Saturday, 23rd November 2024

New Column: ಅವನಿ ಅಂಬರ ಅಂಕಣ: ಋಷ್ಯಮೂಕದೊಳಿಪ್ಪ ಸುಗ್ರೀವನೆಂಬ ವಾನರ

rama sugreeva

ಭಯ ಮತ್ತು ಅಭದ್ರತೆಯ ನಡುವೆ ಒದ್ದಾಟ

narayana yaji
  • ನಾರಾಯಣ ಯಾಜಿ

ತವ ಪ್ರಸಾದೇನ ನೃಸಿಂಹ ರಾಘವ
ಪ್ರಿಯಾಂ ಚ ರಾಜ್ಯಂ ಚ ಸಮಾಪ್ನುಯಾಮಹಮ್ ৷
ತಥಾ ಕುರು ತ್ವಂ ನರದೇವ ವೈರಿಣಂ
ಯಥಾ ನ ಹಿಂಸ್ಯಾತ್ಸ ಪುನರ್ಮಮಾಗ್ರಜಃ ৷৷ಕಿ.5.31৷৷

ನರಶ್ರೇಷ್ಠನೇ! ರಾಘವನೇ! ನಿನ್ನ ಅನುಗ್ರಹದಿಂದ ನಾನು ನನ್ನ ಪ್ರಿಯ ಪತ್ನಿಯನ್ನೂ ರಾಜ್ಯವನ್ನೂ ಪುನಃ ಪಡೆದುಕೊಳ್ಳುವೆನು (ಇದರಲ್ಲಿ ಅನುಮಾನವಿಲ್ಲ). ನರದೇವನೇ! ವೈರಿಯಾದ ನನ್ನ ಅಣ್ಣನು ನನ್ನನ್ನು ಮತ್ತೊಮ್ಮೆ ಹಿಂಸೆಮಾಡಲು ಸಾಧ್ಯವಾಗದಂತೆ ನೀನು ಕಾರ್ಯವೆಸಗಬೇಕಾಗಿದೆ.

ಕಿಷ್ಕಿಂಧಾ ಕಾಂಡದಲ್ಲಿ ಬರುವ ಈ ಶ್ಲೋಕವನ್ನು ರಾಮನ ಅಯನದ ವಿಷಯದಲ್ಲಿ ಮಹತ್ತರವಾದ ಶ್ಲೋಕವಾಗಿದೆ.

ವಾಲಿವಧೆಯೆನ್ನುವುದು ರಾಮನ ವ್ಯಕ್ತಿತ್ವಕ್ಕೆ ನಿರಂತರವಾಗಿ ಪ್ರಶ್ನೆಮಾಡುವಂತಹ ಭಾಗ(?) ವೆಂದು ಟೀಕಾಕಾರರು ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಸುಗ್ರೀವ ಕೇಳದಿದ್ದರೂ ರಾಮ ವಾಲಿಯನ್ನು ಕೊಲ್ಲುತ್ತೇನೆ ಎನ್ನುವ ಪ್ರತಿಜ್ಞೆಯನ್ನು ಮಾಡಿದ್ದಾನೆ, ಎನ್ನುವುದು ಮೊದಲ ಆಪಾದನೆ. ಇದಕ್ಕೆ ಕಾರಣ ಸಮಾಜದಲ್ಲಿ ಪ್ರಚಲಿತವಿರುವ ರಾಮಕಥೆಗಳು. ಯಕ್ಷಗಾನದಲ್ಲಿಯಂತೂ ವಾಲಿ ರಾಮನನ್ನು ಆಕ್ಷೇಪಿಸುವಾಗ ಪ್ರಧಾನವಾಗಿ ಆಶ್ರಯಿಸುವುದೇ

“ಮಮಾಪೇಕ್ಷೆಯೊಂ I ದುಂಟದ I ಕೇಳಿ ನೀ I ನ್ಯಾಯವ I ರಕ್ಷಿಸ I ಲಹುದಲ್ಲ I ವೇ” ಮತ್ತು ಅದರ ಮುಂದಿನ ಪದ್ಯದಲ್ಲಿ ಬರುವ “ಧೈರ್ಯಗೆ I ಟ್ಟಿಹೆ ನಿಮ್ಮ I ಪಾದಪ I ದ್ಮವ ಕಂಡೆ I ಮರ್ಯಾದೆ I ಯಿಂದ ಕಾ I ಯೋ”

ಎನ್ನುವ ಪದ್ಯವನ್ನು. ಸುಗ್ರೀವನಿಗೆ ಮನಸ್ಸಿಲ್ಲದಿದ್ದರೂ, ರಾಮನೇ ಬೇಕೇಂದಲೇ ವಾಲಿಯನ್ನು ಕೊಲ್ಲುವೆನೆನ್ನುವ ಪ್ರತಿಜ್ಞೆಯನ್ನು ಮಾಡಿದ ಎನ್ನುವ ಅಪವಾದದಿಂದಲೇ ವಾಲಿವಧೆಯ ಪ್ರಕರಣ ಆರಂಭವಾಗುವುದು. ರಾಮಾಯಣದಲ್ಲಿ ರಾಮನ ವ್ಯಕ್ತಿತ್ವಕ್ಕೆ ನಿರಂತರವಾಗಿ ಪ್ರಶ್ನೆ ಮಾಡುವಂತಹ ಪ್ರಸಂಗ ಎದುರಾಗಿರುವುದೇ ಸುಗ್ರೀವನೊಡನೆ ಆತನ ಮೈತ್ರಿಯ ಕಾರಣದಿಂದಲಾಗಿ.

ರಾಮ ಮತ್ತು ಸುಗ್ರೀವರ ಮೈತ್ರಿಯ ಹಿನ್ನೆಲೆಯನ್ನು ಗಮನಿಸಿದಾಗ ಅದಕ್ಕೆ ಕಾರಣನಾದವ ಕಬಂಧನೆನ್ನುವ ರಾಕ್ಷಸನ ಸಲಹೆ. ಸುಗ್ರೀವನನ್ನು ಅವಕಾಶವಾದಿ ಎನ್ನಬೇಕೋ, ಚಂಚಲತೆಯವ ಎನ್ನಬೇಕೋ, ಪರಾಕ್ರಮೀ ಎನ್ನಬೇಕೋ ಇಲ್ಲ ಸ್ತ್ರೀವ್ಯಸನದವ ಎನ್ನಬೇಕೋ ಎನ್ನುವ ಸಂಶಯ ರಾಮಾಯಣವನ್ನು ಗಮನಿಸಿದಾಗ ಬರುತ್ತದೆ. ಆತನಲ್ಲಿ ಈ ಎಲ್ಲಾ ಗುಣಗಳಿವೆ. ಯುದ್ಧಕಾಂಡದಲ್ಲಿ ರಾಕ್ಷಸರ ವಿರುದ್ಧ ಸುಗ್ರೀವನ ತನ್ನ ಅದ್ಭುತ ಪರಾಕ್ರಮವನ್ನು ಮೆರೆದಿದ್ದಾನೆ. ರಾವಣನನ್ನು ಸೋಲಿಸಿದ್ದಾನೆ. ಕುಂಭಕರ್ಣನ ಬಾಹುವಿನಲ್ಲಿ ಸಿಕ್ಕುಬಿದ್ದಾಗ ಆತನ ಮೂಗನ್ನು ಕಚ್ಚಿ ರಕ್ತಸುರಿಯುವ ಸಮಯದಲ್ಲಿ ಅವನಿಂದ ತಪ್ಪಿಸಿಕೊಂಡಿದ್ದಾನೆ. ಸದ್ಯದ ಪ್ರಕರಣದಲ್ಲಿ ವಾಲಿಯ ಭಯದಿಂದ ಬದುಕುತ್ತಿದ್ದ ಆತ “ಭಯ ಮತ್ತು ಅಭದ್ರತೆಯ ಲಕ್ಷಣಗಳನ್ನು (Fearful and Insecure Syndrome or Autophobia) ಹೊಂದಿದ್ದ ವ್ಯಕ್ತಿಯಾಗಿದ್ದ ಎಂದುಕೊಳ್ಳಬಹುದು. ಇದು ವಾಲಿ ಇರುವಾಗಿನ ಸುಗ್ರೀವನ ವ್ಯಕ್ತಿತ್ವವಾದರೆ, ವಾಲಿ ಸತ್ತನಂತರ ಆತ ತೋರುವ ಅಲಕ್ಷ್ಯತನ, ಮರೆಗುಳಿ, ಆಮೇಲೆ ದಿಟ್ಟಶಾಸನಕರ್ತ, ನಂಬುಗಸ್ಥ ಸೇನಾನಿ, ರಾಮ ಭಕ್ತ ಹೀಗೆ ಅನೇಕ ವಿಧವಾದ ವ್ಯಕ್ತಿತ್ವದ ಲಕ್ಷಣಗಳನ್ನು(Personality Traits) ಕಾಣಬಹುದಾಗಿದೆ.

ಸುಗ್ರೀವ ರಾಮಾಯಣದಲ್ಲಿ ಮೊದಲು ಬರುವುದು ಅರಣ್ಯಕಾಂಡದಲ್ಲಿ, ರಾವಣ ಸೀತೆಯನ್ನು ಕದ್ದೊಯ್ಯುತ್ತಿರುವಾಗ ಋಷ್ಯಮೂಕ ಪರ್ವತದಲ್ಲಿ ಸುಗ್ರೀವ ಮತ್ತು ನಾಲ್ವರು ವಾನರರನ್ನು ಗಮನಿಸಿದ ಸೀತೆ ತನ್ನ ಆಭರಣಗಳನ್ನು ರೇಷ್ಮೆಯ ಉತ್ತರೀಯದಲ್ಲಿ ಗಂಟುಕಟ್ಟಿ ಎಸೆಯುತ್ತಾಳೆ. ಅದನ್ನು ಸುಗ್ರೀವ ಗುಹೆಯಲ್ಲಿ ಹಾಗೇ ಇಟ್ಟುಕೊಂಡಿದ್ದ. ಅಲ್ಲಿನ ಘಟನೆಗಳನ್ನು ಗಮನಿಸಿದರೆ ರಾವಣ ಯಾರೋ ಅಬಲೆಯನ್ನು ಕದ್ದೊಯ್ಯುತ್ತಿದ್ದಾನೆ ಎನ್ನುವ ಅಂಶ ಅವರ ಅರಿವಿಗೆ ಬಂದಿತ್ತು. ವಾಲಿಯ ಭಯದಲ್ಲಿ ಪ್ರಪಂಚವನ್ನೆಲ್ಲ ಆಶ್ರಯಕ್ಕಾಗಿ ಓಡಾಡಿದ ವ್ಯಕ್ತಿ ಆತ. ಸೀತಾಪಹರಣವೆನ್ನುವುದು ತಮಗೆ ಸಂಬಂಧವಿಲ್ಲದ ಕಾರಣ ವಾನರರೆಲ್ಲರು ಸುಮ್ಮನಿದ್ದರು. ತನ್ನನ್ನು ಕೊಲ್ಲಲು ಯಾರನ್ನಾದರೂ ವಾಲಿಯು ಕಳುಹಿಸಿರಬಹುದೇ ಎನ್ನುವ ಜೀವ ಭಯದಿಂದಲೇ ಋಷ್ಯಮೂಕದ ಪರ್ವತದಲ್ಲಿ ದಿನಗಳನ್ನು ಕಳೆಯುತ್ತಿದ್ದ. ಹಾಗಾಗಿಯೇ ರಾಮ ಲಕ್ಷ್ಮಣರನ್ನು ಕಂಡಾಗ “ಅವರು ಶುದ್ಧಾತ್ಮರೋ ಅಲ್ಲವೋ ಎನ್ನುವುದನ್ನು ಪರಿಶೀಲಿಸಿ ಅವರು ಶುದ್ಧಾತ್ಮರಾಗಿದ್ದರೆ ಅವರನ್ನು ಕರೆದುಕೊಂಡು ಬಾ” ಎಂದು ಹನುಮಂತನನ್ನು ಕಳುಹಿಸುತ್ತಾನೆ. ವಾಲಿ ತನ್ನ ವಿರೋಧಿಗಳನ್ನು ಮಟ್ಟಹಾಕಲು ಬೇರೆಯವರ ಸಹಾಯವನ್ನು ಕೇಳುವ ಕುಟಿಲ ವಿದ್ಯೆಯಲ್ಲಿ ನಿಪುಣ ಎನ್ನುತ್ತಾನೆ.

ಹನುಮಂತನಿಗೆ ರಾಮ ಲಕ್ಷ್ಮಣರ ಪರಿಚಯವಾದಾಗ ಅವರೂ ಸುಗ್ರೀವನನ್ನೇ ಹುಡುಕಿಕೊಂಡು ಬಂದಿದ್ದಾರೆ ಎನ್ನುವದರ ಅರಿವಾಯಿತು. ಹಾಗಾಗಿ ಅವರನ್ನು ತನ್ನ ಹೆಗಲಮೇಲೆ ಕುಳ್ಳಿರಿಸಿಕೊಂಡು ಋಷ್ಯಮೂಕ ಪರ್ವತದಲ್ಲಿ ಇಳಿಸಿದ. ಜೀವದ ಮೇಲಿನ ಭಯದಿಂದಾಗಿ ಸುಗ್ರೀವ ಅಲ್ಲಿರದೇ ಅಲ್ಲಿಯೇ ಪಕ್ಕದಲ್ಲಿರುವ ಮಲಯಪರ್ವತದಲ್ಲಿ ಅಡಗಿಕೊಂಡಿದ್ದ. ಇಲ್ಲಿ ಹನುಮಂತನ ಕುಶಲಮತಿತ್ವ ಎದ್ದು ಕಾಣುತ್ತದೆ. ರಾಮ ಲಕ್ಷ್ಮಣರು ತಮಗೆ ಅನುಕೂಲವಾದವರು ಎನ್ನುವುದನ್ನು ತಿಳಿದ ಮೇಲೆ ಅವರನ್ನು ಯಥಾಯೋಗ್ಯವಾದ ರಾಜೋಪಚಾರದಿಂದ ಕರೆತರುತ್ತಾನೆ. ಅದೇ ಕಾಲಕ್ಕೆ ಸುಗ್ರೀವ ತನ್ನ ಒಡೆಯನಾದುದರಿಂದ ಆತನ ಹಿತವನ್ನೂ ಕಾಯುವ ಜವಾಬ್ದಾರಿಯೂ ಆತನ ಮೇಲೆ ಇದೆ. ಹಾಗಾಗಿ ಆತನಿರುವ ಮಲಯಪರ್ವತಕ್ಕೆ ಹೋಗಿ ಹೆದರಿಕೆ ಬೇಡ, ಅವರು ದಶರಥ ಮಹಾರಾಜನ ಮಕ್ಕಳು ಎಂದು ಹೇಳುತ್ತಾ ಇಕ್ಷಾಕುವಂಶದ ದಶರಥ ರಾಜ್ಯಪರಿಪಾಲನಾರೂಪವಾದ ತಪಸ್ಸನ್ನು ಆಚರಿಸುತ್ತಿದ್ದನು ಎನ್ನುವ ವಿಶೇಷಣಗಳೊಂದಿಗೆ ಪರಿಚಯಿಸುವುದು ಇಲ್ಲಿನ ವಿಶೇಷ.

ಹನುಮಂತ ಮಾತನಾಡುವ ಪ್ರತಿಯೊಂದು ವಾಕ್ಯವನ್ನೂ ವಾಲ್ಮೀಕಿ ಆಯ್ದು ತೂಗಿ (ತಪಸಾ ಸತ್ಯವಾಕ್ಯೇನ ವಸುಧಾ ಯೇನ ಪಾಲಿತಾ- ತಪಸ್ಸಿನಿಂದಲೂ ಸತ್ಯನಿಷ್ಠೆಯಿಂದಲೂ ರಾಜ್ಯವನ್ನು ಪರಿಪಾಲಿಸುತ್ತಿದ್ದಾನೆ) ಬರೆದಿದ್ದಾನೆ. ಲಕ್ಷ್ಮಣ ರಾಮ ಸುಗ್ರೀವನಲ್ಲಿ ಶರಣಾಗಲು ಬಂದಿದ್ದಾನೆ ಎನ್ನುವ ಮಾತನ್ನು ಪಂಪಾಸರೋವರದ ತೀರದಲ್ಲಿ ಹನುಮಂತನಲ್ಲಿ ಹೇಳಿದ್ದ. ಹನುಮಂತನಿಗೆ ರಾಮ ಸೀತೆಯನ್ನು ಕಳೆದುಕೊಂಡ ನೋವಿನಿಂದಾಗಿ ಶರಣಾಗತಿಯನ್ನು ಬಯಸಿದ್ದಾನೆಂದು ಲಕ್ಷ್ಮಣನಿಂದ ಹೇಳಿಸಿದ, ಎನ್ನುವದು ಅರ್ಥವಾಗಿದೆ. ಸುಗ್ರೀವನಲ್ಲಿ ಅಯೋಧ್ಯೆಯ ಅರಸರು ಧರ್ಮಪರಿಪಾಲಕರು ಎನ್ನುವ ಭರವಸೆಯನ್ನು ನೀಡಿದ. ಅವರು ನಿನ್ನೊಡನೆ ಗೆಳೆತನವನ್ನು ಆಶಿಸಿದ್ದಾರೆ, ನೀನೂ ಅವರೊಡನೆ ಗೆಳೆತನವನ್ನು ಬೆಳೆಸು, ಗೌರವದಿಂದ ಅವರನ್ನು ಸತ್ಕರಿಸು ಎನ್ನುತ್ತಾನೆ. ಲಕ್ಷ್ಮಣ ಹನುಮಂತನಲ್ಲಿ ವಿನಂತಿಸಿದಂತೆ ನೆಂದಂತೆ “ಸುಗ್ರೀವಂ ಶರಣಂ ಗಚ್ಛಾಮಿ” ಎನ್ನುವ ಮಾತನ್ನು ಗೆಳೆತನ ಎನ್ನುವುದಾಗಿ ಬದಲಾಯಿಸಿ ರಾಮನ ಘನತೆಯನ್ನು ಉಳಿಸುವ ಹನುಮಂತನ ಬುದ್ಧಿಮತ್ತೆ ಎದ್ದು ಕಾಣುತ್ತದೆ. ಈಗ ಸುಗ್ರೀವನಿಗೆ ಧೈರ್ಯಬಂತು. ಆತ ರಾಮನನ್ನು ಭೇಟಿ ಮಾಡಲು ಋಷ್ಯಮೂಕಕ್ಕೆ ಬರುವದು ವಾನರರ ರೂಪದಲ್ಲಿ ಅಲ್ಲ. “ಸಕೃತ್ವಾ ಮಾನುಷಂ ರೂಪಂ ಸುಗ್ರೀವಃ ಪ್ಲವಗರ್ಷಭಃ” ಅತಿಸುಂದರವಾದ ಮನುಷ್ಯರೂಪದಲ್ಲಿ ರಾಮನನ್ನು ಸುಗ್ರೀವ ಭೇಟಿಯಾದನಂತೆ.

ವಾನರರು ಎಂದರೆ ಇಂದಿನ ಮಂಗಗಳು ಎನ್ನುವ ಮಾತುಗಳು ಬಿದ್ದುಹೋಗುವುದು ಇಂಥ ಕಡೆಯಲ್ಲಿ. ಅವರೊಂದು ಜನಾಂಗ (ಈ ಕುರಿತು ಈ ಹಿಂದೆಯೇ ಬರೆದಿರುವೆ) ಎನ್ನುವುದಕ್ಕೆ ಈ ಮಾತುಗಳು ಪುನಃ ಸಾಬೀತು ಪಡಿಸುತ್ತವೆ. ಸುಗ್ರೀವ ಈ ಸಂದರ್ಭವೊಂದನ್ನು ಬಿಟ್ಟರೆ ಮುಂದೆ ಎಲ್ಲಿಯೂ ಮನುಷ್ಯ ರೂಪದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಯೋಗ್ಯರಾದವರನ್ನು ಗೌರವಿಸಲು ಎದುರುಗೊಳ್ಳುವವರೂ ಕೆಲವೊಂದಿಷ್ಟು ನಡಾವಳಿಗಳನ್ನು (Protocol) ಅನುಸರಿಸಬೇಕು. ಇದು ತನಕ ಭಯ ಮತ್ತು ಅಭದ್ರತೆಯಲ್ಲಿಯೇ (Fearful and Insecure Syndrome) ದಿನ ಕಳೆಯುತ್ತಿದ್ದ ಸುಗ್ರೀವ ಅಯೋಧ್ಯೆಯ ಅರಸರು ತನ್ನ ಗೆಳೆತನವನ್ನು ಬಯಸಿದ್ದಾರೆ ಎನ್ನುವುದನ್ನು ಕೇಳಿದೊಡನೆಯೇ ಅದಕ್ಕೆ ವಿಪರೀತವಾದ ಸ್ಥಿತಿಯಲ್ಲಿ ವರ್ತಿಸುತ್ತಾನೆ. ಕೆಲವೇ ಕ್ಷಣಗಳ ಹಿಂದೆ ಜೀವಭಯದಿಂದ ಅಡಗಿಕೊಂಡವನಲ್ಲಿ ಕಂಡುಬಂದ ಬದಲಾವಣೆ Autophobia ದಿಂದ Gregariousness ಕ್ಕೆ ಬದಲಾಗುತ್ತದೆ. (ಗುಂಪಿನಲ್ಲಿ ತಾನು ದೊಡ್ದವನೆಂದು ತೋರಿಸಿಕೊಳ್ಳುವುದು). ತಾನೇ ವಾನರರ ಮಹಾರಾಜ ಎನ್ನುವಂತೆ ರಾಮನಿಗೆ ತನ್ನ ತೋಳನ್ನು ಚಾಚಿ “ನನ್ನೊಡನೆ ಗೆಳೆತನವನ್ನು ಬೆಳೆಸುವುದು ನಿನಗೆ ಇಷ್ಟವಾದರೆ ನನ್ನ ಕೈಯನ್ನು ಹಿಡಿ” ಎನ್ನುತ್ತಾನೆ.

ಹನುಮಂತ ಕಟ್ಟಿಗೆಯನ್ನು ಘರ್ಷಿಸಿ ಅಗ್ನಿಯನ್ನು ಪ್ರಜ್ವಲಿಸುತ್ತಾನೆ. ಅದರೆದುರು ರಾಮನ ಕೈ ಹಿಡಿದ ಸುಗ್ರೀವನಿಗೆ ಅಯೋಧ್ಯೆಯ ಅರಸರಿಗೆ ತಾನು ಸಮನಾಗಿರುವ ಎನ್ನುವ ಭಾವ ಮೂಡಿದೆ. ಸಾಲದ್ದಕ್ಕೆ ರಾಮ ಅತನ ಕೈ ಹಿಡಿದವನೇ ಪ್ರೀತಿಯಿಂದ ಆಲಂಗಿಸಿಕೊಂಡಾಗ ಸುಗ್ರೀವನಿಗೆ ಮತ್ತಿಷ್ಟು ಕೋಡು ಮೂಡುತ್ತದೆ. “ತ್ವಂ ವಯಸ್ಯೋಸಿ ಮೇ ಹೃದ್ಯೋ ಹ್ಯೇಕಂ ದುಃಖಂ ಸುಖಂ ಚ ನೌ – ರಾಘವ ನೀನು ನನಗೆ ಅತ್ಯಂತ ಪ್ರಿಯನಾದ ಗೆಳೆಯನಾಗಿರುವೆ, ಇನ್ನು ಮುಂದೆ ನಿನ್ನ ಸುಖವೇ ನನ್ನಸುಖ, ನಿನ್ನ ದುಃಖವೇ ನನ್ನ ದುಃಖ” ಎನ್ನುವ ಮಾತುಗಳನ್ನು ಸುಗ್ರೀವನೇ ರಾಮನಲ್ಲಿ ಆಡುವುದು. ಬೇರೆ ಬೇರೆ ರಾಮಾಯಣಗಳಲ್ಲಿ, ನಾಟಕಗಳಲ್ಲಿ, ಯಕ್ಷಗಾನದಲ್ಲಿ ರಾಮನೇ ಸುಗ್ರೀವನಿಗೆ ಈ ಮಾತುಗಳನ್ನು ಆಡುವುದು ಎಂದು ಬದಲಾಯಿಸಲಾಗಿದೆ. ಅಲ್ಲೇ ಇದ್ದ ಮರದ ಟೊಂಗೆಯೊಂದನ್ನು ಮುರಿದು ರಾಮನನ್ನು ಕುಳ್ಳಿರಿಸಿ ತಾನು ಅವನೊಡನೆ ಏಕಾಸನದಲ್ಲಿ ಕುಳಿತುಕೊಳ್ಳುತ್ತಾನೆ. ಎದುರು ನಿಂತಿರುವ ಲಕ್ಷ್ಮಣ ಲೆಕ್ಕಕ್ಕಿಲ್ಲ; ಆತ ನಿಂತಿರುವುದನ್ನು ಗಮನಿಸಿದ ಹನುಮಂತ ಗಂಧದ ಟೊಂಗೆಯೊಂದನ್ನು ಮುರಿದು ಆತನನ್ನು ಕುಳ್ಳಿರಿಸುತ್ತಾನೆ. ಆ ಮೂಲಕ ರಾಮನಿಗೆ ಆಗುವ ಅವಮಾನವನ್ನು ಬಗೆಹರಿಸುತ್ತಾನೆ.

ರಾಮನಿಗೆ ಕಬಂಧ ಹೇಳಿದಂತೆ ರಾವಣ ಎಲ್ಲಿದ್ದಾನೆ ಎನ್ನುವ ಸ್ಥಳವನ್ನು ಸುಗ್ರೀವನಿಂದ ತಿಳಿಯಬೇಕಾಗಿದೆ. ಕಿಷ್ಕಿಂಧಾಕಾಂಡದ ಪ್ರಾರಂಭದಲ್ಲಿ ಸೀತೆಯ ಸಲುವಾಗಿ ರಾಮ ವ್ಯಾಕುಲ ಮತ್ತು ಅನ್ಯಮನಸ್ಕನಾಗಿದ್ದ. ಸುಗ್ರೀವ ವಾಲಿಯ ಭಯದಿಂದ ತನ್ನ ಹೆಂಡತಿಯನ್ನು ಕಳೆದುಕೊಂಡು ಜೀವ ಭಯದಿಂದ ಋಷ್ಯಮೂಕದಲ್ಲಿ ಅಡಗಿಕೊಂಡಿದ್ದ. ಅವನಿಗೆ ಇಕ್ಷಾಕುವಂಶದವರ ಶೌರ್ಯದ ಮಾಹಿತಿ ಸಂಪೂರ್ಣವಾಗಿ ತಿಳಿದಿತ್ತು. ಹಾಗಾಗಿ ರಾಮನನ್ನು ನೋಡಿದವನೇ ತಾನು ವಾಲಿಯಿಂದ ಓಡಿಸಲ್ಪಟ್ಟು ಹೆಂಡತಿಯನ್ನೂ ಕಳೆದುಕೊಂಡು ಭಯದಿಂದ ಈ ಅರಣ್ಯದಲ್ಲಿ ಇದ್ದೇನೆ ಎನ್ನುತ್ತಾ ತನ್ನ ಭಯವನ್ನು ಬಗೆಹರಿಸುವುದು ನಿನಗೆ ಉಚಿತವಾಗಿದೆ- “ಕರ್ತುಮರ್ಹಸಿ ಕಾಕುತ್ಸ್ಥ! ಭಯಂ ಮೇ ನ ಭವೇದ್ಯಥಾ” ಇಲ್ಲಿ ಕರ್ತುಂ ಅರ್ಹಸಿ –(to do & ought to) ನಿನಗೆ ಉಚಿತವಾಗಿದೆ ಎನ್ನುತ್ತಾನೆ, ಭಯದಲ್ಲಿ ಇದ್ದರೂ ರಾಮನಿಗೆ ಸಲಹೆನೀಡುತ್ತಾನೆ; ವಿನಂತಿಯಲ್ಲ. ಸೂರ್ಯವಂಶದವರು ಮಾತನ್ನು ಒಮ್ಮೆ ಕೊಟ್ಟರೆಂದರೆ ಮುಗಿಯಿತು. ಸುಗ್ರೀವನ ಈ ಎಲ್ಲ ಅವಗುಣಗಳನ್ನು ಗಮನಿಸಿಯೂ ರಾಮ ಆತನಿಗೆ ಹೆದರಬೇಡ, ವಾಲಿಯನು ಕೊಲ್ಲುವ ಸಾಮರ್ಥ್ಯ ತನಗಿದೆ ಎನ್ನುತ್ತಾನೆ. ಸುಗ್ರೀವನ ಸಖ್ಯ ಸೀತಾನ್ವೇಷಣೆಗೆ ಅತಿಮುಖ್ಯವಾಗಿದೆ.

ಸುಗ್ರೀವನಿಗೆ ತನ್ನ ಕೆಲಸವನ್ನು ಮೊದಲು ರಾಮನಿಂದ ಮಾಡಿಸುವುದು ಮುಖ್ಯವಾಗಿತ್ತು. ರಾಮನಿಗೆ ರಾವಣನ ಇರವನ್ನು ತಿಳಿದು ಸೀತೆಯನ್ನು ಬಿಡಿಸಿತರುವ ಅವಸರವಿತ್ತು. ರಾಮನಿಗೆ ಸುಗ್ರೀವ “ಅಹಂತಾಮಾನಯಿಷ್ಯಾಮಿ ನಷ್ಟಾಂ ವೇಧಶ್ರುತೀಮಿವ” ನನ್ನ ಕೆಲಸ ನೀನು ಮಾಡಿಕೊಡು, ಅಪಹೃತವಾದ ವೇದಶೃತಿಯನ್ನು ಮಹಾವಿಷ್ಣು ಹೊರತಂದಂತೆ ನಿನ್ನ ಹೆಂಡತಿಯನ್ನು ನಾನು ಕರೆತರುತ್ತೇನೆ” ಎನ್ನುತ್ತಾ ರಾವಣ ಅಪಹರಿಸಿಕೊಂಡು ಹೋಗುವಾಗ ಸೀತೆ ಬಿಸುಟ ಆಭರಣವನ್ನು ತೋರಿಸುತ್ತಾ ಅವಳು ಸೀತೆಯೆನ್ನುವುದು ತನಗೆ ತಿಳಿದಿದ್ದು ಹೇಗೆಂದರೆ ಆಕೆ ಅಳುತ್ತಾ “ ಹಾ! ರಾಮಾ! ಹಾ! ಲಕ್ಷ್ಮಣಾ!” ಎಂದು ಕೂಗುತ್ತಿದ್ದಳು” ಎನ್ನುವನು. ರಾಮ “ಹಾಗಾದರೆ ರಾವಣ ಎಲ್ಲಿದ್ದಾನೆ” ಎಂದು ಕೇಳಿದರೆ “ಎಲೈ ಅರಿಂದಮನೆ ನನಗೆ ಆತ ಎಲ್ಲಿರುವನೆಂದು ತಿಳಿದಿಲ್ಲ; ಆತನ ಸಾಮರ್ಥ್ಯದ ಕುರಿತು ಅರಿವಿಲ್ಲ” ಎಂದುಬಿಡುತ್ತಾನೆ. ಸುಗ್ರೀವನಿಗೆ ಸಮಗ್ರ ಪ್ರಪಂಚವೆಲ್ಲವೂ ತಿಳಿದಿದೆ ಎಂದು ಕಬಂಧ ಮೊದಲೇ ಹೇಳಿ ಆತನಲ್ಲಿ ಸಖ್ಯವನ್ನು ಬೆಳೆಸಲು ಸೂಚಿಸಿರುವುದನ್ನು ಗಮನಿಸಬೇಕು. ಆದರೆ ಇಲ್ಲಿ ನೋಡಿದರೆ ಸುಗ್ರೀವ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳನ್ನಾಡುತ್ತಾನೆ. ಆದರೂ ತಾನು ವಾಲಿಯನ್ನು ಕೊಂದ ತಕ್ಷಣವೇ ಎಲ್ಲಾ ವಾನರರನ್ನು ಒಟ್ಟುಗೂಡಿಸಿ ಸೀತೆಯನ್ನು ಹುಡುಕಿಸುವೆ ಎನ್ನುವ ಅಶ್ವಾಸನೆಯನ್ನು ತೋರಿಸುತ್ತಾನೆ. ಸುಗ್ರೀವನಿಗೆ ರಾವಣ ಎಲ್ಲಿದ್ದಾನೆ ಎನ್ನುವುದರ ಸಂಪೂರ್ಣ ಅರಿವಿತ್ತು. ಎಲ್ಲಿ ತಾನು ಮೊದಲೇ ರಾವಣನ ಲಂಕೆಯ ವಿಷಯವನ್ನು ಹೇಳಿಬಿಟ್ಟರೆ ರಾಮ ಮೊದಲು ಸೀತಾನ್ವೇಷಣೆಯನ್ನು ಕೈಗೊಂಡು ಬಿಡುತ್ತಾನೋ ಎನ್ನುವ ಅನುಮಾನ ಆತನನ್ನು ಕಾಡುತ್ತಿತ್ತು. ಮುಂದೆ ಸೀತೆಯನ್ನು ಹುಡುಕಿಸಲು ವಾನರರನ್ನು ಎಲ್ಲಾ ದಿಕ್ಕುಗಳಲ್ಲಿಯೂ ಕಳುಹಿಸುವ ನಾಟಕವಾಡುತ್ತಾನೆ. ಆದರೆ ದಕ್ಷಿಣ ದಿಕ್ಕಿಗೆ ಕಳುಹಿಸುವಾಗ ಮಾತ್ರ ಲಂಕೆಯ ಸಂಪೂರ್ಣ ವರ್ಣನೆಯನ್ನು ಮಾಡುತ್ತಾನೆ.

ಸ ಹಿ ದೇಶಸ್ತು ವಧ್ಯಸ್ಯ ರಾವಣಸ್ಯ ದುರಾತ್ಮನಃ
ರಾಕ್ಷಸಾಧಿಪತೇರ್ವಾಸಸ್ಸಹಸ್ರಾಕ್ಷಸಮದ್ಯುತೇಃ৷৷

ಇಂದ್ರನ ತೇಜಸ್ಸಿಗೆ ಸಮಾನವಾದ ದುರಾತ್ಮನಾದ ವಧಾರ್ಹನಾದ ರಾಕ್ಷಸಾಧಿಪತಿಯಾಗಿರುವ ರಾವಣನ ನಿವಾಸಸ್ಥಾನವಾಗಿದೆ. ಎಂದು ಖಡಾಖಂಡಿತವಾಗಿ ಹೇಳುತ್ತಾನೆ. (ಈ ವಿಷಯದ ವಿವರಗಳನ್ನು ಮುಂದೆ ಗಮನಿಸೋಣ).

ಹೀಗೆ ರಾಮನಿಗೆ ಆಸೆ ಹುಟ್ಟಿಸಿ ತನ್ನ ಕೆಲಸ ಸಾಧಿಸಿಕೊಳ್ಳುವ ಸುಗ್ರೀವನ ಲಕ್ಷ್ಮಣನನ್ನು ಅಲಕ್ಷ್ಯ ಮಾಡುವ ಪ್ರವೃತ್ತಿಯನ್ನು ರಾಮಾಯಣ ವರ್ಣಿಸುತ್ತದೆ. ಋಷ್ಯಮೂಕಕ್ಕೆ ಬಂದು ಒಂದೆರಡು ದಿನಗಳ ನಂತರ ರಾಮನೊಡನೇ ಮಾತಾಡುವಾಗ ಆತ ನಿಂತೇ ಇದ್ದುದನ್ನು ಗಮನಿಸಿ ಮತ್ತೊಮ್ಮೆ ಸಾಲವೃಕ್ಷದ ಟೊಂಗೆಯನ್ನು ಮುರಿದು ರಾಮನಿಗೆ ಆಸನವನ್ನು ನೀಡಿ ಆತನ್ನೊಡನೆ ತಾನೂ ಮತ್ತೊಮ್ಮೆ ಏಕಾಸನದಲ್ಲಿ ಕುಳಿತುಬಿಡುತ್ತಾನೆ. ಇದೂ ಸಹ ಹನುಮಂತನ ಗಮನಕ್ಕೆ ಬಂದು ಆತ ಮತ್ತೊಂದು ರಂಭೆಯನ್ನು ಮುರಿದು ಲಕ್ಷ್ಮಣನನ್ನು ಕುಳ್ಳಿರಿಸಿ ಮಾನ ಉಳಿಸುತ್ತಾನೆ. ಒಂದು ಕಡೆ ರಾಮನಿಗೆ ರಾವಣನ ಕುರಿತು ತಿಳಿದಿದೆ ಎನ್ನುವ ಸಂಶಯ ಹುಟ್ಟಿಸಿ ತನ್ನ ಕೆಲಸ ಸಾಧಿಸುವ ಸುಗ್ರೀವನ ಈ ಎಲ್ಲ ವಿವರಗಳು ರಾಮನ ಗಮನಕ್ಕೆ ಬಂದಿದೆ. ಆತ ಶಾಂತವಾದ ಸಮುದ್ರದಂತೆ ಗಾಂಭೀರ್ಯ ಮುಖಮುದ್ರೆಯನ್ನು ಹೊಂದಿ ಸುಗ್ರೀವನ ಕಾರ್ಯಸಾಧುವಾದುದಲ್ಲವೆನ್ನುವ ಮನೋಭಾವವನ್ನು ತೋರಿಸುತ್ತಾನೆ. ಆತ ಕೇಳಿದ ತಕ್ಷಣ ವಾಲಿಯನ್ನು ಕೊಲ್ಲಲು ಒಪ್ಪುವುದಿಲ್ಲ. ಸುಗ್ರೀವನಲ್ಲಿ “ನಿನಗೆ ವಾಲಿಯೊಡನೆ ವೈರಕ್ಕೆ ಕಾರಣವಾದ ವಿಷಯವನ್ನು ಮುಚ್ಚುಮರೆಯಿಲ್ಲದೇ ತಿಳಿಸು. ಆಗ ಅದನ್ನು ತುಲನೆ ಮಾಡಿ ನಿನಗೆ ಸುಖವನ್ನುಂಟುಮಾಡಲು ಯೋಚಿಸುವೆನು” ಎನ್ನುವ ಮಾತುಗಳು ಆತನ ನ್ಯಾಯತತ್ಪರತೆಯನ್ನು ತೋರಿಸುತ್ತದೆ. ಸುಖಾಸುಮ್ಮನೆ ರಾಮ ವಾಲಿಯನ್ನು ಕೊಲ್ಲಲು ಒಪ್ಪುವುದಿಲ್ಲ.

ಈಗ ಮಾತ್ರ ಸುಗ್ರೀವ ವಾಲಿಯೊಡನೆ ವೈರಕ್ಕೆ ಕಾರಣವಾದ ಎಲ್ಲಾ ವಿಷಯಗಳನ್ನೂ ಸಮಗ್ರವಾಗಿ ಯಾವ ಮುಚ್ಚುಮರೆಯೂ ಇಲ್ಲದೇ ವಿವರಿಸುತ್ತಾನೆ. ವಾಲಿ ಮಹಾ ಪರಾಕ್ರಮಿ ಎನ್ನುವದನ್ನು ವಿವರಿಸುತ್ತಾ ಮಾಯಾವಿ ರಾಕ್ಷಸನನ್ನು ಕೊಂದ ಪ್ರಕರಣವನ್ನು ತಿಳಿಸುತ್ತಾನೆ. ಗುಹೆಗೆ ಹೊಕ್ಕ ವಾಲಿ ಸತ್ತನೆಂದು ತಿಳಿದು ತಾನು ಕಿಷ್ಕೆಂಧೆಗೆ ಬಂದು ತಾರೆಯ ಸಂಗಡ ಸಿಂಹಾಸನದ ಮೇಲೆ ಕುಳಿತ ವಿಷಯವನ್ನು ಹೇಳುವಾಗ ವಿಷಯಗಳನ್ನು ಯಥಾವತ್ತಾಗಿ ತಿಳಿಸುತ್ತಾನೆ. ವಾಲಿಯ ಪರಾಕ್ರಮವನ್ನು ಹೇಳುವಾಗ ವಾಲಿ ರಾವಣನನ್ನು ಅಂಗದನ ತೊಟ್ಟಿಲಿಗೆ ಕಟ್ಟಿದ ಕಥೆಯನ್ನು ಬಿಟ್ಟು ಮಾಯಾವಿ, ದುಂದುಭಿಯ ವಿಷಯಗಳನ್ನು ಮಾತ್ರ ಹೇಳುತ್ತಾನೆ. ರಾವಣನ ಪರಾಕ್ರಮದ ವಿಷಯವನ್ನು ಲಕ್ಷ್ಮಣನಿಗೆ ಹೇಳುವವಳು ತಾರೆ. ಇಷ್ಟೆಲ್ಲಾ ಹೇಳಿದ ಸುಗ್ರೀವನಿಗೆ ರಾಮನ ಪರಾಕ್ರಮದಲ್ಲಿ ಸಂಶಯ ಇನ್ನೂ ಹೋಗಿಲ್ಲ. ದುಂದುಭಿಯನ್ನು ಕೊಂದು ಎಸೆದ ಆ ಕಾರಣಕ್ಕಾಗಿ ಶಾಪಬಂದ ಸಂಗತಿಗಳನ್ನು ಹೇಳಿ, ವಿನಯದಿಂದಲೇ “ನಿನ್ನ ಪರಾಕ್ರಮ ಎಷ್ಟೇಂದು ನನಗೆ ತಿಳಿದಿಲ್ಲ. ವಾಲಿಯ ಪ್ರರಾಕ್ರಮವನ್ನು ನೋಡಿರುವೆ. ನಿನ್ನನ್ನು ಅವಮಾನಿಸಬೇಕೆಂದಿಲ್ಲ” ಎನ್ನುತ್ತಾನೆ. ವಾಲಿ ಬಿಲ್ಲುವಿದ್ಯೆಯಲ್ಲಿಯೂ ನಿಪುಣನಾಗಿದ್ದ. ಆತ ಅಲ್ಲಿ ಕಾಣಿಸುವ ಏಳು ಸಾಲವೃಕ್ಷಗಳನ್ನು ಒಂದೊಂದಾಗಿ ತನ್ನ ಬಾಣದಿಂದ ಕತ್ತರಿಸುತ್ತಿರುತ್ತಾನೆ ಎನ್ನುತ್ತಾನೆ. ಅದನ್ನು ರಾಮ ಮಾಡಿ ತೋರಿಸಲಿ ಎಂದು ಆಜ್ಞಾಪಿಸುವ ಆದರೆ ವಿನಯವನ್ನು ಪ್ರಕಟಿಸುತ್ತಾ ಹೇಳುವ ಮಾತುಗಳು ಆತನ ಸ್ವಭಾವ ಮರ್ಕಟದಂತೆ ಸಂಶಯ ಮತ್ತು ಚಂಚಲಚಿತ್ತವಾಗಿತ್ತು ಎಂಬುದಾಗಿ ಊಹಿಸಬಹುದು.

ಅಮಾಯಕ, ಹೆಡ್ಡ, ಮುಗ್ದ ಎಂದೆಲ್ಲ ಕರೆಯಿಸಿಕೊಳ್ಳುವ ಸುಗ್ರೀವ ಈಗ ಈ ಲೇಖನದ ಪ್ರಾರಂಭದಲ್ಲಿ ವಿವರಿಸಿದ ಶ್ಲೋಕದ ಪ್ರಕಾರ “ನನ್ನ ಅಣ್ಣನು ನನ್ನನ್ನು ಪುನಃ ಹಿಂಸಿಸಿದಂತಹ ರೀತಿಯಲ್ಲಿ ನೀನು ಅವನನ್ನು ನಿಗ್ರಹಿಸಬೇಕು” ಎಂದು ಬೇಡಿಕೊಳ್ಳುವನು. ವಾಲಿ ವಧೆಯೆನ್ನುವುದು ರಾಮ ತಾನಾಗಿಯೇ ತಂದುಕೊಂಡ ಆಯ್ಕೆಯಲ್ಲ; ಸುಗ್ರೀವನ ಬೇಡಿಕೆಯೂ ಅದೇ ಆಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.

ರಾಮ ಸುಗ್ರೀವನ ಈ ಎಲ್ಲ ಸ್ವಭಾವಗಳ ಅರಿವಿದ್ದೂ ಆತನ ಕಾರ್ಯವನ್ನು ಮಾಡಲು ಮುಂದಾಗುವುದು ಸೀತಾನ್ವೇಷಣೆಗೆ ಸುಗ್ರೀವನ ಸಹಾಯಕ್ಕಾಗಿ ಒಂದೇ ಅಲ್ಲ, ಆತನಿಗೆ ಮಹತ್ವವಾದ ಇನ್ನೊಂದು ಕಾರ್ಯವೂ ಆಗಬೇಕಿತ್ತು. ಅದಕ್ಕೆ ನೆಪವಾದವ ಸುಗ್ರೀವ ಎನ್ನುವ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.