Monday, 13th May 2024

ಯಕ್ಷಗಾನ ವೇಷ – ವಿಶೇಷ

ಯಕ್ಷಗಾನ ಕರಾವಳಿಯಲ್ಲಿ ನಿತ್ಯ ಮಲ್ಲಿಗೆಯಾದರೂ, ಕರ್ನಾಟಕದ ಇತರ ಭಾಗಗಳಿಗಿನ್ನೂ ಪರಿಚಿತ ವಲ್ಲ. ಆ ಹಿನ್ನೆಲೆ ಯಲ್ಲಿ ಸುಮಾರು 08 ವರ್ಷಗಳಿಂದ ಯಕ್ಷಗಾನದ ಪಾತ್ರ ಮಾಡುತ್ತಿರುವ ಪವನ್ ಕುಮಾರ್ ಆಚಾರ್ಯರಿಂದ ಲೇಖನ ರೂಪದಲ್ಲಿ ಯಕ್ಷಗಾನದ ಆಯಾಮಗಳನ್ನು ಪರಿಚಯಿಸುವ ಯತ್ನವಿದು.

ನಮ್ಮ ಬಟ್ಟೆ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಬಟ್ಟೆಯಿಂದಲೇ ನಮ್ಮ ಸ್ವಭಾವ, ಘನತೆ, ಗೌರವ ಅಳೆಯಬಹುದು. ಹಿಂದಿನ ಲೇಖನದಲ್ಲಿ (ಆ.24) ಯಕ್ಷಗಾನದ ಮುಖವರ್ಣಿಕೆಯ ಕುರಿತು ಸಂಕ್ಷಿಪ್ತವಾಗಿ ಬರೆದಿದ್ದೆ. ಅದರ ಜತೆ ಯಕ್ಷಗಾನದಲ್ಲಿ ವೇಷ ಭೂಷಣಕ್ಕೂ ಪ್ರಾಮುಖ್ಯವಿದೆ. ವಸ್ತ್ರಾಲಂಕಾರ ನೋಡಿಯೇ ಈ ವೇಷ ಇಂತದ್ದೇ ಎಂದು ಹೇಳಬಹುದು. ವೇಷದ ಗೌರವ ಸ್ವಭಾವಕ್ಕನುಗುಣವಾಗಿ ವಸ್ತ್ರಾಲಂಕಾರಗಳು ಬದಲಾಗುತ್ತದೆ. ರಂಗದಲ್ಲಿ ಆಯಾ ವೇಷದ ನಡೆಯಂತೆಯೇ ವೇಷಭೂಷಣ ಗಳನ್ನು ಸಂಯೋಜಿಸಲಾಗಿದೆ.

ತೆಂಕುತಿಟ್ಟು ಶೈಲಿ
ಲಿಂಗಾಧಾರಿತವಾಗಿ ಹೆಣ್ಣು ಮತ್ತು ಗಂಡು ವೇಷದ ಪಾತ್ರಗಳು ಯಕ್ಷಗಾನದಲ್ಲಿವೆ. ವೇಷ ಭೂಷಣದ ವೈವಿಧ್ಯದ ಆಧಾರದಲ್ಲಿ ಪಕಡಿ ವೇಷ, ಕಿರೀಟ ವೇಷ, ಬಣ್ಣದ ವೇಷ, ಹೆಣ್ಣು ಬಣ್ಣದ ವೇಷ, ಕಸೆ ವೇಷ, ಕಟ್ಟು ವೇಷ, ಸ್ತ್ರೀ ವೇಷ, ಹಾಸ್ಯ ವೇಷ ಎಂದು ವಿಂಗಡನೆ ಮಾಡಬಹುದು. ಚೌಕಿಯಲ್ಲಿನ ಸ್ಥಾನದ ಆಧಾರದಿಂದಲೂ ಒಂದನೇ ಬಣ್ಣ, ಎರಡನೇ ಕಿರೀಟ, ಒಂದನೇ ಸ್ತ್ರೀ ವೇಷ, ಒಂದನೇ ಪುಂಡು ವೇಷ, ಎದುರು ವೇಷ, ಪೀಠಿಕೆ ವೇಷ, ನಿತ್ಯ ವೇಷ, ಹಾಸ್ಯಗಾರ ಎಂದು ವೇಷದ ವಿಧಗಳನ್ನು ಹೆಸರಿಸಲಾಗಿದೆ.

ಪುಂಡು ವೇಷ
ಪುಂಡು ವೇಷವು ಸದಾ ಚುರುಕಾದ ವೇಷವಾಗಿದೆ. ಪ್ರವೇಶದಿಂದ ಮೊದಲ್ಗೊಂಡು ಪ್ರತೀ ಪದ್ಯಕ್ಕೂ ನೂರಾರು ಸುತ್ತು ದಿಗಿಣ ಹೊಡೆಯುವುದು ಸಾಮಾನ್ಯವಲ್ಲ. ಒಮ್ಮೆ ಪುಂಡು ವೇಷದ ಅಬ್ಬರ ನೋಡಿದರೆ ಯಕ್ಷಗಾನದ ತಾಕತ್ತು ಅರಿವಾಗುವುದು. ವೇಷ ಪ್ರವೇಶವಾಗಿ 15 ನಿಮಿಷ ಕಳೆದು ರಂಗಸ್ಥಳದ ಪಕ್ಕ ನೀವು ಹೋಗಿ ನಿಂತರೆ, ಅವರ ಹಾರಾಟದ ವೇಗಕ್ಕೆ ಬೆವರು
ಚಿಮ್ಮಿರುವುದನ್ನು ನೋಡಬಹುದು.

ವೇಷಭೂಷಣ ಹೀಗಿರುತ್ತದೆ
ಸಾಧಾರಣವಾಗಿ ಪುಂಡು ವೇಷಗಳು ಹಾಫ್ ಕೈ ರವಿಕೆ (ಅಂಗಿ) ಹಾಕುತ್ತಾರೆ. ವೇಷದ ತೂಕ ಹೆಚ್ಚಾದಂತೆ ಸುಸ್ತಾಗದಂತೆ ಹೆಚ್ಚು ತೂಕವಿರದ ವೇಷ ಕಟ್ಟುತ್ತಾರೆ. ಪುಂಡುವೇಷದಲ್ಲಿ ಪಕಡಿ ಕಿರೀಟ, ತುರಾಯಿ ಮತ್ತು ಬರೀ ಕೂದಲನಷ್ಟೇ ಕಟ್ಟಿ ಮಾಡುತ್ತಾರೆ. ವೇಷಗಳು ಅಬ್ಬರವಾಗಿ ಕಾಣಿಸುವುದಕ್ಕಾಗಿ ಮೈಯನ್ನು ಗೋಣಿ ಚೀಲ(ಅಂಡು) ಬಟ್ಟೆ, ಒಳ ದಗಲೆ ( ಅಂಗಿ) ಇಜಾರು (ಚಡ್ಡಿ) ಉಪಯೋಗಿಸಿ ಒಳಗೆ ಕಟ್ಟುತ್ತಾರೆ.

ಸ್ತ್ರೀ ವೇಷ
ಸ್ತ್ರೀ ಪಾತ್ರಗಳು ಹೆಚ್ಚಾಗಿ ಹಾಫ್ ಸೀರೆ ಅಥವಾ ಸೀರೆಯಲ್ಲಿ ಇರುತ್ತದೆ. ಆದರೆ ಹೆಚ್ಚಿನ ಆಭರಣಗಳನ್ನು ಧರಿಸುವುದರ
ಮೂಲಕ ಸ್ತ್ರೀ ಪಾತ್ರಗಳ ವೇಷಭೂಷಣಗಳು ವಿಭಿನ್ನ ಎನಿಸುತ್ತವೆ. ಮೂಗುತ್ತಿ, ಕಿವಿ ಓಲೆ, ಮುಂದಲೆ, ಸೊಂಟ ಪಟ್ಟಿ,
ಕಿರಣಗಳೇ ಆಭರಣಾ ಲಂಕಾರಗಳು. ಅವಲ್ಲದೇ ಕಚ್ಚೆ ಸ್ತ್ರೀ ವೇಷ ಕೂಡ ವಿಶೇಷ ವೇಷವೇ ಸರಿ.

ಸ್ತ್ರೀ ಪಾತ್ರಗಳಿಗೆ ಹೆಚ್ಚಾಗಿ ನಾಟ್ಯವಿರುವ ಕಾರಣ ಈಗೀಗ ಪ್ಯಾಂಟ್ ರೀತಿಯ ಕಚ್ಚೆ ಬಳಕೆ ಆರಂಭವಾಗಿದೆ. ಎರಡು ಸೀರೆ ಬಳಸಿಯೂ ಕಚ್ಚೆ ಉಡಬಹುದು. ಆದರೆ ಅದು ಪಾರಂಪರಿಕ ಶೈಲಿಯಲ್ಲ. ಸ್ತ್ರೀ ವೇಷದ ತಲೆಯನ್ನು ಶೃಂಗರಿಸಲೂ ಕೆಲವು ವಿಧಗಳಿವೆ.

ಕಿರೀಟ ವೇಷ

ಪುಂಡು ವೇಷಕ್ಕಿಂತ ಕಿರೀಟ ವೇಷಗಳಿಗೆ ಸ್ವಲ್ಪ ವೇಷ ಭೂಷಣ ಹೆಚ್ಚು. ಬುಜ ಕಿರೀಟ, ಸೋಗಲೆ, ಮುಂತಾದವು ವೈಶಿಷ್ಟ್ಯಗಳು. ಕೋಲು ಕಿರೀಟ ವೇಷವೆಂದೂ, ರಾಜ ವೇಷವೆಂದೂ ಕರೆಯ ಲಾಗುತ್ತದೆ. ಹೆಚ್ಚಾಗಿ ಪೀಠಿಕೆ, ಅಲ್ಲವೇ ರಾಕ್ಷಸ ವೇಷಗಳನ್ನು ಈ ರೀತಿ ಕಾಣಬಹುದು. ರಾಜ  ವೇಷಗಳಿಗೆ ಹೆಚ್ಚಾಗಿ ದೇಹ ದಪ್ಪಗೊಳಿಸುತ್ತಾರೆ.

ಆಭರಣಗಳ ಗಾತ್ರವೂ ಪುಂಡು ವೇಷಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ರಾಜ ವೇಷಗಳಿಗೆ ನಿಧಾನಗತಿಯಲ್ಲಿ ಹೋಗಬೇಕಿದ್ದರೂ, ವೇಷ ಭೂಷಣ-ನಡೆ ಎರಡೂ ಸಮ ತೂಕವಾಗಿರುತ್ತದೆ. ಆದ್ದರಿಂದಲೇ ಪ್ರಸಂಗಗಳಲ್ಲಿ ಬರುವ ಬಹುತೇಕ ಪ್ರಮುಖ ಪಾತ್ರಗಳು ಈ ರೀತಿಯ ವೇಷಗಳೇ ಆಗಿರುತ್ತದೆ.

ಬಣ್ಣದ ವೇಷ
ಬಣ್ಣದ ವೇಷ ಹೆಸರಿಗೆ ತಕ್ಕಂತೆ ಬಣ್ಣ ಬಣ್ಣ. ಕಾಣುವುದಕ್ಕೆ ಚಂದ. ಬಣ್ಣದ ವೇಷಗಳೆಲ್ಲವೂ ಅಬ್ಬರದ ವೇಷಗಳು. ದೇಹವನ್ನು ಆದಷ್ಟು ದಪ್ಪಗೊಳಿಸಿ, ದೈತ್ಯ ಆಕಾರವನ್ನು ಕೊಡುತ್ತಾರೆ. ಪಾತ್ರದ ನಡೆ ನಿಧಾನವಾದರೂ ವೇಷಭೂಷಣಗಳು ಹೆಚ್ಚು. ಆಭರಣ ಗಳ ಗಾತ್ರವೂ ರಾಜ ವೇಷಕ್ಕಿಂತಲೂ ದೊಡ್ಡದಾ ಗಿರುತ್ತದೆ. ಅಲ್ಲಿ ಬುಜ ಕಿರೀಟವಾದರೆ ಬಣ್ಣಕ್ಕೆ ದಂಬೆ ಎಂದು ಕರೆಯುತ್ತಾರೆ ಎಂಬುದಷ್ಟೇ ವ್ಯತ್ಯಾಸ.

ದೊಡ್ಡ ದೊಡ್ಡ ಕಿರೀಟಗಳು, ತುಂಬಾ ಬಟ್ಟೆ, ಭಾರದ ಆಭರಣ ಎಲ್ಲವನ್ನು ಕಟ್ಟಿ ನೋಡಿದಾಗ ಆ ವೇಷ ಹೀಗೆ ಹೋಗಬೇಕಷ್ಟೇ ಅನಿಸುವುದು. ಆದರೆ ಅದುವೇ ಪರಂಪರೆ. ವೇಷಭೂಷಣಕ್ಕೂ ಪಾತ್ರಗಳ ಸ್ವಭಾವಕ್ಕೂ ವ್ಯತ್ಯಾಸ ಕಾಣಬಹುದು. ವೇಷ ಭೂಷಣದಲ್ಲೇ ಪಾತ್ರದ ಸ್ವಭಾವ ದೇವ, ರಾಕ್ಷಸ, ಸಾತ್ವಿಕ, ತಾಮಸ ಎಂಬಿ ವ್ಯತ್ಯಾಸಗಳನ್ನು ಗುರುತು ಹಾಕಬಹುದು. ಹಸಿರು ಬಣ್ಣ ಸಾತ್ವಿಕ, ಕಪ್ಪು ಬಣ್ಣ ತಾಮಸ ಸ್ವಭಾವ ತೋರಿಸುತ್ತದೆ. ಕೆಂಪೂ ಇಬ್ಬರೂ ಬಳಸುತ್ತಿದ್ದರೂ ಅಲ್ಲಿಯೂ ವ್ಯತ್ಯಾಸವಿದೆ.

ಹಾಸ್ಯ ವೇಷ
ಹಾಸ್ಯ ಪಾತ್ರಗಳ ವೇಷಭೂಷಣಗಳೂ ಅದಕ್ಕೆ ಪೂರಕವಾಗಿಯೇ ಇರುತ್ತವೆ. ಹೆಚ್ಚಾಗಿ ಕಾಣುವ ಹಾಸ್ಯಗಳೆಂದರೆ ದೇವದೂತ (ಗಂಭೀರ ಹಾಸ್ಯ) ರಕ್ಕಸ ದೂತ, ವನಪಾಲಕ. ದೇವದೂತಾದಿ ಪಾತ್ರಗಳು ಸೀರಿಯಸ್ ಆಗಿದ್ದರೂ ತನ್ನ ಭಯ, ಆತುರದಿಂದ ಪ್ರೇಕ್ಷಕರನ್ನು ನಕ್ಕು ಹಗುರಾಗಿಸುತ್ತದೆ. ಪ್ಯಾಂಟ್ ಜುಬ್ಬದ ರೀತಿಯ ವಸ ಧರಿಸಲಾಗುತ್ತದೆ.

ಕೆಲವೊಮ್ಮ ಪುರೋಹಿತ ಇತ್ಯಾದಿ ಪಾತ್ರಗಳಿಗೆ ಕಚ್ಚೆ ಕಟ್ಟುವುದೂ ಇದೆ.  ಹೆಚ್ಚಾಗಿ ಈ ಪಾತ್ರಗಳು ಸರಳ, ಸಾಧಾರಣವಾಗಿರುತ್ತದೆ. ತಲೆಗೊಂದು ಮುಂಡಾಸು, ಕೈಗೊಂದು ಖಡಗ, ಸೊಂಟಕ್ಕೊಂದು ಶಾಲು, ಕೈಯಲ್ಲಿ ಕೋಲೋ,ಕರವಸವೋ ಇದು ಹಾಸ್ಯ ವೇಷದ ರೀತಿ.

ಯಕ್ಷಗಾನ ವಸಗಳು: ಬಾಲ್ಮುಂಡು, ಸೋಗಲೆ(ಸೋಗ ವಲ್ಲಿ) ದಗಲೆ (ಅಂಗಿ) (ಮೇಲೆ- ಒಳಗೆ), ಇಜಾರು (ಚಡ್ಡಿ) (ಮೇಲೆ-ಒಳಗೆ), ಜಟ್ಟಿ, ಪುಂಡು ವೇಷಕ್ಕಾದರೆ ರವಿಕೆ, ತುಂಡು ಸೋಗಲೆ. ಆಯುಧಗಳ ಕಟ್ಟಿನಲ್ಲಿ: ಕತ್ತಿ, ಬಿಲ್ಲು ಬಾಣ,ಗದೆ, ವಜ್ರಾಯುಧ, ಸರ್ಪ ಬಾಣ, ಓಲೆಯ ಮಾದರಿ, ಕೋಲು ಇರುತ್ತದೆ.

ಯಕ್ಷ ಕಿರೀಟಗಳು
ಹನುಮಂತ ಪಾರಂಪರಿಕ ಕಿರೀಟ, ನಾಟಕೀಯ ಕಿರೀಟ (ದೇವಿ ಕಿರೀಟ), ತುರಾಯಿ ಕಿರೀಟ ಧರ್ಮರಾಯ ಪಾತ್ರಕ್ಕೆ ಬಳಸು ವಂತಹಾ ಪಾರಂಪರಿಕ ಕಿರೀಟ (ಚಿಕ್ಕ ತಟ್ಟಿ ಕಿರೀಟ) ಪುಂಡು ವೇಷದ ಪಕಡಿ, ಕಿರಾತ ರಾಜನಿಗೆ ಬಳಸುವ ಓರೆ ಪಕಡಿ, ಕೀಚಕ ಇತ್ಯಾದಿ ಪಾತ್ರಕ್ಕೆ ಬಳಸುವ ದೊಡ್ಡ ಪಕಡಿ ಬಣ್ಣದ ವೇಷಕ್ಕೆ ಕೇಸರಿ ತಟ್ಟಿ, ಭೀಮನ ಮುಡಿ, ಹೆಣ್ಣು ಬಣ್ಣಗಳಿಗೆ ಉಪಯೋಗಿ ಸುವ ಕುತ್ತರಿ ಕಿರೀಟ, ಮಹಿಷಾಸುರನ ಕೊಂಬು ಕಿರೀಟ, ತ್ರಿಶಿರ ಪಾತ್ರಕ್ಕೆ ಉಪಯೋಗಿಸುವ ಕ್ಲೆವರ್ ತಟ್ಟಿ (ಮೂರು ತಟ್ಟಿ ಜೋಡಿ)

ವೇಷಭೂಷಣಕ್ಕೆ ಅನುಗುಣವಾದ ಗತಿ
ಬಣ್ಣದ ವೇಷ: ಗಜ ಗತಿ
ರಾಜ ವೇಷ: ರಥ ಗತಿ
ಪುಂಡು ವೇಷ: ಅಶ್ವ ಗತಿ

ವೇಷ ಭೂಷಣ ವ್ಯತ್ಯಾಸಗಳು
ಗಂಡು, ಹೆಣ್ಣು, ತೃತೀಯ ಲಿಂಗ
ಸಾತ್ವಿಕ, ತಾಮಸ

ಬಣ್ಣಕ್ಕೆ ಅನುಗುಣ ವಸನ
ಹಸಿರು: ಪೀಠಿಕೆಯಲ್ಲಿ ಬರುವ ಅರ್ಜುನ, ದೇವೇಂದ್ರ ಇತ್ಯಾದಿ ಪಾತ್ರಗಳು.
ಕೆಂಪು: ಪ್ರಧಾನ ರಕ್ಕಸ ಪಾತ್ರಗಳಾದ ಇಂದ್ರಜಿತು, ರಕ್ತಬೀಜ ಇತ್ಯಾದಿ ಪಾತ್ರಗಳು.
ಕಪ್ಪು: ರಕ್ಕಸ ಹಾಗು ಕೌರವಾದಿ ಪಾತ್ರಗಳು.
ಬಿಳಿ: ಪ್ರಾಯ ಅಧಿಕ ತೋರಲು ಶ್ವೇತ ವಸನ(ವಸ್ತ್ರ) ಉಪಯೋಗಿಸುತ್ತಾರೆ.

ಜಾಂಬವ, ಶ್ವೇತ ವರಾಹ ಇತ್ಯಾದಿ ಪಾತ್ರಗಳು.

ಯಕ್ಷಗಾನ ಆಭರಣಗಳು
ತಲೆಗೆ ಮೀಸೆ, ಗಡ್ಡ, ಕರ್ಣಪತ್ರ, ಕೇಸರಿ, ಕಿರೀಟ, ಕೆನ್ನಪೂ ಕಂಠಕ್ಕೆ ಎದೆ ಪದಕ, ಅಡ್ಡಿಗೆ, ಸಪುರ ಅಡ್ಡಿಗೆ, ಕಂಠಾಹಾರ.
ಬುಜಕ್ಕೆ ತೋಳ್ಕಟ್ಟು ಅಥವಾ ದಂಬೆ.
ಸೊಂಟಕ್ಕೆ ವೀರಗಾಸೆ, ಡಾಬು, ಸಪುರ ಡಾಬು.
ಕಾಲಿಗೆ ಗೆಜ್ಜೆ, ಖಡಗ, ಕಾಲ್ಚೆಂಡು, ಕಾಲ ಮುಳ್ಳು.

error: Content is protected !!