Saturday, 21st September 2024

ಕಟ್ಟುನಿಟ್ಟು ಸಮಯಪಾಲನೆಯ ಕಷ್ಟ – ಸುಖ – ಸಂಕಟ – ವಿಷಾದ

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಕೆಲವರು ಸಮಯಪಾಲನೆಯಲ್ಲಿ ಯಮನಷ್ಟೇ ಖಂಡಿತವಾದಿ ಮತ್ತು ಕಠೋರವಾದಿಯಾಗಿರುತ್ತಾರೆ. ಅವರೂ ನಿಖರವಾದ ಸಮಯಕ್ಕೆ ಹೋಗುತ್ತಾರೆ,
ಬರುತ್ತಾರೆ. ಬೇರೆಯವರೂ ತಮ್ಮ ಹಾಗೆ ಕಟ್ಟುನಿಟ್ಟಾಗಿ ಸಮಯಪಾಲನೆ ಮಾಡಬೇಕೆಂದು ಬಯಸುತ್ತಾರೆ. ಈ ಮನಸ್ಥಿತಿಯವರು ಐದು ನಿಮಿಷಕ್ಕಿಂತ ಹೆಚ್ಚಿನ ವಿಳಂಬವನ್ನು ಸಹಿಸಿಕೊಳ್ಳುವುದಿಲ್ಲ. ಕರಾರುವಾಕ್ಕಾಗಿ ಸಮಯಪಾಲಿಸುವವರಿಗೆ ತಮ್ಮ ಈ ಗುಣದ ಬಗ್ಗೆ ತೀವ್ರ ಅಭಿಮಾನ, ಹೆಮ್ಮೆಯಿರುತ್ತದೆ. ಅವರು ಎಲ್ಲರ ಮುಂದೆ ತಮ್ಮ ಸಮಯಪಾಲನೆ ಬಗ್ಗೆ ಸ್ವಯಂಪ್ರಶಂಸೆ ಮಾಡಿಕೊಳ್ಳುತ್ತಾರೆ.

ಅದೇನೇ ಇರಲಿ, ಅದು ಮೆಚ್ಚಬಹುದಾದ ಗುಣವೇ. ಆದರೆ ಎಲ್ಲರೂ ಅವರಂತೆ ಇರುವುದಿಲ್ಲ. ಎಲ್ಲರೂ ತಮ್ಮ ಹಾಗೆ ಕಟ್ಟುನಿಟ್ಟಿನ ಸಮಯಪಾಲನೆ ಮಾಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಅದರಲ್ಲೂ ಭಾರತದಲ್ಲಿ ಯಾರೂ ಸಮಯಕ್ಕೆ ಸರಿಯಾಗಿ ಬರುವವರ ಸಂಖ್ಯೆ ಅತಿ ಕಡಿಮೆ. ಈ ವಿಷಯದಲ್ಲಿ ಎಲ್ಲರೂ ‘ಲೇಟ್ ಲತೀಫ್’ ಗಳೇ !

ವಿಚಿತ್ರವೆಂದರೆ, ತಡವಾಗಿ ಬಂದವರಿಗೆ ಯಾವುದೇ ನಾಚಿಕೆ ಅಥವಾ ಪಶ್ಚಾತ್ತಾಪ ಇರುವುದಿಲ್ಲ. ಪ್ರಾಯಶ್ಚಿತ ವಾಗಿ ಕ್ಷಮೆಯನ್ನೂ ಯಾಚಿಸುವುದಿಲ್ಲ. ಅಂಥವರು ತಡವಾಗಿ ಬರುವುದು ಮತ್ತು ಬೇರೆಯವರನ್ನು ಕಾಯಿಸು ವುದು ತಮ್ಮ ಜನ್ಮ ಸಿದ್ಧ ಹಕ್ಕು ಎಂದು ಭಾವಿಸುತ್ತಾರೆ. ಕೆಲವು ದಿನಗಳ ಹಿಂದೆ, ನಾನು ಲಂಡನ್ ನಲ್ಲಿ ಭಾರತದ ಹೈಕಮಿಷನರ್ ಆಗಿದ್ದ ಬ್ರಜ್ ಕುಮಾರ ನೆಹರು ಅವರ ಆತ್ಮಕಥೆ (Nice Guys Finish Second) ಯನ್ನು ಓದುತ್ತಿದ್ದೆ.

ಅದರಲ್ಲಿ ಅವರು ಒಂದು ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ. 1974 ರಲ್ಲಿ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಗೆ ಆಗಮಿಸಿದ ಸಂದರ್ಭದಲ್ಲಿ, ನೆಹರು ಭಾರತೀಯ ಆಟಗಾರರ ಗೌರವಾರ್ಥ ತಮ್ಮ ನಿವಾಸದಲ್ಲಿ ರಾತ್ರಿ ಔತಣಕೂಣ ಏರ್ಪಡಿಸಿದರು. ಸಾಯಂಕಾಲ ಏಳು ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಇದರ ಹಿಂದಿನ ದಿನ ಭಾರತ ಇಂಗ್ಲೆಂಡ್ ವಿರುದ್ಧ ದಯನೀಯವಾಗಿ ಸೋತಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 629 ರನ್ ಬೃಹತ್ ಮೊತ್ತ ಸೇರಿಸಿದ್ದಕ್ಕೆ ಭಾರತ ಮೊದಲ
ಇನ್ನಿಂಗ್ಸ್ ನಲ್ಲಿ ೩೦೨ ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಫಾಲೋ ಆನ್ ನೀಡಿದಾಗ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ಅತ್ಯಂತ ಕಳಪೆ ಸಾಧನೆ ಮೆರೆದು ಕೇವಲ ೪೨ ರನ್ ಗೆ ಎಲ್ಲ ವಿಕೆಟ್ ಕಳೆದುಕೊಂಡಿತು.

ಇಡೀ ತಂಡದ ಆಟಗಾರರೆಲ್ಲಾ ತಲೆಕೆಟ್ಟು ಕುಳಿತಿದ್ದರು. ಬ್ರಿಟಿಷ್ ಮತ್ತು ಭಾರತೀಯ ಪತ್ರಿಕೆಗಳು ಭಾರತ ತಂಡದ ಸಾಧನೆಯನ್ನು ಅತ್ಯಂತ ಕಟು ಪದಗಳಲ್ಲಿ ಟೀಕಿಸಿದವು. ಎಲ್ಲಾ ಆಟಗಾರರೂ ಕೆಟ್ಟ ಮೋರೆ ಹಾಕಿಕೊಂಡು ಕುಳಿತಿದ್ದರು. ಯಾರಲ್ಲೂ ಉತ್ಸಾಹ ಇರಲಿಲ್ಲ. ಭಾರತದ ಆಟಗಾರರನ್ನು ಎಲ್ಲರೂ ಕೆಟ್ಟದಾಗಿ ಕ್ಯಾಕರಿಸಿ ನೋಡುತ್ತಿದ್ದರು. ಭಾರತ ಸೋತ ಮರುದಿನ, ಬೆಳಗ್ಗೆ ಒಂದು ಮತ್ತು ಸಾಯಂಕಾಲ ಎರಡು ಕಾರ್ಯಕ್ರಮಗಳು ನಿಗದಿಯಾಗಿದ್ದವು. ಇವು ಮುಂಚೆಯೇ ನಿರ್ಧರಿತವಾದವು. ಬೆಳಗಿನ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ, ಸಾಯಂಕಾಲದ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯಾರಿಗೂ ಇಷ್ಟವಿರಲಿಲ್ಲ.
ಆದರೆ ಸಾಯಂಕಾಲದ ಮೊದಲನೇ ಕಾರ್ಯಕ್ರಮವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಘಟಿಸಿತ್ತು.

ತಂಡದ ನಾಯಕ ಅಜಿತ್ ವಾಡೇಕರ್ ಸೇರಿದಂತೆ, ಏಳು ಮಂದಿ ಆಟಗಾರರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರರಾಗಿದ್ದರಿಂದ ಭಾಗವಹಿಸುವುದು ಅನಿವಾರ್ಯವಾಗಿತ್ತು. ಆದರೆ ಆ ಪಾರ್ಟಿಯಲ್ಲಿ ಭಾಗವಹಿಸಿದಾಗ ಭಾರತದ ಕ್ರಿಕೆಟ್ ಆಟಗಾರರಿಗೆ ಮತ್ತು ಪತ್ರಕರ್ತರಿಗೆ ಬಿಸಿಬಿಸಿ ಮಾತುಕತೆಯಾಯಿತು. ಅಂದಿನ ಪತ್ರಿಕೆಯಲ್ಲಿ ಕೆಟ್ಟದಾಗಿ ಬರೆದಿದ್ದಕ್ಕೆ ಆಟಗಾರರು ಬೇಸರ ವ್ಯಕ್ತಪಡಿಸಿದಾಗ, ಮಾತು-ಮಾತು ಬೆಳೆಯಿತು. ಇದರಿಂದ ಅಲ್ಲಿಂದ ಮುಂದಿನ ಪಾರ್ಟಿಗೆ ತೆರಳುವುದು ತಡವಾಯಿತು. ಎಲ್ಲಾ ತಯಾರಿ ಮಾಡಿಕೊಂಡು, ನೆಹರು ಅತಿಥಿಗಳಿಗಾಗಿ ಕಾಯುತ್ತಿದ್ದರು. ಹೇಳಿ ಕೇಳಿ ನೆಹರು ಸಮಯಪಾಲನೆಯಲ್ಲಿ ಮಹಾ ಕಟ್ಟುನಿಟ್ಟು. ಅವರ ಸಹನೆಯ ಅವಽ ಬರೀ ಐದು ನಿಮಿಷ. ಅಷ್ಟರೊಳಗೆ ಅವರು ಬೆಂಕಿಯುಂಡೆ ಆಗಿರುತ್ತಿದ್ದರು.

ಬ್ರಿಟನ್ ಹೈಕಮಿಷನರ್ ಎಂಬ ಕೋಡು ಬೇರೆ. ಸಮಯಪಾಲನೆ ಬಗ್ಗೆ ಎಲ್ಲರಿಗೂ ಅವರು ಉಪದೇಶ ಕೊಡುತ್ತಿದ್ದರು. ಅವರು ಅರ್ಧ ಗಂಟೆಯಿಂದಲೇ ಭಾರತ ಆಟಗಾರರ ನಿರೀಕ್ಷೆಯಲ್ಲಿದ್ದರು. ಸಾಯಂಕಾಲ ಏಳು ಗಂಟೆಯಾದರೂ ಅವರ ಸುಳಿವೇ ಇಲ್ಲ. ನೆಹರು ಅವರ ಸಹನೆಯ ಕಟ್ಟೆಯಲ್ಲಿ ಬಿರುಕುಗಳು ಕಾಣಿಸಿ ಕೊಳ್ಳಲಾರಂಭಿಸಿದ್ದವು. ಏಳೂವರೆಯಾದರೂ ಯಾವ ಸೂಚನೆಯೂ ಇಲ್ಲ. ನೆಹರು ಯಾರಿಗೂ ಅರ್ಧ ಗಂಟೆ ಕಾದವರೇ ಅಲ್ಲ, ಅವರು ಯಾರೇ ಆಗಿರಲಿ. ಪದೇ ಪದೆ ತಮ್ಮ ಕೈಗಡಿಯಾರ ನೋಡಿಕೊಂಡು ತಾಳ್ಮೆ ಕಳೆದುಕೊಳ್ಳುತ್ತಿದ್ದರು.

ಮುಕ್ಕಾಲು ಗಂಟೆಯ ನಂತರ, ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಹೇಮು ಅಧಿಕಾರಿ ಮತ್ತು ಖಜಾಂಚಿ ಬಿ.ಸಿ.ಮೊಹಾಂತಿ ಅವಸರವಸರವಾಗಿ ನೆಹರು ನಿವಾಸ ತಲುಪಿದರು. ಇನ್ನೇನು ಎಲ್ಲರೂ ಆಗಮಿಸುತ್ತಾರೆ ಎಂದು ಹೇಳಿದರು. ತಡವಾದುದಕೆ ಏನೇನೋ ಸಬೂಬು ನೀಡಿದರು. ಇಷ್ಟೂ ಸಾಲದೆಂಬಂತೆ, ಅದೇ ದಿನ ತಂಡದ ಆಟಗಾರರಲ್ಲೊಬ್ಬರಾದ ಸುಧೀರ ನಾಯಕ ಅವರು ಡಿಪಾರ್ಟಮೆಂಟಲ್ ಸ್ಟೋರ್ಸ್ ನಲ್ಲಿ ಎರಡು ಜತೆ ಸಾಕ್ಸ್ ಕದ್ದು ಸಿಕ್ಕಿ ಬಿದ್ದ ಪ್ರಕರಣದಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಈ ವಿಷಯ ನೆಹರು ಅವರ ಕಿವಿಗೂ ಬಿದ್ದಿತ್ತು. ಅಲ್ಲದೇ ಭಾರತ ತಂಡದ ಕಳಪೆ ಪ್ರದರ್ಶನವೂ ಅವರ ಮೇಲೆ ಪರಿಣಾಮ ಬೀರಿದ್ದಿರಬಹುದು.

ಸರಿ, ತಂಡದ ಆಟಗಾರರು ಐವತ್ತು ನಿಮಿಷ ತಡವಾಗಿ ನೆಹರು ನಿವಾಸಕ್ಕೆ ಆಗಮಿಸಿದರು. ಸಮಯಪಾಲನೆಯ ‘ಯಮಧರ್ಮ ರಾಜ’ ಕೊತಕೊತ ಕುದಿಯುತ್ತಿದ್ದ! ಅಷ್ಟು ಹೊತ್ತು ಅವರು ಯಾರಿಗೂ ಕಾದಿದ್ದೇ ಇಲ್ಲ. ಬಸ್ಸಿನಿಂದ ಆಟಗಾರರು ಇಳಿಯುತ್ತಿದ್ದರು, ತಂಡದ ನಾಯಕ ಅಜಿತ್ ವಾಡೇಕರ್ ಮುಂದೆ ಬಂದರು. ತಕ್ಷಣ ಅವರನ್ನು ಮನೆಯ ಗೇಟಿನ ಹತ್ತಿರವೇ ತಡೆದ ನೆಹರು, ‘ನೀವು ಕೆಟ್ಟ ಆಟಗಾರರಷ್ಟೇ ಅಲ್ಲ, ಕೆಟ್ಟ ಅತಿಥಿಗಳೂ ಹೌದು. ಐವತ್ತು ನಿಮಿಷ ತಡವಾಗಿ ಬರಲು ನಿಮಗೆ
ನಾಚಿಕೆಯಾಗುವುದಿಲ್ಲವೇ? ದಯವಿಟ್ಟು ಕ್ಷಮಿಸಿ, ನಾನು ಇಂದಿನ ಪಾರ್ಟಿಯನ್ನು ರದ್ದುಗೊಳಿಸಿದ್ದೇನೆ. ಇಲ್ಲಿಂದ ಹೊರಡಿ. ಸಮಯವನ್ನು ಗೌರವಿಸದವನು, ಜೀವನದಲ್ಲಿ ಏನನ್ನೂ ಗೌರವಿಸಲಾರ. ತಡವಾಗಿ ಬರುವ ಮೂಲಕ ನೀವೆಲ್ಲ ನನ್ನನ್ನು ಅವಮಾನಿಸಿದ್ದೀರಿ’ ಎಂದು ಜೋರಾಗಿ ಕೂಗಾಡಿಬಿಟ್ಟರು.

ನೆಹರು ಕಿರುಚಾಟಕ್ಕೆ ಆಟಗಾರರೆಲ್ಲ ಅವಮಾನದಿಂದ ಪೆಚ್ಚಾಗಿಬಿಟ್ಟರು. ಅಂದು ವಾಡೇಕರ್ ಜತೆಗೆ, ಸುನಿಲ್ ಗಾವಸ್ಕರ್, ಫಾರೂಖ್ ಎಂಜಿನಿಯರ್, ಗುಂಡಪ್ಪ ವಿಶ್ವನಾಥ್, ಬೃಜೇಶ್ ಪಟೇಲ್, ಏಕನಾಥ ಸೋಲ್ಕರ್, ಸಯ್ಯದ್ ಅಬಿದ್ ಅಲಿ, ಮದನ್ ಲಾಲ್, ಪ್ರಸನ್ನ, ಚಂದ್ರಶೇಖರ್, ಬಿಷನ್ ಬೇಡಿ ಇದ್ದರು. ನೆಹರು ರೋಷಾವೇಶಕ್ಕೆ ಅವರೆಲ್ಲ ನಿಧಾನವಾಗಿ ಬಸ್ಸಿನಲ್ಲಿ ಹೋಗಿ ಕುಳಿತುಬಿಟ್ಟರು!

ಆದರೆ ಮ್ಯಾನೇಜರ್ ಹೇಮು ಅಧಿಕಾರಿ ಮಾತ್ರ ನೆಹರು ಅವರ ಕೋಪವನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದ್ದರು. ತಪ್ಪಾಯ್ತು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು. ಅಧಿಕಾರಿ ವರ್ತನೆಯಿಂದ ಕೆಲವು ಆಟಗಾರರಿಗೆ ಬೇಸರವಾಯಿತು. ಕೊನೆಗೂ ಅಧಿಕಾರಿ ಮಾತ್ರ ಪಟ್ಟು ಸಡಿಲಿಸದೇ ನೆಹರು ಅವರ ಮನವೊಲಿಸಿ, ಪರಿಸ್ಥಿತಿಯಯನ್ನು ತಿಳಿಗೊಳಿಸಿದರು. ಆದರೆ ಆಟಗಾರರು ತಕ್ಷಣ ಬಸ್ಸಿನಿಂದ ಇಳಿದು, ನೆಹರು ಮನೆಗೆ ಬರಲು ಸಿದ್ಧರಿರಲಿಲ್ಲ. ‘ಇಂಥ ಸಂದರ್ಭ ದಲ್ಲಿ ಕ್ರೀಡಾ ಮನೋಭಾವ ಪ್ರದರ್ಶಿಸಬೇಕು’ ಎಂದು ಅಧಿಕಾರಿ ಎಲ್ಲಾ ಆಟಗಾರರಿಗೂ ಹೇಳಿದರು.

ಎಲ್ಲಾ ಆಟಗಾರರು ಒಲ್ಲದ ಮನಸ್ಸಿನಿಂದ ನೆಹರು ನಿವಾಸಕ್ಕೆ ಆಗಮಿಸಿದರು. ತಮ್ಮ ಟಾಪಿಗೆ ನೆಹರು ಕ್ಷಮೆಯಾಚಿಸಿದರು. ಸಮಯಪಾಲನೆ ನನ್ನ ಶಕ್ತಿ ಮತ್ತು ದೌರ್ಬಲ್ಯ ಎಂದು ಸಮಜಾಯಿಷಿ ಕೊಟ್ಟರು. ಆರಂಭದಲ್ಲಿ ಕೊಂಚ ಸೆಟೆದುಕೊಂಡಿದ್ದ ಆಟಗಾರರೆಲ್ಲ, ಕ್ರಮೇಣ ಬಿಗುಮಾನ ಬಿಟ್ಟು ಸಡಿಲವಾದರು. ಈ ಘಟನೆ ಪತ್ರಕರ್ತರ ಕಿವಿಗೂ ಬಿತ್ತು. ಇಂಥ ಪ್ರಸಂಗವನ್ನು ಸುದ್ದಿ ಮಾಡದೇ ಬಿಡುವುದುಂಟಾ? ಇದನ್ನು ದೊಡ್ಡದಾಗಿ ಬರೆದರು. ’ಒಂದು ವೇಳೆ ನಾವು ಗೆದ್ದಿದ್ದರೆ, ಒಂದು ಗಂಟೆ ತಡವಾಗಿ ಬಂದಿದ್ದರೂ ಸಮಸ್ಯೆ ಆಗುತ್ತಿರಲಿಲ್ಲ. ನಾವು ಸೋತಿದ್ದಕ್ಕಾಗಿ ಇಷ್ಟೆಲ್ಲಾ ಅವಮಾನ ಮಾಡಿಸಿಕೊಳ್ಳಬೇಕಾಯಿತು’ ಎಂದು ಬಿಷನ್ ಸಿಂಗ್ ಬೇಡಿ ಹೇಳಿದ್ದೂ ದೊಡ್ಡ ವಿವಾದವಾಯಿತು.

ಅಂದು ನೆಹರು ಸ್ವಲ್ಪ ರಿಯಾಯತಿ ತೋರಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ತಮ್ಮ ಸಮಯಪಾಲನೆ ಗುಣದಿಂದಾಗಿ ಸಂತೋಷದಲ್ಲಿ ಕೊನೆಗೊಳ್ಳಬೇಕಾದ ಕಾರ್ಯಕ್ರಮ ಬೇಸರ, ವಿಷಾದ, ಕಹಿಭಾವನೆಯಲ್ಲಿ ಅಂತ್ಯಗೊಳ್ಳುವಂತಾಯಿತು. ಈ ಪ್ರಸಂಗ ಬಹಳ ದಿನಗಳವರೆಗೆ ಚರ್ಚೆಯಲ್ಲಿತ್ತು. ಆಗಾಗ ಯಾರಾದರೂ ಪ್ರಸ್ತಾಪ ಮಾಡಿದಾಗಲೆಲ್ಲಾ, ವಿವಾದ ಬೇರೆ ಸ್ವರೂಪ ಪಡೆದುಕೊಳ್ಳುತ್ತಿತ್ತು. ಸಮಯದ ಬಗ್ಗೆ ಇಷ್ಟೆಲ್ಲಾ ಕಠೋರವಾದಿ ಆಗಿರಬಾರದು ಎಂಬುದು ನನಗೆ ಮನವರಿಕೆಯಾಗಿದೆ ಎಂದು ನೆಹರು ಹಲವು ಸಲ ಹೇಳಿದರು. ತಡವಾಗಿ ಬರುವ ಭಾರತದ ಆಟಗಾರರಿಗಾಗಿ ನಿಮ್ಮ ಒಳ್ಳೆಯ ಗುಣವನ್ನು ಬಿಡಬೇಡಿ ಎಂದು
ಅವರಿಗೆ ಅನೇಕರು ಬುದ್ಧಿವಾದ ಹೇಳಿದ್ದೂ ಸುದ್ದಿಯಾಯಿತು.

ಈ ಘಟನೆಯ ನಂತರ ಏನಾಯ್ತು?

ಸರಿ, ಬಿ.ಕೆ.ನೆಹರು ಅವರ ಕಟ್ಟುನಿಟ್ಟಿನ ಸಮಯಪಾಲನೆ ಅವಾಂತರ ಇಲ್ಲಿಗೇ ನಿಲ್ಲಲಿಲ್ಲ. ಭಾರತ ತಂಡದ ಆಟಗಾರರ ಮನಸ್ಸು ಕೆಸರು ಹೊಂಡವಾಗಿತ್ತು. ನಲವತ್ತೆರಡು ರನ್ ಗೆ ಆಲೌಟ್ ಆಗಿದ್ದು ಒಂದೆಡೆಯಾದರೆ, ಭಾರತದ ಹೈಕಮಿಷನರ್ ಮನೆಯಿಂದ ಹೊರದಬ್ಬಿಸಿಕೊಂಡು ಬಂದಿದ್ದು ಇನ್ನಷ್ಟು ಘಾಸಿ ಮಾಡಿತ್ತು. ಈ ಎರಡು ಘಟನೆಗಳು ಪತ್ರಿಕೆಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದವು. ಎಲ್ಲರ ಮನಸ್ಸುಗಳು ಕಲುಷಿತವಾಗಿದ್ದವು. ಏನೇ ಹೇಳಿದರೂ ಅದನ್ನು ಬೇರೆಯವರು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದರು. ಇದರಿಂದ ಪರಸ್ಪರರಲ್ಲಿ ವಿಶ್ವಾಸ ಮತ್ತು ನಂಬಿಕೆ ಹೊರಟು ಹೋಗಿತ್ತು.

ಇಂಗ್ಲೆಂಡ್ ಪ್ರವಾಸದ ಆರಂಭದಿಂದಲೂ ವಾಡೇಕರ್ ಮತ್ತು ಬೇಡಿ ಯಾಕೋ ಸೊಣಕಿಕೊಂಡಿದ್ದರು. ಇಬ್ಬರ ಮಧ್ಯೆ ಹಾಕ್ಯಾಟ ನಡೆದಿತ್ತು. ನಲವತ್ತೆರಡು ರನ್ ಗೆ ಆಲೌಟ್ ಮತ್ತು ನೆಹರು ನಿವಾಸದಲ್ಲಿನ ಪ್ರಕರಣದ ನಂತರ ಅವರಿಬ್ಬರೂ ಮತ್ತೊಂದು ಖಾಸಗಿ ಪಾರ್ಟಿಯಲ್ಲಿ ಎಲ್ಲರ ಸಮ್ಮುಖದಲ್ಲಿ ಏರಿದ ದನಿಯಲ್ಲಿ ಜಗಳ ಮಾಡಿಕೊಂಡರು. ಒಂದು ಹಂತದಲ್ಲಿ ವಾಡೇಕರ್, ‘ನೀವೆ ಲ್ಲಾ ಪಟೌಡಿ ಗ್ಯಾಂಗ್ ನವರು ಇದ್ದೀರಲ್ಲ..’ ಎಂದು ಹೇಳಿದ್ದು ಬೇಡಿ ಪಿತ್ತ ಕೆಣಕುವಂತೆ ಮಾಡಿತು. ಈ ಮಾತನ್ನು ವಾಡೇಕರ್ ವಾಪಾಸ್ ಪಡೆದು ಕ್ಷಮೆಯಾಚಿಸಬೇಕು ಎಂದು ಬೇಡಿ ಪಟ್ಟು ಹಿಡಿದರು.

ತಂಡದ ಇತರ ಆಟಗಾರರಿಗೆ ಅವರಿಬ್ಬರನ್ನು ಸಮಾಧಾನ ಗೊಳಿಸುವ ಹೊತ್ತಿಗೆ ಸಾಕೋಸಾಕಾಗಿ ಹೋಯಿತು. ಈ ಇಬ್ಬರೂ ಹಿರಿಯ ಆಟಗಾರರು ಇತರರ ಕಣ್ಣಲ್ಲಿ ಸಣ್ಣವರಾಗಿ ಹೋಗಿದ್ದರು. ಇವರಿಬ್ಬರ ಕಾರಣದಿಂದ ತಂಡ ಎರಡು-ಮೂರು ಬಣಗಳಾಗಿ ಒಡೆದು ಹೋಗುವಂತಾಯಿತು. ಎಲ್ಲಿಗೆ ಹೋದರು ಆಟಗಾರರು ಗುಂಪು ಗುಂಪಾಗಿ ಚರ್ಚಿಸುವುದು ಸಾಮಾನ್ಯ ವಾಯಿತು. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವುದು ಮ್ಯಾನೇಜರ್ ಹೇಮು ಅಽಕಾರಿಗೆ ಸಾಧ್ಯವಾಗಲೇ ಇಲ್ಲ. ಯಾವಾಗ ಪ್ರವಾಸ ಕೊನೆಗೊಳ್ಳುವುದೋ ಎಂದು ಎಲ್ಲರೂ ಎದುರು ನೋಡುತ್ತಿದ್ದರು.

ತಂಡ ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆ, ಮುಂಬೈಯಲ್ಲಿರುವ ವಾಡೇಕರ್ ಮನೆಗೆ ಕ್ರಿಕೆಟ್ ಪ್ರೇಮಿಗಳು ಕಲ್ಲು ತೂರಿದರು. ಜನರ ಪ್ರತಿಕ್ರಿಯೆ ಎಷ್ಟು ಕ್ರೂರವಾಗಿ ಇರಬಹುದು ಎಂಬ ಅನುಭವ ಎಲ್ಲಾ ಆಟಗಾರರಿಗೂ ಆಯಿತು. ಅದೇನನಿಸಿತೋ ಏನೋ, ವಾಡೇಕರ್ ನಿವೃತ್ತಿ ಘೋಷಿಸಿಬಿಟ್ಟರು. ಅವರು ಇನ್ನೂ ನಾಲ್ಕೈದು
ವರ್ಷಗಳವರೆಗೆ ಅಂತಾರಾಷ್ಟ್ರೀಯ ಪಂದ್ಯಗಳ ನ್ನಾಡಬಹುದಿತ್ತು. ಈ ಮಧ್ಯೆ ಅವರನ್ನು ಪಶ್ಚಿಮ ವಲಯ ತಂಡದಿಂದಲೂ ಕೈಬಿಡಲಾಯಿತು. ಭಾರತ ತಂಡದ ನಾಯಕನಾದವನನ್ನು ವಲಯ ಮಟ್ಟದ ತಂಡದಿಂದ ಬಿಟ್ಟಿದ್ದು ಅವರಿಗೆ ಅತೀವ ಅವಮಾನ ಮತ್ತು ಆಘಾತವನ್ನುಂಟು ಮಾಡಿತು. ಅವರ ನಿವೃತ್ತಿ ಘೋಷಣೆಗೆ
ಇದೇ ಕಾರಣವಾಯಿತು. ಇಂಗ್ಲೆಂಡ್ ಪ್ರವಾಸದ ಕಹಿ ನೆನಪು ಅವರ ಸಾಧನೆಯ ಶಿಖರವನ್ನು ಕುಗ್ಗಿಸಿಬಿಟ್ಟಿತು. ಬ್ರಜ್ ಕುಮಾರ ನೆಹರು ನಡೆದುಕೊಂಡ ರೀತಿ ಯಿಂದ ತಂಡದ ನಾಯಕನಾಗಿ ಅವರಿಗೆ ಮನಸ್ಸಿಗೆ ತೀವ್ರ ಹಿಂಸೆಯಾಗಿತ್ತು.

ಪತ್ರಿಕೆಗಳಲ್ಲಿ ‘ವಾಡೇಕರ್ ತಂಡವನ್ನು ಮನೆಯಿಂದ ಹೊರ ದಬ್ಬಿದ ಭಾರತದ ಹೈಕಮಿಷನರ್’ ಎಂದು ವರದಿಯಾಗಿದ್ದವು. ಈ ಎಲ್ಲಾ ಘಟನೆಗಳಿಗೆ ತಂಡದ ನಾಯಕನಾಗಿ ಅವರು ನೈತಿಕ ಹೊಣೆ ಹೊರಲೇಬೇಕಿತ್ತು. ಈ ಎಲ್ಲಾ ಘಟನಾವಳಿಗಳಿಂದ ಅವರು ಜರ್ಜರಿತರಾಗಿದ್ದರು. ಇಂದ್ರಾ ನೂಯಿ ಆತ್ಮಕಥೆ ಪೆಪ್ಸಿಕೋ ಮಾಜಿ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಇಂದ್ರಾ ನೂಯಿ ಬರೆದ ಆತ್ಮಕಥೆ (My Life In Full : Work, Family, And our future) ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಬಹುರಾಷ್ಟ್ರೀಯ ಕಂಪನಿಯ ಮುಖ್ಯಸ್ಥರಾದವರಿಗೆ ಹೇಳಲು ಸಾಕಷ್ಟು ಕಥೆಗಳಿರುತ್ತವೆ. ಅದರಲ್ಲೂ ಇಂದ್ರಾ ನೂಯಿ ಹದಿಮೂರು ವರ್ಷಗಳ ಕಾಲ (2006-2019) ಪೆಪ್ಸಿ ಕಂಪನಿಯನ್ನು ಮುನ್ನಡೆಸಿದವರು.

ಜಗತ್ತಿನಾದ್ಯಂತ ವ್ಯವಹಾರಗಳನ್ನು ಹೊಂದಿರುವ, 267,000 ಸಿಬ್ಬಂದಿಯಿರುವ, ಪ್ರತಿ ವರ್ಷ ಏಳು ಶತಕೋಟಿ ಅಮೆರಿಕನ್ ಡಾಲರ್ ಆದಾಯ ಗಳಿಸುವ ಬೃಹತ್ ಸಂಸ್ಥೆಯನ್ನು ಮುನ್ನಡೆಸಿದವರು. ಪೆಪ್ಸಿ ಕಂಪನಿಗೆ ನಾಯಕತ್ವ ಕೊಡುವುದೆಂದರೆ, ಒಂದು ದೇಶದ ಅಧ್ಯಕ್ಷನೋ, ಪ್ರಧಾನಿಯೋ ಆದಂತೆ. ಪೆಪ್ಸಿ
ಕಂಪನಿಯ ಮುಖ್ಯಸ್ಥ ಬಯಸಿದರೆ, ಜಗತ್ತಿನ ಯಾವ ದೇಶದ ಪ್ರಧಾನಿಯಾದರೂ ಭೇಟಿಗೆ ಅವಕಾಶ ನೀಡುತ್ತಾರೆ. ಅಂಥ ಮಹತ್ವದ ಹೊಣೆಗಾರಿಕೆ ಮತ್ತು ಸ್ಥಾನಮಾನವದು. ಇಂದ್ರಾ ನೂಯಿ ಅಂಥ ಸಂಸ್ಥೆಯ ಮುಖ್ಯಸ್ಥೆಯಾಗಿ, ಭಾರತದ ಹಿರಿಮೆಯನ್ನು ಮೆರೆದವರು.

ಇಂಥವರು ತಮ್ಮ ಜೀವನಗಾಥೆಯನ್ನು ಹೇಳಿಕೊಂಡರೆ, ಕುತೂಹಲದಿಂದ ಕೇಳಬೇಕು ಎನಿಸುತ್ತದೆ. ಅವರಿಗೂ ಹೇಳಬೇಕಾದ, ಹೇಳಲೇಬಾರದ ಅನೇಕ ಸಂಗತಿಗಳಿರುತ್ತವೆ. ಇಂದ್ರಾ ನೂಯಿ ಅವರ ಪುಸ್ತಕದಲ್ಲೂ ಇಂಥ ಅನೇಕ ಕಥೆಗಳಿವೆ, ಪ್ರಸಂಗಗಳಿವೆ. ತಾವು ಎದುರಿಸಿದ ಸಂಕಟ, ಸವಾಲುಗಳನ್ನು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಕೆಲವು ಹೇಳಲಾಗದ ವಿಷಯಗಳನ್ನು ಗಂಟಲಲ್ಲಿ ಹಾಗೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಅರ್ಥವಾಗುತ್ತದೆ. ಆದರೂ ಭಾರತೀಯ ಹೆಣ್ಣು ಮಗಳೊಬ್ಬಳು, ಬಹುರಾಷ್ಟ್ರೀಯ ಕಂಪನಿಯೊಂದನ್ನು ಹದಿಮೂರು ವರ್ಷಗಳ ಕಾಲ ಮುನ್ನೆಡೆಸುವುದು ಸಣ್ಣ ಮಾತಲ್ಲ. ಮುಂದೊಮ್ಮೆ ಈ ಕೃತಿಯ ಕೆಲವು ಪ್ರಸಂಗಗಳ ಬಗ್ಗೆ ಹೇಳುತ್ತೇನೆ.

ತೇನ್ಸಿಂಗನ ವಾಚು
ಕೆಲವು ವರ್ಷಗಳ ಹಿಂದೆ ನಾನು ಝುರಿಕ್ ನಲ್ಲಿರುವ ಬೆಯೆರ್ ವಾಚ್ ಅಂಡ್ ಕ್ಲಾಕ್ ಮ್ಯೂಸಿಯಂ ಗೆ ಹೋಗಿದ್ದೆ. ಅಲ್ಲಿ ಸರ್ ಎಡಮಂಡ್ ಹಿಲರಿ ಮತ್ತು ತೇನ್ಸಿಂಗ್ ಹಿಮಾಲಯ ಪರ್ವತವನ್ನು ಏರುವಾಗ ಕಟ್ಟಿದ ರೋಲೆಕ್ಸ್ ವಾಚನ್ನು ನೋಡಿ ಆಶ್ಚರ್ಯವಾಯಿತು. ಜಗತ್ತಿನಲ್ಲಿಯೇ ಅತಿ ಎತ್ತರದ (ಇಪ್ಪತ್ತೊಂಬತ್ತು ಸಾವಿರ ಅಡಿ ) ಪರ್ವತವನ್ನು ಏರುವಾಗ ರೋಲೆಕ್ಸ್ ಕಂಪನಿ ಅವರಿಗೆ ಈ ವಾಚನ್ನು ನೀಡಿತ್ತು. ಅಷ್ಟು ಎತ್ತರದ ಪ್ರದೇಶದಲ್ಲೂ ಈ ವಾಚು ಸಮರ್ಪಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸುವ ದೃಷ್ಟಿಯಿಂದ ಆ ವಾಚನ್ನು ನೀಡಲಾಗಿತ್ತು.

ಕೆಲವು ವರ್ಷಗಳ ನಂತರ ತೇನ್ಸಿಂಗಗೆ ಹಣಕಾಸಿನ ತೊಂದರೆ ಎದುರಾದಾಗ ಆತ ಈ ವಾಚನ್ನು ಮಾರಲು ಮುಂದಾದ. ಸಾಮಾನ್ಯವಾಗಿ ಗಣ್ಯ ರೋಲೆಕ್ಸ್ ವಾರಸುದಾರರು ವಾಚನ್ನು ಮಾರುತ್ತಾರೆಂಬ ಸುದ್ದಿ ಗೊತ್ತಾದರೆ ಕಂಪನಿಯೇ ಖರೀದಿಸುತ್ತದೆ. ತೇನ್ಸಿಂಗನ ವಾಚನ್ನು ಕಂಪನಿಯೇ ಖರೀದಿಸಿ ಮ್ಯೂಸಿಯಂ ನಲ್ಲಿ
ಇಟ್ಟಿದೆ. ಈ ವಾಚಿಗೆ ಇಂದು ಬೆಲೆ ಕಟ್ಟಲಾಗದು. ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರ ಬಳಿ ಕನಿಷ್ಠ ಇಪ್ಪತ್ತಾದರೂ ರೋಲೆಕ್ಸ್ ವಾಚುಗಳಿರಬಹುದು. ಈ ಕಾರಣ ಕ್ಕಾಗಿಯೇ ಅವರ ಹೆಸರನ್ನು ಹೇಳಿಲ್ಲ.

ಏಕಕಾಲದಲ್ಲಿ ಅವರು ಕಟ್ಟುವುದು ಒಂದೇ ವಾಚಾದರೂ ಉಳಿದ ವಾಚುಗಳನ್ನು ವಿಶೇಷ ತಿರುಗಣೆಯ ಮೇಲಿಟ್ಟು ಅವು ನಿಲ್ಲದಂತೆ ಕಾಳಜಿ ವಹಿಸಿದ್ದಾರೆ. ನಿಂತು ಹೋದ ರೋಲೆಕ್ಸ್ ವಾಚನ್ನು ನೋಡಲಾಗುವುದಿಲ್ಲ ಎನ್ನುವ ಅವರು ನಿತ್ಯವೂ ಅವೆಲ್ಲವನ್ನೂ ಒರೆಸಿ ಅತೀವ ಕಾಳಜಿ ಮೆರೆಯುತ್ತಾರೆ. ಈ ಜಗತ್ತಿನ ಅದ್ಭುತ ಸೃಷ್ಟಿಗಳಲ್ಲಿ ರೋಲೆಕ್ಸ್ ವಾಚಿಗೆ ಒಂದನೇ ಸ್ಥಾನ ಎಂಬುದು ಅವರ ಸಿಗ್ನೇಚರ್ ಸ್ಟೇಟ್ಮೆಂಟ್.