Saturday, 21st September 2024

ಶಾಸ್ತ್ರ ಒಪ್ಪವಾಗಿಸುವ ಮೈಬಾಯಿಸಂ

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಅಲೆಮಾರಿತನದ ಅನುಕೂಲ ಮತ್ತು ವಿಭಿನ್ನತೆಯೇ ಅದು. ಅಲ್ಲಿ ಸ್ಥಳಕ್ಕಿಂತಲೂ ಅಲ್ಲಿಯ ವ್ಯವಸ್ಥೆ ಮತ್ತು ಸ್ಥಳೀಯ ಸೊಗಡಿನ ಪ್ರಾದೇಶಿಕತೆಯೇ ಹೆಚ್ಚು ಮುದ ಮುದ ಕೆಲವೊಮ್ಮೆ. ಹಾಗೊಂದು ಭಾಷೆಯೇ ಬಾರದ ಬುಡಕಟ್ಟುಗಳ ಮಧ್ಯೆ ಅಪ್ಪಟ ಸಾಂಪ್ರದಾಯಿಕ ಬದುಕು ಪಕ್ಕಾಗಿ ಕಂಡಿದ್ದು ತೇಮೆನ್‌ಗ್ಲಾಂಗ್‌ನ ಹಳ್ಳಿ ಯೊಂದರಲ್ಲಿ.

ಮೈಬಾಯಿಸಂ ಎಂದರೆ ಪುರೋಹಿತ ವೃತ್ತಿ. ಮಣಿಪುರದಲ್ಲಿ ಇದೊಂದು ವಿಶಿಷ್ಟ ಪಂಗಡ; ವಿಭಿನ್ನ ಜೀವನ ಶೈಲಿ. ಮೈಬಾಗಳೆಂದರೆ ಪಂಡಿತರು. ಈ ಪಂಗಡ ಗಳಿಗೆ ಉನ್ನತ ಸ್ಥಾನ. ಪ್ರತಿ ಬುಡಕಟ್ಟಿನಲ್ಲೂ ಇವರಿದ್ದು, ಇಲ್ಲದವರು ಇನ್ನೊಂದು ಸಮುದಾಯದ ಮೈಬಾಗಳನ್ನೇ ಆದರಿಸುವುದೂ ಇದೆ. ಎರಡು ಪಂಗಡಗಳಿದ್ದು ಒಂದು ಶಾಸೋಕ್ತ ಮಂತ್ರ ಪಠಣ ಮತ್ತು ವಿಽವಿಧಾನಕ್ಕೂ, ಇನ್ನೊಂದು ಕರ್ಮ ಮತ್ತು ಕ್ರಿಯೆಗಳಂತಹ ಕಾಯಕಕ್ಕೆ ಮೀಸಲು.

ಮೈಬಾ ಪಂಗಡಗಳು ಅಚ್ಚ ಬಿಳಿ ಮತ್ತು ಕೇಸರಿ ಬಟ್ಟೆಯನ್ನಷ್ಟೆ ತೊಡುತ್ತಿದ್ದು ಯಾವುದೇ ಆಧುನಿಕತೆಯ ತೊಡುಗೆ ಗಳಿಗೆ ಇವತ್ತಿಗೂ ಮಾರು ಹೋಗಿಲ್ಲ. ತಲೆಗೆ ಅಚ್ಚ ಬಿಳಿಯ ಅಥವಾ ಕೇಸರಿ ಮುಗುಟ ತೊಡುವ ಮೈಬಾಗಳದ್ದು ಅಪ್ಪಟ ಸಾಂಪ್ರದಾಯಿಕ ಅನುಸರಿಸುವಿಕೆಗೆ ಹೆಸರುವಾಸಿ. ಇದರಿಂದಾಗಿ ಮೈಬಾಗಳು ನಿಷ್ಠರಾಗಿ ತಂತಮ್ಮ ಸಮುದಾ ಯ ಪಂಗಡಗಳಿಗೆ, ಅಗತ್ಯತೆ ಇzಗ ಇನ್ನಾವುದೇ ಮಣಿಪುರಿ ಅಥವಾ ಮಿಥೀಸ್‌ಗಳ ಪಂಗಡಕ್ಕೂ ಸೇವೆ ಸಲ್ಲುವಂತೆ ನಡೆದು ಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಮಿಥೀಸ್‌ಗಳು ಕೂಡ ಇವರ ಬಗ್ಗೆ ಇರುವ ಗೌರವ ದೊಡ್ಡ ಮಟ್ಟದ್ದು. ಅವರ ಪ್ರಕಾರ ಮಗು ಹುಟ್ಟಿದ ಮನೆಗೆ ಮೈಬಾಗಳು ಹೋಗುವುದಾಗಲಿ, ತಿಂಡಿ ತೀರ್ಥ ಸೇವಿಸುವು ದಾಗಲಿ ಸಲ್ಲ. ನಿಷ್ಠಾವಂತ ಮೈಬಾಗಳು ಇದೆಲ್ಲ ನಂಬಿಕೆಗಳನ್ನು ಗಂಭೀರವಾಗಿ ಪಾಲಿಸುತ್ತಾರೆ.

ನಾನೇ ನೋಡಿದಂತೆ ಫೆಬ್ರವರಿಯ ಆಚರಣೆಯಲ್ಲಿ ಮೈಬಾಗಳ ಪಾತ್ರದ ಬಗ್ಗೆ ಇದ್ದ ಅವರ ಶೃದ್ಧೆ ಬಹುಶಃ ಇವತ್ತು ಅವರನ್ನು ಮಿಥೀಸ್‌ಗಳು ಆ ಮಟ್ಟದ ಭಕ್ತಿಯಿಂದ ಆದರಿಸಲು ಕಾರಣವಾಗಿರಬಹುದು. ಊರಲ್ಲ ಅದರಲ್ಲೂ ಹಳ್ಳಿಗಳ ಕಡೆಯಲ್ಲಿ ನಡೆಯುತ್ತಿದ್ದ ಅವರ ‘ಚೋಲಾ ರುಸಂ’ ಹಬ್ಬದ ಪ್ರಕಾರ, ಊರ ಕೆಲವು ಹೆಂಗಸರು ಮತ್ತು ಗಂಡಸರು ಉಡಿ ತುಂಬುವ ಸಾಮಾನಿನಂತೆ ಹೊಗೆ ಸೊಪ್ಪಿನ ಉಡಿ ಮಾಡಿ, ರಸ್ತೆ ಮೇಲೆ ದೇವರನ್ನು ಆದರಿಸಿ ಬಾಗಿನ ಕೊಟ್ಟಂತೆ ಮಾಡುವ ಸಂಪ್ರದಾಯದಲ್ಲಿ ಮೈಬಾಗಳು ಪ್ರಮುಖ ಸ್ಥಾನ ಅಲಂಕರಿಸುತ್ತಾರೆ. ಅವತ್ತು ಡ್ರೈ ಫ್ರೂಟ್‌ಗಳ ಅಭ್ಯಂಜನ.

ನಿಗದಿತ ದಿನ ಮತ್ತು ಸ್ಥಳ ಆಯ್ಕೆ ಮಾಡಿ, ಬೆಳಿಗ್ಗೆನೆ ಸ್ನಾನ ಮುಗಿಸಿ, ಉಪವಾಸ ಇದ್ದು ಅಲ್ಲಿಗೆ ಬಂದು ದೇವರಿಗೆ ಅರ್ಪಿಸುವ ಉಡಿಯನ್ನು ಸ್ವೀಕರಿಸುವ ಮೂಲಕ ಕುಟುಂಬಗಳ ಶ್ರೇಯಸ್ಸಿಗೆ ಹಾರೈಸುತ್ತಾರೆ. ಅಲ್ಲದೇ ಶುದ್ಧ ಮನಸ್ಸಿನಿಂದ ಮೈಬಾಗಳು ಮಾಡುವ ಕಾಯಕದಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯೂ ನಡೆದದ್ದಿದೆ. ಹೆಚ್ಚಿನ ಬುಡಕಟ್ಟಿನ ಪದ್ಧತಿಗಳಿಂದ ಯಾರಿಗೂ ವಿನಾಯಿತಿ ದೊರೆಯುವುದಿಲ್ಲವಾದರೂ, ಮೈಬಾಗಳಿಗೆ ಕೆಲ ವಿನಾಯಿತಿ ಇದೆ.

ಉದಾ. ಬುಡಕಟ್ಟಿನ ಹಳ್ಳಿಯೊಂದರಲ್ಲಿ ಮುಖ್ಯಸ್ಥ ಆವತ್ತು ಊರ ಜನರಿಗೆಲ್ಲ ಮಾಂಸದಡುಗೆಯ ವ್ಯವಸ್ಥೆ ಇದೆ ಎಂದರೆ ಯಾರೂ ಅದನ್ನು ಪ್ರಶ್ನಿಸದೆ, ಯಾವ ಮಾಂಸ ಎಂದೂ ಕೇಳದೇ ಅನುಸರಿಸುತ್ತಾರೆ. ಮಧ್ಯಾಹ್ನ ಉಂಡೆದ್ದು ಬರುತ್ತಾರೆ. ಆದರೆ ಮೈಬಾಗಳು ಇದಕ್ಕೆ ಹೊರತಾಗಿರುತ್ತಾರೆ. ‘ನಾಂದ್ರೆಥೋಪಾಲ’ ಎನ್ನುವ ಹಳ್ಳಿ ತೇಮೇನ್‌ಗ್ಲಾಂಗ್ ಜಿಲ್ಲೆಯಲ್ಲಿದೆ ಇಲ್ಲಿಗೆ ಬೆರಳೆಣಿಕೆಯಷ್ಟು ಜನ ಮಾತ್ರವೇ ಭೇಟಿ ಕೊಟ್ಟಿದ್ದಾರೆ.

ಸಾರ್ವಜನಿಕ ಪ್ರವೇಶವೇ ನಿಷಿದ್ಧ. ಮಧ್ಯವರ್ತಿಗಳ ಹೊರತಾಗಿ ಪ್ರವೇಶವೇ ಸಿಕ್ಕುವುದಿಲ್ಲ. ಊರ ಮಧ್ಯದಲ್ಲಿ ಮುಖ್ಯಸ್ಥನ ಜತೆ ಕೂತಿದ್ದರೆ, ಮಿಕಿಮಿಕಿ ನೋಡು ವವರ ಎದುರಿಗೆ ನಾನು ಅಪ್ಪಟ ಶೋ ಪೀಸ್. ಸರಕಾರಿ ವ್ಯವಹಾರಗಳಿಗೂ ಇಲ್ಲಿಗೂ ಸಂಬಂಧ ಇಲ್ಲವೇ ಇಲ್ಲ. ಮದುವೆಯಾದ ಹುಡುಗಿ ಮೈಬಾಗಳಲ್ಲಿ ಯಾವತ್ತೂ ಗಂಡನ ಎಡ ಮಗ್ಗುಲಿಗೆ ಮಲಗುತ್ತಾಳೆ. ಏಳುವಾಗ ಗಂಡನ ಮುಖ ನೋಡುವಂತಿಲ್ಲ. ಸಾವಿನ ನಂತರದ ದಿನದಲ್ಲಿ ಮೈಬಾಗಳು ಪ್ರವೇಶಿಸಿದರೇನೆ ಆ ಮನೆಯ ಮೈಲಿಗೆ ಕಳೆಯುತ್ತದೆ. ಅದಕ್ಕಾಗಿ ವಿಶೇಷ ಪೂಜೆ ಪುನಸ್ಕಾರ ಮಾಡಬೇಕು. ಹೀಗೆ ಹಲವು ನಂಬಿಕೆ ಮತ್ತು ಆಚರಣೆಗಳು ಮಣಿಪುರಿಗಳ ಜೀವನದಲ್ಲಿ ಮೈಬಾಗಳೊಂದಿಗೆ ತಳುಕು ಹಾಕಿಕೊಂಡಿದೆ.

ಯಾವುದೇ ಪೂಜೆ, ಪುನಸ್ಕಾರ, ಧಾರ್ಮಿಕ ಆಚರಣೆ ಇತ್ಯಾದಿಗಳು ಮೈಬಾಗಳಿಲ್ಲದೆ ಪೂರ್ಣಗೊಳ್ಳುವುದೇ ಇಲ್ಲ. ಅವರಿಲ್ಲದೆ ನೇರವೇರಿಸುವ ಯಾವುದೇ ಧಾರ್ಮಿಕ ಕಾರ‍್ಯದ ಪುಣ್ಯ ತಮಗೆ ಸಿಕ್ಕುವುದಿಲ್ಲ ಎಂದೇ ಬುಡಕಟ್ಟುಗಳ ನಂಬಿಕೆ. ಭಕ್ತಿ ಕೂಡಾ. ಕಾರಣ ಮೈಬಾಗಳು ನಡೆಸುವ ಧಾರ್ಮಿಕ ಕಾರ‍್ಯಾಚರಣೆ ಯಿಂದ ಸಮುದಾಯದ ಅಥವಾ ಬುಡಕಟ್ಟಿನ ಸಂಪೂರ್ಣ ಅಭಿವೃದ್ಧಿಗೆ ಪೂರಕ ಮತ್ತು ಯಾವುದೇ ಕೆಟ್ಟ ದೃಷ್ಟಿ ಅಥವಾ ಮಾರಕ ಶಕ್ತಿಗಳ ಪರಿಣಾಮ ತಮ್ಮ ಮೇಲಾ
ಗುವುದಿಲ್ಲ ಎನ್ನುವುದನ್ನು ನಂಬುತ್ತವೆ. ಮುಖ್ಯವಾಗಿ ಕುಕಿ ಮತ್ತು ಮೀಥೀಸ್‌ಗಳ ಒಳ ಸಮುದಾಯಗಳು.

ಹೆಚ್ಚಿನ ಆಂತರಿಕ ಒಳನಾಡು ಪ್ರದೇಶಗಳಲ್ಲಿ ಆಧುನಿಕತೆಯ ಸೋಂಕಿಲ್ಲದ, ವೈದ್ಯಕೀಯ ಮತ್ತು ಇತರೆ ಸೇವೆಗಳು ಸುಲಭಕ್ಕೆ ಲಭ್ಯವಾಗದ ಸಂಪ್ರದಾಯ ಬದ್ಧ ಕುಕಿ ಮತ್ತು ನಾಗಾ ಬುಡಕಟ್ಟುಗಳಿಗೆ ಮೈಬಾಗಳೆಂದರೆ ಪ್ರತ್ಯಕ್ಷ ದೇವರಿದ್ದಂತೆ. ಕಾರಣ ಈ ಮೈಬಾಗಳು ಕೇವಲ ದೇವರ ಅರ್ಚನೆ ಮತ್ತು ಶಾಸ್ತ್ರೋಕ್ತ ಪೂಜೆ ಯಲ್ಲದೆ ಅಗತ್ಯಕ್ಕೆ ತಕ್ಕಷ್ಟು ನಾರು ಬೇರಿನ ಔಷಧವನ್ನೂ ಬಲ್ಲವರಿದ್ದು ಅಗತ್ಯ ಬಿದ್ದಾಗ ಸ್ವತಃ ಔಷಧಿಯ ಸೇವೆಯನ್ನೂ ನೀಡುತ್ತಾರೆ. ಈಗೀಗ ಇದರಲ್ಲಿ ಓದಿದ ವರೂ ಕೂಡ ಕುಟುಂಬ ಪದ್ಧತಿಯನ್ನು ಮುಂದುವರೆಸುತ್ತಿದ್ದವರು ಸಾಕಷ್ಟು ಇಂಗ್ಲಿಷ್ ಔಷಧವನ್ನೂ ಬಳಸುತ್ತಿದ್ದಾರೆ.

ಹಾಗಾಗಿ ಮೈಬಾಗಳು ಎಲ್ಲಿಯೇ ಹೊರಟರೂ ಸಾಮಾನ್ಯವಾಗಿ ಬೇರು-ನಾರುಗಳ ಗಂಟೊಂದನ್ನು, ಒಂದಿಷ್ಟು ಔಷಧಿಯ ಸಾಮಗ್ರಿಗಳನ್ನೂ ತಮ್ಮೊಂದಿಗೆ ಒಯ್ಯುವುದು ಸಾಮಾನ್ಯ. ಹಾಗಾಗೇ ಈ ಮೈಬಾಗಳನ್ನು ಬುಡಕಟ್ಟುಗಳ ಜನಾಂಗ ತಮ್ಮ ಪ್ರಾಣ ಕೊಟ್ಟಾದರೂ ರಕ್ಷಣೆ ಮತ್ತು ಸೇವೆಗೆ ಬದ್ಧರಾಗಿರುವುದು ಇತಿಹಾಸ ಮತ್ತು ವಾಸ್ತವದಲ್ಲೂ ಕಂಡು ಬರುವ ಸತ್ಯ. ಹೆಚ್ಚಿನ ಪಂಡಿತರಿಗೆ ಪ್ರತಿ ಸಮುದಾಯದವರೇ ಶ್ರೀರಕ್ಷೆ. ಯಾವುದೇ ನೈಸರ್ಗಿಕ ಮತ್ತು ಇತರೆ ಆಪತ್ತು ಗಳಿರಲಿ ತಮ್ಮ ಜೀವದ ಹಂಗು ತೊರೆದು ಇವರ ರಕ್ಷಣೆಗೆ ಧಾವಿಸುವ ಸಮುದಾಯದ ಜನರೊಂದಿಗೆ, ಮೈಬಾಗಳೂ ಒಳ್ಳೆ ಸಂಬಂಧವನ್ನು ಕಾಯ್ದು ಕೊಂಡು ಬರುತ್ತಿದ್ದಾರೆ.

ಇಂಥಾ ಒಳನಾಡುಗಳಲ್ಲಿ ಈ ಅವಲಂಬನೆ ಮತ್ತು ಸಂಬಂಧ ಅನಿವಾರ್ಯ. ಹಾಗೆ ನೋಡಿದರೆ ಇತರೆ ಧರ್ಮಕ್ಕೆ ವಲಸೆ, ಮತಾಂತರ ಅಷ್ಟಾಗಿ ಮಣಿಪುರದ ಬುಡಕಟ್ಟುಗಳಲ್ಲಿ ಕಂಡು ಬರುವುದಿಲ್ಲ. ಹಾಗಾಗಿ ಸಂಪೂರ್ಣ ರಾಜ್ಯ ಅಪ್ಪಟ ಮಣಿಪುರಿ ಸಂಸ್ಕೃತಿಗೆ ಈಡಾಗಿದೆ. ಇತಿಹಾಸವನ್ನು ಗಮನಿಸಿದಾಗ ಹಿಂದೂ
ಸಂಸ್ಕೃತಿಯ ವಲಸೆ ಇಲ್ಲಿಗೆ ತಲುಪಿದ್ದೇ ತಡವಾಗಿ ಎನ್ನಿಸುತ್ತಿದೆ. ಕಾರಣ ಭೌಗೋಳಿಕವಾಗಿಯೂ ಮಣಿಪುರ ಕೊಂಚದೂರವೇ ಇದ್ದುದರಿಂದಲೂ ಇದಾಗಿರ ಬೇಕೆಂದು ತರ್ಕಿಸುತ್ತಾರೆ. ಇವರ ಗುರು ಅರಿಬೋಮ ಇದನ್ನು ಅನಾಮತ್ತಾಗಿ ಆವಾಹಿಸಿಕೊಂಡು ಎಲ್ಲ ಬುಡಕಟ್ಟುಗಳನ್ನು ಏಕತ್ರಗೊಳಿಸಿದ್ದು ಇತಿಹಾಸ ಪುಷ್ಟೀಕರಿಸುತ್ತದೆ.

ಇದರಿಂದಾಗಿ ಹಿಂದೂ ಸಂಸ್ಕೃತಿಯ ಸಾಕಷ್ಟು ಅಚರಣೆಗಳು ಮಿಥೀಸ್‌ಗಳ ಜೀವನ ಭಾಗದಲ್ಲಿ ಸೇರಿ ಹೋದವು. ನಮ್ಮ ನಾಗರ ಪಂಚಮಿ, ದೀಪಾವಳಿ ಹಬ್ಬದ ಮಿಶ್ರಣ ಅಲ್ಲಿ ‘ನಿಂಗೋಲ ಚಾಕೌಬ’ಎಂದಾಗಿದೆ. ೧೮ನೇ ಶತಮಾನದಲ್ಲಿ ವೈಷ್ಣವರ ಧಾರ್ಮಿಕತೆ ಸಮ್ಮಿಳಿತನ ನಡೆದದ್ದು, ವೈಷ್ಣವರ ಪ್ರಭಾವ ಪ್ರತಿ ಆಚರಣೆ ಯಲ್ಲಿ ಎದ್ದು ಕಾಣುತ್ತದೆ. ಗುರುಗೋಪಾಲದಾಸರು ಇಲ್ಲಿ ನೆಲೆ ನಿಂತು ಧರ್ಮ ಪ್ರಚಾರ ಮಾಡಿದ್ದು, ಆಗಲೇ ಇಲ್ಲಿ ಭಗವದ್ ಗೀತೆಯ ಪ್ರಭಾವ ಆರಂಭವಾಗಿದ್ದು. ಜತೆಗೆ ‘ಜೈ ಸಿಂಘ್’ ಧರ್ಮ ಬೇರೂರಲು ಸಾಕಷ್ಟು ಕೊಡುಗೆ ನೀಡುತ್ತಾನೆ.

ಚೈತನ್ಯ ಶಾಲೆ ಆರಂಭಿಸಿದ ಜೈ ಸಿಂಘನ ಕಾಲದಲ್ಲಿ ಇಲ್ಲಿಗೆ ರಾಮಾಯಣ ಮಹಾಭಾರತ ಸೇರಿದಂತೆ ಮಣಿಪುರಿಗಳ ಜೀವನದಲ್ಲಿ ದೀಪಾವಳಿ, ದುರ್ಗಾ ಪೂಜೆ, ರಾಸ್-ಲೀಲಾ ಮತ್ತು ರಥಯಾತ್ರೆಯ ಪರ್ವ ಆರಂಭಗೊಂಡಿತು. ಅಲ್ಲಿಂದ ಇತ್ತಿಚೆಗೆ ಮಣಿಪುರಿಗಳು ಹಿಂದೂ ಭಾಗವೇ ಎನ್ನುವಷ್ಟರ ಮಟ್ಟಿಗೆ ಅಲ್ಲಿ ವೈಷ್ಣವರ ಪ್ರಭಾವ ಬೀರಿದ್ದು ಈಗಲೂ ಹೆಚ್ಚಿನಂಶ ಸಸ್ಯಾಹಾರಿಗಳು ಮತ್ತು ಅಪ್ಪಟ ಹಿಂದೂ ಧರ್ಮದ ಪಾಲನೆ ಮಾಡುತ್ತಿದ್ದಾರೆ. ಇದೆಲ್ಲವನ್ನು ಮೈಬಾಗಳು ನಿರ್ವಹಿಸು ತ್ತಾರೆ.

ಸುಮಾರು ೫ ಲಕ್ಷದಷ್ಟಿರುವ ‘ಸನಾಮಾಹಿ’ ಎನ್ನುವ ಧರ್ಮವೂ ಇಲ್ಲಿದ್ದು ಸಾಕಷ್ಟು ಇವರ ಪಂಗಡದವರು ಬರ್ಮಾದ ಹಲವು ಭಾಗದಲ್ಲೂ ಹಂಚಿ ಹೋಗಿದ್ದಾರೆ. ಆದರೆ ಅವರೆಲ್ಲರನ್ನೂ ಅಷ್ಟೇ ಆದರಪೂರ್ವಕವಾಗಿ ಗಮನಿಸಿರುವ ಮಣಿಪುರ ಸರಕಾರ ಅವರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ. ಧರ್ಮ ಎನ್ನುವುದು ಮಣಿಪುರಿಗಳ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದೆ. ಹೆಚ್ಚಿನಂಶ ಎಲ್ಲ ಬುಡಕಟ್ಟುಗಳಿಗೆ ಸೇರಿದವರಾಗಿದ್ದರೂ ಬುಡಕಟ್ಟುಗಳ ಜೀವನ ಶೈಲಿಯ ಪ್ರಭಾವ, ಧರ್ಮವನ್ನು ಮೀರಿ ಪ್ರಭಾವ ಬೀರಿದ್ದು ಸ್ಪಷ್ಟ. ಹಾಗಾಗೇ ಪೂರ್ತಿ ರಾಜ್ಯದುದ್ದಕ್ಕೂ ಮಿಥೇಲಿಯನ್ ಭಾಷೆ ಮತ್ತು ಸಂಪ್ರದಾಯವನ್ನು ಸುಲಭಕ್ಕೆ ಜನ ಅನುಸರಿಸು ತ್ತಿದ್ದಾರೆ.

ಪ್ರವಾಸಿಗರಿಗೆ ಅನುಕೂಲವಾಗುವಷ್ಟು ಕೂಡಾ ಹಿಂದಿ ಅಥವಾ ಇಂಗ್ಲೀಷು ಇಲ್ಲಿ ಬೆಳೆದಿಲ್ಲ. ಹಾಗಾಗಿ ಕೊಂಚ ನಗರ ಪ್ರದೇಶದಿಂದ ಒಳ ಸಂಚಾರ ಆರಂಭಿಸಿದರೂ ಮೂಕ ಭಾಷೆಯೇ ಅತ್ಯಾಪ್ತ.