Saturday, 21st September 2024

ನವಿರೇಳಿಸುವ ನೆಲಾಂಗ್‌ನಲ್ಲಿ ಸ್ಟೋನ್ ಗಾರ್ಲೆಂಡ್

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಎಪ್ಪತರ ದಶಕಕ್ಕೂ ಮೊದಲು ಇಲ್ಲಿಗೆ ಕಾಲಿಡಲೇ ಅವಕಾಶವಿರಲಿಲ್ಲ. ಕಾರಣ ಚೀನಿಯರು ಸೀದಾ ಗುಂಡು ಹೊಡೆದು ಕೆಡುವುತ್ತಿದ್ದರು. ಹಾಗಾಗಿ
ಸರಕಾರ ಅನುಮತಿ ಎಂಬೆಲ್ಲ ರಗಳೆಗಳೇ ಬೇಡ ಎಂದು ಪ್ರವೇಶವನ್ನೇ ರದ್ದು ಮಾಡಿ, ನಿಷೇಧ ಹೊರಡಿಸಿ, 1962 ರ ಚೀನಾ ಆಕ್ರಮಣದ ನಂತರ ಜನವಸತಿಯನ್ನೂ ಗಡಿಗಿಂತಾ ಹತ್ತಾರು ಕಿ.ಮೀ ಒಳಗೆ ಸ್ಥಳಾಂತರಿಸಿಬಿಟ್ಟಿತ್ತು.

ಅದರ ನಂತರ ಇಲ್ಲೆಲ್ಲಾ ಏನಿದ್ದರೂ ಐ.ಟಿ.ಬಿ.ಪಿ ಯವರದ್ದೇ ಕಾರುಬಾರು. ಅಕಸ್ಮಾತ ಅಲ್ಲಿಗೆ ಹೋಗಲು ಪರ್ಮಿ ಶನ್ನು, ದಾರಿ ಎರಡೂ ಇದ್ದರೂ ಅಲ್ಲಿಗೆ ಹೋಗಿ ಮಾಡುವುದಾದರೂ ಏನು ಎನ್ನುವ ಸ್ಥಿತಿಯೇ ಇತ್ತು. ತೀರ ನಗರದ ಜನವಸತಿಯಿಂದ ದೂರ ಮತ್ತು ಯಾವೆಂದರೆ ಯಾವದೂ ಸಂವಹನ, ಸಂಪರ್ಕ, ಜನ ಜೀವನ ಇಲ್ಲವಾಗಿದ್ದ ಪ್ರದೇಶಕ್ಕೆ ಜೀವ ಕೊಡಲು ಯಾಕಾದರೂ ಹೋದಾರು..? ಈಗಿನಂತೆ ಚಾರಣ, ಹೈಕಿಂಗು ಇತ್ಯಾದಿ ಆಗಿನ್ನೂ
ಆಕರ್ಷಣೀಯವೂ ಆಗಿರಲಿಲ್ಲ.

ಅದನ್ನೆಲ್ಲಾ ಮಾಡಲು ಉಮೇದಿಗೆ ಬೀಳುವ ಟೆಕ್ಕಿಗಳು ಮೊದಲೇ ಇರಲಿಲ್ಲ. (ಏನೇ ಹೇಳಿ ವಾರವಿಡಿ ಅಂಡೂರಿ ಕೂಡುವ ಟೆಕ್ಕಿ ಸಂಪ್ರದಾಯದ ನಂತರ, ಆರೋಗ್ಯಕ್ಕಾಗಿ ಒತ್ತಾಯ ಪೂರ್ವಕವಾಗಿಯಾದರೂ ವಾರದ ಕೊನೆಗೆ ತಿರುಗಾಟ, ಟ್ರೆಕ್ಕು ಇತ್ಯಾದಿ ಅಭ್ಯಾಸ ಹೆಚ್ಚಾಗಿದ್ದು ಹೌದು. ಆದರೆ ಅದೇ ವೀಕೆಂಡ್ ಎಂಬ ಅನಾಹುತಕಾರಿ ಸಂಸ್ಕೃತಿಗೂ ದಾರಿ ಮಾಡಿಕೊಟ್ಟಿದ್ದು ಸುಳ್ಳಲ್ಲ) ಪ್ರವಾಸೋದ್ಯಮದಲ್ಲಿ ಈ ಸ್ಥಳ ದೇಶಗಳ ಗಡಿಗಳ ಗುರುತಿನ ಸರಹದ್ದು ಎಂಬ ಚುಕ್ಕೆ ಬಿಟ್ಟರೆ ಬೇರೆ ರೀತಿಯಲ್ಲಿ ನೆನಪಿಡಲು ಅವಕಾಶವೇ ಇರಲಿಲ್ಲ.

ಕಾರಣ ಅಲ್ಲಿ ಅದಕ್ಕೂ ಮೊದಲೇ ಹೆಸರು ಮಾಡಿದ್ದ ಸರಾಗವಾಗಿ ತಲುಪಬಹುದಾಗಿದ್ದ ಹಲವು ಆಕರ್ಷಕ ಪ್ರದೇಶಗಳಾದ ಭೈರೋನ್ ಘಾಟಿ, ಹರ್ಶಿಲ್, ಧಾರಾಳಿ, ಗಂಗೋತ್ರಿ ಇತ್ಯಾದಿ ಪ್ರವಾಸಿ ಆಕರ್ಷಕ ಕೇಂದ್ರಗಳು ತಮ್ಮದೇ ರೀತಿಯಲ್ಲಿ ಪ್ರವಾಸಿಗರ ಲಿಸ್ಟ್‌ನಲ್ಲಿ ಸೇರಿಹೋಗಿದ್ದವು. ಇದೆಲ್ಲದರ ಹೊರತಾಗಿ, ಮಾಹಿತಿ ಮತ್ತು ಇದರ ಇತಿಹಾಸ ಲಭ್ಯ ಇದ್ದ ಕೆಲವು ಸಾಹಸಿಗರಿಗೆ ಮಾತ್ರ ಇದೊಂದು ಕಣಿವೆಯ ಅಗಾಧ ಎತ್ತರದ ನೆತ್ತಿಗೇರಿ, ಊಹಿಸಲಾಗದ ಕೊರಕಲಿ ನಲ್ಲಿ ನುಸುಳಿ, ಸಂದುಗಳಲ್ಲಿ ಸುಳಿದಾಡಿ, ಕಲ್ಲಿನ ಪರ್ವತದ ಸೊಂಟದ ಮಡಿಕೆಗಳ ಮೆಟ್ಟಿಲ ಮೇಲೆ ಕಾಲು ಸರಿಸಿ ಬರುವ ಆದಮ್ಯ ಆಸೆ ಮಾತ್ರ ಪುಟಿ ಯುತ್ತಲೇ ಇತ್ತು. ಉತ್ತರಾಖಂಡ ಪ್ರವಾಸೋದ್ಯಮವೂ ಇದಕ್ಕೆ ಅನುಮತಿ ಕೊಡುವಂತೆ ಒತ್ತಾಯಿಸುತ್ತಲೇ ಇತ್ತು.

ಇದೆಲ್ಲದರ ಫಲವಾಗಿ ೧೯೭೦ ರ ಸುಮಾರಿಗೆ ಕಣಿವೆಯತ್ತ ಕಾಲು ಹರಿಸಲು ಮಾತ್ರ ಎಂಬ ಸರಕಾರದಾರಿ ಗುರುತು ನೀಡಿತು. ಇದನ್ನು ದಾಟಿ ಒಮ್ಮೆ ಕಣಿವೆಗೆ ಇಳಿದರೆ, ಮುಂದೆಲ್ಲಾ ನೀವು ಹತ್ತಿದ್ದೇ ದಾರಿ, ಹೋಗಿದ್ದೆ ರಸ್ತೆ. ಅಷ್ಟು ಕಠಿಣ ನಿರ್ಜನ ಕಣಿವೆ ಅದು. ಆದರೂ ನೆಲಾಂಗ್ ಪರಿಸರ, ಚಾರಣ
ಪ್ರಿಯರ ಅದಮ್ಯತೆಯಿಂದಾಗಿ ಕ್ರಮೇಣ ಅಲ್ಲಿನ ನದಿ ತೀರ ದಾಟಿದರು. ಸರಸ್ವತಿ ಇಲ್ಲಿಂದಲೇ ಹರಿಯುತ್ತಿದ್ದಳಂತೆ ಎಂದು ಖುಷಿಯಿಂದ ಕಂಡ ಕಂಡ ನದಿ ಉಗಮದ ಸ್ಥಾನಕ್ಕೆಲ್ಲ ಹೋಗಿ ತೊರೆಯ ತುದಿಗೆ ಹೋಗಿ ನಿಂತರು. ಉತ್ತರಕಾಶಿಯ ಜಿಲ್ಲಾ ಕೇಂದ್ರದ ಒಂದು ತಂಡ ಒಮ್ಮೆ ಆಸಕ್ತಿ ವಹಿಸಿ ಉತ್ತರಾ ಖಂಡ ರಾಜ್ಯದ ಸಹಕಾರದೊಂದಿಗೆ ಒಂದಿಷ್ಟು ದಾರಿ, ಜನರಿಗೆ ಅನುಕೂಲವಾಗುವಷ್ಟು ಅಗಲದ ರಸ್ತೆ ಎನ್ನಬಹುದಾದ ಗುರುತು ಹೊಂದುವಷ್ಟು ಕಂದಕಗಳನ್ನು ಸವರಿ ಸರಿ ಮಾಡಿತು. ಆಶ್ಚರ್ಯ!..

ಅದರಾಚೆಗೆ ಹೋದಾಗ ಎದುರಿಗೆ ಇತ್ತಲ್ಲ.
ದಿ ಸ್ಟೋನ್ ಗಾರ್ಲೆಂಡ್.
ದಿ ಗ್ರೇಟ್ ಸಿಲ್ಕ್ ರೂಟ್..
ಅರೆರೆ. ಇದೇನಿದು ಎದುರಿನ ಹರವಾದ ಅತಿ ಎತ್ತರದ ಪರ್ವತಾಕಾರದ ಬಂಡೆಯ ನಡುವಿನಲ್ಲಿ ಕೇವಲ ಒಂದೆರಡು ಅಡಿಯ ಸಾವಿರಾರು ಮೆಟ್ಟಿಲ ದಾರಿ ಇದೆ. ಆದರೆ ಪಯಣಿಸುವವ ಮಾತ್ರ ಗುಂಡಿಗೆ ಕೈಯ್ಯಲ್ಲಿ ಹಿಡಿದೇ ನಡೆಯಬೇಕು. ದುರ್ಗಮ ಪ್ರಪಾತ ಎಡಕ್ಕಿದೆ. ಬಲಕ್ಕೆ ಶಿರ ಕಾಣದ ಶಿಲಾ ಪರ್ವತದ ಬಂಡೆಗಳು. ಹೆಚ್ಚೆಂದರೆ ಅಕ್ಷರಶಃ ಒಂದೂವರೆ ಎರಡಡಿಯ ಸರಾಗ ಚಲನೆಗೆ ಅನುಕೂಲವಾಗುವ ಪರ್ವತದ ನಡುವನ್ನು ಕೊರೆದ ಸಾವಿರಾರು ವರ್ಷಗಳ ಹಿಂದಿನ ದಾರಿ ಈಗಲೂ ಹಂಗೆ ಇತ್ತು.

ಸರಿ. ಒಂದಷ್ಟು ಜನ ಸಾಹಸದಿಂದ ಇತ್ತಲಿನ ಕಣಿವೆ ಇಳಿದು ಅತ್ತಲಿನ ಆ ಪರ್ವತ ಹತ್ತಿ ಅಂತೂ ಸಿಲ್ಕ್‌ರೂಟ್‌ನ ಪಾದ ತಲುಪಿದಾಗ ಮುಂದಿಂದು ಸಲೀಸು ಎನ್ನಿಸಿದರೂ ಸುರಕ್ಷತೆ ದೃಷ್ಟಿಯಿಂದ ಮೂಲ ರೂಪ ಕೆಡದಂತೆ ಕಲ್ಲಿನ ಭದ್ರತೆ ಒದಗಿಸಲು ಯೋಜಿಸಲಾಯಿತು. ನಾನು ಅದಕ್ಕಿಂತ ಖುಷಿ ಗೊಂಡಿದ್ದು ಏಕೆಂದರೆ ಇದೇ ದಾರಿ ಮುಂದೆ ಲಢಾಕ್ ಕಣಿವೆಗೆ ಗುಪ್ತವಾಗಿ ಪ್ರವೇಶಿಸುವ ಪುರಾಂಗ ಲಾ ಎನ್ನುವ ದಾರಿಗೆ ಸಂಪರ್ಕಿಸುತ್ತದೆ ಎಂದು
ಗೊತ್ತಾದಾಗ. ಇತ್ತಲಿನ ಚೀನಾ ಕಡೆಯಿಂದ ಅತ್ತ ಅಫ್ಘಾನಿಸ್ತಾನ ಪ್ರವೇಶಿಸಲು ಮಧ್ಯದ ದುರ್ಗಮ ಗಂಗೋತ್ರಿ ಪರ್ವತ ಪ್ರದೇಶ ಸೇರಿಸುವ ಸಿಲ್ಕ್‌ರೂಟ್‌ನ ಅಪರೂಪದ ಕೊಂಡಿ ಇದೆ. ಇದೆಲ್ಲ ಇತಿಹಾಸದ ಜತೆಗೆ ದಾರಿ ಹೊರಜಗತ್ತಿಗೆ ಮೈದೆರೆದುಕೊಂಡಾಗ ಇದ್ದಕ್ಕಿಂದ್ದಂತೆ ನೆಲಾಂಗ್ ವ್ಯಾಲಿ ಮೈಕೊಡವಿತ್ತು. ಅಪರೂಪದ ಚರಿತ್ರೆ ಮತ್ತು ಮೈ ನವಿರೇಳಿಸುವ ದಾರಿಯ ಚಾರಣ ಯಾರು ಬಿಟ್ಟಾರು.

ಸರಿ ೧೯೮೦ ರ ನಂತರ ನೆಲಾಂಗ್ ವ್ಯಾಲಿ ಮತ್ತೆ ತನ್ನ ವೈಭವವನ್ನು ಕಾಣತೊಡಗಿತು. ಅದರಲ್ಲೂ ಸಿಲ್ಕ್‌ರೂಟ್‌ನ ಆ ಪರ್ವತ ಹಾಗೂ ಅದಕ್ಕೂ ಮೊದಲು ದಕ್ಕುವ ಅಪರೂಪದ ತೋಮರ್ ನದಿ, ನೋಡಲು ಸೌಮ್ಯ ಆದರೆ ಅದ್ಭುತ ವೇಗದ ಒಳ ಹರಿವು, ಎರಡೂ ಕಡೆ ಹಸಿರಿನ ಬುಗ್ಗೆಯ ವ್ಯಾಲಿ ಪ್ರದೇಶ ಆಸಕ್ತರಿಗೆ ಹೊಸ ಉತ್ಸಾವನ್ನೇ ಹರಿಸಿತ್ತು. ಅದಕ್ಕೆ ಸರಿಯಾಗಿ ಈ ಪ್ರದೇಶವನ್ನೆಲ್ಲಾ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಿ ನೆಲಾಂಗ್‌ನ್ನು ಸಂರಕ್ಷಿಸುವ ಮತ್ತು ಕಾಯ್ದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿತು.

ಈ ಎಲ್ಲಾ ಪ್ರಯತ್ನದಿಂದ ಇಂಡೊ ಟಿಬೇಟಿಯನ್ ಬಾರ್ಡರ್ ಸೆಕ್ಯೂರಿಟಿ ಪೋಲಿಸ್ ಸುಪರ್ದಿಯಲ್ಲಿ ಸಾರ್ವಜನಿಕರಿಗೆ ತೆರೆದುಕೊಂಡ ನೆಲಾಂಗ್ ವ್ಯಾಲಿ ಇವತ್ತು ಸಾಹಸಿಗರಿಗೆ ಮತ್ತು ಅಪ್ಪಟ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಪ್ರದೇಶ. ಆದರೆ ಇದ್ದುದನ್ನು ಇದ್ದಂತೆ ಕಾಯ್ದುಕೊಳ್ಳುವ ಸಲುವಾಗಿ ನೆಲಾಂಗ್‌ಗೆ ಸರ್ವ ರೀತಿಯ ನಿಬಂಧವನ್ನು ವಿಧಿಸಲಾಗಿದ್ದು, ದಿನಕ್ಕೆ ಕೇವಲ ಆರು ವಾಹನಗಳಿಗೆ ಮಾತ್ರ ಪ್ರವೇಶ ನಿಗದಿಪಡಿಸಲಾಗಿದೆ. ಯಾವ
ಸಿಗ್ನಲ್ಲು ಏನೂ ಇಲ್ಲ. ವಾಹನ ಜತೆಗೆ ಇರುವ ಅರಣ್ಯ ಇಲಾಖೆಯ ಗಾರ್ಡು ಗೈಡುಗಳು ವಾಕಿ ಟಾಕಿ ಸೌಲಭ್ಯ ಹೊಂದಿರುತ್ತಾರೆ.

ಅದೆ ಎಮರ್ಜೆನ್ಸಿಗೂ, ಮಾಮೂಲಿಗೂ ಕಾಂಟಾಕ್ಟ್ ವ್ಯವಸ್ಥೆ. ಒಯ್ದ ಆಹಾರ ಖಾಲಿಯಾದರೆ ಉಪವಾಸ. ಕುಡಿಯಲು ಸಮೃದ್ಧವಾದ ತೋಮರ್ ನದಿ
ಬೆರಳಿಟ್ಟರೆ ಶಾಕ್ ಹೊಡೆಯುವಷ್ಟು ತಣ್ಣಗೆ ಹರಿಯುತ್ತಿರುತ್ತದೆ. ದಿನಾಂಕ ಹೊಂದಿಸಿಕೊಳ್ಳಲು ಮೊದಲೇ ಬುಕಿಂಗ್ ಕಡ್ಡಾಯ. ನೆಲಾಂಗ್ ಉತ್ತರಾಖಂಡ ರಾಜ್ಯದ ಉತ್ತರ ಕಾಶಿ ಜಿಲ್ಲೆಯ ಕಟ್ಟಕೊನೆಯಲ್ಲಿ ಚೀನಾ ಸರಹದ್ದಿಗೆ ಆತುಕೊಂಡು ನಿಂತಿದೆ. ಸುಮಾರು ೩೦೦ ಕಿ.ಮೀ. ದೂರದಲ್ಲಿ ಡೆಹರಾಡೂನ್ ಇದ್ದರೆ ೨೫ ಕಿ.ಮೀ. ಅಂತರದ ಭೈರವ್ ಘಾಟಿ ಎಲ್ಲದಕ್ಕೂ ಹತ್ತಿರದ ಊರು. ಈ ಭೈರವ ಘಾಟಿಯ ಸೊಗಸೇ ಬೇರೆ.

ಎಲ್ಲಿಂದ ಹತ್ತಿ ಎಲ್ಲಿ ನಿಂತರೂ ಸುತ್ತಲೂ ಶಿಖರದ ನೆತ್ತಿಗಳೆ ಕಾಣುತ್ತವೆ. ತವಾಂಗ್ ಬಳಿಯಲ್ಲಿ ಶರಂಪರ ಬಡಿದಾಟಕ್ಕೆ ಸಿದ್ಧವಾಗುವ ಚೀನಾಕ್ಕೆ ದೇವ್ರಾಣೆ ಇಲ್ಲಿ ಸರಹದ್ದು ಗುರುತಿಸಲು ಜಪ್ಪಯ್ಯ ಎಂದರೂ ಸಾಧ್ಯವಿಲ್ಲ. ಸರಿಯಾದ ಸರಹದ್ದು ಎನ್ನುವುದು ಎರಡೂ ದೇಶಗಳಿಗೂ ಗೊತ್ತಿಲ್ಲ. ಏನೇ ತಿಪ್ಪರಲಾಗ
ಹಾಕಿದರೂ ಪರ್ವತಗಳನ್ನು ಪಾಲು ಮಾಡಿಕೊಂಡು ಸರಹದ್ದು ಗುರುತಿಸಿಕೊಂಡರೂ ಮತ್ತೊಂದು ವರ್ಷಕ್ಕೆ ಶಿಲಾಪರ್ವತದ ಬುಡಗಳು ಕುಸಿದು ಕಣಿವೆ ಚಿತ್ರವನ್ನೇ ಅದಲು ಬದಲು ಮಾಡಿಬಿಡುತ್ತವೆ. ಆ ದುರ್ಗಮ ಕಣಿವೆಯಲ್ಲಿ ಅದೆಲ್ಲ ಹೀಗೀಗೆ ಎಂದು ಗೆರೆ ಕೊರೆದು ನಿರ್ಧರಿಸಲು ಸಾಧ್ಯವೂ ಇಲ್ಲ.

ಹಾಗಾಗಿ ಇತ್ತಲಿನ ದಾರಿಗೆ ಐ.ಟಿ.ಬಿ.ಪಿ ಇದ್ದರೆ ಅತ್ತಲಿಗೆ ಚೀನಿಯರು ಕೆಂಪು ಬಾವುಟ ಹಾರಿಸುತ್ತಿರುತ್ತಾರೆ. ಆದರೆ ಪ್ರತಿ ಬಾರಿ ಹಿಮದ ಹೊಡೆತಕ್ಕೆ ಸಿಕ್ಕು ನೆಲಾಂಗ್ ನ ಈ ದಾರಿ ಮಾತ್ರ ಹಾಗೇ ಇದೆ. ಸಿಲ್ಕರೂಟ್ ಎಂದು ಗುರುತಿಸಿಕೊಂಡಿರುವ ಕಲ್ಲು ಕಡೆದು ನಿರ್ಮಿಸಿದ ದುರ್ಗಮ ದಾರಿಪೂರ್ತಿ ನಡೆಯುವ
ಸಾಮರ್ಥ್ಯ ನಿಮಗಿದ್ದರೆ, ಒಂದೊಂದು ಪರ್ವತ ಸೆರಗು ಬಳಸುವಾಗಲೂ ನೀವು ದೇಶ ಬದಲಿಸುತ್ತಿರುತ್ತೀರಿ. ಅರಣ್ಯ ಇಲಾಖೆಯ ವಾಹನ ಒಂದು ರಸ್ತೆಯ ತುದಿಗೆ ನಿಲ್ಲಿಸಿ ಸಂಜೆ ವಾಪಸ್ಸು ಕರೆದೊಯ್ಯುತ್ತದೆ. ಅದರ ಹೊರತಾಗಿ ಹೆಚ್ಚಿನ ದಾರಿ ಕ್ರಮಿಸುವುದು ಸಾಧ್ಯವೂ ಇಲ್ಲ. ಅದ್ಭುತ ಸೂರ್ಯಾಸ್ತದಲ್ಲಿ ಬಯಲ ಗುಡ್ಡದ ತುದಿ ರಂಗಿನಿಂದ ಕಂಗೊಳಿಸುತ್ತಿದ್ದರೆ, ಹಿಮ ಸುರಿದ ಅಗಾಧ ಪರ್ವತ ರಾಶಿ ಇದಕ್ಕೆ ಒದ್ದೆ ಮರುಭೂಮಿ ಎಂಬ ಅನ್ವರ್ಥ ನಾಮಕ್ಕೀಡು
ಮಾಡಿದೆ. ಪ್ರತಿ ವರ್ಷ ಮೇ ನಿಂದ ಅಕ್ಟೋಬರ್ ಕೊನೆಯವರೆಗೆ ಮಾತ್ರ ಅನುಮತಿ. ಉಳಿದ ಹೊತ್ತು ಮನುಷ್ಯನಿರಲಿ ಯಾವ ಪ್ರಾಣಿಯೂ ಇಲ್ಲಿ
ಉಸಿರಾಡುವುದಿಲ್ಲ.

ಮೂರ್ನಾಲ್ಕು ದಿಕ್ಕುಗಳಲ್ಲಿ ಅರಣ್ಯ  ಇಲಾಖೆ ನಮ್ಮ ಆಸಕ್ತಿಗೆ ಅನುಗುಣವಾಗಿ ಒಯ್ದು ದಾರಿ ತೋರಿಸುತ್ತದೆ. ಆದರೆ ನೆಲಾಂಗ್ ಪ್ರತಿ ದಿಕ್ಕು ಮತ್ತೆ ಮತ್ತೆ ಕೈ
ಮಾಡಿ ಕರೆವ ಅದ್ಭುತ.