ಶಶಾಂಕಣ
ಶಶಿಧರ ಹಾಲಾಡಿ
ಗಾಂಧೀಜಿ ಎಂದಾಕ್ಷಣ ನೆನಪಾಗುವುದು ಹೋರಾಟ, ಅಹಿಂಸೆ ಮತ್ತು ಬಲಿದಾನ. ಗಾಂಧೀ ಜಯಂತಿ ಎಂದಾಗ ಕಣ್ಣೆದುರು
ಮೂಡುವುದು ತುಂಡು ಬಟ್ಟೆಯುಟ್ಟು, ಕೈಯಲ್ಲೊಂದು ಕೋಲು ಹಿಡಿದ ‘ಫಕೀರ’ ಮತ್ತು ಅವರು ನಮ್ಮ ದೇಶಕ್ಕಾಗಿ
ಮಾಡಿದ ತ್ಯಾಗ. ಹತ್ತೊಂಬತ್ತನೇಯ ಶತಮಾನದಲ್ಲೇ ಇಂಗ್ಲಿಷ್ ಕಲಿತು, ಬ್ಯಾರಿಸ್ಟರ್ ಆಗಿ, ಕಾನೂನು ಪ್ರಾಕ್ಟೀಸ್ ಮಾಡುತ್ತಿದ್ದ ಗಾಂಧೀಜಿ, ಮನಸ್ಸು ಮಾಡಿದ್ದರೆ ಸೂಟು ಬೂಟು ಧರಿಸಿದ ‘ಕಂದು ಸಾಹೇಬ’ರಾಗಬಹುದಿತ್ತು.
ಠೀಕು ಠಾಕಾಗಿ ಡ್ರೆಸ್ ಮಾಡಿಕೊಂಡು, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ, ಆಕರ್ಷಕವಾಗಿನಗುತ್ತಾ, ಕೋಟಿಗೆ ಒಂದು ಗುಲಾಬಿ ಸಿಕ್ಕಿಸಿಕೊಂಡು, ನಮ್ಮ ದೇಶದ ಪ್ರಧಾನ ಮಂತ್ರಿಯ ಹುದ್ದೆಯ ಮೇಲೆ ಕಣ್ಣುಹಾಕಬಹುದಿತ್ತು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಅವರು, ಮೊದಲಿನಿಂದಲೇ ಆ ಕುರಿತು ಯೋಚಿಸಿ, ಯೋಜಿಸಿದ್ದರೆ, ದೇಶದ ಮೊದಲ ಪ್ರಧಾನಮಂತ್ರಿ
ಆಗಬಹುದಿತ್ತು. ಅವರಿಗೆ ಇಂಗ್ಲಿಷ್ ಗೊತ್ತಿತ್ತು, ರಾಜಕೀಯ ಗೊತ್ತಿತ್ತು, ಹಿಂದು ಮುಸ್ಲಿಂ ಜನಾಂಗದ ಮನಸ್ಥಿತಿಯ ಆಳವಾದ ತಿಳಿವಳಿಕೆಯಿತ್ತು, ಎಲ್ಲಕ್ಕಿಂತ ಮಿಗಿಲಾಗಿ ಗ್ರಾಮೀಣ ಭಾರತದ ಬಡತನ ಗೊತ್ತಿತ್ತು.
ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯಾಗಲು ಈ ಎಲ್ಲಾ ಅರ್ಹತೆಗಳು ಬೇಕಷ್ಟಾಯಿತು. ಆದರೆ, ಅವರು ಅಂತಹ ಹುದ್ದೆಯ ಆಸೆಯಿಂದ ಬಹು ಎತ್ತರದಲ್ಲಿದ್ದ ನಾಯಕರಾಗಿದ್ದರು. 125 ವರ್ಷ ಬದುಕಿ, ತಾನು ಭಾರತದ ದೀನ ದಲಿತರ ಸೇವೆ ಮಾಡಿಕೊಂಡಿ ರುತ್ತೇನೆ ಎಂದು ಗಾಂಧೀಜಿ ಸಾಂದರ್ಭಿಕವಾಗಿ ಹೇಳಿದ್ದರು. ಆದರೆ ಅವರ ಆ ಆಸೆಯು 1947ರಲ್ಲಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿದ ವರ್ಷವೇ ಮಣ್ಣುಪಾಲಾಯಿತು. ನಮ್ಮ ದೇಶವನ್ನು ಎರಡು ಭಾಗ ಮಾಡಿದ ಬ್ರಿಟಿಷರು, ತಾವು ಈ ದೇಶವನ್ನು ಬಿಟ್ಟು ಹೋಗು ವಾಗ ಏನನ್ನು ಸಾಧಿಸಬೇಕೆಂದುಕೊಂಡಿದ್ದರೋ, ಅದನ್ನು ಸಾಧಿಸಿ ದ್ದರು. ಅಖಂಡ, ಶಕ್ತಿಶಾಲಿ ಭಾರತ ಉದಯಿಸಿದರೆ, ಮುಂದೆ ಬಿಳಿಯರ ವ್ಯಾಪಾರಕ್ಕೆ, ಶಕ್ತಿಗೆ ಸವಾಲಾಗಬಹುದೆಂದು ಸಕಾರಣವಾಗಿ ಗುರುತಿಸಿ, ಮಹಮದ್ ಆಲಿ ಜಿನ್ನಾನನ್ನು ನಾಯಕ ನನ್ನಾಗಿ ಬೆಳೆಸಿ, ಭಾರತವನ್ನು ಧರ್ಮದ ಆಧಾರದ ಮೇಲೆ ತುಂಡರಿಸುವ ಸಂಚನ್ನು ಯಶಸ್ವಿಯಾಗಿ ಕಾರ್ಯಗತ ಗೊಳಿಸಿದ್ದರು.
ಯಾವಾಗ ಅವಧಿಗೆ ಮುನ್ನವೇ ಭಾರತವನ್ನು ಬಿಟ್ಟು ಹೋಗುತ್ತೇವೆ (1948ರ ಬದಲು 1947) ಮತ್ತು ದೇಶವನ್ನು ವಿಭಜಿಸಿಯೇ ಹೋಗುತ್ತೇವೆ ಎಂದು ಬ್ರಿಟಿಷರು ಹೇಳಿದರೋ, ಆಗಲೇ ಗಾಂಧೀಜಿಯವರ ದೀರ್ಘ ಆಯಸ್ಸಿನ ಬಯಕೆ ಕಮರಿಹೋಯಿತು.
ದೇಶವನ್ನು ವಿಭಜಿಸುವುದಾದರೆ, ತನ್ನ ಮೃತದೇಹದ ಮೇಲೆ ವಿಭಜಿಸಿ ಎಂದು ಸವಾಲು ಹಾಕಿದ್ದ ಗಾಂಧೀಜಿಯವರ ಬಾಯಿ ಮುಚ್ಚಿಸಿ, ದೇಶವಿಭಜನೆಯನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ಬ್ರಿಟಿಷರು ಸೃಷ್ಟಿಸಿ ದ್ದರು.
ದೇಶ ಎರಡು ಭಾಗವಾಗುವುದು ನಿಶ್ಚಿತ ಎಂದು ಗೊತ್ತಾದಾಗ, ಗಾಂಧೀಜಿ ಮೌನಕ್ಕೆ ಶರಣಾದರು. ಇನ್ನು ತನಗೆ ಬದುಕುವ ಆಸೆ ಇಲ್ಲ ಎಂದು ಆತ್ಮೀಯರಲ್ಲಿ ಹೇಳಿಕೊಂಡರು. ಆದರೆ, ಆ ಬೊಚ್ಚು ಬಾಯಿಯ ನಾಯಕನ್ನು ಅದಾಗಲೇ ಕಾಂಗ್ರೆಸ್ ದೂರ ಮಾಡಲು ಆರಂಭಿಸಿತ್ತು. ಏಕೆಂದರೆ, ಅದಾಗಲೇ ಗಾಂಧೀಜಿಯವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದು ಹಕ್ಕೊತ್ತಾಯ ಆರಂಭಿಸಿದ್ದರು!
ಹಾಗೆ ನೋಡಿದರೆ, ಗಾಂಧೀಜಿಯವರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಚರ್ಚಿಲ್ ಅವರನ್ನು ಅರೆನಗ್ನ ಫಕೀರ ಎಂದು ಬಹಿರಂಗವಾಗಿಯೇ ಗೇಲಿ ಮಾಡಿದ್ದ. ಖಾಸಗಿಯಾಗಿ ಗಾಂಧೀಜಿಯವರ ಹಲವು ನಡೆಗಳನ್ನು ಅರೆಹುಚ್ಚು ತನಕ್ಕೆ ಹೋಲಿಸಿದವರೂ ಉಂಟು. ಗಾಂಧೀಜಿಯವರ ಸಾರ್ವಜನಿಕ ಮತ್ತು ವೈಯಕ್ತಿಕ ಜೀವನವನ್ನು ಗಮನಿಸಿದರೆ, ಅವರ ನಡೆನುಡಿ
ಗಳನ್ನು ಇಂದಿನ ಯಶಸ್ಸಿನ ಮಾನದಂಡದ ಮೂಲಕ ಅಳೆಯಲು ಎಂದಿಗೂ ಸಾಧ್ಯವಿಲ್ಲ. ಬ್ರಹ್ಮಚರ್ಯೆಯ ಪರೀಕ್ಷೆಗೆ ಅವರು ಅನುಸರಿಸುತ್ತಿದ್ದ ಪದ್ಧತಿಗಳನ್ನು ಇಂದು ಅರೆಹುಚ್ಚುತನ ಎಂದು ಯಾರಾದರೂ ಕರೆದರೆ ಅಚ್ಚರಿಯಾಗದು.
ಅದೇ ರೀತಿ, ಅವರು ಸಾರ್ವಜನಿಕ ಜೀವನದಲ್ಲಿ ವರ್ತಿಸುತ್ತಿದ್ದ ರೀತಿ, ನೀಡುತ್ತಿದ್ದ ಹೇಳಿಕೆಗಳು ಸಹ ಕೆಲವು ಬಾರಿ ವಿಚಿತ್ರವಾಗಿರು ತ್ತಿದ್ದವು. ನಮ್ಮನ್ನು ಆಳುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿ ಲಂಡನ್‌ಗೆ, ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಆಹ್ವಾನಿತರಾಗಿ ಹೋಗಿದ್ದಾಗ, ತುಂಡು ಬಟ್ಟೆಯನ್ನೇ ಹೊದ್ದು ಪಯಣಿಸಿದ್ದರು! ಸೂಟು ಬೂಟನ್ನು ತ್ಯಜಿಸಿ, ಭಾರತದ ಬಡರೈತನ ರೀತಿ ಬಟ್ಟೆ ಧರಿಸಿ, ಬ್ರಿಟಿಷರಿಗೆ ಸವಾಲೆಸೆದಿದ್ದರು. ನಿಮ್ಮ ಲೂಟಿಯಿಂದಾಗಿ, ಭಾರತದ ಬಡವನು ಈ ರೀತಿಯ ಬಟ್ಟೆ ಧರಿಸಬೇಕಾಗಿದೆ ಎಂದು ಅವರ ಮುಖಕ್ಕೆ ರಾಚುವಂತೆ ಹೇಳಿದ್ದರು. ಬ್ರಿಟಿಷರ ವಿರುದ್ಧ ಹೋರಾಡಲು ಅವರು ಆಯ್ಕೆೆಮಾಡಿಕೊಂಡ ಅಸ್ತ್ರವೆಂದರೆ ಅಹಿಂಸೆ!
ಅಂದೂ, ಇಂದೂ ಇದನ್ನು ಯಾರಾರದೂ ಒಂದು ಹುಚ್ಚುತನ ಎಂದರೆ, ಅದರಲ್ಲಿ ತುಸು ಸತ್ಯಾಂಶವಿದೆ! ಬಂದೂಕು, ಲಾಠಿ ಹಿಡಿದು, ಜನರ ಮೇಲೆ ಗುಂಡು ಹಾರಿಸಲು ತುದಿಗಾಲಲ್ಲಿ ನಿಂತಿದ್ದ ಬ್ರಿಟಿಷರ ವಿರುದ್ಧ, ಶಾಂತಿ ಶಾಂತಿ ಎನ್ನುತ್ತಾ ಅಹಿಂಸೆಯ
ಮಂತ್ರ ಪಠಿಸುತ್ತಿದ್ದ ಗಾಂಧೀಜಿ, ಅಂದಿನ ಜಗತ್ತಿಗೆ ಒಂದು ವಿಸ್ಮಯ. ಇಂದಿನವರಿಗೂ ಅವರೊಂದು ವಿಸ್ಮಯ. ಜಲಿಯನ್ ವಾಲಾಬಾಗ್‌ನಲ್ಲಿ, 1919ರ ಬೈಶಾಖಿ ಹಬ್ಬದ ದಿನ, 400 ಶಸ್ತ್ರರಹಿತ ನಾಗರಿಕರನ್ನು ಬ್ರಿಟಿಷ್ ಜನರಲ್ ಡಯರ್ ಗುಂಡಿಟ್ಟು ಸಾಯಿಸಿದ ನಂತರವೂ, ಗಾಂಧೀಜಿಯವರು ಅಹಿಂಸೆಯ ಮೇಲಿನ ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ಅದಕ್ಕೇ ಹೇಳುವುದು, ಗಾಂಧೀಜಿಯವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ! 1942ರಲ್ಲಿ, ಕ್ವಿಟ್ ಇಂಡಿಯಾ ಚಳವಳಿಗೆ ಗಾಂಧೀಜಿ ಕರೆಕೊಟ್ಟರು.
ಬ್ರಿಟಿಷರಿಗೆ ‘ಕ್ವಿಟ್ ಇಂಡಿಯಾ’ ಅಂದರೆ, ‘ಭಾರತ ಬಿಟ್ಟು ತೊಲಗಿ’ ಎಂದು ಹೇಳಲು ಪ್ರಯತ್ನಿಸಿದ ಈ ಚಳವಳಿಯನ್ನು ಸ್ಪಷ್ಟ ವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ಆ ಚಳವಳಿಯ ಕಾರ್ಯಸೂಚಿ ಎಂದರೆ, ನೀವು ಭಾರತವನ್ನು ಬಿಟ್ಟು ತೊಲಗಿ ಎಂದು ಬ್ರಿಟಿಷರನ್ನು ಆಗ್ರಹಿಸುವುದು. ಅಧಿಕಾರದ ಎಲ್ಲಾ ಸೂತ್ರಗಳನ್ನು ಹಿಡಿದಿದ್ದ, ಪೊಲೀಸ್ ಮತ್ತು ಸೇನೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದ, ಇಲ್ಲಿನ ಸಂಪನ್ಮೂಲಗಳನ್ನು ತಮ್ಮ ದೇಶಕ್ಕೆ ಸಾಗಿಸುತ್ತಿದ್ದ ಬ್ರಿಟಿಷರನ್ನು, ಶಾಂತರೀತಿಯಿಂದ ‘ನಮ್ಮ ದೇಶ ಬಿಟ್ಟು ಹೋಗಿ’ ಎಂದು ಒತ್ತಾಯಿಸುವುದು, ಅವರಿಗೆ ಅಸಹಕಾರ ತೋರುವುದು, ಕರನಿರಾಕರಣೆ ಮಾಡುವುದು, ಇವೇ ಮೊದಲಾದ ಕಾರ್ಯಸೂಚಿಗಳು ಈ ಚಳವಳಿಯಲ್ಲಿದ್ದವು. ಗಾಂಧೀಜಿ ನೀಡಿದ ಈ ಕರೆಯಲ್ಲಿ, ಬ್ರಿಟಿಷರನ್ನು ಒದ್ದು ಓಡಿಸುವ ಹೋರಾಟದ ಸ್ವರೂಪದ ಯಾವುದೇ ಕಾರ್ಯಸೂಚಿ, ಕಾರ್ಯ ತಂತ್ರ ಇರಲಿಲ್ಲ. ಬಂದೂಕು ಹಿಡಿದು ಅವರನ್ನು ಓಡಿಸುವ ಯಾವುದೇ ಹೋರಾಟವೂ ಇರಲಿಲ್ಲ. ಚಳವಳಿ ಆರಂಭವಾಗಬೇಕಿದ್ದ ಮುಂಜಾನೆ, ಬ್ರಿಟಿಷರು ಗಾಂಧೀಜಿ, ಕಸ್ತೂರಿಬಾ, ನೆಹರು ಮತ್ತು ಪ್ರಮುಖ ಕಾಂಗ್ರೆಸ್ ನಾಯಕರನ್ನು ತಣ್ಣಗೆ ಬಂಧಿಸಿ, ಜೈಲಿಗೆ ತಳ್ಳಿದರು.
ಯರವಾಡಾ ಜೈಲಿನಲ್ಲಿ ಕಸ್ತೂರಿಬಾ, ಮಹದೇವ ದೇಸಾಯಿ ಸತ್ತುಹೋದರು. ಕಾಂಗ್ರೆಸ್ ನಾಯಕರು ಬೇರೆ ಬೇರೆ ಸೆರೆಮನೆಯಲ್ಲಿ
ಕೊಳೆಯತೊಡಗಿದರು. ಇತ್ತ ಮಹಮದ್ ಆಲಿ ಜಿನ್ನಾ, ಬ್ರಿಟಿಷರಿಗೆ ಸಹಕರಿಸುತ್ತಾ, ಅವರ ಆತ್ಮೀಯನಾದ. 1945ರ ವೇಳೆ, ಗಾಂಧೀಜಿ ಮತ್ತು ಇತರ ಕಾಂಗ್ರೆಸ್ ನಾಯಕರು ಜೈಲಿನಿಂದ ಹೊರಬಂದು ನೋಡಿದರೆ, ಜಿನ್ನಾ ದೊಡ್ಡ ನಾಯಕನಾಗಿ ಬೆಳೆದಿದ್ದ. ಅಥವಾ ಬ್ರಿಟಿಷರು ಅವನನ್ನು ಆ ರೀತಿ ರೂಪಿಸಿದ್ದರು. ಜತೆಗೆ, ಜಿನ್ನಾನ ಹಕ್ಕೊತ್ತಾಯ ಎನಿಸಿದ್ದ ಧರ್ಮಾಧಾರಿತ ದೇಶವಿಭಜನೆಗೆ, ಬ್ರಿಟಿಷರು ಬಹುಮಟ್ಟಿಗೆ ಸಮ್ಮತಿ ನೀಡಿದ್ದರು.
ಗಾಂಧೀಜಿಯವರು, ಸದುದ್ದೇಶದಿಂದ 1942ರಲ್ಲಿ ಆರಂಭಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯು, ಅವರಿಗೆ ಅರಿವಿಲ್ಲದೇ, ಭಾರತದ ವಿಭಜನೆಗೆ ತನ್ನದೇ ಕೊಡುಗೆ ನೀಡಿದ್ದು ಹೀಗೆ. 1945ರಲ್ಲಿ ಜೈಲಿನಿಂದ ಬಿಡುಗಡೆಗೊಂಡ ಕಾಂಗ್ರೆಸ್ ನಾಯಕರನ್ನು ಜಿನ್ನಾ ಕೇವಲವಾಗಿ ನೋಡಿದ, ಆ ಮೂರು ವರ್ಷಗಳಲ್ಲಿ ಬ್ರಿಟಿಷರು ಬೆಳೆಸಿದ ಪರಿಣಾಮ ಅದು. ಆದರೆ, ಗಾಂಧೀಜಿಯವರು ಮಾತ್ರ ಅಖಂಡ ಭಾರತದ ಪ್ರಯತ್ನವನ್ನು ಮುಂದುವರಿಸಿದರು. ಜಿನ್ನಾಗೆ ಏನು ಬೇಕಾದರೂ ಕೊಡಿ, ಪ್ರಧಾನಿ ಹುದ್ದೆ ಕೊಡಿ, ಮಂತ್ರಿ
ಮಂಡಲವನ್ನೂ ಅವನೇ ರಚಿಸಲಿ, ದೇಶ ಅಖಂಡವಾಗಿರಲಿ ಎಂಬ ಮಟ್ಟಕ್ಕೆ ಬಂದರು. ಆದರೆ, ಜಿನ್ನಾ ಬೇಡಿಕೆ ಪ್ರತ್ಯೇಕ ಪಾಕಿಸ್ತಾನ. ಬ್ರಿಟಿಷರಿಗೂ ಅದೇ ಬೇಕಿತ್ತು ತಾನೆ!
ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳವಳಿಯನ್ನು ಹತ್ತಿಕ್ಕಿ, ಅದೇ ಸನ್ನಿವೇಶವನ್ನು ದೇಶ ವಿಭಜಿಸಲು ಪೂರಕವೆನಿಸುವಂತೆ ರೂಪಿಸಿದ್ದು ಬ್ರಿಟಿಷರ ತಂತ್ರಗಾರಿಕೆ. ಅಖಂಡ ಭಾರತ ಉಳಿಯುವುದಾದರೆ, ದೇಶದ ಪ್ರಧಾನಿ ಪದವಿಯನ್ನೇ ಜಿನ್ನಾಗೆ ತ್ಯಾಗ ಮಾಡಲು ಸಿದ್ಧರಿದ್ದ ಗಾಂಧೀಜಿಯವರನ್ನು ಅರ್ಥಮಾಡಿಕೊಳ್ಳುವುದು ಹೆಚ್ಚಿನವರಿಗೆ ಅಸಾಧ್ಯ. ಅದೇ ರೀತಿ, ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ, ಅವರು ದೂರದ ಕೊಲ್ಕೊತ್ತಾದ ರಕ್ತಸಿಕ್ತ ಬೀದಿಗಳಲ್ಲಿ ಏಕೆ ನಡೆದಾಡುತ್ತಿದ್ದರು ಎಂಬುದನ್ನು ಸಹ ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲಾರೆವು. ಇತ್ತ ನೆಹರೂ ದೆಹಲಿಯ ಕೆಂಪುಕೋಟೆಯಲ್ಲಿ, ಮೌಂಟ್ ಬ್ಯಾಟನ್ ಜತೆಯಲ್ಲಿ, ತ್ರಿವರ್ಣ ಧ್ವಜ ಏರಿಸುವಾಗ, ಗಾಂಧೀಜಿಯವರು ಕೊಲ್ಕೊತ್ತಾದಲ್ಲಿ ಕೋಮು ಸೌಹಾರ್ದತೆಗಾಗಿ ಪಾದಯಾತ್ರೆ ಮಾಡುತ್ತಿದ್ದರು ಎಂಬ ವಿಚಾರವೇ ಒಂದು ವಿಸ್ಮಯ.
ಗಾಂಧೀಜಿಯವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿಫಲರಾದ ಒಂದು ಪ್ರಮುಖ ಜನಸಮೂಹ ಎಂದರೆ, 1947ರ ಕಾಂಗ್ರೆಸಿಗರು. ಹೊಸ ಸರಕಾರ ರಚಿಸಿದ ಕಾಂಗ್ರೆಸ್‌ಗೆ, ದೇಶ ಕಟ್ಟುವ ಸವಾಲು, ಕೋಮು ಸೌಹಾರ್ದತೆ ಕಾಪಾಡುವ ಸವಾಲು, ಶಾಂತಿ ಸ್ಥಿರಪಡಿಸುವ ಸವಾಲು ಒಂದೆಡೆ ಯಾದರೆ, ಗಾಂಧೀಜಿಯವರ ಆಗ್ರಹಗಳನ್ನು ಪೂರೈಸುವ ಅನಿವಾರ್ಯತೆ ಇನ್ನೊಂದೆಡೆ.
15.8.1947ರ ನಂತರ, ದೆಹಲಿಯ ತುಂಬಾ ಪಾಕಿಸ್ತಾನದಿಂದ ಬಂದ ನಿರಾಶ್ರಿತರು ತುಂಬಿ ಹೋದರು. ಹೊಸ ರಾಜಧಾನಿಯ ಗಲ್ಲಿಗಳಲ್ಲಿ ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಬಡಿದಾಡತೊಡಗಿದರು. ದೆಹಲಿಯಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಗಾಂಧೀಜಿಯವರಿಂದ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ತಿಳಿಯಿತು. ಆದರೆ ಗಾಂಧೀಜಿಯವರ ಮನವನ್ನು ಅವರು ಪೂರ್ತಿಯಾಗಿ ಅರ್ಥಮಾಡಿಕೊಂಡಿರಲಿಲ್ಲವೆಂದೇ ಹೇಳಬೇಕು – ಸ್ವತಂತ್ರ ಭಾರತದಲ್ಲೂ ಗಾಂಧೀಜಿವರು ಉಪವಾಸದ ಅಸ್ತ್ರವನ್ನು ಪ್ರಯೋಗಿಸುತ್ತಾರೆಂದು ನೆಹರೂ, ಪಟೇಲ್ ಕನಸಿನಲ್ಲೂ ಊಹಿಸಿರಲಿಕ್ಕಿಲ್ಲ.
ದೆಹಲಿಯಲ್ಲಿ ಕೋಮು ಗಲಭೆಯನ್ನು ನಿಯಂತ್ರಿಸಲು, ಬಡಿದಾಡುತ್ತಿದ್ದ ಜನರ ಮನ ಪರಿವರ್ತನೆ ಮಾಡಲು ಗಾಂಧೀಜಿ ಉಪವಾಸ ಕುಳಿತರು. ದೆಹಲಿಯ ಮುಸ್ಲಿಮರನ್ನು ಸಹೋದರರಂತೆ ಕಾಣಬೇಕು ಎಂಬ ಅವರ ಆಗ್ರಹವನ್ನು ದೆಹಲಿಯ ಜನತೆ
ಪರಿಪಾಲಿಸಿದರು. ಆ ರೀತಿ ಬರಹದ ಮೂಲಕ ಗಾಂಧೀಜಿಗೆ ಭರವಸೆ ನೀಡಿದರು. ಸ್ವತಂತ್ರ ಭಾರತದಲ್ಲೂ ಗಾಂಧೀಜಿಯವರ ಉಪವಾಸದ ಅಸ್ತ್ರ ಯಶಸ್ವಿಯಾಗಿ ಕೆಲಸಮಾಡಿತ್ತು!
ಗಾಂಧೀಜಿಯವರು ಆದರ್ಶದ ಬೆನ್ನುಹತ್ತಿದ, ವಿಭಿನ್ನವಾಗಿ ಯೋಚಿಸುತ್ತಿದ್ದ, ಜಗತ್ತಿನಲ್ಲಿ ಶಾಂತಿ ನೆಲಸಬೇಕೆಂದು ಸದಾ ಹಂಬಲಿಸುತ್ತಿದ್ದ ಓರ್ವ ಸಂತ. ಆದ್ದರಿಂದಲೇ, ಅದಾಗಲೇ ಒಪ್ಪಿಕೊಂಡಂತೆ 55 ಕೋಟಿ ರುಪಾಯಿಗಳನ್ನು ಪಾಕಿಸ್ತಾನಕ್ಕೆ ನೀಡಬೇಕು ಎಂಬ ಆಗ್ರಹ ಸಹ ಅವರ ಉಪವಾಸದ ಒಂದು ಪ್ರಮುಖ ಕಾರಣ ಎನಿಸಿತ್ತು. ವಿಭಜನೆಗೊಂಡ ಕೂಡಲೇ, ಅಕ್ಟೋಬರ್ 1947ರಲ್ಲಿ ಭಾರತದ ಮೇಲೆ, ಕಾಶ್ಮೀರದಲ್ಲಿ ಅದಾಗಲೇ ಯುದ್ಧ ಸಾರಿದ್ದ ಪಾಕಿಸ್ತಾನಕ್ಕೆ, ರು.55 ಕೋಟಿ ಕೊಟ್ಟರೆ, ಆ
ಹಣವನ್ನು ಅವರು ಶಸ್ತ್ರಾಸ್ತ್ರ ಖರೀದಿಸಲು ಉಪಯೋಗಿಸಿ, ನಮ್ಮ ಮೇಲೆ ಪ್ರಯೋಗಿಸುತ್ತಾರೆಂದು, ಆ ಹಣವನ್ನು ನೆಹರೂ ಸರಕಾರ ತಡೆಹಿಡಿದಿತ್ತು. ಆದರೆ, ಗಾಂಧೀಜಿಯವರ ಉಪವಾಸವೆಂಬ ಅಸ್ತ್ರದ ಎದುರು, ಹೊಸ ಸರಕಾರ ಸೋತಿತು. ಪಾಕಿಸ್ತಾನಕ್ಕೆ ರು.55 ಕೋಟಿಯನ್ನು ಕಳುಹಿಸುತ್ತೇವೆಂದು ಗಾಂಧೀಜಿಯವರಿಗೆ ಭರವಸೆ ನೀಡಬೇಕಾಯಿತು. ಗಾಂಧೀಜಿ ಉಪವಾಸ ನಿಲ್ಲಿಸಿದರು. ಆದರೆ, ಸ್ವತಂತ್ರ ಭಾರತದ ಸರಕಾರಕ್ಕೆ, ಜನರಿಗೆ ಅವರು ಒಂದು ಹೊಸ ಸಂದೇಶ ನೀಡಿದ್ದರು ನನ್ನ ಆದರ್ಶಗಳನ್ನು ನೀವು ನಿರ್ಲಕ್ಷ್ಯ ಮಾಡಿದರೆ, ನಾನು ಉಪವಾಸ ಸತ್ಯಾಗ್ರಹ ಮಾಡಬಲ್ಲೆ! ಎಂದು.
ಅದಕ್ಕೇ ಹೇಳುವುದು, ಗಾಂಧೀಜಿಯವರನ್ನು, ಅವರ ಆದರ್ಶಗಳನ್ನು ಅರ್ಥಮಾಡಿಕೊಳ್ಳುವುದು ತುಸು ಕಷ್ಟ ಎಂದು. 1948ರ ಜನವರಿ ತಿಂಗಳಿನ ಆ ಚಳಿಯ ದಿನಗಳಲ್ಲಿ, ದೆಹಲಿಯಲ್ಲಿ ತುಂಬಿಕೊಂಡಿದ್ದ ಪಾಕಿಸ್ತಾನದಿಂದ ಬಂದಿದ್ದ ನಿರಾಶ್ರಿತರು, ಊಟ
ತಿಂಡಿಗಾಗಿ ಪರದಾಡುತ್ತಿದ್ದರು. ಅವರೆಲ್ಲರೂ ಪಾಕಿಸ್ತಾನದಲ್ಲಿ ನಡೆದ ಭೀಕರ ಹತ್ಯಾಕಾಂಡವನ್ನು ತಪ್ಪಿಸಿಕೊಂಡು, ಆಶ್ರಯ ಬಯಸಿ ಬಂದಿದ್ದ ಹತಭಾಗ್ಯರು. ಪ್ರತಿದಿನ ಬಿರ್ಲಾಭವನದಲ್ಲಿ ಪ್ರಾರ್ಥನಾ ಸಭೆಗೆ ಬರುತ್ತಿದ್ದ ನಿರಾಶ್ರಿತರನ್ನು ಸಂತೈಸುತ್ತಿದ್ದರು
ಗಾಂಧೀಜಿ. ಅದೆಷ್ಟೋ ನಿರಾಶ್ರಿತರು ಅಕ್ಷರಶಃ ಮೌನ ಜ್ವಾಲಾಮುಖಿಗಳು. ಪ್ರಾರ್ಥನಾ ಸಭೆಗೆ ಬರುವ ಕೆಲವರು ಗಾಂಧೀಜಿಯವರನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು.
ಗಾಂಧೀಜಿ ಸಾಯಲಿ ಎಂದು ಬಹಿರಂಗವಾಗಿ ಹೇಳಿದವರೂ ಉಂಟು. ಎಲ್ಲಕ್ಕೂ ಗಾಂಧೀಜಿಯವರದ್ದು ಶಾಂತಿ ಮಂತ್ರ, ಅಹಿಂಸೆಯ ಸೂತ್ರ. ಜೀವಕ್ಕೆ ಅಪಾಯವಿದ್ದರೂ, ಇನ್ನಷ್ಟು ಭದ್ರತಾ ಸಿಬ್ಬಂದಿ ಬೇಡ, ಕಠಿಣ ತಪಾಸಣೆ ಕೂಡದು ಎಂದಿದ್ದರು ಗಾಂಧೀಜಿ. ಇದನ್ನು ಆಗಿನ ಸರಕಾರವೂ, ಅದೇಕೋ, ಒಪ್ಪಿಕೊಂಡಿತ್ತು. ಬಿರ್ಲಾ ಮಂದಿರದಲ್ಲಿ ಜನವರಿಯಲ್ಲಿ ಸಣ್ಣ ಬಾಂಬ್
ಸ್ಪೋಟವಾಗಿದ್ದರೂ, ಭದ್ರತೆ ಬಿಗಿಯಾಗಲಿಲ್ಲ, ತಪಾಸಣೆ ತೀವ್ರವಾಗಲಿಲ್ಲ. ಜನವರಿ 30ರಂದು ಮಹಾರಾಷ್ಟ್ರದಿಂದ ಬಂದ ನಾಥುರಾಮ್ ಗೋಡ್ಸೆ ಹಾರಿಸಿದ ಗುಂಡಿಗೆ ಹುತಾತ್ಮರಾದಾಗ, ಗಾಂಧೀಜಿವರಿಗೆ 78 ವರ್ಷ ವಯಸ್ಸು.
ದೇಶಕ್ಕೆ ಸ್ವಾತಂತ್ರ್ಯ ದೊರೆತು ಅರ್ಧ ವರ್ಷ ಕಳೆಯುವ ಮುಂಚೆಯೇ, ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದರು ಗಾಂಧೀಜಿ. ಬಂದೂಕನ್ನು ಸಿಡಿಸುತ್ತಾ ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರ ಕಾಲದಲ್ಲಿ ಗಾಂಧೀಜಿ ಬದುಕಿದರು, ಬ್ರಿಟಿಷರು ಭಾರತ ಬಿಟ್ಟು ಹೋದ ತಕ್ಷಣ ಗುಂಡಿಗೆ ಬಲಿಯಾದರು! ಇದೆಂತಹ ವಿಪರ್ಯಾಸ ಅಲ್ಲವೆ!
ಅಹಿಂಸೆ, ಸರಳ ಜೀವನ, ಶಾಂತಿ, ಬಲಿದಾನದ ಮೂಲಕ ಗಾಂಧೀಜಿಯವರು, ಹೋರಾಟಕ್ಕೆ ಒಂದು ಹೊಸ ಅರ್ಥವನ್ನೇ ಬರೆದಿದ್ದಾರೆ. ಜೀವಮಾನದುದ್ದಕ್ಕೂ ಹೋರಾಟವನ್ನೇ ಮಾಡಿಕೊಂಡು ಬಂದ ಗಾಂಧೀಜಿಯವರು, ಕೊನೆಯ ದಿನಗಳಲ್ಲೂ, ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ ಶಾಂತಿ, ಸೌಹಾರ್ದ ಸ್ಥಾಪಿಸಲು ಹೋರಾಡುತ್ತಲೇ ಮಡಿದರು. ಆದರೆ ಗಾಂಧೀಜಿಯವರು ನಂಬಿದ್ದ, ಪಾಲಿಸಿಕೊಂಡು ಬಂದಿದ್ದ ತತ್ತ್ವಗಳನ್ನು ಅರ್ಥಮಾಡಿಕೊಳ್ಳುವುದು ಈ ಜಗತ್ತಿನ ಜನಸಾಮಾನ್ಯನಿಗೆ ನಿಜಕ್ಕೂ ಕಷ್ಟ.