Tuesday, 24th September 2024

Ravi Hunj Column: ಎಲ್ಲಾ ಕಿಲುಬನ್ನು ತೊಳೆವ ಕಾಲ ಈಗ ಬಂದಿದೆ…

ಬಸವ ಮಂಟಪ

ರವಿ ಹಂಜ್

ಬಸವಣ್ಣನು ಸಮ ಸಮಾಜಕ್ಕಾಗಿ ಸನಾತನವನ್ನು ಧಿಕ್ಕರಿಸಿ ವರ್ಣಸಂಕರಗೊಳಿಸಿ ನಿರೀಶ್ವರವಾದಿಯಾಗಿ ನಿರಾಕಾರ ದೇವೋಪಾಸನೆಯಲ್ಲಿ ಜನರನ್ನು ತೊಡಗಿಸಿದ ಎನ್ನುವ ಬಸವತತ್ವ, ಬಸವ ಸಂವಿಧಾನ, ಲಿಂಗಾಯತ ಮತಸ್ಥಾಪಕ ಇತ್ಯಾದಿ ಹೊರೆಕಟ್ಟುಗಳನ್ನು ಹೊತ್ತು ವಿಭಜನೆಯಲ್ಲಿ ತೊಡಗಿರುವವರು, ಸನಾತನ ಧರ್ಮದ ನೀತಿಯನ್ನೇ ಬಸವಣ್ಣನು ಮುಂದುವರಿಸಲು ಕ್ರಾಂತಿ ಮಾಡಿದ ಎಂಬುದನ್ನು ಗಮನಿಸಬೇಕು.

ಹುಟ್ಟಿನಿಂದ ಜಾತಿ’ಯ ಆರಂಭಿಕ ಕಾಲಘಟ್ಟವಾದ 11ನೇ ಶತಮಾನದ ಶ್ರೀವೈಷ್ಣವ ಪಂಥದ ರಾಮಾನುಜಾ ಚಾರ್ಯರು ಅಂತ್ಯಜರಿಗೆ ದೀಕ್ಷೆ ಕೊಟ್ಟು ಶ್ರೀವೈಷ್ಣವರಾಗಿಸಿದ್ದು ಸಹ ಅಂದಿನವರೆಗೂ ಇದ್ದ ಸನಾತನ ವ್ಯವಸ್ಥೆಯ ಮುಂದುವರಿಕೆಯಾಗಿತ್ತೇ ಹೊರತು ಸಂಶೋಽತ ‘ಸಂಕಥನ’ಗಳು ಹೇಳುವಂತೆ ಯಾವುದೋ ಕ್ರಾಂತಿಕಾರಕ ಬದಲಾವಣೆಯಾಗಿಯಲ್ಲ! ಏಕೆಂದರೆ ‘ಹುಟ್ಟಿನಿಂದ ಜಾತಿ’ ಆಗಷ್ಟೇ ಆರಂಭವಾಗಿತ್ತು ಮತ್ತು ಅದು ಅಷ್ಟಾಗಿ ದಕ್ಷಿಣ ಭಾರತದಲ್ಲಿ ಇನ್ನೂ ಪ್ರಚಲಿತವಾಗಿರಲಿಲ್ಲ.

ಹಾಗಾಗಿ ಅಲ್ಲಲ್ಲಿ ಕೇಳಿಬಂದ ಈ ನವನೀತಿಯನ್ನು ರಾಮಾನುಜಾಚಾರ್ಯರು ಅಷ್ಟಾಗಿ ಪರಿಗಣಿಸದೆ ಯಥಾವತ್ತಾಗಿ
ಚಾಂಡಾಲರು, ದಾಸರೆನಿಸಿಕೊಂಡವರಿಗೆ ದೀಕ್ಷೆ ನೀಡಿದ್ದರು. ಇವರ ನಂತರದ ಶತಮಾನದಲ್ಲಿ ‘ಹುಟ್ಟಿನಿಂದ ಜಾತಿ’ಯು ಹೆಚ್ಚು ಪ್ರವರ್ಧಮಾನಕ್ಕೆ ಬಂದು ಸಮಾಜದಲ್ಲಿ ಬಲವಾಗಿ ಬೇರೂರಿತು. ಹಾಗಾಗಿಯೇ ರಾಮಾನುಜಾ ಚಾರ್ಯರ ಈ ಕೃತ್ಯವು ಬಸವಣ್ಣನವರಷ್ಟು ಕ್ರಾಂತಿಕಾರಕ ಎನ್ನಿಸಿಕೊಳ್ಳಲಿಲ್ಲ ಮತ್ತು ಪ್ರಾಮುಖ್ಯ ಪಡೆಯಲಿಲ್ಲ.

ಕ್ರಿ.ಶ. ೧೨ನೇ ಶತಮಾನದಲ್ಲಿ ಬಸವಣ್ಣನು ಸಮ ಸಮಾಜಕ್ಕಾಗಿ ಸನಾತನವನ್ನು ಧಿಕ್ಕರಿಸಿ ವರ್ಣಸಂಕರಗೊಳಿಸಿ ನಿರೀಶ್ವರವಾದಿಯಾಗಿ ನಿರಾಕಾರ ನಿರಾಮಯ ದೇವೋಪಾಸನೆಯಲ್ಲಿ ಜನರನ್ನು ತೊಡಗಿಸಿದ ಎನ್ನುವ ಬಸವತತ್ವ, ಬಸವ ಸಂವಿಧಾನ, ಲಿಂಗಾಯತ ಮತಸ್ಥಾಪಕ ಇತ್ಯಾದಿ ಹೊರೆಕಟ್ಟುಗಳನ್ನು ಹೊತ್ತು ವಿಭಜನೆಯಲ್ಲಿ ತೊಡಗಿರು ವವರು ಗಮನಿಸಬೇಕಾದ ಅಂಶವೇನೆಂದರೆ ಸನಾತನ ಧರ್ಮದ ನೀತಿಯನ್ನೇ ಬಸವಣ್ಣನು ಮುಂದುವರಿಸಲು ಕ್ರಾಂತಿ ಮಾಡಿದನು ಎಂಬುದು!

ಬಸವಣ್ಣನು ಸಮಾಜಕ್ಕೆ ನಿರಾಕಾರ ಪರವಸ್ತುವನ್ನು ಅನುಸರಿಸಲು ಕರೆ ನೀಡಿದನು ಎನ್ನುವುದನ್ನೇ ಭಾರತದ ಎ ಧರ್ಮಗ್ರಂಥಗಳೂ ಹೇಳುವುದು. ಮುಖ್ಯವಾಗಿ ಉಪನಿಷತ್ತುಗಳೂ ‘ಸೋಹಂ’ ಎಂಬ eನದಾಚರಣೆಯುಳ್ಳ ಈ ವಿಧವೇ ಅತಿವರ್ಣವೆಂದೂ ಶ್ರೇಷ್ಠವೆಂದೂ ಸಾರುತ್ತವೆ. ಚಾಂಡಾಲನಾದರೂ ಶಿವಭಕ್ತಿವಂತನಾದರೆ ಅವನೇ ಶ್ರೇಷ್ಠನು. ಶಿವಭಕ್ತಿ ವಿಹೀನ ದ್ವಿಜನೂ ಕನಿಷ್ಠನು ಎಂದು ಉಪನಿಷತ್ತು ಹೇಳುತ್ತದೆ. ಇದನ್ನೇ ಬಸವಣ್ಣನು ಆಚರಿಸಿದ್ದುದು, ಬೋಧಿಸಿದ್ದುದು, ಜೀವಿಸಿದ್ದುದು. ಓರ್ವ ಚಾಂಡಾಲನಿಗೆ ಸಂಸ್ಕಾರ ಕೊಟ್ಟು ಸಾಮಾಜಿಕವಾಗಿ ಭೇದವಿಲ್ಲದೆ ಉನ್ನತೀಕರಿಸುತ್ತಿದ್ದ ಶತಶತಮಾನಗಳ ಸನಾತನ ನೀತಿಯನ್ನು ಒಪ್ಪಿ ಅಪ್ಪಿ ‘ಹುಟ್ಟಿನಿಂದ ಜಾತಿ’ ತಪ್ಪೆಂದು ಖಂಡಿಸಿ ಅಂತ್ಯಜರಿಂದ ಹಿಡಿದು ಎಲ್ಲರಿಗೂ ಲಿಂಗದೀಕ್ಷೆ ಕೊಟ್ಟು ಸನಾತನ ವ್ಯವಸ್ಥೆಯನ್ನು ಯಥಾ ವತ್ತಾಗಿ ಪಾಲಿಸಿದ್ದುದೇ ಕಲ್ಯಾಣ ಕ್ರಾಂತಿ!

ಇದನ್ನು ತಿದ್ದಿ ತೀಡಿ ತಮ್ಮ ತಮ್ಮ ಕ್ವಚಿತ್ ಯಃಕಶ್ಚಿತ್ ಬಳಕೆಗೆ ಬಳಸುತ್ತಿರುವ ಪ್ರಚ್ಛನ್ನ ಬಸವವಾದಿಗಳಿಂದ ಲಿಂಗಾಯತವನ್ನು ಲಿಂಗಾಯತರು ಕಾಪಾಡಿಕೊಳ್ಳಬೇಕಾದ ತುರ್ತು ಇಂದಿನದು. ಇಂಥ ಮುಂಬರುವ ಸನ್ನಿವೇಶವನ್ನು ಮನಗಂಡೇ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು, “ಸನಾತನ ಧರ್ಮಗ್ರಂಥಗಳ ಮೂಲ ಸತ್ವ, ಧ್ಯೇಯ ಧೋರಣೆಗಳನ್ನು ಕಾಲಕ್ರಮೇಣ ದೂರ ಸರಿಸಿ, ತಿರಸ್ಕರಿಸಿ ತಮಗೆ ಅನುಕೂಲವಾಗುವಂಥ
ನಿರೂಪಣೆ, ವ್ಯಾಖ್ಯಾನಗಳನ್ನು ಮಾಡುತ್ತ ಕೊನೆಗೊಂದು ದಿನ ಈ ಮೂಗಿನ ನೇರ ಹೇಳಿಕೆಗಳೇ ಧರ್ಮವೆಂದಿದ್ದು, ಧರ್ಮವಾದದ್ದು ನಮ್ಮ ರಾಷ್ಟ್ರದ ದೊಡ್ಡ ದುರಂತ.

ಇಂಥ ದುರಾಚಾರ, ತನ್ಮೂಲಕ ಶೋಷಣೆಗಳ ಫಲವಾಗಿ ಸಾವಿರಾರು ವರ್ಷಗಳ ತನಕ ನಮ್ಮ ಜನಸಾಮಾನ್ಯರು ಅಂಧಕಾರದಲ್ಲಿ ಬದುಕಬೇಕಾಯಿತು. ಬಹುಜನರ ಹಿತವನ್ನು ಕಡೆಗಣಿಸುವ ಪಂಥಗಳು ಕ್ರಿಯಾಶೂನ್ಯವಾಗುವು ದನ್ನು ಇತಿಹಾಸದಲ್ಲಿ ನೋಡಿದ್ದೇವೆ. ಧರ್ಮಕ್ಕೆ ಹಿಡಿಯುವ ಈ ಕಿಲುಬನ್ನು ಕಾಲಕಾಲಕ್ಕೆ ತೆಗೆದು ಹಾಕುವ ಕೆಲಸವನ್ನು ಮಾಡಲೇಬೇಕು. ಇದು ಯಾವುದೋ ಒಂದು ಯುಗ, ಶತಮಾನದಲ್ಲಿ ನಡೆದು ಸುಖೀರಾಷ್ಟ್ರ ನಿರ್ಮಾಣ ವಾಗುತ್ತದೆಯೆನ್ನುವುದು ಅವಾಸ್ತವದ ಮಾತಾದೀತು. ನಿರಂತರ ಎಚ್ಚರದಲ್ಲಿದ್ದು, ಅಂದಂದಿನ ಜನ ಈ ಕೆಲಸವನ್ನು ಕೈಗೊಳ್ಳಬೇಕು” ಎಂದು ‘ಚಿನ್ಮೂಲಾದ್ರಿ ಚೇತನ’ ಕೃತಿಯಲ್ಲಿ ಹೇಳಿದ್ದಾರೆ.

ಅಂದು ನಿಜಲಿಂಗಪ್ಪನವರು ಕಂಡಂತೆಯೇ ಇಂದು ಸಹ, ಮೂಲ ಸತ್ವ, ಧ್ಯೇಯ, ಧೋರಣೆಗಳನ್ನು ತಿರಸ್ಕರಿಸಿ ತಮಗೆ ಅನುಕೂಲವಾಗುವಂಥ ನಿರೂಪಣೆ, ವ್ಯಾಖ್ಯಾನಗಳನ್ನು ಮಾಡುತ್ತ ಕೊನೆಗೊಂದು ದಿನ ಈ ಮೂಗಿನ ನೇರ ಹೇಳಿಕೆಗಳೇ ಧರ್ಮವೆನ್ನುವುದು ಇಂದು ಸಾಬೀತಾಗುತ್ತಿದೆ. ಒಂದು ಪ್ರದೇಶ, ಕಾಲಮಾನಕ್ಕೆ ಸೂಕ್ತವಾಗಿದ್ದ ಮಾರ್ಕ್ಸ್‌ವಾದದ ಸೊಬಗಿಗೆ ಕೆಂಪು ರಂಗಿಗೆ ಮನಸೋತ ಭಾರತೀಯ ವಿಶ್ವವಿದ್ಯಾಲಯಗಳ ಪಂಥೀಯ ಪ್ರೊಫೆಸರರು ನಮ್ಮಲ್ಲೂ ಮಾರ್ಕ್ಸ್, ಲೆನಿನ್, ಸ್ಟಾಲಿನ್ ರೀತಿಯ ನಾಯಕರು ಆಗಿಹೋಗಿದ್ದಾರೆ.

ಕಮ್ಯುನಿಸಂ ಮೊದಲ್ಗೊಂಡಿದ್ದೇ ಭಾರತದಲ್ಲಿ ಎನ್ನುತ್ತಾ ಚಪ್ಪಾಳೆ ಗಿಟ್ಟಿಸುವ ಭರದಲ್ಲಿ ‘ಕಾಯಕವೇ ಕೈಲಾಸ’ ಎಂದು ಬಸವಣ್ಣ ಹೇಳಿದ್ದಾನೆ ಎನ್ನುವ ಅವರ ತಾಳಕ್ಕೆ ಗೌರವ ಡಾಕ್ಟರೇಟ್ ಮಠಾಧೀಶರು ಕುಣಿದು ಇಡೀ ಲಿಂಗಾಯತವನ್ನೇ ದಿಕ್ಕು ತಪ್ಪಿಸಿದ್ದಾರೆ.

ಆಗಷ್ಟೇ ಸ್ವಾತಂತ್ರ್ಯ ಪಡೆದು ಭಾರತೀಯ ಶೈಕ್ಷಣಿಕ ರಂಗವು ಸಾಕ್ಷರತೆಯಿಂದ ಸಂಶೋಧನೆಗೆ ಹೊರಳುವ ಮಾರ್ಪಿ
ನ ಘಟ್ಟದಲ್ಲಿ (paradigm shift)) ಈ ಎಲ್ಲಾ ‘ಮರುಳು -ಪಂಡಿತ-ಆರಾಧ್ಯ’ರು ಯುವಜನತೆಯ ದಿಕ್ಕು ತಪ್ಪಿಸಿದರು.

“ಧರ್ಮ ಎನ್ನುವುದು ಒಂದು ಅಫೀಮು: ಕಾರ್ಲ್ ಮಾಕ್ಸ್ ” ಎಂಬ ಉದ್ಘೋಷವನ್ನು ಅರ್ಧ ಶತಮಾನದಿಂದ
ಭಾರತೀಯ ಕಮ್ಯುನಿಸ್ಟರು ಗೋಡೆ ಗೋಡೆಗಳ ಮೇಲೆ, ಸರಕಾರಿ ಬಸ್ಸುಗಳ ಮೇಲೆ ಮತ್ತು ಈಗ ಫೇಸ್‌ಬುಕ್ ಗೋಡೆಗಳ ಮೇಲೆ ಬರೆದಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ನಿಜದಲ್ಲಿ ಕಾರ್ಲ್ ಮಾರ್ಕ್ಸ್ ಹೇಳಿದ್ದುದು, “ಧರ್ಮ ಎನ್ನುವುದು‌ ಜನಸಮೂಹದ ಅಫೀಮಿನಂತೆ. ಅದು ನಿರ್ಗತಿಕರ ಭರವಸೆ, ದಮನಿತರ ದಮನ, ಸ್ಪೂರ್ತಿ ರಹಿತರ ಸ್ಪೂರ್ತಿ!

ಧರ್ಮವು ಯಾವ ಭರವಸೆಯನ್ನು ನೀಡುತ್ತಿದೆಯೋ ಅಂಥ ಭರವಸೆ ಯನ್ನು ನೀಡುವ ಪರ್ಯಾಯ ಮಾತ್ರವೇ ಅದನ್ನು ಬದಲಿಸಬಹುದು”. ಕಾರ್ಲ್ ಮಾರ್ಕ್ಸ್ ಧರ್ಮವನ್ನು ಕುರಿತು ಹೇಳಿರುವ ಮಾತು ಅವನ ಅನುಭಾವದ ಮಾತಲ್ಲದೆ ಜಾಗತಿಕ ಸತ್ಯ ಸಹ. ಕೇವಲ ಯುರೋಪಿನಲ್ಲಲ್ಲದೆ ಭಾರತದಲ್ಲಿ ಸಹ ಧರ್ಮವು ಜನರಿಗೆ ಸಮಾನತೆಯ ವಿರುದ್ಧ ಹೋರಾಡಲು ಬಲ ತುಂಬಿ ಪ್ರೇರಕ ಶಕ್ತಿಯಾದದ್ದನ್ನು ಭಕ್ತಿಪಂಥದುದ್ದಕ್ಕೂ ಕಾಣಬಹುದು.

ಇನ್ನು ಕಾರ್ಲ್ ಮಾರ್ಕ್ಸ್ ನುಡಿಯನ್ನೇ ಹೀಗೆ ತಿರುಚಿ ಅರಚಿ ಬದಲಾಯಿಸಿದ ಕಮ್ಯುನಿಸ್ಟರು ವಚನಗಳ ಅರ್ಥ ವನ್ನು ಎಷ್ಟರ ಮಟ್ಟಿಗೆ ತಿರುಚಿರಬಹುದು? ಭಾರತೀಯ ಕಮ್ಯುನಿಸ್ಟರ ನಡೆ ಉದ್ದೇಶಪೂರ್ವಕವೋ, ಅರಿವಿನ ಕೊರತೆಯೋ ಎಂಬುದು ನಿಮ್ಮ ನಿಮ್ಮ ಆಲೋಚನೆಗೆ, ವಿವೇಚನೆಗೆ ಬಿಟ್ಟದ್ದು. ಇಂಥ ಮಾಂತ್ರಿಕ ಸಮ್ಮೋಹನ ಶಕ್ತಿಯ ಧಾರ್ಮಿಕ ಬಲವನ್ನು ನೆಚ್ಚಿಯೇ ಕರ್ನಾಟಕದ ಭಕ್ತಿಪಂಥದ ಚಳವಳಿ ಎನಿಸಿದ ಶರಣ ಚಳವಳಿ ನಡೆದದ್ದು. ಅದಾಗಲೇ ಜೈನರ ವಿರುದ್ಧದ ಹೋರಾಟದಲ್ಲಿ ನಿರತವಾಗಿದ್ದ ಲಿಂಗಾಯತವು ಯಾವಾಗ ಸಾಮಾಜಿಕ ಪಲ್ಲಟದ ‘ಹುಟ್ಟಿನಿಂದ ಜಾತಿ’ ನೀತಿಯನ್ನು ಅಳವಡಿಸಿಕೊಂಡಿತೋ ಆಗ ಅದರ ಬಸವಾದಿ ಶರಣರು ತಿರುಗಿ ಬಿದ್ದರು.

ಹಾಗಾಗಿಯೇ ವಚನಗಳನ್ನು ಈ ನೀತಿಯ ಪೂರ್ವಾರ್ಧ ಮತ್ತು ಉತ್ತರಾರ್ಧ ಎಂದು ನೋಡಿದಾಗ ಆಯಾಯ ಶರಣರ ವಚನಗಳಲ್ಲಿಯೇ ಪರಸ್ಪರ ದ್ವಂದ್ವ ಕಾಣುತ್ತದೆ. ಪೂರ್ವಾರ್ಧದಲ್ಲಿ ಹಾಡಿಹೊಗಳಿದ್ದ ಆದ್ಯರನ್ನು ಉತ್ತರಾರ್ಧದಲ್ಲಿ ಝಾಡಿಸಿzರೆ. ಈ ಸಂದಿಗ್ಧ ಕಾಲದಲ್ಲಿ, “ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ. ಬನಾಗಿ ಒನು ಅವರ, ಸಲ್ಲರು ಶಿವಪಥಕ್ಕೆ. ಒಳ್ಳಿಹ ಮೈಲಾರನ ಸಿಂಗಾರದಂತೆ, ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ, ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ” ಎಂದು ಬಸವಣ್ಣ ವಿಷಾದ ವ್ಯಕ್ತಪಡಿಸಿದ್ದಾನೆ (ಸಮಗ್ರ ವಚನ ಸಂಪುಟ:೧ ವಚನದ ಸಂಖ್ಯೆ: 634).

ಅಂತೆಯೇ, “ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ ಇಂಗಿತವನೇನೆಂದು ಬೆಸಗೊಂಬಿರಯ್ಯಾ? ಅವರ ನಡೆಯೇ ಆಗಮ, ಅವರ ನುಡಿಯೇ ವೇದ; ಅವರ ಲೋಕ ದಮಾನವರೆಂದೆನ್ನಬಹುದೆ ಅಯ್ಯಾ? ಅದೆಂತೆಂದಡೆ, ‘ಸಾಕ್ಷಿ ವೃಕ್ಷದ್ಭವತಿ ಬೀಜಂ ಹಿ ತದ್ವೃಕ್ಷೇ ಲೀಯತೇ ಪುನಃ; ರುದ್ರಲೋಕಂ ಪರಿತ್ಯಕ್ತಾವ ಶಿವಲೋಕೇ ಭವಿಷ್ಯತಿ’ ಎಂದುದಾಗಿ, ಅಂಕೋಲೆಯಬೀಜದಿಂದಾಯಿತ್ತು ವೃಕ್ಷವು; ಆ ವೃಕ್ಷ ಮರಳಿ ಆ ಬೀಜದೊಳಡಗಿತ್ತು. ಆ ಪ್ರಕಾರದಲ್ಲಿ ಲಿಂಗದೊಳಗಿಂದ ಪುರಾತನರುದ್ಭವಿಸಿ, ಮರಳಿ ಆ ಪುರಾತನರು ಆ ಲಿಂಗದೊಳಗೆ ಬೆರಸಿದರು ನೋಡಿರಯ್ಯಾ. ಇಂತಪ್ಪ ಪುರಾತನರಿಗೆ ನಾನು ಶರಣೆಂದು ಹುಟ್ಟುಗೆಟ್ಟೆನಯ್ಯಾ ಚೆನ್ನಮಲ್ಲಿಕಾರ್ಜುನಾ“ ಎಂಬ ಅಕ್ಕಮಹಾ ದೇವಿಯ ನೋವಿನ ವಚನವು (ಸಮಗ್ರ ವಚನ ಸಂಪುಟ: 5 ವಚನದ ಸಂಖ್ಯೆ: 353) ವೀರಶೈವ ರೇಣುಕರು (ಲಿಂಗದಿಂದುದಯಿಸಿದ) ತಮ್ಮ ಆದ್ಯರು ಎಂಬ ಸಾಕ್ಷ್ಯವನ್ನೂ ನೀಡುತ್ತದೆ.

ಬಸವಣ್ಣನ ನಿರ್ಧಾರವನ್ನು ಕೆಲವು ಶರಣರು ವಿರೋಧಿಸಿಯೂ ಇದ್ದಾರೆ. ಮೋಳಿಗೆ ಮಹಾದೇವಿಯ ಅಂಥ ಒಂದು
ವಚನ ಹೀಗಿದೆ: “ಊರ್ವಸಿ ಕರ್ಪೂರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರಲ್ಲದೆ, ಹಂದಿ ಕರ್ಪೂರವ ತಿಂದು ಎಲ್ಲರಿಗೆ ಮುತ್ತ ಕೊಟ್ಟಡೆ ಮೆಚ್ಚುವರೆ? ಹುಡುಹುಡು ಎಂದಟ್ಟುವರಲ್ಲದೆ, ನಡೆನುಡಿ ಶುದ್ಧವುಳ್ಳವರು ಪುರಾತನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮೆಚ್ಚುವರಲ್ಲದೆ, ನಡೆನುಡಿ ಶುದ್ಧವಿಲ್ಲದವರು ಪುರಾತ ನರ ವಚನವ ಓದಿದಡೆ ಅನುಭಾವವ ಮಾಡಿದಡೆ ಮೆಚ್ಚುವರೆ? ನಡೆನುಡಿ ಶುದ್ಧವಿಲ್ಲದವರು ಪುರಾತನರ ವಚನವ ಓದಿದಡೆ ಆ ಹಂದಿಗಿಂದ ಕರಕಷ್ಟ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ”.

ವಚನಗಳನ್ನು ಹೀಗೆ ಸಮಗ್ರವಾಗಿ ಅಂದಿನ ಕಾಲಮಾನದ ಸಾಮಾಜಿಕ, ಧಾರ್ಮಿಕ, ಮಾನವಿಕ ಮತ್ತು ರಾಜಕಾ ರಣದ ಹಿನ್ನೆಲೆಯಲ್ಲಿ ಗ್ರಹಿಸಬೇಕಾದ ವಿಶ್ವವಿದ್ಯಾಲಯದ ಸಂಶೋಧಕರು ಪಂಥಪ್ರೀತರಾಗಿ ಇಡೀ ಇತಿಹಾಸವನ್ನೇ ತಿರುಚಿ ಗೊಂದಲವನ್ನು ಸೃಷ್ಟಿಸಿದ್ದಾರೆ.

ನಿಜಾರ್ಥದಲ್ಲಿ ‘ಕಾಯಕವೇ ಕೈಲಾಸ’ ದೈನಂದಿನ ಔದ್ಯೋಗಿಕ ತಪಸ್ಸೆನಿಸಿದರೆ, ‘ಕಾಯವೇ ಕೈಲಾಸ’ ಎಂಬುದು
ಯೋಗಾಚಾರದ ಸಾಧನೆಯಾಗಿತ್ತು. ಅಂತೆಯೇ ಇಂದಿನ ಪ್ರಜಾಪ್ರಭುತ್ವ ಭಾರತ ದೇಶಕ್ಕೆ ಸಂವಿಧಾನವೆನ್ನುವುದು ಹೇಗಿದೆಯೋ ಹಾಗೆಯೇ ಲಿಂಗಾಯತಕ್ಕೆ ಕರಣಹಸಿಗೆ, ಮಂತ್ರಗೋಪ್ಯ, ಮಿಶ್ರಾರ್ಪಣ ಕೃತಿಗಳು. ಇಂದಿನ ಸಂಸತ್ ಅಥವಾ ವಿಧಾನಸೌಧ ಕಲಾಪಗಳ ದಾಖಲೆಯಂತೆ ಅಂದಿನ ಅನುಭವ ಮಂಟಪದ ಕಲಾಪದ ವಚನಗಳು. ಕಲಾಪದ ಚರ್ಚೆಗಳೇ ಸಂವಿಧಾನವಲ್ಲ!

ಇಂಥ ಎಲ್ಲಾ ಕಿಲುಬನ್ನು ತೊಳೆಯುವ ಕಾಲ ಬಂದಿದೆ. ‘ವಚನ ದರ್ಶನ’ ಇದಕ್ಕೆ ಮುನ್ನುಡಿ ಬರೆದಿದೆ. ಈಗ ವಚನ ದರ್ಶನಕ್ಕೆ ಪ್ರತಿಯಾಗಿ ವಚನ ಕಮ್ಮಟಗಳನ್ನು ಹಮ್ಮಿಕೊಂಡಿರುವ ಮಠಾಧೀಶರು ತಾತ್ವಿಕ ಮತ್ತು ಸತ್ಯದ ನೆಲೆ ಯಲ್ಲಿ ವಚನಗಳನ್ನು ಆಮೂಲಾಗ್ರವಾಗಿ ಗ್ರಹಿಸಿ ತಮ್ಮ ಪ್ರಾಚೀನ ಪರಂಪರೆಯನ್ನು ಅರಿಯುವ ತಿಳಿವಿಗೆ ನಾಂದಿ ಯನ್ನು ಹಾಡದೆ ಕಾವಿಯೊಳಗಿನ ಖಾದಿಯಂತಿದ್ದರೆ ಮುಂದಿನ ಪೀಳಿಗೆ ಅವರನ್ನು ಕ್ಷಮಿಸದು.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)

ಇದನ್ನೂ ಓದಿ: Ravi Hunj column: ಇಲ್ಲ, ಇದು ಹೀಗೆಯೇ…