Saturday, 21st September 2024

ರೆಂಬ್ರಾಂಡ್ ಕಲಾಕೃತಿಯೂ, ನಂಬಿಕೆಯ ಶ್ರೇಷ್ಠತೆಯೂ..

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

vbhat@me.com

ಒಮ್ಮೊಮ್ಮೆ ನಾವು  ಸುಳ್ಳು ವ್ಯಕ್ತಿಗಳನ್ನು, ದೇವರನ್ನು ಪೂಜಿಸುತ್ತಿರುತ್ತೇವೆ. ನಾವು ಆರಾಧಿಸಿದ ಆ ವ್ಯಕ್ತಿ ನಮ್ಮ ಅಭಿಮಾನಕ್ಕೆತಕ್ಕುದಾದ ವ್ಯಕ್ತಿ ಅಲ್ಲವೆಂದು
ಅನಿಸಿದಾಗ ಆಗುವ ಸಂಕಟ ಅಷ್ಟಿಷ್ಟಲ್ಲ. ಅಷ್ಟು ದಿನ ಅಭಿಮಾನ ಪಟ್ಟು ತಲೆ ಮೇಲೆ ಹೊತ್ತುಕೊಂಡಿದ್ದಕ್ಕೆ ನಮ್ಮ ಮೇಲೆಯೇ ನಮಗೆ ಹೇಸಿಗೆ ಬರುತ್ತದೆ. ಪ್ರಸಿದ್ಧ ವ್ಯಕ್ತಿತ್ವ ವಿಕಸನ ಗುರು ಮತ್ತು ಲೇಖಕ ಪ್ರಕಾಶ ಅಯ್ಯರ್ ಹೇಳಿದ ಒಂದು ಪ್ರಸಂಗ ನೆನಪಾಗುತ್ತದೆ.

Rembrandt Harmenszoon van Rijn ಕಲಾರಾಧಕರು ಅಥವಾ ಕಲಾಪ್ರೇಮಿಗಳೇ ಆಗಿರಬೇಕಿಲ್ಲ, ಅಂಥವರೂ ರೆಂಬ್ರಾಂಡ್ ಎಂದೇ ಪ್ರಸಿದ್ಧನಾದ ರೆಂಬ್ರಾಂಡ್ ಹರ್ಮನ್ಸ್ಝೋವ್ನ್ ವ್ಯಾನ್ ರಿಜೆನ್ ಹೆಸರನ್ನು ಕೇಳಿರುತ್ತಾರೆ. ರೆಂಬ್ರಾಂಡ್ ಹದಿನೇಳ ಶತಮಾನಕ್ಕೆ ಸೇರಿದ ಡಚ್ ಕಲಾವಿದ. ಈತನನ್ನು ಪಿಕಾಸೋ, ವ್ಯಾನ್ ಗಾಗ್ , ಲಿಯೊನಾರ್ಡೊ ಡಾವಿಂಚಿ ಅವರಂಥ ಮಹಾನ್ ಕಲಾವಿದರ ಸಾಲಿನಲ್ಲಿ ನಿಲ್ಲುವಂಥ ಮತ್ತೊಬ್ಬ ಅಪ್ರತಿಮ ಕಲಾವಿದ. ಬರ್ಲಿನ್‌ಗೆ ಭೇಟಿ ನೀಡಿ ದವರು ಅಲ್ಲಿನ ಕಲಾ ಸಂಗ್ರಹಾಲಯದಲ್ಲಿಟ್ಟ ರೆಂಬ್ರಾಂಡ್ ಬಿಡಿಸಿದ The Man With the Golden Helmet ಕಲಾಕೃತಿಯನ್ನು ನೋಡದೇ ವಾಪಸಾದರೆ, ಅಷ್ಟರಮಟ್ಟಿಗೆ ಆ ಭೇಟಿ ಅಪೂರ್ಣ ಎಂದು ಹೇಳಲಾ ಗುತ್ತಿತ್ತು. ಹೊಳೆಯುವ ಶಿರಸ್ತ್ರಾಣ ಧರಿಸಿದ ತೈಲವರ್ಣದ ಆ ಚಿತ್ರವನ್ನು ನೋಡುವುದೇ ಮಹದಾನಂದ.
ಈ ಕಲಾಕೃತಿಯನ್ನು ನೋಡಲು ಜಗತ್ತಿನ ಎಡೆಯಿಂದ ಪ್ರತಿದಿನ ಸಾವಿರಾರು ಜನ ಆಗಮಿಸುತ್ತಾರೆ.

ಇದರ ಅಸಂಖ್ಯಪಡಿಯಚ್ಚು ಪ್ರತಿಗಳು ಕಲಾಪ್ರೇಮಿಗಳ ಮನೆಯಲ್ಲಿವೆ. ಈ ಅಪೂರ್ವ ಕಲಾಕೃತಿಯ ಫ್ರಿಜ್ ಮ್ಯಾಗ್ನೆಟ್, ಕೀಚೈನ್, ಟೀಶರ್ಟ್ ಅವೆಷ್ಟು  ಮಾರಾಟ ವಾಗಿಯೋ? The Man With the Golden Helmet ಪೇಂಟಿಂಗ್ ನ್ನು ಮೊನಾಲಿಸಾ ಜತೆಗೆ ಸರಿಸಮನಾಗಿ ಹೋಲಿಸುವುದುಂಟು. ಈ ಪೇಂಟಿಂಗ್‌ನ ಒಳಾರ್ಥ ಅಥವಾ ಕಲಾಮಹತ್ವ ಅರ್ಥವಾಗಲಿ, ಬಿಡಲಿ, ಅದನ್ನು ತಮ್ಮ ಸಂಗ್ರಹದಲ್ಲಿಟ್ಟುಕೊಳ್ಳುವುದು, ಮನೆಯ ಗೋಡೆಯಲ್ಲಿ ಕಾಣುವುದು ಒಂದು ಪ್ರತಿಷ್ಠೆಯ ವಿಷಯವಾಗಿತ್ತು. ಅದರಲ್ಲೂ ರೆಂಬ್ರಾಂಡ್ ಆರಾಧಕ ರಿಗಂತೂ ಇದೊಂದು ಅನರ್ಘ್ಯ ರತ್ನ. ಮುನ್ನೂರೈವತ್ತು ವರ್ಷಗಳವರೆಗೆ, ಇದು ಜಗತ್ತಿನ ಶ್ರೇಷ್ಠ ಕಲಾಕೃತಿ ಗಳ ಸಾಲಿಗೆ ಸೇರಿತ್ತು.

ಸುಮಾರು ಮೂವತ್ತೈದು ವರ್ಷಗಳ ಹಿಂದೆ ಒಂದು ಪ್ರಸಂಗ ಜರುಗಿತು. ಜಗತ್ತಿನ ಶ್ರೇಷ್ಠ ಕಲಾಪರಿಣತರು, ವಿಮರ್ಶಕರು ಮಾಡಿದ ಒಂದು ಘೋಷಣೆ ಕಲಾಪ್ರೇಮಿ ಗಳಿಗೆ ಬರಸಿಡಿಲಿನಂತೆ ಬಂದೆರಗಿತು. ಅವರೆಲ್ಲ ಸಭೆ ಸೇರಿ ಸುಮಾರು ಮೂರು ತಿಂಗಳವರೆಗೆ The Man With the Golden Helmet ಪೇಂಟಿಂಗನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಆ ಕುರಿತು ಹಲವು ತಜ್ಞ ಕಲಾವಿದರ ಜತೆ ಸಮಾಲೋಚಿಸಿದರು. ಮಹಾನ್ ಕಲಾಕೃತಿಗಳನ್ನು ಸಂಗ್ರಹಿಸುವ ಅಭಿರುಚಿ ಮತ್ತು ಹವ್ಯಾಸ ಇರುವವರನ್ನು ಕರೆಯಿಸಿ ಅವರ ಅಭಿಪ್ರಾಯಗಳನ್ನೂ ಪಡೆದರು. ಆನಂತರ ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದರು.

The Man With the Golden Helmet ಅಪೂರ್ವ ಕಲಾಕೃತಿ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಅದನ್ನು ಬಿಡಿಸಿದವ ರೆಂಬ್ರಾಂಡ್ ಅಲ್ಲ ಎಂದು ಘೋಷಿಸಿಬಿಟ್ಟರು! ಮುಂದೇನಾಯಿತು ಅಂದ್ರೆ, ಆ ಕಲಾಸಂಗ್ರಹಾಲಯದ ಮುಂದೆ ಸೇರುತ್ತಿದ್ದ ಜನರ ಸಂಖ್ಯೆ ಕಡಿಮೆಯಾಯಿತು. ಆ ಕಲಾಕೃತಿಯ ಮುಂದೆ ನಿಲ್ಲುತ್ತಿದ್ದ ಜನ ತಮ್ಮಷ್ಟಕ್ಕೆ ದೂರವಾಗತೊಡಗಿದರು. ಕಲಾಭಿಮಾನಿಗಳಿಗೆ ಆ ಪೇಂಟಿಂಗ್ ಮೇಲಿದ್ದ ಅಭಿಮಾನ ಹಠಾತ್ ಕ್ಷೀಣಿಸಲಾರಂಭಿಸಿತು. ಅದರ
ಪಡಿಯಚ್ಚುಗಳನ್ನು ಜನ ಖರೀದಿಸುವುದನ್ನು ನಿಲ್ಲಿಸಿದರು. ಯಾರು ತಮ್ಮ ತಮ್ಮ ಮನೆಗಳಲ್ಲಿ ಆಪೇಂಟಿಂಗನ್ನು ಹೆಮ್ಮೆಯಿಂದ ನೇತು ಹಾಕಿದ್ದಾರೋ, ಅವರೆಲ್ಲ ರಿಗೂ ಏನೋ ತಾತ್ಸರ. ಒಂದು ಕಾಲಕ್ಕೆ ಅತ್ಯಂತ ಗೌರವ, ಅಭಿಮಾನಕ್ಕೆ ಪಾತ್ರವಾಗಿದ್ದ ಆ ಕಲಾಕೃತಿ ನಿರ್ಲಕ್ಷ್ಯಕ್ಕೆ ತುತ್ತಾಯಿತು.

ಇಲ್ಲಿ ಗಮನಿಸಿದ ಒಂದು ಮುಖ್ಯ ಸಂಗತಿಯೊಂದಿದೆ. ಅದೇನೆಂದರೆ, ಆ ಕಲಾಕೃತಿಯೇನೂ ಬದಲಾಗಿರಲಿಲ್ಲ. ಅದು ಮೊದಲಿನಂತೆಯೇ ಇತ್ತು. ಬದಲಾಗಿದ್ದೇ ನೆಂದರೆ, ಅದನ್ನು ಬಿಡಿಸಿದವರು ರೆಂಬ್ರಾಂಡ್ ಅಲ್ಲ ಅಂದಷ್ಟೇ. ಅದು ಜಗದ್ವಿಖ್ಯಾತ ಕಲಾವಿದ ರೆಂಬ್ರಾಂಡ್‌ನ ಕೃತಿ ಅಲ್ಲ ಎಂಬುದಷ್ಟನ್ನೇ ಬಹಿರಂಗಪಡಿಸ ಲಾಗಿತ್ತು. ಅಷ್ಟಕ್ಕೇ ಜನ ಆ ಪೇಂಟಿಂಗನ್ನು ತಿರಸ್ಕರಿಸಲಾರಂಭಿಸಿದರು. ಕಲಾಕೃತಿ ಬದಲಾಗಿರಲಿಲ್ಲ, ಕಲಾವಿದನ ಹೆಸರು ಮಾತ್ರ ಬದಲಾಗಿತ್ತು, ಅಷ್ಟೇ.
ಯಾವತ್ತೂ ಏನು ಎಂಬುದಕ್ಕಿಂತ ಯಾರು ಎಂಬುದು ಮುಖ್ಯವಾಗುತ್ತದೆ. ನಿಮ್ಮ ಮಾತಿಗಿಂತ, ಸ್ವಾಮಿ ವಿವೇಕಾನಂದರು ಹೇಳಿದ್ದು ಮುಖ್ಯವಾಗುತ್ತದೆ. ನೀವು ಹೇಳಿದ ಆ ಮಾತು, ಸ್ವಾಮಿ ವಿವೇಕಾನಂದರ ಮಾತಿಗಿಂತ ಉತ್ತಮವಾಗಿರಬಹುದು. ಆದರೆ ಜನಮೆಚ್ಚುವುದು ಮತ್ತು ಒಪ್ಪಿಕೊಳ್ಳುವುದು ನಿಮ್ಮ ಮಾತನ್ನಲ್ಲ, ಅವರದ್ದೇ.

ನಮ್ಮ ಊರಿನಲ್ಲಿ ಒಬ್ಬರು ಭಸ್ಮ ಮಂತ್ರಿಸಿ ಕೊಡುತ್ತಿದ್ದರು. ಊರಿನಲ್ಲಿ ಸಣ್ಣಪುಟ್ಟ ಕಾಯಿಲೆ ಬಿದ್ದವರು ಅವರ ಭಸ್ಮ ಸೇವಿಸಿದರೆ ಕಾಯಿಲೆ ವಾಸಿಯಾಗುತ್ತಿತ್ತು. ನನ್ನ ಅಜ್ಜ, ಅಜ್ಜಿಗೆ ಅನಾರೋಗ್ಯವಾದಾಗ, ಆ ಭಟ್ಟರ ಮನೆಗೆ ಹೋಗಿ ಭಸ್ಮ ತೆಗೆದುಕೊಂಡು ಬಾಎಂದು ಹೇಳುತ್ತಿದ್ದರು. ಅವರ ಮನೆಗೆ ಮೂರ್ನಾಲ್ಕು ಕಿ.ಮೀ ನಡೆದು ಹೋಗಬೇಕಿತ್ತು. ಒಮ್ಮೊಮ್ಮೆ ನನಗೆ ಅಷ್ಟು ದೂರ ಯಾರುನಡೆದು ಹೋಗುತ್ತಾರೆ ಎಂಬ ಆಲಸ್ಯ. ಆಗ ಕಂತ್ರಿಬುದ್ಧಿ ಉಪಯೋಗಿಸಿ, ಸ್ವಲ್ಪ ಬೂದಿಯನ್ನು
ಕಾಗದದಲ್ಲಿ ಕಟ್ಟಿ ಅಜ್ಜನಿಗೋ, ಅಜ್ಜಿಗೋ ಕೊಡುತ್ತಿದ್ದೆ. ಅದನ್ನು ಅವರು ಭಕ್ತಿಯಿಂದ ತೆಗೆದುಕೊಳ್ಳುತ್ತಿದ್ದರು.

ಆಶ್ಚರ್ಯವೆಂದರೆ, ಅವರಿಗೆ ಕಾಯಿಲೆವಾಸಿಯಾಗುತ್ತಿತ್ತು. ಭಸ್ಮ ಮಂತ್ರಿಸಿ ಕೊಟ್ಟವರು ಆ ಭಟ್ಟರು ಎಂಬ ನಂಬಿಕೆಯೇ ಇಲ್ಲಿ ಪ್ರಧಾನ. ಒಂದು ವೇಳೆ ಅದು ಭಸ್ಮವಲ್ಲ, ನಾನು ಸಂಗ್ರಹಿಸಿದ ಬೂದಿ ಎಂದಾದರೆ, ಏನಾಗಬಹುದು? ಮೊದಲನೆಯದಾಗಿ, ಅವರು ಅದನ್ನು ಸೇವಿಸುವುದೇ ಇಲ್ಲ. ಇಲ್ಲಿ ಏನು ಕೊಟ್ಟಿದ್ದಾರೆ ಎಂಬುದಕ್ಕಿಂತ ಯಾರು ಕೊಟ್ಟಿದ್ದಾರೆ ಎಂಬುದು ಮುಖ್ಯ. ಅದು ನಮ್ಮ ನಂಬಿಕೆ, ವಿಶ್ವಾಸದ ಪ್ರಶ್ನೆ. ಈ ಮಾತನ್ನು ಗಂಗಾಜಲಕ್ಕೂ ಅನ್ವಯಿಸಬಹುದು. ಗಂಗಾ ಜಲವೆಂದು ಹೇಳಿ ಕೊಳಾಯಿ ನೀರನ್ನೋ, ಮೋರಿಯ ನೀರನ್ನೋ, ಯಾರಿಗಾದರೂ ಕುಡಿಸಬಹುದು. ಆದರೆ ಸತ್ಯ ಗೊತ್ತಾದರೆ ? ಹೀಗಾಗಿ ಯಾವತ್ತೂ ವ್ಯಕ್ತಿ ಯಾರು ಎಂಬುದು ಮುಖ್ಯ.

ವ್ಯಕ್ತಿ ಸದಾ ಒಂದಷ್ಟು ಮೌಲ್ಯ, ಚಿಂತನೆ, ಸಿದ್ಧಾಂತಗಳ ಪ್ರತಿಪಾದಕನಾಗಿರುತ್ತಾನೆ. ಒಂದು ನಿಷ್ಠೆಗೆ ಬದ್ಧನಾಗಿರುತ್ತಾನೆ. ಅದನ್ನೂ ಜನ ಒಪ್ಪಿಕೊಂಡಿರುತ್ತಾರೆ, ಅಪ್ಪಿಕೊಂಡಿರುತ್ತಾರೆ. ಆ ಮೂಲಕ ಅವನನ್ನು ಗುರುತಿಸುತ್ತಾರೆ, ತಾವೂ ಅವನೊಂದಿಗೆ ಗುರುತಿಸಿಕೊಂಡಿರುತ್ತಾರೆ. ಆತ ಒಂದು ಮೌಲ್ಯದ ಸಂಕೇತ ಅಥವಾ ಹೆಗ್ಗುರುತು ಆಗಿರುತ್ತಾನೆ. ಅದಕ್ಕೆ ಧಕ್ಕೆಯಾದಾಗ, ನಂಬಿಕೆ ಛಿದ್ರವಾಗುತ್ತದೆ.

ಮೊದಲ ಚುನಾವಣೆ ಮತ್ತು ಖರ್ಚು

ಚುನಾವಣೆ ಅಂದ್ರೆ ಹಣ. ಕೇವಲ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮಾತ್ರ ಅಲ್ಲ. ಅದನ್ನು ಸುಸೂತ್ರವಾಗಿ ಆಯೋಜಿಸುವ ಚುನಾವಣಾ ಆಯೋಗಕ್ಕೂ ಸಾಕಷ್ಟು ಹಣ ಖರ್ಚಾಗುತ್ತದೆ. ಅಧಿಕಾರಿಗಳಿಗೆ ಹಣ ನೀಡಬೇಕು, ಚುನಾವಣೆ ನಡೆಸುವ ಜಾಗಕ್ಕೆ ಬಾಡಿಗೆ ಕೊಡಬೇಕು, ಮತ ಪೆಟ್ಟಿಗೆ ಗಳನ್ನು ಸಾಗಿಸಬೇಕು, ಮತಪೆಟ್ಟಿಗೆ ಗಳನ್ನು ಕಾಯಬೇಕು, ಅದಕ್ಕೆ ಭದ್ರತೆ ಒದಗಿಸಬೇಕು.. ಹೀಗೆ ಇತ್ಯಾದಿ. ಈ ದೇಶದಲ್ಲಿ ನಡೆದ ಮೊದಲ ಚುನಾವಣೆಗೆ ಸುಮಾರು ಹತ್ತು ಕೋಟಿ ರುಪಾಯಿ ಖರ್ಚಾ ಗಿತ್ತು. ಈ ಪೈಕಿ ಐದು ಕೋಟಿರುಪಾಯಿಯನ್ನು ಕೇಂದ್ರ ಸರಕಾರ ನೀಡಿತ್ತು.

ಉಳಿದ ಹಣವನ್ನು ಆಯಾ ರಾಜ್ಯ ಸರಕಾರಗಳು ಭರಿಸಿದ್ದವು. ಅಷ್ಟು ವೆಚ್ಚದಲ್ಲಿ ಇಡೀ ದೇಶದ ಚುನಾವಣೆ ಮುಗಿದುಹೋಗಿತ್ತು. ಆ ದಿನಗಳಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಐದು ಸಾವಿರ ರುಪಾಯಿ ಮತ್ತು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದವರು ಹನ್ನೆರಡು ಸಾವಿರ ರುಪಾಯಿ ಖರ್ಚು ಮಾಡ ಬಹುದಿತ್ತು. ಇಷ್ಟು ಕಡಿಮೆ ಹಣದಲ್ಲಿ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಸ್ವತಂತ್ರ ಅಭ್ಯರ್ಥಿಗಳು ಹೇಳುತ್ತಿದ್ದರು. ತಮ್ಮ ಚುನಾವಣೆ ಪ್ರಚಾರಕ್ಕೆ ಕನಿಷ್ಠ ಒಂದು ಲಕ್ಷ ಕರಪತ್ರಗಳಾದರೂ ಬೇಕಾದ್ದರಿಂದ, ಆ ಬಾಬತ್ತಿನ ಖರ್ಚು ಒಂದು ಲಕ್ಷ ರುಪಾಯಿಯಾದರೂ ದಾಟುತ್ತದೆ ಎಂದು ಅಭ್ಯರ್ಥಿಗಳು ಬೇಸರದಿಂದ ಹೇಳುತ್ತಿದ್ದರು.

ಆದರೆ ಅವರಿಗೆ ವಿಽಸಿದ ಚುನಾವಣಾ ವೆಚ್ಚದ ಮಿತಿ ಕೇವಲ ಎರಡು ಸಾವಿರ ರುಪಾಯಿ. ಅಭ್ಯರ್ಥಿಗಳಿಗೆ ಸುಳ್ಳು ಲೆಕ್ಕ ಬರೆಯಲು ಹೇಳಿಕೊಟ್ಟಿದ್ದೇ ಚುನಾವಣಾ ಆಯೋಗ. ಅಂದು ಆರಂಭವಾದ ಈ ಸುಳ್ಳು ಲೆಕ್ಕದ ವ್ಯವಹಾರ ಮುಂದುವರಿದುಕೊಂಡು ಬಂದಿದೆ. ಹಾನಗಲ್ ಮತ್ತು ಸಿಂದಗಿಯಲ್ಲಿ ನಡೆದ  ಉಪಚುನಾವಣೆ ಯಲ್ಲಿ ಹಣದ ಹೊಳೆಯೇ ಹರಿದಿದೆ. ಅಲ್ಲಿ ಮೂರೂ ಪಕ್ಷಗಳು ಪ್ರತಿಕ್ಷೇತ್ರದಲ್ಲಿ ಖರ್ಚು ಮಾಡಿದ ಹಣವನ್ನು ಲೆಕ್ಕ ಹಾಕಿದರೆ ನೂರೈವತ್ತು ಕೋಟಿ ರೂಪಾಯಿ ದಾಟುತ್ತದೆ.

ಎಲ್ಲ ಪಕ್ಷ ಗಳಿಂದ ಒಂದೊಂದು ಕ್ಷೇತ್ರದಲ್ಲಿ ಎಪ್ಪತ್ತೈದು ಕೋಟಿ ಖರ್ಚಾಗಿವೆ. ಯಾವ ಪ್ರಮಾಣದಲ್ಲಿ ಹಣವನ್ನು ಚೆಲ್ಲಿರಬಹುದು ಎಂದು ಊಹಿಸಬಹುದು. ಮೂರು ಪಕ್ಷಗಳಿಗೆ ಈ ಎರಡೂ ಪಕ್ಷಗಳು ಪ್ರತಿಷ್ಠೆಯಾಗಿರುವುದರಿಂದ, ಹಣ ಖರ್ಚು ಮಾಡಲು ಯಾವ ಪಕ್ಷವೂ ಹಿಂದೇಟು ಹಾಕಿಲ್ಲ. ಮೊದಲ ಚುನಾವಣೆಯಿಂದ ಇಲ್ಲಿಯ ತನಕ ನಾವು ಎಷ್ಟು ಬೆಳೆದಿದ್ದೇವೆ ಎಂಬುದನ್ನು ಇದೊಂದರಿಂದಲೇ ಅಳೆಯಬಹುದು.

ವಾಸ್ತವ ಅರಿಯುವ ಅಗತ್ಯ-ಅನಿವಾರ್ಯ

ಈ ದಿನಗಳಲ್ಲಿ ಹೊಸ ವ್ಯವಸ್ಥೆ ಮತ್ತು ಬದಲಾವಣೆಗೆ ಯಾರು ಒಗ್ಗಿಕೊಳ್ಳುತ್ತಾರೋ, ಅವರು ಎದರೂ ಜೀವನ ಸಾಗಿಸುತ್ತಾರೆ. ಉಳಿದವರಿಗೆ ಕಷ್ಟ. ಹಾಗಾದರೆ ಹೊಸ ವ್ಯವಸ್ಥೆ ಅಂದ್ರೆ ಏನು ? ಅದು ಏನು ಬೇಕಾದರೂ ಆಗಬಹುದು. ಉದಾಹರಣೆಗೆ, ಕಚೇರಿಯಲ್ಲಿ ಸೀನಿಯರ್, ಜೂನಿಯರ್ ಎಂಬ ಭೇದ-ಭಾವ ನೋಡದೇ, ಯಾರ ಅಡಿಯದರೂ ಕೆಲಸ ಮಾಡುವ ಮನಸ್ಥಿತಿ ಬೆಳೆಸಿಕೊಂಡವರು ಮತ್ತು ಒಂದು ಕಾಲದಲ್ಲಿ ನಿಮ್ಮ ಜತೆಯಲ್ಲಿದ್ದವರ ಜತೆ, ನಿಮ್ಮ ಅಡಿಯಲ್ಲಿ ಕೆಲಸ ಮಾಡಿದವನ ಜತೆ ಕೆಲಸ ಮಾಡುತ್ತೇನೆ ಎಂಬ ಭಾವನೆ ಬೆಳೆಸಿಕೊಂಡವರು. ಅಂಥವರು ಎಲ್ಲಿ ಬೇಕಾದರೂ ಜಯಿಸಿಕೊಂಡು ಬರುತ್ತಾರೆ. ಹಿಂದಿನ ಸಂಸ್ಥೆಯಲ್ಲಿ ನಿಮ್ಮ ಅಡಿಯಲ್ಲಿ ಕೆಲಸ ಮಾಡಿದವನು ಈ ಸಂಸ್ಥೆಯಲ್ಲಿ ನಿಮ್ಮ ಬಾಸ್ ಆಗಿಬರಬಹುದು.

‘ಆತ ಹಿಂದಿನ ಸಂಸ್ಥೆಯಲ್ಲಿ ನನ್ನ ಕೈಕೆಳಗೆ ಕೆಲಸ ಮಾಡಿದವನು, ಅಂಥವನ ಜತೆ ಕೆಲಸ ಮಾಡಲು ಸಾಧ್ಯವಾ?’ ಎಂದು ನೀವುವಾದಿಸಿದರೆ, ಈ ಸಂಸ್ಥೆಯಲ್ಲಿ ಮುಂದುವರಿಯಲು ಸಾಧ್ಯವೇ ಇಲ್ಲ. ಬಹಳ ಜನ ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದರೂ ಈ ಬಗೆಯಕ್ಷುಲ್ಲಕ ಕಾರಣಗಳಿಂದ ಅನಿರೀಕ್ಷಿತವಾಗಿ ತಮ್ಮ ವೃತ್ತಿ ಜೀವನಕ್ಕೆ ಇತಿಶ್ರೀ ಹಾಡುತ್ತಾರೆ. ಸೀನಿಯರ್-ಜೂನಿಯರ್ ಎಂಬ ಭಾವನೆಗಳತೊಳಲಾಟದಲ್ಲಿ ಸಿಲುಕಿ, ನರಳಿ, ಯಾರಿಗೂ ಬೇಡದವರಾಗಿ ಅಕಾಲಿಕವಾಗಿ
ನಿವೃತ್ತರಾಗುತ್ತಾರೆ.

ಇಂಥವರಿಗೆ ವಾಸ್ತವ ಜಗತ್ತಿನ ಪರಿಚಯವೇ ಆಗಿರುವುದಿಲ್ಲ. ಹಿಂದಿನ ಸಂಸ್ಥೆಯಲ್ಲಿ ನಿಮ್ಮ ಜೂನಿಯರ್ ಆಗಿದ್ದವನು ಅಥವಾ ನಿಮ್ಮಕೈಕೆಳಗೆ ಇದ್ದವನು, ಈಗ ನಿಮಗೆ ಬಾಸ್ ಆಗಿದ್ದಾನೆ ಅಂದರೆ ಅದು ಅವನ ತಪ್ಪಲ್ಲ. ಅದು ನಿಮ್ಮ ಹಿನ್ನಡೆ ಮತ್ತು ಅವನ ಹೆಚ್ಚುಗಾರಿಕೆ. ಈ ಕಟುವಾಸ್ತವವನ್ನು ಒಪ್ಪಿಕೊಳ್ಳದಿದ್ದರೆ, ಈಗಿರುವ ಸಂಸ್ಥೆಯಲ್ಲಿ ಒಂದು ಕ್ಷಣ ಸಹ ಇರಲು ಆಗುವುದಿಲ್ಲ. ಪ್ರತಿ ಸಂಸ್ಥೆಯಲ್ಲೂ ಇಂಥ ಅನೇಕ ಜನ ತಮ್ಮ ಉತ್ತಮವಾದ ಉದ್ಯೋಗವನ್ನು ತೊರೆಯುವುದನ್ನು ನೋಡಬಹುದು. ತಾನು ಎಂಬ ಅಹಮಿಕೆ, ಹಿರಿಮೆ ಅವರಲ್ಲಿ ಸದಾ ಜಾಗೃತವಾಗಿರುತ್ತದೆ.

ಪರಿಸ್ಥಿತಿ ಮತ್ತು ಸುತ್ತಲಿನ ಜಗತ್ತು ಬದಲಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ನಾನು ನನ್ನ ಮೂವತ್ತೆರಡನೇ ವಯಸ್ಸಿಗೆ ‘ವಿಜಯ ಕರ್ನಾಟಕ’ ಪತ್ರಿಕೆಗೆ ಸಂಪಾದಕನಾಗಿ ಸೇರಿದಾಗ, ಐದಾರು ಜನ ಹಿರಿಯ ಸಹೋದ್ಯೋಗಿಗಳು ಹಠಾತ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಕಾರಣ ಇಷ್ಟೇ, ನಾನು ಅವರೆಲ್ಲರ ಜೂನಿಯರ್ ಆಗಿ ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೆ. ಅದೇ ನಾನು ಮಾಡಿದ ಅಪರಾಧ!

‘ಈ ಭಟ್ಟ ನನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ. ಈಗ ಅವನ ಕೈಕೆಳಗೆ ನಾವು ಕೆಲಸ ಮಾಡೋದಾ? ಸಾಧ್ಯವೇ ಇಲ್ಲ’ ಎಂದು ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿದರು. ನಾನು ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೂ, ಅವರು ತಮ್ಮ ಮನಸ್ಸನ್ನು ಬದಲಿಸಲಿಲ್ಲ. ನಾನು ‘ವಿಜಯ
ಕರ್ನಾಟಕ’ ಸೇರುವುದಕ್ಕಿಂತ ಒಂದೆರಡು ದಿನ ಮುನ್ನ ‘ಕನ್ನಡ ಪ್ರಭ’ದಲ್ಲಿದ್ದ ಹಿರಿಯಪತ್ರಕರ್ತರೊಬ್ಬರು ದಿಲ್ಲಿಯ ವರದಿಗಾರರಾಗಿ ಸೇರಬೇಕಾಗಿತ್ತು. ಅವರು ನನಗಿಂತ ಹಿರಿಯರು. ನಾನು ‘ಕನ್ನಡ ಪ್ರಭ’ದಲ್ಲಿ ಅವರಿಗೆ ಜೂನಿಯರ್ ಆಗಿದ್ದೆ. ಇದೊಂದೇ ಕಾರಣಕ್ಕೆ ಅವರು ಆ ಹುದ್ದೆ ಸ್ವೀಕರಿಸಲಿಲ್ಲ.

ಅದಾಗಿ ಕೆಲವು ತಿಂಗಳುಗಳ ಬಳಿಕ, ಅದೇ ಪತ್ರಿಕೆಯಲ್ಲಿ ಅವರ ಜೂನಿಯರ್ ಸಹೋದ್ಯೋಗಿಯೊಬ್ಬರು ಸಂಪಾದಕರಾದಾಗ, ಅವರ ಕೈಕೆಳಗೆ ಕೆಲಸ ಮಾಡಬೇಕಾಗಿ ಬಂದುದು ಪಾಪ, ಅವರ ಹಣೆಬರಹ! ಈ ರೀತಿಯ ಮನಸ್ಥಿತಿಯಿಂದ ಕೆಲಸ ಬಿಟ್ಟವರ ವೃತ್ತಿ ಜೀವನ ಹಠಾತ್ ಮೊಟಕಾಗಿ ಕೊನೆಗೊಂಡಿದ್ದು
ವಿಷಾದಕರ. ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ ಅವರು ತಮ್ಮದೇ ಒಂದು ನಿದರ್ಶನವನ್ನು ಕೊಟ್ಟಿದ್ದು ನೆನಪಾಗುತ್ತಿದೆ. 2014 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಸರಕಾರ ಮತ್ತು ಪಕ್ಷದಲ್ಲಿ ಗಣನೀಯ ಬದಲಾವಣೆಗಳಾದವು.

ಮೋದಿ ಪ್ರಧಾನಿಯಾದ ಕೆಲವು ತಿಂಗಳಲ್ಲಿ, ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು. ಅನಂತಕುಮಾರ ಅವರು ಕೇಂದ್ರದಲ್ಲಿ ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದಾಗ, ಒಮ್ಮೆ ಅಮಿತ್ ಷಾ ದಿಲ್ಲಿಗೆ ಆಗಮಿಸಿದ್ದರಂತೆ. ಅನಂತಕುಮಾರ ಭೇಟಿಗೆ ಸಮಯ ಕೋರಿದ್ದರಂತೆ. ಆದರೆ ಸಮಯಾಭಾವವೋ, ಕೆಲಸದ ಒತ್ತಡವೋ, ಒಟ್ಟಾರೆ ಷಾ ಅವರಿಗೆ ಅನಂತಕುಮಾರ ಭೇಟಿ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಆಗ ಷಾ, ಗುಜರಾತಿನ ಮೋದಿ ಸರಕಾರದಲ್ಲಿ ಒಬ್ಬ ಸಚಿವರಾಗಿದ್ದರು. ಗುಜರಾತಿಗಷ್ಟೇ ಅವರ ಹೆಸರು ಮತ್ತು ಕಾರ್ಯಕ್ಷೇತ್ರ ಸೀಮಿತವಾಗಿತ್ತು.

ರಾಜಕೀಯವಾಗಿ ಅವರು ಅಷ್ಟು ಪ್ರಬಲರಾಗಿರಲಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ, ಷಾ ಪಕ್ಷದ ಅಧ್ಯಕ್ಷರಾದರು. ಆದರೆ ಅನಂತಕುಮಾರ ಶಟಗೊಂಡು ಕುಳಿತುಕೊಳ್ಳಲಿಲ್ಲ. ತಮ್ಮ ಸುತ್ತಲಿನ ರಾಜಕೀಯ ಪರಿಸ್ಥಿತಿ ಬದಲಾಗಿದ್ದನ್ನು ಬಹುಬೇಗ ಅರ್ಥ ಮಾಡಿಕೊಂಡರು. ‘ನಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ, ಅವರು (ಷಾ) ಎಲ್ಲಿದ್ದರು? ಗುಜರಾತಿನಲ್ಲಿ ಒಬ್ಬ ಮಂತ್ರಿಯಾಗಿದ್ದರು. ಈಗ ನಾನು ಅವರ ಕೈಕೆಳಗೆ ಕೆಲಸ ಮಾಡುವುದುಂಟಾ? ಸಾಧ್ಯವೇ ಇಲ್ಲ’ ಎಂದಿದ್ದರೆ,
ಅವರ ರಾಜಕೀಯ ಜೀವನ ಅಲ್ಲಿಗೆ ಮುಗಿಯುತ್ತಿತ್ತು. ಆದರೆ ಅನಂತಕುಮಾರ ಹಾಗೆ ಮಾಡಲಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಷಾ ಅವರನ್ನು ನಾಯಕರೆಂದು ಒಪ್ಪಿಕೊಂಡರು. ಮಹತ್ವದ ಸ್ಥಾನಗಳನ್ನು ಪಡೆದುಕೊಂಡರು. ಕೇಂದ್ರದಲ್ಲಿ ತಮ್ಮ ವರ್ಚಸ್ಸು ಮತ್ತು ಪ್ರಭಾವವನ್ನು ಹೆಚ್ಚಿಸಿಕೊಂಡರು.

ಈ ರೀತಿ ಯಾರು ಸನ್ನಿವೇಶಕ್ಕೆ, ಸಂದರ್ಭಕ್ಕೆ ತಕ್ಕ ಹಾಗೆ ತಮ್ಮ ಧೋರಣೆಗಳನ್ನು ಬದಲಿಸಿಕೊಳ್ಳದಿದ್ದರೆ, ಪ್ರಸ್ತುತರಾಗಿ ಇರುವುದು ಸಾಧ್ಯವಿಲ್ಲ. ಈಗಿನ ಜಮಾನದಲ್ಲಿ ಯಾರು ಬೇಕಾದರೂ, ನಾಳೆ ನಿಮ್ಮ ಬಾಸ್ ಆಗಿ ಬರಬಹುದು, ನೀವು ನಿಮ್ಮ ಜೂನಿಯರ್ ಕೆಳಗೆ ಕೆಲಸ ಮಾಡಬೇಕಾದ ಪ್ರಸಂಗ ಬರಬಹುದು. ಇಂಥ ಪರಿಸ್ಥಿತಿಯಲ್ಲಿ, ಯಾರು ವಾಸ್ತವವನ್ನು ಅರ್ಥ ಮಾಡಿಕೊಂಡು ಮುನ್ನಡೆಯುತ್ತಾರೋ ಅವರು ಮುಂದುವರಿಯುತ್ತಾರೆ. ಇಲ್ಲದಿದ್ದರೆ ಮನೆಗೆ ಹೋಗುತ್ತಾರೆ,
ಅಷ್ಟೇ.