Saturday, 21st September 2024

ಪ್ರತಿಷ್ಠೆಗೆ ಬಿದ್ದು ಬೀದಿಗೆ ಬಾರದಿರಲಿ ನಾಡಗೀತೆ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ನವೆಂಬರ್ ಬರುತ್ತಿದ್ದಂತೆ ಕರ್ನಾಟಕದಲ್ಲಿ ಎಲ್ಲೆಡೆ ಕನ್ನಡ ನಾಡು-ನುಡಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಗರಿಗೆದರುತ್ತವೆ. ಆದರೆ ಈ ಬಾರಿ ರಾಜ್ಯೋತ್ಸವ ಆರಂಭಕ್ಕೂ ವಾರಕ್ಕೆ ಮೊದಲೇ ‘ನಾಡಗೀತೆ’ಯ ಗೊಂದಲ ಶುರುವಾಯಿತು.

ಕಳೆದ ಒಂದುವರೆ ದಶಕದಿಂದ ನಾಡಗೀತೆಯ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳಿದ್ದವು. ಆದರೆ ಈ ಬಾರಿಯಂತೂ ಯಾವ ಶೈಲಿಯಲ್ಲಿ ಹಾಡಬೇಕು ಎನ್ನುವ ವಿಷಯವೇ ದೊಡ್ಡದಾಗಿ ‘ಹಾದಿ-ಬೀದಿ’ ರಂಪಾಟಕ್ಕೆ ವೇದಿಕೆಯಾಗಿದ್ದು, ಕರ್ನಾಟಕದ ಮಟ್ಟಿಗೆ ದುರಂತವೇ ಸರಿ. ಅಷ್ಟಕ್ಕೂ ಈ ವಿವಾದದ ಹಿಂದಿರುವ ವಿಷಯ ತಲೆ ಹೋಗುವಂತಹದ್ದು ಅಲ್ಲವೇ ಅಲ್ಲ. ಕುವೆಂಪು ವಿರಚಿತ ‘ಜಯ ಭಾರತ ಜನನೀಯ ತನುಜಾತೆ’ ಕವಿತೆ ಅಧಿಕೃತ ನಾಡಗೀತೆ ಎಂದು ಘೋಷಿಸಿದ ದಿನದಿಂದ ಒಂದಲ್ಲ ಒಂದು ವಿಷಯವಾಗಿ ಗೊಂದಲವಿದ್ದೇ ಇದೆ.

ಆರಂಭದಲ್ಲಿ ‘ಮಧ್ವ’ರ ಹೆಸರನ್ನು ಸೇರಿಸಿಲ್ಲ ಎನ್ನುವ ಕಾರಣಕ್ಕೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಭಾರಿ ವಿರೋಧ ಎದುರಾಗುತ್ತಿದ್ದಂತೆ, ಮಧ್ವರ ಹೆಸರನ್ನು ಸರಕಾರ ಸೇರಿಸಿ ಆದೇಶ ಹೊರಡಿಸಿತು. (ಈಗಲೂ ಅನೇಕರು ಆ ಪಠ್ಯದಂತೆ ಹಾಡುವುದಿಲ್ಲ ಎನ್ನುವುದು ಬೇರೆ ಮಾತು). ಸರಕಾರದ ಈ ನಡೆಗೆ ಕುವೆಂಪು
ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ವಿರೋಧಿಸಿದ್ದರು. ಇದಾದ ಬಳಿಕ, ಎರಡು ಚರಣಕ್ಕೆ ಸೀಮಿತ ಗೊಳಿಸಿ ನಾಡಗೀತೆ ಹಾಡಬೇಕು ಎಂದು ಆದೇಶ ಹೊರಡಿಸಲಾಗಿತ್ತು.

ಬಳಿಕ ಅದನ್ನು ಪೂರ್ಣಪಾಠಕ್ಕೆ ತಿರುಗಿಸಲಾಯಿತು. ಇದಾದ ಬಳಿಕ ಬಂದಿದ್ದ ವಿವಾದವೇ, ಯಾರ ಧಾಟಿಯಲ್ಲಿ ಹಾಡಬೇಕು ಎನ್ನುವುದು. ಈ ವಿವಾದ ಶುರುವಾದ ಬಳಿಕ ಈ ಹಿಂದಿನ ಎಲ್ಲ ವಿವಾದಗಳೂ ಬದಿಗೊತ್ತಲಾಗಿದೆ. ಆದರೆ ಧಾಟಿ ವಿಷಯದಲ್ಲಿ ಶುರುವಾದ ವಿವಾದ ಇತ್ಯರ್ಥಕ್ಕೆ ಸರಕಾರ ಇಲ್ಲಿಯವರೆಗೆ ಮೂರು ಸಮಿತಿಗಳನ್ನು ರಚಿಸಿದೆ. ಆದರೂ ಈ ಯಾವ ಸಮಿತಿಯ ವರದಿಯನ್ನು ಒಪ್ಪದೇ ಅಥವಾ ತಿರಸ್ಕರಿಸದೇ ಇರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಆದರೆ ಧಾಟಿಯ ವಿಷಯದಲ್ಲಿ, ಮೈಸೂರು ಅನಂತಸ್ವಾಮಿ ಹಾಗೂ ಸಿ. ಅಶ್ವತ್ಥ್ ಇಬ್ಬರಲ್ಲಿ ಯಾರ ಧಾಟಿಯನ್ನು ಅಂತಿಮಗೊಳಿಸಬೇಕು ಎನ್ನುವುದರಿಂದ ಶುರುವಾದ ವಿವಾದ, ಇದೀಗ ಕೇವಲ ಚರ್ಚೆಗೆ ಸೀಮಿತವಾಗದೇ ಸುಗಮ ಸಂಗೀತ ಕ್ಷೇತ್ರ ಎರಡು ಭಾಗವಾಗಿ, ಮೈಸೂರು ಅನಂತಸ್ವಾಮಿ ಅವರ ಧಾಟಿ ಬೇಕು ಎಂದು ಒಂದು ಬಣ, ಅಶ್ವತ್ಥ್ ಧಾಟಿ ಬೇಕು ಎಂದು ಮತ್ತೊಂದು ಬಣ ಹಾದಿ ಬೀದಿಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ತೀರಾ ವೈಯಕ್ತಿಕ ಚರ್ಚೆಗೆ ಇಳಿದಿದ್ದಾರೆ.

ಹಾಗೇ ನೋಡಿದರೆ, ಕರ್ನಾಟಕ ಕಂಡ ಇಬ್ಬರು ಮಹಾನ್ ಸಂಗೀತಗಾರರ ಸಾಲಿನಲ್ಲಿ ಈ ಇಬ್ಬರೂ ಮೇರು ಸಾಲಿನಲ್ಲಿ ನಿಲ್ಲುತ್ತಾರೆ. ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡಿದ್ದಾರೆ. ಹಾಗೇ ನೋಡಿದರೆ ಮೈಸೂರು ಅನಂತಸ್ವಾಮಿ ಅವರು ರಚಿಸಿದ ಸ್ವರ ಸಂಯೋಜನೆಯನ್ನು ಸಿ. ಅಶ್ವತ್ಥ್ ಅವರು
ಹಾಗೂ ಅಶ್ವತ್ಥ್ ಅವರು ಸ್ವರ ಸಂಯೋಜನೆ ಮಾಡಿರುವ ನಾಡಗೀತೆಯ ಧಾಟಿಯನ್ನು ಅನಂತಸ್ವಾಮಿ ಅವರು ಅಪ್ಪಿಕೊಂಡಿದ್ದರು. ಈ ಮೂಲಕ ಇಬ್ಬರು ತಮ್ಮ
ದೊಡ್ಡತನವನ್ನು ತೋರಿದ್ದರು. ಆದರೀಗ ಅವರ ಹೆಸರಿನಲ್ಲಿ ಸೋ ಕಾಲ್ಡ್ ‘ಶಿಷ್ಯವರ್ಗ’ ತಮ್ಮ ಗುರುಗಳ ಧಾಟಿಯೇ ಅಂತಿಮವಾಗಬೇಕು ಎನ್ನುವ ವಾದಕ್ಕೆ ಬಿದ್ದಿದೆ.

ಕೆಲ ವರ್ಷಗಳ ಹಿಂದೆ ಇದು ಬೂದಿ ಮುಚ್ಚಿದ ಕೆಂಡವಾಗಿದ್ದ ವಿವಾದ, ಇದೀಗ ಜ್ವಾಲಮುಖಿಯಾಗಿ, ಇಡೀ ಸುಗಮ ಸಂಗೀತ ಕ್ಷೇತ್ರವನ್ನು ಸುಡುತ್ತಿದೆ. ಇಲ್ಲಿ ಅನಂತ ಸ್ವಾಮಿ ಅಥವಾ ಅಶ್ವತ್ಥ್ ಎನ್ನುವುದಕ್ಕಿಂತ ಅವರ ಹಿಂಬಾಲಕರ ‘ಪ್ರತಿಷ್ಠೆ’ಯಿಂದ ಕೇವಲ ಇಬ್ಬರು ಸಂಗೀತಗಾರರು ಮಾತ್ರವಲ್ಲದೇ, ಸಾಹಿತ್ಯವನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಹಾಗೂ ಸರಕಾರವೇ ಒಪ್ಪಿಕೊಂಡಿರುವ ನಾಡಗೀತೆ ಬೀದಿಗೆ ಬಂದಿರುವುದು ಖೇಧಕರ.

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯ ಒಂದಿದೆ. ಏನೆಂದರೆ ಕಳೆದ ಒಂದು ತಿಂಗಳಿನಿಂದ ಧಾಟಿಯ ವಿಷಯ ವಾಗಿಯೇ ಭಾರಿ ಚರ್ಚೆಗಳು ನಡೆಯುತ್ತಿವೆ. ಯಾವ ಧಾಟಿ ಅಂತಿಮಗೊಳಿಸಬೇಕು ಎಂದು ಲೀಲಾವತಿ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಿ ವರದಿಯನ್ನು ಕೇಳಿತ್ತು. ಈ ಸಮಿತಿ ಮೈಸೂರು ಅನಂತ ಸ್ವಾಮಿ ಅವರ ಧಾಟಿಯನ್ನು ಅಂತಿಮಗೊಳಿಸಬಹುದು ಎಂದು ಶಿಫಾರಸು ಮಾಡಿದೆ. ಆದರೆ ಇದಕ್ಕೂ ಮೊದಲು ಈಗಾಗಲೇ ವಸಂತ ಕನಕಾಪುರ
ಹಾಗೂ ಚನ್ನವೀರ ಕಣವಿ ನೇತೃತ್ವದ ಸಮಿತಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿವೆ.

ಅದಾದ ಬಳಿಕ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಮುದ್ದುಕೃಷ್ಣ ಅವರ ನೇತೃತ್ವದ ಸಮಿತಿ ೨.೩೦ ನಿಮಿಷಕ್ಕೆ ಅಶ್ವತ್ಥ್ ಸ್ವರ ಸಂಯೋಜನೆಯ ನಾಡಗೀತೆ ಯನ್ನು ಇಳಿಸಿ ವರದಿ ನೀಡಿದೆ. ಆದರೆ ಈ ಎಲ್ಲ ವರದಿಯನ್ನು ಬದಿಗೊತ್ತಿ, ಇದೀಗ ಮತ್ತೊಂದು ಸಮಿತಿಯ ಅನಿವಾರ್ಯತೆ ಏನಿತ್ತು? ಹಾಗೂ ಸರಕಾರ ಈ ಹಂತದವರೆಗೆ ನಾಡಗೀತೆಯ ಪಠ್ಯ ಹಾಗೂ ಸಮಯದ ಬಗ್ಗೆ ಯಾವುದೇ ಸ್ಪಷ್ಟ ಆದೇಶ ಹೊರಡಿಸದೇ, ಧಾಟಿಯನ್ನು ನಿಗದಿಪಡಿಸುವುದಕ್ಕೆ ಮುಂದಾಗಿ ವಿವಾದ ವನ್ನು ಸೃಷ್ಟಿಸುತ್ತಿದೆ ಎನಿಸುವುದಿಲ್ಲವೇ? ಇಡೀ ದೇಶದಲ್ಲಿ ಯಾವ ರಾಜ್ಯಕ್ಕೂ ಇಲ್ಲದ ನಾಡಗೀತೆಯ ಗೌರವ ಕರುನಾಡಿಗೆ ಇದೆ.

ರಾಷ್ಟ್ರಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ದೊರಕಿಸಿಕೊಟ್ಟ ಕುವೆಂಪು ವಿರಚಿತ ‘ಜಯಭಾರತ ಜನನಿಯ ತನುಜಾತೆ’ ಯ ಸಾಲು ಕಿವಿಗೆ ಬೀಳುತ್ತಿದ್ದಂತೆಯೇ ಕನ್ನಡದ ಅಸ್ಮಿತೆ ಕುಣಿದಾಡುತ್ತದೆ. ಇಂತಹ ಶ್ರೇಷ್ಠ ಇತಿಹಾಸವಿರುವ ನಾಡಗೀತೆ ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿ ಸುವುದಕ್ಕೆ ಸರಕಾರಕ್ಕೆ ೧೭ ವರ್ಷದ ಅವಶ್ಯಕತೆ ಯಿತ್ತೇ? ಒಂದು ವೇಳೆ ಇಬ್ಬರ ಧಾಟಿಯೂ ಬೇಡವೆಂದರೆ, ಇನ್ನೊಬ್ಬರಿಂದ ಆದರೂ ಸ್ವರ ಸಂಯೋಜನೆ ಮಾಡಿ ಈ ವಿವಾದಕ್ಕೆ ಇತಿಶ್ರೀ ಹಾಡಬೇಕಿದೆ.

ಹಾಗೇ ನೋಡಿದರೆ ಇಬ್ಬರು ಸ್ವರ ಸಂಯೋಜನೆ ಮಾಡಿರುವ ನಾಡಗೀತೆಯೂ ಕನ್ನಡ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತದೆ. ಆದರೆ ಮೈಸೂರು ಅನಂತಸ್ವಾಮಿ ಅವರು ಪೂರ್ಣ ಸಾಹಿತ್ಯಕ್ಕೆ ಸ್ವರ ಸಂಯೋಜನೆ ಮಾಡಿರುವ ದಾಖಲೆ ಇಲ್ಲ. ಆದ್ದರಿಂದ ಒಂದು ವೇಳೆ ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆ ಯನ್ನು ಉಳಿಸಿಕೊಳ್ಳುವ ನಿಲುವಿಗೆ ಸರಕಾರ ಬಂದರೆ, ಪಲ್ಲವಿ ಹಾಗೂ ಎರಡು ಚರಣಕ್ಕೆ ನಿಲ್ಲಿಸಲಿ. ಇಲ್ಲವೇ ಪೂರ್ಣ ಸಾಹಿತ್ಯಕ್ಕೆ ಎಂದರೆ ಈಗಾಗಲೇ ಚಾಲ್ತಿಯಲ್ಲಿ
ರುವ ಅಶ್ವತ್ಥ್ ಧಾಟಿಯನ್ನು ಅಥವಾ ಇದಕ್ಕಿಂತಲೂ ಉತ್ತಮ ರೀತಿಯಲ್ಲಿ ಸ್ವರ ಸಂಯೋಜನೆ ಮಾಡಿ ಅಂತಿಮಗೊಳಿಸಲಿ.

ಅದನ್ನು ಬಿಟ್ಟು ಸಚಿವರು ಬದಲಾದಾಗಲೆಲ್ಲ ಒಂದೊಂದು ಸಮಿತಿಯನ್ನು ರಚಿಸಿ, ಅವರಿಂದ ಒಂದೊಂದು ವರದಿಯನ್ನು ತರಿಸಿಕೊಳ್ಳುವ ಮೂಲಕ ಪದೆಪದೇ ನಾಡಗೀತೆಯನ್ನು ಚರ್ಚೆಯ ವಿಷಯವನ್ನಾಗಿ ಮಾಡುವುದು ಸೂಕ್ತವಲ್ಲ. ವೈಯಕ್ತಿಕವಾಗಿ ಹೇಳುವುದಾದರೆ, ಧಾಟಿ ನಿಗದಿ ಮಾಡುವುದು ಸುಲಭದ ಕೆಲಸ ಆದರೆ. ಸರಕಾರ ಮೊದಲು ನಾಡಗೀತೆಯ ಪಠ್ಯ ಹಾಗೂ ಸಮಯದ ಬಗ್ಗೆ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಲಿ. ಏಕೆಂದರೆ ಪಠ್ಯವನ್ನು ಕಡಿತಗೊಳಿಸಿದರೆ, ಅದರಿಂದ ಮತ್ತೊಂದು ವಿವಾದ ಏಳುವುದು ಖಚಿತ.

ಹಾಗೆಂದು ಹೆಚ್ಚು ಸಮಯವನ್ನು ನಿಗದಿ ಮಾಡಿದರೆ, ಅಷ್ಟು ಹೊತ್ತು ನಿಲ್ಲುವುದು ಕಷ್ಟ ಎನ್ನುವ ವಾದ ಶುರುವಾಗುವುದರಲ್ಲಿ ಎರಡನೇ ಮಾತಿಲ್ಲ. ಆದ್ದರಿಂದ ಮೊದಲು ಈ ಗೊಂದಲಕ್ಕೆ ಸರಕಾರ ಪರಿಹಾರ ಕೊಡಲಿ. ಬಳಿಕ ಉಳಿದ ಧಾಟಿಯ ಬಗ್ಗೆ ತೀರ್ಮಾನಕ್ಕೆ ಬರಲಿ. ಏನೇ ಆಗಲಿ, ರಾಜ್ಯದ ಅಸ್ಮಿತೆಯಾಗಿರುವ ನಾಡಗೀತೆಯ ವಿಷಯದಲ್ಲಿ ಸಂಗೀತಗಾರರು, ಸರಕಾರ ಇಬ್ಬರೂ ಗೌರವ ತರುವ ರೀತಿಯಲ್ಲಿ ವರ್ತಿಸಬೇಕಿದೆ. ಈಗಾಗಲೇ ಬಾಕಿಯಿದಿರುವ ಮೂರು ವರದಿಗಳ ಬಗ್ಗೆ ಮೊದಲು ಸ್ಪಷ್ಟನೆ ನೀಡಿ ಬಳಿಕ ಮತ್ತೊಂದು ವರದಿಯ ಬಗ್ಗೆ ಯೋಚಿಸುವುದು ಸೂಕ್ತ.

ಇಲ್ಲದಿದ್ದರೆ, ಇದೇ ರೀತಿ ಸರಕಾರ ಬದಲಾದಂತೆ, ಸಚಿವರು ಬಂದಂತೆ ಒಂದೊಂದು ಸಮಿತಿಯನ್ನು ಮಾಡುತ್ತ ಹೋದರೆ, ಆ ಸಮಿತಿಗಳಿಗೆ ಇರುವ ಪಾವಿತ್ರ್ಯತೆ
ಹಾಳಾಗಲಿದೆ. ಆದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸುನೀಲ್ ಕುಮಾರ್ ಈ ಹಂತದಲ್ಲಿಯಾದರೂ, ನಾಡಗೀತೆ ಪಠ್ಯ, ಸಮಯ ಹಾಗೂ ಧಾಟಿಯ ವಿಷಯದಲ್ಲಿ ಸ್ಪಷ್ಟ ನಿಲುವುಗಳನ್ನು ತಗೆದುಕೊಂಡು, ಹಾದಿ-ಬೀದಿ ರಂಪಾಟವನ್ನು ನಿಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.