Wednesday, 25th September 2024

Kalinga Rao: ಸ್ಫೂರ್ತಿಪಥ ಅಂಕಣ: ಕನ್ನಡದ ಸುಗಮ ಸಂಗೀತ ಲೋಕದ ಉದಯಸೂರ್ಯ- ಪಿ ಕಾಳಿಂಗ ರಾವ್

kalinga rao

‘ಕಿನ್ನರ ಕಂಠದ ಕನ್ನಡ ಕೋಗಿಲೆ’ ಎಂದು ಕರೆಸಿಕೊಂಡ ಮಧುರ ಗಾಯಕ

Rajendra Bhat K
  • ರಾಜೇಂದ್ರ ಭಟ್ ಕೆ.

ಆಕಾಶವಾಣಿಯಲ್ಲಿ (Akashavani) ದಿನವೂ ಬೆಳಿಗ್ಗೆ ಬರುತ್ತಿದ್ದ ಭಾವಗೀತೆಗಳ ಕಾರ್ಯಕ್ರಮದಲ್ಲಿ ಹುಯಿಲಗೋಳ ನಾರಾಯಣ ರಾಯರ ‘ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ಬಂತು ಎಂದರೆ ನಮ್ಮ ಕಿವಿಗಳು ನೆಟ್ಟಗಾಗುತ್ತಿದ್ದವು. ಅದ್ಭುತವಾದ ಸಾಹಿತ್ಯ, ಬಡಿದೆಬ್ಬಿಸುವ ಕನ್ನಡದ ಪ್ರೀತಿ, ಸುಂದರವಾದ ರಾಗ ಸಂಯೋಜನೆ, ಅಷ್ಟೇ ಮಾಧುರ್ಯದ ಜೇನ್ದನಿ ಎಲ್ಲವೂ ಸೇರಿ ಆ ಹಾಡಿನ ಶ್ರೇಷ್ಠತೆಗೆ ಕಾರಣ ಆಗಿದ್ದವು. ರಾಗಸಂಯೋಜನೆ ಮತ್ತು ಹಾಡಿದವರು ನಮ್ಮ ಉಡುಪಿ ಜಿಲ್ಲೆಯವರು ಎಂಬುದು ನಮ್ಮ ಅಭಿಮಾನವನ್ನು ಇಮ್ಮಡಿ ಮಾಡುತ್ತಿದ್ದವು. ಅಂತಹ ನೂರಾರು ಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಆ ಸುಗಮ ಸಂಗೀತದ ದೊರೆ ಎಂದೇ ಕರೆಸಿಕೊಂಡವರು – ಪಿ. ಕಾಳಿಂಗ ರಾವ್ (P Kalinga Rao) ಅವರು.

ಉಡುಪಿ ಜಿಲ್ಲೆಯ ಪಾಂಡೇಶ್ವರ ಅವರ ಮೂಲ

ಉಡುಪಿ ಜಿಲ್ಲೆಯ ಸಾಸ್ತಾನ ಎಂಬ ಊರಿದೆ. ಅದನ್ನು ನಾನು
‘ಕಲಾವಿದರ ಸಂತೆ’ ಎಂದು ಕರೆಯುತ್ತಿದ್ದೆ. ಅದಕ್ಕೆ ಕಾರಣ ಅಲ್ಲಿ ನೂರಾರು ಜನ ಸಂಗೀತ ಕಲಾವಿದರು ಹುಟ್ಟಿದ್ದರು! ಅದರ ಪಕ್ಕದಲ್ಲಿ ಇರುವ ಪಾಂಡೇಶ್ವರದ ಮೂಲದವರು ನಮ್ಮ ಕಾಳಿಂಗರಾಯರು ( ಜನನ 1914 ಆಗಸ್ಟ್ 31). ಬಾಲ್ಯದ ಬಡತನದ ಕಾರಣಕ್ಕಾಗಿ ಅವರು ಪ್ರಾಥಮಿಕ ಶಾಲೆಯ ಡ್ರಾಪ್ ಔಟ್ ಆಗಿದ್ದರು. ಸಂಗೀತದ ತೀವ್ರ ಆಸಕ್ತಿ ಇದ್ದ ಕಾರಣ ರಾಮಚಂದ್ರ ಬುವಾ ಎಂಬ ಗುರುವಿನ ಮೂಲಕ ಕರ್ನಾಟಕ ಸಂಗೀತವನ್ನು ಕಲಿತರು. ಮುಂದೆ ಪ್ರಸಿದ್ಧವಾದ ಗುಬ್ಬಿ ವೀರಣ್ಣ ಡ್ರಾಮಾ ಕಂಪೆನಿಯಲ್ಲಿ ಸಂಗೀತ ಕಲಾವಿದರಾಗಿ ದುಡಿದರು. ಅವರ ಹಾಡುಗಳನ್ನು ಕೇಳಲು ಪ್ರೇಕ್ಷಕರು ಕಿಕ್ಕಿರಿದು ಟೆಂಟ್ ತುಂಬುತ್ತಿದ್ದ ಕಾಲ ಅದು. ಆದರೆ ಹೊಟ್ಟೆಪಾಡು ಕಷ್ಟ ಅಂತಾದಾಗ ಅವರು ಚೆನ್ನೈಯ ದಾರಿಯನ್ನು ಹಿಡಿದರು. ಒಂದು ಸಂಗೀತ ಶಾಲೆಯಲ್ಲಿ ಸಂಗೀತ ಗುರುವಾಗಿ, ಮುಂದೆ ಪ್ರಿನ್ಸಿಪಾಲ್ ಕೂಡ ಆಗಿ ಸಂಗೀತಲೋಕದಲ್ಲಿ ಮುಳುಗಿಬಿಟ್ಟರು.

ಬೆನ್ನು ಬಿಡದ ಸಿನೆಮಾ ನಂಟು

ಆಗಿನ ಕಾಲದಲ್ಲಿ ಚೆನ್ನೈ ನಗರವು ಎಲ್ಲ ದಕ್ಷಿಣ ಭಾರತದ ಸಿನೆಮಾಗಳ ಚಟುವಟಿಕೆಯ ಕೇಂದ್ರವಾಗಿದ್ದ ಕಾರಣ ದೊಡ್ಡ ದೊಡ್ಡ ಕಲಾವಿದರ ಪರಿಚಯವು ಅವರಿಗೆ ಆಯಿತು. ಮೊದಲು ‘ಪ್ರೇಮಸಾಗರ’ ಎಂಬ ತಮಿಳು ಸಿನೆಮಾಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಗಿ ದುಡಿದರು. ಆಗ ಪರಿಚಯವಾದ ಕನ್ನಡ ಸಿನೆಮಾರಂಗದ ಭೀಷ್ಮಾಚಾರ್ಯ ಎಂದೇ ಕರೆಸಿಕೊಂಡ ಆರ್ ನಾಗೇಂದ್ರ ರಾಯರು ಅವರನ್ನು ಆಮಂತ್ರಿಸಿ ತಮ್ಮ ‘ವಸಂತ ಸೇನಾ ‘ ಸಿನೆಮಾಕ್ಕೆ ಸಂಗೀತ ನಿರ್ದೇಶನ ಮಾಡಲು ಹೇಳಿದರು. ಸಿನೆಮಾ ಮತ್ತು ಹಾಡುಗಳು ಸೂಪರ್ ಹಿಟ್ ಆದವು. ಮುಂದೆ ಕೈವಾರ ಮಹಾತ್ಮೆ, ನಟ ಶೇಖರ, ಅಬ್ಬಾ ಆ ಹುಡುಗಿ, ಮಹಾ ಶಿಲ್ಪಿ, ತರಂಗ, ಕಿತ್ತೂರು ಚೆನ್ನಮ್ಮ, ಭಕ್ತ ರಾಮದಾಸ ಮೊದಲಾದ ಸಿನೆಮಾಗಳ ಸಂಗೀತ ನಿರ್ದೇಶಕರಾಗಿ ಅದ್ಭುತ ಹಾಡುಗಳನ್ನು ಅವರು ಸಮರ್ಪಣೆ ಮಾಡಿದರು. ಬಡತನದ ಕಾರಣ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿದ್ದ ಕಾಳಿಂಗರಾಯರು ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಸಿನೆಮಾ ರಂಗಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗೂ ಗಾಯಕರಾಗಿ ಕೀರ್ತಿಯ ಶಿಖರವೇರಿದ್ದು ಸಣ್ಣ ಸಾಧನೆಯೇ ಅಲ್ಲ! ಅವರಿಗೆ ಆರು ಭಾಷೆಗಳಲ್ಲಿ ಮಾತಾಡುವ ಜ್ಞಾನ ಇತ್ತು!

ಸುಗಮ ಸಂಗೀತರಂಗಕ್ಕೆ ಎಳೆದು ತಂದವರು ಅನಕೃ

ಸಿನೆಮಾ ರಂಗದ ಚಮಕ್ ಲೋಕದಲ್ಲಿ ಮುಳುಗಿ ಹೋಗಿದ್ದ ಕಾಳಿಂಗ ರಾಯರನ್ನು ಕನ್ನಡದ ಸುಗಮ ಸಂಗೀತ ಲೋಕಕ್ಕೆ ಎಳೆದು ತಂದವರು ಕನ್ನಡದ ಖ್ಯಾತ ಕಾದಂಬರಿ ಸಾಮ್ರಾಟರಾದ ಅನಕೃ ಅವರು.

‘ಕನ್ನಡದಲ್ಲಿ ಅತ್ಯಂತ ಶ್ರೀಮಂತ ಭಾವಗೀತೆಗಳು ಇವೆ. ನಿನ್ನ ಕಂಪೋಸಿಂಗ್ ತುಂಬ ಅದ್ಭುತ ಇದೆ. ನೀನು ಬಂದು ರಾಗ ಸಂಯೋಜನೆ ಮಾಡಬೇಕು. ನಿನ್ನ ಧ್ವನಿಯ ಮಾಧುರ್ಯವನ್ನು ಇಡೀ ಕನ್ನಡನಾಡು ಕೇಳಬೇಕು’ ಎಂದು ತನ್ನ ಗೆಳೆಯನಿಗೆ ಒತ್ತಾಯದಲ್ಲಿ ಹೇಳಿ ಕನ್ನಡಕ್ಕೆ ಕರೆತಂದ ಕೀರ್ತಿ ಅದು ಅನಕೃ ಅವರಿಗೆ ಸಲ್ಲಬೇಕು. ಅದಕ್ಕಾಗಿ ಕನ್ನಡದ ಸುಗಮ ಸಂಗೀತ ಲೋಕವು ಅನಕೃ ಅವರಿಗೆ ಋಣಿ ಆಗಿರಬೇಕು.

ಆ ನಿರ್ಧಾರವು ಕಾಳಿಂಗರಾಯರ ಬದುಕಿನ ಬಹಳ ದೊಡ್ಡ ತಿರುವು ಆಯಿತು. ಅವರು ಕರ್ನಾಟಕ ಸಂಗೀತವನ್ನು ಅರೆದು ಕುಡಿದಿದ್ದರು. ಹಿಂದುಸ್ತಾನಿ ಸಂಗೀತ, ಜಾನಪದ, ಪಾಶ್ಚಾತ್ಯ ಹೀಗೆ ಎಲ್ಲ ಸಂಗೀತ ಪ್ರಕಾರಗಳಲ್ಲಿ ಅವರಿಗೆ ಪ್ರಭುತ್ವ ಇತ್ತು. ಅದರಿಂದಾಗಿ ಕನ್ನಡ ಸಾರಸ್ವತ ಲೋಕಕ್ಕೆ ನೂರಾರು ಅದ್ಭುತವಾದ ಭಾವಗೀತೆಗಳು, ಜಾನಪದ ಮತ್ತು ದೇಶಭಕ್ತಿ ಗೀತೆಗಳು ದೊರೆತವು.

ಮೂಡಲ್ ಕುಣಿಗಲ್ ಕೆರೆ, ಬಾರಯ್ಯ ಬೆಳದಿಂಗಳೆ, ತೂಗಿರೇ ಚಿನ್ನವಾ ತೂಗಿರೇ ರನ್ನವಾ, ಮನವೆಂಬ ಸರಸಿಯಲ್ಲಿ, ಮಾಡು ಸಿಕ್ಕದಲ್ಲ, ಯಾರು ಹಿತವರು ನಿನಗೆ, ಏರಿಸಿ ಹಾರಿಸಿ ಕನ್ನಡದ ಬಾವುಟ, ಎಲ್ಲಾದರೂ ಇರು ಎಂತಾದರೂ ಇರು ಮೊದಲಾದ ಅಮರವಾದ ಹಾಡುಗಳು ಕನ್ನಡಕ್ಕೆ ಸಮರ್ಪಣೆ ಆದದ್ದು ಆ ಕಾಲಘಟ್ಟದಲ್ಲಿ! ಎಲ್ಲದರ ಹಿಂದೆ ಕಾಳಿಂಗರಾಯರ ಸಂಗೀತ ಸ್ಪರ್ಶ ಇತ್ತು ಮತ್ತು ಮಾಧುರ್ಯದ ಧ್ವನಿ ಇತ್ತು! ಜಿ ಪಿ ರಾಜರತ್ನಂ ಅವರ
‘ರತ್ನನ ಪದಗಳು’ ವೈಭವದ ಹುಟ್ಟು ಪಡೆದದ್ದು ಕಾಳಿಂಗರಾಯರ ಕಂಠದಲ್ಲಿ!

ಬ್ರಹ್ಮಾ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ ಕೈನಾ!

ಈ ರಾಜರತ್ನಂ ಹಾಡನ್ನು ಒಮ್ಮೆ ನೀವು ಕಾಳಿಂಗರಾಯರ ಮಾದಕ ಧ್ವನಿಯಲ್ಲಿ ಕೇಳಿನೋಡಿ. ಹರಿಹರನ ರಗಳೆಗಳು, ಮಂಕುತಿಮ್ಮನ ಕಗ್ಗದ ಸಾಲುಗಳು, ಬಸವಣ್ಣ ಮೊದಲಾದ ಶರಣರ ವಚನ ಸಾಹಿತ್ಯ… ಹೀಗೆ ಸಾಹಿತ್ಯದ ಪ್ರತೀಯೊಂದು ವಿಭಾಗದಲ್ಲೂ ಕಾಳಿಂಗರಾಯರು ತಮ್ಮ ಸಿಗ್ನೇಚರ್ ಮುದ್ರೆಯನ್ನು ಒತ್ತುತ್ತಾ ಹೋಗಿದ್ದಾರೆ. ಮುಂದೆ ಬಂದ ಗಾಯಕರಾದ ಮೈಸೂರು ಅನಂತ ಸ್ವಾಮಿ, ಸಿ.ಅಶ್ವತ್, ಶಿವಮೊಗ್ಗ ಸುಬ್ಬಣ್ಣ ಇವರೆಲ್ಲರೂ ಕಾಳಿಂಗರಾಯರು ಕಟ್ಟಿದ ಸುಗಮ ಸಂಗೀತದ ಪಂಚಾಂಗದ ಮೇಲೆ ಕನ್ನಡದ ಭವ್ಯ ಸೌಧವನ್ನೇ ಕಟ್ಟಿದರು ಎನ್ನಬಹುದು.

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು..

ಕನ್ನಡದ ಏಕೀಕರಣದ ಹೋರಾಟದ ಕಾವು ಆಗ ಇಡೀ ನಾಡಿನಲ್ಲಿ ಹಬ್ಬಿದ ದಿನಗಳವು. ಆಗ ಕನ್ನಡದ ಹೋರಾಟಗಾರರಿಗೆ ಸ್ಫೂರ್ತಿ ಕೊಡುವ ಒಂದು ಹಾಡು ಬೇಕಿತ್ತು. ಖ್ಯಾತ ಕವಿಗಳಾದ ಹುಯಿಲಗೋಳ ನಾರಾಯಣ ರಾಯರು ‘ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ‘ ಎಂಬ ಹಾಡನ್ನು ಬರೆದರು. ಅದಕ್ಕೆ ಒಂದೆರಡು ಘಂಟೆಗಳಲ್ಲಿ ರಾಗಸಂಯೋಜನೆ ಮಾಡಿ ಕಾಳಿಂಗರಾಯರು ಅದ್ಭುತವಾಗಿ ಹಾಡಿಯೇಬಿಟ್ಟರು! ಆ ಹಾಡಿನ ಮೋಡಿಯೇ ಹಾಗಿತ್ತು. ಆ ಹಾಡನ್ನು ಹಾಡುತ್ತಾ ಹೋರಾಟಗಾರರ ಜೊತೆಗೆ ಕಾಳಿಂಗರಾಯರು ಇಡೀ ನಾಡಿನ ಉದ್ದಕ್ಕೂ ಸಂಚರಿಸಿದರು. 1946ರಲ್ಲಿ ಆಗಿನ ಕನ್ನಡದ ಮುಖ್ಯಮಂತ್ರಿಗಳು ಅವರನ್ನು ದೊಡ್ಡದಾಗಿ ಸನ್ಮಾನ ಮಾಡಿ ಅಭಿನಂದಿಸಿದರು. ಆ ಹಾಡು ಮುಂದೆ ಕನ್ನಡನಾಡಿನ ಉದಯಕ್ಕೆ ಪ್ರೇರಣೆ ನೀಡಿತು ಮತ್ತು ಕಾಳಿಂಗ ರಾಯರನ್ನು ಅಮರ ಗಾಯಕ ಎಂದು ಕರೆಯುವಂತೆ ಮಾಡಿತು.

ಕಾಳಿಂಗರಾಯರ ಸ್ಟೇಜ್ ಕಾರ್ಯಕ್ರಮ ಹೇಗಿರುತ್ತಿದ್ದವು?

ಅವರ ಸಂಗೀತ ಕಾರ್ಯಕ್ರಮಗಳು ಭಾರೀ ಸಂದೋಹವನ್ನು ಆಕರ್ಷಣೆ ಮಾಡುತ್ತಿದ್ದವು. ಅದು ಸಾಮಾಜಿಕ ಜಾಲತಾಣಗಳ ಕಾಲ ಅಲ್ಲ. ಡಿವಿಡಿ ಅಥವಾ ಕ್ಯಾಸೆಟಗಳ ಜಮಾನಾ ಕೂಡ ಆಗಿರಲಿಲ್ಲ. ಅದು ಕೇವಲ ಗ್ರಾಮಾಫೋನ್ ರೆಕಾರ್ಡುಗಳ ಕಾಲ. ಸ್ಟುಡಿಯೋಗಳಲ್ಲಿ ಒಂದು ಹಾಡು ರೆಕಾರ್ಡ್ ಆಗಬೇಕಾದರೆ ಎಲ್ಲ ವಾದ್ಯ ಸಂಗೀತಗಾರರೂ ರಿಹರ್ಸಲ್ ಮಾಡಿ ಲೈವ್ ಆಗಿ ನುಡಿಸಬೇಕಿತ್ತು ! ಒಂದು ಹಾಡು ರೆಕಾರ್ಡ್ ಆಗಲು ಇಡೀ ದಿನ ಬೇಕಾಗುತ್ತಿತ್ತು! ಅಂತಹ ನೂರಾರು ಸವಾಲುಗಳನ್ನು ಕಾಳಿಂಗರಾಯರು ಗೆದ್ದವರು!

ಇನ್ನು ವೇದಿಕೆಗಳ ಕಾರ್ಯಕ್ರಮಗಳಲ್ಲಿ ಅವರೇ ಆಗ ಸಾರ್ವಭೌಮ ಆಗಿದ್ದವರು. ಮೋಹನ ಕುಮಾರಿ ಮತ್ತು ಸೋಹನ ಕುಮಾರಿ ಎಂಬ ಇಬ್ಬರು ಅಪ್ರತಿಮ ಗಾಯಕಿಯರ ಮಧ್ಯೆ ನಿಂತು ಅವರು ಮೈಮರೆತು ಕನ್ನಡದ ಹಾಡುಗಳನ್ನು ಹಾಡುತ್ತಿದ್ದರು. ಬ್ರಹ್ಮ ನಿಂಗೆ ಜೋಡಿಸ್ತೀನಿ, ಮೂಡಲ್ ಕುಣಿಗಲ್ ಕೆರೆ ಮೊದಲಾದ ಹಾಡುಗಳನ್ನು ಅವರು ಹಾಡಿದಾಗ ಜನರು ಅದೇ ಪದ್ಯಗಳನ್ನು ಅವರ ಬಾಯಿಂದ ಮತ್ತೆ ಮತ್ತೆ ಹಾಡಿಸುತ್ತಿದ್ದರು! ಮಂಕುತಿಮ್ಮನ ಕಗ್ಗದ ಪ್ರತೀಯೊಂದು ಚರಣವನ್ನು ಬೇರೆ ಬೇರೆ ರಾಗದಲ್ಲಿ ಹಾಡುವ ಪ್ರಯತ್ನ, ರತ್ನನ್ ಪದಗಳನ್ನು ಜಾನಪದ ಶೈಲಿಯಲ್ಲಿ ಹಾಡುವ ಲೀಲಾಜಾಲ ಅವರಿಗೆ ಸಿದ್ಧಿಸಿದ್ದವು.

ಅವರ ನಾಲಿಗೆಯ ಮೇಲೆ ದಾಸರು ನಲಿಯುತ್ತಿದ್ದರು! ವಚನಕಾರರು ಕುಣಿಯುತ್ತಿದ್ದರು! ಹೆಂಡ್ ಕುಡ್ಕ ರತ್ನ ಮೆರೆಯುತ್ತಿದ್ದರು! ಜಾನಪದರು ಉಕ್ಕಿ ಹರಿಯುತ್ತಿದ್ದರು! ಕನ್ನಡದ ಭಾವಗೀತೆಗಾರರು ಮಿಂಚು ಹರಿಸುತ್ತಿದ್ದರು! ಒಟ್ಟಿನಲ್ಲಿ ಕನ್ನಡ ಸರಸ್ವತಿಯ ಆರಾಧನೆ ಅವರ ಕಂಠದಲ್ಲಿ ನಡೆಯುತ್ತಿತ್ತು!

ಅಂತಹ ಕನ್ನಡದ ಮಹಾನ್ ರಾಗಸಂಯೋಜಕ ಮತ್ತು ಗಾಯಕ ಪಾಂಡೇಶ್ವರ ಕಾಳಿಂಗರಾಯರು ಯಶಸ್ಸಿನ ತುತ್ತತುದಿಯಲ್ಲಿ ಇದ್ದಾಗಲೇ 1981ನೇ ಸೆಪ್ಟೆಂಬರ್ 21ರಂದು ನಮ್ಮನ್ನಗಲಿದರು.

2014ರ ಸೆಪ್ಟೆಂಬರ್ 6ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ನೆನಪಿನಲ್ಲಿ ಜನ್ಮಶತಾಬ್ದಿ ಕಾರ್ಯಕ್ರಮವು ವೈಭವದಿಂದ ನಡೆಯಿತು. ಅಂದು ಅವರ ಮಧುರ ಹಾಡುಗಳ ‘ಬಾರಯ್ಯ ಬೆಳದಿಂಗಳೇ ‘ ಎಂಬ ಡಿವಿಡಿಯು ಬಿಡುಗಡೆ ಆಯಿತು. ಹಾಗೆಯೇ ಅವರ ಬದುಕಿನ ಪುಸ್ತಕ ‘ಬೆಳದಿಂಗಳ ಹಕ್ಕಿ’ ಅಂದು ಬಿಡುಗಡೆ ಆಗಿತ್ತು.

ಕಾಳಿಂಗರಾಯರು ದಶಕಗಳ ಕಾಲ ಕನ್ನಡದ ಸುಗಮ ಸಂಗೀತದ ಉದಯ ಸೂರ್ಯರಾಗಿ ಮೆರೆದಿರುವುದು ನಿಜಕ್ಕೂ ಅದ್ಭುತ!

ಇದನ್ನೂ ಓದಿ: Stress relief: ಸ್ಫೂರ್ತಿಪಥ ಅಂಕಣ: ಒತ್ತಡ ನಿವಾರಣೆಗೆ ಪ್ರಾಕ್ಟಿಕಲ್ ಆದ 30 ಸಲಹೆಗಳು