Tuesday, 22nd October 2024

ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಗಿ ಬಿದ್ದಿರುವ ದೃಶ್ಯ

ಕಾಬೂಲ್: ಯುದ್ಧಗ್ರಸ್ತ ಅಫ್ಘಾನಿಸ್ತಾನ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲು ತಾಲಿಬಾನ್ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಸಾವಿರಾರು ಮಂದಿ ನಾಗರಿಕರು ದೇಶ ತೊರೆಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಗಿ ಬಿದ್ದಿರುವ ದೃಶ್ಯ ಕಂಡುಬಂತು.

ಬಸ್ಸು ರೈಲುಗಳನ್ನು ಏರಲು ಜನಸಾಮಾನ್ಯರು ಗುಂಪುಗಟ್ಟಿ ಅದರ ಹಿಂದೆ ಓಡುವಂತೆ ವಿಮಾನ ಏರಲು ಶ್ರೀಮಂತ ಆಫ್ಘನ್ನರು ಮುಗಿಬಿದ್ದಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾಗರೋಪಾದಿಯಲ್ಲಿ ಜನ ಸಮೂಹ ನೆರೆದು ದೇಶ ತೊರೆ ಯಲು ತುದಿಗಾಲಲ್ಲಿ ನಿಂತಿದ್ದಾರೆ. ವಿಮಾನ ಏರಲು ಹಾಕುವ ಮೆಟ್ಟಿಲುಗಳನ್ನು ಸರದಿ ಪ್ರಕಾರ ಏರುವ ತಾಳ್ಮೆ ಇಲ್ಲದೆ ನೆಲದಿಂದಲೇ ಮಂಗಗಳಂತೆ ಮೇಲಕ್ಕೆ ಹಾರಿ, ಜನರನ್ನು ತಳ್ಳಾಡಿ ನುಗ್ಗುತ್ತಿರುವ ದೃಶ್ಯ ಕಂಡುಬಂತು.

ಇದಕ್ಕೂ ಮುನ್ನ ವಿಮಾನ ನಿಲ್ದಾಣಕ್ಕೆ ಹರಿದು ಬಂದ ಜನಸಮೂಹವನ್ನು ನಿಯಂತ್ರಿಸಲು ಅಮೆರಿಕ ತನ್ನ ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು. ಪರಿಸ್ಥಿತಿ ನಿಯಂತ್ರಣ ಮೀರಿದಾಗ ಅವರು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆಯೂ ವರದಿಯಾಗಿದೆ.