Saturday, 21st September 2024

ಎಲ್ಲ ಸರಿ ಇದ್ದೂ ಸೋಲಾದ್ರೆ ಯಡವಟ್ಟಾಗಿದ್ದೆಲ್ಲಿ ?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಇತ್ತೀಚೆಗೆ ನಾನು ಪ್ರಕಾಶ ಅಯ್ಯರ್ ಬರೆದ How Come no one told me that? : Life lessons, Practical advice and Timeless wisdom for success ಎಂಬ ಪುಸ್ತಕ ಓದುತ್ತಿದ್ದೆ.

ಪುಸ್ತಕದ ಶೀರ್ಷಿಕೆ ನೋಡಿಯೇ, ಆ ಕೃತಿಯನ್ನು ಓದಬೇಕು ಎಂದೆನಿಸಿತು. ಕೆಲವು ಸಲ ನಮಗೆ ಈ ಮೊದಲು ಈ ಸಂಗತಿಯನ್ನು ಯಾರೂ ಹೇಳಿಯೇ ಇಲ್ಲವಲ್ಲ ಎಂದು ಅನಿಸುವುದುಂಟು. ಕಾರಣ ವಿಷಯ ಅಷ್ಟೊಂದು ಅನೂಹ್ಯ ವಾಗಿರುತ್ತದೆ ಮತ್ತು ಅದಕ್ಕಿಂತ ಮೊದಲು ಯಾರ ಬಾಯಿಂದಲೂ ನಾವು ಅದನ್ನು ಕೇಳಿರುವು ದಿಲ್ಲ. ಹಾಗಂತ ಆ ವಿಷಯ ಹೇಳಿಕೊಳ್ಳುವಂಥ ಮಹಾನ್ ಸಂಗತಿಯಾಗಿರುವುದಿಲ್ಲ. ಆದರೂ ನಮಗೆ ಗೊತ್ತಿರುವುದಿಲ್ಲ. ಪ್ರಕಾಶ ಅಯ್ಯರ್ ಇಂಥ ಅನೇಕ ವಿಷಯಗಳನ್ನು ಈ ಕೃತಿಯಲ್ಲಿ ಹೇಳಿದ್ದಾರೆ. ದೈನಂದಿನ ಜೀವನದಲ್ಲಿ ನಮ್ಮ ಕಣ್ಮುಂದಿನ ಪ್ರಸಂಗಗಳನ್ನೇ ಇಟ್ಟುಕೊಂಡು, ಬದುಕಿನ ಪಾಠವನ್ನು ಕಟ್ಟಿಕೊಡು ವುದು ಅವರ ವಿಶೇಷ.

ಕೆಲವು ವರ್ಷಗಳ ಹಿಂದೆ ಹಂಗೇರಿಯ ನಯನ ಮನೋಹರ ಲೇಕ್ ಬಲಟೋನ್ ನಲ್ಲಿ ಚಿಕ್ಕ ಹಡಗಿನಲ್ಲಿ ವಿಹಾರ ಹೋದ ಒಂದು ಪ್ರಸಂಗವನ್ನು ಅವರು ಬರೆದಿzರೆ. ಆ ಹಡಗಿನ ಕ್ಯಾಪ್ಟನ್ ಜತೆ ಮಾತಾಡದಿದ್ದರೆ, ಇದು ಹತ್ತರಲ್ಲಿ ಹನ್ನೊಂದನೇ ಪ್ರಯಾಣವಾಗುತ್ತಿತ್ತೇನೋ. ಅಯ್ಯರ್ ಅವರು ಆ ಸರೋವರದ ಮಧ್ಯಭಾಗ ದಲ್ಲಿದ್ದರು. ತಿಳಿ ನೀಲಿ ಬಣ್ಣದ ನೀರು ಶಾಂತವಾಗಿತ್ತು. ಆ ಹಡಗಿನ ಕ್ಯಾಪ್ಟನ್ ಸ್ನೇಹ ಪ್ರಿಯನಾಗಿದ್ದ. ಹೀಗಾಗಿ ಸಹ ಪ್ರಯಾಣಿಕರೆಲ್ಲ ಕ್ಯಾಪ್ಟನ್ ಗೆ ಬಹುಬೇಗ ಆಪ್ತರಾದರು. ಅಲ್ಲಿದ್ದವರೆಲ್ಲ ಅವನೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಕ್ಯಾಪ್ಟನ್ ಅಯ್ಯರ್ ಅವರನ್ನು ಕರೆದು, ತನ್ನ ಪಕ್ಕದಲ್ಲಿಯೇ ನಿಂತುಕೊಳ್ಳುವಂತೆ ಹೇಳಿದ. ಅಷ್ಟೇ ಅಲ್ಲ, ಆ ಹಡಗಿನ ಸ್ಟಿಯರಿಂಗ್ ವೀಲ್‌ನ್ನು ಹಿಡಿದುಕೊಳ್ಳುವಂತೆ ಹೇಳಿದ.

ಸಾಮಾನ್ಯವಾಗಿ ಎಲ್ಲರಿಗೂ ಅಂಥ ಒಂದು ಸಾಹಸ ಮಾಡಬೇಕು ಎಂಬ ಮನಸಿರುತ್ತದೆ. ಆದರೆ ಕ್ಯಾಪ್ಟನ್ ಯಾರನ್ನೂ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಆದರೆ ಆ ಕ್ಯಾಪ್ಟನ್ ಹಾಗಿರಲಿಲ್ಲ. ಎಲ್ಲರೊಂದಿಗೆ ಸಲೀಸಾಗಿ, ಪ್ರೀತಿಯಿಂದ ಬೆರೆಯುತ್ತಿದ್ದ. ಆತ ಅಯ್ಯರ್‌ಗೆ ಹಡಗನ್ನು ‘ಎಡಕ್ಕೆ ತಿರುಗಿಸಿ’ ಎಂದು ಹೇಳಿದ. ಆತ ಹೇಳಿದಂತೆ ಅವರು ಸ್ಟಿಯರಿಂಗ್‌ನ್ನು ಎಡಕ್ಕೆ ತಿರುಗಿಸಿದರು. ಬಹಳ ಸಲೀಸಾಗಿ ಹಾಗೆ ಮಾಡಿದರು. ಅವರು ಎಡಕ್ಕೆ ತಿರುಗಿಸಿದರೂ ಹಡಗು ಮಾತ್ರ ನೇರವಾಗಿ ಹೋಗುತ್ತಿತ್ತು. ಅದನ್ನು ಗಮನಿಸಿದ ಅಯ್ಯರ್, ಮತ್ತೊಮ್ಮೆ ಹಡಗಿನ ವೀಲ್‌ನ್ನು ಎಡಕ್ಕೆ ತಿರುಗಿಸಿದರು. ಆದರೂ ಏನೂ ಆಗಲಿಲ್ಲ. ಹಡಗು ನೇರವಾಗಿಯೇ ಚಲಿಸುತ್ತಿತ್ತು. ಅದು ಎಡಕ್ಕೆ ಸ್ವಲ್ಪವೂ ತಿರುಗಲಿಲ್ಲ. ಅಯ್ಯರ್ ಮತ್ತೊಮ್ಮೆ ಸ್ಟಿಯರಿಂಗ್‌ನ್ನು ಎಡಕ್ಕೆ ಚಲಿಸಿದ. ಏನೂ ಆಗಲಿಲ್ಲ.

ಅಷ್ಟಕ್ಕೇ ಸಮಾಧಾನವಾಗದ ಅಯ್ಯರ್, ಇನ್ನೊಮ್ಮೆ ಎಡಕ್ಕೆ ತಿರುಗಿಸಿದರು. ಆಗ ಕ್ಯಾಪ್ಟನ್, ಸ್ವಲ್ಪ ತಡೆಯಿರಿ, ಅವಸರ ಮಾಡಬೇಡಿ. ಅಷ್ಟೆ ಎಡಕ್ಕೆ ತಿರುಗಿಸ ಬಾರದು. ಒಂದು ಸಲ ಎಡಕ್ಕೆ ತಿರುಗಿಸಿ, ನಂತರ ಫಲಿತಾಂಶಕ್ಕೆ ಕಾಯಬೇಕು’ ಎಂದ. ಆಗ ಅಯ್ಯರ್‌ಗೆ ಅನಿಸಿತು, ದೊಡ್ಡ ಹಡಗುಗಳನ್ನು ತಿರುಗಿಸುವುದು ಅಷ್ಟು ಸುಲಭವಲ್ಲ ಮತ್ತು ಅದಕ್ಕೆ ಸ್ವಲ್ಪ ಸಮಯ ಬೇಕು. ಅಯ್ಯರ್ ಕೆಲಕಾಲ ಮಂಕಾಗಿ ನಿಂತಾಗ, ಕ್ಯಾಪ್ಟನ್ ಹೇಳಿದ – ನೀವು ಪದೇ ಪದೆ ಸ್ಟಿಯರಿಂಗ್‌ನ್ನು ತಿರುಗಿಸಿ ದರೆ, ಹಡಗು ಯದ್ವಾತದ್ವಾ ಚಲಿಸಬಹುದು. ಒಂದು ಸಲ ತಿರುಗಿಸಿದಾಗ, ಅದು ತಿರುಗಿದೆ ಎಂದು ಅನಿಸುವುದಿಲ್ಲ. ಆಗ ನೀವು ಮತ್ತೊಮ್ಮೆ  ತಿರುಗಿಸುತ್ತೀರಿ. ಆಗಲೂ ಏನೂ ಆಗುವುದಿಲ್ಲ. ಆಗ ನೀವು ಮೊದಲಿಗಿಂತ ಜಾಸ್ತಿ ತಿರುಗಿಸುತ್ತೀರಿ. ಆಗ ಹಡಗು ಅಡ್ಡಾದಿಡ್ಡಿ ಚಲಿಸಲು ಆರಂಭಿಸುತ್ತದೆ. ಅದರ ಬದಲು, ಮೊದಲು ಎಡಕ್ಕೆ ತಿರುಗಿಸಬೇಕು, ನಂತರ ಸ್ವಲ್ಪ ಹೊತ್ತು ಕಾಯಬೇಕು. ನೀವು ಕಾದಿದ್ದೇ ಆದರೆ, ಹಡಗು ಎಡಕ್ಕೆ ತಿರುಗಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಆದ್ದರಿಂದ ಒಂದು ಮಾತನ್ನು ಹೇಳಲು ಬಯಸುತ್ತೇನೆ. ಅದೇನೆಂದರೆ, ‘Turn a little. Wait for the results’  ಇದು ನಿಜಕ್ಕೂ ಒಂದು ಅದ್ಭುತ ಸಲಹೆ. ಇದು ಅತ್ಯಂತ ಚಿಕ್ಕ ಸಲಹೆ. ಆದರೆ ಅದರಲ್ಲಿ ಮಹಾ ಸಂದೇಶ ಅಡಗಿದೆ.

ಇದು ಹಡಗಿಗೆ ಮಾತ್ರ ಅಲ್ಲ, ನಮ್ಮ ಜೀವನಕ್ಕೂ ಅನ್ವಯ, ನಿತ್ಯ ಜೀವನಕ್ಕೂ ಅನ್ವಯ. ನೀವು ಏನು ಮಾಡಬೇಕೋ ಅದನ್ನು ಮಾಡಿ, ನಂತರ -ಲಿತಾಂಶಕ್ಕಾಗಿ ಕಾಯಿರಿ. ಆದರೆ ಬಹುತೇಕ ಎಲ್ಲರೂ ಮಾಡುವುದೇನೆಂದರೆ, ಹಡಗಿನ ಸ್ಟಿಯರಿಂಗ್ ತಿರುಗಿಸಿದಂತೆ, ತಕ್ಷಣ ತಿರುಗಿಸುತ್ತಾರೆ. ಆದರೆ ತಿರುಗಿದೆಯೋ, ಇಲ್ಲವೋ ಎಂಬುದನ್ನು ಸಹ ನೋಡುವುದಿಲ್ಲ. ಅದರ ಬದಲು, ಪ್ರತಿಯೊಂದು ಕ್ರಿಯೆಯ ಬಳಿಕ ಸ್ವಲ್ಪ ಕಾದು, ನಂತರ ಮುಂದಿನ ಹೆಜ್ಜೆಯಿಟ್ಟರೆ, ನಿಶ್ಚಿತ ಫಲ ಸಿಗುತ್ತದೆ. ಆದರೆ ಎಲ್ಲರಿಗೂ ತಕ್ಷಣದ ರಿಸಲ್ಟ ಬೇಕು. ಆದರೆ ಕೆಲವೊಮ್ಮೆ ರಿಸಲ್ಟ ಅಷ್ಟು ಬೇಗ ಬರುವುದಿಲ್ಲ. ಆಗ ತಾವು ಸೋತು ಹೋದೆವು ಎಂದು ಭಾವಿಸುತ್ತಾರೆ. ಇದು ಒಂಥರಾ ಔಟ್ ಆಗದೇ ಇದ್ದರೂ ಪೆವಿಲಿಯನ್ ಕಡೆ ಹೊರಟಂತೆ.

ಅಸಲಿಗೆ ಅಂಪೈರ್ ಔಟ್ ಎಂದು ತೀರ್ಪನ್ನೇ ನೀಡಿರುವುದಿಲ್ಲ. ದೊಡ್ಡ ದೊಡ್ಡ ಬಿಜಿನೆಸ್ ಸಂಸ್ಥೆಗಳು, ಪ್ರತಿಷ್ಠಿತ ಕಂಪನಿಗಳು ಬಹಳ ನಿರೀಕ್ಷೆಯಿಂದ ಅದ್ಭುತವಾದ ಪ್ರಾಡಕ್ಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ನಿಜಕ್ಕೂ ಆ ಪ್ರಾಡಕ್ಟಗಳು ಚೆನ್ನಾಗಿರುತ್ತವೆ. ಅವರು ಬಿಡುಗಡೆ ಮಾಡುವಾಗ ಒಳ್ಳೆಯ ಕಾರ್ಯತಂತ್ರ ರೂಪಿಸಿರುತ್ತಾರೆ. ಆದರೂ ಅದು ಮಾರುಕಟ್ಟೆಯಲ್ಲಿ ಬಿದ್ದು ಹೋಗುತ್ತದೆ. ನಿರೀಕ್ಷಿತಮಟ್ಟ ತಲುಪದೇ ವಿಫಲವಾಗುತ್ತದೆ. ಮಾರ್ಕೆಟಿಂಗ್ ತಂಡಕ್ಕೆ ತಕ್ಷಣ ಟಾರ್ಗೆಟ್ ತಲುಪುವ ತರಾತುರಿ. ಕಾರ್ಯಸಾಧುವಲ್ಲದ ನಿರೀಕ್ಷೆಗಳನ್ನು ಕಂಪನಿಯ ಮುಖ್ಯಸ್ಥರೂ ನಿರೀಕ್ಷಿಸುತ್ತಾರೆ.

ಬಿಡುಗಡೆಯಾಗುತ್ತಿದ್ದಂತೆ, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಬರಬೇಕು ಎಂದು ಬಯಸುತ್ತಾರೆ. ಅದು ಹಾಗೆ ಆಗುವುದಿಲ್ಲ. ಸಹಜ ಬೆಳವಣಿಗೆ ಮೂಲಕವೇ ಹಂತ ಹಂತ ದಾಟಬೇಕು. ಆದರೆ ಆಡಳಿತ ಮಂಡಳಿ ಕಾಯಲು ಸಿದ್ಧವಿರು ವುದಿಲ್ಲ. ದಿಢೀರ್ ಯಶಸ್ಸು ಬೇಕು ಎಂಬ ಹಪಾಹಪಿ. ಆಗ ಮಾರಾಟವನ್ನು ಉತ್ತೇಜಿ ಸಲು ಬೆಲೆ ಇಳಿಸಲು ಮುಂದಾಗುತ್ತಾರೆ. ಯಾವುದೇ ವಿವೇಚನೆ ಇಲ್ಲದೇ ಡಿಸ್ಕೌಂಟ್ ಕೊಡುತ್ತಾರೆ. ನಾವು ಮೊದಲು ಸರಿಯಾಗಿಯೇ ಹೆಜ್ಜೆಯಿಡುತ್ತೇವೆ, ಎಲ್ಲವೂ ಸರಿಯಾಗಿಯೇ ಶುರುವಾಗಿರುತ್ತವೆ. ಆದರೆ ನಿರೀಕ್ಷಿತ ಫಲಿತಾಂಶ ಬರದಿದ್ದಾಗ, ನಾವು ಸಹನೆ ಕಳೆದುಕೊಳ್ಳುತ್ತೇವೆ. ಆಗ ನಮ್ಮಿಂದ ನಮಗರಿವಿಲ್ಲದೆಯೇ ತಪ್ಪುಗಳಾಗುತ್ತವೆ. ತಕ್ಷಣ ಪರಿಸ್ಥಿತಿ ನಮ್ಮ ಕೈಮೀರಿ ಹೋಗುತ್ತದೆ.

ಆರಂಭಿಕ ಯಶಸ್ಸು ದೂರವಾಗುತ್ತಿದೆ ಎಂದು ಅನಿಸುತ್ತಿದ್ದಂತೆ, ನಮ್ಮಿಂದ ಮತ್ತಷ್ಟು ಪ್ರಮಾದಗಳಾಗುತ್ತವೆ. ಕೊನೆಗೆ ಕೈಚೆಲ್ಲಿಬಿಡುತ್ತೇವೆ. ಇದು ಬಹುತೇಕರ ಹಣೆಬರಹ. ಇತ್ತೀಚೆಗೆ ಎಡ್ ಟೆಕ್ ಎಂಬ ಪ್ರಸಿದ್ಧ ಸಂಸ್ಥೆಯ ಮುಖ್ಯಸ್ಥರೊಬ್ಬರು, ತಮ್ಮ ಸಂದರ್ಶನದಲ್ಲಿ ಸ್ಟಾರ್ಟ್ ಅಪ್   ಳು ಯಾಕೆ ಸೋಲುತ್ತವೆ, ಲಗಾಟಿ ಹೊಡೆಯುತ್ತವೆ ಎಂಬ ಬಗ್ಗೆ ವಿವರಿಸಿದ್ದರು. ನೂರರಲ್ಲಿ ತೊಂಬತ್ತು ಸ್ಟಾರ್ಟ್ ಅಪ್ ಗಳ ಆಶಯ, ಕಾರ್ಯತಂತ್ರ, ಉದ್ದೇಶ, ಯೋಜನೆ, ಆಲೋಚನೆ ಚೆನ್ನಾಗಿಯೇ ಇರುತ್ತವೆ. ಅವು ತಮ್ಮ ಕಾರ್ಯಯೋಜನೆಯನ್ನೂ ಚೆನ್ನಾಗಿಯೇ ಜಾರಿಗೊಳಿಸಿರುತ್ತವೆ. ಆದರೂ ಅವು ಯಾಕೆ ಸೋಲುತ್ತವೆ ಅಂದ್ರೆ, ತಾವು ಯಶಸ್ವಿಯಾಗಲು ಎಷ್ಟು ಸಮಯ ಬೇಕು ಎಂಬುದನ್ನು ಅವು ನಿರ್ಧರಿಸಿರುವುದಿಲ್ಲ. ಬಂಡವಾಳ ಹೂಡಿದವರಿಗೆ ಸಂಯಮ ಇರುವುದಿಲ್ಲ. ಅವರು ತಕ್ಷಣ ರಿಟರ್ನ್ಸ್ ಬಯಸುತ್ತಾರೆ.
ಇದರಿಂದ ಟಾರ್ಗೆಟ್ ತಪ್ಪಿಹೋಗುತ್ತವೆ. ಅದ್ಭುತ ಐಡಿಯಾ ಮತ್ತು ಕರಾರುವಾಕ್ಕು ಅನುಷ್ಠಾನ ಹಳ್ಳ ಹಿಡಿಯುತ್ತದೆ.

ಎಲ್ಲರಿಗೂ ದಿಢೀರ್ ಯಶಸ್ಸು ಬೇಕು. ನಿಮಗೆ ಯಶಸ್ಸು ಸಿಗಲು ಎಷ್ಟು ಸಮಯ ಬೇಕು ಎಂಬುದನ್ನು ಯಾರೂ ಲೆಕ್ಕ ಹಾಕುವುದಿಲ್ಲ. ಒಂದು ವೇಳೆ ನಿಮ್ಮ ಪ್ರಾಡಕ್ಟ್ ಯಶಸ್ವಿ ಯಾಗಲು ಎರಡು ವರ್ಷಗಳು ಬೇಕು ಅಂತ ಅನಿಸಿದರೆ, ಅದರ ಮೇಲೆ ಇನ್ನೂ ಒಂದು ವರ್ಷ ಸೇರಿಸಿ, ನಿಮ್ಮ ತಾಳ್ಮೆಯ ಮಟ್ಟವನ್ನು ಎತ್ತರಿಸಿಕೊಳ್ಳ ಬೇಕು. ಎಲ್ಲ ಬಂಡವಾಳ ಹೂಡಿಕೆ ದಾರರು ಎಷ್ಟು ಬೇಕಾದರೂ ಹಣವನ್ನು ತೊಡಗಿಸಲು ಸಿದ್ಧರಾಗಿರುತ್ತಾರೆ. ಆದರೆ ಅವರಲ್ಲಿ ಕೊರತೆಯಿರುವುದೆಂದರೆ ತಾಳ್ಮೆ. ಅದು ಹಣ ಕೊಟ್ಟರೆ ಸಿಗುವಂಥದ್ದಲ್ಲ. ಎಲ್ಲ ಬಂಡವಾಳ ಶಾಹಿಗಳ, ಉದ್ದಿಮೆದಾರರ ಸಮಸ್ಯೆಯಿರುವುದೇ ಇಲ್ಲಿ. ಎ ವ್ಯವಹಾರಕ್ಕೂ ಹಣವೊಂದೇ ಮುಖ್ಯ ಎಂದು
ಭಾವಿಸಿರುತ್ತಾರೆ. ಕೇಳಿದ್ದಕ್ಕಿಂತ, ಅಗತ್ಯಕ್ಕಿಂತ ಹೆಚ್ಚು ಹಣವನ್ನು ತೊಡಗಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಬೇಕಿರುವುದು ಹಣವೊಂದೇ ಅಲ್ಲ. ಮಾರುಕಟ್ಟೆಯ ನಿರೀಕ್ಷೆಯನ್ನು ನೋಡು ವ ಸಹನೆ ಬಹಳ ಮುಖ್ಯ.

ಇದರಿಂದ ತಂಡದ ಮೇಲೆ ಅನಗತ್ಯ ಒತ್ತಡ ಹೇರುತ್ತಾರೆ. ಸೇಲ್ಸ ಟೀಮ್ ಮುಖ್ಯಸ್ಥನ ಕತ್ತು ಹಿಚುಕುವ ರೀತಿಯಲ್ಲಿ ವರ್ತಿಸುತ್ತಾರೆ. ಆತ ಯಾವ ಕಾರಣ ನೀಡಿ ದರೂ, ಕುಂಟು ನೆಪ ಹೇಳುತ್ತಿದ್ದಾನೆ ಎಂದು ತಪ್ಪು ತಿಳಿಯುತ್ತಾರೆ. ಹಣ, ನಾಯಕತ್ವ, ಬುದ್ಧಿವಂತ ತಂಡ, ಅತ್ಯುತ್ತಮ ಪ್ರಾಡಕ್ಟ್ ಇವೆಲ್ಲ ಇದ್ದರೂ, ಸೋಲಾಗು ತ್ತದೆ. ನೀವು ದುಪ್ಪಟ್ಟು ನೀರು ಮತ್ತು ಗೊಬ್ಬರವನ್ನು ಕೊಟ್ಟ ಮಾತ್ರಕ್ಕೆ ಗಿಡ ಎರಡು ಪಟ್ಟು ಬೆಳೆಯುವುದಿಲ್ಲ. ಅದು ತನಗೆ ಬೆಳೆಯಲು ಎಷ್ಟು ಸಮಯ ಬೇಕೋ, ಅಷ್ಟೇ ಸಮಯವನ್ನು ತೆಗೆದುಕೊಳ್ಳುತ್ತದೆ.

ಕೆಲವು ವರ್ಷಗಳ ಹಿಂದೆ, ವಲ್ಡ ಸ್ಪೇಸ್ ಎಂಬ ಮ್ಯೂಸಿಕ್ ಇನ್ಸ್ಟ್ರುಮೆಂಟ್ ಮಾರುಕಟ್ಟೆಗೆ ಬಿಡುಗಡೆ ಯಾಯಿತು. ಇಂಟೆರ್‌ನೆಟ್ ಯುಗ ಆರಂಭವಾದ ಕಾಲ ವದು. ಒಂದು ಉಪಕರಣದಿಂದ ಸಾವಿರಾರು ರೇಡಿಯೋ ಸ್ಟೇಷನ್‌ಗಳಲ್ಲಿ ಮೂಡಿ ಬರುವ ಸಂಗೀತ ಕಾರ್ಯಕ್ರಮ ಗಳನ್ನು ಕೇಳಲು ಅವಕಾಶ ಮಾಡಿಕೊಡುವ ಒಂದು ಅದ್ಭುತ ಉಪಕರಣ ಅಥವಾ ವ್ಯವಸ್ಥೆ. ಆ ಕಾಲದಲ್ಲಿ ಅಂಥ ಒಂದು ಅವಕಾಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ನಮಗೆ ಬೇಕಾದ ಸಂಗೀತವನ್ನು ಕೇಳಲು ಪ್ರತ್ಯೇಕ ಸ್ಟೇಷನ್ ಹೊಂದುವುದೇ ಒಂದು ವಿಶೇಷವಾಗಿತ್ತು. ಆದರೆ ಆ ಉಪಕರಣ ಮಾರುಕಟ್ಟೆಯಲ್ಲಿ ಬಹು ಬೇಗ ಬಿದ್ದು ಹೋಯಿತು. ಈ ಉಪಕರಣ ಜನರಿಗೆ ಪರಿಚಯ ಆಗುತ್ತಿದ್ದಂತೆ, ಅದು ಇಷ್ಟವಾಗುವಂತಿದ್ದವು. ಆದರೂ ಆ ಉಪಕರಣ ಯಶಸ್ವಿಯಾಗಲಿಲ್ಲ.

ಕಾರಣ ವಲ್ಡ್ ಸ್ಪೇಸ್ ಯೋಜನೆಯಲ್ಲಿ ಹಣ ತೊಡಗಿಸಿದ ಬಂಡವಾಳದಾರರಿಗೆ ತಾಳ್ಮೆ ಇರಲಿಲ್ಲ. ಇಂಟೆರ್ ನೆಟ್ ಅಷ್ಟೊಂದು ಪರಿಚಯ ಇರದ ಆ ಕಾಲದಲ್ಲಿ ಆ ಉಪಕರಣ ಯಶಸ್ವಿಯಾಗಲು ಸಾಕಷ್ಟು ಸಮಯ ಬೇಕಿತ್ತು. ಆದರೆ ಬಂಡವಾಳ ಹೂಡಿದವರಿಗೆ ಅಷ್ಟು ಕಾಯುವ ಸಹನೆ ಇರಲಿಲ್ಲ. ಆ ಉಪಕರಣ ಬಂದಷ್ಟೇ ವೇಗವಾಗಿ ಕಣ್ಮರೆಯಾಯಿತು. ಮುಂದೆ ಯಾವಾಗಲಾದರೂ ನೀವು ಯಾವುದಾದರೂ ಒಳ್ಳೆಯ ಯೋಜನೆ ಕೈಗೆತ್ತಿಕೊಂಡಾಗ, ಹೊಸ ಬಿಜಿನೆಸ್ ಆರಂಭಿಸಿ ದಾಗ, ಅದು ಕೈಗೂಡಲಿಲ್ಲ ಅಂದಾಗ, ಆ ಕ್ಷಣದಲ್ಲಿ ಹಡಗಿನ ಕ್ಯಾಪ್ಟನ್ ಹೇಳಿದ ಮಾತನ್ನು ನೆನಪಿಸಿಕೊಳ್ಳಿ – & Turn a little .. Wait for the results. ಬಹುತೇಕ ಸಮಸ್ಯೆಗಳಿಗೆ ಈ ಪುಟ್ಟ ಮಾತಿನಲ್ಲಿ ಪರಿಹಾರ ಸಿಗುತ್ತದೆ.