Saturday, 21st September 2024

ಒಂದು ಕೆಜಿ ಕಾಫಿಯ ಬೆಲೆ ಕೇವಲ 82,500 ಮಾತ್ರ!

ತನ್ನಿಮಿತ್ತ
ಡಾ.ನಾ.ಸೋಮೇಶ್ವರ

ಅಕ್ಟೋಬರ್ 1 ಅಂತಾರಾಷ್ಟ್ರೀಯ ಕಾಫಿ ದಿನ.

ಒಂದು ಸಲ ಪರಶಿವನಿಗೆ ಎಲ್ಲಿಲ್ಲದ ತಲೆನೋವು ಬಂದಿತಂತೆ. ತಲೆ ವಿಪರೀತ ಸಿಡಿಯುತ್ತಿದ್ದಕಾರಣ ಶಿವನು ಎಲ್ಲರ ಮೇಲೂ
ರೇಗಲಾರಂಭಿಸಿದ. ಪಾರ್ವತಿ ಯ ಮೇಲೂ ಕೂಗಾಡಿದ. ಪಾರ್ವತಿಗೆ ತುಂಬಾ ನೊವಾಯಿತು. ಆ ವೇಳೆಗೆ ಅಲ್ಲಿ ಹನುಮಂತ ಬಂದನಂತೆ. ನೇರವಾಗಿ ಅಡುಗೆ ಮನೆಗೆ ಹೋದ. ಬಾಣಲೆಯನ್ನು ಒಲೆಯ ಮೇಲಿಟ್ಟ. ಉಡಿಯಿಂದ ಯಾವುದೋ ಬೀಜವನ್ನು ತೆಗೆದು ಬಾಣಲೆಯಲ್ಲಿ ಹಾಕಿದ. ಹುರಿಯಲಾರಂಭಿಸಿದ. ಘಮ್ಮನೆ ಪರಿಮಳವು ಹೊರಟಿತು.

ಪಾರ್ವತಿಗೆ ಸೋಜಿಗ! ಹನುಮಂತನು ಹುರಿದ ಬೀಜವನ್ನು ಒರಳಿನಲ್ಲಿ ಹಾಕಿ ಕುಟ್ಟಿದ. ಕುದಿಯುವ ನೀರಿಗೆ ಕುಟ್ಟಿದ ಪುಡಿಯನ್ನು ಹಾಕಿದ. ಮತ್ತಷ್ಟು ಪರಿಮಳ ಹರಡಿತು. ಅದಕ್ಕೆ ಒಂದಿಷ್ಟು ಜೇನುತುಪ್ಪವನ್ನು ಬೆರೆಸಿ ಪಾರ್ವತಿಗೆ ನೀಡಿ, ಶಿವನಿಗೆ ಕುಡಿಯಲು ನೀಡುವಂತೆ ಹೇಳಿದ. ಹಬೆಯಾಡುತ್ತಿದ್ದ ಬಿಸಿ ಬಿಸಿ ಪಾನೀಯವನ್ನು ಪಾರ್ವತಿ ತರುವ ಮೊದಲೇ ಅದರ ಪರಿಮಳವು ಶಿವನನ್ನು ತಲುಪಿತ್ತು. ಶಿವನು ಮೂಗಿನ ಹೊರಳೆಗಳನ್ನು ಅರಳಿಸಿಕೊಂಡು ಪಾರ್ವತಿಯ ಕಡೆಗೆ ನೋಡಿದ. ಪಾರ್ವತಿಯು ಬಟ್ಟಲನ್ನು ಶಿವನಿಗೆ ನೀಡಿ ಕುಡಿಯಲು ಹೇಳಿದಳು.

ಪರಿಮಳಕ್ಕೆ ಮನಸೋತಿದ್ದ ಶಿವ ಆ ಪಾನೀಯವನ್ನು ಕುಡಿದ. ಸ್ವಲ್ಪ ಕಹಿ ಎಂದನಿಸಿತು. ಆದರೂ ಒಂದು ತರಹ ರುಚಿಯಾಗಿದೆ ಅನಿಸಿತು. ಇಡೀ ಬಟ್ಟಲ ಪಾನೀಯವನ್ನು ಕುಡಿದು ಮುಗಿಸಿದ. ಮತ್ತೆ ಪಾರ್ವತಿಯ ಕಡೆಗೆ ನೋಡಿದ. ಪಾರ್ವತಿಯು ಬಟ್ಟಲಿ ನೊಳಗೆ ಪಾನೀಯ ವನ್ನು ಸುರಿದಳು. ಶಿವನು ಅದನ್ನೂ ಕುಡಿದ. ಎರಡು ಬಟ್ಟಲು ಪಾನೀಯವನ್ನು ಕುಡಿಯುತ್ತಿರುವಂತೆಯೇ ಶಿವನ ತಲೆ ನೋವು ಮಾಯವಾಗಿತ್ತು. ಆಹಾ ಎಷ್ಟು ಚೆನ್ನಾಗಿದೆ ಈ ಪಾನೀಯ!

ಇದರ ಹೆಸರೇನು ಎಂದು ಕೇಳಿದ. ಅದಕ್ಕೆ ಪಾರ್ವತಿಯು ಗೊತ್ತಿಲ್ಲ ಪ್ರಭು… ನಮ್ಮ ಹನುಮಂತ ತಂದ ಬೀಜದಿಂದ ತಯಾರಿ ಸಿದ್ದು ಈ ಕಷಾಯ ಎಂದಳು. ಓಹೋ… ಕಪಿ ತಂದ ಬೀಜದಿಂದ ತಯಾರಿಸಿದ ಕಷಾಯ ವೋ ಇದು.. ಹಾಗಿದ್ದ ಮೇಲೆ ಇದು ಇನ್ನು ಮುಂದೆ ಕಾಫಿ ಬೀಜ ಎನ್ನುವ ಹೆಸರಿನಿಂದ ಪ್ರಸಿದ್ಧವಾಗಲಿ ಎಂದು ಹರಸಿದ ಶಿವ. ಕಾಫಿ ಪ್ರಿಯರು ಕಟ್ಟಿದ ಕಥೆ ಎಷ್ಟು ಚೆನ್ನಾಗಿದೆ ನೋಡಿ. ಇಂಥ ಕಥೆಗಳು ಮತ್ತಷ್ಟು ಇವೆ. ಕ್ರಿ.ಶ.850. ಇಥಿಯೋಪಿಯದಲ್ಲಿ ಕಲ್ದಿ ಅಥವಾ ಖಾಲಿದ್ ಎನ್ನುವ ಕುರಿಕಾಯುವವ ಇದ್ದನಂತೆ. ಅವನ ಕುರಿಗಳು ಒಮ್ಮೆ ಕೆಂಪು ಬಣ್ಣದ ಹಣ್ಣುಗಳನ್ನು ಇಷ್ಟ ಪಟ್ಟು ತಿನ್ನುವುದನ್ನು ನೋಡಿದ. ಸ್ವಲ್ಪ ಹೊತ್ತಿನಲ್ಲಿಯೇ ಆ ಕುರಿಗಳೆಲ್ಲ ಉತ್ತೇಜಿತವಾಗಿ ಕುಣಿಯಲಾರಂಭಿಸಿದವಂತೆ. ಖಾಲಿದ್ ತಾನೂ ಸಹ ಒಂದಷ್ಟು ಕೆಂಪು
ಹಣ್ಣನ್ನು ಕಿತ್ತು ಬೀಜ ಸಮೇತ ಜಗಿದನಂತೆ. ಅವನ ಮೈಯಲ್ಲಿ ಒಂದು ನವಚೇತನ ಮೂಡಿತು. ಅವನಿಗೂ ಕುಣಿಯಬೇಕು
ಎಂದು ಅನಿಸಿತಂತೆ.

ಕೂಡಲೇ ಒಂದಷ್ಟು ಹಣ್ಣುಗಳಲ್ಲಿ ಕೊಯ್ದು, ಹತ್ತಿರದಲ್ಲಿಯೇ ಇದ್ದ ‘ಜಯಾ’ (ಸೂಫಿ ಸಂತರ ವಾಸಸ್ಥಳ)ಕ್ಕೆೆ ತಂದನಂತೆ. ಸೂಫಿ ಸಂತರ ಕೈಗೆ ಹಣ್ಣನ್ನು ನೀಡಿ ತನಗೂ ಹಾಗೂ ತನ್ನ ಕುರಿಗಳಿಗೂ ಆದ ಅನುಭವವನ್ನು ವಿವರಿಸಿದನಂತೆ. ಸೂಫಿ ಸಂತರು ಇದನ್ನೆಲ್ಲ ನೀನು ತಿನ್ನಬೇಡ ಎಂದು ಹತ್ತಿರದಲ್ಲೇ ಇದ್ದ ಬೆಂಕಿಯೊಳಗೆ ಒಗೆದರಂತೆ. ಹಣ್ಣಿನಲ್ಲಿದ್ದ ಬೀಜವು ಸುಟ್ಟು ಅದ್ಭುತ ವಾದ ಪರಿಮಳವನ್ನು ಹೊರಡಿಸಿತು. ಆಗ ಸೂಫಿ ಸಂತರು ಬೆಂಕಿಯಲ್ಲಿ ಸುಡುತ್ತಿದ್ದ ಬೀಜಗಳನ್ನು ಹೊರತೆಗೆದು, ಆರಿಸಿ, ಅದನ್ನು ನೀರಿನಲ್ಲಿ ಕುದಿಸಿದರಂತೆ. ಆಗ ಮತ್ತೆ ಅದೇ ಪರಿಮಳ ಹೊರಡಿತು.

ಅದನ್ನು ಸೂಫಿ ಸಂತರು ಕುಡಿದಾಗ, ಅವರಿಗೂ ಎಲ್ಲಿಲ್ಲದ ಲವಲವಿಕೆ ಹಾಗೂ ನವಚೈತನ್ಯವು ಬಂದಿತು. ಈ ಕಾಫಿ ಕಷಾಯವು ಅರಬ್ ದೇಶಗಳಲ್ಲಿ ಅತ್ಯಂತ ಜನಪ್ರಿಯ ವಾಯಿತು. ಯೇಮೆನ್ ದೇಶದವರು ಕಾಫಿಯ ಏಕಸ್ವಾಮಿತ್ವವನ್ನು ಗಳಿಸುವ ಹಿನ್ನೆಲೆ ಯಲ್ಲಿ ಕಾಫಿಬೀಜವನ್ನು ಎಲ್ಲ ಕಡೆಗೆ ರಫ್ತು ಮಾಡಿ ಹಣ ಮಾಡಿಕೊಳ್ಳಲಾರಂಭಿಸಿದರು. ಆದರೆ ಯಾರಿಗೂ ಹಸಿ ಕಾಫಿಬೀಜ ವನ್ನಾಗಲಿ, ಕಾಫಿಗಿಡವನ್ನಾಗಲಿ ಕೊಡುವುದಿರಲಿ, ತೋರಿಸುತ್ತಲೂ ಇರಲಿಲ್ಲ. ಬೇಯಿಸಿದ ಅಥವಾ ಹುರಿದ ಬೀಜಗಳನ್ನು ಮಾತ್ರ ರಫ್ತು ಮಾಡುತ್ತಿದ್ದ ಕಾರಣ, ಉಳಿದವರು ಯೇಮನ್ ದೇಶದವರ ಬಳಿಯೇ ಕಾಫಿಬೀಜವನ್ನು ಕೊಳ್ಳ ಬೇಕಿತ್ತು. 16ನೆಯ ಶತಮಾನ. ಬಾಬಾ ಬುಡನ್ ಎನ್ನುವ ಸೂಫಿ ಸಂತರು ಕರ್ನಾಟಕದಲ್ಲಿದ್ದರು. ಇವರು ಹ್‌ಯಾತ್ರೆಗೆ ಹೋದರು. ತಮ್ಮ ಯಾತ್ರೆ ಯನ್ನು ಮುಗಿಸಿದರು.

ಯೇಮನ್ ದೇಶದ ಮೋಚ ನಗರದ ಬಂದರಿನಲ್ಲಿ ಹಡಗನ್ನು ಹತ್ತಿ ಭಾರತಕ್ಕೆ ಬರಬೇಕಾಗಿತ್ತು. ಮೋಚಾ ನಗರದ ಬಂದರಿನಲ್ಲಿ ಹಡಗು ಹತ್ತುವ ಪ್ರತಿಯೊಬ್ಬರನ್ನು ಪರೀಕ್ಷೆ ಮಾಡಿ, ಅವರು ಕಾಫೀ ಬೀಜವನ್ನು ಬಚ್ಚಿಟ್ಟುಕೊಂಡಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡು, ಆನಂತರವೇ ಅವರಿಗೆ ಹಡಗನ್ನು ಹತ್ತಲು ಅವಕಾಶವನ್ನು ಮಾಡಿಕೊಡುತ್ತಿದ್ದರು. ಬಾಬಾ ಬುಡನ್ ಅವರು ಏಳು ಹಸಿ ಕಾಫೀ ಬೀಜವನ್ನು ತಮ್ಮ ಗಡ್ಡದಲ್ಲಿ ಅಡಗಿಸಿಟ್ಟುಕೊಂಡರು (ಇಸ್ಲಾಂ ಧರ್ಮದಲ್ಲಿ ಏಳು ಪವಿತ್ರವಾದ ಸಂಖ್ಯೆ). ಪರೀಕ್ಷೆ ಮಾಡುವವರು ಗಡ್ಡವನ್ನು ಪರೀಕ್ಷಿಸಲಿಲ್ಲ. ಬಾಬಾ ಬುಡನ್ ಆ ಏಳು ಬೀಜಗಳನ್ನು ತೆಗೆದುಕೊಂಡು ಬಂದು, ಚಿಕ್ಕಮಗಳೂರು ಜಿಲ್ಲೆೆಯಲ್ಲಿರುವ ಚಂದ್ರದ್ರೋಣ ಪರ್ವತದಲ್ಲಿ ಬಿತ್ತಿದರು. ಆ ಏಳು ಬೀಜಗಳು ಬೆಳೆದು, ಕಾಫಿ ಗಿಡಗಳಾದವು. ಇದರೊಂದಿಗೆ ಕರ್ನಾಟಕವು ಕಾಫಿಯ ತವರೂರಾಯಿತು. ಮುಂದಿನ ದಿನಗಳಲ್ಲಿ ಈ ಚಂದ್ರದ್ರೋಣ ಪರ್ವತವನ್ನೇ ಬಾಬಾಬುಡನ್ ಗಿರಿ ಎಂದು ಕರೆದರು.

ಅಕ್ಟೋಬರ್ 1: ಪ್ರತಿ ವರ್ಷ ಅಕ್ಟೋಬರ್ 1ನೆಯ ದಿನವನ್ನು ‘ಅಂತಾರಾಷ್ಟ್ರೀಯ ಕಾಫಿ ದಿನ’ವನ್ನಾಗಿ ಆಚರಿಸುತ್ತಾ ಬಂದಿ ದ್ದೇವೆ. ಮೊದಲ ದಿನಾಚರಣೆಯು 2015 ರಲ್ಲಿ ಮಿಲನ್ ನಗರದಲ್ಲಿ ನಡೆಯಿತು. ಈ ದಿನದಂದು ಕಾಫೀ ಪಾನೀಯವನ್ನು ಜನ ಪ್ರಿಯ ಗೊಳಿಸುವ ಪ್ರಯತ್ನಗಳು ನಡೆಯುತ್ತವೆ. ಕಾಫಿಯನ್ನು ನಿತ್ಯ ಸೇವಿಸುವುದರಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ಮನದಟ್ಟು ಮಾಡಿಕೊಡುವ ಕಾರ್ಯಕ್ರಮಗಳು ನಡೆಯುತ್ತವೆ. ಇಡೀ ಜಗತ್ತಿನ ಪಾನೀಯಗಳಲ್ಲಿ ಚಹಕ್ಕೆ ಮೊದಲ ಸ್ಥಾನವು ದೊರೆತಿದ್ದರೆ ಕಾಫಿಗೆ ಎರಡನೆಯ ಸ್ಥಾನವು ದೊರೆತಿದೆ. ಹಾಗಾಗಿ ಪ್ರಥಮ ಸ್ಥಾನಕ್ಕಾಗಿ ಕಾಫಿ ಮತ್ತು ಚಹಗಳ ನಡುವೆ ‘ಹೋರಾಟ’ ನಡೆಯುವುದುಂಟು.

ಕಾಫಿ ಪ್ರಿಯರು ಕಾಫಿಯ ಗುಣಗಳನ್ನು ಹೊಗಳಿ, ಚಹದ ಅವಗುಣಗಳನ್ನು ಎತ್ತಿ ಹಿಡಿದು ಮೂದಲಿಸಲೆತ್ನಿಸುವುದನ್ನು ಕಾಣಬಹುದು. ಭಾರತದಲ್ಲಿ ಶೇ.44 ಜನರು ಚಹವನ್ನು ಇಷ್ಟಪಟ್ಟರೆ ಶೇ.14 ಜನರು ಕಾಫಿಯನ್ನು ಇಷ್ಟಪಡುತ್ತಾರಂತೆ. ಶೇ.38 ಜನರು ಕಾಫಿ ಮತ್ತು ಚಹಗಳೆರಡನ್ನೂ ಇಷ್ಟ ಪಡುತ್ತಾರಂತೆ. ಮಾಧ್ಯಮಗಳಲ್ಲಿ ಆಗಾಗ್ಗೆ ಚಹ ಮತ್ತು ಕಾಫಿ ಪ್ರಿಯರ ನಡುವೆ ತಮ್ಮ ಪಾನೀಯಗಳ ಗುಣಾವಗುಣಗಳನ್ನು ಎತ್ತಿಕೊಂಡು ‘ಘೋರ ಕದನ’ ವನ್ನು ನಡೆಸುವುದುಂಟು. ಎರಡೂ ಪಾನೀಯ ಗಳನ್ನು ಇಷ್ಟ ಪಡುವ ಜನರು ಈ ಚಹಪ್ರಿಯರು ಹಾಗೂ ಕಾಫಿ ಪ್ರಿಯರ ವಾದವಾದಗಳನ್ನು ತಿಳಿನಗೆಯೊಡನೆ ಆಸ್ವಾದಿಸುವರು.

ಕಾಫಿ: ಕಾಫಿಯು ಇಥಿಯೋಪಿಯದ ‘ಕಫ್ಫ’ ಎನ್ನುವ ಪ್ರದೇಶದಲ್ಲಿ ಬೆಳೆಯುತ್ತಿದ್ದ ಕಾರಣ, ಆ ಗಿಡಕ್ಕೆ / ಬೀಜಗಳಿಗೆ/ ಪಾನೀಯಕ್ಕೆ ಕಾಫಿ ಎನ್ನುವ ಹೆಸರು ಬಂದಿತು ಎನ್ನುವ ವಾದವಿದೆ. 1582ರಲ್ಲಿ ಇಂಗ್ಲಿಷಿನವರು ಕಾಫಿ ಎನ್ನುವ ಶಬ್ದವನ್ನು ಬಳಸಿದರು. ಇದಕ್ಕೆೆ ಡಚ್ ಭಾಷೆ ಕೋಫೆ ಎನ್ನುವ ಶಬ್ದ. ಡಚ್ ನವರು ಒಟೋಮಾನ್ ತುರ್ಕಿ ಭಾಷೆಯ ‘ಕಾಹ್ವೆ’ ಶಬ್ದದಿಂದ ತಮ್ಮ ಶಬ್ದವನ್ನು ರೂಪಿಸಿಕೊಂಡಿದ್ದರು.

ತುರ್ಕಿ ಭಾಷೆಯ ಶಬ್ದಕ್ಕೆ ಮೂಲ ಅರಾಬಿಕ್ ಭಾಷೆಯ ‘ಕಹ್ವಾ’ ಎನ್ನುವ ಶಬ್ದ. ಮೂಲತಃ ಕಹ್ವಾ ಎನ್ನುವುದು ಒಂದು ವೈನ್.
ಇದನ್ನು ಕುಡಿದರೆ ಹಸಿವಾಗುತ್ತಿರಲಿಲ್ಲವಂತೆ. ಕಾಫಿಯೂ ಸಹ ಹಸಿವನ್ನು ಕುಂದಿಸಬಲ್ಲುದು. ಹಾಗಾಗಿ ಆ ವೈನ್ ಪಾನೀಯದ ಹೆಸರನ್ನೇ ಕಾಫಿ ಕಷಾಯಕ್ಕೂ ನೀಡಿದರಂತೆ. ಈ ಕಾಫಿ ಶಬ್ದದ ಕಥೆಯು ಏನಾದರೂ ಇರಲಿ; ಪ್ರಸ್ತುತ ಜಗತ್ತಿನಾದ್ಯಂತ ಕಾಫಿ ಎನ್ನುವ ಹೆಸರಿನಿಂದಲೇ ಪ್ರಸಿದ್ಧವಾಗಿದೆ.

ಕಾಫಿಯು ರೂಬಿಯೇಸಿ ಎನ್ನುವ ವಂಶಕ್ಕೆ ಸೇರಿದ ಸಸ್ಯ. ಸಹಜವಾಗಿ ಬೆಳೆಯಲು ಬಿಟ್ಟರೆ 15 ಅಡಿ ಎತ್ತರದವರೆಗೆ ಬೆಳೆಯ ಬಲ್ಲುದು. ಕಾಫಿಯಲ್ಲಿ ಅನೇಕ ಪ್ರಭೇದಗಳಿವೆ. ಅವುಗಳಲ್ಲಿ ಪ್ರಖ್ಯಾತವಾದವು ಕಾಫಿ ಕಾಫಿ ಸೀನೋಫೋರ ಮತ್ತು ಕಾಫಿ ಅರೇಬಿಕ. ಕಾಫಿ ಸೀನೋಫೋರವನ್ನು ರೋಬಸ್ಟ ಎಂದೂ ಕರೆಯಬಹುದು. ಇವಲ್ಲದೆ ಕಾಫಿ ಲೈಬೆರಿಕ, ಕಾಫಿ ಸ್ಟೀನೋಫಿಲ್ಲ, ಕಾಫಿ ಮಾರಿ ಯಾನ, ಕಾಫಿ ರೆಸಿಮೋಸ ಮುಂತಾದ ಪ್ರಭೇದಗಳಿವೆ. ಆದರೆ ಇವು ಅಷ್ಟು ಜನಪ್ರೀತಿಯನ್ನು ಗಳಿಸಿಲ್ಲ. 2016ರಲ್ಲಿ ಒರೆಗಾನ್ ಸ್ಟೇಟ್ ವಿಶ್ವವಿದ್ಯಾಲಯದ ಜಾರ್ಜ್ ಪಾಯ್ನರ್ ಎನ್ನುವವರು ರಾಳದಲ್ಲಿ (ಆಂಬರ್) ಕಾಫಿ ಗಿಡದ ಸನಿಹ ಸಂಬಂಧಿ
ಗಿಡವನ್ನು ಪತ್ತೆ ಹಚ್ಚಿದರು. ಇದು ಸುಮಾರು 45 ದಶಲಕ್ಷ ವರ್ಷಗಳ ಹಿಂದೆ ಜೀವಿಸಿತ್ತಂತೆ!

ಕಾಫಿ ಅರೇಬಿಕವು ಸ್ವಯಂ ಪರಾಗಸ್ಪರ್ಶವನ್ನು ಮಾಡಿಕೊಳ್ಳುತ್ತದೆ. ಹಾಗಾಗಿ ಕಾಫಿಯ ಬೀಜಗಳೆಲ್ಲ ಏಕರೂಪವಾಗಿರುತ್ತವೆ. ಹಾಗಾಗಿ ಮಾತೃಗಿಡದ ಲಕ್ಷಣಗಳೆಲ್ಲ ಸಂತಾನಕ್ಕೆ ವರ್ಗಾವಣೆಯಾಗಿರುತ್ತವೆ. ಕಾಫಿ ರೊಬೆಸ್ಟ ಮತ್ತು ಲೈಬೆರಿಕಗಳಿಗೆ ದೂರ ತಳಿಸಂವರ್ಧನೆ (ಔಟ್ ಬ್ರೀಡಿಂಗ್ )ಯನ್ನು ಮಾಡಬೇಕಾಗುತ್ತದೆ. ಹಾಗಾಗಿ ಸಾಮಾನ್ಯವಾಗಿ ಸಸ್ಯಕ ಪ್ರಸರಣ (ವೆಜಿಟೇಟಿವ್ ಪ್ರಾಪಗೇಶನ್) ವಿಧಾನಗಳನ್ನು ಬಳಸುವುದುಂಟು. ಕಾಫಿ ಅರೇಬಿಕಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಾಫಿ ರೋಬಸ್ಟದಲ್ಲಿ ಅರೇಬಿ ಕ್ಕಿಂತ ಶೇ.40-50ಕ್ಕೂ ಹೆಚ್ಚು ಪ್ರಮಾಣದ ಕೆಫೀನ್ ಇರುತ್ತದೆ.

ಹಾಗಾಗಿ ಅರೇಬಿಕ ಹಾಗೂ ರೋಬಸ್ಟವನ್ನು ಬೆಳೆಸುವುದು ಹೆಚ್ಚು. ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಕಾಫಿಯನ್ನು
ಬ್ರೆಜಿಲ್ ದೇಶವು ಬೆಳೆಯುತ್ತದೆ. ನಂತರ ಎರಡು ಸ್ಥಾನಗಳು ವಿಯೆಟ್ನಾಂ ಮತ್ತು ಇಂಡೋನೇಷ್ಯಾ. ಭಾರತದಲ್ಲಿ ಬೆಳೆಯುವ ಒಟ್ಟು ಕಾಫಿಯಲ್ಲಿ ಕರ್ನಾಟಕದ ಪಾಲು ಶೇ.71. ಕೇರಳ ಶೇ.21 ಆದರೆ ತಮಿಳುನಾಡು ಶೇ.5. ಭಾರತದಲ್ಲಿ ಬೆಳೆಯುವ ಕಾಫಿಯ ರುಚಿ ಶ್ರೇಷ್ಠ. ಹಾಗಾಗಿ ಸುಮಾರು ಶೇ.80ಕಾಫಿಯನ್ನು ರಫ್ತು ಮಾಡುವುದುಂಟು. ಕರ್ನಾಟಕದ ಮಾನ್ಸೂನ್ ಮಲಬಾರ್ ರೋಬಸ್ಟ ಕಾಫಿ, ಚಿಕ್ಕಮಗಳೂರು ಅರಾಬಿಕ್ ಕಾಫಿ, ಬಾಬಾಬುಡನ್ ಗಿರಿ ಅರಾಬಿಕ್ ಕಾಫಿ, ಕೂರ್ಗ್ ಅರಾಬಿಕಾ ಕಾಫಿಗಳು ಜಾಗತಿಕ ಸೂಚಕ (ಜಿಯಾಗ್ರಫಿಕಲ್ ಇಂಡಿಕೇಟರ್ ಸ್ಥಾನವನ್ನು ಪಡೆದಿವೆ) ಕೇರಳದ ವೈನಾಡ್ ರೋಬಸ್ಟ ಕಾಫಿ, ಆಂಧ್ರದ ಅರಕು ವ್ಯಾಲಿ ಅರಾಬಿಕ್ ಕಾಫಿ – ಜಾಗತಿಕ ಸೂಚಕ ಸ್ಥಾನವನ್ನು ಪಡೆದ ಇತರ ಎರಡು ಕಾಫಿ ತಳಿಗಳು.

ಅತ್ಯಂತ ದುಬಾರಿ: ಕೋಪಿ ಲುವಾಕ್ ಎನ್ನುವ ಏಷ್ಯಾ ಕಾಫಿಯು ಇಡೀ ಜಗತ್ತಿನಲ್ಲಿಯೇ ಅತ್ಯಂತ ದುಬಾರಿಯಾದ ಕಾಫಿಯಾಗಿ ಹೆಸರುವಾಸಿಯಾಗಿದೆ. ಒಂದು ಕಪ್ ಕಾಫಿಗೆ ಬರೀ 30 ಡಾಲರುಗಳು (ರು. 2250) ಅಷ್ಟೆ. ಇದು ಇಂಡೋನೇಷ್ಯಾದಲ್ಲಿ ಹೆಚ್ಚು
ಜನಪ್ರಿಯ. ಏಯ ಪಾಮ್ ಸಿವೆಟ್ ಎನ್ನುವುದು ಒಂದು ಪುನುಗಿನ ಬೆಕ್ಕು. ಇಂಡೋನೇಷ್ಯಾದಲ್ಲಿ ಕಂಡುಬರುತ್ತದೆ. ಅವರು ಈ ಬೆಕ್ಕನ್ನು ಲುವಾಕ್ ಎಂದು ಕರೆಯುತ್ತಾರೆ. ಈ ಬೆಕ್ಕನ್ನು ಹಿಡಿದುಕೊಂಡು ಬಂದು ಅದಕ್ಕೆ ಅರೇಬಿಕ ಅಥವ ರೊಬಸ್ಟ ಕಾಫಿ ಹಣ್ಣುಗಳನ್ನು ತಿನ್ನಲು ನೀಡುತ್ತಾರೆ. ಪುನುಗಿನ ಬೆಕ್ಕು ಕಾಫಿಹಣ್ಣನ್ನು ಇಷ್ಟ ಪಟ್ಟು ತಿನ್ನುತ್ತದೆ. ಆದರೆ ಕಾಫಿ ಬೀಜಗಳನ್ನು ಜೀರ್ಣಿಸಿಕೊಳ್ಳಲಾರದು. ಆದರೆ ಬೆಕ್ಕಿನ ಕರುಳಿನಲ್ಲಿ ಈ ಬೀಜಗಳು ಹುಳಿಯುತ್ತವೆ. ಬೆಕ್ಕು ಮಲವನ್ನು ವಿಸರ್ಜಿಸಿದಾಗ ಬೀಜ ಗಳೆಲ್ಲ ಹಾಗೆಯೇ ಹೊರಬರುತ್ತವೆ. ಈ ಬೀಜಗಳನ್ನು ಹುರಿದು ಕಾಫಿ ಮಾಡಿದರೆ ಅದಕ್ಕೆ ವಿಶೇಷ ಪರಿಮಳ ಮತ್ತು ರುಚಿಯಂತೆ. ಹಾಗಾಗಿ ಕೋಪಿ ಲುವಾಕ್ ಅತ್ಯಂತ ಜನಪ್ರಿಯ ಹಾಗೂ ದುಬಾರಿ ಪಾನೀಯವೆಂದು ಹೆಸರಾಗಿದೆ. ಆದರೆ ಈ ದುಬಾರಿ ಕಾಫಿಗೆ ಸವಾಲು ಹಾಕಬಲ್ಲ ಮತ್ತೊಂದು ‘ಬ್ಲಾಕ್ ಐವರಿ ಕಾಫಿ’ಯನ್ನು ಥೈಲ್ಯಾಂಡಿನವರು ಮಾರುತ್ತಿದ್ದಾರೆ. 1 ಕೆಜಿಗೆ ಕೇವಲ ರು.82,500 ಮಾತ್ರ. ಇವರು ಕಾಫಿ ಹಣ್ಣುಗಳನ್ನು ಆನೆಗೆ ತಿನ್ನಿಸುತ್ತಾರೆ. ಆನೆಯು ಹಣ್ಣನ್ನು ತಿಂದು ಬೀಜವನ್ನು ಮಲದಲ್ಲಿ ವಿಸರ್ಜಿಸುತ್ತದೆ. ಆ ಬೀಜಗಳನ್ನು ಸಂಗ್ರಹಿಸಿ ಹುರಿದು ಕಾಫಿ ಮಾಡುತ್ತಾರಂತೆ. ಇದುವೇ ಜಗತ್ತಿನ ಅತ್ಯಂತ ದುಬಾರಿ ಕಾಫಿಯಂತೆ!

ಕಲೆ ಮತ್ತು ವಿಜ್ಞಾನ: ಕಾಫಿಯನ್ನು ತಯಾರಿಸುವುದು ಒಂದು ಜ್ಞಾನವು ಹೌದು; ಕಲೆಯೂ ಹೌದು. ಕಾಫ್ ಬೀಜವನ್ನು ಹದವಾಗಿ ಹುರಿದು, ಅದನ್ನು ಪುಡಿ ಮಾಡಿ, ಕುದಿಯುವ ನೀರಿನಲ್ಲಿ ತಕ್ಕಷ್ಟು ಪುಡಿಯನ್ನು ಬೆರೆಸಿ, ಎರಡು ಸಲ ಮರಳಿಸಿದರೆ ಸಾಕು, ಅಡುಗೆ ಮನೆಯ ತುಂಬಾ ಪರಿಮಳವು ಹರಡುತ್ತದೆ. ತಕ್ಷಣವೇ ಅದನ್ನು ಒಲೆಯಿಂದ ಇಳಿಸಿ, ಕುಡಿದರೆ ಆಹ!.. ಅದು ನಿಜವಾದ ಕಾಫಿ. ಈ ಕಾಫಿಗೆ ಸಕ್ಕರೆಯನ್ನು ಬೆರೆಸಿದರೆ, ಹಾಲನ್ನು ಹಾಕಿದರೆ ನಿಜವಾದ ಕಾಫಿಯ ರುಚಿಯು ಮರೆಯಾಗಿ ಬಿಡುತ್ತದೆ. ಜತೆಗೆ ಎರಡಕ್ಕಿಂತಲೂ ಹೆಚ್ಚು ಮರಳಿಸಿದರೆ, ಕಾಫಿಯಲ್ಲಿರುವ ಕಹಿ ಅಂಶವೆಲ್ಲ ಹೊರಬಂದು ಕೆಟ್ಟ ಕಾಫಿಯನ್ನು ಕುಡಿಯ ಬೇಕಾಗುತ್ತದೆ. ನಮ್ಮ ಕನ್ನಡ ಸಾಹಿತ್ಯದಲ್ಲಿ ಕಾಫಿಯ ಪ್ರಸ್ತಾಪವು ಸಾಕಷ್ಟು ಬರುತ್ತದೆ. ಮಲೆನಾಡಿನ ಮನೆಗಳಲ್ಲಿ
ಸಾಮಾನ್ಯವಾಗಿ ಕಾಫಿಗಾಗಿಯೇ ಒಂದು ಪ್ರತ್ಯೇಕ ಒಲೆಯನ್ನು ಇಡುವ ಪದ್ಧತಿಯಿತ್ತು. ಈ ಒಲೆಯು ಆರುತ್ತಿರಲಿಲ್ಲ. ದಿನದ 24 ಗಂಟೆಯು ಕಾಫಿಯ ಡಿಕಾಕ್ಷನ್ ಇರುತ್ತಿತ್ತು. ಮನೆಗೆ ಯಾರು ಬಂದರೂ ಸರಿ, ಅವರಿಗೆ ಬೆಲ್ಲದ ಕಾಫಿಯ ಸಮಾರಾಧನೆಯು ನಡೆಯಲೇಬೇಕಾಗಿತ್ತು.

ಸಾಮಾನ್ಯವಾಗಿ ಮಡಿ ಮಡಿಯೆಂದು ಕರೆಕರೆ ಮಾಡುವವರಿಗೂ ಕಾಫಿ ವರ್ಜ್ಯವಾಗುವುದಿಲ್ಲ. ಬೆಳಿಗ್ಗೆ ಎದ್ದಕೂಡಲೇ ಒಂದು ಡೋಸ್ ಬೆಡ್ ಕಾಫಿಯನ್ನು ಕುಡಿಯದಿದ್ದರೆ, ಇಡೀ ಶರೀರವು ಜಡವಾಗಿಯೇ ಉಳಿಯುತ್ತದೆ. ಕಾಫಿ ಬೀಳುತ್ತಿದ್ದ ಹಾಗೆಯೇ ಎಲ್ಲಿಲ್ಲದ ಉತ್ಸಾಹ, ಚೈತನ್ಯ, ಲವಲವಿಕೆ ಬಂದು ಬಿಡುತ್ತದೆ. ಮನೆಯ ಕೆಲಸವನ್ನು ಮಾಡಲು ಮುಂದಾಗುತ್ತಾರೆ.

ನಮೂನೆಗಳು: ಇಡೀ ಜಗತ್ತಿನಲ್ಲಿ ಕಾಫಿಯನ್ನು ಅತ್ಯಂತ ಹೆಚ್ಚು ಕುಡಿಯುವವರು ಫಿನ್‌ಲ್ಯಾಂಡಿನವರು. ವರ್ಷಕ್ಕೆ ತಲಾ
12 ಕೆಜಿ ಕಾಫಿಯನ್ನು ಕುಡಿಯುತ್ತಾರಂತೆ. ನಂತರದ ಸ್ಥಾನ ನಾರ್ವೇ (9.9ಕೆಜಿ) ಮತ್ತು ಐಸ್ ಲ್ಯಾಂಡಿನವರದ್ದು (9 ಕೆಜಿ).
ಕೇಳುವುದಕ್ಕೆ ಕಾಫಿ ಒಂದು ಪಾನೀಯ ಎಂದು ಅನಿಸಬಹುದು. ಆದರೆ ಕಾಫಿಯಲ್ಲಿರುವ ಕೆಫೀನ್ ಪ್ರಮಾಣ, ತಯಾರಿಸುವ ವಿಧಾನ, ಜತೆಗೆ ಸೇರಿಸುವ ಇತರ ವಸ್ತುಗಳು ಇತ್ಯಾದಿ ಅಂಶಗಳನ್ನು ಪರಿಗಣಿಸಿ 30ಕ್ಕೂ ಹೆಚ್ಚು ನಮೂನೆಯ ಕಾಫಿಯನ್ನು ನೋಡಬಹುದು. ಸಾಮಾನ್ಯವಾಗಿ ಒಂದು ದೊಡ್ಡ ಲೋಟ ಕುದಿಸಿದ ಕಾಫಿಯಲ್ಲಿ (200 ಎಂ.ಎಲ್) ಸುಮಾರು 95ಮಿ ಗ್ರಾಂ

ಕೆಫೀನ್ ಇರುತ್ತದೆ. ಮಾರುಕಟ್ಟೆಯಲ್ಲಿ ಕೋಲ್ಡ್ ಕಾಫಿ ದೊರೆಯುತ್ತದೆ. ಕಾಫಿ ಪುಡಿಯನ್ನು ನೀರಿನಲ್ಲಿ 8-24 ಗಂಟೆಗಳ ಕಾಲ ನೆನೆಸಿಡಬೇಕಾಗುತ್ತದೆ. ನಂತರ ಸಕ್ಕರೆ / ಹಾಲು ಹಾಕಿ ಅಥವಾ ಹಾಕದೆಯೇ ಕೋಲ್ಡ್‌ ಕಾಫಿಯನ್ನು ಕುಡಿಯಬಹುದು. ದಿಢೀರ್ ಕಾಫಿಯನ್ನು ಇನ್‌ಸ್ಟಂಟ್ ಕಾಫಿಯೆನ್ನುವರು. ಕಾಫಿ ಪುಡಿ ಅಥವಾ ಕಾಫಿ ಹರಳುಗಳ ಮೇಲೆಬಿಸಿ ಬಿಸಿ ನೀರನ್ನು ಸುರಿದರಾಯಿತು. ಕಾಫಿ ಸಿದ್ಧ. ಇಂತಹ ನಮೂನೆಯಲ್ಲಿ 63ಮಿ ಗ್ರಾಂ ಕೆಫೀನ್ ಇರುತ್ತದೆ. ಎಸ್ಪ್ರೆಸೊ ಕಾಫಿಯಲ್ಲಿ ಕೆಫೀನ್ ಪ್ರಮಾಣ ಅಧಿಕವಾಗಿ ರುತ್ತದೆ.

ಸಾಮಾನ್ಯವಾಗಿ ಇದನ್ನು ಯಂತ್ರದಲ್ಲಿ ತಯಾರಿಸುವುದು ಹೆಚ್ಚು. ಕಾಫಿಪುಡಿಯೊಳಗೆ ಬಿಸಿ ನೀರು ಇಲ್ಲವೇ ಆವಿಯನ್ನು
ಹಾಯಿಸಿ ಕಾಫಿಯನ್ನು ತಯಾರಿಸುವರು. 30 ಎಂ.ಎಲ್ ಕಾಫಿಯಲ್ಲಿ 63ಮಿ ಗ್ರಾಂ ಕೆಫೀನ್ ಇರುತ್ತದೆ. ಹಾಗಾಗಿ ಎಸ್ಪ್ರೆಸೊ ಕಾಫಿಯ ಪ್ರಮಾಣವು 60 ಎಂ.ಎಲ್‌ಗಿಂತ ಹೆಚ್ಚು ಇರುವುದಿಲ್ಲ. ಅಮೆರಿಕದ ಖ್ಯಾತ ಸ್ಟಾರ್‌ಬಕ್ ಸಂಸ್ಥೆಯ ಕುದಿಸಿದ ಕಾಫಿಯಲ್ಲಿ 235 ಮಿ ಗ್ರಾಂ, ಕೆಫೀನ್ ರಹಿತ ಕಾಫಿ  (ಡಿಕಾಕ್ಶನ್) 20 ಮಿ ಗ್ರಾಂ, ಕೋಲ್ಡ್ ಕಾಫಿಯಲ್ಲಿ 155 ಮಿಗ್ರಾಂ, ಕಪುಚಿನೋದಲ್ಲಿ 75 ಮಿಗ್ರಾಂ ಕೆಫೀನ್ ಇರುತ್ತದೆ.

ಆರೋಗ್ಯ: ಈಗಾಗಲೇ ಪ್ರಸ್ತಾಪಿಸಿದ ಹಾಗೆ ಕಾಫಿ – ಚಹ ಜಗಳಕ್ಕೆ ಕಾರಣ, ಇವೆರಡರಲ್ಲೂ ಇರುವ ಕೆಫೀನ್ ಎಂಬ ನರಮಂಡಲ ವನ್ನು ಉತ್ತೇಜಿಸುವ ರಾಸಾಯನಿಕ. ಇದು ಕಾಫಿ ಅಥವಾ ಚಹ ಸೇವನೆಯ ನಂತರ ನಮಗೆ ದೊರೆಯುವ ಉಲ್ಲಾಸಕ್ಕೆ ಕಾರಣ. ಕಾಫಿಯು ಆರೋಗ್ಯಕರ ಎಂದು ವಾದಿಸುವ ಜನರು ನೀಡುವ ಹಲವು ಕಾರಣಗಳು ಹೀಗಿವೆ. ಏಕಾಗ್ರತೆಯು ಹೆಚ್ಚುತ್ತದೆ. ಕಾಫಿಯು ದಣಿದ ದೇಹ ಮತ್ತು ಮನಸ್ಸುಗಳನ್ನು ಉತ್ತೇಜಿಸುತ್ತದೆ. ಕಾಫಿಯನ್ನು ಕುಡಿದ ನಂತರ ನಮ್ಮ ದೈಹಿಕ ಹಾಗೂ ಬೌದ್ಧಿಕ ಕೆಲಸ ಗಳನ್ನು ಚುರುಕಾಗಿ ಮಾಡಲು ಸಾಧ್ಯವಾಗುತ್ತದೆ. ಏಕಾಗ್ರತೆ ಅಧಿಕವಾಗುತ್ತದೆ. ಕಾಫಿಯು ಕೊಬ್ಬನ್ನು ಕರಗಿಸುತ್ತದೆ: ಕಾಫಿಯು ಶರೀರದ ಉಪಾಪಚಯ ವೇಗವನ್ನು (ಮೆಟಬಾಲಿಕ್ ರೇಟ್) ಶೇ.3-ಶೇ.11ರಷ್ಟು ಹೆಚ್ಚಿಸಬಲ್ಲುದಾದ ಕಾರಣ, ಇದು ಅನಗತ್ಯ ಕೊಬ್ಬನ್ನು ಕರಗಿಸಬಲ್ಲುದು. ಹಾಗಾಗಿ ಶರೀರ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಮಾರುಕಟ್ಟೆಯಲ್ಲಿ ಮಾರಾಟ ವಾಗುತ್ತಿರುವ ಪಾನೀಯಗಳನ್ನು ಗಮನಿಸಿ ನೋಡಿ.

ಅದರಲ್ಲಿ ಕೆಫೀನ್ ಇರುತ್ತದೆ. ಕಾಫಿಯು ಶರೀರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೆಫೀನ್ ನರಮಂಡಲದ ಮೇಲೆ ಪರಿಣಾಮ ವನ್ನು ಬೀರಿ ಕೊಬ್ಬನ್ನು ಕರಗಿಸಿ, ಮುಕ್ತ ಮೇದೋ ಆಮ್ಲಗಳನ್ನು ಬಿಡುಗಡೆ ಮಾಡುತ್ತದೆ. ಜತೆಗೆ ಶರೀರದಲ್ಲಿ ಅಡ್ರಿನಾಲಿನ್ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಶರೀರವನ್ನು ಹೊಡೆದಾಡಲು ಇಲ್ಲವೇ ಓಡಿಹೋಗಲು ಪ್ರೇರೇಪಿಸುವಂಥ ಹಾರ್ಮೋನು. ಮುಕ್ತ ಮೇದೋಆಮ್ಲಗಳು ಉಪಚಯಗೊಂಡು ಶಕ್ತಿ ಬಿಡುಗಡೆಯಾಗುತ್ತದೆ. ಈ ಶಕ್ತಿಯು ಶರೀರದ ಕೆಲಸ ಕಾರ್ಯಗಳನ್ನು ಹೆಚ್ಚಿಸಬಲ್ಲುದು.

ಕಾಫಿಯಲ್ಲಿ ಪೋಷಕಾಂಶಗಳು ಇವೆ. ಒಂದು ಕಪ್ ಕಾಫಿಯಲ್ಲಿ ಸುಮಾರು ಪೋಷಕಾಂಶಗಳಿರುತ್ತವೆ. ಅವುಗಳಲ್ಲಿ ರೈಬೋ ಫ್ಲೇನ್ (ಟುನ್ ಬಿ-12) ಪ್ಯಾಂಟೊಥೆನಿಕ್ ಆಸಿಡ್ (ಟುನ್ ಬಿ-5) ನಿಯಾಸಿನ್ (ಟುನ್-ಬಿ3) ಮ್ಯಾಂಗನೀಸ್, ಮೆಗ್ನೀಯಂ, ಪೊಟಾಯಂ ಮುಂತಾದ ಖನಿಜಗಳೂ ದೊರೆಯುತ್ತವೆ. ಕಾಫಿಯಲ್ಲಿ ಪ್ರತಿ ಉತ್ಕರ್ಷಕಗಳು (ಆಂಟಿ ಆಕ್ಸಿಡಂಟ್ಸ್‌) ಸಾಕಷ್ಟು ಇರುವ ಕಾರಣ, ಇವು ಅನೇಕ ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಶರೀರಕ್ಕೆ ಕೊಡುತ್ತವೆ. ಕಾಫಿಯು ಮಧುಮೇಹ ವನ್ನು ದೂರವಿಡುತ್ತದೆ.

ಮಧುಮೇಹವು ಒಂದು ಜಾಗತಿಕ ಅನಾರೋಗ್ಯವಾಗಿ ಬೆಳೆಯುತ್ತಿದೆ. ನಿಯಮಿತವಾಗಿ ಕಾಫಿಯನ್ನು ಸೇವಿಸುವುದರಿಂದ ಮಧು ಮೇಹ ಆರಂಭವಾಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಇಲ್ಲವೇ ಮುಂದೂಡಬಹುದು ಎನ್ನಲಾಗಿದೆ. ಕಾಫಿಯು ಮಿದುಳಿನಲ್ಲಿರುವ ನರಕೋಶಗಳನ್ನು ನಶಿಸಿ ನಾನಾ ರೀತಿಯ ರೋಗಲಕ್ಷಣಗಳಿಗೆ ಕಾರಣವಾಗುವ ಪಾರ್ಕಿನ್ಸನ್ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ಪಾರ್ಕಿನ್ಸನ್ ಕಾಯಿಲೆಯನ್ನು ಗುಣಪಡಿಸುವ ಯಾವುದೇ ಔಷಧವಿಲ್ಲ.

ದಿನಕ್ಕೆ 3-4 ಕಪ್ ಕಾಫಿ ಕುಡಿಯುತ್ತಿದ್ದರೆ ಯಕೃತ್ ನಾರುಗಟ್ಟುವಿಕೆಯನ್ನು (ಲಿವರ್ ಸಿರಾಸಿಸ್) ತಡೆಗಟ್ಟಬಹುದು. ಖಿನ್ನತೆಯೂ ಸಹ ಒಂದು ಪ್ರಮುಖ ರೋಗವಾಗಿದೆ. ನಿತ್ಯ ಕಾಫಿ ಸೇವನೆಯು ಖಿನ್ನತೆಯ ತೀವ್ರತೆಯನ್ನು ಕಡಿಮೆ ಮಾಡಬಲ್ಲುದು. ಕಾಫಿ ಸೇವನೆಯು ಲಿವರ್ ಕ್ಯಾನ್ಸರ್ ಮತ್ತು ದೊಡ್ಡಕರುಳಿನ ಕ್ಯಾನ್ಸರನ್ನು ತಡೆಗಟ್ಟಬಲ್ಲುದು. ಕಾಫಿ ಸೇವನೆಯು ಅನೇಕ ರೋಗ  ಗಳನ್ನು ತಡೆಗಟ್ಟುಬಲ್ಲುದಾದ ಕಾರಣ, ಸಹಜವಾಗಿ ಆಯಸ್ಸು ಹೆಚ್ಚುತ್ತದೆ.

ಅನಾರೋಗ್ಯ: ಕಾಫಿಯನ್ನು ಪರಿಪೂರ್ಣ ಆರೋಗ್ಯವರ್ಧಕ ಎನ್ನಲು ಸಾಧ್ಯವಿಲ್ಲ. ಪ್ರತಿ ದಿನ ಯಾವ ರೀತಿಯ ಕಾಫಿಯನ್ನು
ಕುಡಿಯುತ್ತೇವೆ, ಎಷ್ಟು ಕಾಫಿಯನ್ನು ಕುಡಿಯುತ್ತೇವೆ, ಯಾವಾಗ ಕುದಿಯುತ್ತೇವೆ ಎನ್ನುವುದೂ ಸಹ ಮುಖ್ಯ ವಾಗುತ್ತದೆ. ಕಾಫಿಯನ್ನು ಕುಡಿದ ಕೂಡಲೇ ರಕ್ತದ ಒತ್ತಡವು ಏರುತ್ತದೆ. ಹಾಗಾಗಿ ಬಿಪಿಯನ್ನು ಪರೀಕ್ಷೆ ಮಾಡುವ ಮೊದಲು ಕಾಫಿಯನ್ನು ಕುಡಿಯಬಾರದು. ಕೆಲವರು ಗಂಟೆ ಗಂಟೆಗೆಲ್ಲ ಕಾಫಿಯನ್ನು ಕುಡಿಯುತ್ತಲೇ ಇರುತ್ತಾರೆ.

ಹೀಗಾದಾಗ ಏರಿದ ಬಿಪಿ ಇಳಿಯುವುದೇ ಇಲ್ಲ. ಅನಿಯಂತ್ರಿತ ಬಿಪಿಯು ಹೃದ್ರೋಗಗಳಿಗೆ ಎಡೆ ಮಾಡಿಕೊಡಬಲ್ಲುದು. ಹಿತ
– ಮಿತವಾದ ಕಾಫಿಯು ಮಿದುಳಿನ ಚಟುವಟಿಕೆಯನ್ನು ಹಾಗೂ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎನ್ನುವುದು ನಿಜ. ಆದರೆ ಸ್ವಲ್ಪ ಹೆಚ್ಚು ಕುಡಿದರೆ ಅಸಿಡಿಟಿ ಹೆಚ್ಚಾಗಿ ಎದೆಯಲ್ಲಿ ಉರಿ, ನೋವು, ಸಂಕಟ ಕಂಡುಬರುತ್ತದೆ.