Saturday, 21st September 2024

ಸಂಭಾವಿತ ಜಸ್ವಂತ್‍ಗೆ ನಿಶ್ಚಲವಾದ ಕಾಲ

ಅಭಿವ್ಯಕ್ತಿ
ಎಂ.ಜೆ.ಅಕ್ಬರ್, ಸಂಸದ, ಹಿರಿಯ ಪತ್ರಕರ್ತ

ಮೃದು ಸ್ವಭಾವದ, ಸೂಕ್ಷ್ಮ ವಿವೇಚನೆಯ ಮೇಜರ್ ಜಸ್ವಂತ್ ಸಿಂಗ್ ಜಸೋಲ್ ಜೊತೆ ನಾನು ನಡೆಸಿದ ಕೊನೆಯ ಮಾತುಕತೆಯ ಒಂದು ವಿವರ ಬಹಳ ಸ್ಪಷ್ಟವಾಗಿ, ಯಾವ ಅನುಮಾನವೂ ಇಲ್ಲದೆ ನೆನಪಾಗುತ್ತಿದೆ. ಕಾಕತಾಳೀಯ ವೆಂಬಂತೆ ಅವರು  ಕೋಮಾ ಕ್ಕೆ ಜಾರುವ ಮುನ್ನಾದಿನವಷ್ಟೇ ನಡೆದ ಮಾತುಕತೆಯದು. ಅದರಲ್ಲಿ ರಾಜಕೀಯದ ಲವಲೇಶವೂ ಇರಲಿಲ್ಲ.

ನಾವು ಮಾತನಾಡಿದ್ದು ಪುಸ್ತಕಗಳ ಬಗ್ಗೆೆ. ದೊಡ್ಡ ದೊಡ್ಡ ಪುಸ್ತಕಗಳಿಂದ ತುಂಬಿದ ತಮ್ಮ ಆಫೀಸಿನಲ್ಲಿ ಇಲ್ಲದಿದ್ದಾಗಲೂ ಬಹುಶಃ ಅವರು ಪುಸ್ತಕಗಳ ನಡುವೆಯೇ ಇರುತ್ತಿದ್ದರೆಂದು ತೋರುತ್ತದೆ. ಏಕೆಂದರೆ ಜ್ಞಾನ ಅವರ ಸುತ್ತಲ ಗಾಳಿಯಲ್ಲಿ ಸದಾ ತೇಲಾಡುತ್ತಿತ್ತು. ಖುಷಿಖುಷಿಯ ಹರಿತ ಮಾತು ಹಾಗೂ ಪ್ರಬುದ್ಧ ವಿಶ್ಲೇಷಣೆಗಳು ಅವರ ಮಾತಿನಲ್ಲಿ ಸದಾ ಗುಂಯ್‌ಗುಡುತ್ತಿದ್ದವು.

ಸೆಲೆಕ್ಟಿವ್ ಆಗದೆ ನೆನಪಿಗೆ ಬೇರೇನು ತಾನೆ ಆಯ್ಕೆಯಿದೆ? ಕಾಲದ ಮೇಲೆ ಅತಿ ಎನ್ನಿಸುವಷ್ಟು ನೆನಪುಗಳು ತೇಲಾಡುತ್ತವೆ. ನಶ್ವರ
ಸಂಗತಿಗಳ ಮೇಲೆ ಯಾರು ನೆನಪಿನ ಕೋಗಳನ್ನು ವ್ಯರ್ಥ ಮಾಡಲು ಬಯಸುತ್ತಾರೆ ಹೇಳಿ. ಅದೇ ವೇಳೆ, ನೆನಪು ಆಯಸ್ಕಾಂತೀಯ ವಾಗಿರಬಹುದು, ಹಿಂದೆಂದೋ ಖುಷಿಪಟ್ಟ ಕ್ಷಣವನ್ನು ಮತ್ತೆ ಉಳಿಯಲ್ಲಿ ಕೆತ್ತಿ ನಯ ಮಾಡಿದಂತೆ ಎತ್ತಿ ತೋರಿಸುವಂಥದ್ದಿರ ಬಹುದು ಅಥವಾ ಆ ನೆನಪು ನಮ್ಮ ಅಂತಃಸಾಕ್ಷಿಯ ಎರಡನೇ ಪದರದ ಮೇಲೆ ಯಥಾವತ್ತು ಪಡಿಮೂಡಿರಬಹುದು.

ಮೃದು ಸ್ವಭಾವದ, ಸೂಕ್ಷ್ಮ ವಿವೇಚನೆಯ ಮೇಜರ್ ಜಸ್ವಂತ್ ಸಿಂಗ್ ಜಸೋಲ್ ಜೊತೆ ನಾನು ನಡೆಸಿದ ಕೊನೆಯ ಮಾತುಕತೆಯ ಒಂದು ವಿವರ ಬಹಳ ಸ್ಪಷ್ಟವಾಗಿ, ಯಾವ ಅನುಮಾನವೂ ಇಲ್ಲದೆ ನೆನಪಾಗುತ್ತಿದೆ. ಕಾಕತಾಳೀಯವೆಂಬಂತೆ ಅವರು ಕೋಮಾಕ್ಕೆ ಜಾರುವ ಮುನ್ನಾದಿನವಷ್ಟೇ ನಡೆದ ಮಾತುಕತೆಯದು. ಅದರಲ್ಲಿ ರಾಜಕೀಯದ ಲವಲೇಶವೂ ಇರಲಿಲ್ಲ. ನಾವು ಮಾತನಾಡಿದ್ದು ಪುಸ್ತಕಗಳ ಬಗ್ಗೆ. ದೊಡ್ಡ ದೊಡ್ಡ ಪುಸ್ತಕಗಳಿಂದ ತುಂಬಿದ ತಮ್ಮ ಆಫೀಸಿನಲ್ಲಿ ಇಲ್ಲದಿದ್ದಾಗಲೂ ಬಹುಶಃ ಅವರು ಪುಸ್ತಕಗಳ ನಡುವೆಯೇ ಇರುತ್ತಿದ್ದರೆಂದು ತೋರುತ್ತದೆ. ಏಕೆಂದರೆ ಜ್ಞಾನ ಅವರ ಸುತ್ತಲ ಗಾಳಿಯಲ್ಲಿ ಸದಾ ತೇಲಾಡು ತ್ತಿತ್ತು. ಖುಷಿಖುಷಿಯ ಹರಿತ ಮಾತು ಹಾಗೂ ಪ್ರಬುದ್ಧ ವಿಶ್ಲೇಷಣೆಗಳು ಅವರ ಮಾತಿನಲ್ಲಿ ಸದಾ ಗುಂಯ್‌ಗುಡುತ್ತಿದ್ದವು.

ಹಳೆಯ ಪುಸ್ತಕದ ಮರಣೋತ್ತರ ಪರೀಕ್ಷೆ ನಡೆಸುವುದಕ್ಕಿಂತ ಹೆಚ್ಚಾಗಿ ಮುಂದೆ ಬರಲಿರುವ ಪುಸ್ತಕದ ಬಗ್ಗೆ ಚರ್ಚೆ ನಡೆಸುವುದು ನಮ್ಮಿಬ್ಬರಿಗೂ ಇಷ್ಟ. ನಾವು ಬರೆಯುವ ಪುಸ್ತಕ ಅದಕ್ಕೂ ಬಹಳ ಮುಂಚೆಯೇ ನಮ್ಮ ಮನಸ್ಸಿನಲ್ಲಿ ವರ್ಷಗಳ ಕಾಲ
ಕಾಯುತ್ತಿರುತ್ತದೆ. ಚಿಂತನೆಯ ಭ್ರೂಣವೊಂದು ಜನಿಸಿ, ಅದು ಪದೇಪದೇ ರೂಪಾಂತರ ಹೊಂದಿ, ಕೆಲವೊಮ್ಮೆ ಹಾಗೇ ನಿಶ್ಚಲ ವಾಗಿ ಉಳಿದು, ಇನ್ನು ಕೆಲವೊಮ್ಮೆ ನಮಗೇ ಒದೆಯುತ್ತಾ ಒಳಗೊಳಗೇ ಚಡಪಡಿಕೆ ನೀಡುತ್ತಿರುತ್ತದೆ. ಅದರ ಬಗ್ಗೆ ನಡೆಸುವ
ಮಾತುಕತೆ ಹೊಸ ಚಿಂತನೆಯ ಕುರಿತಾದ ಚರ್ಚೆಗೆ ವೇದಿಕೆಯೂ, ಹೊಸ ಹುಡುಕಾಟವೂ ಹಾಗೂ ಹೊಸ ಸಾಧ್ಯತೆಗಳ ಮರುಮೌಲ್ಯಮಾಪನವೂ ಆಗಿರುತ್ತದೆ.

ಜಸ್ವಂತ್ ಸಿಂಗ್ ಅವರಿಗೆ ನಿಜವಾಗಿಯೂ ಖುಷಿ ಕೊಡುತ್ತಿದ್ದ ಸಂಗತಿಗಳೆಂದರೆ ಓದುವುದು, ಬರೆಯುವುದು, ಸಂಗೀತ ಮತ್ತು ಬೌದ್ಧಿಕ ಮಾತುಕತೆ. ತಮ್ಮ ವಿಶಿಷ್ಟವಾದ ಹಾಗೂ ನಿಶ್ಶಬ್ದ ನಗುವಿನಲ್ಲಿ ಅವರು ಪ್ರತಿ ಬಾರಿಯೂ ವಿಭಿನ್ನ ಸಂದೇಶ ಹೊರಹಾಕುತ್ತಿದ್ದರು. ಅವರ ನಗುವಿನಲ್ಲೊಂದು ಪ್ರಬುದ್ಧತೆಯಿರುತ್ತಿತ್ತು. ಅವರು ಸಿಟ್ಟಾಗುತ್ತಿದ್ದುದು ಬಹಳ ಅಪರೂಪ. ಆದರೆ
ಯಾರೇ ಆಗಲಿ ಅವರನ್ನು ಯಾವತ್ತೂ ಅವಿವೇಕದ ಸಿಟ್ಟಿನ ಪಾತಾಳಕ್ಕಿಳಿಯುವಂತೆ ಮಾಡಲು ಸಾಧ್ಯವಿರಲಿಲ್ಲ.

ಅವರು ಯಾವತ್ತಾದರೂ ಸಿಟ್ಟಿಗೇಳುತ್ತಾರೆ ಎಂದಾದರೆ ಅದು ಒಂದೇ ಒಂದು ಕಾರಣಕ್ಕೆ: ಅದು ತಮ್ಮ ಆತ್ಮಗೌರವಕ್ಕೆ ಧಕ್ಕೆಯಾದಾಗ. ಭಾರತದ ನೈತಿಕ ಹಾಗೂ ನಾಗರಿಕ ಸಿದ್ದಾಂತದಲ್ಲೇ ಅವರ ಆತ್ಮವಿಶ್ವಾಸದ ಗಟ್ಟಿಗತನ ಬಿಡಿಸಲಾಗದಂತೆ ಹಾಸುಹೊಕ್ಕಾಗಿತ್ತು. ಅದನ್ನವರು ಬೇರಾರಿಂದಲೂ ಎರವಲು ಪಡೆದಿರಲಿಲ್ಲ. ಅವರ ಕುಟುಂಬದಿಂದ ಬಂದ ತಲೆತಲಾಂತರದ
ಬಳುವಳಿ ಅದಾಗಿತ್ತು. ಅವರ ಪ್ರೀತಿಯ ಊರಾದ ಜಸೋಲ್‌ನ ಸಂಸ್ಕೃತಿಯಿಂದ, ರಾಜಸ್ಥಾನದ ಮರಳುಗಾಡಿನ ಡ್ಯೂನ್‌ಗಳಿಂದ, ಅಲ್ಲಿನ ಹೆಮ್ಮೆಯ ಜನರ ಉತ್ಸಾಹದಿಂದ, ಹಳೆಯ ತಲೆಮಾರಿನ ರಕ್ತದಿಂದ ಹಾಗೂ ಅವರದೇ ಭೌತಿಕ ಮತ್ತು ಆಧ್ಯಾತ್ಮಿಕ ಅಸ್ತಿತ್ವದ ಕೇಂದ್ರದಲ್ಲಿರುವ ಗುರುತ್ವಾಕರ್ಷಣ ಶಕ್ತಿಯಿಂದ ಒಡಮೂಡಿದ ಬದ್ಧತೆ ಅದಾಗಿತ್ತು. ಯಶಸ್ಸು ಅಥವಾ ಸೋಲು ಅಥವಾ ಅವುಗಳ ನಡುವಿನ ಸುದೀರ್ಘ ಖಾಲಿ ಅವಧಿಗಳು ಅವರ ಬದುಕನ್ನು ಮರುಭೂಮಿಯಲ್ಲಿ ಅತ್ತಿಂದಿತ್ತ ಬದಲಾಗುವ ಮರಳುಗುಡ್ಡೆಯಂತೆ ಬದಲಿಸುವ ಸಂಗತಿಗಳಾಗಿದ್ದವು. ಆ ಎಲ್ಲ ಅವಧಿಯಲ್ಲೂ ಆತ್ಮಗೌರವಕ್ಕೆ ಮಾತ್ರ ಚ್ಯುತಿಯಿರುತ್ತಿರಲಿಲ್ಲ.
ಅದು ಅನಾದಿಕಾಲದಿಂದ ಬಂದಿದ್ದಾಗಿತ್ತು.

ಜಸ್ವಂತ್ ಸಿಂಗ್ ಅವರದು ಬಹಳ ವಿಶಿಷ್ಟ ಇಂಗ್ಲಿಷ್. ಅವರ ಆಳವಾದ ಗಡಸು ಧ್ವನಿಯಲ್ಲಿ ಹೊರಹೊಮ್ಮುವ ಇಂಗ್ಲಿಷ್ ರಾಜಾಳ್ವಿಕೆಯ ಭಾರತದ ಮೇಲ್ವರ್ಗದ ಓಣಿಗಳಲ್ಲಿ ಹುಟ್ಟಿದ ಭಾಷೆಯಾಗಿತ್ತು. ಅದಕ್ಕೆ ತಮ್ಮ ಸಾಮಾಜಿಕ ಒಡನಾಟದ ಕುರುಹಾಗಿ ಅವರು ಸೇನಾಧಿಕಾರಿಗಳ ಮೆಸ್‌ನಿಂದ ಒಂದಷ್ಟು ಸ್ವಾದವನ್ನು ಬೆರೆಸಿದ್ದರು. ಅವರ ಮಾತು ಕೇಳಿದವರಿಗೆ ಅದರಲ್ಲಿ ತುಂಬಾ ಬ್ರಿಟಿಷ್‌ತನವಿದೆ ಅನ್ನಿಸುತ್ತಿತ್ತು. ಬಹಳ ಕಡಿಮೆ ಜನರು ಅದನ್ನವರಿಗೆ ಹೇಳುತ್ತಿದ್ದರು ಕೂಡ. ಆದರದು ತಪ್ಪು ಕಲ್ಪನೆ. ಅವರು ಬ್ರಿಟಿಷ್ ಇಂಗ್ಲಿಷ್‌ನಿಂದ ಪ್ರಭಾವಿತರಾಗಿರಲಿಲ್ಲ. ಬದಲಿಗೆ ಬ್ರಿಟಿಷರ ಭಾರತೀಯ ಸೇನೆಯಿಂದ ಪ್ರಭಾವಿತರಾಗಿದ್ದರು. ಅವರು ಯಾವಾಗಲೂ ಧರಿಸುತ್ತಿದ್ದ ಅರೆಬರೆ ಮಿಲಿಟರಿ ಬುಷ್-ಶರ್ಟ್ ಕೂಡ ಹಾಗೇ ಇರುತ್ತಿತ್ತಲ್ಲವೇ? ಅದರ ಎರಡೂ ಭುಜಗಳ ಮೇಲೆ ಸೇನಾಧಿಕಾರಿಗಳು ಹುದ್ದೆಯ ಚಿಹ್ನೆ ಧರಿಸಲು ಬಳಸುವ ರೆಕ್ಕೆಗಳಿರುತ್ತಿದ್ದವು. ಅವರು ಸೇನೆಯಲ್ಲೇ ಮುಂದುವರೆದಿದ್ದರೆ
ಗಳಿಸುತ್ತಿದ್ದ ಗೌರವದ ಚಿಹ್ನೆಗಳಾಗಿ ನನಗವು ಕಾಣಿಸುತ್ತಿದ್ದವು.

ಜಸ್ವಂತ್ ಸಿಂಗ್ ಇದ್ದಿದ್ದೇ ಹಾಗೆ. ದೊಡ್ಡದೊಂದು ಕಾರ್ಯಾಚರಣೆ ನಡೆಸುವಾಗ ಅದರ ಹಿಂದೆ ತಂತ್ರಗಾರಿಕೆಯನ್ನು ರೂಪಿಸುವ ಹಾಗೂ ಐಡಿಯಾಗಳನ್ನು ನೀಡುವ ಒಬ್ಬ ಜನರಲ್ ಇನ್ ಕಮಾಂಡ್ ಇರುತ್ತಾನಲ್ಲ, ಅವನಂತೆ ಅವರು ನೈಸರ್ಗಿಕವಾಗಿ ವಿನ್ಯಾಸ ಗೊಂಡಿದ್ದರು. ಇತಿಹಾಸದ ಯಾವುದೇ ಕ್ಷಣದಲ್ಲಿ ಹುಟ್ಟುವ ಅಥವಾ ಮತ್ತೆಮತ್ತೆ ಹುಟ್ಟುವ ವ್ಯಕ್ತಿಗಳಿವರು. ಮಹಾಭಾರತದ ಯುದ್ಧದ ವೇಳೆ ಸಂಜೆಯ ಡೇರೆಯೊಂದರಲ್ಲಿ ಭಗವಾನ್ ಕೃಷ್ಣನ ಜೊತೆಗೆ ಗಹನವಾದ ಮಾತುಕತೆ ನಡೆಸುತ್ತಾ ಡ್ರಾಯಿಂಗ್
ಬೋರ್ಡ್‌ನ ಮುಂದೆ ನಿಂತಿರುವ ಜಸ್ವಂತ್ ಸಿಂಗ್ ರನ್ನು ನಾನು ಕಲ್ಪನೆ ಮಾಡಿಕೊಳ್ಳುತ್ತೇನೆ. ಅಥವಾ, ಸಾಮ್ರಾಟ್ ಅಶೋಕನ ಸೇನಾಪಡೆಯನ್ನು ತಕ್ಷಶಿಲೆಗೋ ಇಂಡಸ್‌ಗೋ ಒಯ್ಯುವ ಸೇನಾಧಿಪತಿಯಂತೆ ಅವರನ್ನು ಕಲ್ಪಿಸಿಕೊಳ್ಳುತ್ತೇನೆ. ಅಥವಾ
ಒಮ್ಮೊಮ್ಮೆ ಮರುಭೂಮಿಯಲ್ಲಿ ಜೈತ್ರಯಾತ್ರೆ ನಡೆಸುತ್ತಾ ಬರುತ್ತಿರುವಾಗ ಒಂದೇ ಒಂದು ಪದದ ಸಂದೇಶ ಕಳುಹಿಸುವ ಚಾರ್ಲ್ಸ್ ಜೇಮ್ಸ್‌ ನೇಪಿಯರ್ ನಂತೆ ಅವರನ್ನು ಕಾಣುತ್ತೇನೆ. ಆ ಪದ ಯಾವುದು? ಪೆಕ್ಕಾವಿ. ಲ್ಯಾಟಿನ್‌ನಲ್ಲಿ ಅದಕ್ಕೆ ‘ನಾನು ಪಾಪ ಮಾಡಿದ್ದೇನೆ’ (ಐ ಹ್ಯಾವ್ ಸಿನ್ಡ್‌) ಎಂದರ್ಥ. ಅಥವಾ ಅದನ್ನೇ ‘ಐ ಹ್ಯಾವ್ ಸಿಂಧ್’ ಎಂದೂ ಪನ್ ಮಾಡಬಹುದು. ಜಸ್ವಂತ್ ಸಿಂಗ್ ಅವರ ಸ್ಮಾರಕದ ಮೇಲೆ ಕೆತ್ತಲು ಇದು ಎಂಥಾ ಅದ್ಭುತ ಸಾಹಿತ್ಯಕ ಕುಚೋದ್ಯ!

ಜಸ್ವಂತ್ ಸಿಂಗ್ ಯಾವಾಗಲೂ ಮುಂದೆ ನಿಂತಿರುತ್ತಿದ್ದರು. ನಾಯಕನಾದವನಿಗೆ ಬೇರೆಲ್ಲೂ ಜಾಗವಿಲ್ಲ. ಅವನು ಎಲ್ಲರಿಗಿಂತ ಮುಂದೆಯೇ ಇರಬೇಕು. ಆದ್ದರಿಂದಲೇ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದಾಗ
ಅವರು ಮೂವರು ಭಯೋತ್ಪಾದಕರನ್ನು ಖುದ್ದಾಗಿ ಕಂದಹಾರ್‌ಗೆ ಕರೆದುಕೊಂಡು ಹೋಗಿ 155 ಭಾರತೀಯ  ಒತ್ತೆಯಾಳು ಗಳನ್ನು ಬಿಡಿಸಿಕೊಂಡು ಬರುವ ನಿರ್ಧಾರದ ಕೈಗೊಂಡಿದ್ದರು. ಅದು 1999ರ ಡಿಸೆಂಬರ್ 31. ಭಯೋತ್ಪದಕರು ಇಂಡಿಯನ್
ಏರ್‌ಲೈನ್ಸ್‌ ವಿಮಾನವನ್ನು ಹೈಜಾಕ್ ಮಾಡಿ ಕಂದಹಾರ್‌ಗೆ ಕೊಂಡೊಯ್ದು ಇರಿಸಿಕೊಂಡಿದ್ದರು.

ಅದರಲ್ಲಿದ್ದ ಭಾರತೀಯರನ್ನು ಬಿಡಿಸಿಕೊಂಡು ಬರಲು ಭಾರತದ ಜೈಲುಗಳಲ್ಲಿದ್ದ ಮೂವರು ಉಗ್ರರನ್ನು ಜಸ್ವಂತ್ ಸಿಂಗ್ ತಾವೇ ಸ್ವತಃ ಕರೆದುಕೊಂಡು ಹೋಗುವ ಅಭೂತಪೂರ್ವ ನಿರ್ಧಾರ ತೆಗೆದುಕೊಂಡಿದ್ದರು. ಅದು ಬಹಳ ವಿವಾದ ಹುಟ್ಟುಹಾಕಿತು. ಆದರೆ, ಜಸ್ವಂತ್ ಯಾವತ್ತೂ ಆ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡಲಿಲ್ಲ. ಏಕೆಂದರೆ ಹಾಗೆ ಮಾಡದೆ ಇನ್ನಾವುದೇ ಹೆಜ್ಜೆ ಇರಿಸುವುದಕ್ಕೂ ಅವರ ಆತ್ಮಸಾಕ್ಷಿ ಒಪ್ಪುತ್ತಿರಲಿಲ್ಲ. ತನ್ನ ಜೀವವನ್ನೇ ಅಪಾಯಕ್ಕೆ ತಳ್ಳಿ ಉಗ್ರರ ಡೆನ್‌ಗೆ ಹೋಗಿ ಬರುವ ಅಂತಹ ಅಪಾಯಕಾರಿ ಪ್ರಯಾಣಕ್ಕೆ ಬೇರೆ ಯಾರನ್ನೂ ಅವರು ಕಳಿಸಲು ಸಾಧ್ಯವಿರಲಿಲ್ಲ.

ಹೀಗಾಗಿಯೇ ಅವರ ಕೆಲ ನಡೆಗಳು ಅಥವಾ ಕಾರ್ಯಶೈಲಿ ಒಮ್ಮೊಮ್ಮೆ ಪ್ರಜಾಸತ್ತಾತ್ಮಕ ರಾಜಕೀಯದ ಭೌತಿಕ ವ್ಯವಹಾರಗಳಲ್ಲಿ ಸಣ್ಣದೊಂದು ಅಪಸ್ವರವನ್ನು ಹುಟ್ಟುಹಾಕುತ್ತಿದ್ದವು. ಆದರೆ, ಅದರ ಬಗ್ಗೆೆ ತನ್ನ ಆತ್ಮಸಾಕ್ಷಿಗೆ ಒಪ್ಪಿಗೆಯಿದೆ ಎಂದಾದರೆ ಜಸ್ವಂತ್ ಸಿಂಗ್ ಮರುಯೋಚನೆಯನ್ನೇ ಮಾಡುತ್ತಿರಲಿಲ್ಲ. ರಾಜತಾಂತ್ರಿಕ ವ್ಯವಹಾರಗಳಲ್ಲಿ ಅವರ ಚತುರತೆಗೆ ಸಾಕ್ಷಿಯಾದ ಒಂದು ಘಟನೆಯನ್ನು ನೆನಪಿಸಿಕೊಳ್ಳಬೇಕು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಧೈರ್ಯವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಭಾರತವನ್ನು ಅಣ್ವಸ್ತ್ರ ಹೊಂದಿರುವ ದೇಶವೆಂದು ಘೋಷಿಸಿದ್ದರು.

ಆಗ ಪಾಶ್ಚಾತ್ಯ ದೇಶಗಳೆಲ್ಲ ಸಿಟ್ಟಾಗಿದ್ದವು, ಆ ವೇಳೆ ಜಸ್ವಂತ್ ಸಿಂಗ್ ವಿದೇಶಾಂಗ ಮಂತ್ರಿ. ಭಾರತದ ಮೇಲೆ ಅಮೆರಿಕ ದಿಗ್ಬಂಧನ ಕೂಡ ಹೇರಿತ್ತು. ನಂತರ, ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್‌ರ ಆಪ್ತನಾಗಿದ್ದ ಸ್ಟ್ರೋಬ್ ಟಾಲ್ಬಟ್ ನೇತೃತ್ವದಲ್ಲಿ ಭಾರತದ ಜೊತೆ
ಮಾತುಕತೆ ನಿಗದಿಯಾಗಿತ್ತು. ಆ ಮಾತುಕತೆಯಲ್ಲಿ ಅಮೆರಿಕನ್ನರು ಹಿಂದಿನ ಸರ್ಕಾರದ ನಿರ್ಧಾರಕ್ಕೆ ಜೋತುಬೀಳದೆ ಭಾರತ ವನ್ನು ಅಣ್ವಸ್ತ್ರ ದೇಶವೆಂದು ಗೌರವಿಸಿದರೆ ಎರಡೂ ದೇಶಗಳಿಗೆ ಹೇಗೆ ಲಾಭವಿದೆ ಎಂದು ಜಸ್ವಂತ್ ಸಿಂಗ್ ಯಶಸ್ವಿಯಾಗಿ ಮನವರಿಕೆ ಮಾಡಿಕೊಟ್ಟಿದ್ದಷ್ಟೇ ಅಲ್ಲ, ಮಾತುಕತೆಯ ಕೊನೆಯಲ್ಲಿ ಟಾಲ್ಬಟ್‌ಗೆ ಖಾಸಾ ಸ್ನೇಹಿತರಾಗಿಬಿಟ್ಟಿದ್ದರು. ಪರಿಣಾಮ, ಜಗತ್ತು ಬದಲಾಯಿತು. ಆ ಬದಲಾವಣೆ ತಂದವರಲ್ಲಿ ಜಸ್ವಂತ್ ಸಿಂಗ್ ಕೂಡ ಒಬ್ಬರಾಗಿದ್ದರು.

ಸ್ವರ್ಗದಿಂದ ಆ್ಯಡಮ್‌ನನ್ನು ಹೊರಹಾಕಿದ ದಿನದಿಂದಲೂ ಜಗತ್ತು ಬದಲಾಗುತ್ತಲೇ ಬಂದಿದೆ. ಸ್ವರ್ಗದಲ್ಲಿ ಮಾತ್ರ ಕಾಲ ನಿಶ್ಚಲವಾಗಿ ನಿಂತಿರುತ್ತದೆ. ಆರು ವರ್ಷಗಳ ಹಿಂದೆ ಜಸ್ವಂತ್ ಸಿಂಗ್ ಅವರಿಗೆ ಕಾಲ ನಿಂತುಬಿಟ್ಟಿತ್ತು. ಈಗ ನಿಶ್ಚಲವಾಗಿದೆ.