Saturday, 21st September 2024

ಚೆನ್ನಾಗಿ ಸಾಯುವವನು ಮಾತ್ರ ಚೆನ್ನಾಗಿ ಬದುಕುತ್ತಾನೆ

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಅರೆ, ಇದೆಂಥಾ ವಿಚಿತ್ರ? ಚೆನ್ನಾಗಿ ಸಾಯುವವನು ಚೆನ್ನಾಗಿ ಬದುಕುವುದಕ್ಕೆ ಹೇಗೆ ಸಾಧ್ಯ? ಸಾವೇ ಬದುಕಿನ ಕೊನೆ ಅಂದಮೇಲೆ ಮತ್ತೆ ಚೆನ್ನಾಗಿ ಬದುಕುವುದು, ಅಥವಾ ಬದುಕುವುದಕ್ಕೆ ಸಾಧ್ಯವಾಗುವುದೆಂದರೆ ಏನರ್ಥ? ಅದು ಹೇಗೆ ಸಾಧ್ಯ? ಆಂಗ್ಲ ಚಿಂತಕ ಆಲನ್ ವ್ಯಾಟ್ಸನ ಮಾತಿದು: While living, be a dead man, thoroughly dead; Then whatever you do, just as you will, will be right. ಚೆನ್ನಾಗಿ ಸತ್ತವನು ಚೆನ್ನಾಗಿ ಬದುಕುವುದು ಹೇಗೆ ಸಾಧ್ಯವೆಂದರೆ, ವ್ಯಾಟ್ಸನ ಪ್ರಕಾರ ಚೆನ್ನಾಗಿ ಸತ್ತವನೇ ಚೆನ್ನಾಗಿ ಬದುಕುವುದು.

ಹಾಗಾದರೆ, ನಮ್ಮನ್ನು ಚೆನ್ನಾಗಿ ಬದುಕಿಸಬಲ್ಲ ಆ ಸಾವು ಯಾವುದು? ನಾವು ಸತ್ತೂ, ಜೀವಂತವಾಗಿದ್ದು ಚೆನ್ನಾಗಿ ಬದುಕುವಂತೆ ಮಾಡಬಲ್ಲ ಆ ಸಾವು ಯಾವುದು? ಅಂದರೆ ಅರ್ಥವಿಷ್ಟೆ: ಈ ಬದುಕಿನ ಎಲ್ಲ ವನ್ನೂ ನಾವು ಅಗಲುವುದು; ಅಗಲಿ ಬದುಕುವುದು; ತ್ಯಜಿಸುವುದು, ಪ್ರತಿಯೊಂದೂ ನನ್ನದಲ್ಲವೆಂಬಂತೆ; ಎಲ್ಲವೂ ಇದ್ದೂ ಏನೂ ಇಲ್ಲವೆಂಬ ನಿರ್ಲಿಪ್ತ ಭಾವ ದೊಂದಿಗೆ ಬದುಕುವುದು. ಈಗ ದೇಶವ್ಯಾಪಿ ಜಾರಿಯಲ್ಲಿರುವ ಲಾಕ್ ಡೌನ್ ನಿಯಮ ಇಂಥ ಬದುಕನ್ನು ಮನವರಿಕೆ ಮಾಡಿಕೊಟ್ಟಿದೆ. ಎಲ್ಲ ಇದ್ದೂ ಯಾವುದೂ ಇಲ್ಲವೆಂಬಂತೆ ಈ ಆಧುನಿಕತೆಗೆ ಗುಲಾಮರಾಗಿದ್ದ ನಮಗೆ ಹೀಗೆಯೂ ಬದುಕುವುದಕ್ಕೆ ಸಾಧ್ಯವೆಂಬುದನ್ನೂ, ನಮಗೆ ನಾವೇ ಅಚ್ಚರಿಪಡುವಂಥೆ ಹಾಗೆ ಮಾಡಲು ಒಂದು ರೋಗದ ವೈರಾಣಿನಿಂದ ಸಾಧ್ಯವಾಯಿತು ನೋಡಿ!

ಸತ್ತು ಬದುಕುವುದು ಅಂದರೆ, ಈ ಸಂಪತ್ತು, ಆಸ್ತಿ, ಪದವಿ, ಸ್ಥಾನಮಾನ, ಕೀರ್ತಿ, ಹೆಸರು, ಪ್ರತಿಷ್ಠೆ- ಒಟ್ಟಾರೆ ಎಲ್ಲ ಬಗೆಯ ಲೌಕಿಕ ತಾದಾತ್ಮ್ಯವನ್ನು ಕಳಚಿ ಕೊಂಡು ಬದುಕುವುದು. ಹಾಗೆ ಬದುಕುತ್ತಲೇ ಸಂಪೂರ್ಣವಾಗಿ ನಿಸ್ಪೃಹರಾಗುವುದು. ಅಂಟಿಕೊಂಡಿಯೂ ಅಂಟಿಕೊಳ್ಳದ ಹಾಗೆ ಬದುಕುವುದು. ಬದುಕಿನ ಎಲ್ಲ ಬಂಧನಗಳಿಂದ ಸಾಧ್ಯವಾದಷ್ಟೂ ಮುಕ್ತವಾಗುವುದು. ಹತ್ತಿರದಿಂದ ಬದುಕನ್ನು ನೋಡುತ್ತ ನೋಡುತ್ತ ದೂರವಾಗುವುದು. ದೂರವಾಗುತ್ತ ಆಗುತ್ತ ಹತ್ತಿರವೇ ಇರುವುದು. ಮತ್ತೂ ಈ ಬದುಕನ್ನು ಸೂಕ್ಷ್ಮತೆಯೊಂದಿಗೆ ಬದುಕುತ್ತಾ ಹೋಗು ವುದು. ಸನ್ಯಾಸಿಗಳ ಹಾಗೆ!

ಡಿ.ವಿ.ಜಿ.ಯವರ ಈ ಕಗ್ಗವನ್ನು ನೋಡಿ: ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ| ಹೊರಗೆ ಕಾರ್ಯಧ್ಯಾನವೊಳಗುದಾಸೀನ|| ಹೊರಗೆ ಸಂಸೃತಿಭಾರ
ವೊಳಗದರ ತಾತ್ಸಾರ| ವರಯೋಗಮಾರ್ಗವಿದು- ಮಂಕುತಿಮ್ಮ|| ಜೀವನದಲ್ಲಿರಬೇಕಾದ ರೀತಿಯ ಬಗ್ಗೆ ಡಿವಿಜಿ ಹೇಳಿದ ಮಾತಿದು.

ಈ ರಾಜ್ಯ ತನ್ನದಲ್ಲವೆಂದೂ ಶ್ರೀರಾಮನ ಅನುಪಸ್ಥಿತಿಯಲ್ಲಿ ಭರತನು ಅಯೋಧ್ಯೆಗೂ ಅಣ್ಣನಿಗೂ ವಿಧೇಯನಾಗಿದ್ದುಕೊಂಡೇ ರಾಜ್ಯಭಾರ ನಡೆಸಿದ ರೀತಿಯಿದೆ
ಯಲ್ಲ, ಹಾಗೆ. ಯೋಗಿ ಸಮಾನವಾದ ತ್ಯಾಗದ ಬದುಕದು! ತ್ಯಾಗೇನೈಕೇ ಅಮೃತತ್ವಮಾನಶುಃ- ಗೀತೆ ಹೇಳುವುದು ಇದನ್ನೇ. ಬದುಕನ್ನು ತೀರಾ ಹತ್ತಿರದಿಂದ ನೋಡಿದಾಗಲೇ ಸ್ವಾರ್ಥ ಕರಗುತ್ತದೆ.

ಸಾವನ್ನು ಹತ್ತಿರದಿಂದ ನೋಡಿಯೇ ಸಾವನ್ನು ಗೆಲ್ಲುವುದು! ಎಲ್ಲವನ್ನೂ ದಕ್ಕಿಸಿಕೊಳ್ಳಬಹುದಾದ ಈ ಬದುಕಿಗೆ ಎಲ್ಲವನ್ನೂ ತ್ಯಜಿಸುವ ತಾಕತ್ತೂ ಇದೆ. ಸ್ವಾರ್ಥ ವನ್ನು ಬಲಿಕೊಟ್ಟಾಗಲೇ ಆ ತಾಕತ್ತು ಉದ್ದೀಪನವಾಗುತ್ತದೆ. ಮತ್ತು ದಿನಗಳೆದಂತೆ ಹೆಚ್ಚುತ್ತಲೇ ಹೋಗುತ್ತದೆ. ಮನಸು ವ್ಯಷ್ಟಿಯಿಂದ ಸಮಷ್ಟಿಯ ಕಡೆಗೆ ಚಲಿಸುತ್ತಾ ವಿಕಸಿಸುತ್ತದೆ. ಬೃಹತ್ತಾದ ಈ ಸೃಷ್ಟಿಯ ವೈಚಿತ್ರ್ಯದ ಮುಂದೆ ಮನುಜನ ಅಸ್ತಿತ್ವ ಕಿಂಚಿತ್ತಾದುದು. ಈ ಅರಿವೇ ನಮ್ಮಲ್ಲಿ ಇಂಥ ಸತ್ತು ಬದುಕುವ ಮನಸ್ಥಿತಿಯ ಬದುಕಿಗೆ ಚಾಲನೆಯನ್ನು ಕೊಡಲು ಸಾಧ್ಯವಿದೆ. ಈ ಬದುಕನ್ನು ಗಂಭೀರವಾಗಿ ಸ್ವೀಕರಿಸಬೇಕೆಂಬುದು ನಿಜವಾದ ಸತ್ಯ.

ಆದರೆ, ಈ ಬದುಕು ಶಾಶ್ವತವಲ್ಲ ಎಂಬ ಗಂಭೀರವಾದ ಎಚ್ಚರವು ಅದಕ್ಕಿಂತಲೂ ದೊಡ್ಡ ನಿಜವಾದ ಸತ್ಯ! ಈ ಸೃಷ್ಟಿಯಿರುವುದರಿಂದ ನಮ್ಮ ಅಸ್ತಿತ್ವ ಇದೆಯೇ ವಿನಾ ನಾವು ನಾವಾಗಿ ಈ ಸೃಷ್ಟಿಯಿಲ್ಲದೇ ಇರುವುದಕ್ಕೆ ಸಾಧ್ಯವೇ ಇಲ್ಲ. ವರ್ತಮಾನ ಕಾಲಘಟ್ಟ ಇದನ್ನು ಚೆನ್ನಾಗಿ ಕಲಿಸುತ್ತಿದೆ ನಮಗೆ. Unnatural ಆದ
ಮಮಕಾರವನ್ನು ತೊರೆಯುತ್ತಲೇ ಬದುಕಲ್ಲಿ ಎಲ್ಲವನ್ನೂ ಮಮಕರಿಸುವುದು; ಅನುಭವಿಸುವುದು; ಸುಖಿಸುವುದು. ಅಂದರೆ, ಬಿಡುತ್ತಲೇ ಎಲ್ಲವನ್ನೂ ಕೂಡುವುದು. ಮೇಲೆ ಏರುತ್ತಲೆ ಕೆಳಗೇ ಇರುವುದು. ವಯಸ್ಸು ಮಾಗಿದ ಹಾಗೆ ಮಗುವಿನಂತೆ ಮುಗ್ಧರಾಗಿ ಮಗುವಾಗಿ ಬಿಡುವುದು.

ಗೀತೆ ಇದನ್ನು ಚೆನ್ನಾಗಿ ಹೇಳುತ್ತದೆ: ತ್ಯಕ್ತವ್ರೋ ಮಮಕಾರಸ್ತಯ ಶಕ್ಯತೇ ನಾಸೌ| ಕರ್ತವ್ರೋ ಮಮಕಾರಃ ಕಿಂ ತು ಸರ್ವತ್ರ ಕರ್ತವ್ಯಃ|| ಡಿ.ವಿ.ಜಿ.ಯ ಜೀವನಧರ್ಮಯೋಗದ ಈ ಮಾತನ್ನುಕೇಳಿ: ಎರಡು ಕೋಣೆಯ ಮಾಡು. ಮನದ ರಂಗಸ್ಥಳದಿ; ಹೊರನೋಟದೊಳು ಲೋಗರೊಡನಾಟ ವಾಡು; ವಿರಮಿಸೊಬ್ಬನೆ ಮನಸಿನೊಳಮನೆಯ ಕೋಟೆಯಲಿ; ವರಯೋಗ ಸೂತ್ರವಿದು- ಮಂಕುತಿಮ್ಮ| ಸಾಯುತ್ತಾ ಬದುಕುವುದು; ಬದುಕುತ್ತಲೇ ಸಾಯು
ವುದು. ತನ್ಮೂಲಕ ಈ ದೇಹ ಮನಸಿಗೆ ಅಂಟಿಕೊಂಡ ಅಹಂ ಅನ್ನು ಕಳಚಿಕೊಳ್ಳುವುದು.

ದಾಸರು ಹೇಳುವುದು ಇದನ್ನೇ: ’ನಾನು’ ಹೋದರೆ ಹೋದೇನು! ಇದೊಂದು ರೀತಿಯ ಇಚ್ಛಾಮರಣದ ಪ್ರಕ್ರಿಯೆಯಂತೆ. ಈ ಬದುಕನ್ನು ಢಾಳವಾಗಿ, ಆಳವಾಗಿ ಪ್ರೀತಿಸಲು ಮತ್ತು ಹಾಗೇ ನಿತ್ಯವೂ ಸಾಯಲು ಇದೊಂದು ಉತ್ಕಟವಾದ, ಉನ್ನತವಾದ ಮಾರ್ಗ. ಹಾಗಾಗುವುದಕ್ಕೆ ಈ ಜೀವನವೇ ಉತ್ತಮವಾದ ಮೊದಲ
ಮತ್ತು ಕೊನೆಯ ಅವಕಾಶ. ಚೆನ್ನಾಗಿ ಸಾಯುವುದು ಅಂದರೆ ಚೆನ್ನಾಗಿ ಬದುಕುವುದು ಎಂದರ್ಥ. ಚೆನ್ನಾಗಿ ಬದುಕುವುದು ಅಂದರೆ ಚೆನ್ನಾಗಿ ಸಾಯುವುದಕ್ಕೆ ಸಿದ್ಧವಿರುವುದು ಎಂದರ್ಥ.

ಪುರುಷಾರ್ಥಗಳಲ್ಲಿ ಒಂದಾದ ಮೋಕ್ಷ ಸಾಧನೆಗೆ ಸಾವು ಮೊದಲ ಹೆಜ್ಜೆ. ಬದುಕಿಗೆ ವಿಮುಖವಾದ ನಂತರ ಎಲ್ಲವೂ ಅಗೋಚರ. ದಾರ್ಶನಿಕನೊಬ್ಬ ಸಾವನ್ನು ಭೌತಿಕ, ಮಾನಸಿಕ, ಆಧ್ಯಾತ್ಮಿಕ ದೃಷ್ಟಿಕೋನದಿಂದ ಪರಿಗ್ರಹಿಸಿದಂತೆ ಸಾಮಾನ್ಯ ಮನುಷ್ಯನೊಬ್ಬ ಯಾವುದನ್ನೂ ಸತ್ಯದ ಒರೆಗಲ್ಲಿಗೆ ಉಜ್ಜಿ ನೋಡುವುದಿಲ್ಲ. ಜಗತ್ತಿನಲ್ಲಿ ಬದುಕಿನ ಮಾಯೆಯ ಸ್ವರೂಪಕ್ಕೆ ಮರುಳಾದ ಹಾಗೆ ಸಾವಿನ ರಹಸ್ಯಕ್ಕೆ ಬೆರಗಾಗುವ ಜನರ ಸಂಖ್ಯೆ ಕಡಿಮೆಯೇ! ಮನುಷ್ಯನ ಬದುಕಿಗೆ ಅಂತ್ಯ
ಹಾಡಿ ಮುಚ್ಚಿಕೊಳ್ಳುವ ಸಾವಿನ ಬಾಗಿಲ ಹಿಂದೆ ಏನಿದೆ ಎಂಬ ರಹಸ್ಯ ಈವರೆಗೂ ಮನುಷ್ಯನ ಪ್ರಜ್ಞೆಗೆ ನಿಲುಕಿಲ್ಲ. ಆತ್ಮವು ದೇಹವನ್ನು ತೊರೆದಾಗ ಸಾವು ಸಂಭವಿಸುತ್ತದೆಂಬ ನಂಬಿಕೆಯಿದ್ದರೂ ಆತ್ಮ ಎಂದರೇನು, ಅದು ಎಲ್ಲಿರುತ್ತದೆ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕಿಲ್ಲ.

ಸಾವಿನ ಬಗ್ಗೆ ಜಗತ್ತಿನ ಧರ್ಮಗಳು ಹೊಂದಿರು ವಷ್ಟು ಸಿದ್ಧಾಂತಗಳು ಮತ್ತು ನಿರ್ಣಯಗಳನ್ನು ವಿಜ್ಞಾನ ಹೊಂದಿಲ್ಲ. ದೇಹದ ಅಂಗಾಂಗಗಳಿಗೆ ವಯಸ್ಸಾಗಿ ಅವುಗಳ ಜೈವಿಕ ಕ್ರಿಯೆಗಳು ನಿಲ್ಲುವ ಸ್ಥಿತಿಯೇ ಸಾವು ಎಂಬುದು ಭಾವಗೋಚರವಾದ ವೈಜ್ಞಾನಿಕ ಸತ್ಯ. ಸಾವು ಎಂಬುದು ಮನುಷ್ಯನಿಗೆ ಇಂದಿಗೂ ರಹಸ್ಯ
ವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಸಾವಿನ ನಂತರದ ಜಗತ್ತಿನ ಪ್ರವೇಶವನ್ನು ಧಾರ್ಮಿಕ ಕ್ರಿಯೆಯಾಗಿ ಅಥವಾ ವೈeನಿಕ ರೂಪಾಂತರ ಎಂಬುದಾಗಿ ವರ್ಗೀಕರಿಸಲು ಧ್ಯವಿಲ್ಲ!

ಸಾವಿನಿಂದ ಆರಂಭವಾಗಿ ಮತ್ತೂಂದು ಭ್ರೂಣದವರೆಗೆ ಇರುವ ಬೃಹತ್ ಕಂದರದ ಹರಹು ಮಾನವನ ಅನುಭವಕ್ಕೆ ಮೀರಿದ್ದು. ಇದೇ ಮನುಷ್ಯನಿಗೆ ಸಾವಿನ ಬಗ್ಗೆ
ಕುತೂಹಲ ಮತ್ತು ಭಯವನ್ನು ಉಂಟುಮಾಡುವ ಪ್ರಮುಖ ಅಂಶ. ಮನುಷ್ಯ ತನ್ನ ಪ್ರಜ್ಞಾಪೂರ್ವಕ ಜ್ಞಾನದ ನೆರವಿನಿಂದ ಬದುಕಿನ ಪರಿಧಿಯನ್ನು ರಚಿಸಿಕೊಂಡು ಅದರ ಬದುಕುತ್ತಾನೆ. ತನ್ನ ಸುಖದ ಕೋಶವನ್ನು ತೊರೆದು ಅರಿಯದ ಜಗತ್ತಿಗೆ ಹೊಂದಿಕೊಳ್ಳಲಾ ಗದ ಮನುಷ್ಯ ಪ್ರಜ್ಞಾ ಸಾವಿನ ನಂತರ ದಿಕ್ಕೆಟ್ಟು ಹೋಗುತ್ತದೆ. ತನ್ನದೇ ದೇಹದ ಒಳಗೆ ಇನ್ನೂ ಇರಲು ಬಯಸುತ್ತದೆ.

ಅಂತಹ ಸಂದರ್ಭಗಳಲ್ಲಿ ಸಾವಿನ ಅನಿವಾರ್ಯತೆಯನ್ನು ತಿಳಿಸಿ ಪ್ರಜ್ಞಾ ಸೂಕ್ತ ಮಾರ್ಗದರ್ಶನ ನೀಡಬೇಕಾದ ಒಂದು ಗೈಡಿಂಗ್ ಫೋರ್ಸ್ ಬೇಕಾಗುತ್ತದೆ. ಕೆಲವು ಗ್ರಂಥಗಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಸೂತ್ರಗಳ ಬಗ್ಗೆ ನೀತಿಪಾಠ ಹೇಳಿ ಆತನನ್ನು ಈ ಜಗತ್ತಿನ ಒಳ್ಳೆಯವನನ್ನಾಗಿ ಮಾಡಿ ಸಾವಿನ
ನಂತರದ ಬದುಕಿಗೆ ಸಿದ್ಧಗೊಳಿಸುವ ಕಾರ್ಯ ಮಾಡಿದರೆ ಮತ್ತೆ ಕೆಲವು ಧರ್ಮ ಗ್ರಂಥಗಳು ಪಾಪಗಳಿಗೆ ಶಿಕ್ಷೆ ಪಡೆದ ನಂತರ ದೇವರೇ ನಿನ್ನನ್ನು ಮುಕ್ತಿಯೆಡೆಗೆ ನಡೆಸುತ್ತಾನೆ ಎಂಬ ಕರ್ಮ ಸಿದ್ಧಾಂತವನ್ನು ಆಧರಿಸಿರುತ್ತದೆ.

ಟಿಬೆಟಿನ ಸತ್ತವರ ಪುಸ್ತಕ, ಹಿಂದೂ ಧರ್ಮದ ಗರುಡ ಪುರಾಣ, ಈಜಿಪ್ಟಿಯನ್ನರ ಸತ್ತವರ ಪುಸ್ತಕ, ಇಸ್ಲಾಮಿನ ಕುರಾನ್ ಈ ನಿಟ್ಟಿನಲ್ಲಿ ಪ್ರಮುಖವಾದ ಗ್ರಂಥಗಳು. ಇವುಗಳು ಸತ್ತ ನಂತರದ ಜಗತ್ತಿನಲ್ಲಿ ಪ್ರಜ್ಞೆ ಎದುರಿಸಬೇಕಾದ ಇಬ್ಬಂದಿತನವನ್ನು ಪರಿಹರಿಸಿ ಮನುಷ್ಯನನ್ನು ವಿನೀತನನ್ನಾಗಿ ಮಾಡುವುದರ ಮೂಲಕ ಆತ್ಮ ವನ್ನು ಮರುಜನ್ಮಕ್ಕೆ ಅಣಿ ಮಾಡುತ್ತವೆ. ಗರುಡ ಪುರಾಣ ಮತ್ತು ಟಿಬೆಟಿನ ಸತ್ತವರ ಪುಸ್ತಕ ಭಾರತೀಯ ಮೂಲದ ತಂತ್ರ, ಸಿದ್ಧಿ ಮತ್ತು ಕುಂಡಲಿನಿ ಶಕ್ತಿ ಗಳನ್ನು ಆಧರಿಸಿದವು. ಕಾಳಿಕಾಗಮದಲ್ಲಿ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳಲು ಬೇಕಾದ ಮಂತ್ರ-ತಂತ್ರಗಳನ್ನು ಅಭ್ಯಸಿಸುವವನನ್ನು ತಾಂತ್ರಿಕ ಎಂದು ಕರೆಯುತ್ತಾರೆ.

ತಾಂತ್ರಿಕ ತನ್ನ ಸಾಧನೆಯ ಹಾದಿಯಲ್ಲಿ ಹಲವಾರು ದೇವತೆಗಳ ಮೊರೆ ಹೋಗಬೇಕಾಗುತ್ತದೆ. ಅಂತಹ ದೇವತೆಗಳನ್ನು ಅಂತರಂಗ ದೇವಿಯರು, ತಟಸ್ಥ ದೇವಿಯರು ಮತ್ತು ಬಹಿರಂಗ ದೇವಿಯರು ಎಂದು ಕರೆಯಲಾಗುತ್ತದೆ. ಸತ್ತವರ ಪುಸ್ತಕಗಳಲ್ಲಿ ಕೆಲವಾರು ಸಾವಿನ ದೇವತೆಗಳ ಉಲ್ಲೇಖ ಅವರ ರೂಪ ವರ್ಣನೆ ಕಂಡುಬರುತ್ತದೆ. ಟಿಬೆಟಿನ ಸತ್ತವರ ಪುಸ್ತಕ ಹಿಂದೂ ತಾಂತ್ರಿಕ ಉಲ್ಲೇಖಗಳಲ್ಲಿ ಕಂಡುಬರುವ ಮಹತ್ ಶಕ್ತಿಯ ಪ್ರಾಣಕೋಶಗಳಾದ ಅನ್ನಮಯ ಕೋಶ,
ಪ್ರಾಣಮಯ ಕೋಶ, ಮನೋಮಯ ಕೋಶ ಮತ್ತು ಆನಂದಮಯ ಕೋಶಗಳ, ಪ್ರಾಣವಾಯು, ನಾಡಿ, ಚಕ್ರಗಳ ಉಖದ ಜೊತೆಗೆ ಸಾಗುತ್ತದೆ. ಇದೇ ಹಾದಿ ಯಲ್ಲಿ ನಡೆದುಬಂದ ಬೌದ್ಧ ಧರ್ಮ ಕೆಲ ಕಾಲಾನಂತರ ಹಿಂದೂ ಧರ್ಮದಿಂದ ಬೇರೆಯಾಗಿ ತಂತ್ರ, ಯೋಗಗಳಲ್ಲಿ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಆವಿಷ್ಕರಿಸಿ ಅವನ್ನು ಅಭಿವೃದ್ಧಿಗೊಳಿಸಿಕೊಂಡಿತು.

ಬೌದ್ಧಧರ್ಮ ಅತೀತ ಆಚರಣೆಗಳಲ್ಲಿ ಮಾನವ ದೇಹದ ನವದ್ವಾರಗಳ ಉಲ್ಲೇಖವನ್ನು ಒಪ್ಪುತ್ತದೆ. ಇವು ದೇವತೆಗಳು, ಯಕ್ಷರು, ವಿದ್ಯಾಧರರು, ಭೂತ, ಪ್ರಾಣಿ ಗಳು ಮತ್ತು ನರಕವನ್ನು ಪ್ರತಿನಿಧಿಸುತ್ತವಲ್ಲದೇ ನವಗ್ರಹಗಳ ಸೂಚಕಗಳೂ ಹೌದು. ನವದ್ವಾರಗಳ ಕೇಂದ್ರಗಳಲ್ಲಿ ಅಡಗಿರುವ ಶಕ್ತಿಯನ್ನು ಉದ್ದೀಪಿಸಿ ಪ್ರಜ್ಞೆಯನ್ನು ಜಾಗೃತಗೊಳಿಸುವ ವಿಧಾನ ಕುಂಡಲಿನಿ ಶಕ್ತಿ. ಝೆನ್ನಂತಹ ಕೆಲವು ಪಂಥಗಳು ಸಾವನ್ನು ನೋಡುವ ಅದನ್ನು ಸ್ವೀಕರಿಸುವ ಬಗೆಯೇ ವಿಚಿತ್ರ. ಒಬ್ಬ ಜೆನ್ ಗುರುವಿದ್ದ. ಆತನ ವಯಸ್ಸು ಸುಮಾರು ನೂರು. ತನ್ನ ಸಾವಿನ ಸಮಯ ಹತ್ತಿರ ಬಂದಿದೆ ಎಂದು ಆತನಿಗೆ ಅನ್ನಿಸುತ್ತದೆ. ತನ್ನ ಸಾವು ಎಲ್ಲರಿಗಿಂತ ವಿಶೇಷವಾಗಿರಬೇಕು ಎಂದು, ತಾನು ಹೇಗೆ ಸತ್ತರೆ ಒಳ್ಳೆಯದು ಎಂದು ತನ್ನ ಶಿಷ್ಯರನ್ನು ಕೇಳುತ್ತಾನೆ.

ಗುರುವಿನ ಮಾತು ಕೇಳಿ ಅವರೆಲ್ಲ ಗಾಬರಿಗೊಳ್ಳುತ್ತಾರೆ. ಕೊನೆಗೆ ಗುರು ಎಲ್ಲರೂ ಮಲಗಿ ಸತ್ತರೆ ತಾನು ತಲೆಕೆಳಗಾಗಿ ನಿಂತು ಸಾಯುವುದಾಗಿ ಘೋಷಿಸಿ
ಹಾಗೆಯೇ ತಲೆಕೆಳಗಾಗಿ ನಿಂತುಬಿಡುತ್ತಾನೆ. ಆತನ ಉಸಿರು ನಿಲ್ಲುತ್ತದೆ. ಶಿಷ್ಯರು ತಮ್ಮ ಗುರು ಸತ್ತ ಎಂದು ಎಲ್ಲಾ ಆಶ್ರಮಗಳಿಗೂ ತಿಳಿಸಿ ಅಂತ್ಯಸಂಸ್ಕಾರದ ಸಿದ್ಧತೆ ಮಾಡುತ್ತಾರೆ. ಈ ಸುದ್ದಿ ಪಕ್ಕದೂರಿನ ಆಶ್ರಮಕ್ಕೆ ತಲುಪುತ್ತದೆ. ಅಲ್ಲಿ ಗುರುವಿನ ಸೋದರಿ ಸನ್ಯಾಸಿನಿಯಾಗಿರುತ್ತಾಳೆ. ಆಕೆ, ಕೈಯಲ್ಲಿ ಕೋಲೊಂದನ್ನು ಹಿಡಿದು ಬೈಯ್ಯುತ್ತ ಬರುತ್ತಾಳೆ.

ಬಂದವಳೇ ತಲೆಕೆಳಾಗಿ ನಿಂತು ಸತ್ತಿದ್ದ ಗುರುವಿಗೆ ನಾಲ್ಕು ಬಾರಿಸುತ್ತ ಇಷ್ಟು ವಯಸ್ಸಾದರೂ ನೀನಿನ್ನೂ ಹುಡುಗಾಟ ಬಿಡಲಿಲ್ಲವಲ್ಲ! ಸಾಯುವಾಗಲಾದರೂ ಸರಿಯಾಗಿ ಮಲಗಿ ಸಾಯಿ ಎನ್ನುತ್ತಾಳೆ. ದಿಢೀರನೆ ಗುರು ಎಚ್ಚರಗೊಳ್ಳುತ್ತಾನೆ. ಶಿಷ್ಯರಿಗೆಲ್ಲ ತಮ್ಮ ಗುರು ಬದುಕಿದ ಎಂದು ಸಂತೋಷವಾಗುತ್ತದೆ. ಗುರು ತನ್ನ ಅಕ್ಕನಿಗೆ, ನೀನಂದದ್ದು ಸರಿ, ಹಾಗೆಯೇ ಮಾಡುತ್ತೇನೆ’ ಎಂದವನೇ ಹಾಸಿಗೆಯಲ್ಲಿ ಮಲಗಿ ಪ್ರಾಣ ಬಿಡುತ್ತಾನೆ. ಗುರುವಿನ ಅಕ್ಕ ಅದನ್ನು ನೋಡಿ, ಇದೀಗ ಸರಿಯಾಯ್ತು ಎಂದು ತೆರಳುತ್ತಾಳೆ. ಇದು ಜೆನ್ ಸಿದ್ಧಾಂತ ಸಾವಿಗೆ ನೀಡುವ ಮಹತ್ವ. ಇಂತಹ ನಿರ್ಲಿಪ್ತ ಭಾವ ಸಾವಿನ ಮೇಲೆ ಬಂದರೆ ಅದು ಹೇಗಿದ್ದೀತು?
ಸಾಯುವುದಕ್ಕೂ ಒಂದು ಮಾನಸಿಕ ಸಿದ್ಧತೆ ಬೇಕಲ್ಲವೇ? ಯಾರಿಗೂ ಸಾವನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳುವುದು ಸಾಧ್ಯವೇ ಇಲ್ಲ.

ಭಯ, ದುಃಖ, ತಲ್ಲಣದಿಂದ ಇಡೀ ದೇಹವೇ ಒಮ್ಮೆಲೇ ಥತ್ತರಗುಟ್ಟಿ ಹೋಗುತ್ತದೆ. ಸಾವು ಸಹಜವೆಂಬುದು ಪ್ರತಿ ಜೀವಿಗೂ ಗೊತ್ತಿರುತ್ತದೆ. ಆದರೂ ಸಾವು ಎಂಬುದನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಾಗದು. ಕ್ಷಣಕ್ಷಣವೂ ಸಾವನ್ನು ಬಗಲಲ್ಲಿ ಇಟ್ಟುಕೊಂಡೇ ಅಲ್ಲವೆ ಸೈನಿಕರು ದೇಶದ ಗಡಿಯನ್ನು ಕಾಯುವುದು! ಎಷ್ಟೇ ಭದ್ರತೆಯಿದ್ದರೂ ಸಾವು ಮಾತ್ರ ಅವರನ್ನು ಕಾಡುವುದು ಪ್ರತಿಕ್ಷಣವೂ ಸತ್ಯವೇ! ಪ್ರತಿ ಸಾವೂ ಕೂಡ ನಮ್ಮಲ್ಲಿ ಏನೇನೋ
ಯೋಚನೆಗಳನ್ನೆಲ್ಲ ಹುಟ್ಟುಹಾಕುತ್ತದೆ. ಒಂದು ಸ್ಥಿತ್ಯಂತರದ ಯೋಚನಾ ಪ್ರಕ್ರಿಯೆಗೆ ನಮ್ಮನ್ನು ಒಯ್ಯುವ ಶಕ್ತಿ ಸಾವಿಗಿದೆ.

ಅದರಲ್ಲೂ ನಮಗೆ ತೀರಾ ಆಪ್ತರೆನಿಸಿದವರು ಸತ್ತಾಗಲಂತೂ ಹೇಳಲಾರದ ನೋವು ಯಾತನೆಯನ್ನು ಹುಟ್ಟಿಸುವುದಂತೂ ಸತ್ಯಸ್ಯ ಸತ್ಯ! ಬದುಕಿನ ಯಾವ ಗಳಿಗೆಯಲ್ಲಿ ಯಾವ ಪಾಠ ಎಂಬುದನ್ನು ಹೇಳುವುದು ಹೇಗೆ?