Saturday, 21st September 2024

ಶಬ್ದ ನಿಶ್ಯಬ್ದಗಳೆರಡಕ್ಕೂ ಅಂಜುವವರ ನಡುವೆ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನೆಂಟರ ಮದುವೆಗೆ ಹೋಗಲು 6 ತಿಂಗಳು ತಯಾರಿ ಮಾಡಿಕೊಳ್ಳುವ, ಸೇಬು ಕಚ್ಚಿದ ಶಬ್ದಕ್ಕೆ ಬೆಚ್ಚಿಬೀಳುವ ಜನ ಪ್ರಳಯದ ಕತ್ತಲಿಗೆ, ಯಾರೂ ಇರದ ಆ ದಿನಗಳನ್ನು ಹೇಗೆ ಎದುರಿಸಬಹುದು? ಯೋಚಿಸುತ್ತ ಬರೆದೆ. ಶಬ್ದಕ್ಕೆ ಅಂಜಬೇಕೋ? ನಿಶ್ಯಬ್ದಕ ?

ಈ ಜಗತ್ತೇ ನನ್ನ ಮನೆ, ಮಾನವರೆಲ್ಲರೂ ನನ್ನ ಅಣ್ಣ ತಮ್ಮಂದಿರೇ, ಪ್ರಕೃತಿಯ ಎಲ್ಲ ಸಂಪತ್ತೂ ನನ್ನದೇ, ನಾ ಎಲ್ಲಿದ್ದರೂ ಅದೇ ನನ್ನ ಮನೆ ಈ ತರಹದ ವಾಕ್ಯಗಳನ್ನು ಭಾರತದ ಸಂತ-ಶರಣ-ದಾಸರೆಲ್ಲ ಕೂಗಿ ಕೂಗಿ ಸಾರಿ ಸಾರಿ ಪಾಪ ಸತ್ತೇ ಹೋದರು. ಶಾಲಾ ಗೋಡೆಗಳ ಮೇಲೆ, ಭಾಷಣಗಳಲ್ಲಿ, ಸಿನಿಮಾ ಹಿರೋನ ಡೈಲಾಗ್‌ಗಳಲ್ಲಿ, ರಾಜಕಾರಣಿಗಳ ಬಾಯಲ್ಲಿ ಇವು ಬಿಟ್ಟರೆ ಮತ್ತೆ, ಇವು ಸುಮ್ಮನೆ ಘೋಷಣೆಗಳಾಗೇ ಉಳಿದಿವೆಯಾಗಲಿ ಆಚರಣೆಯಲ್ಲಿ ತರುವ, ತಂದಿರುವ ವ್ಯಕ್ತಿಗಳನ್ನಂತೂ ಯಾರೂ ಕಂಡಿಲ್ಲ-ಕಾಣುವುದೂ ಇಲ್ಲವೇನೋ ಎನಿಸಿದೆ.

ಆದರೆ, ಈ ವಾಕ್ಯಗಳನ್ನೆ ನನ್ನ ಮನೆ, ಆಸ್ತಿ, ಕಾರು, ಮಕ್ಕಳು, ಅಳಿಯ ಮಗಳು, ಸೀಟು, ಮೊಬೈಲು, ಪಾಸ್‌ ವರ್ಡ್, ಇದಕ್ಕೆ ಮಾತ್ರ ಚೆನ್ನಾಗಿ ಅನ್ವಯಿಸಿಕೊಂಡು ಸುಖಿಸುತ್ತ ಸ್ವಾರ್ಥದ ಪರಕಾಷ್ಠೆ ತಲುಪಿ ಬಿಟ್ಟಿದ್ದೇವೆ. ನಮ್ಮ ಕಾರು, ನಮ್ಮ ಬೈಕು ಈ ರಸ್ತೆ ದಾಟಿದರೆ ಸಾಕು ಹಿಂದಿನವರು ಹಾಳಾಗಿ ಹೋಗಲಿ ಎಂದು ವಾಹನ ಗಳನ್ನು ನುಗ್ಗಿಸುವವರೇ ಎಲ್ಲರೂ, ಕೆಲವರು ಬಿದ್ದವರನ್ನು ತಿರುಗಿಯೂ ನೋಡದೇ ‘ಸಾಯ್ಲಿ ಬಡ್ಡಿ ಮಗ’ ಎಂದುಕೊಂಡೇ ಭರ್ರನೆ ಹೋಗಿಬಿಡುತ್ತಾರೆ. ಏರುತ್ತಿರುವ ಜನಸಂಖ್ಯೆ, ಎಲ್ಲೆಲ್ಲೂ ಜನ, ಗದ್ದಲ, ಸಮಯಕ್ಕೆ ದೊರಕದ ಸೌಲಭ್ಯ, ಚಿಕಿತ್ಸೆ ಪರಿಹಾರಗಳಿಂದಾಗಿ ಮನುಷ್ಯ- ಮನುಷ್ಯನನ್ನೇ ದ್ವೇಷಿಸುತ್ತಿದ್ದಾನೆ.

ಸರ್ವರಿಗೆ ಸಮಪಾಲು-ಸರ್ವರಿಗೆ ಸಮಬಾಳು ಈ ನುಡಿಗಳು ಕೆಲವು ರಾಜಕೀಯ ಕುಟುಂಬಗಳಿಗೆ ಬಿಟ್ಟರೆ ಮತ್ತೆಲ್ಲೂ ಔಷಧವೂ ಸಿಗುವುದಿಲ್ಲ. ಕೆಲವು ಜನಗಳಿದ್ದಾರೆ. ಹೊಸದಕ್ಕೆ ಹೊಂದಿಕೊಳ್ಳಲು ಅವರ ಮೈ ಮನಸ್ಸುಗಳೇ ಒಪ್ಪುವದಿಲ್ಲ. ನಾ ಕಂಡಂತೆ ಕೆಲವು ಜನ ಮನೆ ಬಿಟ್ಟು, ಊರು ಬಿಟ್ಟು ಹೋಗಲು ಒಪ್ಪುವುದೇ ಇಲ್ಲ. ಬಹಳವಾದರೆ ‘ನಮ್ಮ ಕಂಪೌಂಡಿನವರೆಗೂ ಬರುತ್ತೇನಪ್ಪಾ, ಗೇಟು ದಾಟಲ್ಲ, ಏಕೆಂದರೆ ಕಾಲು ಧೂಳಾಗುತ್ತದೆ’ ಎಂದು ವರ್ಷಗಟ್ಟಲೆ ಒಳಗೇ ಇರುತ್ತಾರೆ. ಅವರು ಬಿಸಿಲಲ್ಲಿ ಬೆಂದಿಲ್ಲ, ಮಳೆಯಲ್ಲಿ ನೆನೆದಿಲ್ಲ, ಚಳಿಗೆ ನಡುಗಿಲ್ಲ. ಅವರಿಗೆ ಬೆವರು ಬರೋದು ಉಣ್ಣುವಾಗಲೇ, ಅವರು ನೆನೆಯುವುದು ಶವರ್ ಕೆಳಗೇ ಅವರು ನಡುಗುವುದು ತಮ್ಮವರಿಗೇನಾದರೂ ಆಪತ್ತು ಬಂದಾಗಲೇ, ಇವರಿಗೇನಾದರೂ ಮನೆ ಬಿಟ್ಟು ಊರಿಗೆ ಹೋಗುವ ಪ್ರಸಂಗ ಬಂದರೆ, ಅದೂ ದೂರದ ನೆಂಟರ ಮದುವೆಗೆ, ಜೂನ್‌ನಲ್ಲಿ ಮದುವೆ ಎಂದರೆ ಜನವರಿ ಯಿಂದಲೇ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಊರು, ಮನೆ ಬಿಡುವುದು ಇಂಥವರ ಪಾಲಿಗೆ ವಿಪತ್ತು, ಅದೂ ಹೋಗುತ್ತಿರುವುದು ಯುದ್ಧಕ್ಕಲ್ಲ-ಮದುವೆಗೆ! ಲಗ್ನಕ್ಕೆ ಒಯ್ಯೋ ಬ್ಯಾಗ್‌ಗಳನ್ನು ಒಂದು ರೂಮಿ ನಲ್ಲಿಟ್ಟು ನೆನಪಾದ ಸಾಮಾನುಗಳನ್ನೆಲ್ಲ ಅದಕ್ಕೆ ಜನವರಿಯಿಂದಲೇ ಹಾಕುತ್ತಾರೆ. ಸಣ್ಣ ಬ್ಯಾಟರಿ, ಎಕ್ಸಟ್ರಾ ಸೆಲ್ಲು, ಮೇಣಬತ್ತಿ, ಕಡ್ಡಿಪೆಟ್ಟಿಗೆ, ದಾರ, ಸೂಜಿ, ಹಾಸಿಗೆ ಹೊದಿಕೆ ಎಲ್ಲ ತಮ್ಮ ತಮ್ಮ ಮನೆಯವೇ ತಮ್ಮವೇ ಆಗಬೇಕು. ‘ಲಗ್ನಮನಿ ಅದು ಚಹಾ, ಕಾಫಿ ನಮ್ಮ ಟೈಮಿಗೆ ಸಿಗೋದಿಲ್ಲ. ಪಟ್ಟಣದಾಗ ಕಟ್ಟಿ ಚಹಾ
ಪುಡಿ, ಸಕ್ರಿ ಹಾಕಿರು ಹಾಲು ಪ್ಯಾಕೆಟ್ ಹೋಗೋ ಮುಂದ ಒಯ್ಯೋಣ. ಲಗ್ನಮನಿ -ಳ್ಹಾರ ಲೇಟ್ ಆಗ್ತದ ಒಂದಿಷ್ಟು ಇಡ್ಲಿಮಿಕ್ಸು, ಉಪ್ಪಿಟ್ಟಿನ ಮಿಕ್ಸು, ರವಾ ತಗೊಂಡಿರು.

ನಾವು ಇಳಕೊಂಡ ರೂಂ ನಿಂದ ಟಿಫಿನ್ ಮಾಡಿಯೋ ಹೋಗೋಣ. ಅವರನ್ನು ನೆಚ್ಚಿಕೊಂಡುಕೂತರೆ, ಒಮ್ಮೆಲೆ ಅವರು ಹಾಕಿದಾಗೆ ಕೂಳು ತಿನಬೇಕಾಗ್ತದೆ, ಸೂ—ಮಕ್ಳು ಯೋಗ್ಯತಾ ಇಲ್ಲ, ಯಾಕಾದ್ರೂ ಮಕ್ಳ ಲಗ್ನ ಮಾಡಿ ನಮ್ಮ ಜೀವತಿಂತಾರೋ’ ಎಂದು ಶಾಪ ನಡದೇ ಇರುತ್ತದೆ. ಅಲ್ಲಿ ಇರುವುದು ಒಂದೂವರೆ ದಿನವಾದರೂ ಜ್ವರದ, ಕೆಮ್ಮಿನ ನೆಗಡಿಯ ಔಷಧಗಳ ಒಂದು ಬೇರೆಯದೇ ಬ್ಯಾಗ್ ಮಾಡಿರುತ್ತಾರೆ. ಸೊಳ್ಳೆ ಪರದೆ, ಸೊಳ್ಳೆ ಬತ್ತಿಗಳು, ಇಳಿದುಕೊಂಡು ಕೋಣೆಗೂ, ಕಲ್ಯಾಣ ಮಂಟಪಕ್ಕೂ ದೂರ ಇದ್ದರೆ, ಜೂನ್ ತಿಂಗಳು ಅದು ಬಿಸಿಲು-ಮಳೆ ಎರಡೂ ಕಾಲಗಳ ಸಂಧೀ ಕಾಲ, ನಾಲ್ಕೆ ದು ಛತ್ರಿಗಳು ತಪ್ಪದೇ ಬ್ಯಾಗಿಗೆ ಬೀಳುತ್ತವೆ ತಾವು ಒಂದು ದಿನ, ಊರಿಗೆ ಹೋಗಲು ಇಷ್ಟು ಯೋಚಿಸುವವರು, ಒಂದು ಅಜ್ಜಿಯನ್ನು ಪರಲೋಕಕ್ಕೇ ಕಳಿಸಲು ಯೋಚಿಸುತ್ತಾರೆ.

ಇಂಥವರನ್ನು ನಮ್ಮ ಉತ್ತರ ಕರ್ನಾಟಕದ ಕಡೆ ಕಟ್ಟೆಯ ಕಲ್ಲು ಎನ್ನುತ್ತಾರೆ. ಇವರು ಎಲ್ಲಿರುತ್ತಾರೋ ಅಲ್ಲಿಯೇ ಇರುವಂಥ ವರು. ಕಟ್ಟೆಯ ಮೇಲೆ ಕುಳಿತು ನೂರು ದೇಶ-ಊರುಗಳ ಮಾತಾಡುತ್ತಾರೆ, ಆ ಮೇಲೆ ಎದ್ದು ಹೋಗುತ್ತಾರೆ. ಆದರೆ ಆ ಕಟ್ಟೆ ಕಲ್ಲುಗಳು ಅಲ್ಲಿಯೇ ಇರುತ್ತವೆ, ಕಾಲದ ಹೊಡೆತಗಳಾದ ಮಳೆ, ಭೂಕಂಪ, ಸಿಡಿಲುಗಳು ಮಾತ್ರ ಇಂಥ ಕಟ್ಟೆ, ಗೋಡೆಗಳನ್ನು ಶಿಥಿಲಗೊಳಿಸುತ್ತವೆ, ನಾಶವನ್ನೂ ಮಾಡುತ್ತವೆ. ಹಾಗೆಯೇ ಇಂಥ ಜನರು ಸಣ್ಣ ಆಘಾತಕ್ಕೂ ನೆಲ ಕಚ್ಚುತ್ತಾರೆ.
ಇತ್ತೀಚೆಗೆ ಮೈಸೂರು ಕಾರ್ಯಕ್ರಮ ಮುಗಿಸಿ ರೈಲಿನಲ್ಲಿ ಊರಕಡೆ ಬರುತ್ತಿದ್ದೆ, ಟೂ ಟೈರ್ ಏಸಿ ಬೋಗಿಯಲ್ಲಿ ಕೆಳಗಿನ ಬರ್ಥ ಸಿಕ್ಕಿತ್ತು. ಈ ಏಸಿ ಬರ್ಥುಗಳಲ್ಲಿ ಇರುವವರು ಮೇಲೆ ಹೇಳಿದಂಥ ಜನಗಳೇ, ಹೊರಗಿನದೇನನ್ನೂ ನೋಡುವುದಿಲ್ಲ, ಕೇಳುವುದಿಲ್ಲ.

ಟಿಕೇಟ್ ಚೆಕ್ಕಿಗೆ ಬಂದ ಟಿಸಿಗೆ ಐಡಿ ಕಾರ್ಡ್ ತೋರಿಸಿದರೆಂದರೆ ಸಂಜೆ ೭:೩೦ಕ್ಕೆಲ್ಲ ಮುಸುಗಿಟ್ಟು, ಲೈಟ್ ಆರಿಸಿ ಮಲಗಿ ಬಿಡುತ್ತಾರೆ. ಇವರು ಸಹ ಪ್ರಯಾಣಿಕ ರೊಂದಿಗೆ ಮಾತೇ ಆಡುವುದಿಲ್ಲ. ಏಕೆಂದರೆ ಉಳಿದ ಮನುಷ್ಯರು ಇವರ ಪಾಲಿಗೆ ಮನುಷ್ಯರೇ ಅಲ್ಲ. ರೇಲ್ವೆ ಡಿಪಾರ್ಟ್ ಮೆಂಟನವರು ಬಂದರೆ ಮಾತ್ರ ಕೊರೆವ ಡಿಸೆಂಬರ್ ಚಳಿ ಹೊರಗಿದ್ದರೂ ‘ಏಸಿ ಹೆಚ್ಚು ಮಾಡಿ ಎಂದು ಹೇಳುವುದು ಬಿಟ್ಟರೆ ಬೇರೆ ಮಾತಿಲ್ಲ-ಇಡೀ ಬೋಗಿ ತಣ್ಣಗಿನ ಶವಾಗಾರ. ಬಿಳಿಬಟ್ಟೆ ಹೊದ್ದು ಮಲಗಿದ ಜೀವಂತ ಶವಗಳ ಪೆಟ್ಟಿಗೆಯಂತೆ ಕಾಣುತ್ತದೆ. ಇಲ್ಲಿಗೆ, ಅಂದರೆ ಈ ಬೋಗಿಗೆ ಟೀ, ಕಾಫಿ, ನೀರು, ಪೇಪರ, ಮಾರುವ ಯಾರೂ ಬರುವುದಿಲ್ಲ.

ಭಿಕ್ಷುಕರಿಗಂತೂ ಇದೊಂದು ರಹಸ್ಯ ಮಂದಿರ, ನನಗಂತೂ ಕಿವುಡ- ಮೂಕರ ಶಾಲೆಯ ಆವರಣದೊಳಗೆ ಬಂದು ಕೂತ ಅನುಭವ. ನನ್ನನ್ನು ಗುರುತಿಸಿ ಒಂದು ಕ್ಷಣ ಮುಗುಳ್ನಕ್ಕು, ರೆಪ್ಪೆ ಮುಚ್ಚಿ ತೆಗೆದು ಅಭಿನಂದಿಸಿ ಮರುಕ್ಷಣ ನಾ ಅಲ್ಲಿ ಇಲ್ಲವೇನೋ ಎನ್ನುವಷ್ಟು ತಮ್ಮ ಮೊಬೈಲು, ಲ್ಯಾಪ್‌ಟಾಪ್ ಗಳಲ್ಲಿ ಬಿಜಿಯಾದರು. ಒಂಬತ್ತರ ಹೊತ್ತಿಗೆ ಎದ್ದ ಕೆಲವರು ತಮ್ಮ ಬ್ಯಾಗಿನಿಂದ ಟಿಫಿನ್ ಬಾಕ್ಸ್‌ಗಳನ್ನು ತೆಗೆದು ಮಬ್ಬು ಬೆಳಕಿನಲ್ಲಿ ಮೆತ್ತನೆಯದೇನನ್ನೊ ಗುಳು ಗುಳು ನುಂಗಿ, ನೀರು
ಕುಡಿದರೂ ಒಂದು ಚೂರೂ ಶಬ್ದವಾಗಲಿಲ್ಲ. ಎದುರಿಗೆ ಯಾರೋ ಇದ್ದಾರೆ ಎಂಬುದು ಕೂಡಾ ಯೋಚಿಸದ ಸಮಾಽ ಸ್ಥಿತಿಯಲ್ಲಿ ರಾತ್ರಿ ಊಟ ಮುಗಿಸಿದರು. ಮುಖ, ಮೈಕೈಗೆ ಯಾವುದೋ ಕ್ರೀಂ ಹಚ್ಚಿಕೊಂಡರು, ಬ್ರಷ್, ಪೇಸ್ಟ್ ತೆಗೆದು ಹಲ್ಲುಜ್ಜಿಕೊಂಡು ಬಂದರು. ಬಾತ್ ರೂಂ ಚಪ್ಪಲಿ ಬೇರೆ, ಬೂಟ್ಸು ಬೇರೆ, ಬೋಗಿಯಲ್ಲೇ ಒಂದು ಕಡೆ ತಮ್ಮ ಸೂಟು ನೇತು ಹಾಕಿದ್ದರು.

ಬೋಗಿಯ ಮಬ್ಬು ಬೆಳಕಿನಲ್ಲಿ ಆ ಕರೀ ಸೂಟು ಅಂಜಿಸುವ ಬೆದರು ಗೊಂಬೆಯಂತೆ ಕಾಣಿಸುತ್ತಿತ್ತು. ನನಗೋ ನಾನು ಕಟ್ಟಿಸಿಕೊಂಡು ಬಂದಿದ್ದ ವೆಜ್ ಪಲಾವ್
ಅನ್ನು ಆ ಬೋಗೀಯಲ್ಲಿ ತೆರೆಯಲೇ ಮನಸ್ಸಾಗಲಿಲ್ಲ. ಏಕೆಂದರೆ, ಉಪ್ಪು-ಖಾರ ಜಾಸ್ತಿ ಹಾಕಿಸಿಕೊಂಡು ಘಂ ಅನ್ನೊ ಮಸಾಲೆ ವಾಸನೆಗೆ ಎಲ್ಲಿ ಆ ಬೋಗಿ ಗಂಧರ್ವರು, ದೈವಾಂಶ ಸಂಭೂತರು, ಪ್ರಾಣಬಿಡುತ್ತಾರೋ ಎಂಬ ಭಯವಾಯಿತು. ಹಸಿದುಕೊಂಡೇ ಕೂತೆ. ಮೆಲ್ಲಗೆ ಸೇಬು ತೆಗೆದೆ, ಆಪಲ್ ತಿಂದರೆ ಖಂಡಿತ ಈ ವಾತಾವರಣಕ್ಕೆ ನಾನು ಅರ್ಹನಾಗುತ್ತೇನೆ ಎನಿಸಿತು. ಅದೋ ಗಟ್ಟಿ ಸೇಬು ಎಂಥಾ ಶಬ್ದ ಮಾಡಬಾರದೆಂದರೂ ಮೊದಲು ಕಚ್ಚುವಿಕೆಗೆ ಅದು ಕರಕ್ ಎಂದೇ
ಬಿಟ್ಟಿತು.

ತಕ್ಷಣ ಮೇಲೆ, ಕೆಳಗೆ ಸೈಡಿನ ಬರ್ಥಗಳಲ್ಲಿ ಮುಖ ಮುಚ್ಚಿದ್ದ ಹೊದಿಕೆಗಳೆಲ್ಲ ಸರಕ್ಕನೆ ಮುಖ ಹೊರಹಾಕಿ ‘ವಾಟ್ ಹ್ಯಾಪನ್ಡ್ ಏನಿಥಿಂಗ್ ರಾಂಗ್ ಎಂದವು, ಲ್ಯಾಪ್ ಟಾಪ್ ಬೆಳಕಿನ ಕೆಲ ಮುಖಗಳು ಕಣ್ಣು ಗುಡ್ಡೆಗಳನ್ನು ಮಾತ್ರ ನನ್ನಕಡೆ ಪ್ರಶ್ನಾರ್ಥಕವಾಗಿ ನೋಡಿದವು, ಕೆಲವರು ಲೈಟ್ ಹಾಕಿ ಬಿಟ್ಟರು. ಗಟ್ಟಿ ಸೇಬಿನ ತುಂಡು ನನ್ನ ಬಾಯಿಯ ಒಂದು ಕಡೆ ಒಸಡಿನಲ್ಲಿ ಉಬ್ಬಿ ನಿಂತು ಬಿಟ್ಟಿತ್ತು. ಕಳ್ಳನ ಪರಿಸ್ಥಿತಿ ನನ್ನದು, ಬಂಗಾರದ ಗಟ್ಟಿ ಕದ್ದು ನುಂಗುತ್ತಿದ್ದೇನೋ ಅನಿಸಿಬಿಟ್ಟಿತು. ಪೆಚ್ಚು ನಗೆ ನಗುತ್ತಾ ಆಪಲ್, ಆಪಲ್ ಎಂದೆ. ಓ ಎಂದ ಅವರು ‘ಅದನ್ನ ಹಾಟ್ ವಾಟರ್‌ನಲ್ಲಿ ಬಾಯಿಲ್ ಮಾಡಿ ಪೀಸಸ್ ತರ‍್ಬೇಕು’ ಎಂದು ಸಲಹೆ ಕೊಟ್ಟು ಮಲಗಿದರು.
ಕೊನೆಗೆ ಬೋಗಿಯಿಂದ ಎದ್ದು ಬಾಗಿಲ ಬಳಿ ಬಂದು ಅಲ್ಲಿದ್ದ, ಏಸಿ ಬರ್ಥಗಳಿಗೆ ರಗ್ಗು, ದಿಂಬು, ಹೊದಿಕೆಗಳನ್ನು ಕೊಡುವ ಹುಡುಗನ ಮರದ ಸೀಟಿನ ಮೇಲೆ ಟಾಯಲೆಟ್ ಪಕ್ಕದಲ್ಲೇ ಕೂತು ಅವನೊಂದಿಗೆ ವೆಜ್ಜ್ ಪಲಾವ್ ಹಂಚಿಕೊಂಡು ತಿಂದು ಮುಗಿಸಿದೆ.

ವಿಷ್ಣಪುರಾಣ ಓದುತ್ತಿದ್ದೆ. ಸಾವಿರಾರು ವರ್ಷಗಳ ಹಿಂದೆ ಎಲ್ಲೆಲ್ಲೂ ಬರೀ ನೀರು, ಬರೀ ಕತ್ತಲು ಇತ್ತಂತೆ. ಈಗ ಮತ್ತೆ ಪ್ರಳಯವಾಗೇ ಆಗುತ್ತದೆ. ಅದಕ್ಕೆ
ಇವರೆಲ್ಲ ಹೇಗೆ ಸಜ್ಜಾದಾರು?