Saturday, 21st September 2024

ತಾಂಬೂಲ ತಂಬಾಕಿನಲ್ಲಿ ’ಅಡಿಕೆಗೆ ಹೋದ ಮಾನ’

ಶಿಶಿರ ಕಾಲ

ಶಿಶಿರ್‌ ಹೆಗಡೆ, ಚಿಕಾಗೋ

shishirh@gmail.com

ಅದೆಷ್ಟೇ ಶ್ರೀಮಂತನ ಮನೆಯಿರಲಿ ಅಥವಾ ಬಡವನದ್ದಿರಲಿ – ಯಾವುದೇ ಜಾತಿಯವನಾಗಿದ್ದಿರಲಿ, ನಮ್ಮ ಕರಾವಳಿ, ಅದರಲ್ಲಿಯೂ ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಮನೆಯೆಂದರೆ ಅಂದು ದೇವರ ಮನೆ ಹೇಗೋ ಅಷ್ಟೇ ಸಾರ್ವತ್ರಿಕವಾಗಿ ಕವಳದ ಬಟ್ಟಲು ಇರಲೇ ಬೇಕು.

ಇವೆರಡಿಲ್ಲದಿದ್ದರೆ ಮನೆಯೇ ಅಪೂರ್ಣ. ಕವಳ ಶಬ್ದದ ಅರ್ಥ ತುತ್ತು, ಬಾಯ್ತುಂಬ ಇತ್ಯಾದಿ. ಆ ಕಾರಣಕ್ಕಾಗಿಯೇ ಭೋಜನಕ್ಕೆ, ಭಿಕ್ಷೆಗೆ ಕೂಡ ಕವಳ ಎನ್ನುವ
ಬಳಕೆ . ಉತ್ತರ ಕನ್ನಡದಲ್ಲಿ ಮಾತ್ರ ಕವಳವೆಂದರೆ ಎಲೆ ಅಡಿಕೆ. ಕವಳದ ಬಟ್ಟಲೆಂದರೆ ಎಲೆ ಅಡಿಕೆ, ಸುಣ್ಣ, ತಂಬಾಕಿಡುವ ಬಟ್ಟಲು. ಇದು ಲ್ಯಾಂಡ್ ಲೈನ್ ಮ್ಯಾನ್ ಇದ್ದಂತೆ. ಸಂಚಿ ಎಂದರೆ ಅದು ಮೊಬೈಲ್.

ಹೊರಹೋಗುವಾಗ ಜತೆಗೆ ಕವಳದ ಸಂಚಿ ಇದ್ದೇ ಇರುತ್ತಿತ್ತು. ಈಗ ಅದು ಸ್ವಲ್ಪ ಕಾಂಪ್ಯಾಕ್ಟ್ ಆಗಿ ಕಿಸೆಯಲ್ಲಿನ ಗುಟ್ಕಾ ಪ್ಯಾಕೆಟ್ಟುಗಳಾಗಿವೆ – ಅದು ಬೇರೆ ಕಥೆ ಬಿಡಿ. ಒಟ್ಟಾರೆ ಕವಳವೆಂದರೆ – ವೀಳ್ಯದ ಎಲೆ, ಅಡಿಕೆ, ಸುಣ್ಣ ಮತ್ತು ತಂಬಾಕು. ತಾಂಬೂಲವೆಂದರೆ ಉಪ-ಸಂಸ್ಕೃತಿ. ತಾಂಬೂಲಕ್ಕೆ ಹತ್ತಾರು ಸಮಾನಾಂತರ ಇತಿಹಾಸವಿದೆ. ತಾಂಬೂಲ ನಡೆದುಬಂದ ದಾರಿ ಭಿನ್ನ. ಕೆಲವೆಡೆ ಎಲೆಯಡಿಕೆ ಸುಣ್ಣವೇ ತಾಂಬೂಲ. ಇನ್ನು ಕೆಲವೆಡೆ ತಂಬಾಕು ಸೇರಿದೆ. ಇನ್ನು ಕೆಲವರ ಪ್ರಕಾರ ಅಲ್ಲಿ ತಂಬಾಕಿಗೆ ಸ್ಥಾನವಿಲ್ಲ – ಬದಲಿಗೆ ಪಚ್ಚಕರ್ಪೂರ, ಏಲಕ್ಕಿ, ಲವಂಗ, ಜಾಪತ್ರೆ, ಕಾಚು ಇವೆಲ್ಲ ಬೇಕು. ಅದೇ ಬೀಡಾ ಅಂಗಡಿಯಲ್ಲಿ ಹತ್ತಾರು ಸುಗಂಧದ ತಂಬಾಕು ಗಳು ಸೇರಿಕೊಂಡು ಅದನ್ನು ಸೇರಿಸಿದ ತಂಬಾಕಿನ ಬ್ರಾಂಡ್‌ನಿಂದ ಕರೆಯುವುದು.

ಇವೆಲ್ಲ ನಿಮಗೆ ಗೊತ್ತಿದ್ದದ್ದೇ. ಕನ್ನಡಿಗರಿಗೆ ಎಲೆ ಅಡಿಕೆಯೆಂದರೆ ಹೊಸ ವಿವರಣೆ ಬೇಕಾಗಿಲ್ಲ. ಎಲೆ ಅಡಿಕೆ ಯೆಂದಾಗ ಕೆಂಪಾದ ಬಾಯಿ, ಕೆಂಪಾದ ರಸ್ತೆ ಬದಿಗಳು, ಗೋಡೆಗಳು ಹೀಗೆ ಏನೇನೆಲ್ಲ ನೆನಪಿಗೆ ಬರುತ್ತವೆ. ಆದರೆ ನೀವು ಯಾರಿಗೇ ಕೇಳಿ – ತಾಂಬೂಲದ ಮೂಲ ತಿಳಿದಿರುವುದಿಲ್ಲ. ತಾಂಬೂಲಕ್ಕೊಂದಿಷ್ಟು ಮಹತ್ವದ ಸ್ಥಾನ ಇತಿಹಾಸದಲ್ಲಿತ್ತು – ಈಗ ಇಲ್ಲ ಎನ್ನುವುದು ಒಮ್ಮತ. ಈ ಜನಮಾನಸದ ತಾಂಬೂಲಕ್ಕೆ ತಂಬಾಕು ಜತೆ ಯಾದದ್ದು ತೀರಾ ಈಗಿತ್ತಲಾಗೆ, ಸುಮಾರು ನಾಲ್ಕು ಶತಮಾನದಿಂದೀಚೆ. ಪೋರ್ಚುಗೀಸರು ೧೬ನೇ ಶತಮಾನದಲ್ಲಿ ತಂಬಾಕನ್ನು ಭಾರತಕ್ಕೆ ತಂದದ್ದು.

ಅದಕ್ಕಿಂತ ಹಿಂದೆ ಎಲ್ಲಿಯೂ ತಾಂಬೂಲದ ಜತೆ ತಂಬಾಕಿರಲಿಲ್ಲ. ಪೋರ್ಚುಗೀಸರು ಗುಜಾರಾತಿನಲ್ಲಿ ನಂತರ ಬಂಗಾಳದಲ್ಲಿ ತಂಬಾಕಿನ ಕೃಷಿ ಆರಂಭಿಸು ವವರೆಗೆ. ಇವತ್ತಿಗೂ ಆ ಪ್ರಾಂತ್ಯಗಳಲ್ಲಿ ಮತ್ತು ಗುಜರಾತಿನ ಜತೆ ವ್ಯವಹರಿಸುತ್ತಿದ್ದ ಕರವಾಳಿಯಲ್ಲಿ ಆ ಕಾರಣಕ್ಕೆ ಈ ತಂಬಾಕು ತಾಂಬೂಲದ ಜತೆ ಸೇರಿಸಿ ಸೇವಿಸುವ ರೂಢಿ ಇದೆ. ೧೯೩೦ ರ ವರೆಗೂ ತಂಬಾಕು ಎಂದರೆ ಎಲ್ಲರಿಗೂ ಲಭ್ಯವಾಗುವ ಸರಕಾಗಿರಲಿಲ್ಲ. ಭಾರತದಲ್ಲಿ ತಂಬಾಕು ಬೆಳೆ ಹೇಳಿಕೊಳ್ಳುವ
ಪ್ರಮಾಣದಲ್ಲಿ ಬೆಳೆಯಲು ಶುರುವಾದದ್ದು ಈಗ ಎಂಭತ್ತು ವರ್ಷದಿಂದೀಚೆ.

ತಾಂಬೂಲ ಎಂದರೆ ಹಿಂದೆ ಯಾವತ್ತೂ ತಂಬಾಕಿನ ನಶೆಯ ವಿಚಾರವಾಗಿರಲಿಲ್ಲ. ತಾಂಬೂಲಕ್ಕೆ ಮುಖ್ಯವಾಗಿ ಹದಿಮೂರು ಉತ್ತಮ ಗುಣವಿದೆ ಎಂದು ಯೋಗ
ರತ್ನಾಕರದಲ್ಲಿ ಹೇಳಲಾಗಿದೆ.

ತಾಂಬೂಲಂ ಕಟುತಿಕ್ತಮುಷ್ಣ
ಮಧುರಂ ಕ್ಷಾರಂ ಕಷಾಯಾನ್ವಿತಂ | ವಾತಘ್ನಂ ಕ್ರಿಮಿನಾಶನಂ
ಕ-ಹರಂ ದುರ್ಗಂಧ ನಿರ್ನಾಶನಂ || ವಕ್ತಸ್ಯಾಭರಣಂ
ವಿಶುದ್ಧಿಕರಣಂ ಕಾಮಾಗ್ನಿ ಸಂದೀಪನಂ | ತಾಂಬೂಲಸ್ಯ
ಸಖೇ ತ್ರಯೋದಶ ಗುಣಾಃ ಸ್ವರ್ಗೇಪಿ ತೇ ದುರ್ಲಭಃ ||

ಈ ಶ್ಲೋಕದ ಪ್ರಕಾರ ತಾಂಬೂಲದ ಈ ಗುಣಗಳು ಸ್ವರ್ಗದಲ್ಲೂ ಸಿಗುವುದಿಲ್ಲ. ವರಾಹಮಿಹಿರ ತಾಂಬೂಲ ಸೇವನೆಯಿಂದ ಮುಖ ಕಾಂತಿ, ಸ್ವರ ಮಾಧುರ್ಯ ಹೆಚ್ಚುತ್ತದೆ ಎಂದು ನಮೂದಿಸಿದ್ದಾನೆ. ಇನ್ನು ಚರಕ ಸುಶ್ರುತರ ಗ್ರಂಥಗಳಲ್ಲಿ ಕೂಡ ತಾಂಬೂಲದ ಪ್ರಯೋಗದ ಬಗ್ಗೆ ಹೇಳಲಾಗಿದೆ. ಅದು ಕ್ರಿಸ್ತಪೂರ್ವದಲ್ಲಿಯೇ ಹೇಳಿದ್ದು. ಹಾಗಾಗಿ ಕವಳಕ್ಕೆ ತಂಬಾಕು ಸೇರಿದ್ದು ಇತ್ತೀಚೆ. ಆದರೆ ವೀಳ್ಯದೆಲೆಯ, ಅಡಿಕೆ ಮತ್ತು ಸುಣ್ಣ ಮಾತ್ರ ಕ್ರಿಸ್ತ ಪೂರ್ವ ೬೦೦ ರಿಂದಲೂ ತಾಂಬೂಲದ ಭಾಗವಾಗಿಯೇ ಇರುವುದು ಸುಕೃತ ಸಂಹಿತೆಯಿಂದ ತಿಳಿದುಬರುತ್ತದೆ. ಆದಿ ಕಾಲದಿಂದಲೂ ಭಾರತೀಯರಾದ ನಮಗೆ ಒಳ್ಳೆಯದು – ಕೆಟ್ಟದ್ದು ಎನ್ನುವುದರ ಅರಿವು ಇದ್ದೇ ಇತ್ತು.

ಹಿಂದೆ ಯಾವತ್ತೂ ತಾಂಬೂಲ ಕೆಟ್ಟದ್ದು ಎಂದು ಹೇಳಿದ್ದೇ ಇಲ್ಲ. ಬಹುಷಃ ಅದಕ್ಕೆ ತಂಬಾಕು ಸೇರಿಕೊಂಡಾಗ ಅಥವಾ ತಾಂಬೂಲದ ಜತೆ ತಂಬಾಕು ಸೇವಿಸಲು ಶುರುವಾದಾಗಿನಿಂದ ತಾಂಬೂಲಕ್ಕೊಂದು ಕಳಂಕ ಅಂಟಿಕೊಂಡಿದೆ ಎನ್ನುವುದು ಈ ಮೂಲಕ ಸ್ಪಷ್ಟವಾಗುತ್ತದೆ. ತಾಂಬೂಲ ಎಂದರೆ ಅದೊಂದು ಕರಾರಿನ, ಒಪ್ಪಿಗೆ ಪತ್ರದಂತೆ. ನಿಶ್ಚಿತಾರ್ಥದ ಸಮಯದಲ್ಲಿ ತಾಂಬೂಲ ಬಳಕೆ ಯಾಗುವುದು ಹಾಗೆ. ತಾಂಬೂಲ ಕೊಟ್ಟು ಕಾರ್ಯಕ್ರಮಕ್ಕೆ ಕರೆಯುವುದೆಂದರೆ ಅದೊಂದು ವಿಶೇಷ ಆಹ್ವಾನ. ಇನ್ನು ರಣ ವೀಳ್ಯ ಎಂದರೆ ಯುದ್ಧಕ್ಕೆ ಆಹ್ವಾನ. ಎಲೆ ಅಡಿಕೆ ಇಲ್ಲದೆ ನಮ್ಮ ಯಾವುದೇ ಪೂಜೆ ನೆರವೇರುವುದಿಲ್ಲ.

ಗಣಪತಿ ಸ್ಥಾಪನೆಯನ್ನು ತಾಂಬೂಲದ ಮಾಡುವ ಪೂಜಾಕ್ರಮವಿದೆ. ಹೋಮಕ್ಕೆ ಎಲೆ ಅಡಿಕೆ ಬೇಕು. ನಾಮಕರಣಕ್ಕೂ ಬೇಕು – ಕೊನೆಯ ಸಂಸ್ಕಾರಕ್ಕೂ ಬೇಕು. ನೈವೇದ್ಯದ ನಂತರ ಮುಖಶುದ್ಧಿಗಾಗಿ ‘ಪೂಗೀ ಫಲ ತಾಂಬೂಲಂ ಸಮರ್ಪಯಾಮಿ’ ಎನ್ನುತ್ತೇವೆ. ಮಂಗಳ ದ್ರವ್ಯಗಳಲ್ಲಿ ಇದಕ್ಕೆ ಯಾವತ್ತಿ ನಿಂದಲೂ ಸ್ಥಾನ. ಅದು ಹೇಗೆ ಎಲೆ ಅಡಿಕೆಗೆ ಅಂಥದ್ದೊಂದು ಸ್ಥಾನ ಬಂತು – ಅದು ಹೇಗೆ ಬೆಳೆದು ಇಲ್ಲಿಯವರೆಗೂ ಮುಂದುವರಿದು ಬಂತು ಎನ್ನುವುದು ಬೆರಗಿನ ವಿಚಾರ.

ಇಲ್ಲಿ ಗ್ರಹಿಸಬೇಕಾದದ್ದು – ಅಲ್ಲೂ ತಂಬಾಕಿಗೆ ಜಾಗವಿಲ್ಲ – ಅದರ ಪ್ರಸ್ತಾಪವಿಲ್ಲ. ಒಟ್ಟಾರೆ ತಾಂಬೂಲವೆಂದರೆ ಅಲ್ಲಿ ಮೊದಲಿನಿಂದ ಇದ್ದದ್ದು ವೀಳ್ಯದೆಲೆ, ಸುಣ್ಣ, ಅಡಿಕೆ ಮತ್ತಿನ್ನೊಂದಿಷ್ಟು ಸೇವಿಸುವ ಸುಗಂಧಭರಿತ ದ್ರವ್ಯಗಳು. ಈ ತಂಬಾಕು ಏನಿದ್ದರೂ ಪಾಶ್ಚಾತ್ಯದ್ದು. ಹಾಗಾಗಿ ಎಲೆ ಅಡಿಕೆಯ ಜತೆ ತಂಬಾಕು ಸೇರಿಸಿದ್ದನ್ನು
ತಾಂಬೂಲ ಎನ್ನುವುದು ಸಮಂಜಸವಾಗುವುದಿಲ್ಲ. ಈ ತಂಬಾಕನ್ನು ಬಾಯಲ್ಲಿಟ್ಟು ಅಗಿಯುವ ರೂಢಿ ಯುರೋಪಿಯನ್ನರಲ್ಲಿ ಬಹಳ ಹಿಂದಿನಿಂದ ಇತ್ತು. ಅಲ್ಲದೆ
ಅಮೆರಿಕನ್ ಮೂಲ ನಿವಾಸಿಗಳಲ್ಲಿ (ರೆಡ್ ಇಂಡಿಯನ್ಸ್) ಕೂಡ ಯುರೋಪಿಯನ್ನರು ಇಲ್ಲಿಗೆ ಬರುವುದಕ್ಕಿಂತ ಮೊದಲೇ ಇತ್ತು ಎನ್ನುವುದು ಕೂಡ ಇತಿಹಾಸದಲ್ಲಿ
ನಮೂದಾದದ್ದು. ಇಂದಿಗೂ ಬರೀ ತಂಬಾಕನ್ನು ದವಡೆಯಲ್ಲಿ – ಬಾಯಿಯಲ್ಲಿ ಇಟ್ಟುಕೊಳ್ಳುವ ಒಂದು ದೊಡ್ಡ ವರ್ಗವೇ ಅಮೆರಿಕ ಮತ್ತು ಯುರೋಪಿನಲ್ಲಿದೆ.

ಇಂದಿಗೂ ಅಮೆರಿಕದ ಬೇಸ್ ಬಾಲ್ ಆಟಗಾರರೆಲ್ಲ ಬಹುತೇಕ ತಂಬಾಕು ಬಾಯಲ್ಲಿಟ್ಟುಕೊಂಡೇ ಆಡುವುದು ಒಂದು ರೂಢಿ. ಅಮೆರಿಕದ ಸಿ.ಡಿ.ಸಿ. ಯ ಲೆಕ್ಕಾಚಾರದ ಪ್ರಕಾರ ಇಲ್ಲಿನ ಹೈಸ್ಕೂಲ್ ಓದುವ ೧೩% ಹುಡುಗರು ತಂಬಾಕು ಬಾಯಲ್ಲಿಟ್ಟುಕೊಳ್ಳುವ ಚಟ ಹೊಂದಿದ್ದಾರೆ. ಯುರೋಪಿಯನ್ನರು ತಮ್ಮ ಜತೆ ಹೋದಲ್ಲ ತಂಬಾಕನ್ನು – ಅದನ್ನು ಅಗಿಯುವ ಚಾಳಿಯನ್ನು ತೆಗೆದು ಕೊಂಡು ಹೋದರು. ಭಾರತಕ್ಕೆ ಬಂದಾಗ ಮಾತ್ರ ಅಲ್ಲಿ ಅದಾ ಗಲೇ ತಾಂಬೂಲವಿತ್ತು. ಹಾಗಾಗಿ ನಂತರದಲ್ಲಿ ತಾಂಬೂಲದ ಜತೆ ತಂಬಾಕಿನ ಸಂಬಂಧವೇರ್ಪಟ್ಟಿತು. ತಂಬಾಕಿನ ವಿಷಯ ಇಲ್ಲಿಗೇ ಬಿಡೋಣ. ಈ ಎಲೆ ಅಡಿಕೆ ಸುಣ್ಣ ಇವನ್ನು
ಸೇವಿಸುವುದು, ಅದರಲ್ಲಿಯೂ ವಿಶೇಷವಾಗಿ ಅಡಿಕೆಯನ್ನು ಅಗಿಯುವುದು – ಇದರ ಇತಿಹಾಸ ನೋಡೋಣ.

ಈ ಅಡಿಕೆಗೆ ಅದರದೇ ಆದ ಪ್ರತ್ಯೇಕ ಇತಿಹಾಸವಿದೆ. ಗ್ರೀಕ್, ಸಂಸ್ಕೃತ ಮತ್ತು ಮ್ಯಾಂಡರೀನ್ ಭಾಷೆಯ ಒಂದನೇ ಶತಮಾನದ ಸಾಹಿತ್ಯದಲ್ಲಿ ಅಡಿಕೆಯನ್ನು ಉಖಿಸಲಾಗಿದೆ. ಅಡಿಕೆಯನ್ನು ಸಿಲೋನ್ (ಶ್ರೀ ಲಂಕಾ), ಪರ್ಶಿಯಾ ಮತ್ತು ಅರಬ್ ರಾಷ್ಟ್ರಗಳಲ್ಲಿ ಕೂಡ ಬಳಕೆ ಅನಾದಿ ಕಾಲದಿಂದಲೇ ಇದೆ ಎನ್ನುವುದಕ್ಕೆ ಪುರಾವೆಗಳಿವೆ. ಒಂದು ಇತಿಹಾಸದ ನಂಬಿಕೆಯ ಪ್ರಕಾರ ಅಡಿಕೆಯನ್ನು ಕ್ರಿ.ಶ. ೧೩೦೦ ರಲ್ಲಿ ಮಾರ್ಕೊಪೋಲೊ ಯುರೋಪಿಗೆ ಒಯ್ದದ್ದು. ಅಲ್ಲಿಯವರೆಗೆ ಅಡಿಕೆಯೆಂದರೆ ಏನು ಎಂದೇ ಯುರೋಪಿಯನ್ನರಿಗೆ ತಿಳಿದಿರಲಿಲ್ಲ.

ಭಾರತದಲ್ಲಿ ಕೌಟಿಲ್ಯನ ಕಾಲಕ್ಕಿಂತ ಮುಂಚೆಯೇ ಅಡಿಕೆಯಿತ್ತು. ಹಾಗಂತ ಅಡಿಕೆ ಕೂಡ ಭಾರತಕ್ಕೆ ಅದ್ಯಾವುದೋ ಒಂದು ಕಾಲದಲ್ಲಿ ಹೊರಗಿನಿಂದ
ಬಂದದ್ದೇ ಎನ್ನುವುದಕ್ಕೆ ಹಲವು ಆಯಾಮಗಳಲ್ಲಿ ಪುಷ್ಟಿ ಸಿಗುತ್ತದೆ. ಮನು ಸ್ಮೃತಿ, ಯಾಜ್ಞವಲ್ಕ್ಯ, ಸೂತ್ರಗಳು, ವೇದ ಸಂಹಿತೆಗಳಲ್ಲಿ ತಾಂಬೂಲದ ಅಥವಾ ಅಡಿಕೆಯ ಪ್ರಸ್ತಾಪ ಕಾಣಿಸುವುದಿಲ್ಲ. ಹಾಗಾಗಿ ವೇದ ಕಾಲದ ನಂತರದಲ್ಲಿ ಅಥವಾ ಸುಮಾರು ಎರಡು ಸಾವಿರ ವರ್ಷದ ಹಿಂದಿನ ಆಸುಪಾಸಿನಲ್ಲಿ ಬಹುಷಃ
ಮಲಯದಿಂದ ಈ ಅಡಿಕೆ ನಮ್ಮಲ್ಲಿಗೆ ಬಂತು ಎನ್ನಬಹುದು. ಅಡಿಕೆ ಬಹುಷಃ ಮಲೇಷಿಯಾ, ಥೈಲ್ಯಾಂಡ್ ಅಲ್ಲಿಂದಲೇ ಇಂದಿನ ಭಾರತದ ನೆಲಕ್ಕೆ
ಬಂದದ್ದು.

ವಾಯುವ್ಯ ಥೈಲ್ಯಾಂಡ್ ನಲ್ಲಿ ೧೯೭೦ ರಲ್ಲಿ ಉತ್ಖನನ ಸಮಯದಲ್ಲಿ ಸಿಕ್ಕ ಅಡಿಕೆಯನ್ನು ಕಾರ್ಬನ್ ಡೇಟಿಂಗ್ ಮಾಡಿದಾಗ ಅದು ಸುಮಾರು ಹನ್ನೆರಡು ಸಾವಿರ
ವರ್ಷ ಹಿಂದಿನದು ಎಂದು ತಿಳಿದು ಬಂತು. ಇದು ಅತ್ಯಂತ ಹಳೇ ಅಡಿಕೆ. (ಸಾಮಾನ್ಯವಾಗಿ ಹೊಸ ಅಡಿಕೆಗಿಂತ ಹಳೆ ಅಡಿಕೆಗೆ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿ – ಇದು ಅತ್ಯಂತ ಬೆಲೆಬಾಳುವ ಅಡಿಕೆ !). ಮಲೇಷಿಯಾ, ಫಿಲಿಪೀನ್ಸ್ ಈ ಪ್ರಾಂತ್ಯದಲ್ಲಿ ಸಹಜವಾಗಿ ಅಡಿಕೆ ಮೊದಲು ಬೆಳೆದದ್ದು, ಬಳೆಸಿದ್ದು. ನಂತರದಲ್ಲಿ ಅದು ಪಶ್ಚಿಮ ಪ್ರದೇಶಗಳಿಗೆ ಹರಡಿತು.

ಇದೆಲ್ಲ ಅಡಿಕೆಯ ಬಳಕೆಯ, ಅಗಿಯುವ ಇತಿಹಾಸವಾಯಿತು. ಅಡಿಕೆ ಅಗಿಯುವ ರೂಢಿ ಇಂದು ಭಾರತದಲ್ಲಿ – ನಮ್ಮಲ್ಲಿ ಮಾತ್ರ ಇದೆ ಎಂದು ನೀವೇನಾದರೂ
ಅಂದುಕೊಂಡರೆ ಹಾಗೇನಿಲ್ಲ. ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಈ ಆಸುಪಾಸಿನ ದೇಶಗಳನ್ನು ಬಿಟ್ಟು ಮಗದೊಂದು ಎಲೆ ಅಡಿಕೆ ಅಗಿಯುವ ದೇಶ ಎಂದರೆ ತೈವಾನ್. ಅಡಿಕೆಯನ್ನು ತೈವಾನಿಗರು ತಮ್ಮ ದೇಶದ ಚ್ಯುವಿಂಗ್ ಗಮ್ ಎಂದೇ ಕರೆದುಕೊಳ್ಳುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ ಹಣ್ಣಾದ ಅಡಿಕೆಯನ್ನು ಬಿಸಿಲಿಗೆ ಒಣಗಿಸಿ (ಚಾಲಿ ಅಡಿಕೆ), ಬೇಯಿಸಿದ ಅಥವಾ ಹಣ್ಣಾದ ಹಸಿ ಅಡಿಕೆಯನ್ನು ಅಗಿಯಲು ಬಳಸುವುದು ಸಾಮಾನ್ಯ. ಆದರೆ ತೈವಾನಿನಲ್ಲಿ ಅವರು ಬಳಸುವುದು ಹಸಿ – ಹಸಿರು ಅಡಿಕೆಯನ್ನು.

ವೀಳ್ಯದ ಎಲೆಗೆ ಸುಣ್ಣ ಬಳಿದು ಅದನ್ನು ಎಳೆಯ ಹಸಿರು ಅಡಿಕೆಯ ಸುತ್ತ (ಸಿಪ್ಪೆ ತೆಗೆಯದೆ) ಸುತ್ತಿ ಅದನ್ನೇ ಬಾಯಿಗಿಟ್ಟುಕೊಳ್ಳುವುದು, ಅದರ ರಸವನ್ನು ಹೀರುವುದು ಅಲ್ಲಿನವರ ಅಭ್ಯಾಸ. ಅಲ್ಲಿ ಈ ಎಲೆ ಅಡಿಕೆ ನಮ್ಮಲ್ಲಿನಷ್ಟೇ ಪ್ರಸಿದ್ಧ. ಅಲ್ಲಿ ಕೂಡ ನಮ್ಮಲ್ಲಿನಂತೆ ದೀರ್ಘ ಕಾಲದ – ಏಕ ರೀತಿಯ ಕೆಲಸ ಮಾಡು ವವರು, ಟ್ರಕ್ ಡ್ರೈವ್ ಮಾಡುವವರು, ಬಡಗಿಗಳು, ಕೂಲಿಕಾರರು, ಹೀಗೆ ಶ್ರಮ ವಹಿಸಿ ದುಡಿಯುವವರೆಲ್ಲ ಸಾಮಾನ್ಯವಾಗಿ ಈ ಎಲೆ ಅಡಿಕೆ ಬಳಸುವವರು. ತೈವಾನಿನ ರಸ್ತೆಗಳಲ್ಲಿ ಹೊಳೆಯುವ ಬಣ್ಣ ಬಣ್ಣದ ದೀಪಗಳು ಮತ್ತು ಗಾಜಿನ ಅಂಗಡಿಯೊಳಗೆ ಒಬ್ಬ ಹುಡುಗಿ ತುಂಡು ಬಟ್ಟೆ ಉಟ್ಟು ನಿಂತಿದ್ದಾಳೆ ಎಂದರೆ ಅದು
ಎಲೆ ಅಡಿಕೆ ಅಂಗಡಿ ಎಂದೇ ಅರ್ಥ. ಅಲ್ಲಿ ಪಾನ್ ವಾಲಾ ಇಲ್ಲ – ಎಲ್ಲ ಕಡೆ ಪಾನ್ ವಾಲಿಗಳು. ಇವರನ್ನು ಅಲ್ಲಿ ಕರೆಯುವುದು ಬೀಟಲ್‌ನಟ್ ಗರ್ಲ್ಸ್ – ಅಡಿಕೆಯ
ಹುಡುಗಿಯರು. ತುಂಡು ಬಟ್ಟೆ ತೊಟ್ಟು ಗ್ರಾಹಕರನ್ನು ಆಕರ್ಷಿಸುವುದು, ನಗುತ್ತ ಅವರಿಗೆ ಅಡಿಕೆಯನ್ನು ಮಾರುವುದು ಹೀಗೆ.

ಇದೆಲ್ಲ ಒಂದು ಹಂತ ಮುಂದಕ್ಕೆ ಹೋಗಿ ಗಲಾಟೆಗಳಾಗುವುದೂ ಇದೆ. ಹೀಗೆ ಹಸಿ ಅಡಿಕೆಯ ಚೊಟ್ಟನ್ನು ಕಚ್ಚಿ ಉಗಿದು ಎಲೆ ಸುಣ್ಣದೊಂದಿಗೆ ಸೇವಿಸುವುದು
ತೈವಾನಿಗರಿಗೆ ಬಲು ಪ್ರೀತಿ. ಹೀಗೆ ಬೀಡಾ ಅಂಗಡಿಗಳಲ್ಲಿ ತುಂಡು ಬಟ್ಟೆ ಧರಿಸಿ ಮಾರುವುದು ಒಂದು ಮಾರಾಟದ ಗಿಮಿಕ್.

ಮಾಲ್ಡೀವ್ಸ್, ಚೀನಾದ ಕೆಲವು ಭಾಗಗಳು, ಮಯನ್ಮಾರ್, ಅಷ್ಟೇ ಅಲ್ಲ, ಆಫ್ರಿಕಾದ ಕೆಲವು ದೇಶಗಳಲ್ಲೂ ಅಡಿಕೆ ಸುಣ್ಣ ಸೇರಿಸಿ ಅಗಿಯುವ ರೂಢಿಯಿದೆ. ಅದೆಲ್ಲದಕ್ಕಿಂತ ಆಶ್ಚರ್ಯವೆನಿಸಿದ್ದು ಪಪುವಾ ನ್ಯೂ ಗಿನಿ. ಇದು ಜಗತ್ತಿನ ತೀರಾ ಬಡ ದೇಶಗಳಲ್ಲಿ ಒಂದು. ಇದು ಇರುವುದು ಪೂರ್ವ ಆಸ್ಟ್ರೇಲಿಯಾದ ಉತ್ತರದಲ್ಲಿ. ಅಲ್ಲಿನ ಜನರಂತೂ ಯಥೇಚ್ಛ ಅಡಿಕೆ ತಿನ್ನುತ್ತಾರೆ. ಹಸಿ ಅಡಿಕೆಯನ್ನು ಸುಣ್ಣ ಮತ್ತು ಸಾಸಿವೆಯ(!) ಜತೆ ಅಗಿಯುವುದು ಅಲ್ಲಿನವರ ಅಭ್ಯಾಸ. ಅಲ್ಲಿ ಕೂಡ ಕಂಡಕಂಡಲ್ಲಿ ಈ ರೀತಿ ತಿಂದು ಕೆಂಪು ರಸವನ್ನು ಉಗಿಯುವುದು ಒಂದು ಸಾಮಾಜಿಕ ತೊಂದರೆ. ಆ ಕಾರಣಕ್ಕೆ ಅಲ್ಲಿನ ಸರಕಾರ ಅಡಿಕೆಯನ್ನೇ ನಿಷೇಽಸಲು ೨೦೦೯ ರಲ್ಲಿ ಮುಂದಾಗಿತ್ತು. ಇದರಿಂದ ಅಲ್ಲಿ ದಂಗೆಗಳೇ ಎದ್ದು ಆಮೇಲೆ ಇಂಥದ್ದೊಂದು ಸರಕಾರೀ ನಿಲುವನ್ನು ಹಿಂತೆಗೆದುಕೊಳ್ಳಬೇಕಾಯಿತು.

ಒಂದಂತೂ ನಿಜ : ಎಲ್ಲಿ ಭವ್ಯ ಇತಿಹಾಸವಿದೆಯೋ ಅಲ್ಲ ಸಂಸ್ಕೃತಿಯ ಭಾಗವಾಗಿಯೇ ಇರುವುದು ಅಡಿಕೆಯ, ತಾಂಬೂಲದ ವಿಶೇಷ. ಅಡಿಕೆಯಿಲ್ಲದೆ
ತಾಂಬೂಲವಿಲ್ಲ. ಈಗ ಒಂದೆರಡು ಶತಮಾನದಿಂದ, ಅದರಲ್ಲಿಯೂ ತಂಬಾಕು ತಾಂಬೂಲದ ಜತೆ ಸೇರಿದಾಗಿನಿಂದ ಈ ಎಲೆ ಅಡಿಕೆ – ತಾಂಬೂಲ ಒಂದು ಕನಿಷ್ಠ ಅಭ್ಯಾಸ, ಚಟ ಎನ್ನುವ ಅನಿಸಿಕೆ ನಮ್ಮಲ್ಲಿ ಅಚ್ಚೊತ್ತು ಕೂತುಬಿಟ್ಟಿದೆ. ಆದರೆ ಒಂದು ಸಮಾಧಾನವೆಂದರೆ ತಾಂಬೂಲ, ಅದರಲ್ಲಿಯೂ ಅಡಿಕೆಗೆ ಇರುವ ಔಷಽಯ ಗುಣಗಳನ್ನು ಇತ್ತೀಚಿಗೆ ನಮ್ಮಲ್ಲಿ ಪುನರ್ ಸಂಶೋಽಸಲಾಗುತ್ತಿದೆ.

ಪಿ ಕೆ ಗೋಡೆ ಯವರು ಭಾರತದ ಭವ್ಯ ಇತಿಹಾಸದಲ್ಲಿ ತಾಂಬೂಲ ಮತ್ತು ಅಡಿಕೆಯ ಮಹತ್ವ ಮತ್ತು ಔಷಽಯ ಗುಣಗಳನ್ನು ತಮ್ಮ ಪುಸ್ತಕ ಖಠ್ಠಿbಜಿಛಿo ಜ್ಞಿ ಠಿeಛಿ eಜಿoಠಿಟ್ಟqs ಟ್ಛ SZಞಚ್ಠ್ಝಿZ(೧೯೫೬) ದಲ್ಲಿ ಶ್ಲೋಕ ಪುರಾಣಗಳನ್ನು ಉಲ್ಲೇಖಿಸಿ ಬಹಳ ವಿವರವಾಗಿ ಸಂಪಾದಿಸಿ ಕಟ್ಟಿಕೊಟ್ಟಿzರೆ. ಗೂಗಲ್ ಮಾಡಿದರೆ ಈ ಪುಸ್ತಕ ಸಿಗುತ್ತದೆ. ಆ ಎಂಭತ್ತು  ಪೇಜಿನ ಪುಸ್ತಕದಲ್ಲಿ ತಾಂಬೂಲದ ಮಹತ್ವವನ್ನೆಲ್ಲ ಹೇಳಲಾಗಿದೆ. ಅಲ್ಲಿರುವುದು ಶುದ್ಧ ತಾಂಬೂಲದ ಮತ್ತು ಅಡಿಕೆಯ ಗುಣ ವಿಶೇಷ ಅದರಲ್ಲೂ ತಂಬಾಕಿನ ಉಖಗಳಿಲ್ಲ. ಅಡಿಕೆ ಯಾವತ್ತೋ ತಾಂಬೂಲವೆನ್ನುವ ಒಂದು ಅರೋಗ್ಯ ಪೂರ್ಣ ಸಹ ಆಹಾರದ ಅಂಗವೇ ಆಗಲು – ಇದಕ್ಕೆ ಅದರಲ್ಲಿನ ಒಳ್ಳೆಯ ಗುಣಗಳೇ ಕಾರಣವಾಗಿತ್ತು.

ಈಗ ಆ ನಿಟ್ಟಿನಲ್ಲಿ ಒಂದಿಷ್ಟು ವೈeನಿಕ ವಿಶ್ಲೇಷಣೆಗಳು, ಸಂಶೋಧನೆಗಳು ನಡೆಯುತ್ತಿವೆ. ಇದೆಲ್ಲ ಬಹಳ ಒಳ್ಳೆಯ ಬೆಳವಣಿಗೆ. ನಮ್ಮಲ್ಲಿ ಕೊಲೊನಿಯಲ್ ವಿಚಾರಗಳಿಂದಾಗಿ ತಾಂಬೂಲವೆನ್ನುವುದು ಕನಿಷ್ಠ ಎನ್ನುವ ಭಾವನೆ ಕ್ರಮೇಣ ಕಳೆದು ನಿಜವಾದ ತಾಂಬೂಲದ, ಅಡಿಕೆಯ ಮಹತ್ವ- ಅದರ ಗುಣವಿಶೇಷ ಇವೆಲ್ಲ ತಂಬಾಕಿನ ಲಾಬಿಯನ್ನು ಮೆಟ್ಟಿ ಮುನ್ನೆಲೆಗೆ ಬರುವಂತಾಗಬೇಕು. ಆ ಮೂಲಕ ‘ಎಲೆ ಅಡಿಕೆಗೆ ಹೋದ ಮಾನ’ ವಾಪಸ್ಸಾದರೆ ಸಾಕು.