Sunday, 22nd September 2024

Train derailment Attempt: ಕರ್ನಾಟಕದ ಯೋಧರಿದ್ದ ರೈಲು ಸ್ಫೋಟಕ್ಕೆ ಭಾರೀ ಸಂಚು; ತಪ್ಪಿದ ಭಾರೀ ದುರಂತ

Train Attempt

ನವದೆಹಲಿ: ಇತ್ತೀಚಿನ ದಿನಗಳಲ್ಲಿ ರೈಲುಗಳನ್ನು ಗುರಿಯಾಗಿಸಿ ಕಿಡಿಗೇಡಿಗಳು ದುಷ್ಕೃತ್ಯಕ್ಕೆ ಯತ್ನಿಸುತ್ತಿರುವ ಘಟನೆಗಳು(Train derailment Attempt) ಆಗಾಗ ಬೆಳಕಿಗೆ ಬರುತ್ತಿವೆ. ಇದೀಗ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ರೈಲು ದುರಂತಕ್ಕೆ ಸಂಚು ರೂಪಿಸಿದ್ದು, ಅದೃಷ್ಟವಶಾತ್‌ ಅಧಿಕಾರಿಗಳ ಸಮಯಪ್ರಜ್ಞೆಯಿಂಧ ಅವಘಡವೊಂದು ತಪ್ಪಿದೆ. ಮದ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೇನಾ ಯೋಧರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿ ಭಾರೀ ‍ಸ್ಫೋಟಕ್ಕೆ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿದೆ.

ಸಗ್ಪಥಾ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸೇನೆಯ ವಿಶೇಷ ರೈಲೊಂದು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಹೊರಟಿತ್ತು. ಈ ರೈಲನ್ನು ಗುರಿಯಾಗಿಸಿ ಕಿಡಿಗೇಡಿಗಳು ‍ಸ್ಫೋಟಕ್ಕೆ ಸಂಚು ರೂಪಿಸಿದ್ದರು. ರೈಲ್ವೇ ಹಳಿಯುದ್ದಕ್ಕೂ ಸ್ಫೋಟಕಗಳನ್ನು ಅಳವಡಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದರು. ಸ್ಫೋಟಕಗಳ ಮೇಲೆ ರೈಲು ಹೋಗುತ್ತಿದ್ದಂತೆ ಲೋಕೋ ಪೈಲಟ್‌ಗೆ ಇದರ ಅರಿವಾಗಿದ್ದು, ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್‌ ಯಾರಿಗೂ ಗಾಯಗಳಾಗಿಲ್ಲ. ಸ್ಥಳಕ್ಕೆ ಭಯೋತ್ಪಾದಕ ನಿಗ್ರಹ ದಳ(ATS) ಮತ್ತು ಎನ್‌ಐಎ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿದೆ.

ಯುಪಿಯಲ್ಲೂ ಹಳಿ ಮೇಲೆ ಸಿಲಿಂಡರ್‌ ಪತ್ತೆ

ಉತ್ತರಪ್ರದೇಶದಲ್ಲೂ ರೈಲ್ವೇ ಹಳಿ ಮೇಲೆ ಸಿಲಿಂಡರ್‌ ಪತ್ತೆಯಾಗಿದೆ. ಕಾನ್ಪುರದ ಪ್ರೇಮ್ಪುರ ಸಮೀಪದಲ್ಲಿ ರೈಲ್ವೇ ಹಳಿಯಲ್ಲಿ ಖಾಲಿ ಸಿಲಿಂಡರ್‌ ಒಂದು ಪತ್ತೆಯಾಗಿದೆ. ಸಿಲಿಂಡರ್‌ ಕಾಣುತ್ತಿದ್ದಂತೆ ಗೂಡ್ಸ್‌ ರೈಲಿನ ಲೋಕೋ ಪೈಲಟ್‌ ಎಮರ್ಜೆನ್ಸಿ ಬ್ರೇಕ್‌ ಹಾಕಿದ್ದ ಪರಿಣಾಮ ದುರಂತ ತಪ್ಪಿದೆ. ಇನ್ನು ರೈಲು ಪ್ರಯಾಗರಾಜ್‌ನಿಂದ ಕಾನ್ಪುರಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.

ಸಿಲಿಂಡರ್ ಐದು ಕಿಲೋಗ್ರಾಂ ಸಾಮರ್ಥ್ಯದ ಮತ್ತು ಖಾಲಿಯಾಗಿದೆ ಎಂದು ಕಂಡುಬಂದಿದೆ. ಅದನ್ನು ಟ್ರ್ಯಾಕ್‌ನಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಸೆಪ್ಟೆಂಬರ್ 8 ರಂದು, ಪ್ರಯಾಗರಾಜ್‌ನಿಂದ ಭಿವಾನಿ ಕಡೆಗೆ ಹೋಗುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ಅನ್ನು ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್ ಇಟ್ಟು ಹಳಿತಪ್ಪಿಸುವ ಯತ್ನ ನಡೆದಿತ್ತು. ರೈಲು ಹಠಾತ್ತನೆ ನಿಲ್ಲುವ ಮುನ್ನವೇ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿತ್ತು.

ಈ ಸುದ್ದಿಯನ್ನೂ ಓದಿ: Indian Railways: ಅತೀ ಹೆಚ್ಚು ಆದಾಯ ತಂದುಕೊಡುವ ರೈಲು ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್!