Sunday, 12th May 2024

ಚಂಬಲ್‌ ಡಕಾಯಿತರಿಗಿಂತ ವೀರಪ್ಪನ್‌ ಅಟ್ಟಹಾಸವೇ ಹೆಚ್ಚು

ಸತ್ಯಮೇವ ಜಯತೆ – ಭಾಗ ೬೯

ಶಂಕರ್‌ ಬಿದರಿ

ಭಾರತದ ಇತಿಹಾಸದಲ್ಲಿ, ಮಧ್ಯ ಭಾರತದಲ್ಲಿ ೧೮ನೇ ಶತಮಾನದಲ್ಲಿ, ಪಿಂಡಾರಿಗಳ ಹಾವಳಿ, ನಂತರದ ದಿನಗಳಲ್ಲಿ ಚಂಬಲ್ ಕಣಿವೆ ಡಕಾಯಿತರ ಅಪರಾಧ ಚಟುವಟಿಕೆಗಳ ಬಗ್ಗೆ ದಾಖಲೆಗಳಿವೆ. ಆದರೆ ಸತತವಾಗಿ ಸುಮಾರು ೨೫ ವರ್ಷಗಳ ಕಾಲ ವೀರಪ್ಪನ್ ಮತ್ತು ಅವನ ತಂಡದವರು ನಡೆಸಿದ ಘೋರ ಕೃತ್ಯಗಳಿಗೆ ಹೋಲಿಸಿದರೆ, ಚಂಬಲ್ ಕಣಿವೆ ಡಕಾಯಿತರ ಅಪರಾಧ ಕೃತ್ಯಗಳು ಬಹಳ ಚಿಕ್ಕ ಅಪರಾಧಗಳಂತೆ ಕಾಣುತ್ತವೆ.

ಲಭ್ಯವಿರುವ ದಾಖಲೆಗಳ ಪ್ರಕಾರ, ವೀರಪ್ಪನ್ ಮತ್ತು ಅವನ ತಂಡ ೧೯೭೪ರಿಂದಲೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿತ್ತು. ಈ ಅವಧಿಯಲ್ಲಿ ತಂಡದ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನ ವ್ಯಾಪ್ತಿಯಲ್ಲಿ ಕನಿಷ್ಠ ೧೮೬ ಕೊಲೆ, ಸುಲಿಗೆ, ಶ್ರೀಗಂಧದ ಕಳ್ಳತನ, ಆನೆಗಳ ಹತ್ಯೆ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಅಪಹರಣ ಇವೇ ಮೊದಲಾದ ಅಪರಾಧಗಳು ದಾಖಲಾಗಿರುತ್ತವೆ. ಈ ಅವಧಿಯಲ್ಲಿ ವೀರಪ್ಪನ್ ಮತ್ತು ಅವನ ತಂಡ ಕನಿಷ್ಠ ೨,೦೦೦  ಆನೆಗಳನ್ನು ಕೊಂದು, ಸುಮಾರು ೪೦ ಸಾವಿರ ದಂತಗಳನ್ನು ಅಪಹರಿಸಿತ್ತು. ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಅದೇ ರೀತಿ, ಕರ್ನಾಟಕ ಮತ್ತು ತಮಿಳುನಾಡಿನ ಮೈಸೂರು, ಧರ್ಮಪುರಿ, ಸೇಲಂ, ಪೆರಿಯಾರ್, ನೀಲಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆದುನಿಂತಿದ್ದ, ಸುಮಾರು ೧೦೦ ಕೋಟಿ ರುಪಾಯಿಗೂ ಹೆಚ್ಚು ಬೆಲೆ ಬಾಳುವ
(ಅಂದಿನ ಮಾರುಕಟ್ಟೆ ಬೆಲೆ) ಶ್ರೀಗಂಧವನ್ನು ಕಳ್ಳಸಾಗಣೆ ಮಾಡಿದ್ದಾರೆ. ಇದೇ ಅವಧಿಯಲ್ಲಿ ವೀರಪ್ಪನ್ ನೇತೃತ್ವದ ತಂಡವು
ಕರ್ನಾಟಕ ಮತ್ತು ತಮಿಳುನಾಡು ವ್ಯಾಪ್ತಿಯಲ್ಲಿ ಒಟ್ಟು ೧೩೦ ಜನರನ್ನು ಕೊಲೆ ಮಾಡಿದೆ. ಅವರಲ್ಲಿ ೫೫ ಜನ ಕರ್ನಾಟಕಕ್ಕೆ
ಸೇರಿದವರು. ಈ ೫೮ ಜನರ ಪೈಕಿ, ೨೩ ಪೊಲೀಸ್ ಅಧಿಕಾರಿಗಳು, ೪ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ೨೮ ಜನ ಸಾರ್ವಜನಿಕರು ಸೇರಿದ್ದಾರೆ.

ಕರ್ನಾಟಕಕ್ಕೆ ಸೇರಿದ ೨೩ ಪೊಲೀಸ್ ಅಧಿಕಾರಿಗಳ ಪೈಕಿ ಒಬ್ಬ ಬಿಎಸ್‌ಎ- ಯೋಧನೂ ಸೇರಿದ್ದಾನೆ. ತಮಿಳುನಾಡಿಗೆ ಸೇರಿದ ೭೨ ಜನರನ್ನು ಹತ್ಯೆ ಮಾಡಿದ್ದಾರೆ. ತಮಿಳುನಾಡಿನ ೯ ಜನ ಪೊಲೀಸ್ ಅಧಿಕಾರಿಗಳು, ೬ ಜನ ಅರಣ್ಯ ಅಧಿಕಾರಿಗಳು ಹಾಗೂ ೫೧ ಜನ ಸಾರ್ವಜನಿಕರು ಒಳಗೊಂಡಿದ್ದಾರೆ. ಇದಲ್ಲದೆ, ೬೧ ಜನರಿಗೆ ಅವರು ತೀವ್ರ ಸ್ವರೂಪದ ಗುಂಡಿನ ಗಾಯಗಳನ್ನು ಮಾಡಿದ್ದಾರೆ. ಇದರಲ್ಲಿ ೫೫ ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ೬ ಜನ ಸಾರ್ವಜನಿಕರು ಸೇರಿದ್ದಾರೆ.

ಈ ತಂಡವು ೩೦೦ ಕಿ.ಮೀ.ಗೂ ಹೆಚ್ಚು ಉದ್ದ, ೬೦ ಕಿ.ಮೀ.ಗೂ ಹೆಚ್ಚು ಅಗಲದ, ಅಂದರೆ, ಸುಮಾರು ೧೮ ಸಾವಿರ ಚದರ ಕಿ.
ಮೀ. ಗೂ ಹೆಚ್ಚು ವಿಸ್ತೀರ್ಣದ ಅರಣ್ಯ ಪ್ರದೇಶದಲ್ಲಿ ತಮ್ಮ ಚಲನವಲನ ಮತ್ತು ಚಟುವಟಿಕೆಗಳನ್ನು ನಡೆಸಿದೆ. ಈ ಅರಣ್ಯ
ಪ್ರದೇಶವು ಸಮುದ್ರ ಮಟ್ಟದಿಂದ ೫೦೦ ಅಡಿಗಳಿಂದ ೬,೦೦೦ ಅಡಿಗಳವರೆಗೂ ಎತ್ತರದಲ್ಲಿವೆ. ಇಲ್ಲಿ ಐದು ಪ್ರಮುಖ ನದಿಗಳು
ಹರಿಯುತ್ತವೆ. ಚಿನ್ನಾರ, ಪಾಲಾರ್, ಕಾವೇರಿ, ಮಾಯಾರ ಮತ್ತು ಭವಾನಿ ನದಿಗಳು. ಇವೆಲ್ಲವೂ ಕಾವೇರಿ ನದಿಯ ಉಪನದಿಗಳಾಗಿವೆ.

ಈ ಪ್ರದೇಶಗಳಲ್ಲಿ ಸಾವಿರಾರು ಸಣ್ಣ ಪುಟ್ಟ ಹಳ್ಳ ತೊರೆಗಳು ಹರಿಯುತ್ತವೆ. ಈ ಪ್ರದೇಶಗಳಲ್ಲಿ ವನ್ಯಪ್ರಾಣಿಗಳು ವಿಪುಲವಾಗಿವೆ. ಹುಲಿ, ಚಿರತೆ, ಕಾಡುಕೋಣ, ಕಾಡುನಾಯಿ, ಆನೆಗಳು, ಜಿಂಕೆ, ಹೆಬ್ಬಾವುಗಳು ಪ್ರಮುಖವಾಗಿ ಇಲ್ಲಿ ಕಾಣಸಿಗುತ್ತವೆ. ವೀರಪ್ಪನ್ ಮತ್ತು ಅವನ ತಂಡ ನೆಲಬಾಂಬುಗಳನ್ನು ಇಟ್ಟು, ೧೯೯೩ರ ಏಪ್ರಿಲ್‌ನಲ್ಲಿ ೨೨ ಜನರನ್ನು ಭೀಭತ್ಸವಾಗಿ ಹತ್ಯೆ ಮಾಡಿದ ನಂತರ, ಸುಮಾರು ಒಂದು ವರ್ಷ ಕರ್ನಾಟಕ ಮತ್ತು ತಮಿಳುನಾಡಿನ ಕಾರ್ಯಾಚರಣೆ ಪಡೆಗಳು, ಕೆಲವು ಮುಖ್ಯ ರಸ್ತೆಗಳನ್ನು ಹೊರತು ಪಡಿಸಿದರೆ, ಉಳಿದ ಎಲ್ಲಾ ರಸ್ತೆಗಳಲ್ಲಿ ಮತ್ತು ಕಾಡು ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿಯೇ ಹೋಗಿ ಕಾರ್ಯಾಚರಣೆ ಮಾಡುವ ಅನಿವಾರ್ಯತೆ ಇತ್ತು.

ಅರಣ್ಯ ಪ್ರದೇಶಗಳಲ್ಲಿ ಬಹಳಷ್ಟು ಕಡೆ, ಆನೆ ಹೆಜ್ಜೆಗಳ ಆಧಾರದಲ್ಲಿ ಮಾರ್ಗಗಳನ್ನು ಕಂಡುಹಿಡಿಯಬೇಕಾಗುತ್ತಿತ್ತು. ವಿವಿಧ ಸ್ಥಳಗಳಿಗೆ ಸ್ಥಳಿಯ ಭಾಷೆಗಳಲ್ಲಿ ಒಂದು ಹೆಸರಿದ್ದರೆ, ಕನ್ನಡ ಮತ್ತು ತಮಿಳಿನಲ್ಲಿ ಬೇರೆ ಬೇರೆ ಹೆಸರುಗಳಿರುತ್ತಿದ್ದವು. ಭಾರತ ಸರ್ವೇಕ್ಷಣಾ ಇಲಾಖೆಯ (ಸರ್ವೇ ಆಫ್ ಇಂಡಿಯಾ) ನಕ್ಷೆಗಳಲ್ಲಿ ಬೇರೆಯದೇ ಹೆಸರುಗಳಿರುತ್ತಿತ್ತು. ೧೯೯೪ರವರೆಗೆ ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶಗಳಲ್ಲಿದ್ದ ಒಬ್ಬನೇ ಒಬ್ಬ ವ್ಯಕ್ತಿಯೂ ಪೊಲೀಸ್ ಕಾನ್ ಟೇಬಲ್ ಆಗಿ ನೇಮಕಾತಿ ಹೊಂದಿರಲಿಲ್ಲ.

ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ತಮ್ಮ ಠಾಣೆಗಳ ವ್ಯಾಪ್ತಿಯಲ್ಲಿದ್ದ ಅರಣ್ಯ ಪ್ರದೇಶಗಳ ಬಗ್ಗೆ ಸೂಕ್ತ ಮಾಹಿತಿ ಇರಲಿಲ್ಲ.
ಕಾವೇರಿ ನ್ಯಾಯ ಮಂಡಳಿಯಲ್ಲಿ, ಕಾವೇರಿ ನದಿ ನೀರನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಹಂಚಿಕೆ ಮಾಡುವ ಬಗ್ಗೆ ಮತ್ತು ಪ್ರತಿ ವರ್ಷ ತಮಿಳುನಾಡಿಗೆ ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣದ ಬಗ್ಗೆ ಕರ್ನಾಟಕ
ಮತ್ತು ತಮಿಳುನಾಡು ಸರಕಾರಗಳ ಮಧ್ಯ ಬಹಳ ವರ್ಷಗಳಿಂದ ಭಿನ್ನಾಭಿಪ್ರಾಯಗಳಿದ್ದವು.

೧೯೯೧ರ ಡಿಸೆಂಬರ್‌ನಲ್ಲಿ, ಕರ್ನಾಟಕದ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ನ್ಯಾಯ ಮಂಡಳಿ ನೀಡಿದ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ, ನಡೆದ ತಮಿಳು ವಿರೋಽ ಗಲಭೆಗಳಿಂದಾಗಿ, ಉಭಯ ರಾಜ್ಯಗಳ ಗಡಿ ಪ್ರದೇಶಗಳ ಜನರಲ್ಲಿ ಹೆಚ್ಚಿನ ಸಮರಸವಿರಲಿಲ್ಲ. ಅದೇ ರೀತಿ, ಎರಡೂ ಸರಕಾರಗಳ ನಡುವಿನ ಸಂಬಂಧವೂ ಅಷ್ಟೊಂದು ಅನ್ಯೋನ್ಯವಾಗಿರಲಿಲ್ಲ. ಕಾರ್ಯಾಚರಣೆ ಪಡೆಯಲ್ಲಿ ನನ್ನ ಸೇವಾ ಅವಧಿ ೩ ವರ್ಷ, ೪ ತಿಂಗಳುಗಳ ಕಾಲದಲ್ಲಿ ಸುಮಾರು ೩ ವರುಷ ತಮಿಳುನಾಡಿನಲ್ಲಿ ತಂಗಿ ತಮಿಳುನಾಡಿನ ಕಾರ್ಯಾಚರಣೆ ಪ್ರದೇಶದಲ್ಲಿಯೇ ಕಾರ್ಯಾಚರಣೆ ನಡೆಸಬೇಕಾಯಿತು.

ಈ ಕಾರಣಗಳಿಂದ, ಕಾರ್ಯಾಚರಣೆ ತ್ವರಿತವಾಗಿ ಮುಂದುವರಿಸಿ, ಬೇಗನೆ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ. ಈ ಎಡರು ತೊಡರುಗಳ ಮಧ್ಯೆ, ನನ್ನ ನೇತೃತ್ವದಲ್ಲಿ ಕಾರ್ಯಾಚರಣೆ ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರಶಂಸನೀಯ ಸಾಧನೆಯನ್ನು ಮಾಡಿದರು. ೧೯೭೮ರಿಂದ ೧೯೯೬ರವರೆಗೂ ದಾಖಲಾಗಿದ್ದ ಯಾವುದೇ ಒಂದು ಪ್ರಕರಣದ ತನಿಖೆಯನ್ನೂ ಪೂರ್ತಿಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿರಲಿಲ್ಲ. ಈ ಎಲ್ಲಾ ಪ್ರಕರಣಗಳ ತನಿಖೆಯನ್ನು ನಾನು ಕಾರ್ಯಾಚರಣೆ ಪಡೆ ತನಿಖಾ ತಂಡಗಳಿಗೆ ವಹಿಸಿದೆನು.

ಅವರು, ಎಲ್ಲಾ ೬೦ ಪ್ರಕರಣಗಳ ತನಿಖೆ ಪೂರ್ತಿಗೊಳಿಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ಉಪ ಅರಣ್ಯ ಸಂರಕ್ಷಣಾಽಕಾರಿ ಶ್ರೀನಿವಾಸ್ ಹತ್ಯೆ ಪ್ರಕರಣದಲ್ಲಿ, ಅವರ ತಲೆಯ ಭಾಗ ಐದು ವರ್ಷಗಳಾದರೂ ಪತ್ತೆಯಾಗಿರಲಿಲ್ಲ. ಈ ಪ್ರಕರಣದ ತನಿಖೆ ರಾಜ್ಯ ಸಿಐಡಿ ವಿಭಾಗದಲ್ಲಿತ್ತು. ನನ್ನ ಅವಽಯಲ್ಲಿ ಅವರ ತಲೆಬುರುಡೆ ಶೋಧನೆ ಮಾಡಿ, ಸಿಐಡಿಗೆ ಒಪ್ಪಿಸಲಾಯಿತು. ನಾನು ಕಾರ್ಯಾಚರಣೆ ಪಡೆ ಮುಖ್ಯಸ್ಥನಾಗಿದ್ದ ಅವಧಿಯಲ್ಲಿ ವೀರಪ್ಪನ್ ತಂಡದೊಂದಿಗೆ ನಡೆದ ಗುಂಡಿನ ಚಕಮಕಿಗಳಲ್ಲಿ,
ಒಟ್ಟು ೫೫ ಜನ ವೀರಪ್ಪನ್ ತಂಡದ ಸದಸ್ಯರು ಹತರಾದರು.

ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡರು. ತಂಡದ ೨೪ ಸದಸ್ಯರನ್ನು ಬಂಧಿಸಿ, ನ್ಯಾಯಾಲಯದಲ್ಲಿ ವಿಚಾರಣೆ
ಎದುರಿಸುವಂತಾಯಿತು. ವೀರಪ್ಪನ್ ತಂಡಕ್ಕೆ ಬೆಂಬಲವಾಗಿ ಅವನಿಗೆ ಆಹಾರ, ಆಯುಧ, ಬಟ್ಟೆ ಬರೆ ಇತ್ಯಾದಿಗಳನ್ನು
ಪೂರೈಸುತ್ತಿದ್ದ ೨೫ ಜನ ಸಮೀಪವರ್ತಿಗಳನ್ನು ಬಂಧಿಸಲಾಯಿತು. ಅದೇ ರೀತಿ, ವೀರಪ್ಪನ್ ತಂಡದೊಂದಿಗೆ ಸಂಪರ್ಕ ಹೊಂದಿ,
ಅವರ ತಂಡಕ್ಕೆ ಕಾಲಕಾಲಕ್ಕೆ ಸಹಾಯ ಮಾಡುತ್ತಿದ್ದ ಒಟ್ಟು ೭೨ ಜನರನ್ನು ಬಂಧಿಸಲಾಯಿತು.

ನಾನು ಕಾರ್ಯಾಚರಣೆ ಪಡೆ ಪ್ರಭಾರವನ್ನು ತ್ಯಜಿಸುವಾಗ, ವೀರಪ್ಪನ್, ಕರ್ನಾಟಕ ಕಾರ್ಯಾಚರಣೆ ಪಡೆಯೊಂದಿಗೆ
ಸೇತುಕುಳಿ ಗೋವಿಂದ, ಬೇಬಿ ವೀರಪ್ಪನ್, ಮೇಕೆ ರಂಗಸ್ವಾಮಿ ಮತ್ತು ಮಾದೇಶ ಎಂಬ ಐವರು ಮಾತ್ರ ತಂಡದಲ್ಲಿದ್ದರು.
ತಂಡದಿಂದ ಹೊರಹೋಗಿದ್ದ ಚಿನ್ನನ್, ಸತೀಶ್, ಬಾಲನ್, ವೀರಸ್ವಾಮಿ, ಅರನಾಕ್ ಕುಮಾರ್ ಮತ್ತು ಸಲಾಂ ಎಂಬ ಐದು
ಜನರನ್ನು ಪತ್ತೆ ಹಚ್ಚಿ ಬಂಽಸಬೇಕಾದ ಕೆಲಸ ಬಾಕಿ ಇತ್ತು. ಹೀಗೆ ಪತ್ತೆ ಹಚ್ಚಿ ಬಂಽಸಬೇಕಾದ ಕೆಲವು ವ್ಯಕ್ತಿಗಳು ತಂಡದಿಂದ
ಹೊರಗೆ ಬಂದ ಮೇಲೆ, ಶ್ರೀಲಂಕಾಕ್ಕೆ ಪಲಾಯನ ಮಾಡಿದ್ದಾರೆ ಎಂಬ ಮಾಹಿತಿ ಇತ್ತು. ತಂಡದ ವಶದಿಂದ ೧೫೦ಕ್ಕೂ ಹೆಚ್ಚು
ಬಂದೂಕುಗಳು, ೧೦ ಟನ್ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಅಂದಿನ ಕಠಿಣ ಪರಿಸ್ಥಿತಿಯಲ್ಲಿ, ಬಹಳಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಾಚರಣೆ ಪಡೆಯಲ್ಲಿ ಸೇವೆ
ಸಲ್ಲಿಸಲು ಮುಂದೆ ಬರಲು ಹಿಂಜರಿಯುತ್ತಿದ್ದರು. ಅವರಿಗೆ ಉತ್ತೇಜನ ನೀಡಿ, ಅವರಿಂದ ಕೆಲಸ ಮಾಡಿಸಿಕೊಳ್ಳುವುದು ಒಂದು
ಹರಸಾಹಸವಾಗಿತ್ತು. ೧೯೯೩ರ ಮೇ ತಿಂಗಳಲ್ಲಿ, ಕಾರ್ಯಾಚರಣೆ ಪಡೆಗೆ ವರದಿ ಮಾಡಿಕೊಂಡ ಹಲವು ಅಧಿಕಾರಿಗಳು, ಅಶೋಕ್
ಕುಮಾರ್, ಸೌದಾಗರ್, ಕುಮಾರಸ್ವಾಮಿ, ಮೂಡಲಯ್ಯ ಇವರನ್ನು ಒಳಗೊಂಡು, ಕಾರ್ಯಾಚರಣೆ ಪಡೆ ಕಾರ್ಯದಿಂದ
೧೯೯೪ರ ಫೆಬ್ರುವರಿಯಲ್ಲಿ ವಿಮುಕ್ತಿ ಪಡೆದು, ಬೆಂಗಳೂರಿಗೆ ತಮ್ಮ ಕರ್ತವ್ಯಕ್ಕೆ ಮರಳಿದರು.

ಕಾರ್ಯಾಚರಣೆ ಪಡೆ ಕರ್ತವ್ಯಕ್ಕೆ ಹೊಸ ಅಧಿಕಾರಿಗಳನ್ನು ಪಡೆಯುವುದು ಪರಿಶ್ರಮ ಪೂರ್ವಕ ಕಾರ್ಯವಾಗಿತ್ತು. ಆದರೂ ಜತೆಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳಸಿಕೊಂಡು ಮುಂದಿನ ಎರಡೂವರೆ ವರ್ಷ ಕಾರ್ಯಾಚರಣೆ ಮುಂದುವರಿಸಿದೆನು. ಈ ಅವಧಿಯಲ್ಲಿ ಸ್ವಯಂ ಸ್ಫೂರ್ತಿ ಮತ್ತು ಸಂತೋಷದಿಂದ ಕಾರ್ಯಾಚರಣೆ ಪಡೆ ಸೇವೆಯಲ್ಲಿ ಮುಂದುವರಿದವರಲ್ಲಿ, ಎನ್. ನಾಗರಾಜ್, ಪಿ.ಸಿ. ಹಿರೇಮಠ, ಪೂಣಚ್ಚ, ಮುತ್ತುರಾಯ, ಮುಸಳೆ, ಮರಿಸ್ವಾಮಿ, ರಾಜಣ್ಣ, ವಿ.ಎಸ್. ನಾಯಕ್, ರೇವಣ್ಣವರ್, ವೆಂಕಟಸ್ವಾಮಿ, ಮಂದಣ್ಣ ಅವರು ಪ್ರಮುಖರು. ಅವರೆಲ್ಲರೂ ಇನ್ಸ್‌ಪೆಕ್ಟರ್ ದರ್ಜೆ ಅಧಿಕಾರಿಗಳಾಗಿದ್ದರು. ಅವರ ಕಾರ್ಯನಿಷ್ಠೆ ಮತ್ತು ಪರಿಶ್ರಮದ ಬಗ್ಗೆ ನಾನು ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಕಡಿಮೆಯೇ.

ನಾನು ಕಾರ್ಯಾಚರಣೆ ಪಡೆ ಪ್ರಭಾರ ವಹಿಸಿಕೊಂಡಾಗ, ಶ್ರೀ ಕ್ಷೇತ್ರ ಮಲೆ ಮಹದೇಶ್ವರಕ್ಕೆ ಯಾರೇ ಬರಬೇಕಾದರೂ, ಕನಿಷ್ಠ ೬೦
ಜನ ಸಿಬ್ಬಂದಿ (ಎರಡು ಪ್ಲಟೂನ್) ಬೆಂಗಾವಲಿನಲ್ಲಿ ಬರಬೇಕಾದ ಪರಿಸ್ಥಿತಿ ಇತ್ತು. ಕ್ಷೇತ್ರಕ್ಕೆ ವೀರಪ್ಪನ್ ತಂಡದ ಹಾವಳಿ
ಪ್ರಾರಂಭವಾಗುವುದಕ್ಕೂ ಮುಂಚೆ ಪ್ರತಿ ದಿನ ೧೦ ಸಾವಿರ ಮಂದಿ ಭಕ್ತರು ಬರುತ್ತಿದ್ದರು. ನಾನು ಕಾರ್ಯಾಚರಣೆ ಪ್ರಾರಂಭಿಸಿದ
ಅವಧಿಯಲ್ಲಿ, ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಪ್ರಮಾಣ ಬೆರಳೆಣಿಕೆಗೆ ತಲುಪಿತ್ತು. ಕಾರ್ಯಾಚರಣೆ ಪಡೆ ಪ್ರಭಾರವನ್ನು ತ್ಯಜಿಸುವಾಗ, ಈ ಎಲ್ಲಾ ಪ್ರದೇಶಗಳು ಜನಸಂಚಾರಕ್ಕೆ ಮುಕ್ತವಾಗಿದ್ದವು.

ವಿಶೇಷವಾಗಿ, ಕ್ಷೇತ್ರಕ್ಕೆ ದಿನಾಲೂ ಸಾವಿರಾರು ಭಕ್ತರು ಬಂದು ದರ್ಶನ ಪಡೆದು ಹೋಗುವಷ್ಟು ನಿರಾತಂಕ ವಾತಾವರಣ
ನಿರ್ಮಾಣವಾಗಿತ್ತು. ಕಾರ್ಯಾಚರಣೆ ಪಡೆ ಕಾರ್ಯದಿಂದಾಗಿ, ಈ ಪ್ರದೇಶಗಳಲ್ಲಿ ಸಾರ್ವಜನಿಕರು ಮುಕ್ತವಾಗಿ ಸಂಚರಿಸುವಂತೆ ಆಯಿತು. ಸರಕಾರದ ಅಧಿಕಾರಿಗಳು ಕರ್ನಾಟಕ ವ್ಯಾಪ್ತಿಯ ಕಾರ್ಯಾಚಣೆ ಪ್ರದೇಶಗಳ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ಯಾವುದೇ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಎಲ್ಲಕಿಂತ ಮುಖ್ಯವಾಗಿ, ವೀರಪ್ಪನ್
ತಂಡದಲ್ಲಿ ಉಳಿದಿದ್ದ ಐವರು ಸದಸ್ಯರನ್ನು ಬಂಧಿಸಿ, ಕಾನೂನಿನ ಕಕ್ಷೆಗೆ ಒಳಪಡಿಸುವ ಆತ್ಮವಿಶ್ವಾಸ ಕಾರ್ಯಾ ಚರಣೆ ಪಡೆಯ
ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಮೂಡಿತು.

ಈಗ ಕಾರ್ಯಾಚರಣೆ ಪಡೆ ಸಿಬ್ಬಂದಿ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಲು ಅವಶ್ಯವಿದ್ದ ಎಲ್ಲಾ ಸನ್ನದ್ಧತೆ ಮತ್ತು ಅನುಭವಗಳನ್ನು ಪಡೆದುಕೊಂಡಿದ್ದರು. ದೇಶದ ಹಿರಿಯ ಜ್ಯೋತಿಷಶಾಸ ಪ್ರವೀಣರಾಗಿದ್ದ ಬಿ.ವಿ. ರಾಮನ್ ಅವರು, ನಿಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿದ್ದರೂ ಸಹಿತ, ಆ ಸಂಕಷ್ಟದ ಕಾಲದಲ್ಲಿ ಕಾರ್ಯಾಚರಣೆ ಪಡೆ ನೇತೃತ್ವವನ್ನು ವಹಿಸಿಕೊಂಡು ಮೂರೂವರೆ ವರ್ಷ ಸೇವೆ ಸಲ್ಲಿಸಿದೆನು. ಈ ಅವಽಯಲ್ಲಿ ಕನಿಷ್ಠ ೧೫ ಬಾರಿ ಪ್ರಾಣಾಪಾಯದಿಂದ ಪಾರಾದೆನು. ಆದರೆ, ನಾನು ಪ್ರಾಣಾಪಾಯದಿಂದ ಪಾರಾಗಿದ್ದು, ನನ್ನ ಬುದ್ಧಿಬಲ ಅಥವಾ ಭುಜಬಲದಿಂದ ಅಲ್ಲ.

ಅದು ಸಾಧ್ಯವಾದುದು ಗುರು-ಹಿರಿಯರ ಆಶೀರ್ವಾದ ಮತ್ತು ದೈವಬಲದಿಂದ. ನಾನು ಕಾರ್ಯಾ ಚರಣೆ ಪಡೆಗೆ ಹೋಗುವಾಗ, ನನ್ನ ಪ್ರಾಣಕ್ಕೆ ಅಪಾಯವಾಗ ಬಾರದು ಎಂದು ವಿಶೇಷ ಆಸಕ್ತಿ ವಹಿಸಿ ನನಗೆ ಆಶೀರ್ವಾದ ಮಾಡಿ, ನನ್ನ ದೇಹದ ಮೇಲೆ ಶ್ರೀರಕ್ಷೆಗಳನ್ನು ಕಟ್ಟಿದ ಪರಮಪೂಜ್ಯ ಸಿದ್ಧಗಂಗಾ ಮಠದ ಶೀ ಶಿವಕುಮಾರ ಮಹಾಸ್ವಾಮಿಗಳು, ಸಿರಿಗೆರೆ ಡಾ. ಶಿವಮೂರ್ತಿ ಮಹಾಸ್ವಾಮಿಗಳು, ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಮತ್ತು ಶೃಂಗೇರಿಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಗಳಿಗೆ ನಾನು ಭಕ್ತಿಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಭಾರತದ ಇತಿಹಾಸದಲ್ಲಿ, ಮಧ್ಯ ಭಾರತದಲ್ಲಿ ೧೮ನೇ ಶತಮಾನದಲ್ಲಿ, ಪಿಂಡಾರಿಗಳ ಹಾವಳಿ, ನಂತರದ ದಿನಗಳಲ್ಲಿ ಚಂಬಲ್ ಕಣಿವೆ ಡಕಾಯಿತರ ಅಪರಾಧ ಚಟುವಟಿಕೆಗಳ ಬಗ್ಗೆ ದಾಖಲೆಗಳಿವೆ. ಆದರೆ ಸತತವಾಗಿ ಸುಮಾರು ೨೫ ವರ್ಷಗಳ ಕಾಲ ವೀರಪ್ಪನ್ ಮತ್ತು ಅವನ ತಂಡದವರು ನಡೆಸಿದ ಘೋರ ಕೃತ್ಯಗಳಿಗೆ ಹೋಲಿಸಿದರೆ, ಚಂಬಲ್ ಕಣಿವೆ ಡಕಾಯಿತರ ಅಪರಾಧ ಕೃತ್ಯಗಳು ಬಹಳ ಚಿಕ್ಕ ಅಪರಾಧಗಳಂತೆ ಕಾಣುತ್ತವೆ.

error: Content is protected !!