Saturday, 21st September 2024

ಸಹಜ ಕಣ್ಣಿನ ಸಾಮರ್ಥ್ಯವನ್ನು ಮೀರಿಸಬಲ್ಲ ಎಲೆಕ್ಟ್ರಾನಿಕ್ ಕಣ್ಣು !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ಜೀವ ಜಗತ್ತಿನಲ್ಲಿ, ಒಂದು ಜೀವಿಯ ಅಸ್ತಿತ್ವವು ಉಳಿಯಲು ಕಾರಣ ಮಿದುಳು. ಆದರೆ ಮಿದುಳು ಸ್ವತಃ ಏನನ್ನೂ ಮಾಡಲಾರದು. ಏಕೆಂದರೆ, ಒಂದು ಜೀವಿಗೆ ಅದರ ಸುತ್ತಮುತ್ತಲಿನ ಜಗತ್ತಿನ ಅರಿವನ್ನು ತಿಳಿಸಿಕೊಡುವುದು ಅದರ ಪ್ರಂಚೇಂದ್ರಿಯಗಳು.

ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ. ಪಂಚೇಂದ್ರಿಯಗಳು ನೀಡುವ ಮಾಹಿತಿಯನ್ನು ಸಂಸ್ಕರಿಸಿ, ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಮಿದುಳು ನಮ್ಮನ್ನು ನಾನಾ ಅಪಾಯಗಳಿಂದ ರಕ್ಷಿಸುತ್ತದೆ. ಪಂಚೇಂದ್ರಿಯಗಳಲ್ಲಿ ಮೊದಲು ರೂಪುಗೊಂಡದ್ದು ಚರ್ಮ. ಆದರೆ ಅತ್ಯಂತ ಉಪಯುಕ್ತವಾದದ್ದು ಕಣ್ಣು. ಹಾಗಾಗಿ ‘ಸರ್ವೇಂದ್ರಿಯಾ ಣಾಂ ನಯನಂ ಪ್ರಧಾನಂ’ ಎಂದರು ನಮ್ಮ ಹಿರಿಯರು.

ನಮ್ಮ ಯಶಸ್ವೀ ಸಮಗ್ರ ಬದುಕಿಗೆ ಎರಡು ಕಣ್ಣುಗಳು ಮುಖ್ಯ. ಜತೆಗೆ ನಮ್ಮ ಮುಖಸೌಂದರ್ಯಕ್ಕೆ ಪುಟ ನೀಡುವುದೇ ಕಣ್ಣು! ಇಂತಹ ಕಣ್ಣು ಇಲ್ಲವಾದರೆ!? ನಮ್ಮ ಪೂರ್ವಜರು ಸದಾ ಬದುಕುಳಿಯುವ ಹೋರಾಟವನ್ನು ನಡೆಸುತ್ತಲೇ ಇದ್ದರು. ಶತ್ರುಗಳಿಂದ, ಕ್ರೂರ ಮೃಗಗಳಿಂದ, ಕಣ್ಣಿಗೆ ಕಾಣದ ಅಗೋಚರ ರೋಗ ಜನಕಗಳಿಂದ ತಮ್ಮನ್ನು ಕಾಪಾಡಿಕೊಳ್ಳುವುದು ಅವರ ದೈನಂದಿನ ಪ್ರಮುಖ ಸಮಸ್ಯೆಯಾಗಿತ್ತು. ಈ ಬದುಕುವ ಹೋರಾಟದಲ್ಲಿ ನಮ್ಮ ಪೂರ್ವಜರ ಅಂಗಾಂಗ ಗಳಿಗೆ ಗಾಯಗಳಾಗುತ್ತಿದ್ದವು ಹಾಗೂ ಕೆಲವು ಸಲ ಅಂಗಾಂಗ ಗಳನ್ನು ಕಳೆದು ಕೊಳ್ಳುವ ಸಾಧ್ಯತೆಯೂ ಇರುತ್ತಿದ್ದವು.

ಕೈಯನ್ನೋ ಅಥವಾ ಕಾಲನ್ನೋ ಕಳೆದುಕೊಂಡರೆ, ಹೇಗೋ ಬದುಕನ್ನು ನಡೆಸಬಹುದು. ಆದರೆ ಕಣ್ಣೇ ಹೋಗಿ ಬಿಟ್ಟರೆ? ಎರಡು ಕಣ್ಣು ಹೋಗಿಬಿಟ್ಟರೆ ನಮ್ಮ ಪೂರ್ವಜನು ಹೆಚ್ಚು ದಿನ ಬದುಕುತ್ತಿರಲಿಲ್ಲ. ಅಲ್ಪಕಾಲದಲ್ಲಿ ಸಾಯು ವುದು ಅನಿವಾರ್ಯವಾಗುತ್ತಿತ್ತು. ಆದರೆ ಒಂದು ಕಣ್ಣು ಮಾತ್ರ ಹೋದರೆ?! ಇರುವ ಒಂದು ಕಣ್ಣಿನಿಂದ ಹೇಗೋ ಬದುಕನ್ನು ನಡೆಸಬಹುದಿತ್ತು. ಹಾಗೆಯೇ ಬದುಕನ್ನು ನಡೆಸಿದರು. ಆದರೆ ನಮ್ಮ ಸಮಾಜವು ಒಕ್ಕಣ್ಣ ರನ್ನು ಅಷ್ಟು ಆತ್ಮೀಯವಾಗಿ ಸ್ವೀಕರಿಸುತ್ತಿರಲಿಲ್ಲ. ಅವರನ್ನು ಅಪಶಕುನದಂತೆ ಕಾಣುತ್ತಿದ್ದರು. ಒಕ್ಕಣ್ಣನನ್ನು ನೋಡಿ ಮಕ್ಕಳು ಹೆದರುತ್ತಿದ್ದರು.

ಒಕ್ಕಣ್ಣಿನವರ ಬಗ್ಗೆ ಭೀಕರ ಕಥೆಗಳನ್ನು ಕಟ್ಟಿದರು. ಒಕ್ಕಣ್ಣಿನವರು ಎಷ್ಟೇ ಸುಂದರವಾಗಿದ್ದರೂ, ಎಷ್ಟೇ ಶ್ರೀಮಂತರಾಗಿದ್ದರೂ, ಒಂದು ಕಣ್ಣಿನ ಅನುಪಸ್ಥಿತಿ ಅವರ
ಪಾಲಿಗೆ ಕಪ್ಪು ಚುಕ್ಕೆಯಾಗಿತ್ತು. ಇದಕ್ಕೆ ಅವರು ಕಂಡುಕೊಂಡ ಉಪಾಯವೆಂದರೆ ಕೃತಕ ಕಣ್ಣನ್ನು ಧರಿಸುವುದು! ಇಂದು, ಪ್ರತಿವರ್ಷ ಸುಮಾರು ೧೦,೦೦೦ ಜನರು ತಮ್ಮ ಒಂದು ಕಣ್ಣನ್ನು ನಾನಾ ಕಾರಣಗಳಿಂದ ಕಳೆದುಕೊಳ್ಳುತ್ತಿದ್ದಾರೆ. ಇವರೆಲ್ಲರೂ ಕೃತಕ ಕಣ್ಣನ್ನು ಬಳಸಲೇಬೇಕಾದ ಅನಿವಾರ್ಯತೆಯು ತಲೆ ದೋರಿದೆ.

ನಮಗೆ ದೊರೆತಿರುವ ದಾಖಲೆಯ ಅನ್ವಯ, ಕ್ರಿ.ಪೂ.2900-ಕ್ರಿ.ಪೂ.2800ರಲ್ಲಿ ಜೀವಿಸಿದ್ದ ಮಳೆಯ ಅಸ್ಥಿಪಂಜರವು ಆಗ್ನೇಯ ಇರಾನ್ ದೇಶದಲ್ಲಿ ದೊರೆತಿದೆ. ಇರಾನಿನಲ್ಲಿ ಶಹ್ರ್-ಎ-ಸುಕ್ತ ಎನ್ನುವ ಸ್ಥಳ. ‘ಸುಟ್ಟುಹೋದ ನಗರ’ ಎಂದು ಈ ಹೆಸರಿನ ಅರ್ಥ. ಕಂಚುಯುಗಕ್ಕೆ ಸೇರಿದ ಹೆಲ್ಮಂಡ್ ಸಂಸ್ಕೃತಿಯ ಕಾಲಕ್ಕೆ ಸೇರಿದ ಸಮಾಧಿಯಲ್ಲಿ ಈಕೆಯ ಅಸ್ಥಿಪಂಜರವಿತ್ತು. ಈ ತಾಣವು ಈಗ ಯುನೆಸ್ಕೋ ವಿಶ್ವಪರಂಪರೆಗೆ ಸೇರಿದೆ. ಈಕೆ ಸುಮಾರು 6’ ಎತ್ತರದ ಮಳೆ. ಅಕೆಯ ಒಂದು ಕಣ್ಣು ಕುರುಡಾಗಿತ್ತು. ಕುರುಡು ಕಣ್ಣಿನ ಕುಳಿಯಲ್ಲಿ ಕೃತಕ ಕಣ್ಣುಗುಡ್ಡೆಯನ್ನು ಅಳವಡಿಸಲಾಗಿತ್ತು.

ಕೃತಕ ಕಣ್ಣು ಗುಡ್ಡೆಯು ಗೋಳಾಕಾರವಾಗಿರುವ ಬದಲು ಮೊಟ್ಟೆಯ ಚಿಪ್ಪಿನಂತೆ, ಅರೆ ಚಂದ್ರಾಕೃತಿಯಲ್ಲಿತ್ತು. ಬಿಟ್ಯುಮೆನ್ ಎನ್ನುವ ಹಗುರ ವಸ್ತುನಿಂದ ಮಾಡಿ ದ್ದರು. ಅದರ ಮೇಲೆ ತೆಳುವಾದ ಚಿನ್ನದ ತಗಡನ್ನು ಹೊದಿಸಿದ್ದರು. ಈ ಕೃತಕ ಕಣ್ಣಿನ ಮಧ್ಯದಲ್ಲಿ ಒಂದು ವೃತ್ತ. ಇದು ಕಣ್ಣಿನ ಪಾಪೆಯನ್ನು ಸೂಚಿಸುತ್ತಿತ್ತು. ಇದರಿಂದ, ಸೂರ್ಯನಿಂದ ಹೊರಡುವ ಕಿರಣಗಳನ್ನು ಹೋಲುವಂತಹ, ಸೂಕ್ಷ್ಮಗೆರೆಗಳನ್ನು ಕೊರೆದಿದ್ದರು. ಈ ಅರೆಚಂದ್ರಾಕೃತಿಯ ಕೃತಕಕಣ್ಣಿನ ಅಂಚಿನಲ್ಲಿ ಸೂಕ್ಷ್ಮರಂಧ್ರಗಳಿದ್ದವು. ಚಿನ್ನದ ಸೂಕ್ಷ್ಮ ದಾರಗಳನ್ನು ಈ ರಂಧ್ರಗಳ ಮೂಲಕ ಹಾಯಿಸಿ, ಕಣ್ಣುಗುಳಿಯೊಳಗೆ ಬಿಗಿದಿದ್ದರು. ಹೀಗೆ ಬಿಗಿದಿದ್ದರು ಎನ್ನುವುದಕ್ಕೆ ಕುರುಹಾಗಿ ಆಕೆಯ ಕಣ್ಣುಗುಳಿಯ ಮೂಳೆಯ ಮೇಲೆ ದಾರಗಳ ಕುರುಹುಗಳಿವೆ. ಬಹುಶಃ ಈಕೆಯು ಮಾಟಗಾತಿ ಅಥವಾ ಭವಿಷ್ಯವನ್ನು ನುಡಿಯುವಾಕೆ
ಆಗಿರಬೇಕು.

ಅರೆಬೆಳಕಲ್ಲಿ ಈ ಚಿನ್ನದ ಕಣ್ಣು ಲಕ್ಷಣ ಬೆಳಕನ್ನು ಬೀರಿ, ನೋಡುಗರ ಮನಸ್ಸಿನಲ್ಲಿ ಭಯಮಿಶ್ರಿತ ಭಕ್ತಿಯ ಭಾವವನ್ನು ಉಂಟುಮಾಡುತ್ತಿದ್ದಿರಬೇಕು. ಈಕೆಯು ತನ್ನ ಜೀವಮಾನ ಪೂರ್ತಿ ಈ ಕೃತಕ ಕಣ್ಣುಗುಡ್ಡೆಯನ್ನು ಧರಿಸುತ್ತಿದ್ದಳು ಎಂದು ಕಾಣುತ್ತದೆ. ಬ್ರೂ ಭಾಷೆಯ ಅತ್ಯಂತ ಪ್ರಾಚೀನ ಬರಹದ ದಾಖಲೆಯಲ್ಲಿಯೂ ಚಿನ್ನದ ಕೃತಕ ಕಣ್ಣುಗುಡ್ಡೆಯನ್ನು ಧರಿಸಿದ ಮಳೆಯ ಪ್ರಸ್ತಾಪವು ದೊರೆಯುತ್ತದೆ. ಈಜಿಪ್ಷಿಯನ್ ಮತ್ತು ರೋಮನ್ ವೈದ್ಯರು ಕ್ರಿ.ಪೂ.500ರ ಹೊತ್ತಿಗೆ ಜೇಡಿಮಣ್ಣಿನಿಂದ
ಮಾಡಿದ ಕೃತಕ ಕಣ್ಣು ಅಳವಡಿಸುವುದನ್ನು ಕಲಿತಿದ್ದರು. ಇವೂ ಸಹ ಮೊಟ್ಟೆಯ ಚಿಪ್ಪಿನಂತಹ ರಚನೆಗಳಾಗಿದ್ದವು.

ಹಾಗಾಗಿ ಇವನ್ನು ಕಣ್ಣುಗುಳಿಯ ಒಳಗೆ ಧರಿಸುವುದರ ಬದಲು, ಕಣ್ಣಿನ ಹೊರಗೆ ಧರಿಸುತ್ತಿದ್ದರು. ಮಧ್ಯಯುಗದ ಯೂರೋಪಿನಲ್ಲಿ ಕೃತಕ ಕಣ್ಣುಗಳನ್ನು
ನಿರ್ಮಿಸುವ ಕಲೆಯು ಅಭಿವೃದ್ಧಿಯಾಯಿತು. ಆರಂಭದಲ್ಲಿ ಕೃತಕ ಕಣ್ಣನ್ನು ಚಿನ್ನದಿಂದ ಮಾಡುತ್ತಿದ್ದರು. 1679ರ ಹೊತ್ತಿಗೆ ಚಿನ್ನದ ಬದಲು ಗಾಜನ್ನು ಬಳಸಿ ಕೃತಕ ಕಣ್ಣನ್ನು ತಯಾರಿಸಿದರು. ಹಾಗಾಗಿ ಕೃತಕ ಕಣ್ಣು ಎಂದರೆ ‘ಗ್ಲಾಸ್ ಐ’ ಎನ್ನುವ ಭಾವವು ಇಂದಿಗೂ ಪ್ರಚಲಿತದಲ್ಲಿದೆ. ಇವು ಸ್ವಲ್ಪ ಒರಟಾಗಿದ್ದವು. ಧರಿಸುವುದು ಅಷ್ಟು ಸುಲುಭವಾಗಿರಲಿಲ್ಲ. ಅಷ್ಟು ಹಿತಕರವಾಗಿಯೂ ಇರಲಿಲ್ಲ. ಕೆಳಕ್ಕೆ ಬಿದ್ದರೆ ಒಡೆದು ಹೋಗುತ್ತಿದ್ದವು. ಇವೂ ಮೊಟ್ಟೆಯ ಚಿಪ್ಪಿನಂತೆ ಅರೆಚಂದ್ರಾಕೃತಿ ಯಲ್ಲಿ ಮಾತ್ರ ಇರುತ್ತಿದ್ದವು. ಹಾಗಾಗಿ ಇವನ್ನು ಅಂಧ ಕಣ್ಣಿನ ಹೊರಭಾಗದಲ್ಲಿ ಮಾತ್ರ ಧರಿಸಲು ಬರುತ್ತಿತ್ತು. ಇವನ್ನು ತಯಾರಿಸುವ ಕಲೆಯು ವೆನಿಶಿಯನ್ ಜನರಿಗೆ ಮಾತ್ರ ತಿಳಿದಿತ್ತು.

ಹಾಗಾಗಿ ಯೂರೋಪಿನ ಮಾರುಕಟ್ಟೆಯನ್ನು ವೆನಿಶಿಯನ್ನರು ಮಾತ್ರ ನಿಯಂತ್ರಿಸುತ್ತಿದ್ದರು. 18ನೆಯ ಶತಮಾನದ ಹೊತ್ತಿಗೆ ಪ್ಯಾರಿಸ್ ಕುಶಲಕರ್ಮಿಗಳು ತಾವೂ ಕೃತಕ ಕಣ್ಣುಗಳನ್ನು ನಿರ್ಮಿಸುವ ಪ್ರಯತ್ನವನ್ನು ಮಾಡಿದರು. ಆದರೆ ಇವರಿಬ್ಬರನ್ನೂ ಜರ್ಮನ್ ತಂತ್ರಜ್ಞರು ಮೀರಿಸಿದರು. ಗಾಜಿನ ಗೋಳಗಳನ್ನು ಊದುವ ಕಲೆಯು ಜರ್ಮನ್ನರಿಗೆ ಸಿದ್ಧಿಸಿತ್ತು. ಇವರು ತಯಾರಿಸುತ್ತಿದ್ದ ಕೃತಕ ಕಣ್ಣುಗಳು ಯೂರೋಪಿನಲ್ಲಿ ಮಾತ್ರವಲ್ಲ, ಅಮೆರಿಕವನ್ನು ಪ್ರವೇಶಿಸಿ, ಜನಪ್ರಿಯ ವಾದವು. ಆದರೆ ಆ ವೇಳೆಗೆ ದ್ವಿತೀಯ ಮಹಾಯುದ್ಧವು ಆರಂಭವಾಯಿತು. ಅಮೆರಿಕಕ್ಕೆ ಜರ್ಮನ್ ಗಾಜಿನ ಕಣ್ಣುಗಳು ರಫ್ತಾಗುವುದು ನಿಂತೇ ಹೋಯಿತು. ಆಗ ಅಮೆರಿ ಕನ್ನರು ಅನಿವಾರ್ಯವಾಗಿ ತಮ್ಮದೇ ಆದ ಸಂಶೋಧನೆಗಳನ್ನು ನಡೆಸಿ, ಗಾಜಿನ ಕಣ್ಣಿನ ಬದಲು, ಅಕ್ರಿಲಿಕ್ ಪ್ಲಾಸ್ಟಿಕ್ ಕಣ್ಣುಗಳನ್ನು ನಿರ್ಮಿಸಲು ಪ್ರಯತ್ನಿಸಿದರು. ಪಾಲಿಮೀಥೈಲ್ ಮೆಥಾಕ್ರಿಲೇಟ್‌ನಿಂದ ಮಾಡಿದ ಕೃತಕ ಕಣ್ಣುಗಳು ಜನಪ್ರಿಯವಾದವು. ಆದರೆ ಜರ್ಮನ್ನರು ಮಾತ್ರ ಗಾಜಿನ ಗುಡ್ಡೆಗಳನ್ನೇ ಬಳಸುವುದನ್ನು ಮುಂದುವರೆಸಿದರು.

ಇಂದು ಕೃತಕ ಕಣ್ಣುಗಳನ್ನು ಸಾಮಾನ್ಯವಾಗಿ ಆಕ್ರಿಲಿಕ್ ನಂತಹ ಪ್ಲಾಸ್ಟಿಕ್ ವಸ್ತುನಿಂದ ಮಾಡುತ್ತಾರೆ. ಅಂಧ ಕಣ್ಣಿನ ರೋಗಕಾರಣವನ್ನನುಸರಿ, ಕೃತಕ ಕಣ್ಣನ್ನು ನಿರ್ಮಿಸುವ ತಂತ್ರವು ಜನಪ್ರಿಯವಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಕೃತಕ ಕಣ್ಣುಗಳನ್ನು ಕೊಂಡುಕೊಳ್ಳುವುದರ ಜತೆಗೆ, ವ್ಯಕ್ತಿಯು ತನಗಾಗಿಯೇ ವ್ಯಕ್ತಿಗತ ಕಣ್ಣನ್ನು ಸಿದ್ಧಪಡಿಸಿಕೊಂಡು ಧರಿಸುವ ಅವಕಾಶವೂ ದೊರೆತಿದೆ. ವ್ಯಕ್ತಿಗತ ಕೃತಕ ಕಣ್ಣಿನಲ್ಲಿ ಒಂದು ಅನುಕೂಲತೆಯಿದೆ. ಸಹಜ ಕಣ್ಣಿನ ಪಾಪೆಯ ಬಣ್ಣವನ್ನೇ ಹೋಲುವಂತಹ ವರ್ಣಚಿತ್ರವನ್ನು ಕೃತಕ ಕಣ್ಣಿನ ಮೇಲೆ ಬಿಡಿಸಲು ಸಾಧ್ಯವಿದೆ.

ಹಾಗೆ ಬಿಡಿಸಿದ ಕೃತಕ ಕಣ್ಣು, ಹೆಚ್ಚೂ ಕಡಿಮೆ ಸಹಜ ಕಣ್ಣನ್ನೇ ಹೋಲುತ್ತದೆ. ಇಂದು ಅರೆಚಂದ್ರಾಕೃತಿಯ ಕೃತಕ ಕಣ್ಣುಗಳು ಹಾಗೂ ಗೋಳಾಕೃತಿಯ ಇಲ್ಲವೇ
ಅಂಡಾಕೃತಿಯ ಕೃತಕ ಕಣ್ಣುಗಳು ದೊರೆಯುತ್ತಿವೆ. ಆಕ್ರಿಲಿಕ್ ಕೃತಕ ಕಣ್ಣುಗಳನ್ನು ವಿಶಾಲವಾಗಿ ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲನೆಯದು ಘನ ಕೃತಕ ಕಣ್ಣುಗಳು (ನಾನ್-ಪೋರಸ್). ಎರಡನೆಯದು ರಂಧಿಯ ಕೃತಕ ಕಣ್ಣುಗಳು (ಪೋರಸ್). ಘನ ಕೃತಕ ಕಣ್ಣುಗಳನ್ನು ಕಣ್ಣುಕುಳಿಯ ಒಳಗೆ ಅಳವಡಿಸಬಹುದು. ಅವು ಸಹಜ ಕಣ್ಣಿನ ಹಾಗೆ ಕಾಣುತ್ತವೆ. ಆದರೆ ಕಣ್ಣುಗುಡ್ಡೆಯ ಚಲನವಲನಗಳು ಇರುವುದಿಲ್ಲ. ರಂಧಿಯ ಕೃತಕ ಕಣ್ಣಿಗೆ ನಯನ ಸ್ನಾಯು ಗಳನ್ನು ಜೋಡಿಸಬಹುದು. ಇದರಿಂದ ಕಣ್ಣುಗುಡ್ಡೆಯನ್ನು ಚಲಿಸಲು ಸಾಧ್ಯವಾಗುತ್ತದೆ. ನೋಡುವವರಿಗೆ ಕೃತಕ ಕಣ್ಣನ್ನು ಅಳವಡಿಸಿರುವ ಮಾತಿಯು ಥಟ್ ಅಂತ ತಿಳಿಯುವುದಿಲ್ಲ. ಇವು ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ.

ಮೇ 21, 2020 ನೇಚರ್ ಪತ್ರಿಕೆಯ ವರದಿಯನ್ವಯ ಸಹಜ ಕಣ್ಣಿನಂತೆ ಕೆಲಸವನ್ನು ಮಾಡಬಲ್ಲ ಕೃತಕ ಕಣ್ಣನ್ನು ತಯಾರಿಸಿದ್ದಾರಂತೆ. ಈ ಕೃತಕ ಕಣ್ಣು ಸಹಜ ಕಣ್ಣಿಗಿಂತ ಉತ್ತಮ ದೃಷ್ಟಿ ಸಾಮರ್ಥ್ಯವನ್ನು ನೀಡಬಲ್ಲುದು. ಸಹಜ ಕಣ್ಣಿನ ಅಕ್ಷಿಪಟಲದಲ್ಲಿ ಒಂದು ಚದರ ಸೆಂ.ಮೀ. ಪ್ರದೇಶದಲ್ಲಿ 10 ದಶಲಕ್ಷ ದ್ಯುತಿಸಂವೇದಿ ಕೋಶಗಳಿದ್ದರೆ, ಕೃತಕ ಕಣ್ಣಿನಲ್ಲಿ 460 ದಶಲಕ್ಷ ದ್ಯುತಿಸಂವೇದಿ ಸಂವೇದಕಗಳು (ಸೆನ್ಸಾರ್ಸ್) ಇರುತ್ತವೆ. ಹಾಗಾಗಿ ಈ ಕಣ್ಣು ಸಹಜ ಕಣ್ಣಿಗಿಂತ ಉತ್ತಮವಾದ ದೃಷ್ಟಿ ಸಾಮರ್ಥ್ಯವನ್ನು ನೀಡಬಲ್ಲುದು.

ಕೃತಕ ಕಣ್ಣು ಸಹಜ ಕಣ್ಣಿಗಿಂತ (40-150 ಮಿಲಿಸೆಕಂಡ್) ವೇಗವಾಗಿ, (30-40) ಮರುವರ್ತಿಕೆ ಕ್ರಿಯೆಗಳನ್ನು (ರಿಫ್ಲೆಕ್ಸ್ ಆಕ್ಷನ್ಸ್) ತೋರಬಲ್ಲದು. ಇರುಳಿನಲ್ಲಿ ಸಹಜ ಕಣ್ಣಿನಂತೆಯೇ ದೃಷ್ಟಿಯನ್ನು ತೋರಬಲ್ಲುದು. ಸಹಜ ಕಣ್ಣು 150 ಡಿಗ್ರೀ ವ್ಯಾಪ್ತಿಯ ಪ್ರದೇಶವನ್ನು ತೋರಿದರೆ, ಕೃತಕ ಕಣ್ಣು 100 ಡಿಗ್ರೀ ವ್ಯಾಪ್ತಿಯ ಪ್ರದೇಶವನ್ನು ಮಾತ್ರ ತೋರಿಸುತ್ತದೆ. ಆದರೆ ಇಂತಹ ಕಣ್ಣು ಸಾರ್ವಜನಿಕ ಬಳಕೆಗೆ ಬರಲು ಇನ್ನೂ ಸಾಕಷ್ಟು ಕಾಲದೆ.

ಇಂದು ಕೃತಕ ಕಣ್ಣುಗಳನ್ನು ಧರಿಸಿ ಸಹಜ ಬದುಕನ್ನು ನಡೆಸುತ್ತಿರುವ ಜನರು ಸಾಕಷ್ಟು ಇದ್ದಾರೆ. ಜಗತ್ತಿನಲ್ಲಿ ಅತ್ಯಂತ ಸುದೀರ್ಘಕಾಲ ಕಾಲ ಕೃತಕ ಕಣ್ಣನ್ನು ಧರಿಸಿದ ಹೆಸರು ಥೈಲ್ಯಾಂಡಿನ ಅರಸ ರಾಮ-9ಅವರ ಹೆಸರಿನಲ್ಲಿದೆ. ಇವರು 1946ರಿಂದ ತಮ್ಮ ಮರಣದವರೆಗೆ (2016) 70 ವರ್ಷಗಳ ಕಾಲದವರೆಗೆ ಕೃತಕ ಕಣ್ಣನ್ನು (ಬಲ) ಧರಿಸಿ, ಎಲ್ಲರಂತೆ ಸಹಜ ಬದುಕನ್ನು ನಡೆಸಿದ್ದರು.