Monday, 23rd September 2024

Lightning strike: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ 4 ಮಂದಿ ಸಾವು

Lightning strike

ಯಾದಗಿರಿ: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ (Lightning strike) ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಜಿನಕೇರಾ ತಾಂಡಾದಲ್ಲಿ ಸೋಮವಾರ ನಡೆದಿದೆ. ಕಿಶನ್ ಜಾಧವ (33), ಸುನಿಬಾಯಿ ರಾಠೋಡ್ (30), ಚನ್ನಪ್ಪ ಜಾಧವ (24) ಹಾಗೂ ನೇನು ಜಾಧವ(18) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಯಾದಗಿರಿ ತಾಲೂಕಿನ ಜಿನಕೇರಾ ತಾಂಡಾದ ಜಮೀನೊಂದರಲ್ಲಿ ಈರುಳ್ಳಿ ಬೆಳೆ ನಾಟಿ ಮಾಡಲು ಮೃತರು ಸೇರಿ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ತೆರಳಿದ್ದು, ಮಧ್ಯಾಹ್ನ ಏಕಾಏಕಿ ಮಳೆ ಸುರಿದ ಪರಿಣಾಮ ಅಲ್ಲಿಯೇ ಸಮೀಪದಲ್ಲಿದ್ದ ದುರ್ಗಮ್ಮದೇವಿ ದೇವಸ್ಥಾನದ ಶೆಡ್‌ನಲ್ಲಿ ರಕ್ಷಣೆ ಪಡೆಯುತ್ತಿದ್ದರು. ಈ ವೇಳೆ ಸಿಡಿಲು ಬಡಿದು ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಇನ್ನೊಬ್ಬರು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನೂ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Nipah Virus: ನಿಫಾ ಸೋಂಕು ಆತಂಕ, ಬೆಂಗಳೂರಿನಲ್ಲಿ 41 ಜನರಿಗೆ ಹೋಮ್‌ ಕ್ವಾರಂಟೈನ್

ತಾಯಿಯ ತಿಥಿಗೆ ಬಂದಿದ್ದ ಉದ್ಯಮಿಯ ಕೊಚ್ಚಿ ಕೊಲೆ, ಪತ್ನಿ ಗಂಭೀರ

karwar murder case

ಕಾರವಾರ: ತಾಯಿಯ ತಿಥಿ ಕಾರ್ಯವನ್ನು ಮುಗಿಸಿ ಮರಳಲಿದ್ದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅವರ ಮನೆಯಲ್ಲಿಯೇ ಭೀಕರವಾಗಿ ಹತ್ಯೆ (Karwar Murder Case) ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣದಲ್ಲಿ (Karawar news) ನಡೆದಿದೆ. ಉದ್ಯಮಿಯ ಪತ್ನಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾತಕಿಗಳು ಪರಾರಿಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮುಂಜಾನೆ 5 ಗಂಟೆಯ ಸುಮಾರಿಗೆ ರಾಜು ನಾಯ್ಕ್‌ (52) ಎಂಬವರ ಮನೆಗೆ ದುಷ್ಕರ್ಮಿಗಳ ತಂಡ ಬಂದಿದೆ. ಪೂನಾಕ್ಕೆ ತೆರಳಲು ಕಾರಿಗೆ ಬ್ಯಾಗ್‌ ತುಂಬುತ್ತಿರುವ ವೇಳೆಯಲ್ಲಿ ದುಷ್ಕರ್ಮಿಗಳ ತಂಡ ರಾಜು ನಾಯ್ಕ್‌ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆಯಲ್ಲಿ ರಾಜು ನಾಯ್ಕ್‌ ಮನೆಯ ಒಳಗೆ ಓಡಿದ್ದಾರೆ. ಆದರೆ ಬೆನ್ನಟ್ಟಿ ಬಂದ ದುಷ್ಕರ್ಮಿಗಳ ತಂಡ ಮನೆಯ ಒಳಗೆ ಮಾರಕಾಸ್ತ್ರಗಳಿಂದ ರಾಜು ನಾಯ್ಕ್‌ ಅವರನ್ನು ಕೊಚ್ಚಿ ಹಾಕಿದೆ.

ನಂತರ ದುಷ್ಕರ್ಮಿಗಳು ಶೌಚಾಲಯದಲ್ಲಿದ್ದ ರಾಜು ನಾಯ್ಕ್‌ ಪತ್ನಿ ವೈಶಾಲಿ ಅವರ ಮೇಲೂ ಹಲ್ಲೆ ನಡೆಸಿ ಸ್ಥಳದಿಂದ ಎಸ್ಕೇಪ್‌ ಆಗಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ವೈಶಾಲಿ ಅವರು ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಕೂಡಲೇ ವೈಶಾಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಯಿಯ ತಿಥಿ ಕಾರ್ಯಕ್ಕಾಗಿ ರಾಜು ನಾಯ್ಕ್‌ ಹಾಗೂ ಪತ್ನಿ ವೈಶಾಲಿ ಅವರು ಊರಿಗೆ ಆಗಮಿಸಿದ್ದರು. ಕಾರ್ಯಕ್ರಮವನ್ನು ಮುಗಿಸಿಕೊಂಡು ಇಂದು ಪೂನಾಕ್ಕೆ ತೆರಳುವವರಿದ್ದರು ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಚಿತ್ತಾಕುಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಸ್ಥಳಕ್ಕೆ ಉತ್ತರ ಕನ್ನಡ ಎಸ್‌ಪಿ ನಾರಾಯಣ ಅವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಡಿವೈಎಸ್‌ಪಿ ಗಿರೀಶ್‌ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ.

ಇದನ್ನೂ ಓದಿ: Murder Case: ಬೆಂಗಳೂರಲ್ಲಿ ಯುವತಿಯ ಬರ್ಬರ ಕೊಲೆ; ದೇಹ ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟ ಹಂತಕರು!

ರಾಜು ನಾಯ್ಕ್‌ ಹಾಗೂ ವೈಶಾಲಿ ದಂಪತಿಗಳ ಮಗ ವಿನಾಯಕ ನಾಯ್ಕ್‌ ಅಮೇರಿಕಾದಲ್ಲಿ ಎಂಎಸ್‌ ಮಾಡುತ್ತಿದ್ದಾರೆ. ಹೀಗಾಗಿ ದಂಪತಿಗಳು ಮಾತ್ರವೇ ಊರಿಗೆ ಬಂದಿದ್ದರು. ರಾಜು ನಾಯ್ಕ್‌ ಅವರಿಗೆ ಊರಿನಲ್ಲಿ ಯಾವುದೇ ವ್ಯವಹಾರ ಕೂಡ ಇರಲಿಲ್ಲ. ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿದೆಯೋ ಅಥವಾ ವ್ಯವಹಾರದ ಕಾರಣಕ್ಕೆ ಈ ಹತ್ಯೆಯಾಗಿದೆಯೋ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.