Saturday, 21st September 2024

ಪ್ರತಿ ವರ್ಷ ಬರುತ್ತಿದ್ದ ವಲಸೆ ಹಕ್ಕಿಗಳ ಸಂಖ್ಯೆ ಕಮ್ಮಿಯಾಗಿದೆ ಅಂದ್ರೆ ಎನರ್ಥ ?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಸುಮಾರು ಐದು ವರ್ಷಗಳ ಹಿಂದಿನವರೆಗೆ, ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ನಾನು ನಿರಂತರವಾಗಿ ಹೋಗುತ್ತಿದ್ದೆ. ಬೆಳಗ್ಗೆ ಮೂರೂವರೆಗೆ ಬೆಂಗಳೂರಿನಿಂದ ಹೊರಟರೆ, ಐದೂವರೆ ಹೊತ್ತಿಗೆ ಕೊಕ್ಕರೆ ಬೆಳ್ಳೂರನ್ನು ತಲುಪಿ, ಫೋಟೋ ತೆಗೆಯಲು ಸನ್ನದ್ಧನಾಗುತ್ತಿದ್ದೆ.

ಸುಮಾರು ಮೂರು ತಾಸು ಅಲ್ಲಿ ವಿಹರಿಸುವ ಪೇಂಟೆಡ್ ಸ್ಟಾರ್ಕ್, ಪೆಲಿಕನ್ ಪಕ್ಷಿಗಳ ಸಾಂಗತ್ಯದಲ್ಲಿದ್ದು, ಬಹಳ ಹತ್ತಿರದಿಂದ ಮನಸೋ ಇಚ್ಛೆ ಫೋ ತೆಗೆದ ನಂತರ ಬರುತ್ತಿದ್ದೆ. ಇದು ಒಂದೆರಡು ಸಲವಲ್ಲ, ಸುಮಾರು ಮೂರು ವರ್ಷ ಸತತವಾಗಿ ಈ ಪಕ್ಷಿ ಚಾರಣ ನಡೆಸಿದ್ದೆ. ಅಲ್ಲಿನ ರಸ್ತೆಗಳು ನನಗೆ ಹಸ್ತರೇಖೆಗಳಷ್ಟು ಪರಿಚಿತ. ಐದು ತಾಸು ಸವುಡು ಸಿಕ್ಕರೆ ನಾನು ಕೊಕ್ಕರೆ ಬೆಳ್ಳೂರಿನಲ್ಲಿ ಇರುತ್ತಿದ್ದೆ.

ಆರಂಭದಲ್ಲಿ ಪಕ್ಷಿಗಳ ಫೋಟೋಗ್ರಫಿ ಆಪ್ತವಾಗುತ್ತಾ, ಕ್ರಮೇಣ ಅಲ್ಲಿನ ಪರಿಸರ, ಗಿಡ, ಮರ, ಜನ, ಕೆರೆ, ಗದ್ದೆ, ಹಳ್ಳಿಯ ವಾತಾವರಣ ಇಷ್ಟವಾಗುತ್ತಾ ಹೋದವು. ಅಲ್ಲಿನ ರೈತರ ಪರಿಚಯವಾಯಿತು. ಎರಡು ಸಲ ಮಾತಾ ಡಿಸಿದ ನಂತರ ಮನೆಗೆ ಚಹಕ್ಕೆ ಕರೆಯಲಾರಂಭಿಸಿದರು. ಚಹ ಕುಡಿಯುವಾಗ ತಮ್ಮ ಮನೆಯ ವಿಷಯ, ಊರ ವಿಷಯ, ಮದುವೆ, ಸಂಬಂಧ, ರಾಜಕೀಯ, ಮಳೆ-ಬೆಳೆ, ಸಂಕಷ್ಟ, ಬವಣೆ..ಹೀಗೆ ಹತ್ತಾರು ವಿಷಯಗಳು ಬಂದು ಹೋಗುತ್ತಿದ್ದವು. ಆರಂಭದಲ್ಲಿ ನಾನು ಪತ್ರಿಕೆಯ ಸಂಪಾದಕ ಎಂದು ಹೇಳಿರಲಿಲ್ಲ. ಆದರೆ, ಊರ ಜನರ ಪೈಕಿ ಯಾರೋ ನನ್ನ ಗುರುತು ಹಿಡಿದರು. ಅಂದಿನಿಂದ ಅವರು ನನ್ನ ಜತೆ ವ್ಯವಹರಿ ಸುವ ರೀತಿ ತುಸು ಬದಲಾಯಿತು. ನನಗೆ ಹೆಚ್ಚು ಗೌರವ ಕೊಡಲಾರಂಭಿಸಿದರು. ನನ್ನ ಮತ್ತು ಅವರ ನಡುವೆ ಗೋಡೆ ನಿರ್ಮಾಣ ವಾಗುತ್ತಿದೆಯೆಂದು ಅನಿಸಿತು. ಅದನ್ನು ಕೆಡವಿಹಾಕಲು ನಾನು ಹರಸಾಹಸಪಡಬೇಕಾಯಿತು.

ಶುರತು ನಲ್ಲಿ ಪಕ್ಷಿಗಳು ಕೈ ಬೀಸಿ ಕರೆಯುತ್ತಿದ್ದವು. ಕ್ರಮೇಣ ಶನಿವಾರ, ಭಾನುವಾರ ಬಂದರೆ ಸಾಕು, ಕೊಕ್ಕರೆ ಬೆಳ್ಳೂರಿನ ಜನ, ಗದ್ದೆ, ಮರ, ಪಕ್ಷಿಗಳು, ಅಲ್ಲಿನ ಸುಂದರ ವಾತಾವರಣ ಕೈ ಬೀಸಿ ಕರೆಯುತ್ತಿತ್ತು. ಅಲ್ಲಿನ ಗ್ರಾಮಸ್ಥರ ಜತೆ ಸ್ವಲ್ಪ ಹೊತ್ತು ಹರಟೆ ಹೊಡೆದು ಬರೋಣ ಎಂದೆನಿಸಲಾರಂಭಿಸಿತು. ರಾಮೇಗೌಡರ ಮನೆ ಮುz-ಸಾರು ನನ್ನ ನಾಲಗೆಯ ರುಚಿ ಗ್ರಂಥಿಗಳಿಗೆ ಅಂಟಿಕೊಳ್ಳಲಾರಂಭಿಸಿತು. ಆ ಊರಿಗೆ ಹೋದರೆ, ಕ್ರಮೇಣ ನನ್ನ ಜತೆ ಮಾತಾಡಲು ಹತ್ತಾರು ಜನ
ಸೇರಲಾರಂಭಿಸಿದರು. ನನಗೂ ಅವರ ಜತೆ ಮಾತಾಡಲು ಹತ್ತಾರು ವಿಷಯಗಳು. ಪರಿಚಯ ಆಗಿವುದಕ್ಕಿಂತ ಮುನ್ನ ಎಲ್ಲರೂ ಅಪರಿಚಿತರೇ ಅಲ್ಲವೇ? ನಾನು ಅಲ್ಲಿಗೆ ಬರುವುದನ್ನು ಎದುರು ನೋಡುವ ಗುಂಪು ದೊಡ್ಡದಾಗುತ್ತಾ ಹೋಯಿತು.

ಒಂದು ವಾರ ಹೋಗದಿದ್ದರೆ, ಫೋನ್ ಮಾಡಿ ವಿಚಾರಿಸಿಕೊಳ್ಳಲಾರಂಭಿಸಿದರು. ನನಗೂ ಅಷ್ಟೇ, ಒಂದು ವಾರ ಹೋಗದಿದ್ದರೆ, ಏನೋ ಚಡಪಡಿಕೆ. ಏನನ್ನೋ
ಕಳೆದುಕೊಂಡ ಭಾವ. ಆರಂಭದಲ್ಲಿ ಅಲ್ಲಿನ ಪಕ್ಷಿಗಳೇ ನನಗೆ ಏಕಮಾತ್ರ ಆಕರ್ಷಣೆಯ ಕೇಂದ್ರವಾಗಿತ್ತು. ಕೊನೆಗೆ ಹತ್ತಾರು ಕಾರಣಗಳ ಮಧ್ಯೆ ಅದೂ ಒಂದು ಕಾರಣವಾಯಿತು. ಈ ಎ ಸಂಗತಿಗಳನ್ನು ನಾನು ನನ್ನ ಪಕ್ಷಿ ಮಿತ್ರ, ವೃಕ್ಷ ಮಿತ್ರ, ಪರಿಸರ ಮಿತ್ರ ಜಯಂತ ಸಾಲಗಾಮೆ ಬಳಿ ಹೇಳಿಕೊಂಡೆ. ‘ನಾವೇಕೆ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡ ಬೇಕು, ನಾವೇಕೆ ಚಾರಣ ಹೋಗಬೇಕು, ನಾವೇಕೆ ಮರಗಳ ಜತೆ ಕಾಲ ಕಳೆಯಬೇಕು, ಅರಣ್ಯದಲ್ಲಿ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋಗಬೇಕು ಅಂದ್ರೆ ಇದೇ ಕಾರಣಕ್ಕೆ.

ಆರಂಭದಲ್ಲಿ ಪರಿಸರದ ಯಾವುದೋ ಒಂದು ಅಂಶ ನಮಗೆ ಇಷ್ಟವಾಗುತ್ತದೆ. ಕ್ರಮೇಣ ನಮಗೆ ಇಡೀ ಪರಿಸರವೇ ಆಪ್ತವಾಗುತ್ತಾ ಹೋಗುತ್ತದೆ. ನಾವು ಅಲ್ಲಿನ ಮರಗಿಡಗಳನ್ನು, ಕೆರೆ-ಕಟ್ಟೆಗಳನ್ನು, ಭಾಷೆಯ ಸೊಗಡನ್ನು, ಜನರ ಹಾವ-ಭಾವಗಳನ್ನು, ಅಲ್ಲಿನ ಊಟ-ತಿಂಡಿಗಳನ್ನು, ಮಣ್ಣಿನ ಗುಣವನ್ನು ಇಷ್ಟಪಡುತ್ತಾ ಹೋಗುತ್ತೇವೆ. ಒಟ್ಟಾರೆ ಇಡಿಯಾಗಿ ಅಲ್ಲಿನ ಪರಿಸರವನ್ನೆಲ್ಲ ಪ್ರೀತಿಸಲಾರಂಭಿಸುತ್ತೇವೆ. ನಿಮಗಾಗಿದ್ದೂ ಅದೇ.’ ಎಂದು ಜಯಂತ ವ್ಯಾಖ್ಯಾನಿಸಿದ. ಸೈಬೀರಿ ಯಾ, ಉರಲ, ಲೇಕ್ ಬೈಕಲ್ ಮುಂತಾದ ಪ್ರಾಂತಗಳಿಂದ ಕೊಕ್ಕರೆ ಬೆಳ್ಳೂರಿಗೆ ಪೇಂಟೆಡ್ ಸ್ಟಾರ್ಕ್ ಮತ್ತು ಪೆಲಿಕನ್ ಪಕ್ಷಿಗಳು ದಂಡು ಕಟ್ಟಿಕೊಂಡು ಬರುತ್ತವೆ. ನವೆಂಬರ್ ಕೊನೆಯಲ್ಲಿ ಚಳಿ ಬೀಳುತ್ತಿದ್ದಂತೆ, ಅವು ಬೆಚ್ಚನೆಯ ತಾಣಗಳನ್ನು ಅರಸಿಕೊಂಡು, ಕುಟುಂಬ ಸಮೇತ ಈ ಊರಿನ ಕಡೆಗೆ ಮುಖ ಮಾಡುತ್ತವೆ. ಇದು ಇಂದು ನಿನ್ನೆಯ ವಿದ್ಯಮಾನವಲ್ಲ.

‘ನಾನು ಚಿಕ್ಕವನಿದ್ದಾಗ ನಮ್ಮೂರಿಗೆ ಈ ಪಕ್ಷಿಗಳೆ ಬರುತ್ತಿದ್ದವು ಎಂದು ನನ್ನ ಮುತ್ತಾತ ಹೇಳುತ್ತಿದ್ದ’ ಎಂದು ಎಪ್ಪತ್ತರ ವಯಸ್ಸಿನ ರಾಮೇಗೌಡರು ಹೇಳುತ್ತಿದ್ದರು.‘
ನಮ್ಮೂರಿನ ಹೆಸರು ಬೆಳ್ಳೂರು ಅಂದಷ್ಟೇ ಇತ್ತು. ಯಾವಾಗ ಕೊಕ್ಕರೆ ಬೆಳ್ಳೂರಾಯಿತೋ ಗೊತ್ತಿಲ್ಲ. ಪ್ರಾಯಶಃ ಈ ಪಕ್ಷಿಗಳೆಲ್ಲ ಬರಲಾರಂಭಿಸಿದಂದಿನಿಂದ ಕೊಕ್ಕರೆ ಬೆಳ್ಳೂರು ಆಗಿರಬೇಕು. ಊರಿನ ಹೆಸರು ಬದಲಾಗಿದ್ದು ಮಾತ್ರ ಯಾರಿಗೂ ಗೊತ್ತಿಲ್ಲ’ ಎಂಬ ಮಾತನ್ನು ಅವರ ಬಾಯಿಯಿಂದಲೇ ಕೇಳಿದ್ದೇನೆ. ನಾನು ಕೊಕ್ಕರೆ ಬೆಳ್ಳೂರಿಗೆ ಹೋಗಲಾರಂಭಿಸಿದ ವರ್ಷ ಆ ಊರಿನ ಮಧ್ಯೆ ಒಂದು ಮೊಬೈಲ್ ಟವರ್ ತಲೆಯೆತ್ತಿ ನಿಂತಿತು. ಅದನ್ನು ಸ್ಥಾಪಿಸುವಾಗ ಊರಿನ ಜನರಿಗೆ
ಏನೂ ಅನ್ನಿಸಿರಲಿಲ್ಲ. ಅವರಿಗೆ ಅದರ ಸಾಧಕ-ಬಾಧಕ ಗೊತ್ತಿರಲಿಲ್ಲ.

ಊರಿಗೆ ಪಕ್ಷಿಗಳನ್ನು ನೋಡಲು ಬಂದ ಯಾರೋ ನನ್ನಂಥವರು ‘ಈ ಮೊಬೈಲ್ ಟವರ್ ಸ್ಥಾಪಿಸಲು ಯಾಕೆ ಅನುಮತಿ ಕೊಟ್ಟಿರಿ? ಅದರಿಂದ ಪಕ್ಷಿಗಳಿಗೆ
ಕಿರಿಕಿರಿಯಾಗಿತ್ತವೆ. ರೇಡಿಯೇಶನ್ ಪರಿಣಾಮದಿಂದ ಅವುಗಳ ಸಂಖ್ಯೆಯಲ್ಲಿ ಇಳಿಮುಖವಾಗಬಹುದು’ ಎಂದು ಹೇಳಿದಂದಿನಿಂದ ಗ್ರಾಮಸ್ಥರು, ಮೊಬೈಲ್ ಟವರ್ ಬಗ್ಗೆ ತೀವ್ರ ಅಸಹನೆ ಬೆಳೆಸಿಕೊಳ್ಳಲಾರಂಭಿಸಿದರು. ನಾನು ಅಲ್ಲಿಗೆ ಹೋಗಲಾರಂಭಿಸಿದಾಗ, ನನ್ನ ಮುಂದೆಯೂ ಇದೇ ಸಮಸ್ಯೆಯನ್ನು ತೋಡಿಕೊಂಡರು.
ನಾನು ಸಂಬಂಧಪಟ್ಟ ಅಧಿಕಾರಿಗೆ ಫೋನ್ ಮಾಡಿ, ನಮ್ಮ ರಾಜ್ಯದ ಅಪರೂಪದ ಪಕ್ಷಿಧಾಮಗಳಲ್ಲಿ ಒಂದಾಗಿರುವ ಕೊಕ್ಕರೆ ಬೆಳ್ಳೂರನ್ನು ಕಾಪಾಡುವಂತೆ ಮನವಿ ಮಾಡಿದೆ.‘ಮೊಬೈಲ್ ಟವರನ್ನು ಎಲ್ಲಿ ಬೇಕಾದರೂ ನೆಡಬಹುದು. ಆದರೆ, ನಾವು ಕರೆದಲ್ಲಿಗೆ ಈ ಪಕ್ಷಿಗಳು ಬರುವುದಿಲ್ಲ. ಒಂದು ವರ್ಷ ಈ ಪಕ್ಷಿಗಳು ಬರುವುದನ್ನು ನಿಲ್ಲಿಸಿದರೆ, ಮುಂದೆಂದೂ ಬರುವುದಿಲ್ಲ.

ಮೊಬೈಲ್ ಟವರನ್ನು ಬೇರೆ ಕಡೆ ವರ್ಗಾಯಿಸಿ’ ಎಂದು ಹೇಳಿದೆ. ಈ ಟವರನ್ನು ಬೇರೆಡೆ ವರ್ಗಾಯಿಸುವಂತೆ ಅವರು ತಮ್ಮ ಮೇಲಾಧಿಕಾರಿಗೆ ಬರೆದರು. ಅವರು ಆ ಫೈಲನ್ನು ತಮ್ಮ ‘ಜ್ಞಾನಪೀಠ’ದ ಕೆಳಗೆ ಇಟ್ಟುಕೊಂಡರು.ಅಷ್ಟೊತ್ತಿಗೆ ಆ ವರ್ಷ ಬಂದ ಹಕ್ಕಿಗಳೆಲ್ಲ ಹಾರಿ ಹೋಗಿದ್ದವು. ಟವರ್ ವರ್ಗಾವಣೆ ಕೆಲಸವನ್ನು ಎಲ್ಲರೂ ಮರೆತು ಬಿಟ್ಟರು. ಮುಂದಿನ ವರ್ಷ ಪುನಃ ಇದೇ ಆಗ್ರಹ, ಇದೇ ಮನವಿ, ಅಧಿಕಾರಿಗಳಿಂದ ಅದೇ ಆಶ್ವಾಸನೆ… ಎರಡು-ಮೂರು ತಿಂಗಳ ನಂತರ ಪಕ್ಷಿಗಳೆಲ್ಲ
ಹಾರಿ ಹೋದ ನಂತರ ಯಥಾಸ್ಥಿತಿ. ಕಳೆದ ಹತ್ತು ವರ್ಷಗಳಿಂದ ಇದೇ ಸ್ಥಿತಿ. ಆದರೆ, ಇದರಿಂದ ಅದೆಂಥ ಸ್ಥಿತಿ ನಿರ್ಮಾಣವಾಗಿದೆಯೆಂದರೆ, ಕೊಕ್ಕರೆ ಬೆಳ್ಳೂರಿಗೆ ಬರುವ ಪಕ್ಷಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

ಒಂದು ಕಾಲಕ್ಕೆ ಪಕ್ಷಿಗಳಿಗೆ ಬಹಳ ಪ್ರಶಸ್ತವಾಗಿದ್ದ ತಾಣದಲ್ಲಿ ಹಲವಾರು ವಿಘ್ನಗಳು. ಬೇರೆ ಬೇರೆ ದೇಶಗಳಿಂದ ಬೆಚ್ಚನೆಯ ವಾತಾವರಣ ಅರಸಿ, ಕೊಕ್ಕರೆ ಬೆಳ್ಳೂರಿಗೆ ಬಂದರೂ ಹೆಚ್ಚು ದಿನ ಇರುವುದಿಲ್ಲ. ಊಟಿಗೆ ಹೋದವರು ಅಲ್ಲಿನ ವಾತಾವರಣ ನೋಡಿ, ತಮ್ಮ ಊರೇ ಇದಕ್ಕಿಂತ ಚೆನ್ನಾಗಿದೆ ಎಂದು ಭಾವಿಸಿ ಪೆಟ್ಟಿಗೆ ಕಟ್ಟಿದಂತೆ, ಈ ಪಕ್ಷಿಗಳೂ ಕೆಲವೇ ದಿನಗಳಲ್ಲಿ ಬೇರೆ ಕಡೆ ಹಾರಿಹೋಗುತ್ತಿವೆ. ಹಲವಾರು ವರ್ಷಗಳಿಂದ ಬರುತ್ತಿದ್ದ ಪಕ್ಷಿಗಳಿಗೆ ಈಗ ಕೊಕ್ಕರೆ ಬೆಳ್ಳೂರು
ಅಂದರೆ ಅಷ್ಟಕ್ಕಷ್ಟೇ. ಮೊದಲಿನ ಬೆಚ್ಚನೆಯ ಗಮ್ಮತ್ತು, ಹಿತಕರ ಅನುಭವ ಸಿಗುತ್ತಿಲ್ಲ. ಕೊಕ್ಕರೆ ಬೆಳ್ಳೂರಿನ ಸೋಜಿಗವೆಂದರೆ, ಕೆಲವು ಪಕ್ಷಿಗಳು ವಲಸೆ ನೆಪದಲ್ಲಿ ಬಂದಿ ದ್ದರೂ, ಅಲ್ಲಿಯೇ ತಂಬು ಹೊಡೆದು ಮನೆ ಮಾಡಿದ್ದವು, ಗೋಕರ್ಣದ ಓಂ ಬೀಚಿನಲ್ಲಿಯೇ ನೆಲೆಯೂರುವ ವಿದೇಶಿಗರಂತೆ.

ಆದರೆ, ಕಳೆದ ನಾಲ್ಕು ವರ್ಷಗಳಿಂದ ನಾನು ಕೊಕ್ಕರೆ ಬೆಳ್ಳೂರಿಗೆ ಹೋಗಿರಲಿಲ್ಲ. ಆ ಊರಿನ ಗ್ರಾಮಸ್ಥರು ಫೋನ್ ಮಾಡಿ ಬರುವಂತೆ ಹೇಳಿದರೂ ಹೋಗಲು ಆಗಿರಲಿಲ್ಲ. ಮೊನ್ನೆ ಅದೇ ಊರಿನ ರಾಮಣ್ಣ ನನ್ನನ್ನು ಭೇಟಿ ಮಾಡಲೆಂದು ಆಫೀಸಿಗೆ ಬಂದಿದ್ದ. ಕಳೆದ ನಾಲ್ಕು ವರ್ಷಗಳ ಖಾತೆ-ಕಿರ್ದಿ ಒಪ್ಪಿಸಿದ. ಬಹಳ ಬೇಸರ ವಾಯಿತು. ಈಗ ಕೊಕ್ಕರೆ ಬೆಳ್ಳೂರಿಗೆ ಮೊದಲಿನಷ್ಟು ಪಕ್ಷಿಗಳು ಬರುತ್ತಿಲ್ಲವಂತೆ, ಬಂದರೂ ಹೆಚ್ಚು ದಿನ ನೆಲೆಯೂರುತ್ತಿಲ್ಲವಂತೆ, ಪೇಂಟೆಡ್ ಸ್ಟಾರ್ಕ್ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆಯಂತೆ.

ಪೇಂಟೆಡ್ ಸ್ಟಾರ್ಕ್ ಮತ್ತು ಪೆಲಿಕನ್‌ಗಳು ಗೂಡು ಕಟ್ಟಿ ಮರಿ ಹಾಕಲೆಂದೇ ಕೊಕ್ಕರೆ ಬೆಳ್ಳೂರಿಗೆ ಬರುತ್ತವೆ. ಮರಿ ಹಾಕಿದ ನಂತರ ಸಾಯುವ ತನಕವೂ ಆ ಪಕ್ಷಿಗಳು ತಮ್ಮ ಕರುಳುಬಳ್ಳಿ ಹುಗಿದ ಜಾಗವನ್ನು ಮರೆಯುವುದಿಲ್ಲ. ಬೇರೆ ಊರುಗಳಿಗೆ ಹೋದರೂ ಹುಟ್ಟಿದ ಊರಿನ ಋಣವನ್ನು ಕಡಿದುಕೊಳ್ಳುವುದಿಲ್ಲ. ಆದರೆ, ಕೊಕ್ಕರೆ ಬೆಳ್ಳೂರಿನಲ್ಲಿ ಹುಟ್ಟಿದ ಮರಿಗಳೂ ಇಲ್ಲಿಗೆ ಬರುತ್ತಿಲ್ಲ. ಕೊಕ್ಕರೆ ಜಾತಿಯ ಪಕ್ಷಿಗಳಿಂದಾಗಿಯೇ ಹೆಸರು ಪಡೆದ ಊರು, ಕೊಕ್ಕರೆಗಳಿಗೆ ಬೇಡವಾಗು ತ್ತಿದೆಯಾ? ನೂರಾರು ವರ್ಷಗಳಿಂದ ಪಕ್ಷಿಗಳಿಗೆ ತವರುಮನೆಯಂತಿದ್ದ ಈ ಊರು ಪಕ್ಷಿಗಳ ಅನಾದರಕ್ಕೆ ಪಾತ್ರವಾಗಿದ್ದಾದರೂ ಏಕೆ? ನಾಳೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಿಗಳ ಸಭೆ ಕರೆದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಅದನ್ನು ತಿಳಿಸಲು ಪತ್ರಿಕಾಗೋಷ್ಠಿ ಕರೆದು, ಪಕ್ಷಿಗಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುತ್ತೇವೆ, ಮೊಬೈಲ್ ಟವರ್ ಕಿತ್ತು ಹಾಕುತ್ತೇವೆ, ಪಕ್ಷಿಗಳ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುತ್ತೇವೆ ಎಂದು ಘೋಷಿಸಿದರೆ,
ಪೇಂಟೆಡ್ ಸ್ಟಾರ್ಕ್ ಮತ್ತು ಪೆಲಿಕನ್‌ಗಳು ಕೊಕ್ಕರೆ ಬೆಳ್ಳೂರಿಗೆ ಬಂದು ಬಿಡುವುದೇನು? ಈಗಾಗಲೇ ಪಕ್ಷಿಗಳಿಗೆ ಈ ಊರು ಸೂಕ್ತವಾದ ತಾಣ ಅಲ್ಲ ಎಂಬುದು ಗೊತ್ತಾಗಿದೆ.

ಯಡಿಯೂರಪ್ಪನವರ ಕೈಗೊಂಡ ಕ್ರಮಗಳನ್ನು ಅವುಗಳಿಗೆ ತಿಳಿಸುವವರಾದರೂ ಯಾರು? ಸಾವಿರಾರು ಮೈಲಿಗಳಿಂದ ಹಾರಿ ಬರುವ ಪಕ್ಷಿಗಳ ಸಂಕುಲಕ್ಕೆ ಕೊಕ್ಕರೆ ಬೆಳ್ಳೂರು ಮೊದಲಿನ ಆಪ್ತ ಗುಣ ಹೊಂದಿಲ್ಲ ಎಂಬುದು ಗೊತ್ತಾಗಿ ಹೋಗಿದೆ. ಈಗ ಎಷ್ಟೇ ಬೊಂಬಡಾ ಬಜಾಯಿಸಿದರೂ ಅವುಗಳಿಗೆ ಗೊತ್ತಾಗುವುದಿಲ್ಲ. ಸರಕಾರ ಜಾಹೀರಾತು ನೀಡಿ ಪ್ರಚಾರ ಮಾಡಿದರೂ ಅವುಗಳಿಗೆ ಗೊತ್ತಾಗುವುದಿಲ್ಲ. ಸೈಬೇರಿಯಾದಿಂದ ಹೊರಡುವ ಮುನ್ನ ತಾನು ಯಾವ ಜಾಗಕ್ಕೆ, ಊರಿಗೆ ಹೋಗಬೇಕು ಎಂಬುದು ಪಕ್ಷಿಗಳಿಗೆ ಗೊತ್ತಿರುತ್ತದೆ. ಯಾವ ಪಕ್ಷಿಯೂ ಏಕಾಂಗಿಯಾಗಿ ವಲಸೆ ಹೋಗುವುದಿಲ್ಲ.

ಒಂದು ಪಕ್ಷಿಗಾದರೂ ತಾನು ಕಟ್ಟ ಕಡೆಗೆ ತಲುಪುವ ಜಾಗದ ಬಗ್ಗೆ ಗೊತ್ತಿರುತ್ತದೆ. ಅಲ್ಲದೇ ಅದು ತಾನಿರುವ ಜಾಗದಲ್ಲಿಯೇ ಕುಳಿತು ತನ್ನ ‘ಮೂಲ’ಗಳಿಂದ, ತಾನು ತಲುಪಬೇಕಿರುವ ಜಾಗದ ಬಗ್ಗೆ ಮಾಹಿತಿ ಪಡೆದಿರುತ್ತದೆ. ಉದಾಹರಣೆಗೆ, ಸೈಬೀರಿಯಾದ ಉರಲ್ ನಲ್ಲಿರುವ ಪೇಂಟೆಡ್ ಸ್ಟಾರ್ಕ ಅಥವಾ ಸ್ಪೂನ್ ಬಿಲ್ ಗೆ ತಾನು ಕಟ್ಟ ಕಡೆಯದಾಗಿ ಸೇರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಎಂಥ ವಾತಾವರಣವಿದೆ ಎಂಬ ಬಗ್ಗೆ ಅಲ್ಲಿಂದ ಹೊರಡುವ ಮುನ್ನವೇ ಒಂದಷ್ಟು ಮಾಹಿತಿ ಯಿರುತ್ತದೆ. ಒಂದು ವೇಳೆ ರಂಗನತಿಟ್ಟು ಪಕ್ಷಿಧಾಮ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರೆ, ಪ್ರಕೃತಿ ವಿಕೋಪದಿಂದ ಸರ್ವನಾಶವಾದರೆ, ಅದನ್ನು ಖಚಿತ ಪಡಿಸಿ ಕೊಳ್ಳಲು ಅವು ಇಲ್ಲಿಗೇ ಬರಬೇಕೆಂದಿಲ್ಲ, ಬರುವುದೂ ಇಲ್ಲ.

ಪಕ್ಷಿಗಳಿಗೆ ಈ ಸಂಗತಿ ಹೇಗೋ ಮೊದಲೇ ಗೊತ್ತಾಗಿರುತ್ತದೆ. ಹೀಗಾಗಿ ಆ ವರ್ಷ ಅವು ಇತ್ತ ಸುಳಿಯುವುದೇ ಇಲ್ಲ. ಖಾತ್ರಿಪಡಿಸಿಕೊಳ್ಳಲು ಇಲ್ಲಿಗೆ ಬಂದು ವಾಪಸ್
ಹೋಗುವ ಪರಿಪಾಠ ಅವುಗಳಲ್ಲಿಲ್ಲ. ಈ ಪಕ್ಷಿಗಳದ್ದು ಒಂದು ಅದ್ಭುತ ಲೋಕ. ಒಂದೊಂದು ಪಕ್ಷಿಯೂ ಪರಿಸರದಲ್ಲಿ ಆಗುವ ಬದಲಾವಣೆಗಳನ್ನು ಅಳೆಯುವ ಮಾಪಕಗಳಿದ್ದಂತೆ. ಯಾರಿಗೂ ಗೊತ್ತಾಗದ ಸಂಗತಿಗಳು ತಟ್ಟನೆ ಮೊದಲು ಅವುಗಳಿಗೆ ಗೊತ್ತಾಗುತ್ತವೆ. ಅದನ್ನು ಬಹುಬೇಗ ಅವು ಬೇರೆಯವರಿಗೆ ಹೇಳಲಾ ರವು, ಆದರೆ, ತಮ್ಮ ತಮ್ಮೊಳಗೆ communicate ಮಾಡಬಲ್ಲವು.

ಚಳಿಗಾಲ ಆರಂಭವಾಗಲು ಒಂದು ತಿಂಗಳು ಇರುವಂತೆ ವಲಸೆ ಪಕ್ಷಿಗಳು ತಮ್ಮ ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ವೃದ್ಧಿಸಿಕೊಳ್ಳಲು ಆರಂಭಿಸುತ್ತವೆ. ಪ್ರತಿ ದಿನ ಹಾರುವುದಕ್ಕಿಂತ ಇಪ್ಪತ್ತು ಪಟ್ಟು ಜಾಸ್ತಿ ಹಾರಲು ಕಸುವು ತುಂಬಿಕೊಳ್ಳುತ್ತವೆ. ಈ ಪಕ್ಷಿಗಳ ತಲೆಯಲ್ಲಿ ಅದ್ಯಾರು ಗೂಗಲ್ ಮ್ಯಾಪ್ ಆಪ್ ಅಥವಾ ಜಿಪಿಎಸ್‌ನ್ನು ಇಟ್ಟಿದ್ದಾರೋ ಗೊತ್ತಿಲ್ಲ. ಅವುಗಳಿಗೆ ತಾವು ತಲುಪಬೇಕಿರುವ ಜಾಗದ ಮಾರ್ಗ ಮತ್ತು ಅಲ್ಲಿನ ಸಂಪೂರ್ಣ ಮಾಹಿತಿ ಇರುತ್ತದೆ. ಬೇರೆಯವರನ್ನು ಕೇಳಿ ದಾರಿ ತಿಳಿದುಕೊಳ್ಳುವುದು ಮನುಷ್ಯನಿಗೆ ಮಾತ್ರ ಗೊತ್ತು. ಆದರೂ ಮನುಷ್ಯ ದಾರಿ ತಪ್ಪಿಸಿಕೊಳ್ಳುತ್ತಾನೆ. ಆದರೆ, ಈ ಪಕ್ಷಿಗಳು ತಲುಪಬೇಕಾದ ತಾಣಕ್ಕೆ ಯಾರನ್ನೂ ಕೇಳದೇ ತಲುಪುತ್ತವೆ.

ಬಾರ್-ಟೈಲ್ಡ್ ಗೊಡವಿಟ್ ಎಂಬ ಪಕ್ಷಿಯ ಹೆಸರನ್ನು ಕೇಳಿರಬಹುದು. ಇದರ ವೈಶಿಷ್ಟ್ಯವೇನೆಂದರೆ, ಇದು ಒಂದೇ ನೆಗೆತಕ್ಕೆ ಸುಮಾರು ಏಳು ಸಾವಿರ ಮೈಲಿ (ನಾನ್-ಸ್ಟಾಪ್) ದೂರ ಹಾರಬಲ್ಲದು! ಒಂದು ವಾರ ಹಾರಿದರೂ ಈ ಪಕ್ಷಿ ಒಂದೇ ಒಂದು ಸಲ ವಿರಮಿಸುವುದಿಲ್ಲ, ಆಹಾರಕ್ಕಾಗಿ ಕೆಳಗಿಳಿಯುವುದಿಲ್ಲ. ದವಾರಿಸಿ ಕೊಳ್ಳಲು ಕುಳಿತುಕೊಳ್ಳುವುದಿಲ್ಲ. ಅದರದ್ದು ಒಂಥರಾ ಹನುಮ ನೆಗೆತ! ಇಂದಿನ ಆಧುನಿಕ ಪ್ಯಾಸೆಂಜರ್ ಜೆಟ್ ವಿಮಾನಗಳು ಸಹ ಒಂದೇ ನೆಗೆತಕ್ಕೆ ಇಷ್ಟು ದೂರ ಕ್ರಮಿಸಲಾರವು. ಹೆಚ್ಚೆಂದರೆ ಹದಿನೆಂಟು ತಾಸು ಹಾರಬಲ್ಲವು. ಆದರೆ, ಗೊಡವಿಟ್ ಒಂದು ವಾರ ಕಾಲ ಆಕಾಶದಲ್ಲಿ ಹಾರಬಲ್ಲುದು. ಅದಕ್ಕೆ ದವು ಎಂಬುದೇ ಇಲ್ಲ.

ಈ ಪಕ್ಷಿ ಸಾವಿರಾರು ಸಂಖ್ಯೆಯಲ್ಲಿ ಗುಂಪು ಕಟ್ಟಿಕೊಂಡು ಹಾರಲು ಆರಂಭಿಸಿದರೆ, ದಟ್ಟ ಮೋಡವೇ ಚಲಿಸಿದಂತೆ ಕಾಣುತ್ತದೆ. ಒಂದು ವಾರ ಕಾಲ ವಿರಾಮ ವಿಲ್ಲದೇ , ಆಹಾರವಿಲ್ಲದೇ ಅದು ಹೇಗೆ ಹಾರುತ್ತದೆ ಎಂಬುದು ಮಾತ್ರ ಇಂದಿಗೂ ವಿಸ್ಮಯವೇ. ಜಗತ್ತಿನಲ್ಲಿರುವ ಪಕ್ಷಿ ಸಂಕುಲಗಳ ಪೈಕಿ ಸುಮಾರು ನಾಲ್ಕು ಸಾವಿರ ಪಕ್ಷಿಗಳು ವಲಸೆ ಹೋಗುವಂಥವು. ಅವುಗಳಲ್ಲಿ ಕೆಲವು ಖಂಡಾಂತರ ವಲಸೆ ಹೋಗುವಂಥವು. ಆರ್ಕ್ಟಿಕ್ ಟರ್ನ್ ಎಂಬ ಪಕ್ಷಿ ಒಂದು ವರ್ಷದ ಅವಧಿಯಲ್ಲಿ ಕನಿಷ್ಠ ನಾಲ್ಕು ಖಂಡಗಳಿಗೆ ವಲಸೆ ಹೋಗುತ್ತದೆ. ಏನಿಲ್ಲವೆಂದರೂ ನಲವತ್ತು ಸಾವಿರ ಮೈಲಿಗಳಷ್ಟು ದೂರವನ್ನು ಕ್ರಮಿಸುತ್ತವೆ.

ಒಂದೊಂದು ಪಕ್ಷಿ ವಲಸೆ ಹೋಗುವಾಗ ಅದರ ಸಾಮರ್ಥ್ಯಕ್ಕನುಗುಣವಾಗಿ ಎತ್ತರಕ್ಕೆ ಹಾರುತ್ತವೆ. ರೂಪೆಲ್ ಗ್ರಿಫಾನ್ ಎಂದು ಕರೆಯಿಸಿ ಕೊಳ್ಳುವ ಒಂದು ಜಾತಿಯ ಹದ್ದು ಸುಮಾರು ಮೂವತ್ತೈದರಿಂದ ಮೂವತ್ತೆಂಟು ಸಾವಿರ ಅಡಿ ಎತ್ತರಕ್ಕೆ ಹಾರುತ್ತವೆ. ಅಂದರೆ ವಿಮಾನ ಎಷ್ಟು ಎತ್ತರ ಹಾರುತ್ತವೋ ಅಷ್ಟು ಎತ್ತರ. ಇತ್ತೀಚೆಗೆ ‘ಟೈಮ್’ ಮ್ಯಾಗಜಿನ್‌ನಲ್ಲಿ ಒಂದು ಲೇಖನ ಓದುತ್ತಿದ್ದೆ. ವಲಸೆ ಹಕ್ಕಿಗಳು ಹಿಂದೆಂದಿಗಿಂತಲೂ ಇಂದು ಅತಿ ಹೆಚ್ಚು ಅಪಾಯ ಎದುರಿಸುತ್ತಿವೆಯಂತೆ. ಇದಕ್ಕೆ ಮೂಲ ಕಾರಣ ಆಕಾಶ ಹಿಂದೆಂದಿಗಿಂತಲೂ ದಟ್ಟಣೆಯಾಗಿರುವುದು.

ಅಂದರೆ ಅತಿಯಾದ ವಿಮಾನ ಹಾರಾಟ. ಉತ್ತರ ಅಟ್ಲಾಂಟಿಕ್ ಮಹಾ ಸಾಗರದ ಮೇಲೆ (ಲಂಡನ್-ನ್ಯೂಯಾರ್ಕ್ ನಡುವೆ) ದಿನದ ಯಾವುದೇ ಸಂದರ್ಭಗಳಲ್ಲಿ ನೂರಕ್ಕೂ ಹೆಚ್ಚು ವಿಮಾನಗಳು ಹಾರುತ್ತಿರುತ್ತವೆ. ಇದರಿಂದ ಗ್ರೀನ್ ಲ್ಯಾಂಡ್, ಐಸ್‌ಲ್ಯಾಂಡ್ ಸೇರಿದಂತೆ ಚಳಿಗಾಲದಲ್ಲಿ ಉತ್ತರದ ಕಡೆಗಳಿಂದ ದಕ್ಷಿಣಕ್ಕೆ ಬೆಚ್ಚನೆಯ ತಾಣ ಗಳನ್ನು ಅರಸಿ ಬರುವ ಪಕ್ಷಿಗಳಿಗೆ ದೊಡ್ಡ ಸಮಸ್ಯೆಯಾಗಿದೆ. ಮೊಬೈಲ, ವೈಫೈ ಮುಂತಾದ ತರಂಗಾಂ ತರಗಳು ಸಹ ಪಕ್ಷಿಗಳ ಜಿಪಿಎಸ್
ವ್ಯವಸ್ಥೆಯ ಮೇಲೆ ಪರಿಣಾಮ ವನ್ನುಂಟು ಮಾಡುತ್ತವೆ.

ಚಳಿಗಾಲದಲ್ಲಿ ಕೆನಡಾದಿಂದ ಆಫ್ರಿಕಾಕ್ಕೆ ಹೋಗುವ ಪಕ್ಷಿಗಳು ನ್ಯೂಯಾರ್ಕ್ ನಗರದ ಮೂಲಕ ಹಾರಿ ಹೋಗುವಾಗ ಅಲ್ಲಿನ ಗಗನಚುಂಬಿ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಸಾಯುತ್ತವೆ. (ಅಮೆರಿಕದಲ್ಲಿ ಪ್ರತಿ ವರ್ಷ ನೂರು ಕೋಟಿಗೂ ಹೆಚ್ಚು ಪಕ್ಷಿಗಳು ಗಗನಚುಂಬಿ ಕಟ್ಟಡಗಳ ಗ್ಲಾಸಿಗೆ ಡಿಕ್ಕಿ ಹೊಡೆದು ಸಾಯುತ್ತವಂತೆ. ಕಟ್ಟಡದ ಗ್ಲಾಸುಗಳಲ್ಲಿ ಮೋಡದ ಪ್ರತಿಬಿಂಬ ನೋಡಿ ಗೊಂದಲದಿಂದ ಡಿಕ್ಕಿ ಹೊಡೆದು ಸತ್ತು ಹೋಗುತ್ತವೆ.) ಸಾಮಾನ್ಯವಾಗಿ ವಲಸೆ ಹಕ್ಕಿಗಳಿಗೆ ಅವು
ಹೋಗುವ ದಾರಿ ಗೊತ್ತಿರುತ್ತವೆ. ಆದರೂ ಅವು ಗಾಜಿನ ಕವಚವಿರುವ ಕಟ್ಟಡಗಳಿಂದ ಮೋಸ ಹೋಗು ತ್ತವೆ. ಸೈಬೇರಿ ಯಾದಿಂದಲೋ, ಗ್ರೀನ್ ಲ್ಯಾಂಡಿ ನಿಂದಲೋ ಹಾರುವ ಹಕ್ಕಿಗಳಿಗೆ ಆಗಲೇ ಹೇಳಿದಂತೆ, ಕೊಕ್ಕರೆ ಬೆಳ್ಳೂರಿನಲ್ಲಿ ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತಿರುತ್ತದೆ.

ರಂಗನತಿಟ್ಟಿಗೋ, ಕೊಕ್ಕರೆ ಬೆಳ್ಳೂರಿಗೋ ಬಂದೇ ಖಾತ್ರಿಪಡಿಸಿಕೊಳ್ಳಬೇಕಿಲ್ಲ. ಕರ್ನಾಟಕದಲ್ಲಿ ಸರಕಾರ ಬದಲಾಗಿದ್ದು, ಯಡಿಯೂರಪ್ಪನವರು
ಮುಖ್ಯಮಂತ್ರಿಯಾಗಿದ್ದು, ಪೌರತ್ವ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವುದು ಪಕ್ಷಿಗಳಿಗೆ ಗೊತ್ತಿಲ್ಲದಿರಬಹುದು. ಆದರೆ, ಕೊಕ್ಕರೆ ಬೆಳ್ಳೂರು ಮೊದಲಿ
ನಂತಿಲ್ಲ, ವಲಸೆ ಬಂದವರಿಗೆ ವಾಸಕ್ಕೆ ಯೋಗ್ಯವಾಗಿಲ್ಲ ಎಂಬುದು ಅವುಗಳಿಗೆ ಗೊತ್ತಾಗಿ ಹೋಗಿದೆ. ಸರಕಾರ ಖುದ್ದಾಗಿ ಕರೆದರೂ ಅವು ಬರುವುದಿಲ್ಲ. ಏನೇ ಪ್ರಯತ್ನ ಮಾಡಿದರೂ ಅವು ನಮ್ಮ ಆಮಂತ್ರಣ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅಧಿಕಾರದಲ್ಲಿ ಇರುವವರು ಎಲ್ಲಾ ಹಕ್ಕಿಗಳ ಆರ್ತನಾದವನ್ನೂ ಕೇಳಿಸಿಕೊಳ್ಳ ಬೇಕು. ಈ ಪರಿಸರದ ಕಬ್ಜದಾರರಾಗಿರುವ ನಮಗೂ ಈ ಸಣ್ಣ-ಪುಟ್ಟ ಸಂಗತಿಗಳು ಗಾಢವಾಗಿ ಕಾಡಬೇಕು. ಕೊಕ್ಕರೆ ಬೆಳ್ಳೂರಿಗೆ ವಲಸೆ ಹಕ್ಕಿಗಳು ಬರುವುದು ಕಡಿಮೆಯಾಗಿದೆ ಅಂದರೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲಾ, ಏನೋ ಎಡವಟ್ಟಾಗಿದೆ ಎಂಬ ಅಪಾಯದ ಸಂಕೇತವನ್ನು ನಾವು ಗ್ರಹಿಸಬೇಕು. ಅಷ್ಟಕ್ಕೂ ಎಲ್ಲವೂ ಗೂಗಲ್ ನಲ್ಲಿ ಇಲ್ಲ !