Saturday, 21st September 2024

Pratap Simha: ಶಾಸಕ ದರ್ಶನಾಪುರ ಹಿಂದು ವಿರೋಧಿ: ಪ್ರತಾಪ್‌ ಸಿಂಹ ಕಿಡಿ

Pratap Simha

ಶಹಾಪುರ: ಗಣೇಶ ವಿಸರ್ಜನೆ ನಡೆಯಬಾರದು ಎಂಬ ದುರುದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಶರಣಬಸಪ್ಪ ದರ್ಶನಾಪುರ ಶನಿವಾರ ಇಡೀ ದಿನ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ. ಆಂದೋಲ ಸ್ವಾಮೀಜಿ ಶಹಾಪುರಕ್ಕೆ ಬರಬಾರದು ಎಂಬ ಭೀತಿಯಿಂದ ತಾಲೂಕು ಪ್ರವೇಶ ನಿರ್ಬಂಧಿಸುವ ಮೂಲಕ ಹಿಂದು ವಿರೋಧಿ ಶಾಸಕ ತಮ್ಮ ಪುಕ್ಕಲುತನ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಕಿಡಿಕಾರಿದ್ದಾರೆ.

ಶಹಾಪುರ ನಗರದಲ್ಲಿ ಹಿಂದು ಮಹಾಗಣಪತಿ ಮಹಾ ಮಂಡಳಿಯಿಂದ ಶನಿವಾರ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಈದ್ಗಾ ಮೆರವಣಿಗೆ ಮಾಡಲು ಪರವಾನಗಿ ಬೇಕಿಲ್ಲ, ಆದರೆ, ಗಣೇಶ ಉತ್ಸವ ನಡೆಸಲು ನಗರಸಭೆ ಪರವಾನಗಿ ನೀಡಬೇಕು. ಇದು ನಾಚಿಕೆಗೇಡು ಸಂಗತಿಯಾಗಿದೆ. ದೇಶದಲ್ಲಿ ಶೇ.80ರಷ್ಟು ಹಿಂದುಗಳಿದ್ದು, ಕೇವಲ ಶೇ.20 ರಷ್ಟು ಇರುವ ಮುಸ್ಲಿಮರ ಓಲೈಕೆಗೆ ಶರಣಬಸಪ್ಪ ದರ್ಶನಾಪುರ ಇಳಿಯಬಾರದಿತ್ತು ಎಂದು ಆಕ್ರೋಶ ಹೊರಹಾಕಿದರು.

ಈ ಸುದ್ದಿಯನ್ನೂ ಓದಿ | Chalavadi Narayanaswamy: ಭಾರತಕ್ಕೆ ಅಪಮಾನ ಮಾಡಿದ ಆರೋಪ; ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ ಬಿಜೆಪಿ

ಪೆಟ್ರೋಲ್‌ ಬಾಂಬ್, ತಲ್ವಾರ್, ಕಲ್ಲು ಹಿಡಿದರೆ ನಾವು ಹೆದರುತ್ತೇವೆಯೇ? ನ್ಯೂಕ್ಲಿಯರ್ ಬಾಂಬ್‌ ಸಿದ್ಧಪಡಿಸಿದವರು ಹಾಗೂ ಕ್ಷಿಪಣಿ ಸನ್ನದ್ಧ ಮಾಡಿದವರು ನಾವು ಎಂಬುವುದನ್ನು ಮತಾಂಧರು ಅರಿಯಲಿ ಎಂದು ಹೇಳಿದರು.

ನಮ್ಮ ಜಾತಿಯನ್ನು ತೊರೆದು ಹಿಂದುಗಳು ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಒಗ್ಗಟ್ಟಿನಿಂದ ನಾವೆಲ್ಲರೂ ಹೋರಾಟ ಮಾಡಬೇಕು. 2028 ರಲ್ಲಿ ಹಿಂದು ಯುವಕ, ಕ್ಷೇತ್ರದ ಶಾಸಕ ಆಗಲು ನಾವೆಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು.

ಮೆರವಣಿಗೆಯಲ್ಲಿ ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಅಮೀನರಡ್ಡಿ ಪಾಟೀಲ ಯಾಳಗಿ ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ, ಕರಣ ಸುಬೇದಾರ, ಶಿವರಾಜ ದೇಶಮುಖ, ರಾಜಶೇಖರ ಗೂಗಲ್, ಬಸವರಾಜ ವಿಭೂತಿಹಳ್ಳಿ, ಅಡಿವೆಪ್ಪ ಜಾಕಾ ಸೇರಿದಂತೆ ಹೆಚ್ಚಿನ ಯುವಕರು ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ | Tirupati Laddoo Row : ತಿರುಪತಿ ಲಡ್ಡುವಿನಲ್ಲಿ ಬೀಫ್‌ ಕೊಬ್ಬು, 11 ದಿನಗಳ ಪ್ರಾಯಶ್ಚಿತಕ್ಕೆ ಮುಂದಾದ ಡಿಸಿಎಂ ಪವನ್ ಕಲ್ಯಾಣ್‌

ಬಿಗಿ ಬಂದೋಬಸ್ತ್, 550 ಸಿಬ್ಬಂದಿ ನೇಮಕ

ಶಹಾಪುರ ನಗರದ ಡಾ. ಸುಬೇದಾರ ಆಸ್ಪತ್ರೆಯಿಂದ ಸಂಜೆ 5 ಗಂಟೆಗೆ ಶೋಭಾಯಾತ್ರೆ ಆರಂಭಗೊಂಡಿತು. ಮೆರವಣಿಗೆಯುದ್ದಕ್ಕೂ ಪೊಲೀಸ್‌ ಪಡೆ ಸರ್ಪಗಾಪಲು ಹಾಕಲಾಗಿತ್ತು. ಮೂರು ಕೆಎಸ್ ಆರ್‌ಪಿ ತುಕಡಿ, 7 ಡಿಆರ್ ವ್ಯಾನ್, 4 ಡಿವೈಎಸ್ಪಿ, 50 ಸಿಪಿಐ, 20 ಪಿಎಸ್‌ಐ ಸೇರಿದಂತೆ ಸುಮಾರು 550 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.