Wednesday, 25th September 2024

Work Stress: ಪುಣೆ ಯುವತಿ ಆತ್ಮಹತ್ಯೆ ಬೆನ್ನಲ್ಲೇ ಕೆಲಸದ ಒತ್ತಡದಿಂದ HDFC ಉದ್ಯೋಗಿ ಬಲಿ

work stress

ಲಕ್ನೋ: ಪುಣೆಯ ಬಹುರಾಷ್ಟ್ರೀಯ ಕನ್ಸಲ್ಟಿಂಗ್‌ ಕಂಪನಿ ಅರ್ನ್ಸ್ಟ್ & ಯಂಗ್ (Ernst & Young-EY)ನ ಉದ್ಯೋಗಿ ಅತಿಯಾದ ಕೆಲಸದ ಒತ್ತಡ(Work Stress)ದಿಂದ ಆತ್ಮಹತ್ಯೆ(Self Harming)ಗೆ ಶರಣಾದ ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಉತ್ತರಪ್ರದೇಶದಲ್ಲೂ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಉದ್ಯೋಗಿ ಒಬ್ಬರು ಅತಿಯಾದ ಕೆಲಸದ ಒತ್ತಡದಿಂದಾಗಿ ಸಾವನ್ನಪ್ಪಿದ್ದಾರೆ.

ಲಕ್ನೋದ ವಿಭೂತಿ ಖಂಡ್‌ನಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೆಚ್ಚುವರಿ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸದಫ್‌ ಫಾತಿಮಾ ಮೃತ ದುರ್ದೈವಿ. ಫಾತಿಮಾ ಬ್ಯಾಂಕ್‌ನಲ್ಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಕೆ ಕೊನೆಯುಸಿರೆಳೆದಿದ್ದಾಳೆ.

ಮಂಗಳವಾರ ಮಧ್ಯಾಹ್ನ, ಫಾತಿಮಾ ಅವರು ಸಹೋದ್ಯೋಗಿಗಳೊಂದಿಗೆ ತಮ್ಮ ಕಚೇರಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ಕೆಫೆಟೇರಿಯಾಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಸ್ವಲ್ಪ ಸಮಯದ ನಂತರ, ಅವಳು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಳು. ಆಕೆಯ ಸಹೋದ್ಯೋಗಿಗಳು ತಕ್ಷಣವೇ ಆಕೆಗೆ ಸಹಾಯ ಮಾಡಲು ಪ್ರಯತ್ನಿಸಿದರೂ, ಹತ್ತಿರದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರಲ್ಲಿ ಆಕೆಯ ಸಾವನ್ನಪ್ಪಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಪ್ರಜ್ಞೆ ಕಳೆದುಕೊಳ್ಳುವ ಸ್ವಲ್ಪ ಸಮಯದ ಮೊದಲು ಅವಳು ತನ್ನ ಪರ್ಸ್‌ನಿಂದ ಟ್ಯಾಬ್ಲೆಟ್ ತೆಗೆದುಕೊಂಡಿದ್ದಾಳೆ ಎಂದು ಕೆಲವು ಸಹೋದ್ಯೋಗಿಗಳು ಗಮನಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಅತಿಯಾದ ಕೆಲಸದ ಒತ್ತಡದಿಂದಲೇ ಫಾತಿಮಾ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಪುಣೆಯಲ್ಲೂ ನಡೆದಿತ್ತು ಇಂತಹದ್ದೇ ಘಟನೆ

ವಾರದ ಹಿಂದೆ ಪುಣೆಯಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಪುಣೆಯ ಬಹುರಾಷ್ಟ್ರೀಯ ಕನ್ಸಲ್ಟಿಂಗ್‌ ಕಂಪನಿ ಅರ್ನ್ಸ್ಟ್ & ಯಂಗ್ (Ernst & Young-EY)ನ ಉದ್ಯೋಗಿ ಅನ್ನಾ ಸೆಬಾಸ್ಟಿನ್‌ ಎಂಬಾಕೆ ಅತಿಯಾದ ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿದ್ದಳು. ತಮ್ಮ ಮಗಳು ಅತಿಯಾದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಯುವತಿಯ ತಾಯಿ ಅನಿತಾ ಆಗಸ್ಟಿನ್‌ ಆರೋಪಿಸಿದ್ದರು.

ʼʼತಮ್ಮ ಮಗಳು ಇ.ವೈ. ಕಂಪನಿಗೆ ಚಾರ್ಟಡ್‌ ಅಕೌಂಟೆಂಟ್‌ ಆಗಿ 4 ತಿಂಗಳ ಹಿಂದೆ ಸೇರಿದ್ದಳು. ಕೆಲಸದ ಒತ್ತಡದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡದ್ದಾಳೆʼʼ ಎಂದು ಅನಿತಾ ಅಗಸ್ಟಿನ್ ಇ.ವೈ. ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದು ತಮ್ಮ ಮಗಳ ಮೊದಲ ಕೆಲಸವಾಗಿತ್ತು ಮತ್ತು ಅರ್ನ್ಸ್ಟ್ & ಯಂಗ್ ಕಂಪನಿಗೆ ಸೇರುವ ಬಗ್ಗೆ ಆಕೆ ತುಂಬ ಉತ್ಸುಕಳಾಗಿದ್ದಳು. ಆದರೆ ಉದ್ಯೋಗಕ್ಕೆ ಸೇರಿದ ಕೇವಲ ನಾಲ್ಕು ತಿಂಗಳಲ್ಲಿ ಅತಿಯಾದ ಕೆಲಸದ ಹೊರೆಯಿಂದ ಬಲಿಯಾಗಿದ್ದಾಳೆ. ಅನ್ನಾ ತಡರಾತ್ರಿ ಮತ್ತು ವಾರಾಂತ್ಯದಲ್ಲಿಯೂ ಕೆಲಸ ಮಾಡುತ್ತಿದ್ದಳು ಅನಿತಾ ಆಗಸ್ಟಿನ್‌ ವಿವರಿಸಿದ್ದಾರೆ. ಅನ್ನಾ ಅಂತ್ಯ ಸಂಸ್ಕಾರದಲ್ಲಿ ಕಂಪನಿಯ ಯಾರೂ ಪಾಲ್ಗೊಂಡಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ. ಇನ್ನು ಪ್ರಕರಣ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.

ಈ ಸುದ್ದಿಯನ್ನೂ ಓದಿ: Working Hours: ವಿಶ್ವದಲ್ಲೇ ಅತ್ಯಂತ ಕಡಿಮೆ ಕೆಲಸ, ಹೆಚ್ಚು ವಿಶ್ರಾಂತಿಗೆ ಅವಕಾಶ ಇರುವ ದೇಶಗಳ ಪಟ್ಟಿ ಇಲ್ಲಿದೆ!