಾನು ಬೆಂಗಳೂರಿಗೆ ಹೊರಟೆ. ನಮ್ಮವ್ವ ಮದುವೆಯಾಗಿ ತನ್ನ ತಂದೆಯ ಮನೆಯಿಂದ ಬರುವಾಗ ತಂದಿದ್ದ ಟ್ರಂಕನ್ನು ತೆರೆದು ಅದರಲ್ಲಿದ್ದ ಮದುವೆಯ ಎರಡು ಬನಾರಸ್ ರೇಷ್ಮೆ ಸೀರೆಗಳನ್ನು ನಮ್ಮ ಮನೆಯ ಕಪಾಟಿನಲ್ಲಿಟ್ಟು ನನಗೆ ಟ್ರಂಕನ್ನು ನೀಡಿದ್ದಳು.

ನಾನು ಅದರಲ್ಲಿ ನನ್ನೆಲ್ಲ ಸಾಮಾನುಗಳನ್ನು ಹಾಕಿಕೊಂಡು ನಮ್ಮವ್ವ ಹಿಂದಿನ ದಿನ ನನಗಾಗಿ ತಯಾರಿಸಿದ್ದ ಹೆಸರು ಉಂಡೆ ಡಬ್ಬಿಯನ್ನೂ ಸಹಿತ ಇಟ್ಟುಕೊಂಡು ಹೊರಟೆನು. ನನ್ನವ್ವ ನನಗೆ 300 ರುಪಾಯಿ ಜೋಡಿಸಿ ಕೊಟ್ಟಿದ್ದಳು. ಅವತ್ತು ಬೇಗನೆ ಊಟ ಮಾಡಿ ಮಧ್ಯಾಹ್ನ ೧೨ ಗಂಟೆಯ ಬಸ್‌ಗೆ ಬಿಜಾಪುರಕ್ಕೆ ಹೋದೆನು. ಬಿಜಾಪುರ ತಲುಪಿದಾಗ ಮಧ್ಯಾಹ್ನ 3 ಗಂಟೆ ಯಾಗಿತ್ತು.

ಬಿಜಾಪುರದಿಂದ ಬೆಂಗಳೂರಿಗೆ ಸಂಜೆ 5 ಗಂಟೆಗೆ ಬಿಡುವ ಬಸ್ಸಿನಲ್ಲಿ 26.50 ರುಪಾಯಿ ಕೊಟ್ಟು ಬೆಂಗಳೂರು ಟಿಕೆಟ್ ತೆಗೆದು ಕೊಂಡೆ. ಬಸ್ ಸರಿಯಾಗಿ ಐದು ಗಂಟೆಗೆ ಹೊರಟಿತು. ಬಾಗೇವಾಡಿ-ಮುದ್ದೇಬಿಹಾಳ-ಸಿಂಧನೂರು ಮೂಲಕ ಮಧ್ಯರಾತ್ರಿ ಬಳ್ಳಾರಿ ತಲುಪಿತು. ಅಲ್ಲಿ ಡ್ರೈವರ್ ಬದಲಾದರು. ಬೆಳಗ್ಗಿನ ಜಾವ ಬಸ್ ಬೆಂಗಳೂರು ಸುಭಾಶ ನಗರ ಬಸ್ ನಿಲ್ದಾಣ ತಲುಪಿತು.
ಸುಭಾಶ್‌ ನಗರ ಕೆರೆಯ ಭಾಗದಲ್ಲಿ ಬಸ್ ನಿಲ್ದಾಣವೂ, ಇನ್ನೊಂದು ಭಾಗದಲ್ಲಿ ಕಾಂಗ್ರೆಸ್ ವಸ್ತು ಪ್ರದರ್ಶನವೂ ಇತ್ತು. ನಾನು ಬಸ್ ನಿಲ್ದಾಣದಿಂದ ಒಂದು ಆಟೋ ಹಿಡಿದು ನನ್ನ ಟ್ರಂಕ್ ಸಮೇತ ಕರಾಳೆ ಅವರಿದ್ದ ಪ್ಯಾಲೇಸ್ ಗುಟ್ಟಹಳ್ಳಿಯ ‘ರಹಮತ್ ಮಂಜಿಲ್’ ಎಂಬ, ಅವರ ಮನೆಗೆ ಬಂದೆ. ಅಲ್ಲಿ ಸ್ನಾನ, ಪೂಜೆ ಮುಗಿಸಿಕೊಂಡು ಅವರೊಂದಿಗೆ ತಿಂಡಿ ಮಾಡಿದೆನು.

ಇದು ಬೆಂಗಳೂರಿನ ನನ್ನ ಮೊದಲ ಭೇಟಿ. ಶ್ರೀಯಲಕಾರ ಅವರು ತಮ್ಮ ಕರ್ತವ್ಯಕ್ಕೆ ಹೋಗಬೇಕಾಗಿತ್ತು. ನನಗೆ ಮೊದಲನೇ ದಿನವಾಗಿದ್ದ ಕಾರಣ ಅವರು ಕಾವೇರಿ ಚಿತ್ರಮಂದಿರದಿಂದ ಸಿಟಿ ಬಸ್‌ನಲ್ಲಿ ಕರೆದುಕೊಂಡು ಶಿವಾಜಿನಗರದವರೆಗೂ ನನ್ನೊಂದಿಗೆ
ಬಂದರು. ಟಿಕೆಟ್ ದರ 10 ಪೈಸೆಯಾಗಿತ್ತು. ಶಿವಾಜಿನಗರದಿಂದ ನನ್ನನ್ನು ಹಲಸೂರು ಸಿಟಿ ಬಸ್‌ಗೆ ಹತ್ತಿಸಿ ಲಿಡೊ ಥಿಯೇಟರ್
ಬಳಿ ಇಳಿಯಲು ಹೇಳಿದರು. ಟಿಕೆಟ್ ದರ 15 ಪೈಸೆ. ನಾನು ಲಿಡೊ ಹತ್ತಿರ ಇಳಿದು ಅದಕ್ಕೆ ತಾಗಿಕೊಂಡಂತಿದ್ದ ಲಿಡೊ ಮತ್ತು
ಕಾಮಧೇನು ಹೋಟೆಲ್ ಮಧ್ಯೆ ಇದ್ದ ಸರ್ಕಲ್ ಟೆಲಿಕಾಂ ಟ್ರೈನಿಂಗ್ ಸೆಂಟರ್‌ನಲ್ಲಿ ಹೋಗಿ ತರಬೇತಿಗೆ ವರದಿ ಮಾಡಿಕೊಂಡೆನು.

ನನ್ನ ಜತೆ ಸುಮಾರು 20 ಜನ ಆಪರೇಟರ್ ಹುದ್ದೆಗೆ ನೇಮಕವಾಗಿದ್ದರು. ಅವರೂ ನನ್ನಂತೆಯೇ ವರದಿ ಮಾಡಿಕೊಂಡರು. ವರದಿ ಮಾಡಿಕೊಂಡವರಲ್ಲಿ ವಯಸ್ಸಿನಲ್ಲಿ ನಾನೇ ತುಂಬಾ ಚಿಕ್ಕವನಾಗಿದ್ದೆ. ಅದರಂತೆಯೇ ವಿದ್ಯಾರ್ಹತೆಯಲ್ಲಿಯೂ ನಾನೇ ಕಡಿಮೆ ಇದ್ದೆ. ಸೈಯ್ಯದ್ ಖುರ್ಷಿದ್, ಕಬಾಡಗಿ, ಚೌಹಾಣ್, ಸಂಗಳದ, ಕುಲಕರ್ಣಿ, ಶ್ರೀಧರ್, ಸುಶೀಲಾ ಹೆಗಡೆ, ಕೆ.ಎನ್. ಪ್ರೇಮಾ ಕುಮಾರಿ, ಶೀಲಾ ಬೆಟಗೇರಿ, ಪದ್ಮಾ ಮತ್ತು ಪದ್ಮಾವತಿ ಇವರ ಹೆಸರುಗಳು ಇನ್ನೂ ನನಗೆ ನೆನಪಿವೆ. ತರಬೇತಿ ಕೇಂದ್ರದಲ್ಲಿ ಶಂಕರ ನಾರಾಯಣನ್ ಎಂಬ (ಅಸಿಸ್ಟೆಂಟ್ ಎಂಜಿನಿಯರ್) ಸಬ್ ಡಿವಿಜನಲ್ ಆಫೀಸರ್, ಟೆಲಿಗ್ರಾಫ್ ದರ್ಜೆ ಅಧಿಕಾರಿಯವರು ಮುಖ್ಯಸ್ಥರಾಗಿದ್ದರು.

ಅವರಿಗೆ ಸಹಾಯಕರಾಗಿ ಕನಕದಾಸ್ ಮತ್ತು ಖಾದರ್ ಎಂಬ ಫೋನ್ ಇನ್ಸ್‌ಪೆಕ್ಟರ್‌ಗಳು ಇದ್ದರು. ತರಬೇತಿಯನ್ನು ಸಂಪೂರ್ಣ ವಾಗಿ ಕನಕದಾಸ್ ಮತ್ತು ಖಾದರ್ ಅವರೇ ನಿರ್ವಹಿಸುತ್ತಿದ್ದರು. ತರಬೇತಿ ಕೇಂದ್ರದ ಮುಖ್ಯ ಕಟ್ಟಡದಿಂದ ಸ್ವಲ್ಪ ದೂರದಲ್ಲಿ
ಎರಡು ರೂಮುಗಳಿದ್ದವು. ಅಲ್ಲಿ ತರಬೇತಿ  ಕೇಂದ್ರದ ಕ್ಯಾಂಟೀನ್ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆ ಚಿತ್ರಾನ್ನ, ಪುಳಿಯೋಗರೆ, ಮೊಸರನ್ನ ಇತ್ಯಾದಿ ಬಹಳ ಕಡಿಮೆ ದರದಲ್ಲಿ ತರಬೇತಿಗೆ ಬಂದವರಿಗೆ ಕೊಡುತ್ತಿದ್ದರು. ನಮಗೆ ಟೆಲಿಪೋನ್ ವ್ಯವಸ್ಥೆ, ವಿವಿಧ ಮಾದರಿಯ ಟೆಲಿಫೋನ್ ಎಕ್ಸ್‌ಚೇಂಜ್‌ಗಳು ಮತ್ತು ಆಪರೇಟರ್ ಆಗಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ವಿವರವಾದ ತರಬೇತಿ ನೀಡಿದರು. ಬೆಳಗ್ಗೆ 10ರಿಂದ ಸಾಯಂಕಾಲ 5 ರವರೆಗೂ ತರಬೇತಿ ನಡೆಯುತ್ತಿತ್ತು. ನಾನು ದಿನದ ತರಬೇತಿ ಮುಗಿದ ಮೇಲೆ ಸಂಜೆ 5 ಗಂಟೆಗೆ ಕಾಲ್ನಡಿಗೆಯಲ್ಲಿ ಹೊರಟು ಮಹಾತ್ಮ ಗಾಂಧಿ ರಸ್ತೆ, ವಿಕ್ಟೋರಿಯಾ ಹೋಟೆಲ್, ರೆಸಿಡೆನ್ಸಿ ರಸ್ತೆ, ರಾಜಾ ರಾಮ್ ಮೋಹನರಾಯ್ ರಸ್ತೆ ಮೂಲಕ ಹಡ್ಸನ್ ಸರ್ಕಲ್‌ವರೆಗೆ ಬರುತ್ತಿದ್ದೆ. ಆಗ ಎಂ.ಜಿ.ರಸ್ತೆಯಲ್ಲಿ ಎರಡೂ ಕಡೆಗಳಲ್ಲೂ ಬ್ರಿಟಿಷರ ಕಾಲದ ಬಂಗಲೆಗಳಿದ್ದವು.

ಹಡ್ಸನ್ ಸರ್ಕಲ್‌ನಲ್ಲಿ ತೊಗಟವೀರ ಸಂಘದ ಸಮೀಪವಿದ್ದ ಒಂದು ಅಂಗಡಿಯಲ್ಲಿ 10 ಪೈಸೆ ಕೊಟ್ಟು ಒಂದು ಬಾಳೆಹಣ್ಣು ತಿನ್ನುತ್ತಿದ್ದೆ. ಅದಾದ ಮೇಲೆ, ಅವೆನ್ಯೂ ರಸ್ತೆಯಲ್ಲಿದ್ದ ಎಡಬಲಗಳಲ್ಲಿ ಇದ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿದ್ದ ಸಿನಿಮಾ ಪೋಸ್ಟರ್‌ಗಳನ್ನು ನೋಡುತ್ತ ನಡೆಯುತ್ತಿದ್ದೆ. ಅದೇ ರೀತಿ ಫುಟ್‌ಪಾತ್ ಮೇಲೆ ಮಾರುತ್ತಿದ್ದ ಹಳೆಯ ಪುಸ್ತಕಗಳು ಮತ್ತು ಟಿಬೆಟಿಯನ್‌ರು ಮಾರುತ್ತಿದ್ದ ಸ್ವೆಟರ್, ಸ್ಕಾರ್ಫ್‌ಗಳನ್ನು ನೋಡುತ್ತಿದ್ದೆ. ಹೀಗೆ ಅವೆನ್ಯೂ ರೋಡ್ ಕಳೆದು ಸಂಗಮ್ ಚಲನಚಿತ್ರ ಮಂದಿರದ ಪಕ್ಕದಲ್ಲಿದ್ದ ಕಾಮತ್ ಹೋಟೆಲ್‌ಗೆ ಬರುವಷ್ಟರಲ್ಲಿ ಸಾಯಂಕಾಲ ಏಳು ಗಂಟೆ ಆಗುತ್ತಿತ್ತು.

ಅಲ್ಲಿ ನಾನು ಒಂದು ರೈಸ್ ಪ್ಲೇಟ್ ಮತ್ತು ಆರು ಪೂರಿ ಹೆಚ್ಚಿಗೆ ತೆಗೆದುಕೊಂಡು ಊಟ ಮಾಡುತ್ತಿದ್ದೆ. ಇಷ್ಟಕ್ಕೆ ಕೇವಲ 1 ರು. 25 ಪೈಸೆ. ಊಟವಾದ ಮೇಲೆ ಅಲ್ಲಿಂದ ಹೊರಟು ಕಿನೊ ಟಾಕೀಸ್, ಶೇಷಾದ್ರಿಪುರ ಪೊಲೀಸ್ ಸ್ಟೇಷನ್ ಮಗ್ಗುಲಿಗೆ ಹಾದು ನಾನು ಪ್ಯಾಲೇಸ್ ಗುಟ್ಟಹಳ್ಳಿಯ ರಹಮತ್ ಮಂಜಿಲ್ ತಲುಪುತ್ತಿದ್ದೆ. ಎಲ್ಲ ಕೆಲಸದ ದಿನಗಳಲ್ಲೂ ಇದೇ ನನ್ನ ದಿನಚರಿಯಾಗಿತ್ತು.

ಆಗ ಬೆಂಗಳೂರು ನಗರ ಸದಾಶಿವನಗರದ ಆರಂಭದಲ್ಲಿರುವ ಟಿ.ಬಿ. ಸ್ಯಾನಿಟೋರಿಯಂವರೆಗೆ ಮಾತ್ರ ಇತ್ತು. ಅದಾದ ಬಳಿಕ ದೇವನಹಳ್ಳಿ ರಸ್ತೆಯಲ್ಲಿ ಯಾವುದೇ ಜನ ವಸತಿ ಇರಲಿಲ್ಲ. ಸದಾಶಿವ ನಗರದಲ್ಲಿ ಕೆಲವು ಮನೆಗಳನ್ನು ಕಟ್ಟುವ ಕೆಲಸ ಪ್ರಗತಿ ಯಲ್ಲಿತ್ತು. ಈ ತರಬೇತಿ ಅವಽಯಲ್ಲಿ ನಮ್ಮ ಎಲ್ಲ ತರಬೇತಿಯಲ್ಲಿದ್ದ ಸ್ನೇಹಿತರು ಒಂದು ರವಿವಾರ ನಂದಿ ಬೆಟ್ಟಕ್ಕೆ ಹೋಗಿ ಬಂದೆವು. ನಮ್ಮೊಂದಿಗೆ ತರಬೇತಿಯಲ್ಲಿದ್ದ ಸೈಯ್ಯದ್ ಖುರ್ಷಿದ್ ಅವರೇ ಈ ಎಲ್ಲ ವ್ಯವಸ್ಥೆ ಮಾಡಿದ್ದರು. ಇದೇ ಅವಧಿಯಲ್ಲಿ ನಾನು ಸಾಗರ್ ಚಿತ್ರಮಂದಿರದಲ್ಲಿ ‘ಆರಾಧನಾ’ ಚಲನಚಿತ್ರವನ್ನು ನೋಡಿದೆ.

ಆಗಸ್ಟ್ ೧೫, ೧೯೭೧ರಂದು ಅತ್ಯಂತ ಕುತೂಹಲದಿಂದ ನಾನು ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಬ್ರಿಗೇಡ್ ಪರೇಡ್ ಗ್ರೌಂಡ್‌ಗೆ ಹೋಗಿ ವೀಕ್ಷಿಸಿದೆನು. ಆಗ ರಾಷ್ಟ್ರಪತಿ ಆಳ್ವಿಕಕೆ ಜಾರಿಯಲ್ಲಿತ್ತು. ಕರ್ನಾಟಕದ ರಾಜ್ಯಪಾಲರಾಗಿದ್ದ ಧರ್ಮವೀರ್ ಅವರು ರಾಜ್ಯವನ್ನು ಉದ್ದೇಶಿಸಿ ಮಾತನಾಡಿದರು. ಅದೇ ದಿನ ಸುಮಾರು ೧೨ ಗಂಟೆಗೆ ಕರ್ನಾಟಕ ರಾಜ್ಯ ಲಾಟರಿ ಡ್ರಾ ನಡೆಸಲು ಆಗ ಅತ್ಯಂತ ಜನಪ್ರಿಯರಾಗಿದ್ದ ಹಿಂದಿ ಸಿನಿಮಾ ನಟ ರಾಜೇಶ್ ಖನ್ನಾ ಅವರು ವಿಧಾನಸೌಧಕ್ಕೆ ಬರುತ್ತಾರೆ ಎಂದು ತಿಳಿಯಿತು.

ನಾನು ಖನ್ನಾ ಅವರನ್ನು ನೋಡಲು ವಿಧಾನಸೌಧದ ಬಳಿ ನಿಂತುಕೊಂಡಿದ್ದೆ. ಸುಮಾರು ೧೨.೩೦ ಗಂಟೆಗೆ ಅವರು ವಿಧಾನ ಸೌಧದ ಎರಡನೇ ಮಹಡಿಗೆ ಬಂದು ಸುಮಾರು ಹತ್ತು ನಿಮಿಷ ಕೆಳಗಡೆ ನಿಂತಿದ್ದ ಜನರತ್ತ ಕೈಬೀಸಿ ಅವರನ್ನು ನೋಡಲು ಅವಕಾಶ ಮಾಡಿಕೊಟ್ಟರು. ಇದೇ ಅವಧಿಯಲ್ಲಿ ತರಬೇತಿಯ ಅಂಗವಾಗಿ ನಮ್ಮನ್ನು ಐಟಿಐ ಕಾರ್ಖಾನೆಗೆ ಕರೆದುಕೊಂಡು ಹೋಗಿ ಎಲ್ಲಾ ವಿಭಾಗಗಳನ್ನು ನೋಡುವ ಅವಕಾಶ ಕಲ್ಪಿಸಿಕೊಟ್ಟರು.

ಒಂದು ಭಾನುವಾರ, ಕರಾಳೆಯವರ ಮನೆಯಲ್ಲಿ ಆಗ ಬಳ್ಳೊಳ್ಳಿ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಎಸ್.ಎಸ್. ಅರಕೇರಿ ಅವರ ಭೇಟಿಯಾಯಿತು. ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಮಾರ್ಗದರ್ಶಿ’ ಎಂಬ ವಾರಪತ್ರಿಕೆಯ ಹಲವು ಸಂಚಿಕೆಗಳನ್ನು ಅವರು ನನಗೆ ನೀಡಿದರು. ಈ ಪತ್ರಿಕೆಯ ಮೂಲಕ ಅವರು ಅಂಬೇಡ್ಕರರ ವಿಚಾರಗಳನ್ನು ಪ್ರಚುರಪಡಿಸುತ್ತಿದ್ದರು. ೧೮ನೇ ಅಕ್ಟೋಬರ್ ೧೯೭೧ರಂದು ನಮ್ಮ ತರಬೇತಿ ಮುಗಿಯಿತು. ಅದಕ್ಕೂ ಮುಂಚೆ, ತರಬೇತಿಯಲ್ಲಿ ನಮಗೆ ಕಲಿಸಿದ ವಿಷಯಗಳ ಬಗ್ಗೆ ಒಂದು ಪರೀಕ್ಷೆ ನಡೆದಿತ್ತು.

ಅದರಲ್ಲಿ ನಾನು ಗುಲ್ಬರ್ಗ ವಿಭಾಗದಲ್ಲಿ ಪ್ರಥಮ ಸ್ಥಾನ ಪಡದಿದ್ದೆನು. ಆಗ ಗುಲ್ಬರ್ಗ ಟೆಲಿಗ್ರಾ- ವಿಭಾಗದಲ್ಲಿ ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ ಮ್ತು ಬಿಜಾಪುರ ಜಿಲ್ಲೆಗಳು ಸೇರಿದ್ದವು. ಗುಲ್ಬರ್ಗ ವಿಭಾಗದಿಂದ ತರಬೇತಿಗೆ ಬಂದಿದ್ದವರಿಗೆ ಆ ವಿಭಾಗದಲ್ಲಿದ್ದ ಖಾಲಿ ಸ್ಥಳಗಳ ಪಟ್ಟಿಯನ್ನು ನೀಡಿದರು. ನನಗೆ ಮೊದಲ ಸ್ಥಾನ ಬಂದುದರಿಂದ ಮೊದಲ ಆಯ್ಕೆಗೆ ನನಗೆ
ಅವಕಾಶ ಕೊಟ್ಟರು. ಆಗ ಬಿಜಾಪುರ ಜಿಲ್ಲೆಯಲ್ಲಿ ಇಂಡಿ ಟೆಲಿಫೋನ್ ಎಕ್ ಚೇಂಜ್‌ನಲ್ಲಿ ಮಾತ್ರ ಒಂದು ಹುದ್ದೆ ಖಾಲಿ ಇತ್ತು. ನನಗೆ ಮೊದಲ ಅವಕಾಶ ಸಿಕ್ಕಿದ್ದರಿಂದ ನಾನು ಇಂಡಿಯನ್ನು ಆಯ್ಕೆ ಮಾಡಿಕೊಂಡೆನು.

ಉಳಿದವರು ಬೀದರ್, ಗುಲ್ಬರ್ಗ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಟೆಲಿಫೋನ್ ಎಕ್ ಚೇಂಜ್‌ಗಳಲ್ಲಿ ನೇಮಕ ಹೊಂದಿ ದರು. ಅದೇ ದಿನ ಸಾಯಂಕಾಲ ನಮಗೆ ಪೋಸ್ಟಿಂಗ್ ಆದೇಶ ನೀಡಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು.
ನಾನು, ೧೮ನೇ ತಾರೀಕು ರಾತ್ರಿ ೯ ಗಂಟೆಗೆ ಆನಂದ ರಾವ್ ವೃತ್ತದಿಂದ ಎಸ್ ಆರ್‌ಎಸ್ ಬಸ್‌ನಲ್ಲಿ ಬಾಗಲಕೋಟೆಗೆ ತೆರಳಿದೆ. ಮಧ್ಯಾಹ್ನ ಬಾಗಲಕೋಟೆಯ ಹೋಟೆಲ್ ಒಂದರಲ್ಲಿ ಊಟ ಮಾಡಿ ಅಲ್ಲಿಂದ ಸಂಜೆ ಸುಮಾರು ೪ ಗಂಟೆಗೆ ಹೊರಡುತ್ತಿದ್ದ ಹುಬ್ಬಳ್ಳಿ- ಸೊಲ್ಲಾಪುರ ರೈಲಿನಲ್ಲಿ ಹತ್ತಿ, ಇಂಡಿಗೆ ಹೋಗುವ ರೈಲು ಹತ್ತಲು ರೈಲ್ವೆ ಸ್ಟೇಷನ್‌ನಲ್ಲಿ ಹೋಗಿ ಕುಳಿತೆನು.

ರೈಲು ಹೊರಡಲು ಇನ್ನೂ ಅರ್ಧ ಗಂಟೆ ಇತ್ತು. ನನ್ನೊಂದಿಗೆ ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದ ಕಬಾಡಗಿ ಸಹಿತ ಬಂದನು. ಅವನಿಗೆ ಯಾದಗಿರಿಗೆ ನೇಮಕವಾಗಿತ್ತು. ಅವನು ಇದೇ ರೈಲಿನಲ್ಲಿ ಹುಟಗಿ ಸ್ಟೇಷನ್ ಮೂಲಕ ಯಾದಗಿರಿಗೆ ಹೋಗುವವನಿದ್ದನು. ನಾವು ಹುಬ್ಬಳ್ಳಿ-ಸೋಲಾಪುರ ರೈಲು ಬಂದಾಗ ನಾವಿಬ್ಬರೂ ಜತೆಯಾಗಿ ಹತ್ತಿದೆವು. ರೈಲು ಬಿಜಾಪುರ ತಲುಪಿದಾಗ ಕಬಾಡಗಿ, ‘ಇವತ್ತು ದೀಪಾವಳಿ ಅಮಾವಾಸ್ಯೆ. ನಮ್ಮ ಮನೆಯಲ್ಲಿ ಹೋಳಿಗೆ ಊಟ ಕಟ್ಟಿ ಕೊಟ್ಟಿದ್ದಾರೆ. ಇಬ್ಬರೂ ಊಟ ಮಾಡೋಣ’ ಎಂದನು. ಅದರಂತೆಯೇ ರೈಲು ಬಿಜಾಪುರ ಬಿಟ್ಟ ಮೇಲೆ ನಾವಿಬ್ಬರೂ ಊಟ ಮಾಡಿದೆವು. ಆದರೆ ಊಟವಾದ ಬಳಿಕ ನಮಗೆ ಕುಡಿಯಲು ನೀರು ಇರಲಿಲ್ಲ.

ಅಷ್ಟರಲ್ಲಿ ಇಂಡಿ ಬಂದುದರಿಂದ ನಾನು ಟ್ರಂಕ್ ಸಮೇತ ಇಳಿದೆನು. ಇಳಿದ ತಕ್ಷಣ ಸ್ಟೇಷನ್‌ನಲ್ಲಿದ್ದ ಒಬ್ಬ ಹಮಾಲನಲ್ಲಿ, ‘ಕುಡಿಯುವ ನೀರು ಎಲ್ಲಿ ಸಿಗುತ್ತದೆ?’ ಎಂದು ಕೇಳಿದೆ. ಸ್ಟೇಷನ್‌ನ ಫ್ಲಾಟ್ ಫಾರಂನ ಕೊನೆಯಲ್ಲಿ ಕುಡಿಯುವ ನೀರಿನ ನಲ್ಲಿ ಇದೆ ಎಂದು ಹೇಳಿದನು. ನಾನು ಅಲ್ಲಿ ನೀರು ಕುಡಿದು ಬಂದೆನು.

ಇಂಡಿ ಪಟ್ಟಣದಿಂದ ರೈಲು ಸ್ಟೇಷನ್‌ಗೆ ಹೋಗಿ-ಬರುವವರು ಇಂಡಿಯಿಂದ ಸ್ಟೇಷನ್‌ಗೆ ಬರಲು ಟಾಂಗಾಗಳಲ್ಲಿ ಸಂಚರಿಸ ಬೇಕಿತ್ತು. ಈ ಟಾಂಗಾಗಳು ರೈಲು ಬರುವ ಮತ್ತು ಹೋಗುವ ಸಮಯಕ್ಕೆ ಅನುಗುಣವಾಗಿ ಇಂಡಿ ಮತು ಸ್ಟೇಷನ್ ಮಧ್ಯೆ ಸಂಚರಿಸುತ್ತಿದ್ದವು. ಹಾಗಾಗಿ, ಅಂದು ನಾನು ನೀರು ಕುಡಿದು ಬರುವಷ್ಟರಲ್ಲಿ ಎಲ್ಲಾ ಟಾಂಗಾಗಳೂ ಇಂಡಿಗೆ ಹೋಗಿಬಿಟ್ಟಿದ್ದವು. ನಾನು ಅಲ್ಲಿ ವಿಚಾರಿಸಿದಾಗ, ಮರುದಿನ ಬೆಳಗ್ಗೆಯೇ ಟಾಂಗಾಗಳು ಬರುವುದು ಎಂದು ತಿಳಿಸಿದರು. ನಾನು ಸ್ಟೇಷನ್ ಮಾಸ್ಟರ್‌ ರನ್ನು ವಿಚಾರಿಸಿದಾಗ, ಅವರೂ ಅದೇ ರೀತಿ ಹೇಳಿದರು. ಬೆಳಗ್ಗೆ ಟಾಂಗಾಗಳು ಬರುವವರೆಗೂ ನೀವು ನನ್ನ  ರೂಮಿನಲ್ಲಿಯೇ
ಕುಳಿತುಕೊಳ್ಳಬಹುದು ಎಂದು ಸಲಹೆ ನೀಡಿದರು.

ಆಗ ರಾತ್ರಿ ಸುಮಾರು ೧೦ ಗಂಟೆಯಾಗಿತ್ತು. ನಾನು, ‘ಇಂಡಿ ಎಷ್ಟು ದೂರವಿದೆ?’ ಎಂದು ಸ್ಟೇಷನ್ ಮಾಸ್ಟರರನ್ನು ಕೇಳಿದೆ. ಅಂದಾಜು ಐದು ಕಿ.ಮೀ. ಎಂದರು. ನನಗೆ ನಡೆದುಕೊಂಡು ಹೋಗಬಹುದೇ ಎಂದು ಕೇಳಿದೆ. ಇವತ್ತು ಅಮಾವಾಸ್ಯೆ ಇದೆ,
ತುಂಬಾ ಕತ್ತಲು, ಬೆಳಗ್ಗೆ ಟಾಂಗಾ ಬರುವವರೆಗೂ ಕಾಯುವುದು ಒಳ್ಳೆಯದು ಎಂದರು. ಆದರೆ ಕಾಯಲು ನನ್ನ ಮನಸ್ಸು ಒಪ್ಪಲಿಲ್ಲ. ಸ್ವಲ್ಪ ಹೊತ್ತು ಕಳೆದ ನಂತರ, ‘ಇಂಡಿ ಯಾವ ಕಡೆಗಿದೆ ಎಂದು ತೋರಿಸಿ, ನಾನು ನಡೆದುಕೊಂಡೇ ಹೋಗುತ್ತೇನೆ’ ಎಂದು ಅವರನ್ನೇ ಕೇಳಿದೆ. ಅವರು ಸ್ಟೇಷನ್‌ನಿಂದ ಹೊರಗೆ ಬಂದು, ದೂರದಲ್ಲಿ ವಿದ್ಯುದ್ದೀಪ ಉರಿಯುತ್ತಿದ್ದ ಇಂಡಿ ಪಟ್ಟಣವನ್ನು ತೋರಿಸಿದರು.

ನಾನು ಟ್ರಂಕ್ ಹೊತ್ತುಕೊಂಡು ಇಂಡಿ ಕಡೆಗೆ ಹೆಜ್ಜೆ ಇಟ್ಟೆ. ಗವ್ವೆನ್ನುವ ಕತ್ತಲಿನಲ್ಲಿ ಸುಮಾರು ಒಂದೂವರೆ ತಾಸು ನಡೆದು ಇಂಡಿ ಪಟ್ಟಣ ತಲುಪಿ, ಊರ ಸಮೀಪದಲ್ಲಿದ್ದ ಹಳ್ಳವನ್ನು ದಾಟುತ್ತಿದ್ದೆ. ಆಗ ಒಬ್ಬ ಪೊಲೀಸ್ ಬಂದು, ‘ನೀನು ಯಾರು? ಈ ಟ್ರಂಕ್ ಹೊತ್ತುಕೊಂಡು ಎಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದರು. ನಾನು ಅವರಿಗೆ, ‘ನನಗೆ ಟೆಲಿಪೋನ್ ಎಕ್ಸ್‌ಚೇಂಜ್ ನಲ್ಲಿ ಕೆಲಸ ಸಿಕ್ಕಿದೆ. ರೈಲ್ವೆ ಸ್ಟೇಷನ್‌ನಲ್ಲಿ ಟಾಂಗಾ ತಪ್ಪಿದ್ದರಿಂದ ನಡೆದುಕೊಂಡೇ ಬಂದಿದ್ದೇನೆ’ ಎಂದು ಉತ್ತರಿಸಿದೆ.

ಆಗ ಪೂರ್ವ ಪಾಕಿಸ್ತಾನದ ಸಮಸ್ಯೆ ತೀವ್ರವಾಗಿತ್ತು. ಮತ್ತು ಭಾರತ-ಪಾಕಿಸ್ತಾನದ ನಡುವೆ ಯಾವುದೇ ಸಮಯದಲ್ಲಿ ಯುದ್ಧ
ನಡೆಯುವ ಸೂಚನೆಯಿತ್ತು. ಹಾಗಾಗಿ, ಆಯಕಟ್ಟಿನ ಸ್ಥಳವಾದ ಟೆಲಿಫೋನ್ ಎಕ್ ಚೇಂಜ್‌ಗೆ ರಾತ್ರಿ ಡ್ಯೂಟಿಗೆ ಹಾಕಿದ್ದಾರೆ ಎಂದು ಹೇಳಿದ ಪೊಲೀಸ್, ನನ್ನನ್ನು ಅವರೊಂದಿಗೆ ಕರೆದುಕೊಂಡು ಹೋದರು. ೨೦೦ ಮೀಟರ್ ದೂರದಲ್ಲಿದ್ದ ಟೆಲಿಫೋನ್ ಎಕ್ಸ್‌ಚೇಂಜ್ ತಲುಪಿದೆವು. ಅದೇ ಕಟ್ಟಡದ ಕೆಳಭಾಗದಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯಿತ್ತು, ಮೇಲ್ಗಡೆ ಟೆಲಿಫೋನ್ ಎಕ್ಸ್‌ಚೇಂಜ್ ಇತ್ತು. ನಾವು ಮಹಡಿ ಹತ್ತಿ ಎಕ್ಸ್‌ಚೇಂಜ್‌ಗೆ ಹೋದೆವು. ಅಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ನರಸಿಂಹ ದಾಬಡೆ ಎಂಬುವವರಿಗೆ ಪೊಲೀಸರು, ‘ಇವರು ಹೊಸದಾಗಿ ಟೆಲಿಫೋನ್ ಆಪರೇಟರ್ ಆಗಿ ಕರ್ತವ್ಯಕೆ ಹಾಜರಾಗಲು ಬಂದಿದ್ದಾರೆ, ಅವರು ಸ್ಟೇಷನ್‌ನಿಂದ ನಡೆದುಕೊಂಡೇ ಬಂದಿದ್ದಾರೆ, ರಸ್ತೆಯಲ್ಲಿ ನನಗೆ ಸಿಕ್ಕಿದ್ದರಿಂದ ನಾನು ಕರೆದುಕೊಂಡು ಬಂದಿದ್ದೇನೆ’ ಎಂದು ಹೇಳಿದರು.

ಆಗ ದಾಬಡೆಯವರು ನನ್ನೊಂದಿಗೆ ಮಾತನಾಡಿ, ಎಲ್ಲ ವಿವರ ತಿಳಿದುಕೊಂಡು, ನನ್ನ ನೇಮಕ ಆದೇಶದ ಪತ್ರವನ್ನೂ ನೋಡಿದರು. ಅವರು, ‘ಇಂಡಿ ಸಣ್ಣ ಟೆಲಿಫೋನ್ ಎಕ್ಸ್‌ಚೇಂಜ್ ಆಗಿದ್ದು, ಇಂಡಿ ಮತ್ತು ಸಿಂಧಗಿ ಎರಡು ತಾಲೂಕುಗಳ ದೂರ ಸಂಪರ್ಕ ವ್ಯವಸ್ಥೆಯನ್ನು ನಿರ್ವಹಿಸುವ ಕೇಂದ್ರವಾಗಿದೆ’ ಎಂದು ತಿಳಿಸಿದರು. ‘ರಾತ್ರಿ ಹೆಚ್ಚಾಗಿ ಯಾವ ಕರೆಗಳೂ ಇರುವುದಿಲ್ಲ ಹಾಗಾಗಿ ಟೆಲಿಫೋನ್ ಬೋರ್ಡ್ ಮಗ್ಗಲಿಗಿರುವ ಟೇಬಲ್ ಮೇಲೆ ಮಲಗಿಕೊಳ್ಳುತ್ತೇವೆ.

ನೀವೂ ಮಲಗಿಕೊಳ್ಳಿ ಮುಂಜಾನೆ ನೋಡೋಣ’ ಎಂದರು. ಅದರಂತೆ ನಾನು ಟ್ರಂಕ್‌ನಿಂದ ಜಮಖಾನ ತೆಗೆದು ಹಾಸಿಕೊಂಡು ಮಲಗಿದೆ. ದಾಬಡೆಯವರೂ ಎಕ್ಸ್‌ಚೇಂಜ್‌ನಲ್ಲಿದ್ದ ದಪ್ಪ ದಪ್ಪ ಟೆಲಿಫೋನ್ ಡೈರೆಕ್ಟರಿಗಳನ್ನು ತಲೆದಿಂಬಾಗಿ ಇಟ್ಟುಕೊಂಡರು. ಮತ್ತೊಂದನ್ನು ನನಗೆ ಕೊಟ್ಟೆರು. ನಾನು ಅದನ್ನೇ ದಿಂಬು ಮಾಡಿಕೊಂಡು ಮಲಗಿದೆ. ಅಂದು ನನ್ನನ್ನು ಟೆಲಿಪೋನ್‌ಗೆ ಎಕ್ಸ್‌ಚೇಂಜ್‌ಗೆ ಕರೆದುಕೊಂಡು ಹೋಗಿದ್ದ ಪೊಲೀಸರ ಹೆಸರು ಜಹಾಂಗೀರ್. ನಂತರದ ದಿನಗಳಲ್ಲಿ ಅವರು ನನಗೆ ತುಂಬಾ ಆತ್ಮೀಯರಾದರು.

(ಮುಂದುವರಿಯುವುದು…)

error: Content is protected !!