Saturday, 21st September 2024

ಮಹಾಭಾರತವೆಂಬ ಲೋಕಶಿಕ್ಷಣ ಗ್ರಂಥ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನಾವೆಲ್ಲರೂ ಈಗಿನ ವೈಜ್ಞಾನಿಕ ಆಷ್ಕಾರಗಳನ್ನೇ ಮಹಾ ರೋಚಕ ಅದ್ಭುತ ಎಂದು ನಿರ್ಣಯಿಸಿ ಆಶ್ಚರ್ಯಗೊಳ್ಳುವಂತೆ, ಕೌತುಕ ಪಡುತ್ತೇವೆ. ಗೂಗಲ್ಲೇ ಪರಮಾದ್ಭುತವಾಗಿಬಿಟ್ಟಿದೆ. ಕೆಲವೊಮ್ಮೆ ಅದರ ಕಾರ್ಯಕ್ಷಮತೆ, ಮಾಹಿತಿ ವೇಗ ನಿಜಕ್ಕೂ ಅಚ್ಚರಿ.

ಈಗಿನ ಪೀಳಿಗೆಗೆ ಇದೇ ಅದ್ಭುತ ಎನಿಸುವುದೂ ನಿಜ. ಆದರೆ, ಅರವತ್ತರ ದಶಕದಲ್ಲಿ ಹುಟ್ಟಿದ ನನಗೆ ಇವು ಯಾವುವೂ ಕೌತುಕವೆನಿಸುತ್ತಿಲ್ಲ. ಹರಿದ ಪ್ಯಾಂಟನ್ನು ಹೊಲಿಸಿಕೊಂಡು ಬರುವುದು, ಶರ್ಟುಗಳಿಗೆ ಬಟನ್ ಹಚ್ಚಿಕೊಳ್ಳು ವುದು, ಮಾಹಿತಿಗಾಗಿ ಪುಸ್ತಕಗಳನ್ನು ಹುಡುಕುವುದು, ಬುಕ್ ಮಾರ್ಕ್‌ಗಳಾಗಿ ಅಂಚೆಯಲ್ಲಿ ಬಂದ 50 ಪೈಸೆ ಬಂಧುಗಳೋ, ಗೆಳೆಯರೋ ಬರೆದ ಅಂಚೆಕಾರ್ಡು ಸಂಗ್ರಹಿಸಿಡುವುದು, ಸಣ್ಣಪುಟ್ಟ ಗಾಯಗಳಿಗೆ, ಬಿರುಕುಗಳಿಗೆ ‘ಸೈಬಾಲ್’ ಹಚ್ಚುವುದು, ಹಳೆಯ ಯಾವುದೇ ಸಾಮಾನುಗಳನ್ನು ಎಸೆಯದೇ, ಇರಲಿ ಎಂದು ಮತ್ತೊಂದು ಕಡೆ ತೆಗೆದಿಟ್ಟು ಮನೆಯ ಇತರೇ ಜನರ ಜತೆ ಬೈಸಿಕೊಳ್ಳುವುದು.

ಖಾಲಿಯಾದ ಔಷಧದ ಬಾಟಲ್, ಮಾತ್ರೆ ಡಬ್ಬಿಗಳನ್ನು ಬೇರೆ ಏನಾದರೂ ಇಡಲು ಮತ್ತೆ ಇಟ್ಟುಕೊಳ್ಳುವುದು.. ಅಷ್ಟೇ ಏಕೆ, ಹಿಂದೆ-ಮುಂದೆ-ಕೆಳಗೆ ಹರಿದ ಡ್ರಾಯರ್‌ನ ಏಲಾಸ್ಟಿಕ್ ಗಟ್ಟಿಯಾದರೆ, ತಲೆ ನೋವಾದರೆ ತಲೆಗೆ ಬಿಗಿಯಾಗಿ ಬಿಗಿದುಕೊಳ್ಳಲು ಬರುತ್ತದೆ ಎಂದು ತೆಗೆದಿಡುವುದು, ಬನಿ ಯನ್ನುಗಳ ಹರಿದ ಭಾಗ ಕತ್ತರಿಸಿ ಎಸೆದು, ಇನ್ನು ಗಟ್ಟಿಯಿರುವ ಭಾಗದ ಬಟ್ಟೆಯನ್ನು ಕನ್ನಡಿ, ಕನ್ನಡಕದ ಗ್ಲಾಸ್, ಫೋಟೊ ಗಳನ್ನು ಒರೆಸಲು ಬಳಸುವುದು ಹೀಗೆ ನನ್ನ ‘ಕಸದಿಂದ ರಸ’ ಹೊರಡಿಸುವ ಕಲೆಗೆ ನಾನೇ ಬೆನ್ನು ತಟ್ಟಿಕೊಳ್ಳಬೇಕಾಗಲಿ, ಉಳಿದವರಿಂದ ‘ಜಿಪುಣ, ಬಾಲ್ಯದ ಬಡ ತನ, ದಾರಿದ್ರ್ಯ ಹೋದ ಜನ್ಮದಲ್ಲಿ ತಿಪ್ಪೆ ಆಯುತ್ತಿದ್ದೆನೋ ಏನೋ?’ ಎಂಬ ಟೀಕೆಗಳನ್ನು ಕಟ್ಟಿ ಕೊಳ್ಳುವ ಬೆನ್ನಿನ ಹಿಂದಿನ ಇತರರ ನುಡಿಗಳನ್ನು ಕೇಳಬೇಕಾಗಿರೋ ದುರ್ದೈವ ನನ್ನದು.

ಅದೇನೋ ನನ್ನ ಬಳಿ ಬಂದ ವಸ್ತು, ವ್ಯಕ್ತಿ, ಘಟನೆ, ಭಾವನೆ ಗಳನ್ನು ನಾನು ಸುಲಭವಾಗಿ ಬಿಡುವವನಲ್ಲ. ಶಿಶುಪಾಲನ ನೂರು ಅಪರಾಧಗಳನ್ನು ಕ್ಷಮಿಸಿದ ಶ್ರೀಕೃಷ್ಣನಂತೆ ಕ್ಷಮಿಸಿ, ಕ್ಷಮಿಸಿ ಹತ್ತಿರ ಕರೆದುಕೊಳ್ಳುತ್ತೇನೆ. ಅವರು ಮತ್ತೆ ಮತ್ತೆ ತಮ್ಮ ಸ್ವಭಾವ, ಜನನ ಬುದ್ಧಿ ತೋರಿಸಿ ಅವರು ನುಣುಚಿಕೊಳ್ಳುತ್ತಿರುತ್ತಾರೆ. ಇದು ‘ಪುನರಪಿ ಹಿಡಿಯುವುದಂ, ಪುನರಪಿ ಅವರು ಬಿಡುವುದಂ’ ಸೂತ್ರವೇ ಆಗಿಹೋಗಿದೆ. ಹಳೆಯದೆಲ್ಲವೂ ಹೊಲ್ಲ, ಹಾಲು ಬೆಂಕಿಗೆ ಎಲ್ಲ ಎಂಬ ಸೂತ್ರ ನನ್ನದಲ್ಲ, ಖಾಲಿಯಾದ ಬಾಲ್ ಪೆನ್ ರೀಫೀಲ್‌ಗಳನ್ನು ಒಂದೆಡೆ ರಬ್ಬರ್ ಬ್ಯಾಂಡ್ ಹಾಕಿ ಇಟ್ಟಿರುವವನು ನಾನು. ಇದೆಲ್ಲ ಏಕೆ ಹೇಳುತ್ತಿದ್ದೇನೆಂದರೆ, ಈಗಿನವರು ನಾಳೆ ಏನು? ಎಂದು ಕೇಳುತ್ತಿದ್ದರೆ, ನಾನು ಹಿಂದಿ ನವರು ಯಾರು? ಹೇಗಿದ್ದರು? ಎಂಬುದರ ಕುತೂಹಲವೇ ಜಾಸ್ತಿ.

ಪೂರ್ವಜನ್ಮದ ನಮ್ಮ ನಂಟು, ಸಂಪರ್ಕ, ಋಣಾನುಬಂಧ ಇರದೇ ಇಂದಿನ ಯಾರೂ, ಯಾವ ಘಟನೆಯೂ ಸುಳಿಯುತ್ತಿರಲಿಲ್ಲ ಎಂದು ಬಲವಾಗಿ ನಂಬಿದವನು ನಾನು. ಎಪ್ಪತ್ತರ ದಶಕದಲ್ಲೆ ಭೈರಪ್ಪನವರ ‘ನಾಯಿನೆರಳು’ ಓದಿದ ಮೇಲಂತೂ ‘ಪುನರಪಿ ಜನನಂ, ಪುನರಪಿ ಮರಣಂ’ ಎಂಬ ಸೂತ್ರವನ್ನ ಒಪ್ಪಿದವನು. ಎಡ್ಗರ್ ಕೇಸಿಯವರ ಬಗ್ಗೆ ‘ಬದುಕಲು ಕಲಿಯಿರಿ’ ಪುಸ್ತಕದಲ್ಲಿ ಓದಿದ ಮೇಲಂತೂ ಕರ್ಮಸಿದ್ಧಾಂತವನ್ನು ನಂಬಿದವನು, ಪುನರ್ಜನ್ಮ ಇತ್ತು, ಮುಂದೂ ಇದೆ ಎಂದು ಭಾವಿಸುವವನು ನಾನು. ಪೂರಕವಾಗಿ ಮೊನ್ನೆ, ಶ್ರೀಮನ್ ಮಧ್ವಾಚಾರ್ಯರ ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯ ಎಂಬ ನಾಲ್ಕು ಸಂಪುಟಗಳ ಗ್ರಂಥ ಗಳನ್ನು ಎಂದಿನಂತೆಯೇ ಹುಬ್ಬಳ್ಳಿ ಸಾಹಿತ್ಯ ಭಂಡಾರದ ಶ್ರೀಸುಬ್ರಹ್ಮಣ್ಯ ಕಳಿಸಿಕೊಟ್ಟರು, ಓದುತ್ತ ಹೋದಂತೆ, ಜಗತ್ತಿನ ಸರ್ವ ಸಮಸ್ಯೆಗಳ ಅದರ ನಿವಾರಣೋ ಪಾಯದ ಸಾರ ಸಂಗ್ರಹ ಗ್ರಂಥಗಳಿವು ಎನಿಸಿಬಿಡುತ್ತದೆ.

ಇದೊಂದು ಪುರಾಣ, ಕಟ್ಟಿದ ಕಥೆಯಲ್ಲ, ಇದೊಂದು ಮನಃಶಾಸ್ತ್ರ.
ನಿರ್ಣಯಃ ಸರ್ವಶಾಸಾಣಾಂ ಭಾರತಂ ಪರಿಕೀರ್ತಿತಂ |
ಭಾರತಂ ಸರ್ವ ವೇದಾಶ್ಚ ತುಲಾ ಮಾರೋಪಿತಾಃ ಪುರಾ
ದೇವೈರ್ಬ್ರಹ್ಮಾದಿಭಿಃ ಸರ್ವೈಋಬಿಶ್ಚ ಸಮನ್ವಿತೈಃ |
ವ್ಯಾಸಸ್ಯೈ ವಾಜ್ಞಯೂ ತತ್ರ ತ್ವತ್ಸರಿತ್ಸದ ಭಾರತಮ್ ||
(ಸರ್ವಶಾಸಗಳಿಗೂ ಭಾರತ ಅರ್ಥ ನಿರ್ಣಾಯಕವೆಂದು ಪುರಾಣಗಳೇ ಹೇಳುತ್ತಿವೆ. ಹಿಂದೆ ಶ್ರೀ ವ್ಯಾಸರ ಆದೇಶದಂತೆ ಬ್ರಹ್ಮಾದಿ ದೇವತೆಗಳು, ಋಷಿಗಳೆಲ್ಲ ಸೇರಿ ತಕ್ಕಡಿಯಲ್ಲಿಟ್ಟು ತೂಗಿದಾಗ ಮಹಾಭಾರತವೇ ಮಿಗಿಲೆನಿಸಿತು) ತೂಗುಕೆ ಎಂದರೆ ತಕ್ಕಡಿಯಲ್ಲಿ ರದ್ದಿ ಪೇಪರ್ ತೂಗಿದಂಂತಲ್ಲ, ಎಲ್ಲ ಪುರಾಣ ಶಾಸ್ತ್ರಗಳ ಲೋಪದೋಷ, ಸಂದೇಹಗಳಿಗೆ ಮಹಾಭಾರತ ಉತ್ತರಕೊಟ್ಟು ಮೇಲೇರಿತು ಎಂಬರ್ಥ.

‘ಭಾರತಂ ಸರ್ವ ವೇದಾಶ್ಚ’ ಎಂಬ ಖ್ಯಾತಿಗೆ ಒಳಗಾಗಿದೆ. ಟಿವಿ ಧಾರಾವಾಹಿಗಳಲ್ಲಿನ ಮಹಾಭಾರತ ಕುರುಕು ತಿಂಡಿ ತಿಂದಂತೆ, ಆದರೆ ಈ ಮಹಾಭಾರತ ತಾತ್ಪರ್ಯ ನಿರ್ಣಯ ಎಂಬುದು ಹಸಿದವನು ಎಲೆ ಹಾಕಿಕೊಂಡು ಹೊಟ್ಟೆ ತುಂಬಾ ಉಂಬ ಔತಣದ ಊಟ, ತೇಗು ಬರುವಂಥ, ಇನ್ನು ಏನೂ ಬೇಕಿಲ್ಲ ಎಂಬ ಭಾವ ಉದಿಸುವ ಮಾತಿಗಳ ಆಗರ. ಈಗಲೂ ಮಠಾಧೀಶರುಗಳು ತಮಗೆ ಬಂದ ಸಂದೇಹ ಗಳಿಗಾಗಿ ವ್ಯಕ್ತಿಗಳ ನ್ಯಾಯ, ಅಭಿಪ್ರಾಯ, ಜ್ಯೋತಿಷ್ಯಗಳನ್ನು
ಕೇಳದೇ ಈ ಗ್ರಂಥವನ್ನೇ ಪ್ರಮಾಣ ವಾಗಿರಿಸಿಕೊಂಡು ನಿರ್ಣಯ ಪಡೆಯುತ್ತಾರೆ.

ಗ್ರಂಥವನ್ನು ಶುದ್ಧರಾಗಿ ಪೂಜಿಸಿ, ಒಂದು ಎಳೆಯನ್ನೋ, ನಲುಗರಿಯನ್ನೋ ಬೆಳ್ಳಿತಂತಿಯನ್ನೋ ಮಧ್ಯಭಾಗದಲ್ಲಿ ಕಣ್ಣು ಮುಚ್ಚಿ ತೂರಿಸುತ್ತಾರೆ. ಆ ಭಾಗವನ್ನು ತೆರೆದು ಅಲ್ಲಿ ಬಂದ ಸನ್ನಿವೇಶಗಳ ಮೇಲೆ ಸಂದೇಹದ ಆಗುಹೋಗುಗಳನ್ನು ಮುಂದಿನ ಪರಿಣಾಮ ಗಳನ್ನು ನಿರ್ಣಯಿಸುತ್ತಾರಂತೆ. (ಪಂಡಿತರಿಂದ ಕೇಳಿದ್ದು)
ರಾಮಾಯಣದ ಮುಂದುವರಿದ ಭಾಗವೇ ಮಹಾಭಾರತ. ರಾಮಾಯಣದ ಅನೇಕ ವ್ಯಕ್ತಿಗಳು ಶ್ರೀರಾಮನಿಗೆ ಸಲ್ಲಿಸಿದ ಸೇವೆ, ಅವನ ರುದ್ಧಗೈದ ದ್ರೋಹ, ಷಡ್ಯಂತ್ರಗಳಿಗೆ ಮತ್ತೆ ಮಹಾಭಾರತದಲ್ಲಿ ಹುಟ್ಟಿ ಅದರ ಋಣವನ್ನೋ, ಸೇಡನ್ನೋ, ಕೃತಜ್ಞತೆಯನ್ನೋ ಸಲ್ಲಿಸುವುದು ಇಲ್ಲಿನ ಕೌತುಕ ಹಾಗೂ ಪುನರ್ಜನ್ಮ ಸಿದ್ಧಾಂತವನ್ನು ಕರ್ಮಗಳಿ ಗನುಗುಣವಾದ ಫಲ ಅಥವಾ ಶಾಪವನ್ನು ಪಡೆಯುವ ಕಥೆ ಅತ್ಯಂತ ರೋಚಕವಾಗಿದೆ.

ಇದನ್ನು ನಂಬದವರಿಗಾಗಿಯೇ ರಾಮಾಯಣದಲ್ಲಿ ಹನುಮನಾಗಿ, ಮಹಾಭಾರತದಲ್ಲಿ ಭೀ ಮನಾಗಿ ಹುಟ್ಟಿ ರಾಮ ಹಾಗೂ ಕೃಷ್ಣನ ಅವತಾರಗಳ ಭಗವಂತನ
ಜತೆಗೇ ಇದ್ದ ಶ್ರೀಮಧ್ವಾಚಾರ್ಯರು ಈ ಕಲಿಯುಗದ ಅನುಮಾನ ವ್ಯಕ್ತಿಗಳಿಗಾಗಿ ಬರೆದ ಗ್ರಂಥವೇ ಈ ‘ಮಹಾಭಾರತ ತಾತ್ಪರ್ಯ ನಿರ್ಣಯ’ ಎಂಬ ಅಲ್ಟಿಮೇಟ್ ಕೃತಿ. ಇದನ್ನು ನಂಬದವರಿಗೆ ಏನು ಹೇಳಲೂ ಸಾಧ್ಯಲ್ಲ. ಅವರನ್ನು ಅವರಿದ್ದಲ್ಲಿಯೇ ನಿಲ್ಲಿಸಿ ಅಥವಾ ಕೂರಿಸಿ ಅವರಿಗೆ ಕೈ ಮುಗಿದು ಮುಂದೆ ಸಾಗುವದು ನಾವು ಮಾಡಲೇಬೇಕಾದ ಕೆಲಸ. ಕೆಲವು ಆಸಕ್ತಿಕರ ವಿಷಯಗಳ ಉದಾಹರಣೆಗಳು ಇಲ್ಲಿವೆ.

ಉದಾಹರಣೆಗೆ ತ್ರಿಜಟೆ ಎಂಬ ರಾಕ್ಷಸಿ ಸೀತಾದೇವಿಗೆ ಸೇವೆ ಮಾಡಿದ ಫಲವಾಗಿ ಸುಭದ್ರೆಯಾಗಿ ಜನಿಸಿದಳು, ಪಾರ್ವತಿಯ ಆವೇಶದಿಂದ ಉತ್ತಮರೂಪ ಸೌಂದರ್ಯ ಗುಣಗಳಿಂದ ಕೂಡಿದಳು, ರಾಮಾವತಾರದಲ್ಲಿ ಅಽಕ ಸೇವೆ ಮಾಡಿದ ಲಕ್ಷ್ಮಣನೇ ಕೃಷ್ಣಾವತಾರದಲ್ಲಿ ಬಲರಾಮನಾಗಿ ಹುಟ್ಟಿದ. ಅಣ್ಣನಾಗಿ ಹುಟ್ಟಿದ್ದರಿಂದ ಕೃಷ್ಣನ ಪಾದಕ್ಕೆ ಮಣಿಯಲಿಲ್ಲ. ರಾಮನಿಗೆ ಅಽಕ ಸೇವೆ ಮಾಡಿದ ಅಂಗದ ಮುಂದೆ ಅಭಿಮನ್ಯುವಾಗಿ ಹುಟ್ಟಿದ, ರಾಮನಿಗೆ ಸೇವೆ ಮಾಡಿದ
ಮೈಂದ, ವಿವಿದರೆಂಬ ಕಪಿಗಳು ರಾಮನಿಗೆ ವಿಶೇಷ ಸೇವೆ ಮಾಡಿದ್ದರಿಂದ ಮುಂದೆ ನಕುಲ, ಸಹದೇವರಾಗಿ ಹುಟ್ಟಿದರು. ರಾಮಾವತಾರದಲ್ಲಿ ರಾಮನ ವಿರೋಽಯಾಗಿದ್ದ ವಾಲಿಯೇ ಮಹಾಭಾರತದಲ್ಲಿ ಅರ್ಜುನನಾಗಿ ಹುಟ್ಟಿದ. ಇನ್ನೂ ರೋಚಕ ವಿಷಯವೇನೆಂದರೆ, ದೃತರಾಷ್ಟ್ರ ಹುಟ್ಟುವ ಮುನ್ನವೇ ಮಹಾಭಾರತದ ಕಥೆಯನ್ನು ಶ್ರೀ ವೇದವ್ಯಾಸರು ಬರೆದ ಮುಗಿಸಿದ್ದರೆಂಬ ಇತಿಹಾಸವಿದೆ ಮಹಾಭಾರತಕ್ಕೆ.

ಮೊದಲು ಚಿತ್ರಕಥೆ ಬರೆದು ಅದರಂತೆ ಸಿನಿಮಾ ಮಾಡಿದಂತೆ, ವ್ಯಾಸರು ಹೀಗೆ ನಡೆಯಬೇಕು, ನಡೆಯುತ್ತದೆ ಎಂಬಂತೆ ಬರೆದಿರುವುದು ಇದರ ಸ್ಪಷ್ಟಿಕರ್ತ ಸಾಕ್ಷಾತ್ ದೇವರೆಂಬುದು ಮೈ ಜುಮ್ಮೆನಿಸುವ ವಿಷಯ. ವೇದವ್ಯಾಸರು ಅವತರಿಸಿ ಮೂರು ವರ್ಷದೊಳಗೆ ಮಹಾಭಾರತ ರಚಿಸಿದರು. ತಮ್ಮ ಆರು ನೂರನೇ ವರ್ಷದಲ್ಲಿ ದೃತರಾಷ್ಟ್ರ-ಪಾಂಡುರಾಜನಿಗೆ ಜನ್ಮವಿತ್ತರು. ಪಾಂಡವರ ರಾಜಸೂಯ ಅಶ್ವಮೇಧಯಾಗಗಳ ವೈಶಿಷ್ಟ್ಯಯಾಗಕ್ಕಾಗಿ ಅವರು ಮಾಡಿದ ದಿಗ್ವಿಜಯ ಪ್ರಕಾರವನ್ನು ಅರಗಿನ ಮನೆಯಿಂದ ಪಾರಾಗಿ ಬಂದ ಕೌಶಲ್ಯ, ಬಕಹಿಡಿಂಬರ ವಧೆ, ದ್ರೌಪತಿ ವಿವಾಹ ಮಾಡಿಕೊಂಡ ಸಾಮರ್ಥ್ಯ, ಅಷ್ಟಲ್ಲದೇ ಹದಿನೆಂಟು ಅಕ್ಷೋಹಿಣಿ ಸೈನ್ಯದ ನಡುವೆ ಯೋಧರು ಆಡಿದ ಪರಸ್ಪರರಲ್ಲಿನ ಮಾತುಗಳ ಉಕ್ತಿ ಪ್ರತ್ಯುಕ್ತಿಗಳನ್ನು ಬಾಣಗಳಿಗೆ ಪ್ರತಿಯಾಗಿ ಎಸೆದ ಬಾಣಗಳ ಸಂಖ್ಯೆ, ಆ ಬಾಣಗಳನ್ನು ಕತ್ತರಿಸುವ ಔತುರ್ಯ, ವ್ಯೂಹ ಪ್ರತಿ ವ್ಯೂಹಗಳು. ಭೀಮ, ಅರ್ಜುನ, ಭೀಷ್ಮ, ದ್ರೋಣ ಮುಂತಾದವರು ಸಂಹಾರ ಮಾಡಿದ ಆನೆ, ಕುದುರೆ ಎಷ್ಟೆಷ್ಟು ಎಂಬುದನ್ನು ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಗೋಡಿ ಮಹಾಭಾರತವೆಂಬ ಗ್ರಂಥದಲ್ಲಿ ನಿರೂಪಿಸಿರುವ ವ್ಯಾಸರಿಗೆ ಅಪರಿಮಿತ ಪ್ರಪಂಚ ನಿರ್ಮಾಣ ಮಾಡುವ ಶ್ರೀಮನ್ನಾರಾಯಣ ನಂತೆಯೇ ಅಪರಿಮಿತ ಸರ್ವಜ್ಞತ್ವ ಸಿದ್ಧಿಸಿರುವುದನ್ನು ನೋಡಿದರೆ ಅವರು ಸಾಕ್ಷಾತ್ ನಾರಾಯಣನ ಅವತಾರವೇ ಆಗಿರುವರೆಂಬುದು ವಿವೇಕಿಗಳಿಗೆ ಊಸಲು ಶಕ್ಯವಿದೆ.

ಅದಕ್ಕೆ ಮಹಾಭಾರತ ದೇವರಚನೆ. ಹೀಗಾಗಿ ನಮ್ಮೆಲ್ಲ ಕಷ್ಟಗಳಿಗೆ ಸದಾಶಯಗಳಿಗೆ, ಇದರ ಅಧ್ಯಯನ, ಅಧ್ಯಯನ ದಿಂದ ಸಿಗುವ ಮಾರ್ಗದರ್ಶನವೇ ಔಷಧ. ರಾಮಾಯಣ, ಮಹಾಭಾರತಾದಿಗಳು ಕಟ್ಟುಕತೆಗಳಲ್ಲ ಕಾಲ್ಪನಿಕಗಳೂ ಅಲ್ಲ. ಮುಂಬರುವ ಕಲಿಯುಗವೆಂಬ ಈಗ ನಡೆಯುತ್ತಿರುವ ಯುಗದಲ್ಲಿ ಮನುಷ್ಯ ಜನ್ಮತಾಳಿದವನು ಈ ಕಥೆಗಳಿಂದ ಹೇಗೆ ಶಿಕ್ಷಣ, ಪ್ರೇರಣೆ ಪಡೆಯಬೇಕೆಂಬುದನ್ನು ನಿದೇಶಿಸುವ ಜೀವನ ಮಾರ್ಗಗಳು.

ಮರ್ತ್ಯಾವತಾರಸ್ತಿಹ ಮರ್ತ್ಯ ಶಿಕ್ಷಣಂ
ರಕ್ಷೋವಧಾಯೈವ ನ ಕೇವಲಂ ಭೋಃ |
(ದೇವರ ಮನುಷ್ಯಾವತಾರ ಮನುಷ್ಯರ ಶಿಕ್ಷಣಕ್ಕಾಗಿ
ಆಯಿತು ಹೊರತು ಕೇವಲ ರಾಕ್ಷಸರ ವಧೆಗಾಗಿಯೇ ಅಲ್ಲ.)

ಶ್ರೀಮನ್ ಮಧ್ವಾಚಾರ್ಯ ರಚಿತ ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯ ಕ್ಲಿಷ್ಟ ಗ್ರಂಥವನ್ನು ನಮ್ಮಂಥ ಪಾಮರರಿಗಾಗಿ ನಮ್ಮ ಕಸ್ತೂರಿ ಕನ್ನಡದಲ್ಲಿ ರಚಿಸಿ ಮಹೋಪಕಾರ ಮಾಡಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀಯುತ ವಿದ್ವಾನ್ ಕೆ.ಹಯವದನ ಪುರಾಣಿಕರಿಗೆ ಈ ಮೂಲಕ ವಂದಿಸುತ್ತ, ಇದನ್ನು ಓದಿ ಉಳಿದ ಹತ್ತು ಸಂಪುಟಗಳನ್ನು ಓದುವ ಕುತೂಹಲ ಕನ್ನಡವಾಚಕ ವೃಂದಕ್ಕೆ ಉಂಟಾದರೆ ಈ ಮಹಾಗ್ರಂಥಗಳ ನನ್ನ ಈ ಅಳಿಲು ಸೇವೆಗೆ ರೆಕ್ಕೆ ಮೂಡಿದಂತೆ.