Saturday, 21st September 2024

ನಾಳೆ ಶಿವಸೇನೆಗೆ ನಟಿ ಊರ್ಮಿಳಾ ಅಧಿಕೃತ ಸೇರ್ಪಡೆ

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಇದೀಗ ಶಿವಸೇನಾ ಸೇರಲಿದ್ದಾರೆ.

ಇದೇ ತಿಂಗಳ 30ರಂದು ಶಿವಸೇನಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದ್ದು, ಈ ಕುರಿತು ಶಿವಸೇನಾ ಪಕ್ಷದ ಮೂಲಗಳು ಖಚಿತಪಡಿಸಿಲ್ಲ.

ಲೋಕಸಭಾ ಚುನಾವಣೆ ವೇಳೆಗೆ ಮಾರ್ಚ್ 2019ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಇವರು, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತು ಸೆಪ್ಟೆಂಬರ್ 2019ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಶಿವಸೇನಾ ಪಕ್ಷಕ್ಕೆ ದಾಪುಗಾಲಿರಿಸಿದ್ದಾರೆ.

ಊರ್ಮಿಳಾ “ನನ್ನ ರಾಜಕೀಯ ಮತ್ತು ಸಾಮಾಜಿಕ ಸಂವೇದನೆಗಳು, ಕಾಂಗ್ರೆಸ್ ಪಕ್ಷದಲ್ಲಿನ ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಕೆಲಸ ಮಾಡಲು ನಿರಾಕರಿಸುತ್ತವೆ” ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಂಜಯ್ ನಿರುಪಮ್ ಅವರ ಆಪ್ತ ಸಹಾಯಕರನ್ನು ಟೀಕಿಸಿರುವ ಪತ್ರಕ್ಕೆ ಸಂಬಂಧಿಸಿ ದಂತೆ ಯಾವುದೇ ಕ್ರಮ ಕೈಗೊಳ್ಳದ ನಂತರ ರಾಜೀನಾಮೆ ನೀಡುವ ಚಿಂತನೆ ತನ್ನ ಬಳಿಗೆ ಬಂದಿದೆ ಎಂದು ಊರ್ಮಿಳಾ ತಿಳಿಸಿದ್ದರು.