Saturday, 23rd November 2024

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿಗೆ 15 ವರ್ಷ ಜೈಲು ಶಿಕ್ಷೆ

ಲಾಹೋರ್: ಮುಂಬೈ ದಾಳಿ(26-11)ಯ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿಗೆ ಲಾಹೋರ್ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಭಯೋತ್ಪಾದನಾ ಕಾರ್ಯಗಳಿಗೆ ಹಣಕಾಸಿನ ನೆರವು ನೀಡಿದ ಆಪಾದನೆಯ ಮೇಲೆ ಲಖ್ವಿಗೆ ಶಿಕ್ಷೆ ನೀಡಲಾಗಿದೆ.

ಉಗ್ರ ಝಕಿ ಉರ್ ರೆಹಮಾನ್ ಲಖ್ವಿಗೆ ಜೈಲುಶಿಕ್ಷೆ, ದಂಡ ವಿಧಿಸಿರುವುದನ್ನು ಯುನೈಟೆಡ್ ಸ್ಟೇಟ್ಸ್ ಸ್ವಾಗತಿಸಿದೆ.

ಭಯೋತ್ಪಾದನೆ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ 61 ವರ್ಷದ ಲಖ್ವಿಯನ್ನು ಲಾಹೋರ್ ಭಯೋ ತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸರು ಜನವರಿ 2 ರಂದು ಬಂಧಿಸಿದ್ದರು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧವೂ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.

ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಲಖ್ವಿ 2015ರಲ್ಲಿ ಜಾಮೀನು ಪಡೆದಿದ್ದ. ಉಗ್ರರನ್ನು ಬಂಧಿಸಬೇಕೆಂದು ಅಂತಾ ರಾಷ್ಟ್ರೀಯ ಒತ್ತಡಗಳು ಹೆಚ್ಚಾದ ಹಿನ್ನಲೆಯಲ್ಲಿ ಜ.2ರಂದು ಪಂಜಾಬ್ ಪ್ಯಾಂತ್ಯದಲ್ಲಿ ಬಂಧಿಸಲಾಗಿತ್ತು.

ನವೆಂಬರ್ 26, 2008ರಂದು ಮುಂಬೈನ ತಾಜ್ ಮಹಲ್ ಹೋಟೆಲ್, ಒಬೆರಾಯ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ನಾರಿಮನ್ (ಚಾಬಾದ್) ಮನೆ, ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ಮೇಲೆ ನಡೆದ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು.