Saturday, 21st September 2024

IND vs BAN: ಪಂತ್‌-ಗಿಲ್‌ ಶತಕ; 287ಕ್ಕೆ ಭಾರತ ಡಿಕ್ಲೇರ್‌

IND vs BAN

ಚೆನ್ನೈ: ಯುವ ಆಟಗಾರರಾದ ರಿಷಭ್‌ ಪಂತ್‌(109) ಮತ್ತು ಶುಭಮನ್‌ ಗಿಲ್(119*)‌ ಬಾರಿಸಿದ ಸೊಗಾಸಾದ ಶತಕದ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬರೋಬ್ಬರಿ 514 ರನ್‌ಗಳ ಮುನ್ನಡೆ ಸಾಧಿಸಿ ಡಿಕ್ಲೇರ್‌ ಘೋಷಿಸಿದೆ. ಸದ್ಯದ ಸ್ಥಿತಿಯಲ್ಲಿ ಈ ಪಂದ್ಯ ಭಾರತದ ಕೈವಶವಾಗುವ ಎಲ್ಲ ಸೂಚನೆ ಕಂಡುಬಂದಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 81 ರನ್ ಬಾರಿಸಿದ್ದ ಭಾರತ ಶನಿವಾರ ಮೂರನೇ ದಿನದಾಟದಲ್ಲಿ 4 ವಿಕೆಟ್‌ಗೆ 287 ರನ್‌ ಬಾರಿಸಿ ಒಟ್ಟು 514 ರನ್‌ಗಳ ಮುನ್ನಡೆ ಸಾಧಿಸಿತು. ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿದ ಪಂತ್‌ ಮತ್ತು ಗಿಲ್‌ ಬಾಂಗ್ಲಾ ಬೌಲರ್‌ಗಳ ಮೇಲೆರಗಿ ಸಿಕ್ಸರ್‌ ಮತ್ತು ಬೌಂಡರಿಗಳ ಮೂಲಕ ದಂಡಿಸಿದರು. ಉಭಯ ಆಟಗಾರರು ಸೇರಿಕೊಂಡು 4ನೇ ವಿಕೆಟ್‌ಗೆ 167 ರನ್‌ ಒಟ್ಟುಗೂಡಿಸಿದರು.

ಶುಕ್ರವಾರ 12ರನ್‌ ಗಳಿಸಿದ್ದ ಪಂತ್‌ ಶನಿವಾರ ಬಿರುಸಿನ ಬ್ಯಾಟಿಂಗ್‌ ಮೂಲಕ ಆಕರ್ಷಕ ಶತಕ ಬಾರಿಸಿ ಸಂಭ್ರಮಿಸಿದರು. 72 ರನ್‌ ಗಳಿಸಿದ್ದ ವೇಳೆ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂತೋ ಅವರಿಂದ ಕ್ಯಾಚ್‌ ಕೈಚೆಲ್ಲಿ ಜೀವದಾನ ಪಡೆದ ಪಂತ್‌ ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು. 128 ಎಸೆತ ಎದುರಿಸಿದ ಪಂತ್‌ 13 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ 109 ರನ್‌ ಬಾರಿಸಿದರು. ಇದು ಪಂತ್‌ ಅವರ 6ನೇ ಟೆಸ್ಟ್‌ ಶತಕವಾಗಿದೆ.

ಪಂತ್‌ ಈ ಶತಕ ಬಾರಿಸುವ ಮೂಲಕ ವಿಕೆಟ್‌ ಕೀಪರ್‌ ಆಗಿ ಭಾರತ ಪರ ಟೆಸ್ಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಧೋನಿ ಕೂಡ 6 ಟೆಸ್ಟ್‌ ಶತಕ ಬಾರಿಸಿದ್ದಾರೆ. ಕಡಿಮೆ ಇನಿಂಗ್ಸ್‌ನಿಂದ ಈ ಸಾಧನೆಗೈದ ಲೆಕ್ಕಾಚಾರದಲ್ಲಿ ಪಂತ್‌ಗೆ ಅಗ್ರಸ್ಥಾನ. ಪಂತ್‌ 58 ಇನಿಂಗ್ಸ್‌ನಲ್ಲಿ ಈ ದಾಖಲೆ ಬರೆದರೆ, ಧೋನಿ 144 ಇನಿಂಗ್ಸ್‌ ಆಡಿದ್ದರು.

ಪಂತ್‌ ಔಟಾದ ಬಳಿಕ ರಾಹುಲ್‌ ಜತೆಗೂಡಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಶುಭಮನ್‌ ಗಿಲ್‌ 4 ಸಿಕ್ಸರ್‌ ಮತ್ತು 10 ಬೌಂಡರಿ ನೆರವಿನಿಂದ ಅಜೇಯ 119 ರನ್‌ ಬಾರಿಸಿದರು. ಈ ವೇಳೆ ನಾಯಕ ರೋಹಿತ್‌ ಶರ್ಮ ಡಿಕ್ಲೇರ್‌ ಘೋಷಿಸಿದರು. ರಾಹುಲ್‌ ಅಜೇಯ 22 ರನ್‌ ಕಲೆಹಾಕಿದರು. ಒಟ್ಟು ನಾಲ್ಕು ಬೌಂಡರಿ ಬಾರಿಸಿದರು. ಸದ್ಯ ಬಾಂಗ್ಲಾ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ ಕೇವಲ 149 ರನ್‌ಗೆ ಸರ್ವಪತನ ಕಂಡಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ್ದ ಭಾರತ 376 ರನ್‌ ಬಾರಿಸಿತ್ತು.