ಕರಾಚಿ: ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್(Kamran Akmal) ಅವರು ಪಾಕ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕ್ ತಂಡ ಪ್ರಗತಿ ಸಾಧಿಸಬೇಕಿದ್ದರೆ ಪಾಕ್ ಕ್ರಿಕೆಟ್ ಮಂಡಳಿ(Pakistan Cricket Board) ಬಿಸಿಸಿಐ(BCCI)ಯ ಸಲಹೆಯನ್ನು ಪಡೆಯಬೇಕಿದೆ ಎಂದು ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕಮ್ರಾನ್ ಅಕ್ಮಲ್, ʼಬಿಸಿಸಿಐನ ವೃತ್ತಿಪರತೆ, ಆಯ್ಕೆ ಮಂಡಳಿ, ನಾಯಕ ಮತ್ತು ತರಬೇತುದಾರರು ಇವರೆಲ್ಲ ಸೇರಿಕೊಂಡು ತಂಡವನ್ನು ಉತ್ತಮ ಪ್ರದರ್ಶನ ತೋರುವಂತೆ ಮಾಡಿದ್ದಾರೆ. ಆದರೆ ನಮ್ಮ ಕ್ರಿಕೆಟ್ ಮಂಡಳಿ ರಾಜಕೀಯ ಕಿತ್ತಾಟದೊಂದಿಗೆ ತಂಡದ ಪ್ರಗತಿಯ ಕಡೆ ಚಿಂತಿಸುತ್ತಿಲ್ಲ. ನಾವೂ ಭಾರತ ತಂಡದಂತೆ ಉತ್ತಮ ಪ್ರದರ್ಶನ ತೋರಬೇಕಾದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐನ್ನು ಮಾದರಿಯಾಗಿರಿಸಿಕೊಂಡು ಕೆಲಸ ಮಾಡಬೇಕಿದೆ’ ಎಂದು ಹೇಳಿದ್ದಾರೆ.
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಇದಾದ ಬಳಿಕ ಪಾಕಿಸ್ತಾನ ಕ್ರಿಕೆಟ್ ನಲ್ಲಿ ಹಲವಾರು ಬದಲಾವಣೆಗಳಾಗಿದ್ದವು. ತಂಡದ ನಾಯಕ, ಕೋಚ್ ಬದಲಾವಣೆ ಮಾಡಿದಂತೆ ಆಯ್ಕೆ ಸಮಿತಿಯನ್ನು ಕೂಡಾ ಬದಲು ಮಾಡಲಾಗಿತ್ತು. ವಹಾಬ್ ರಿಯಾಜ್ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ವಹಾಬ್‌ಗೆ ಸಹಾಯಕರನ್ನಾಗಿ ಮೂವರನ್ನು ನೇಮಕ ಮಾಡಲಾಗಿತ್ತು. ಇದರಲ್ಲಿ ಕಮ್ರಾನ್ ಅಕ್ಮಲ್ ಕೂಡ ಇದ್ದರು. ಆದರೆ ಈ ಸಮಿತಿ ನೇಮಕಗೊಂಡ ಕೆಲವೇ ತಿಂಗಳುಗಳಲ್ಲಿ ಮತ್ತೆ ಸಮಿತಿಯನ್ನು ಬದಲಾವಣೆ ಮಾಡಲಾಗಿತ್ತು. ಒಟ್ಟಾರೆ ಪಾಕ್ ತಂಡ ಆಡಿದ ಯಾವುದೇ ಸರಣಿ ಸೋತರೂ ಕೂಡ ಆಯ್ಕೆ ಸಮಿತಿ ಮತ್ತು ಕೋಚಿಂಗ್ ಸಿಬ್ಬಂದಿಗಳ ತಲೆ ದಂಡ ಮಾಡುತ್ತಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ
ಭದ್ರತಾ ವ್ಯವಸ್ಥೆಗೆ ಐಸಿಸಿ ತೃಪ್ತಿ; ಪಾಕ್ ನೆಲದಲ್ಲೇ ಚಾಂಪಿಯನ್ಸ್ ಟ್ರೋಫಿ
ದುಬೈ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಚಾಂಪಿಯನ್ಸ್ ಟ್ರೋಫಿಯ(Champions Trophy 2025) ಹಿನ್ನೆಲೆಯಲ್ಲಿ ಅಲ್ಲಿನ ಭದ್ರತೆ ಸಹಿತ ಇತರ ವ್ಯವಸ್ಥೆಗಳ ಪರಿಶೀಲನೆಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಐವರು ಸದಸ್ಯರ ನಿಯೋಗವು ಕಳೆದ ವಾರ ಕರಾಚಿಗೆ ಭೇಟಿ ನೀಡಿತ್ತು. ಇದೀಗ ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಐಸಿಸಿ ಅಧಿಕಾರಿಗಳು ಪಿಸಿಬಿಯ ಸಿದ್ಧತೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ ಟೂರ್ನಿಯನ್ನು ಪಾಕ್‌ನಲ್ಲೇ ನಡೆಸಲು ಐಸಿಸಿ ಅಧಿಕಾರಿಗಳು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಐಸಿಸಿ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಐಸಿಸಿ ಆಯೋಗವು ಪಂದ್ಯಾವಳಿ ನಡೆಯುವ ಲಾಹೋರ್‌ನ ಗಡಾಫಿ ಸ್ಟೇಡಿಯಂ, ರಾವಲ್ಪಿಂಡಿ, ಕರಾಚಿ ರಾಷ್ಟ್ರೀಯ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತಾ ಕ್ರಮಗಳು, ಮೂಲಸೌಕರ್ಯ ಮತ್ತು ಇತರ ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು. ಐಸಿಸಿಯ ಕಾರ್ಯಕ್ರಮ ಮತ್ತು ಭದ್ರತಾ ವಿಭಾಗದ ಉನ್ನತ ಅಧಿಕಾರಿಗಳು ಹಾಗೂ ಕ್ರಿಕೆಟ್ ಮತ್ತು ಪ್ರೊಡಕ್ಷನ್ ವಿಭಾಗದ ಜನರಲ್ ಮ್ಯಾನೇಜರ್ ಈ ನಿಯೋಗದಲ್ಲಿದ್ದರು.