Saturday, 21st September 2024

ತ್ಯಾಜ್ಯ ನೀರು ಸಂಸ್ಕರಣೆಯ ಸವಾಲು

ಅವಲೋಕನ
ಶ್ರೀನಿವಾಸುಲು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ

ನೀರು ಮಾನವನ ಅಸ್ತಿತ್ವದ ಅವಿಭಾಜ್ಯ ಅಂಗ. ನೀರಿಲ್ಲದೇ ಮಾನವ ಮತ್ತು ಇತರೆ ಜೀವ ಸಂಕುಲಗಳು ಭೂಮಿಯ ಮೇಲೆ ವಾಸಿಸುವುದು ಅಸಾಧ್ಯ. ಪರಿಸರದಲ್ಲಿ ನೀರು ಎಲ್ಲೆೆಡೆ ಹರಡಿದೆ. ಶೇಕಡ 70ರಷ್ಟು ಭೂ – ಭಾಗವು ನೀರಿನಿಂದ ಆವೃತವಾಗಿದೆ.
ಹೀಗಿದ್ದರೂ ಕುಡಿಯಲು ಯೋಗ್ಯವಾದ ನೀರು ಶೇಕಡ 0.03ಯಷ್ಟು ಮಾತ್ರ. ಈ ಅಮೂಲ್ಯ ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಆಧುನಿಕ ಮಾನವನ ಆರ್ಥಿಕ ಅಭಿವೃದ್ಧಿಯ ದುರಾಸೆಯಿಂದ ಕೈಗಾರಿಕೀಕರಣ, ನಗರೀಕರಣಗಳ ಹೆಚ್ಚಳ ದಿಂದಾಗಿ ಮಾಲಿನ್ಯದ ಪ್ರಮಾಣವು ಹೆಚ್ಚಾಗಿದೆ. ಇದರಿಂದ ನಿಸರ್ಗದ ವಿವಿಧ ಮೂಲಗಳ ಮೇಲೆ ತೀವ್ರ ಪರಿಣಾಮ ಉಂಟಾಗು ತ್ತಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡುವುದರ ಜತೆಗೆ ಪರಿಸರದ ಅಸಮತೋಲನಕ್ಕೂ ಕಾರಣವಾಗಿದೆ. ಈ ಆರ್ಥಿಕ ಚಟುವಟಿಕೆಗಳು ಜಲಮೂಲಗಳ ಪ್ರಮಾಣವನ್ನು ಕಡಿಮೆಗೊಳಿಸುವುದರ ಜತೆಗೆ ಗುಣಮಟ್ಟ ವನ್ನು ಹಾಳು ಮಾಡಿ, ಕುಡಿಯಲು ಹಾಗೂ ಇತರ ಬಳಕೆಗೆ ಯೋಗ್ಯವಾಗದಂತೆ ಮಲಿನಗೊಂಡಿದೆ.

ಜಲಮಾಲಿನ್ಯವನ್ನು ತಡೆಗಟ್ಟಿ ಜಲಮೂಲಗಳ ಸಂರಕ್ಷಣೆಯಲ್ಲಿ ತಂತ್ರಜ್ಞಾನವು ಹೆಚ್ಚು ಸಹಕಾರಿಯಾಗುತ್ತದೆ. ಮಲಿನಗೊಂಡ ಕಲುಷಿತ ನೀರು ಹಾಗೂ ರೊಚ್ಚು ನೀರನ್ನು ವೈಜ್ಞಾನಿಕವಾಗಿ (ಕಲುಷಿತ ನೀರು ಮತ್ತು ರೊಚ್ಚು ನೀರು) ಸಂಸ್ಕರಣಾ ಘಟಕ ಗಳಲ್ಲಿ, 2 ಮತ್ತು 3 ಹಂತಗಳಲ್ಲಿ ಸಂಸ್ಕರಿಸಿ, ಕುಡಿಯಲು ಬಿಟ್ಟು ಇತರ ದೈನಂದಿನ ಬಳಕೆಗೆ ಬಳಸಬಹುದಾಗಿದೆ. ಇದರಿಂದ ಜಲಮೂಲಗಳು ಮಾಲಿನ್ಯವಾಗುವುದನ್ನು ತಡೆಗಟ್ಟುವುದರ ಜೊತೆಗೆ, ಪರಿಸರದಲ್ಲಿ ನೈಸರ್ಗಿಕವಾಗಿ ನೀರು ಉತ್ಪಾದನೆಯಾಗಲು ಬೇಕಾಗುವ ಸಮಯವನ್ನು ನೀಡಲು ಸಹಕಾರಿಯಾಗುವುದಲ್ಲದೇ ಸುಸ್ಥಿರ ಅಭಿವೃದ್ಧಿಯನ್ನು ಅಳವಡಿಸಲು ಅನುಕೂಲವಾಗು ತ್ತದೆ.

ಜಲಮಾಲಿನ್ಯವು ಜಾಗತಿಕ ವಿಷಯವಾಗಿದ್ದು ಮುಂದುವರಿದ ರಾಷ್ಟ್ರಗಳಲ್ಲಿ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ರಾಷ್ಟ್ರೀಯ ವಿಷಯವಾಗಿ ಚರ್ಚೆಯಲ್ಲಿದೆ. ಹಲವಾರು ನಗರ ಪಟ್ಟಣಗಳಲ್ಲಿ ಜಲ ಮಾಲಿನ್ಯ ಮತ್ತು ಅಗತ್ಯ ನೀರಿನ ಪ್ರಮಾಣದ
ಕೊರತೆಯು ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸೂಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ಅಗತ್ಯ ವಿದೆ.

ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಂತೆ, ದೇಶದ ಇತರ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕ ರಾಜ್ಯದಲ್ಲಿಯೂ ನೀರಿನ ಕೊರತೆ ಇದೆ. ರಾಜ್ಯದ ಹಲವು ನಗರಗಳಲ್ಲಿ ಅಂತರ್ಜಲ ಹಾಗೂ ಮೇಲ್ಮೆೆ ನೀರಿನ ಮೂಲಗಳು ಕಡಿಮೆಯಾಗುತ್ತಿದ್ದು, ರೊಚ್ಚುನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿ ವೈಜ್ಞಾನಿಕವಾಗಿ ಸಂಸ್ಕರಿಸಿ ಪುನರ್ಬಳಕೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ಅಧ್ಯಯನಗಳ ಪ್ರಕಾರ 2037ರ ವೇಳೆಗೆ ರಾಜ್ಯದಲ್ಲಿ ಪ್ರತಿನಿತ್ಯ 8314 ದಶಲಕ್ಷ ಲೀಟರ್ ತ್ಯಾಜ್ಯನೀರು ಉತ್ಪತ್ತಿಯಾಗುತ್ತದೆ. ಅಲ್ಲದೇ ಮುಂಬರುವ ವರ್ಷ ಕರ್ನಾಟಕದಲ್ಲಿ ದಿನೇ ದಿನೇ ತ್ಯಾಜ್ಯನೀರು ಉತ್ಪತ್ತಿ ಹೆಚ್ಚುತ್ತಲೇ ಹೋಗಬಹುದಿದ್ದು, ಉತ್ಪತ್ತಿಗೆ ಅನುಗುಣ ವಾಗಿ ತ್ಯಾಜ್ಯನೀರು ಸಂಸ್ಕರಣ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಕೊಳ್ಳಬೇಕಾಗುವುದೆಂದು ಅಂದಾಜು ಮಾಡಲಾಗಿದೆ. ರಾಜ್ಯದಲ್ಲಿ 2011ರ ಜನಗಣತಿ ಆಧಾರದ ಮೇಲೆ ಜನಸಂಖ್ಯೆ ಸುಮಾರು 6.10 ಕೋಟಿ ಇದ್ದು, ಅನುಪಾತಕ್ಕೆ ಅನುಗುಣವಾಗಿ
2037ರ ವೇಳೆಗೆ ರಾಜ್ಯದ ಜನಸಂಖ್ಯೆ ಸುಮಾರು 7.69 ಕೋಟಿಗೆ ಏರಲಿದೆ. ಹೆಚ್ಚಾಗಲಿರುವ ಜನಸಂಖ್ಯೆಗೆ ಅನುಗುಣವಾಗಿ 2037ರ ಸುಮಾರಿನಲ್ಲಿ ಪ್ರತಿನಿತ್ಯ 8314 ದಶಲಕ್ಷ ಲೀಟರ್ ತ್ಯಾಜ್ಯನೀರು ಉತ್ಪತ್ತಿಯಾಗುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಪ್ರಸ್ತುತ 3356.5 ದಶಲಕ್ಷ ಲೀಟರ್ ತ್ಯಾಜ್ಯನೀರು ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಹೆಚ್ಚು ರೊಚ್ಚು ನೀರು ಉತ್ಪತ್ತಿ ಯಾಗುತ್ತಿರುವುದು ಬೆಂಗಳೂರು ನಗರದಿಂದ. ಇದಕ್ಕೆ ಪ್ರಮುಖ ಕಾರಣವೂ ನಗರೀಕರಣವಾಗಿದೆ. ಬೆಂಗಳೂರು ನಗರದಲ್ಲಿ ದಿನಂಪ್ರತಿ 1440 ದಶಲಕ್ಷ ತ್ಯಾಜ್ಯನೀರು ಉತ್ಪತ್ತಿಯಾಗುತ್ತಿದೆ. ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಪ್ರತಿನಿತ್ಯ 1157 ದಶಲಕ್ಷ ತ್ಯಾಜ್ಯನೀರನ್ನು ಸಂಸ್ಕರಿಸುವ ಸಂಸ್ಕರಣ ಘಟಕಗಳ ಸಾಮರ್ಥ್ಯವನ್ನು ಹೊಂದೆ. ಹೀಗೆ ಶುದ್ಧೀಕರಣಗೊಳ್ಳುತ್ತಿರುವ ತ್ಯಾಜ್ಯನೀರಿನಲ್ಲಿ ಪ್ರತಿನಿತ್ಯ 890 ದಶಲಕ್ಷ ಲಿಟರ್ ನೀರನ್ನು ಮರುಬಳಕೆ ಮಾಡಿಕೊಳ್ಳುತ್ತಿದೆ.

ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಪ್ರತಿನಿತ್ಯ 400 ದಶಲಕ್ಷ ಲೀಟರ್, ಚಿಕ್ಕಬಳ್ಳಾಪುರ ಕೆರೆಗಳನ್ನು ತುಂಬಿಸಲು ಪ್ರತಿನಿತ್ಯ 100 ದಶಲಕ್ಷ ಲೀಟರ್ ಸಂಸ್ಕರಿತ ನೀರನ್ನು ಬಳಸುತ್ತಿದೆ. ಪ್ರತಿನಿತ್ಯ ಉಳಿಕೆಯಾಗುವ 390 ದಶಲಕ್ಷ ಲೀಟರ್ ನೀರನ್ನು
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಲಾಲ್‌ಬಾಗ್, ಕಬ್ಬನ್ ಪಾರ್ಕ್, ಗಾಲ್ಫ್ ಕ್ಲಬ್ ಬಳಕೆಗೆ ಒದಗಿಸಲಾಗುತ್ತಿದೆ.
ರಾಜ್ಯದ ಉಳಿದ ನಗರಗಳ ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ಪ್ರತಿನಿತ್ಯ 1559 ದಶಲಕ್ಷ ಲೀಟರ್ ಹಾಗೂ ಕೆಯುಐಡಿಎಫ್‌ಸಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ 357.5 ದಶಲಕ್ಷ ಲೀಟರ್ ತ್ಯಾಜ್ಯನೀರು ಉತ್ಪತ್ತಿಯಾಗುತ್ತಿದೆ.

ಪೌರ ನಿರ್ದೇಶನಾಲಯ ಪ್ರತಿನಿತ್ಯ 1074.5 ದಶಲಕ್ಷ ತ್ಯಾಜ್ಯನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಕೆಯುಐಡಿಎಫ್‌ಸಿ ಪ್ರತಿನಿತ್ಯ 329.5 ದಶಲಕ್ಷ ಲೀಟರ್ ಅಶುದ್ಧ ನೀರನ್ನು ಶುದ್ಧೀಕರಿಸುವ ಸೌಲಭ್ಯವನ್ನು ಹೊಂದಿದೆ. ಪೌರ
ನಿರ್ದೇಶನಾಲಯ ಪ್ರತಿ ನಿತ್ಯ 618.5 ದಶಲಕ್ಷ ಲೀಟರ್ ಹಾಗೂ ಕೆಯುಐಡಿಎಫ್‌ಸಿ ಪ್ರತಿನಿತ್ಯ 195.5 ದಶಲಕ್ಷ ಲೀಟರ್ ಶುದ್ಧೀ ಕರಿಸಿದ ನೀರನ್ನು ಮರುಬಳಕೆ ಮಾಡಿಕೊಳ್ಳುತ್ತಿವೆ.

ರಾಜ್ಯದಲ್ಲಿ ಒಟ್ಟಾರೆ ಪ್ರತಿನಿತ್ಯ 3356.5 ದಶಲಕ್ಷ ತ್ಯಾಜ್ಯನೀರು ಉತ್ಪತ್ತಿಯಾಗುತ್ತಿದ್ದು, ಈ ಪೈಕಿ ಪ್ರತಿನಿತ್ಯ 2561 ದಶಲಕ್ಷ ಅಶುದ್ಧ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಲಾಗಿದೆ. ಹೀಗೆ ಉತ್ಪತ್ತಿಯಾಗುತ್ತಿರುವ ಶುದ್ಧೀಕರಿಸಿದ ನೀರಿನಲ್ಲಿ ಪ್ರತಿನಿತ್ಯ 1704 ದಶಲಕ್ಷ ಲೀಟರ್ ನೀರನ್ನು ಮರು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಶೇ.66.53 ರಷ್ಟು ಶುದ್ಧೀಕರಿಸಿದ ನೀರು ಉಪಯೋಗಕ್ಕೆ ಬರುತ್ತಿದೆ. ರಾಜ್ಯದಲ್ಲಿ ಒಂದು ಬೃಹತ್ ಮಹಾನಗರಪಾಲಿಕೆ ಹಾಗೂ 287 ಸ್ಥಳೀಯ ನಗರ ಸಂಸ್ಥೆಗಳಿದ್ದು, 146 ಕೊಳಚೆನೀರು ಶುದ್ಧೀಕರಣ ಘಟಕಗಳಿವೆ.

ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ 29, ಪೌರ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ 95, ಕೆಯುಐಡಿಎಫ್‌ಸಿ ವ್ಯಾಪ್ತಿಯಲ್ಲಿ 20 ಹಾಗೂ ಇನ್ನಿತರ 2 ಸೇರಿದಂತೆ 146 ತ್ಯಾಜ್ಯನೀರು ಶುದ್ಧೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 2561 ದಶಲಕ್ಷ
ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಈಗ ಕಾರ್ಯನಿರ್ವಹಿಸುತ್ತಿರುವ 146 ತ್ಯಾಜ್ಯನೀರು ಸಂಸ್ಕರಣ ಘಟಕಗಳೊಂದಿಗೆ ಇನ್ನೂ 137 ಸಂಸ್ಕರಣ ಘಟಕಗಳನ್ನು ಸ್ಥಾಪಿಸುವ ಯೋಜನೆ ಪ್ರಗತಿಯಲ್ಲಿದೆ. ಬೆಂಗಳೂರು ಜಲಮಂಡಳಿ 10, ಪೌರ ನಿರ್ದೇಶನಾಲಯ 75, ಕೆಯುಐಡಿಎಫ್‌ಸಿ 4 ಹಾಗೂ ಎಫ್.ಎಸ್.ಎಸ್.ಎಂ (ಫೀಕಲ್ ಸ್ಲಡ್ಜ್‌ ಅಂಡ್ ಸೆಪ್ಟೇಜ್ ಮ್ಯಾನೇಜ್
ಮೆಂಟ್) ಸೇರಿದಂತೆ 48 ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಿದೆ.

ರಾಜ್ಯದ 17 ಪ್ರಮುಖ ನದಿಗಳ ಕೆಲವು ಸ್ಥಳಗಳಲ್ಲಿ ತ್ಯಾಜ್ಯನೀರು ಸೇರಿಕೊಳ್ಳುತ್ತಿದ್ದು, ನದಿಗಳು ಕಲುಷಿತಗೊಳ್ಳಲು ಕಾರಣವಾಗಿವೆ. 17 ನದಿಗಳಿಗೆ ಬಂದು ಸೇರುತ್ತಿರುವ 140 ಮಳೆನೀರು ತೊರೆಗಳಲ್ಲಿ ತ್ಯಾಜ್ಯನೀರು ಮಿಶ್ರಣಗೊಂಡು ನದಿಗಳನ್ನು ಸೇರುತ್ತಿವೆ. ಬೆಂಗಳೂರಿಗೆ ನೀರು ಸರಬರಾಜಗುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುವ ಅರ್ಕಾವತಿ ನದಿಗೆ 16 ಮಳೆನೀರು ತೊರೆಗಳು ಬಂದು ಸೇರುತ್ತಿವೆ.

ಕಟ್ಟೆಮಳವಾಡಿಯಿಂದ ಹುಣಸೂರು ನಗರದವರೆಗೆ ಲಕ್ಷ್ಮಣತೀರ್ಥಕ್ಕೆ 2 ತೊರೆಗಳಲ್ಲಿ ನೀರು ಸೇರ್ಪಡೆಯಾಗುತ್ತಿದೆ. ಖಾನಾಪುರದಿಂದ ರಾಮದುರ್ಗದವರೆಗೆ 18 ತೊರೆಗಳು ಮಲಪ್ರಭಾ ನದಿಗೆ ಹಾಗೂ ಹರಿಹರದಿಂದ ಹರಳಹಳ್ಳಿವರೆಗೆ 9 ತೊರೆಗಳು
ತುಂಗಭದ್ರ ನದಿಗೆ ಬಂದು ಸೇರುತ್ತಿವೆ. ಹೊಳೆಹೊನ್ನೂರಿನಿಂದ ಭದ್ರಾವತಿಯವರೆಗೆ 6 ಸ್ಥಳಗಳಲ್ಲಿ ಬರುವ ತೊರೆಗಳು ಭದ್ರಾ ನದಿಯನ್ನು ಕೂಡಿಕೊಳ್ಳುತ್ತಿವೆ. ಜೀವನಾಡಿ ಕಾವೇರಿ ನದಿಗೆ ರಂಗನತಿಟ್ಟು ಸ್ಥಳದಿಂದ ಸತ್ಯಗಾಲ ಸೇತುವೆಯವರೆಗೆ 19 ಸ್ಥಳಗಳಲ್ಲಿ ತೊರೆಗಳು ಸೇರ್ಪಡೆಯಾಗುತ್ತವೆ.

ನಂಜನಗೂಡಿನಿಂದ ಹೆಜ್ಜಿಗೆಯವರೆಗೆ ಕಬಿನಿ ನದಿಗೆ 5 ಸ್ಥಳಗಳಲ್ಲಿ ಕಾಲುವೆಗಳು ಕೂಡಿಕೊಳ್ಳುತ್ತವೆ. ಶಹಬಾದ್ ಹಾಗೂ ಹೊನ್ನಗುಂಟ ನಡುವೆ ಕಾಗಿನಿ ನದಿಗೆ ಒಂದು ತೊರೆ ಸೇರುತ್ತಿದೆ. ಹಸ್ನಾಮಾಡ್ ಹಾಗೂ ಬೊಮ್ಮನಹಳ್ಳಿ ಜಲಾಶಯದ ನಡುವೆ ಕಾಳಿ ನದಿಗೆ 4 ತೊರೆಗಳು ಬಂದು ಸೇರಿಕೊಳ್ಳುತ್ತಿವೆ. ಯದುರವಾಡಿ ಹಾಗೂ ತಿಂತಿಣಿ ಸೇತುವೆ ನಡುವೆ ಕೃಷ್ಣ ನದಿಗೆ ಅತಿ ಹೆಚ್ಚು 26 ತೊರೆಗಳು ಬಂದು ಸೇರುತ್ತಿವೆ. ಯಡೆಯೂರು ಹಾಗೂ ಹಲಗೂರು ನಡುವೆ ಶಿಂಶಾ ನದಿಗೆ ಒಂದು ಕಾಲುವೆ ಹರಿದು
ಬರುತ್ತಿದೆ. ಅಸಂಗಿ ಜೊತೆಗಿನ ಕೃಷ್ಣ ನದಿಗೆ ಅಸಂಗಿ ಬ್ಯಾರೇಜ್ ಬಳಿ 1 ತೊರೆ ಸೇರುತ್ತಿದೆ. ಗಾಣಗಪುರ ಮತ್ತು ಯಾದಗಿರಿ ನಡುವೆ ಭೀಮಾ ನದಿಗೆ 3 ತೊರೆಗಳು ಕೂಡಿಕೊಂಡರೆ, ಶಿವಮೊಗ್ಗದಿಂದ ಕೂಡ್ಲಿವರೆಗೆ ತುಂಗಾ ನದಿಗೆ 6 ತೊರೆಗಳು ಸೇರುತ್ತಿವೆ.

ಕುಮಾರಧಾರ ನದಿಗೆ ಉಪ್ಪಿನಂಗಡಿ ಬಳಿ ಮತ್ತು ಉಪ್ಪಿನಂಗಡಿಯಿಂದ ಮಂಗಳೂರುವರೆಗೆ ನೇತ್ರಾವತಿ ನದಿಗೆ ಒಟ್ಟು 13 ಕಾಲುವೆಗಳು ಕೂಡುತ್ತಿವೆ. ಯಗಚಿಯಿಂದ ಹಾಸನದವರೆಗೆ ಯಗಚಿ ನದಿಗೆ 2 ತೊರೆಗಳು ಸೇರ್ಪಡೆಯಾಗುತ್ತಿವೆ. ರಾಜ್ಯದ 17 ನದಿಗಳಿಗೆ 140 ಸ್ಥಳಗಳಲ್ಲಿ ಸೇರುತ್ತಿರುವ ತೊರೆಗಳಲ್ಲಿ ಹರಿದು ಬರುವ ತ್ಯಾಜ್ಯನೀರು ನದಿಗಳನ್ನು ಸೇರುವುದನ್ನು ತಡೆಯಲು
ಸಂಪೂರ್ಣವಾಗಿ ತ್ಯಾಜ್ಯನೀರನ್ನು ಸಂಸ್ಕರಿಸಿ ಹಾಯಿಸುವ ಯೋಜನೆಗಳು ಶೇಕಡ ನೂರರಷ್ಟು ಕಾರ್ಯಗತವಾಗಬೇಕಿದೆ.

ಪ್ರಮುಖವಾಗಿ ತ್ಯಾಜ್ಯನೀರು ಸಂಸ್ಕರಣೆ ಮತ್ತು ನಿರ್ವಹಣೆಯಲ್ಲಿ ಕೇಂದ್ರಿಕೃತ ವ್ಯವಸ್ಥೆಯನ್ನು ಅಳವಡಿಸಿ ಸಣ್ಣ ಸಣ್ಣ ಸಂಸ್ಕರಣಾ ಘಟಕಗಳಲ್ಲಿ, ತ್ಯಾಜ್ಯ ನೀರು ಉತ್ಪತ್ತಿಯಾಗುತ್ತದೆಯೋ ಅಲ್ಲಿಯೇ ಸಂಸ್ಕರಿಸಿ ವಿಲೇವಾರಿ ಮಾಡುವುದು ಹೆಚ್ಚು
ಸೂಕ್ತವೆನಿಸುತ್ತದೆ. ಈ ರೀತಿ ಸಂಸ್ಕರಿಸಲಾದ ನೀರನ್ನು ಬಳಕೆಗೆ ಅನುಗುಣವಾಗಿ ಅಂದರೆ ಅಂತರ್ಜಲ ಮರುಪೂರಣ, ಪಾರ್ಕ್‌ಗಳ ನಿರ್ವಹಣೆ, ತೋಟಗಾರಿಕೆ/ ವ್ಯವಸಾಯಕ್ಕೆ ಅಥವಾ ಕಟ್ಟಡ ಕಾಮಗಾರಿಗಳಿಗೆ ಬಳಸಬಹುದು. ಇದರಿಂದ ನೀರಿನ ಸಮರ್ಥ ಬಳಕೆಯಾಗುತ್ತದೆ, ಅಲ್ಲದೇ ಪರಿಸರದ ಸಮತೋಲನವನ್ನು ಕಾಪಾಡಬಹುದು.