Saturday, 21st September 2024

CM Siddaramaiah: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಪ್ರತಿಯೊಬ್ಬರ ನೆಮ್ಮದಿ ಹಾಳು: ಸಿದ್ದರಾಮಯ್ಯ

CM Siddaramaiah

ಮೈಸೂರು: ಸುಳ್ಳು ಸುದ್ದಿಗಳಿಗೆ (Fake News) ಬ್ರೇಕ್ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ. ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಎಚ್ಚರಿಸಿದರು.‌ ಮೈಸೂರು ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು (Press Day) ಉದ್ಘಾಟಿಸಿ, ಪ್ರಶಸ್ತಿ ವಿತರಿಸಿ, ಮಾತನಾಡಿದರು.

ವಾಕ್ ಸ್ವಾತಂತ್ರ್ಯ ನಮಗೆ ನಮ್ಮ‌ ಸಂವಿಧಾನ ನೀಡಿರುವ ಅತ್ಯುನ್ನತ ಮೌಲ್ಯ. ಸಂವಿಧಾನದ ಮೂರು ಅಂಗಗಳಿಗೆ ಅಪಾಯ ಬಂದರೆ ಸಮಾಜಕ್ಕೆ ಅಪಾಯ ಬಂದಂತೆ. ವಾಕ್ ಸ್ವಾತಂತ್ರ್ಯ ಆಚರಿಸುವ ಪತ್ರಿಕಾ ರಂಗಕ್ಕೆ ಯಾವ ನಿರ್ಬಂಧಗಳೂ ಇರಬಾರದು ಎನ್ನುವುದನ್ನು ಪಂಡಿತ್ ನೆಹರೂ ಅವರೂ ಬಹಳ ಒತ್ತಿ ಹೇಳಿದ್ದರು ಎಂದು ಸಿಎಂ ವಿವರಿಸಿದರು.

ಈ ಸುದ್ದಿಯನ್ನೂ ಓದಿ | MLA Munirathna: ಶಾಸಕ ಮುನಿರತ್ನ ಮತ್ತೆ ಜೈಲುಪಾಲು; ಅತ್ಯಾಚಾರ ಪ್ರಕರಣದಲ್ಲಿ 14 ದಿನ ನ್ಯಾಯಾಂಗ ಬಂಧನ

ಸುಳ್ಳು ಸುದ್ದಿಗಳ ಅನಾಹುತಗಳಿಗೆ ಉದಾಹರಣೆ ನೀಡಿದ ಮುಖ್ಯಮಂತ್ರಿಗಳು, “ನಾನು ಸದನದಲ್ಲಿ ಮಾತನಾಡುವಾಗ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಿದ ಮಾತನ್ನು ನಾನು ಉದಾಹರಿಸಿದ್ದೆ. ” ಸಾಲ ಮನ್ನಾ ಮಾಡೋದಕ್ಕೆ ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇದೆಯಾ” ಎಂದು ಯಡಿಯೂರಪ್ಪ ಅವರು ಸದನದಲ್ಲೇ ಹೇಳಿದ್ದರು. ಈ ಮಾತನ್ನು ನಾನು ಉದಾಹರಿಸಿದ್ದೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ನಾನೇ ಆ ಮಾತು ಹೇಳಿದ್ದಾಗಿ ನಕಲಿ‌ ಸುದ್ದಿ ಸೃಷ್ಟಿಸಿ, ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಬೆರೆಸಿ ತಪ್ಪು ಸಂದೇಶ ಹರಡಿದರು. ಇದರಿಂದ ನಷ್ಟ ಆಗಿದ್ದು ಸಮಾಜಕ್ಕೇ ಹೊರತು ನನಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಫೇಕ್ ನ್ಯೂಸ್ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ

ಫೇಕ್ ನ್ಯೂಸ್ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ನಾವು ಕಾನೂನು ಮಾಡಿದ್ದೇವೆ. ಆದರೆ ಕೇವಲ ಕಾನೂನಿನಿಂದ ಮಾತ್ರ ಫೇಕ್ ನ್ಯೂಸ್ ತಡೆಯಲು ಸಾಧ್ಯವಿಲ್ಲ. ಇಡೀ ಸಮಾಜ ಇದರ ವಿರುದ್ಧ ಧ್ವನಿ ಎತ್ತಿದರೆ ಮಾತ್ರ ಸಾಧ್ಯ ಎಂದರು.

ಈ ಸುದ್ದಿಯನ್ನೂ ಓದಿ | IND vs BAN: ಕೊಹ್ಲಿಯ ದಾಖಲೆ ಮುರಿದ ಶುಭಮನ್‌ ಗಿಲ್‌

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಪ್ರಜಾವಾಣಿ ಪತ್ರಿಕೆ ಸಂಪಾದಕ ರವೀಂದ್ರ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಪುಷ್ಪಾ ಅಮರನಾಥ್, ಶಾಸಕರಾದ ರವಿಶಂಕರ್, ತನ್ವೀರ್ ಸೇಠ್, ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್, ಕಾರ್ಯದರ್ಶಿ ರವಿ ಪಾಂಡವಪುರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.