Saturday, 21st September 2024

ಕನ್ನಡದ ಉಳಿವಿನ ಪ್ರಶ್ನೆಯೇ ಅಸಂಬದ್ಧ

ಸಕಾಲಿಕ

ಪೃಥೆಮುನ್ನಿ

ಮನುಷ್ಯ ಮನುಷ್ಯನೆನಿಸಿಕೊಂಡದ್ದು ಹೇಗೆ? ಮನಸ್ಸಿನಿಂದ ಎನ್ನುವುದು ನಿಜವಾದರೂ ಮನಸ್ಸು ಇತರ ಜೀವಿಗಳಲ್ಲೂ ಇದೆ. ಮನಸ್ಸನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಮಾರ್ಗದಿಂದ. ಅಂಥ ಅಭಿವ್ಯಕ್ತಿಯೇ ಭಾಷೆ. ಹೀಗಾಗಿ ಮನುಷ್ಯನ ಭಾಷಾ ಬಳಕೆಯೇ ಆತನನ್ನು ಮನುಷ್ಯನನ್ನಾಗಿಸಿತು ಎನ್ನುವುದರಲ್ಲಿ
ಅನುಮಾನವಿಲ್ಲ.

ಆತ ಭಾಷೆಯನ್ನು ಕೇವಲ ಬಳಸಲಿಲ್ಲ. ಅದನ್ನು ದಿನದಿಂದ ದಿನಕ್ಕೆ ಬೆಳೆಸುತ್ತ ಬಂದಿದ್ದಾನೆ. ಅಥವಾ ಮನುಷ್ಯನ ಬೆಳವಣಿಗೆ ಜತೆ ಜತೆಯಲ್ಲಿಯೇ ಭಾಷೆಯೂ ಬೆಳೆಯುತ್ತ ಬಂದಿದೆ. ಆದರಿಂದು ಮಾನವೇತಿಹಾಸದಲ್ಲಿ ಬೆಳೆದು ಬಂದ ಭಾಷೆಯನ್ನು ಮತ್ತಷ್ಟು ಬೆಳೆಸುವ ಮಾತು ಹಾಗಿರಲಿ ಅದನ್ನು ಉಳಿಸಿಕೊಂಡರೆ ಸಾಕು ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಕನ್ನಡದ ಮಟ್ಟಿಗಂತೂ ಇದು ಸಟಿಕ ಸತ್ಯ.

ಕನ್ನಡದ ಅಳಿವು- ಉಳಿವು ಎಂಬುದರ ಚರ್ಚೆ ನಿಜಕ್ಕೂ ಅಸಂಬದ್ಧವೆನಿಸುತ್ತದೆ. ಏಕೆಂದರೆ ಕನ್ನಡದ ಕಾಯಕ ಎಂಬುದನ್ನು ಎಲ್ಲ ಕನ್ನಡ ಮನಸ್ಸುಗಳು ಪ್ರೀತಿಯಿಂದ ಮಾಡ ಹೊರಟಲ್ಲಿ ಅಳಿವಿನ ಪ್ರಶ್ನೆಯೇ ಉದ್ಭವಿಸದು. ಭಾಷೆಯ ಸೃಷ್ಟಿ ಎಂಬುದು ಎಂದಿಗೋ ಆಗಿ ಹೋದದ್ದು. ನಮ್ಮ ಆದ್ಯತೆಯ ಕಾರ್ಯ ಇದೀಗ ಭಾಷೆಯ ಬೆಳವಣಿಗೆಯನ್ನು ಕುರಿತು ಚಿಂತಿಸುವುದು. ಯಾವುದೇ ವಿಚಾರ ವ್ಯಕ್ತಿಗತವಾಗಿ ‘ನನ್ನದು’ಎಂಬ ಸ್ವಂತಿಕೆಯ ನೆಲೆಯಲ್ಲಿ ಚಿಂತನೆಗೆ ಒಳಪಟ್ಟಾಗ ಅದರ ಮೇಲೆ ಸಹಜವಾಗಿ ಕಾಳಜಿ ಮೂಡುತ್ತದೆ. ಇದಕ್ಕೆ ಭಾಷೆಯೂ ಹೊರತಲ್ಲ. ‘ನಮ್ಮದು’ ಎಂಬ ಭಾಷೆ ಸಮಷ್ಟಿಗೆ ಸಂಬಂಧಿಸಿದ್ದು.

ಆದರೆ ನನ್ನದು ಎಂಬುದು ವೈಯಕ್ತಿಕ ವಾದ್ದದು. ಕನ್ನಡದ ಮಟ್ಟಿಗೆ ನನ್ನದು ಎಂಬುದು ನಮ್ಮದಾಗಿ ಹೊರ ಹೊಮ್ಮಬೇಕು. ಕಾಲದ ಅಗತ್ಯಕ್ಕೆ ತಕ್ಕಂತೆ ಇಂಗ್ಲಿಷ್ ನಮ್ಮ ಭಾಷೆಯಾಗಿ ಈಗಾಗಲೇ ಅಲಿಖಿತವಾಗಿ ಅಂಗೀಕಾರವಾಗಿ ಬಿಟ್ಟಿದೆ. ಲಾಗಾಯ್ತಿನಿಂದಲೂ ಎಲ್ಲ ಭಾರತೀಯ ಭಾಷೆಗಳನ್ನು ಪ್ರಭಾವಿಸಿದ ಸಂಸ್ಕೃತವೂ ಒಂದು ಹಂತದಲ್ಲಿ ನಮ್ಮ ಭಾಷೆಯೇ ಆಗಿ ಚಾಲ್ತಿಯಲ್ಲಿತ್ತು. ಈಗಲೂ ಅದರ ಪ್ರಭಾವ ಕನ್ನಡ ಮೇಲಿದೆ. ಹೀಗೆ ನಮ್ಮ ಭಾಷೆಯ ಮೇಲಿನ ಮೋಹ ನನ್ನ ಭಾಷೆಯ ಬೆಳವಣಿಗೆಯನ್ನು ನುಂಗಿ ಹಾಕುತ್ತಿದೆ. ನಾನು-ನನ್ನದು ಅತ್ಯಂತ ಸಂಕುಚಿತವಾಗಬೇಕೆಂಬುದು ಇಲ್ಲಿನ ವಾದವಲ್ಲ. ಎಲ್ಲವನ್ನೂ ನಮ್ಮದಾಗಿ ಸ್ವೀಕರಿಸಿ ಅಲ್ಲಿಂದ ಕೆಲವನ್ನು ನನ್ನದಾಗಿಸಿಕೊಂಡಲ್ಲಿ ಖಂಡಿತಾ ಅದು ಭಾಷೆಯ ಅಭಿವೃದ್ಧಿ, ಬೆಳವಣಿಗೆ ಎನಿಸಿಕೊಳ್ಳುತ್ತದೆ.

ಜರ್ಮನಿ, ಕೊರಿಯಾ, ಚೀನಾ ಮಂದಿ ಎಂದೂ ಇಂಗ್ಲಿಷ್ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಮಾತ್ರವಲ್ಲ ಅವರು ಎಲ್ಲವನ್ನೂ ಅವರವರ ಭಾಷೆಯಲ್ಲಿಯೇ ಯೋಚಿಸುತ್ತಾರೆ. ಅಂದರೆ ಅವರು ಜಗತ್ತನ್ನು ನೋಡುವುದೇ ಅವರ ಸ್ವಂತ ಭಾಷೆಯಲ್ಲಿ. ಹೀಗಾಗಿ ಅವರಿಗೆ ಅವರ ಭಾಷೆಯ ಉಳಿವಿನ ಪ್ರಶ್ನೆ ಕಾಣುತ್ತಿಲ್ಲ. ಅದಕ್ಕೊಂದು ಚಳವಳಿ, ಅದಕ್ಕೊಂದು ಆಂದೋಲನ ಬೇಕಾಗಿಲ್ಲ. ಇನ್ನು ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ‘ಭಾಷೆಯ ಉಳಿವು’ ಎಂಬ ಕಲ್ಪನೆಯೇ ವಿಚಿತ್ರವಾಗಿ ಕಾಣು
ತ್ತದೆ. ಏಕೆಂದರೆ ಅವರು ಉಸಿರಾಡುವುದೂ ಅವರ ಇಂಗ್ಲಿಷ್ ನಲ್ಲಿಯೇ.

ಇವರ‍್ಯಾರಿಗೂ ಭಾಷೆಯನ್ನು ಉಳಿಸಿ, ಬೆಳೆಸುವ ಅಗತ್ಯವೇ ಕಾಣುತ್ತಿಲ್ಲ. ಇದಕ್ಕೆ ಕಾರಣ ಅತ್ಯಂತ ಸರಳ, ಅವರೆಲ್ಲ ಅವರವರ ಭಾಷೆಯನ್ನೇ ಬಳಸುತ್ತಿದ್ದಾರೆ. ಅದನ್ನು ಬಿಟ್ಟು ಬೇರೆಯದನ್ನು ಬಳಸುತ್ತಿಲ್ಲ. ಅವರಿಗೆ ಇನ್ನೊಂದು ಭಾಷೆ ತಮ್ಮದಕ್ಕಿಂತ ಶ್ರೇಷ್ಠ ಎಂದೆನಿಸುವುದೇ ಇಲ್ಲ. ಅಥವಾ ಅವರಿಗೆ ‘ನನ್ನ ಭಾಷೆ’ಯ ಬಗ್ಗೆ ಕೀಳರಿಮೆಯೂ ಇಲ್ಲ. ಅವರವರ ಭಾಷೆಯಿಲ್ಲದೇ ಅವರೆಂದೂ ಜೀವಿಸುವುದೇ ಇಲ್ಲ. ಯಾವುದು ಮಾತೃಭಾಷೆ? ನಾವು ನೀವೆಲ್ಲ ಯಾವ ಭಾಷೆಯಲ್ಲಿ ಆಲೋಚಿಸುತ್ತೇವೋ ಅದು. ಆಡುವುದೂ ಅಲ್ಲ, ಬರೆಯುವುದೂ ಅಲ್ಲ.

ಇಂಗ್ಲಿಷ್ ಬಂದು ಎದೆ ಮೇಲೆ ಕೂತಿದೆ ಎಂಬ ಕೂಗನ್ನು ಬದಿಗಿಟ್ಟು ಪ್ರತಿಯೊಬ್ಬ ಕನ್ನಡಿಗನ ಮನದಾಳದ ಸಮೀಕ್ಷೆ ನಡೆಸಿದರೆ ಎಲ್ಲರೂ ಆಂತರಿಕವಾಗಿ ಅಪ್ಪಟ ಕನ್ನಡಿಗರು. ಅನುಮಾನವೇ ಬೇಡ. ಅನ್ಯಭಾಷೆ ಇಲ್ಲೆಲ್ಲೋ ಸುಳಿದಾಡಿದೆ ಎಂದು ಕೂಗಾಡಿದರೆ ಅದು ನಮ್ಮೊಳಗಿನ ಆತಂಕವನ್ನು ಸೂಚಿಸುತ್ತದೆಯೇ ಹೊರತು ಕನ್ನಡಕ್ಕೆ ನಯಾಪೈಸೆ ಪ್ರಯೋಜನವಾಗದು. ಪ್ರಾದೇಶಿಕ ಭಾಷೆಗಳ ಈ ಸ್ಥಿತಿಯನ್ನೇ ಐರಿಷ್ ಕವಿ ಜೇಮ್ಸ್ ಜಾಯ್ಸ್ ಬಹಳ ಸರಳವಾಗಿ ಹೇಳುತ್ತಾನೆ; ‘ಮಾತೃಭಾಷೆ ಎನ್ನುವುದು ಶರೀರ, ಇಂಗ್ಲಿಷ್ ಎನ್ನುವುದು ಬಟ್ಟೆ’.

ನಮ್ಮ ಹೆಜ್ಜೆ, ವ್ಯವಹಾರಗಳಲ್ಲಿ ಇಂಗ್ಲಿಷ್ ಅನಿವಾರ್ಯವಾಗಿ ನುಗ್ಗಿದರೂ ‘ಶರೀರ ಭಾಷೆ’ಗೇನೂ ಧಕ್ಕೆ ಬಂದಿಲ್ಲ. ಹಾಗೆ ನೋಡಿದರೆ ಕನ್ನಡ ಇತರೆ ದ್ರಾವಿಡ ಭಾಷೆಗಳಿಗಿಂತ ಹೆಚ್ಚು ಸುರಕ್ಷಿತ. ಜನಪ್ರಿಯ ಸಾಹಿತ್ಯಗಳೇ ತುಂಬಿಕೊಳ್ಳುತ್ತಿರುವ ತೆಲುಗು, ತಮಿಳಿನ ಗರ್ಭದಲ್ಲಿ ಸೃಜನಶೀಲತೆ ಬತ್ತಿಹೋಗಿ ಎಷ್ಟೋ ವರುಷ ಗಳಾದವು. ಕನ್ನಡದಲ್ಲಿ ಅಂತ ಜೊಳ್ಳಿಗೆ ಜಾಗ ಕಡಿಮೆ. ಈಗೇನು ಜ್ಞಾನಪೀಠದ ಮುಂಚೂಣಿಯಲ್ಲಿ ಒಂದೆರಡು ಅಂಕಿಯ ಅಂತರ ಮುಂದಿದ್ದೀವೋ, ಇದೇ ಅಂತರ ಅಥವಾ ಇದಕ್ಕಿಂತ ಹೆಚ್ಚು ಅಂತರವನ್ನು ಇನ್ನೂ ಅರವತ್ತು ವರುಷದವರೆಗೆ ಆರಾಮವಾಗಿ ಕಾಪಾಡಿಕೊಳ್ಳಬಲ್ಲೆವು.

ಕನ್ನಡ- ಎಂಬ ಈ ಹೆಸರಿನಲ್ಲೇ ತೇವವಿದೆ. ಈ ಕಾರಣ ಇದೊಂದು ಹಸಿರಿನ ಭಾಷೆ. ಸಾಹಿತ್ಯ ಇಲ್ಲಿ ನಿರಂತರ -ಸಲು. ನಿತ್ಯ ರವಿ ಹುಟ್ಟುವ ಹಾಗೆ, ಇಲ್ಲಿ ನಿತ್ಯ ಕವಿ ಹುಟ್ಟುತ್ತಾನೆ. ಒಬ್ಬನಿಗೆ ನಾಡು ಬೆಳಗುವ ಕೆಲಸವಾದರೆ, ಇನ್ನೊಬ್ಬನಿಗೆ ಭಾಷೆ ಬೆಳಗುವ ಕೆಲಸ. ಇದು ಈ ನೆಲದಲ್ಲಷ್ಟೇ ಕಾಣಬಹುದಾದ ಪವಾಡ. ಓಲೆಗರಿಯಿಂದ ಫೇಸ್‌ಬುಕ್ ನ ಗೋಡೆವರೆಗೂ ಇಲ್ಲಿ ಬರಹಗಾರರಿಗೇನೂ ಕೊರತೆ ಬಿದ್ದಿಲ್ಲ. ಬೀಳುವುದೂ ಇಲ್ಲ.

ನಾವು ಮಾತ್ರ ಹೀಗೇಕೆ? ಕನ್ನಡವಿಲ್ಲದೇ ನಾವು ಬದುಕಬಲ್ಲೆವು ಹೇಗೆ? ದಿನದಲ್ಲಿ ಒಮ್ಮೆಯೂ ನಾನು ನನ್ನ ಭಾಷೆಯನ್ನು ಬಳಸದೇ ಇರಬಲ್ಲೆನಾದರೆ, ಅದು ನನ್ನ ನೆಲದಲ್ಲೇ ನನಗೆ ಅನಿವಾರ್ಯ ಅಲ್ಲ ಎಂತಾದರೆ ಅದರ ಉಳಿವಿಗಾಗಿ ಖಂಡಿತಾ ನಾವು ಹೋರಾಡಲೇಬೇಕಾದ ‘ಅಸಂಬದ್ಧ’ ಕೆಲಸ ಮಾಡಬೇಕಾಗಿ ಬಂದಿದೆ. ಕನ್ನಡವೆಂದರೆ ಬಹತೇಕ ಸಂದರ್ಭ ದಲ್ಲಿ ಎರಡನೇ ದರ್ಜೆಯ ಸ್ಥಾನಮಾನದಲ್ಲೇ ನೋಡುವ ದೃಷ್ಟಿಕೋನವನ್ನು ಕನ್ನಡಿಗ ರೂಢಿಸಿಕೊಂಡಿರುವಾಗ ಆತನಿಗೆ ಅದು ‘ನನ್ನ ಭಾಷೆ’ ಎಂಬ ಪ್ರೇಮ, ಮೋಹವಾದರೂ ಹುಟ್ಟೀತು ಹೇಗೆ? ಭಾಷೆಯ ವಿಷಯದಲ್ಲಿ ಇಂಥ ನನ್ನತನವನ್ನು ಗಟ್ಟಿಗೊಳಿಸುವ, ಇದಕ್ಕೆ ಪೂರಕ ಮನೋಭಾವವನ್ನು ರೂಪಿಸುವ, ಸೈದ್ಧಾಂತಿಕ ನೆಲೆಗಟ್ಟನ್ನು ಒದಗಿಸುವ ಕಾಯಕ ಇಂದಿನ ತುರ್ತು.

ಕನ್ನಡದ ಅಭಿವ್ಯಕ್ತಿ ಸಾಮರ್ಥ್ಯವನ್ನು ಬಿಂಬಿಸಿ, ಸಮಕಾಲೀನ ತಿಳಿವಳಿಕೆಯನ್ನು ನನ್ನ ಭಾಷೆಯಲ್ಲೇ ಅರಗಿಸಿಕೊಳ್ಳುವ ಹಂತಕ್ಕೆ ನಾನು ಬದ್ಧನಾಗಬೇಕು. ಸೃಜನ
ಶೀಲವಾಗಿ ಕನ್ನಡ ಕೆಲಸ ಆಗಬೇಕು ಎಂದಾದರೆ ಪ್ರಜ್ಞಾ ಪೂರ್ವಕ ಅದರಲ್ಲಿ ನಾವು ತೊಡಗಿಕೊಳ್ಳಬೇಕು. ನಮ್ಮದಲ್ಲದ ಜ್ಞಾನ, ಇತರ ಪ್ರದೇಶಗಳ ವೈಶಿಷ್ಟ್ಯಗಳು, ಆಧುನಿಕ ಸಂಶೋಧನೆಗಳು ಇಂಗ್ಲಿಷ್‌ನಲ್ಲಿವೆ ಎಂದ ಮಾತ್ರಕ್ಕೆ ನಾವು ಇಂಗ್ಲಿಷ್ ಕಲಿಯುತ್ತಿದ್ದೇವೆ ಎಂದಾದರೆ ಖಂಡಿತಾ ಅದರಲ್ಲಿ ಅಪಾಯ ಇಲ್ಲ.

ಆದರೆ ಅದೂ ಒಂದು ನಮ್ಮ ಭಾಷೆ ಯಾಗುತ್ತದೆ. ಆದರೆ ಅಂಥ ನೆಪವನ್ನು ಇಟ್ಟುಕೊಂಡು ಯಾವುದೋ ಭ್ರಮೆ, ಶೋಕಿಗೆ ಬಿದ್ದು ಇಂಗ್ಲಿಷ್ ಅನ್ನು ಪ್ರೀತಿಸುತ್ತಿದ್ದೇ ವಲ್ಲಾ ಅದರಲ್ಲಿ ಅಪಾಯ, ಮೂರ್ಖತನ ಎರಡೂ ಇದೆ. ಇಂಥ ಮನಸ್ಸುಗಳೇ ಭಾಷಾ ಮಾಧ್ಯಮದ ಚರ್ಚೆಯನ್ನು ಹುಟ್ಟು ಹಾಕಿರುವುದು. ಇದರಿಂದಲೇ ಇಂದು ಕನ್ನಡದಲ್ಲಿ ಕಲಿಯುವವ ಹಿಂದುಳಿದ, ಗ್ರಾಮೀಣ ಪ್ರದೇಶದವ ಎಂಬ ಕೀಳರಿಮೆಯನ್ನು ಮೂಡಿಸಿರುವುದು. ಯೂರೋಪಿಯನ್ನರಂತೆ ಎಲ್ಲ ಸ್ತರದಲ್ಲೂ ಸ್ಥಳೀಯ
ಭಾಷೆಯೇ ಉತ್ಕೃಷ್ಟ ಮಾಧ್ಯಮವೆಂಬಷ್ಟರ ಮಟ್ಟಿಗಿನ ತಿಳಿವಳಿಕೆ ಕನ್ನಡಿಗನಲ್ಲಿ ಮೂಡಬೇಕಲ್ಲವೇ? ಸಾಹಿತ್ಯದಿಂದಲೇ ಭಾಷೆಯೊಂದರ ಬೆಳವಣಿಗೆ ಸಾಧ್ಯವಾ
ಗದು ಎಂಬುದನ್ನು ನಾವು ಜಾಗತೀಕರಣದ ಈ ದಿನಗಳಲ್ಲಿ ಅಷ್ಟೇ ಅಲ್ಲ, ಸ್ವಾತಂತ್ರ್ಯದ ಹೊಸ್ತಿಲಿನಲ್ಲೂ ಕೂಗುತ್ತ ಬಂದಿದ್ದೇವೆ.

ಅಂದರೆ ಅಂದೂ ನನ್ನ ಭಾಷೆ ಇಂದಿನಂತೆಯೇ ಅಪಾಯದಲ್ಲಿತ್ತೇ? ಆಗಿನ ಸವಾಲುಗಳನ್ನು ಇಂದಿಗೂ ನಾವು ಮೆಟ್ಟಿ ನಿಂತಿಲ್ಲವೇ? ಒಂದೊಮ್ಮೆ ಅದನ್ನು ನಿವಾರಿಸಿಕೊಂಡು ಬಂದಿದ್ದೇವೆ ಎಂದಾದರೆ ಅಂದಿಗೂ ಇಂದಿಗೂ ಇರುವ ಸವಾಲು ಗಳಲ್ಲಿನ ವ್ಯತ್ಯಾಸವೇನು? ಅಥವಾ ಭಾಷೆಗೇ ಸೀಮಿತತೆ ಇದೆಯೇ? ದೈನಂದಿನ ಬದುಕಿನಲ್ಲಿ ಅಪ್ರಜ್ಞಾ ಪೂರ್ವಕವಾಗಿ ನಮ್ಮೊಳಗೇ ನಡೆಯುತ್ತಿರುವ ಭಾಷಾಂತರ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿ, ನಮ್ಮಲ್ಲಿನ್ನೂ ಕನ್ನಡತನ ಉಳಿದಿದೆ.

ಜಗತ್ತಿನ ಸಂವಹನಕ್ಕೆ ಇಂಗ್ಲಿಷ್ ಅಷ್ಟೇ ಸಮರ್ಥವಲ್ಲ. ಅಥವಾ ಅದರ ಅವಲಂಬನೆ ತೀರಾ ಅನಿವಾ ರ್ಯವಲ್ಲ. ಕನ್ನಡ ಚಿಂತನೆಗಳನ್ನು ವಿಶ್ವಮುಖಕ್ಕೆ ತಲುಪಿಸಲು ಭಾಷಾಂತರ ಅಗತ್ಯವಿದೆ ಯಾದರೂ ಆ ಭರದಲ್ಲಿ ನಮ್ಮ ಸಂಸ್ಕೃತಿಯೂ ನಿರ್ದಿಷ್ಟ ಪರಿಪೇಕ್ಷವಿಲ್ಲದೇ ತನ್ನ ಮೌಲ್ಯವನ್ನು ಕಳೆದುಕೊಳ್ಳಬೇಕಿಲ್ಲ.
ಕನ್ನಡಕ್ಕೆ ಜೀರ್ಣಶಕ್ತಿ ಬಹಳ. ಇಂಗ್ಲಿಷಿನ ಸಾಕಷ್ಟು ಪದಗಳು ಕನ್ನಡೀಕರಣಗೊಳ್ಳುತ್ತಲೇ ಇವೆ. ಬಸ್ಸು, ಮೌಸು, ಕ್ರಿಕೆಟ್ಟು… ಹೀಗೆ. ಈ ಭಾಗ್ಯ ಬೇರಾವ ದ್ರಾವಿಡ ಭಾಷೆಗಳಿಗೂ ಇಲ್ಲ. ಕನ್ನಡ ಸಾಗರವನ್ನು ಸೇರುತ್ತಿರುವ ಈ ಥರದ ಪದಗಳನ್ನು ಒಟ್ಟುಗೂಡಿಸುವ ಕೆಲಸ ಆಗಬೇಕು.

ಇವುಗಳಿಗೂ ನಿಘಂಟಿನಲ್ಲಿ ಜಾಗ ಕಲ್ಪಿಸುವುದು ತುರ್ತು ಆಗಬೇಕಿರುವ ಕೆಲಸ. ಜಿ. ವೆಂಕಟಸುಬ್ಬಯ್ಯನವರ ನಂತರ ನಿಘಂಟು ವಿಸ್ತರಣೆಯ ಹೊಣೆ
ಹೊತ್ತುಕೊಳ್ಳುವ ಮುಖಗಳೂ ಕಾಣಿಸಿಕೊಳ್ಳುವ ಅಗತ್ಯವಿದೆ.  ಭಾಷೆಯನ್ನು ಒಂದು ವೇದದಂತೆ ಅಭ್ಯಸಿಸಲು ವಿಶ್ವವಿದ್ಯಾಲಯಗಳು ಪ್ರೋತ್ಸಾಹ ನೀಡಬೇಕು. ಮುಖ್ಯವಾಗಿ ಭಾಷಾ ಅಭಿವೃದ್ಧಿಗೆಂದೇ ಸ್ಥಾಪನೆಯಾದ ಹಂಪಿ ಕನ್ನಡ ವಿವಿಯು ಮೂಲ ಹೊಣೆಯನ್ನು ವಿಮರ್ಶಿಸಿಕೊಳ್ಳುವುದು ಒಳಿತು. ನನ್ನ ಭಾಷೆ ಹೆಗ್ಗಳಿಕೆಗಳು, ನಮ್ಮ ಭಾಷೆಯ ಮೂಲಕ ಸಂವಹನಕ್ಕೆ ಒಳಗಾಗುವ ಬದಲು ‘ಕನ್ನಡವೇ ವಿಶ್ವಪ್ರಜ್ಞೆ’ ಯಾಗಲು ಸಾಧ್ಯವಿಲ್ಲವೇ? ಅದು ಕೇವಲ ಆದರ್ಶವಾಗಿ ಉಳಿಯಬೇಕಿಲ್ಲ.

ಭಾಷೆಯ ವಿಚಾರದಲ್ಲಿ ಸರಕಾರದ, ಸಮಾಜದ, ಶಿಕ್ಷಿತ ವಲಯದ ಮನೋಭಾವವೂ ತಕ್ಕಮಟ್ಟಿಗೆ ಈ ನಿಟ್ಟಿನಲ್ಲಿ ಹಿನ್ನಡೆ ತಂದಿದೆ. ‘ಮಾಧ್ಯಮ’ ತಾರತಮ್ಯವೂ
ಇದರಲ್ಲಿ ಇದೆ. ಹಾಗೆಂದು ಇದು ಕನ್ನಡದ ದೌರ್ಬಲ್ಯವೇನೂ ಅಲ್ಲ. ಕನ್ನಡದಲ್ಲಿ ಉತ್ತಮವಾಗಿ ಬರೆಯಬೇಕಾದರೆ ಚೆನ್ನಾಗಿ ಇಂಗ್ಲಿಷ್ ಓದಿಕೊಳ್ಳಬೇಕು ಎಂಬಂಥ ಭ್ರಮೆಗಳೇ ಇದಕ್ಕೆ ಕಾರಣ. ಓದು ಎಲ್ಲ ಬರವಣಿಗೆಗೆ ಪೂರಕ ಅಗತ್ಯ. ಹಾಗೆಂದು ಇಂಗ್ಲಿಷ್ ಓದಷ್ಟೇ ಮಾನದಂಡವಲ್ಲ. ಹಾಗೆಯೇ ಶಿಕ್ಷಣ ಮಾಧ್ಯಮವೂ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರಷ್ಟೇ ಉನ್ನತಿ ಸಾಧಿಸಲಾಗುತ್ತದೆ ಎಂಬುದು ಮಿಥ್ಯೆ. ಅದೊಂದು ವ್ಯಾಮೋಹ ವಷ್ಟೇ. ಇಂಥ ಸ್ಥಿತಿಯನ್ನು ತಿರಸ್ಕರಿಸಲಾಗುತ್ತಿಲ್ಲ ನಮಗೆ.
ಏಕೆಂದರೆ, ಉನ್ನತ ಅಧ್ಯಯನಕ್ಕೆ, ಉನ್ನತ ಸಾಹಿತ್ಯ ರಚನೆಗೆ ಪೂರಕ ಸಾಮಗ್ರಿಗಳನ್ನು ಕಲೆ ಹಾಕುವ ಕೆಲಸ ಕನ್ನಡದಲ್ಲಿ ಆಗುತ್ತಿಲ್ಲ.

ಸ್ವತಃ ಕನ್ನಡಿಗನೂ ಲೋಕದೃಷ್ಟಿಯಲ್ಲಿ ನೋಡುತ್ತಿಲ್ಲ. ಕನ್ನಡವೂ ಕರಗುತ್ತಿಲ್ಲ, ಕನ್ನಡಿಗರೂ ಯಾವುದರಲ್ಲೂ ಹಿಂದೆ ಯೂ ಬಿದ್ದಿಲ್ಲ. ಇಷ್ಟು ದಿನ ಅಮೆರಿಕದಲ್ಲೋ, ಇಂಗ್ಲೆಂಡಿನಲ್ಲೋ ನಮ್ಮವರು ಸಾಧನೆಗೈದಿದ್ದಾರೆ ಎಂದು ಬೀಗುತ್ತಿದ್ದೆವು. ಈಗ ನಮ್ಮ ಹೆಮ್ಮೆ ಎಂಬುದು ಚಂದ್ರ, ಮಂಗಳ ಗ್ರಹವನ್ನೂ ತಲುಪಿದೆ. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್‌ನಂಥ ಕ್ರೀಡೆಗಳಲ್ಲಿನ ಪದಕ ಬೇಟೆ ಕನ್ನಡಿಗರಿಗೆ ಪ್ರಯಾಸದ ಕೆಲಸವೇ ಅಲ್ಲ. ವಿಶ್ವವನ್ನೇ ಒಂದು ಮೌಸ್‌ನಲ್ಲಿ ನಿಯಂತ್ರಿಸುತ್ತಿರುವ ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥನಿಗೆ ನಾವೇ ಎಂಜಿನಿಯರಿಂಗ್ ಪದವಿ ಕೊಟ್ಟೆವೆಂಬುದೂ ಅವರ್ಣನೀಯ ಗೌರವವೇ.

ಕನ್ನಡವನ್ನು ಬೆಳೆಸಲು ಕೋಟ್ಯಂತರ ರುಪಾಯಿ ಬೇಕಿಲ್ಲ. ಸರಕಾರಿ ಪ್ರಯತ್ನಗಳೇ ಆಗಬೇಕಿಲ್ಲ. ಅಕಾಡೆಮಿಗಳು, ವಿಭಿನ್ನ ಸಾಂಸ್ಥಿಕ ಸ್ವರೂಪವನ್ನು ಅಸ್ತಿತ್ವಕ್ಕೆ ತರಬೇಕಿಲ್ಲ. ಪ್ರಶಸ್ತಿ, ಪುರಸ್ಕಾರ ಗಳ ಸ್ಥಾಪನೆಯಾಗಬೇಕಿಲ್ಲ. ಸಮ್ಮೇಳನಗಳು, ಚರ್ಚಾ ಗೋಷ್ಠಿ ನಡೆಯಬೇಕಿಲ್ಲ. ಬೃಹತ್ ಗ್ರಂಥಗಳು, ಸಂಶೋಧನೆಗಳ ಸಾಲು
ಪೇರಿಸಬೇಕಿಲ್ಲ. ಇವೆಲ್ಲವೂ ಕನ್ನಡಕ್ಕೆ ಬೇಡವೇ ಬೇಡವೆಂದಲ್ಲ. ಇವೆಲ್ಲವೂ ಮನಸ್ಸಿನ ಹೊರಗಣ ಸೃಷ್ಟಿ. ನನ್ನ ಭಾಷೆಯ ಅಗತ್ಯವನ್ನು ನಾನು ಮನಗಾಣದೇ ಕನ್ನಡವನ್ನು ಬೆಳೆಸುತ್ತೇನೆ, ಉಳಿಸುತ್ತೇನೆ ಎಂಬುದು ಆಡಂಬರವಷ್ಟೇ.

ನನ್ನೊಳಗೆ ನಾನು ಕನ್ನಡವನ್ನು ಉಳಿಸಿ ಕೊಳ್ಳಬಲ್ಲೆನಾದರೆ, ನಾನು ಮತ್ತು ನನ್ನ ಭಾಷೆ ಉಳಿಯುತ್ತದೆ. ಬೆಳೆಯುತ್ತದೆ. ಕನ್ನಡದ ಜ್ಞಾನ ಗವಾಕ್ಷಿಗೆ ಬೇರೆ ಭಾಷೆಗಳ ಕನ್ನಡಕ ಬೇಕಿಲ್ಲ. ನಮ್ಮ ಕಣ್ಣನ್ನೊಮ್ಮೆ ಉಜ್ಜಿ ಕೊಂಡು ಕನ್ನಡದ ಚಕ್ಷುಗಳಲ್ಲೇ ನೋಡೋಣ.