Saturday, 21st September 2024

ಸದ್ದಾಂ ಹುಸೇನ್‌ಗೆ ಕೊನಗೂ SUPER GUN ಸಿಗಲಿಲ್ಲ

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

camohanbn@gmail.com

ಅದು ಮೊದಲನೇ ವಿಶ್ವ ಯುದ್ಧದ ಉತ್ತುಂಗದ ಸಮಯ, 23ನೇ ಮಾರ್ಚ್ 1918ರಂದು ಪ್ಯಾರಿಸ್ ನಗರದಲ್ಲಿ ದೊಡ್ಡದೊಂದು ‘ಬಾಂಬ್ ಶೆಲ್’ ಸ್ಫೋಟ ಗೊಂಡಿತ್ತು, ಇದಾದ ಒಂದು ಗಂಟೆಯ ನಂತರ ಮತ್ತೊಂದು ಬಾಂಬ್‌ಶೆಲ್ ನಗರದ ಮಧ್ಯ ಬಾಗದಲ್ಲಿ ಸ್ಫೋಗೊಂಡಿತ್ತು, ಎರಡನೇ ಸ್ಫೋದಲ್ಲಿ 8 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಜರ್ಮನಿಯು ಪ್ಯಾರಿಸ್ ನಗರದ ಮೇಲೆ ಕಣ್ಣಿಟ್ಟಿದ್ದಿದ್ದರಿಂದ ನಗರದ ಸುತ್ತ ಮುತ್ತಲ ಕಾಡಿನಲ್ಲಿ ಜರ್ಮನ್ ಸೈನಿಕರು ಅವಿತುಕೊಂಡು ಈ ದಾಳಿ ಮಾಡಿರುವ ಶಂಕೆಯನ್ನು ಪ್ಯಾರಿಸ್ ನಗರದ ಪೊಲೀಸರು ವ್ಯಕ್ತಪಡಿಸಿದ್ದರು.

ಅವರನ್ನು ಹುಡುಕಿಕೊಂಡು ಕಾಡಿನಕಡೆ ಹೊರಟ ಪೊಲೀಸರಿಗೆ ಯಾವ ಸುಳಿವೂ ಸಿಗಲಿಲ್ಲ. ಕೊನೆಗೆ ಫ್ರೆಂಚ್ ಪೊಲೀಸರು ಈ ‘ಬಾಂಬ್‌ಶೆಲ್’ ಗಳನ್ನು ’AIR SHIP’ ಮೂಲಕ ಆಕಾಶ ದಿಂದ ಬೀಳಿಸಲಾಗಿದೆಯೆಂಬ ತೀರ್ಮಾನಕ್ಕೆ ಬಂದರು. ಈ ಘಟನೆ ಸಂಭವಿಸಿದ ಆರು ದಿನಗಳ ನಂತರ ಮತ್ತೊಮ್ಮೆ ಪ್ಯಾರಿಸ್ ನಗರದ ಚರ್ಚ್ ಒಂದರ ಮೇಲೆ ಮತ್ತೊಂದು ‘ಬಾಂಬ್ ಶೆಲ್’ ದಾಳಿಯಾಗಿತ್ತು, ಈ ಸ್ಫೋಟ 91 ಜನರನ್ನು ಬಲಿ ತೆಗೆದುಕೊಂಡಿತ್ತು, ಇಡೀ ನಗರದಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿತ್ತು, ಫ್ರೆಂಚ್ ಸೈನಿಕರು ಎಷ್ಟೇ ಹುಡುಕಿದರೂ ಯಾವ ಸಾಕ್ಷಿಯೂ ಸಿಗಲಿಲ್ಲ. ಅಂದಿನ ಕಾಲ ಘಟ್ಟದಲ್ಲಿ ಅಷ್ಟೊಂದು ದೂರದಿಂದ ಬಾಂಬ್ ಎಸೆಯಬಲ್ಲ ಫಿರಂಗಿಗಳ ಬಗ್ಗೆ ಫ್ರೆಂಚರು ಕೇಳಿರಲಿಲ್ಲ, ಸ್ಫೋಟದ ಹಿಂದಿನ ಶಸ್ತ್ರಾಸ್ತ್ರ ನಿಗೂಢವಾಗಿಯೇ ಉಳಿಯಿತು.

ನಂತರ ಫ್ರೆಂಚರ ಅದೃಷ್ಟ ಚೆನ್ನಾಗಿತ್ತು, ಮೊದಲನೇ ವಿಶ್ವಯುದ್ಧ ಕೊನೆಗೊಂಡಿತ್ತು, ಜರ್ಮನಿಯು ತಣ್ಣಗಾಗಿತ್ತು. ಆದರೂ ಆ ಶಸ್ತ್ರಾಸ್ತ್ರದ ಬಗ್ಗೆ ಹಲವು ವಿಚಾರಗಳು ಚಾಲ್ತಿಯಲ್ಲಿದ್ದವು, ಕೆಲವರು ಅದು ‘ಪ್ಯಾರಿಸ್‌ಗನ್’ ಇರಬಹು ದೆಂದರು, ಮತ್ತೆ ಕೆಲವರು ಜರ್ಮನಿಯ ರಾಜನ ಹೆಸರಿನಲ್ಲಿರುವ ವಿಲ್ಹೆಮ್ ಗನ್ ಎಂದರು. ಆದರೆ ನಂತರ ತಿಳಿದ ಸತ್ಯವೆಂದರೆ ಆ ಫಿರಂಗಿಯನ್ನು ಜರ್ಮನಿಯ KRUPP INDUSTRIES ಅಭಿವೃದ್ಧಿಪಡಿಸಿತ್ತು, ಸುಮಾರು 128 ಕಿಲೋ ಮೀಟರುಗಳ ದೂರ ಕ್ರಮಿಸಬಲ್ಲ ಸಾಮರ್ಥ್ಯವಿತ್ತು, ಅದರಲ್ಲಿ ಬಳಸುತ್ತಿದ್ದಂತಹ ‘ಬಾಂಬ್‌ಶೆಲ್’ಗಳು ಸುಮಾರು ಮೂರು ಅಡಿಯಷ್ಟಿದ್ದವು, 12 ಅಡಿಗಳಷ್ಟು ಉದ್ದದ ಗನ್‌ ಪೌಡರ್ ತುಂಬುವ ಸಾಮರ್ಥ್ಯ ಅದರಲ್ಲಿತ್ತು, ಆಗಸಕ್ಕೆ ಬಾಂಬುಗಳನ್ನು ಸುಮಾರು 42 ಕಿಲೋ ಮೀಟರುಗಳಷ್ಟು ಎತ್ತರಕ್ಕೆ ಚಿಮ್ಮಿಸುವ ಸಾಮರ್ಥ್ಯವನ್ನು ಫಿರಂಗಿ ಹೊಂದಿತ್ತು.

ತಂತ್ರಜ್ಞಾನ ಬೆಳೆದಂತೆ ಈ ಫಿರಂಗಿಯನ್ನೂ ಮೀರಿಸುವ ಸಾಮರ್ಥ್ಯದ V2 ROCKET ಗಳನ್ನು ಜರ್ಮನ್ ಎರಡನೇ ವಿಶ್ವಯುದ್ಧದಲ್ಲಿ ಬಳಸಿತ್ತು, ಇದನ್ನೂ ಸಹ KRUPP INDUSTRIES ಅಭಿವೃದ್ಧಿ ಪಡಿಸಿತ್ತು. ಎರಡನೇ ಯುದ್ಧದ ಅಂತಿಮ ಘಟ್ಟದಲ್ಲಿ ಬ್ರಿಟಿಷರು ಈ ಫಿರಂಗಿ ಹಾಗೂ ರಾಕೆಟ್‌ಗಳನ್ನು ತಮ್ಮ ಯುದ್ಧ ವಿಮಾನಗಳ ಮೂಲಕ ಹುಡುಕಿ ನಾಶಮಾಡಿದ್ದರು. ಆದರೆ ಈ SUPER GUN ಅಥವಾ ಫಿರಂಗಿ ತಯಾರಿಸುವ ತಂತ್ರಜ್ಞಾನ ಮಾತ್ರ ಯಾರ ಕೈಗೂ ಸಿಕ್ಕಿರ ಲಿಲ್ಲ, ಅಳಿದುಳಿದಿರುವ ಫಿರಂಗಿಗಳು ಎಲ್ಲಿ ಹೋದವು, ಯಾರ ಬಳಿಯಿದೆ ಎಂಬ ಮಾಹಿತಿ ಯಾರ ಬಳಿಯೂ ಇರಲಿಲ್ಲ.

1965ರಲ್ಲಿ ಜರ್ಮನಿಯ ಹಿರಿಯ ಮಹಿಳೆಯೊಬ್ಬರು ಕೆನಡಾ ದೇಶಕ್ಕೆ 37 ವರ್ಷದ ವಿಜ್ಞಾನಿಯೊಬ್ಬನನ್ನು ಭೇಟಿಯಾಗಲು ಬಂದರು. ಈತನ ಹೆಸರು ಡಾ. ಗೆರಾಲ್ಡ್ ಬುಲ್, ಈತ ಅತಿ ಎತ್ತರದ ಪರ್ವತ ಶ್ರೇಣಿಗಳ ಮೇಲೆ ಸಂಶೋಧನೆ ನಡೆಸುವ ವಿಶ್ವವಿದ್ಯಾಲಯದ ಮುಖ್ಯಸ್ಥನಾಗಿದ್ದ. ಜರ್ಮನಿಯಿಂದ ಬಂದಿದ್ದಂತಹ ಮಹಿಳೆ ಜರ್ಮನಿಯ KRUPP INDUSTRIES ಸಂಸ್ಥೆಯಲ್ಲಿ ನಿರ್ದೇಶಕನಾಗಿದ್ದವನ ಸಂಬಂಧಿಯಾಗಿದ್ದಳು. ಆಕೆಯು ತನ್ನ ಮನೆಯಲ್ಲಿ ಸಿಕ್ಕಂತಹ ಫಿರಂಗಿ ಅಥವಾ SUPER GUN ಗೆ ಸಂಬಂಧಿಸಿದಂತಹ ಮಹತ್ವದ ದಾಖಲೆಗಳನ್ನು ಡಾ.ಗೆರಾಲ್ಡ್ ಬುಲ್‌ಗೆ ನೀಡಲು ಬಂದಿದ್ದಳು. ತನ್ನ 23 ನೇ ವಯಸ್ಸಿನಲ್ಲಿಯೇ P.hd  ಪಡೆದಿದ್ದಂತಹ ಡಾ.ಗೆರಾಲ್ಡ್ ಬುಲ್‌ಗೆ ಆಕೆಯು ನೀಡಿದ್ದ ದಾಖಲೆಗಳನ್ನು ಓದಿದ ಮೇಲೆ ಬೃಹತ್ SUPER GUN ತಯಾರಿಸಬೇಕೆಂಬ ಆಸೆಯಾಯಿತು. ಸಾವಿರಾರು ಕಿಲೋಮೀಟರುಗಳ ದೂರ ಬಾಂಬ್‌ಶೆಲ್ಸ್ ಹೊತ್ತೊಯ್ಯ ಬಲ್ಲ SUPER GUN ತಯಾರಿಸಬೇಕೆಂಬ ಆಸೆಯಾಯಿತು. ಆತನ ಆಸೆಗೆ ತಕ್ಕಂತೆ ಅಮೆರಿಕ ಹಾಗೂ ಕೆನಡಾ ಸರಕಾರಗಳು ಶಸಾಸವನ್ನು ಅಭಿವೃದ್ಧಿ ಪಡಿಸಲು ಬೇಕಾದಂತಹ ಧನಸಹಾಯವನ್ನು ಮಾಡಿದವು.

SUPERGUN ಮಾದರಿಯೊಂದನ್ನು ತಯಾರಿಸಿದ ಬುಲ್ ಬಾರ್ಬಡೋಸ್ ನಲ್ಲಿ ಪರೀಕ್ಷೆ ಮಾಡಲು ನಿರ್ಧರಿಸಿದ, ಸುಮಾರು 36 ಮೀಟರ್ ಉದ್ದದ ಜಗತ್ತಿನ ದೊಡ್ಡ SUPER GUN ಪರೀಕ್ಷೆಯು ಯಶಸ್ವಿಯಾಗಿ ನಡೆಯಿತು. ಎರಡು ಸರಕಾರಗಳು ಆತನ ಸಾಧನೆಯನ್ನು ಕೊಂಡಾಡಿದವು, ಆತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ SUPERGUN ಗೆ ಶೆಲ್ ಬಾಂಬುಗಳ ಬದಲಾಗಿ ‘ಕ್ಷಿಪಣಿ’ಗಳನ್ನುಕಟ್ಟಿದರೆ ಸುಮಾರು 4000 ಕಿಲೋ ಮೀಟರುಗಳ ದೂರದವರೆಗೂ ಉಡಾಯಿಸಬಹುದೆಂಬುದನ್ನು ಹೇಳಿದ. ಅಮೆರಿಕ ಹಾಗೂ ಕೆನಡಾ ದೇಶಗಳು ಈತನು ಕಂಡು ಹಿಡಿದಿದ್ದಂತಹ SUPERGUN  ಬಗ್ಗೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದರೂ ಸಹ, ಯಾವುದೊ ಕಾರಣಕ್ಕಾಗಿ ಆತನ ಯೋಜನೆಯನ್ನು ಅರ್ಧದಲ್ಲಿಯೇ ಕೈಬಿಡುವಂತೆ ಸೂಚಿಸಿದರು.

ಯೋಜನೆ ಕೈ ಬಿಟ್ಟು ಬಾರ್ಬಡೋಸ್ ದೇಶವನ್ನುಬಿಡುವಂತೆ ಸೂಚನೆ ನೀಡಿ, ಅಮೆರಿಕ ದೇಶದ ಪೌರತ್ವವನ್ನು ನೀಡಿ ಅಮೆರಿಕದಲ್ಲಿರುವಂತೆ ಹೇಳಿದ್ದರು. ಆದರೆ ಬುಲ್‌ನ ಮನಸಿನಲ್ಲಿ ಮಾತ್ರ ತನ್ನ ಮಹತ್ವಾಕಾಂಕ್ಷೆ ಯೋಜನೆಯು ಅಪೂರ್ಣಗೊಂಡಿದ್ದರ ಬಗ್ಗೆ ಬೇಜಾರಿತ್ತು. ತನ್ನ ಯೋಜನೆಯನ್ನು ಮುಂದುವರಿಸಲು ಯಾವ ಮಟ್ಟದ ಕೆಲಸಮಾಡಲು ಬುಲ್ ತಯಾರಿದ್ದ. ವಿಶ್ವಸಂಸ್ಥೆಯು ದಕ್ಷಿಣ ಆಫ್ರಿಕಾ ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಬಾರದೆಂಬ ನಿಬಂಧ ಹೇರಿದ್ದರೂ ಸಹ
GC-45 ಗನ್‌ಗಳನ್ನುಅಕ್ರಮವಾಗಿ ಆತ ಮಾರಾಟ ಮಾಡಿದ್ದ.

ಸದಾ ಅಧಿಕಾರಿಗಳನ್ನು ನಿಂದಿಸುತ್ತಾ ಕೇವಲ ತನ್ನ SUPER GUN ತಯಾರಿಸುವ ಗುರಿಯನ್ನೇ ಜಪಿಸುತ್ತಿದ್ದ ಬುಲ್. ಅಕ್ರಮ ಶಸ್ತ್ರಾಸ್ತ್ರ ಮಾರಾಟದಡಿಯಲ್ಲಿ 6 ತಿಂಗಳು ಜೈಲಿಗೆ ಹೋಗಿಬಂದ, 55000 ಅಮೆರಿಕನ್ ಡಾಲರ್ ದಂಡವನ್ನೂ ಕಟ್ಟಿದ. ಇದರಿಂದ ಕುಪಿತನಾದ ಬುಲ್ ತನ್ನ ದೇಶಬಿಟ್ಟು ಬೆಲ್ಜಿಯಂ ದೇಶಕ್ಕೆ ಬಂದು ನೆಲಸಿ ನೂತನ ಶಸ್ತ್ರಾಸ್ತ್ರ ಕಂಪನಿಯನ್ನು ಶುರುಮಾಡಿದ.

ಕನಸಿನ SUPER GUN ತಯಾರಿಸಿ ಮಾರಾಟ ಮಾಡಲು, ತನ್ನ ಜೀವನವನ್ನೇ ಮುಡಿಪಾಗಿಡಲು ನಿರ್ಧರಿಸಿದ್ದವನಿಗೆ ದೆವ್ವದಂತೆ ಸಿಕ್ಕವನು ಸರ್ವಾಧಿಕಾರಿ ‘ಸದ್ದಾಂ ಹುಸೇನ್’. ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಪಕ್ಕದ ಇರಾನ್ ದೇಶದ ಮೇಲೆ ದಾಳಿಮಾಡುತ್ತಿದ್ದಂತಹ ಸದ್ದಾಂ ಹುಸೇನ್‌ನಿಗೆ ಅತ್ಯಾಧುನಿಕ ಸಶಸ್ತ್ರ ವೊಂದರ ಅಗತ್ಯತೆಯಿತ್ತು ಹಾಗೂ ಇಸ್ರೇಲ್ ದೇಶವು ಇರಾಕ್ ದೇಶದ ಪರಮಾಣು ಬಾಂಬ್ ತಯಾರಿಕಾ ಘಟಕಗಳ ಮೇಲೆ ನಿರಂತರ ದಾಳಿ ನಡೆಸಿ, ಜಗತ್ತಿನ ಪರಮಾಣು ಬಾಂಬ್ ಹೊಂದಿರುವ ರಾಷ್ಟ್ರವಾಗಬೇಕೆಂದು ಕನಸು ಕಂಡಿದ್ದ ಸದ್ದಾಂ ಹುಸೇನ್‌ನ ಕನಸಿಗೆ ನೀರೆರಚಿತ್ತು, ಇದರಿಂದ ಕುಪಿತಗೊಂಡಿದ್ದ ಸದ್ದಾಂ ಹುಸೇನ್ ಗೆ ಇಸ್ರೇಲ್ ಮೇಲೆ ದಾಳಿ ನಡೆಸಲು ಪ್ರಮುಖ ಅಸವೊಂದು ಬೇಕಿತ್ತು. ಅನ್ನ ಹಳಸಿತ್ತು, ನಾಯಿ ಕಾದಿತ್ತು ಎಂಬಂತೆ ಸರ್ವಾಧಿಕಾರಿಯೊಬ್ಬನು ಬುಲ್‌ನ ಕನಸನ್ನು ನನಸು ಮಾಡಲು ತಯಾರಾಗಿದ್ದ.

ಜಗತ್ತಿನ ಅತ್ಯಂತ ಉದ್ದದ ಹಾಗೂ ಸಾವಿರಾರು ಕಿಲೋ ಮೀಟರುಗಳ ದೂರ ಕ್ಷಿಪಣಿಗಳನ್ನು ತಲುಪಿಸುವ ಸಾಮರ್ಥ್ಯದ  SUPER GUN ತಯಾರಿಸಿ
ಕೊಡುವುದಾಗಿ ಬುಲ್ ಸದ್ದಾಂ ಹುಸೇನ್‌ನಿಗೆ ಹೇಳಿದ್ದ, ಉಪಗ್ರಹಗಳನ್ನೂ ಹೊಡೆದುರುಳಿಸುವ ಸಾಮರ್ಥ್ಯ ವನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆಯನ್ನು ನೀಡಿದ್ದ. ಈತನ ಭರವಸೆಯಿಂದ ಖುಷಿಯಾದಂತಹ ಸದ್ದಾಂ ಹುಸೇನ್ ಇಸ್ರೇಲ್‌ನ ಜನ ನಿಬಿಡ ಪ್ರದೇಶಗಳ ಮೇಲೆ ದಾಳಿ ಮಾಡಲು ತಯಾರಿ ನಡೆಸಿಕೊಂಡ. ಇಬ್ಬರೂ ಸೇರಿ ಈ ಯೋಜನೆಯನ್ನು PROJECT BABYLON ಎಂದು ಕರೆದರು. ಸುಮಾರು 150 ಮೀಟರ್ ಉದ್ದ, 2100 ಕೆಜಿ ತೂಕದ ಬೃಹತ್ SUPER
GUN ತಯಾರಿಸುವ ಯೋಜನೆಯ ನೀಲಿ ನಕ್ಷೆಯನ್ನು ಸಿದ್ಧಪಡಿಸಲಾಯಿತು.

ಯೋಜನೆಯ ಮುಂದುವರೆದ ಭಾಗವಾಗಿ ಪ್ರಾಯೋಗಿಕವಾಗಿ ಸಣ್ಣದಾದಂತಹ ಮಾದರಿ SUPER GUN ತಯಾರಿಸಲು ನಿರ್ಧರಿಸಲಾಯಿತು, ಇದಕ್ಕೆ BABY BABYLON ಎಂದು ಹೆಸರಿಡಲಾಯಿತು. ಸುಮಾರು 45 ಮೀಟರ್ ಉದ್ದದ ಮಾದರಿ SUPER GUN ತಯಾರಾಗಿತ್ತು. ಅದರ ಕಾರ್ಯಕ್ಷಮತೆ ಯನ್ನು ಕಂಡು ಸದ್ದಾಂ ಹುಸೇನ್‌ನ ಸೈನಿಕರು ಖುಷಿಪಟ್ಟರು. ನಂತರ ಬೃಹತ್ SUPER GUN ತಯಾರಿಸುವ ಕಾರ್ಯ ಪ್ರಾರಂಭವಾಯಿತು, ಇರಾಕಿನ ಮರುಭೂಮಿ ಯಲ್ಲಿ ಬೆಟ್ಟವೊಂದರ ಮೇಲೆ ಇಳಿಜಾರಿ ನೆಡೆಗೆ ಮುಖ ಮಾಡಿಸಿ SUPER GUN ತಯಾರಿಸುವ ಕೆಲಸ ಶುರುವಾಯಿತು.

ಯೂರೋಪಿನ ಹಲವು ದೇಶಗಳಿಂದ ತಯಾರಿಕೆಗೆ ಬೇಕಾದಂತಹ ಕಚ್ಚಾ ವಸ್ತುಗಳನ್ನು ಜೋರ್ಡನ್ ಮೂಲಕ ಆಮದು ಮಾಡಿಕೊಳ್ಳಲಾಯಿತು, ಮುಖ್ಯವಾಗಿ ಬೇಕಿದ್ದಂತಹ ಬೃಹತ್ ಕೊಳವೆಗಳನ್ನು ಆಮದು ಮಾಡಿಕೊಳ್ಳಲಾಯಿತು. ಕಟ್ಟಡ ಕಾಮಗಾರಿಗಳಿಗೆ ಕೊಳವೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆಯೆಂದು ಸುಳ್ಳುಹೇಳಿ ಇತರ ದೇಶಗಳ ಕಣ್ಣುತಪ್ಪಿಸಿ ದೇಶದೊಳಗೆ ತರಲಾಯಿತು. ಸದ್ದಾಂ ಹುಸೇನ್‌ನ ಸರ್ವಾಽಕಾರದ ಅವಧಿಯಲ್ಲಿ ಇರಾಕ್‌ನ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ನಿಬಂಧಗಳಿದ್ದವು, ಒಂದು ಸಣ್ಣವಸ್ತುವನ್ನು ಆಮದು ಮಾಡಿಕೊಂಡರೂ ಜಗತ್ತಿನ ದೇಶಗಳು ಹದ್ದಿನ ಕಣ್ಣಿನಿಂದ ನೋಡುತ್ತಿದ್ದವು. ಅಂತಹ ಸಂದರ್ಭದಲ್ಲಿ ಕಳ್ಳಸಾಗಣೆಯ ಮೂಲಕ, ಪಕ್ಕದ ಜೋರ್ಡನ್ ದೇಶದ ಸಹಾಯದಿಂದ SUPER GUN ತಯಾರಿಸಲು ಬೇಕಿರುವಂತಹ ಕಚ್ಚಾವಸ್ತು
ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಬುಲ್ ತನ್ನಬೃಹತ್ ಖಾಸಗಿ ತಂತ್ರಜ್ಞರ ಸಹಾಯದಿಂದ ಬೃಹತ್ PIPE LINE ಗಳನ್ನು ಬಳಸಿಕೊಂಡು ಗನ್ ತಯಾರಿಕೆಯಲ್ಲಿ ತೊಡಗಿದ್ದ,

ಇದರ ಜತೆಗೆ ಮತ್ತೆರಡು ನೂತನ ಫಿರಂಗಿಗಳನ್ನು ತಯಾರಿಸಿ ಇರಾಕಿ ಸೈನ್ಯಕ್ಕೆ ಪರಿಚಯಿಸಿದ. SUPER GUN ತಯಾರಿಕೆಯಲ್ಲಿ ಸಹಾಯ ಮಾಡುತ್ತಿದ್ದಂತಹ ಕಚ್ಚಾವಸ್ತುಗಳ ಮಾರಾಟಗಾರರಿಗೆ ವಿಷಯ ತಿಳಿದಿದ್ದರೂ ಸಹ ರಹಸ್ಯವಾಗಿ ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದರು. ಆದರೆ ರಹಸ್ಯಗಳು ಬಹಳ ದಿನಗಳ ಕಾಲ ಉಳಿಯಲಿಲ್ಲ, ಜಗತ್ತಿನ ಅತ್ಯಂತ ಮುಂದುವರೆದ ಸಂಸ್ಥೆಯಾಗಿದ್ದಂತಹ ಇಸ್ರೇಲ್‌ನ ಮೊಸ್ಸಾದ್‌ನ ಕಿವಿಗೆ ಬುಲ್ ಸದ್ದಾಂ ನಿಗೆ ಸಹಾಯ ಮಾಡುತ್ತಿರುವ ವಿಷಯತಿಳಿಯಿತು. ಮೊದಮೊದಲು ಇಸ್ರೇಲ್ ಬುಲ್‌ಗೆ ಎಚ್ಚರಿಕೆಯನ್ನು ನೀಡಿತು, ಆದರೂ ಬುಲ್ ತಲೆ ಕೆಡಿಸಿಕೊಳ್ಳಲಿಲ್ಲ. ಆತನ ಅಪಾಯಕಾರಿ ಯೋಜನೆಯ ಬಗ್ಗೆ ಇರಾನ್ ಕೂಡ ಕಳವಳ ವ್ಯಕ್ತಪಡಿಸಿತ್ತು, ಅಮೆರಿಕದ ಗೂಢಚಾರ ಸಂಸ್ಥೆಯಾಗಿರುವ CIA ಕೂಡ ಕಳವಳ ವ್ಯಕ್ತಪಡಿಸಿತ್ತು.

ಇರಾಕಿನ ಸರ್ವಾಧಿಕಾರಿಯಾಗಿದ್ದಂತ ಸದ್ದಾಂ ಹುಸೇನ್‌ಗೆ ಈ ಶಸ್ತ್ರಾಸ್ತ್ರ ಸಿಕ್ಕಿದರೆ ಆತನನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುವುದೆಂಬ ವಿಷಯ ಎಲ್ಲರಿಗೂ ತಿಳಿದಿತ್ತು. ಆತನ ಸೈನ್ಯವು ಬಲಗೊಂಡರೆ, ಪುನಃ ಪರಮಾಣು ಬಾಂಬ್ ತಯಾರಿಕೆಯಲ್ಲಿ ತೊಡಗುತ್ತಾನೆಂಬ ಭಯ ಎಲ್ಲರನ್ನೂ ಕಾಡುತ್ತಿತ್ತು. ಸರ್ವಾಧಿಕಾರಿ ಯೊಬ್ಬನಿಗೆ ಅಣುಬಾಂಬ್ ಸಿಕ್ಕಿದರೆ ಕೋತಿಗೆ ಹೆಂಡ ಕುಡಿಸಿದಾಗ ಉಂಟಾಗುವ ಅನಾಹುತಗಳೇ ಆಗುತ್ತದೆ. ಇರಾನ್ ಹಾಗೂ ಇರಾಕ್ ನಡುವೆ ನಡೆದ ಯುದ್ಧ ದಲ್ಲಿ ಬುಲ್ ತಯಾರಿಸಿ ಇರಾಕಿ ಸೈನ್ಯಕ್ಕೆ ನೀಡಿದಂತಹ ಎರಡು ಫಿರಂಗಿಗಳನ್ನು ಸದ್ದಾಂ ಆಗಲೇ ಬಳಕೆ ಮಾಡಿದ್ದ, ಅವೆಷ್ಟು ಅಪಾಯಕಾರಿ ಯಾಗಿದ್ದವೆಂಬು ದರ ಅರಿವು ಅವರಿಗಾಗಲೇ ಇತ್ತು, ಇನ್ನು ಬುಲ್ ಏನಾದರು SUPER GUN ಯೋಜನೆಯನ್ನು ಸಂಪೂರ್ಣಗೊಳಿಸಿದರೆ ಆಗಬಹುದಾದಂತಹ ಅನಾಹುತದ ಭೀಕರತೆ ಎಲ್ಲರನ್ನೂ ಕಾಡುತ್ತಿತ್ತು.

ಇಸ್ರೇಲ್ ದೇಶವು ಎಷ್ಟೇ ಎಚ್ಚರಿಕೆ ನೀಡಿದರೂ ಬುಲ್ ಬಗ್ಗದಿದ್ದಾಗ ಮೊಸ್ಸಾದ್‌ನ ವಿದೇಶಿ ಏಜೆಂಟ್‌ಗಳು ಕಣಕ್ಕಿಳಿರು, ದೂರದ ಬೆಲ್ಜಿಯಂ ದೇಶದಲ್ಲಿ ಕುಳಿತು ಯೋಜನೆಯನ್ನು ನಿರ್ವಹಿಸುತ್ತಿದಂತಹ ಬುಲ್‌ನ ಮನೆಗೆ ಒಮ್ಮೆ ನುಗ್ಗಿದ ಏಜೆಂಟ್‌ಗಳು ಮನೆಯಲ್ಲಿದ್ದಂತಹ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು, ಆತನು ಎಲ್ಲೇ ಅಡಗಿದ್ದ ರೂ ಸಹ ಸುಮ್ಮನೆ ಬಿಡುವುದಿಲ್ಲವೆಂಬ ಮತ್ತೊಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಮಗದೊಮ್ಮೆ ಎಚ್ಚರಿಕೆ ನೀಡಿದ್ದರೂ ಸಹ ಬುಲ್ ಸುಮ್ಮನೆ ಕೂರಲಿಲ್ಲ, ಆತನ ತಲೆಯಲ್ಲಿ ತನ್ನ ಕನಸಿನ SUPER GUN ತಯಾರಿಕೆಯೊಂದೇ ತುಂಬಿ ಹೋಗಿತ್ತು.

ತಾನು ತಯಾರಿಸಿದ SUPER GUN ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾದರೂ ಪರವಾಗಿಲ್ಲ, ಆದರೆ ಯೋಜನೆ ಮಾತ್ರ ಯಶಸ್ವಿಯಾಗ ಬೇಕೆಂಬುದು ಆತನ ಹಠವಾಗಿತ್ತು. ಮಾರ್ಚ್ 22- 1990ರಂದು ಬುಲ್ ಎಂದಿನಂತೆ ತನ್ನ ಅಪಾರ್ಟ್‌ಮೆಂಟ್ ಬಾಗಿಲಿನ ಮುಂದೆ ನಿಂತು ಜೇಬಿನಲ್ಲಿ ಕೀ ಹುಡುಕಬೇಕಾದರೆ, ಎದುರಿಗೆ ಬಂದ ಅನಾಮಿಕ ವ್ಯಕ್ತಿಯೊಬ್ಬ ಬುಲ್‌ನ ತಲೆಗೆ 5 ಗುಂಡುಗಳನ್ನು ಹಾರಿಸಿದ್ದ, ಸ್ಥಳದಲ್ಲೇ ಕುಸಿದು SUPER GUN ನ ಪಿತಾಮಹ ಸಾವನ್ನಪ್ಪಿದ್ದ. ಆತನನ್ನು ಸಾಯಿಸಿದ್ದು ಯಾರೆಂಬುದು ರಹಸ್ಯವಾಗಿಯೇ ಉಳಿಯಿತು, ಕೆಲವರು ಅಮೆರಿಕದ CIA ಗೂಢಚಾರಿಗಳಿರಬಹುದೆಂದರು ಮತ್ತೆ ಕೆಲವರು ಇರಾನಿ ಗಳಿರ ಬಹುದೆಂದರು, ಆದರೆ ಬಹುತೇಕರು ಕೈ ತೋರಿಸಿದ್ದು ಇಸ್ರೇಲಿನ ಮೊಸ್ಸಾದ್ ಕಡೆಗೆ. ಬುಲ್ ಸತ್ತನಂತರ SUPER GUN ಕೆಲಸನಿಂತು ಹೋಯಿತು, ಆತನ ರಹಸ್ಯ ಎಂಜಿನಿಯರ್‌ಗಳು ಜಗತ್ತಿನೆಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಹೋದರು, ಅಲ್ಲಿಗೆ ಸದ್ದಾಂ ಹುಸ್ಸೇನ್‌ನ BABYLON ಯೋಜನೆ ನಿರ್ಣಾಮವಾಯಿತು.

2003ರಲ್ಲಿ ಅಮೆರಿಕದ ಸೈನ್ಯ ಇರಾಕ್ ದೇಶವನ್ನು ವಶಪಡಿಸಿಕೊಂಡಾಗ ಇರಾಕ್ ದೇಶದ ರಾಜಧಾನಿ ಬಾಗ್ದಾದ್ ನಿಂದ ಸುಮಾರು 30 ಕಿಲೋಮೀಟರು ದೂರವಿರುವ ಗುಜರಿಯಲ್ಲಿ ತುಕ್ಕು ಹಿಡಿದ ಸ್ಥಿತಿಯಲ್ಲಿ ಬೃಹತ್ Pipe line ಗಳು ಸಿಕ್ಕವು. ಬುಲ್‌ನ ಹತ್ಯೆಯ ನಂತರ ಮೊಸ್ಸಾದ್ ಕಾರ್ಯ ನಿರ್ವಹಿಸುವ ಪ್ರಕ್ರಿಯೆ ಕೊಂಚ ಬದಲಾಯಿತು, BLACK SEPTEMBER ಕಾರ್ಯಾಚರಣೆಯಲ್ಲಿ ಒಬ್ಬೊಬ್ಬ ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡು ಜಗತ್ತಿನ ಬೇರೆ ಬೇರೆ ದೇಶ ಗಳಲ್ಲಿ ಕೊಂದು ಸೇಡು ತೀರಿಸಿಕೊಳ್ಳುವ ರೀತಿಯ ಜತೆಗೆ, ಒಂದು ಇಡೀ ಯೋಜನೆಯನ್ನೇ ಸ್ಥಗಿತಗೊಳಿಸುವ ಕಾರ್ಯಾಚರಣೆಗಳ ಬಗ್ಗೆ ಹೆಚ್ಚು ಗಮನ ಹರಿಸ ಲಾಯಿತು.

ಪ್ಯಾಲಿಸ್ತೇನಿ ಉಗ್ರ ಹದ್ದಾದ್ ಇಸ್ರೇಲ್ ದೇಶಕ್ಕೆ ಬೇಕಾಗಿದ್ದಂತಹ ಅಪಾಯಕಾರಿ ಶತ್ರುವಾಗಿದ್ದ, 1976ರಲ್ಲಿ AIR FRANCE ವಿಮಾನವನ್ನು ಅಪಹರಿಸಿ ಎಂಟೆಬ್ಬೆ ನಗರದಲ್ಲಿ ಇಳಿಸಿ, ಉಗ್ರಗಾಮಿಗಳ ಬಿಡುಗಡೆಗೆ ಒತ್ತಾಯಿಸಿದ್ದ. ಆಗ ಇಸ್ರೇಲ್ ನಡೆಸಿದ್ದಂತಹ ‘OPERATION TUNDERBOLT  ಬಗ್ಗೆ ಎಲ್ಲರಿಗೂತಿಳಿದಿದೆ, ಆದರೆ ಅದರ ಮಾಸ್ಟರ್ ಮೈಂಡ್ ಹದ್ದಾದ್ ಮಾತ್ರ ಇನ್ನೂ ಬದುಕಿದ್ದ. ಆತನನ್ನು ಸಾಯಿಸುವುದು ಸುಲಭದ ಕೆಲಸವಾಗಿರಲಿಲ್ಲ, ಅಷ್ಟು ಸುಲಭವಾಗಿ ಯಾರ ಕೈಗೂ ಸಿಗದ ಆತನ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ಕಾರ್ಯಕ್ಕೆ ಮೊಸ್ಸಾದ್ ಸಿದ್ಧವಾಯಿತು. ಆತನ ದೌರ್ಬಲ್ಯಗಳ ಬಗ್ಗೆ ಮಾಹಿತಿ ಯನ್ನು ಕಲೆ ಹಾಕಲಾಯಿತು. ಆತನ ಪ್ರಮುಖ ದೌರ್ಬಲ್ಯವೊಂದನ್ನು ಮೊಸ್ಸಾದ್ ಏಜೆಂಟ್‌ಗಳು ಕಲೆಹಾಕಿದ್ದರು. ಆತನಿಗೆ ಯಾವಾಗಲೂ ಚಾಕಲೇಟ್ ತಿನ್ನುವ ಹುಚ್ಚು. ಆತ ಊಟ ಬಿಟ್ಟು ಬದುಕಬಲ್ಲ, ಆದರೆ ಚಾಕಲೇಟ್ ತಿನ್ನದೇ ಇರಲಾರ.

ಆತನ ದೌರ್ಬಲ್ಯವನ್ನರಿತ ಮೊಸ್ಸಾದ್ ಆತನಿಗೆ ತುಂಬಾ ಹತ್ತಿರವಾಗಿದ್ದಂತಹ ಸ್ನೇಹಿತನ ಮೂಲಕ ದೊಡ್ಡದೊಂದು ಚಾಕಲೇಟ್ ಪೆಟ್ಟಿಗೆಯನ್ನು ಕಳುಹಿಸಿದರು. ಕಳುಹಿಸುವ ಮುನ್ನ ಆ ಚಾಕಲೇಟ್ ಒಳಗೆ ದೇಹದ ಅಂಗಾಂಗಗಳನ್ನು ನಿಧಾನವಾಗಿ ನಿಷ್ಟ್ರಿಯ ಗೊಳಿಸುವ ವಿಷವನ್ನು ಹಾಕಲಾಗಿತ್ತು, ಇದನ್ನರಿಯದ ಉಗ್ರ, ಮೊಸ್ಸಾದ್ ಕಳುಹಿಸಿದಂತಹ ಅಷ್ಟೂ ಚಾಕಲೇಟ್ ತಿಂದ. ದಿನ ಕಳೆದಂತೆ ಆತನಿಗೆ ಆರೋಗ್ಯದ ಸಮಸ್ಯೆ ಶುರುವಾಯಿತು. ನೋಡ ನೋಡುತ್ತಲೇ ಹದ್ದಾದ್
ನ ತೂಕ ಇಳಿಯ ತೊಡಗಿತು, ಅಸ್ತಿ ಪಂಜರದಂತೆ ಆತನ ದೇಹ ದುರ್ಬಲವಾಯಿತು. ಆತನನ್ನುಪರಿಶೀಲಿಸಿದ ವೈದ್ಯರು ಆತನ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗಿದೆಯೆಂದು ಹೇಳಿದರು, ಯಾರಿಗೂ ಸಹ ಆತನಿಗೆ ಏನಾಗುತ್ತಿದೆಯೆಂಬುದು ಗೊತ್ತಾಗಲೇ ಇಲ್ಲ.

ದಿನ ಕಳೆದಂತೆ ಆತನ ಆರೋಗ್ಯ ಮತ್ತಷ್ಟು ಕ್ಷೀಣಿಸ ತೊಡಗಿತ್ತು. ನಂತರ ಆತನನ್ನು ಪ್ಯಾಲೆಸ್ತೇನಿಗಳಿಗೆ ಬೆಂಬಲಿಸುತ್ತಿದಂತಹ ಪೂರ್ವ ಜರ್ಮನಿ ದೇಶಕ್ಕೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ಆತನನ್ನು ಉಳಿಸಲು ಸಾಧ್ಯವಾಗಲಿಲ್ಲ. ಮಾರ್ಚ್30-1978 ರಂದು ಹದ್ದಾದ್ ಸತ್ತುಹೋದ. ಈತನ ಸಾವಿಗೆ ಇರಾಕ್
ಕಾರಣ, ಅವರೇ ವಿಷ ಪ್ರಾಷನ ಮಾಡಿ ಸಾಯಿಸಿದ್ದಾರೆಂದು ಹಲವರು ಮಾತನಾಡಿಕೊಂಡರು, ಮೋಸ್ಸಾದ್ ಹೆಸರು ಮಾತ್ರ ಎಲ್ಲಿಯೂ ಕೇಳಿಬರಲಿಲ್ಲ. ಈತ ಸತ್ತ 30 ವರ್ಷಗಳ ನಂತರ ಇಸ್ರೇಲ್‌ನ ಕೆಲವು ಬರಹಗಾರರು ಕಾರ್ಯಾಚರಣೆಯ ವಿಷಯವನ್ನು ಬಹಿರಂಗ ಪಡಿಸಿದ್ದರು, ಆದರೆ ಯಾರಿಗೂ ಸಹ ಅದನ್ನುಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ದೇಶ ರಕ್ಷಣೆಗಾಗಿ ಇಸ್ರೇಲಿನ ಮೊಸ್ಸಾದ್ ನಡೆಸಿರುವ ಒಂದೊಂದು ಕಾರ್ಯಾಚರಣೆಯೂ ರೋಮಾಂಚನಕಾರಿಯಾಗಿದೆ.