Saturday, 21st September 2024

ಮನೆ ಸುತ್ತ ಮರಯದ ಗೆಳೆಯರು

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ನಮ್ಮ ಮನೆ ಸುತ್ತಮುತ್ತ ನನಗಿದ್ದ ಗೆಳೆಯರಿಗಿಂತ ಮರಗಳ ಸಂಖ್ಯೆಯೇ ಜಾಸ್ತಿ. ವರ್ಷಗಟ್ಟಲೆ ನನ್ನ ನೆರೆಹೊರೆಯವ ರಂತಾಗಿದ್ದ ಆ ಮರಗಳು ನನ್ನ ಆತ್ಮೀಯ ಗೆಳೆಯರಾಗಿ ರೂಪುಗೊಂಡದ್ದು ನಿಮ್ಮಲ್ಲಿ ಕೆಲವರಿಗೆ ಅಚ್ಚರಿ ತಂದಿದ್ದರೂ, ಅದೇನೂ ಕೌತುಕ ಸಂಗತಿ ಅಲ್ಲ.

ನಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ನಮ್ಮ ಮನೆಯ ಸುತ್ತಲೂ ಮರಗಳು! ಅತ್ತ ನೋಡಿದರೂ ಮರ, ಇತ್ತ ನೋಡಿದರೂ ಮರ, ಮನೆಯ ಮೇಲೂ ಚಾಚಿಕೊಂಡ ತೆಂಗಿನ ಮರ! ನಮ್ಮ ಮನೆಯ -ಸಲೆಯಲ್ಲಿ ನನಗಿದ್ದ ಸಹಪಾಠಿಗಳು ಬೆರಳೆಣಿಕೆಯಷ್ಟು. ಮಲೆನಾಡಿನ ಸೆರಗಿನಲ್ಲಿದ್ದ ನಮ್ಮೂರಿನಲ್ಲಿ ಒಂದು ಮನೆಗೂ ಇನ್ನೊಂದು ಮನೆಗೂ ಸಾಕಷ್ಟು ಅಂತರ.

ಒಂದು ಮನೆಯಿಂದ ಕಾಲು ಕಿಮೀ ಅಥವಾ ಅರ್ಧ ಕಿಮೀ ಕ್ರಮಿಸಿದರೆ ಇನ್ನೊಂದು ಮನೆ. ಹೀಗಾಗಿ, ಮೂರ‍್ನಾಲಕ್ಕು ಕಿಮೀ ಸುತ್ತಳತೆಯ ನಮ್ಮೂರಿನಲ್ಲಿ ನನಗೆ ಗೆಳೆಯರಾಗಿ ದೊರೆಯುತ್ತಿದ್ದ ಸಹಪಾಠಿಗಳು ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಮನೆಯ ಸುತ್ತ ಮುತ್ತ ಇದ್ದ ಇಂತಹ ಸಹಪಾಠಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಮರಗಳು!

ದೀರ್ಘ ಕಾಲದ ಒಡನಾಟದ ಮೂಲಕ ಮರಗಳು ನನ್ನ ಗೆಳೆಯ, ಗೆಳತಿಯರೇ ಆಗಿದ್ದವು ಎಂದರೆ, ಅದು ಅಚ್ಚರಿಯೂ ಅಲ್ಲ, ಅತಿಶಯೋಕ್ತಿಯೂ ಅಲ್ಲ. ಆ ಮರಗಳಲ್ಲಿ ಅದೆಷ್ಟು ವೈವಿಧ್ಯ! ಕೆಲವು ಕುಳ್ಳ, ಕೆಲವು ಎತ್ತರ, ಕೆಲವು ದಪ್ಪ, ಕೆಲವು ಸಪೂರ, ಕೆಲವುಗಳ ತುಂಬಾ ದಟ್ಟ ಹಸಿರೆಲೆ, ಅದೆಷ್ಟು ದಟ್ಟವೆಂದರೆ ಅಂತಹ ಮರಗಳಲ್ಲಿ ಯಾರಾದರೂ ಅಡಿಗಿ ಕುಳಿತರೆ ಕಾಣದೇ ಇರುವಷ್ಟು! ಆದ್ದರಿಂದಲೇ ಇರಬೇಕು, ಅಂತಹ ಕೆಲವು ದಟ್ಟ ಎಲೆಗಳ ಬೃಹತ್ ಮರಗಳಲ್ಲಿ ಭೂತಗಳು ವಾಸಿಸುತ್ತಿದ್ದವು ಎಂದು ನಮ್ಮೂರಿ ನವರು ಹೆದರುತ್ತಿದ್ದರು. ಇನ್ನು ಕೆಲವು ಮರಗಳ ಎಲೆಗಳು ವಿರಳ, ತೆಳು. ಕೆಲವು ಮರ ಬೋಳು, ಬೋಳು, ನೆಟ್ಟಗೆ ಏಕಾಂಗಿಯಾಗಿ ಬೆಳೆದು ನಿಂತಿರುತ್ತಿದ್ದವು.

ಇನ್ನು ಕೆಲವು ಮರಗಳು ವಿಶಾಲವಾಗಿ ಹರಡಿಕೊಂಡು, ರೆಂಬೆಕೊಂಬೆಗಳನ್ನು ಬಾನಿನುದ್ದಕ್ಕೂ ಚಾಚಿರುತ್ತವೆ. ಮಾತ್ರವಲ್ಲ, ತಮ್ಮ ಮಡಿಲಿನಲ್ಲಿ ಹಾವಸೆ, ಬಂದಳಿಕೆ, ಅಪ್ಪುಬಳ್ಳಿ, ಮರಕೆಸದಂತಹ ಪುಟಾಣಿ ಗಿಡಗಳಿಗೆ ಆಶ್ರಯ ನೀಡುತ್ತವೆ. ಹಕ್ಕಿ, ಪ್ರಾಣಿಗಳೂ ಅಷ್ಟೆ – ಕೆಲವು ಮರಗಳನ್ನು ಹುಡುಕಿಕೊಂಡು, ಹೋಗಿ
ಅಲ್ಲೇ ಬೀಡುಬಿಟ್ಟು,ಅಲ್ಲೇ ಗೂಡು ಕಟ್ಟಿ, ಮರಗಳು ನೀಡುವ ಹಣ್ಣು, ಮಕರಂದಗಳನ್ನು ಸೇವಿಸಿ, ಆ ಮರದ ಆತಿಥ್ಯ ಪಡೆಯುವಲ್ಲಿ ಖುಷಿ ಕಾಣುತ್ತಿದ್ದವು. ಇಂತಹ ಗುಣದ ಕೆಲವು ಮನುಷ್ಯ ರನ್ನು ನೀವು ನೋಡಿರಬಹುದು – ಸದಾಕಾಲ ಗೆಳೆಯರ ಗುಂಪನ್ನು ಕಟ್ಟಿಕೊಂಡು, ಕೆಲವರಿಗೆ ಆಹಾರ, ಪಾನೀಯ ನೀಡುತ್ತಾ, ಕೈಲಾದ
ಸಹಾಯ ಮಾಡುವವರನ್ನು ನೀವು ಕಂಡಿರಬಹುದು.

ಇನ್ನು ಕೆಲವು ಮರಗಳು ಯಾವ ಪಕ್ಷಿಗೂ ಆತಿಥ್ಯ ನೀಡದೇ ಇರುವಂತಹವು, ನೆರಳನ್ನೂ ಕೊಡದಂತಹವು, ಯಾವ ಪ್ರಾಣಿಗೂ ಆಶ್ರಯ ನೀಡದೇ ಇರುವಂತಹವು – ಅಕೇಶಿಯಾದಂತಹ ಬರಡು ಮರಗಳು. ನಮ್ಮ ಮನೆ ಸುತ್ತಮುತ್ತ ನನಗಿದ್ದ ಸಹಪಾಠಿ ಗೆಳೆಯರಿಗಿಂತ ಮರಗಳ ಸಂಖ್ಯೆಯೇ ಜಾಸ್ತಿ ಎಂದೆನಲ್ಲ, ವರ್ಷಗಟ್ಟಲೆ ನನ್ನ ನೆರೆಹೊರೆಯವ ರಂತಾಗಿದ್ದ ಆ ಮರಗಳು ನನ್ನ ಆತ್ಮೀಯ ಗೆಳೆಯ ರಾಗಿ ರೂಪುಗೊಂಡದ್ದು ನಿಮ್ಮಲ್ಲಿ ಕೆಲವರಿಗೆ ಅಚ್ಚರಿ ತಂದಿದ್ದರೂ, ಅದೇನೂ ವಿಸ್ಮಯ ಕಾರಿ ಕೌತುಕದ ಘಟನೆಯೇನೂ ಅಲ್ಲ ಎಂದೇ ಹೇಳಬೇಕು. ಸುದೀರ್ಘಕಾಲ ನನ್ನ ಸುತ್ತಲೂ ಆವರಿಸಿಕೊಂಡು, ಹಲವು ಬಾರಿ ನೇರ ಮತ್ತು ಪರೋಕ್ಷ ಸಹಾಯ ನೀಡಿ, ಸಿಹಿಹಣ್ಣುಗಳನ್ನು ತಿನ್ನಲು ಕೊಟ್ಟು, ಸುವಾಸಿತ ಹೂವುಗಳನ್ನು ನೀಡಿ, ಗುಡುಗು ಮಳೆ ಬಂದಾಗ ರಕ್ಷಣೆ ನೀಡಿದ ಆ ಮರಗಳು, ನನ್ನ ಬಾಲ್ಯಸ್ನೇಹಿತರಾಗಿ ಪರಿವರ್ತನೆಗೊಂಡದ್ದು, ನಿಸರ್ಗ ಸಹಜ ಕ್ರಿಯೆಯೇ ಇರಬೇಕು.

ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ಕೆಲವು ಮರಗಳ ಸವಿನೆನಪನ್ನು ಮಾತ್ರ ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುವೆ. ನಮ್ಮ ಮನೆ ಎದುರಿನ ಗದ್ದೆಬೈಲನ್ನು ದಾಟಿದ ನಂತರ ಸಿಗುವ ಹಾಡಿಯ ನಡುವಿನ ಕಾಲ್ದಾರಿಯನ್ನು ಅನುಸರಿಸಿ ಪ್ರತಿದಿನ ಶಾಲೆಗೆ ಹೋಗುವ ಶಿಸ್ತು ನಮ್ಮದು. ನಾನಾಗ ಮೂರನೆಯ ತರಗತಿಯಲ್ಲಿದ್ದೆ. ಎಂದಿನಂತೆ ಸ್ಲೇಟು, ಬಳಪ ಮತ್ತು ಆ ತರಗತಿಗೆ ಆಗ ಇದ್ದ ಏಕೈಕ ಪಠ್ಯಪುಸ್ತಕವನ್ನು ಪುಟ್ಟ ಬಟ್ಟೆಯ ಚೀಲಕ್ಕೆ ತುಂಬಿಕೊಂಡು, ಗದ್ದೆಯ ಅಂಚಿನಲ್ಲಿ ಸಾಗಿ,
ಒಂದು -ರ‍್ಲಾಂಗು ದೂರದ ಮುಡಾರಿ ತಲುಪಿದಾಗ ಒಂದು ಪುಟ್ಟ ವಿರಾಮ. ಮುಡಾರಿ ಮನೆಯಿಂದ ಇಬ್ಬರು ಮಕ್ಕಳೊಡಗೂಡಿ, ಆ ಮನೆಯ ಹಿಂಭಾಗದ ಹಾಡಿಯ ನಡುವೆ ಸಾಗುತ್ತಿತ್ತು ನಮ್ಮ ದಾರಿ. ಆ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಮರ ಗಳು, ಗಿಡಗಳು, ಬಳ್ಳಿಗಳು. ಅವುಗಳ ಸಂಖ್ಯೆ ಅಕ್ಷರಶಃ ನೂರಾರು.

ಒಂದು ದಿನ ಶಾಲೆಯಿಂದ ವಾಪಸಾಗುವಾಗ, ಆ ಮರಗಳ ಪೈಕಿ ಒಂದು ಮಧ್ಯಮ ಗಾತ್ರದ ಒಂದನ್ನು ಏರಿದ ಸಹಪಾಠಿ ಸತ್ಯನು, ಕೆಂಪನೆಯ ಹಣ್ಣುಗಳನ್ನು ಕಿತ್ತು
ಕೆಳಗೆಸೆದ. ನಾವೆಲ್ಲರೂ ಆರಿಸಿಕೊಂಡವು. ಆ ವರೆಗೆ ಆ ರೀತಿಯ ಹಣ್ಣುಗಳನ್ನೇ ನೋಡಿರದ ನನಗೆ, ಅವುಗಳನ್ನು ಬಿಡಿಸಿದಾಗ ಬಹು ಅಚ್ಚರಿ! ಕೆಂಪನೆಯ ಆ ಹಣ್ಣಿನೊಳಗೆ ಗುಲಾಬಿ ಬಣ್ಣದ ನಾಲ್ಕಾರು ತೊಳೆಗಳು. ಬಾಯಲ್ಲಿಟ್ಟರೆ ಬಹು ರುಚಿ, ಹುಳಿ ಮಿಶ್ರಿತ ಸಿಹಿ; ಮಾಂಸಲ ಭಾಗವನ್ನು ತಿಂದು ಬೀಜವನ್ನು ಉಗಿಯಬೇಕು.ಆ ಅದ್ಭುತ ರುಚಿಯನ್ನು ಸವಿದ ನನಗೆ, ಆ ಮರವೊಂದು ವಿಸ್ಮಯ ಎನಿಸಿತು.

ಅದರ ಹೆಸರು ‘ಮುರಿನ ಮರ’. ಮುರಿನ ಹಣ್ಣನ್ನು ತಿಂದು, ಅವರ ರುಚಿಗೆ ಬೆರಗಾದ ನಾನು, ಮನೆಗೆ ಮರಳಿದ ಕೂಡಲೇ ಆ ಸವಿಯನ್ನು ನಮ್ಮ ಅಮ್ಮಮ್ಮನ ಬಳಿ ವರ್ಣಿಸಿದೆ. ಅವರು ನಿರ್ಲಿಪ್ತ ಭಾವದಿಂದ ಕೇಳಿ, ನೀರಸದನಿ ಯಲ್ಲಿ ‘ ಓ ಅದಾ, ಅದು ಮುರಿನ ಹಣ್ಣು. ನಮ್ಮ ಮನೆ ಹಿಂದಿನ ಹಕ್ಕಲಿನಲ್ಲೂ ಆ ಮರ ಉಂಟು’
ಎಂದರು. ನನಗೆ ಹೊಸದಾಗಿ ಪರಿಚಯವಾಗಿದ್ದ ಆ ಮರವು, ಅವರಿಗೆ ಬಾಲ್ಯದಿಂದಲೂ ಪರಿಚಿತ!

ಆ ದಿನ ಸತ್ಯ ಕಿತ್ತುಕೊಟ್ಟ ಮುರಿನ ಹಣ್ಣನ್ನು ತಿನ್ನುವಾಗಲೇ,ಅಲ್ಲಿಗೆ ಬಂದ ಅವರ ಅಕ್ಕ ಜಯಂತಿಯು, ಕೊಕ್ಕೆ ಹಿಡಿದು ಇನ್ನೊಂದಿಷ್ಟು ಮುರಿನ ಹಣ್ಣನ್ನು ಕಿತ್ತಳು. ಅಷ್ಟೇ ಅಲ್ಲ, ಅಲ್ಲೇ ಆಚೀಚೆ ಇದ್ದ ನಾಲ್ಕಾರು ಮುರಿನ ಮರಗಳಿಂದ ನೂರಾರು ಹಣ್ಣುಗಳನ್ನು ಕಿತ್ತು, ರಾಶಿಹಾಕಿ, ಬುಟ್ಟಿಯಲ್ಲಿ ತುಂಬಿ ಅವರ ಮನೆ ಅಂಗಳದಲ್ಲಿ
ರಾಶಿ ಹಾಕಿ, ಒಳಗಿನ ತಿರುಳನ್ನು ಬೇರೆ ಮಾಡಿ, ಆ ಹಣ್ಣಿನ ಕೆಂಪನೆಯ ತೊಗಡೆಯನ್ನು ಬಿಸಿಲಿಗೆ ಒಣಗಿಸಿದಳು. ಆ ಒಣಗಿದ ತೊಗಟೆಯೇ ಪುನರ್ಪುಳಿ ತೊಗಟೆ – ವರ್ಷವಿಡೀ ಸಂಗ್ರಹಿಸಿ ಕೊಟ್ಟುಕೊಂಡು, ತಿಳಿ ಸಾರು ಮಾಡಲು ಉಪಯೋಗಿಸುವ ಖ್ಯಾತ ಸಸ್ಯೋತ್ಪನ್ನ.

ಮುರಿನ ಮರದ ಹತ್ತಿರವೇ, ಬೃಹದಾಕಾರದ ಇನ್ನೊಂದು ಮರವಿತ್ತು. ಊಟಕ್ಕೆ ನಂಜಿಕೊಳ್ಳಲು, ಹಪ್ಪಳ ಕರಿಯಲು, ಬೋಂಡಾ ಮಾಡಲು, ಹಲಸಿನ ಹಣ್ಣಿನ ಮುಳಕ ಮಾಡಲು ಅಗತ್ಯವಿರುವ ಎಣ್ಣೆಯನ್ನು ಈ ಮರದ ಕಾಯಿಯಿಂದ ತಯಾರಿಸುತ್ತಿದ್ದರು. ಅಂದಿನ ದಿನಗಳಲ್ಲಿ, ಅಂದರೆ ಇಪ್ಪತ್ತನೆಯ ಶತಮಾನದ ಮೊದಲರ್ಧದಲ್ಲಿ, ನಮ್ಮೂರಲ್ಲಿ ೧೯೭೫ರ ತನಕವೂ ಅಡುಗೆಗೆ ಬೇಕಾದ ಎಣ್ಣೆಯನ್ನು ನಮಗೆಲ್ಲಾ ನೀಡುತ್ತಿದ್ದ ಗೆಳೆಯ ಎಂದರೆ, ದೂಪದ ಮರ. ಪ್ರತಿ ಮಳೆಗಾಲದಲ್ಲಿ ದೂಪದ ಮರದ ತುಂಬಾ ಬಿಡುತ್ತಿದ್ದ ಸಾವಿರಾರು ಕಾಯಿಗಳು ನೆಲಕ್ಕೆ ಬಿದ್ದಾಗ, ಅವುಗಳನ್ನು ಬಿಡಿಸಿ, ತಿರುಳನ್ನು ಅರೆದು ಬೇಯಿಸಿ ಮೇಲೆ ತೇಲುವ ಎಣ್ಣೆಯನ್ನು ಸಂಗ್ರಹಿಸಿ, ವರ್ಷಪೂರ್ತಿ ಉಪಯೋಗಿಸುವ ಪರಿಯನ್ನು ನಾನು ಇನ್ನೊಂದು ಬರೆಹದಲ್ಲಿ ಹಂಚಿಕೊಂಡಿದ್ದುಂಟು. ದೂಪದ ಎಣ್ಣೆಯು ಕ್ರಿಕೆಟ್ ಬಾಲ್ ರೀತಿ ಕಾಣಿಸುವ, ನೆಲದ ಮೇಲೆ ಉರುಳಿಸಿ ಬಿಡಬಹುದಾದಂತಹ ಬಿಳಿ ಉಂಡೆ.

ಆದರೆ, ೧೯೮೦ರ ದಶಕದ ನಂತರ, ಈ ಸ್ನೇಹಜೀವಿ ಮರದ ಕಾಯಿಗಳಿಂದ ಎಣ್ಣೆ ಉಂಡೆಗಳನ್ನು ತಯಾರಿಸುವ ಪದ್ಧತಿ ನಮ್ಮೂರಿನಲ್ಲಿ ನಿಂತು ಹೋಯಿತು. ಅಂಗಡಿಗಳಲ್ಲಿ ಸಿಗುವ ಕಡಿಮೆ ಬೆಲೆಯ ಪಾಮ್ ಆಯಿಲ್ ಅಥವಾ ಪಾಮ್ ಆಯಿಲ್ ಮಿಶ್ರಿತ ಕಡಲೆಕಾಯಿ ಎಣ್ಣೆಯನ್ನು ದುಡ್ಡುಕೊಟ್ಟು ತರುವುದೇ ಹೆಚ್ಚು ಸುಲಭ ಎಂದು ನಮ್ಮೂರಿನವರು ನಿರ್ಧರಿಸಿದ್ದರಿಂದ, ದೂಪದ ಎಣ್ಣೆಯ ಉಂಡೆಗಳು ಈಗ ಸಂಪೂರ್ಣ ಕಣ್ಮರೆಯಾಗಿ ಹೋಗಿವೆ.

ಮನೆ ಎದುರಿನ ಹಾಡಿಯಲ್ಲಿದ್ದ ಬೃಹದಾಕಾರದ ದೂಪದ ಮರಗಳ ಸಂಖ್ಯೆಯೂ ಈಗ ಕಡಿಮೆಯಾಗಿದೆ. ಅಲ್ಲೇಲ್ಲಾ ಈಗ ಕಳೆಸ್ವರೂಪಿ ಅಕೇಶಿಯಯಾ ಮರಗಳ ಹಾವಳಿ. ಬಾಗಾಳು ಮರ, ಅಮಟೆಕಾಯಿ ಮರ, ಹೆಬ್ಬಲಸಿನ ಮರ, ಬಿಂಬಲಿಕಾಯಿ ಮರ, ಮಾವಿನ ಮರ, ಹಲಸಿನ ಮರ, ದಾಸವಾಳದ ಪುಟ್ಟ ಮರ (ನಿಜ, ಮರದ ರೀತಿ ಬೆಳೆದ ಬಿಳಿ ದಾಸವಾಳದ ಗಿಡ), ಹಂಗಾರು ಮರ, ಇವೆಲ್ಲವೂ ನಮ್ಮ ಮನೆಯ ಸುತ್ತಲೂ ಸುಮಾರು ೫೦ ಮೀಟರ್ ಅಂತರದಲ್ಲಿ ಬೆಳೆದು ನಿಂತಿದ್ದವು! ಮನೆ ಎದುರಿನ ಅಂಗಳದ ಅಂಚಿನಲ್ಲಿ, ಪುಟ್ಟ ಅಡಕೆ ತೋಟದ ಸುತ್ತಲೂ, ಇಂತಹ ಮರಗಳ ಸಾಲು. ಅಡಕೆ ನೀಡುವ ಆರ್ಥಿಕ ಲಾಭಕ್ಕಿಂತಲೂ, ಈ ಮರಗಳ ದಿನನಿತ್ಯದ ಸಹಾಯ ಹೆಚ್ಚು ಮೌಲ್ಯದ್ದು ಎಂದು ನಮ್ಮ ಹಿರಿಯರು ಅಂದುಕೊಂಡಿದ್ದರೋ ಏನೊ, ಆ ಮರಗಳನ್ನು ಕತ್ತರಿಸದೇ ಕಾಪಾಡಿಕೊಂಡು ಬಂದಿ
ದ್ದರು.

ಬಾಗಾಳು ಮರದಿಂದ ಬೀಳುವ ಮೋಹಕ ಪುಟಾಣಿ ಹೂವುಗಳು, ಅಮಟೆ ಮರದಿಂದ ಅಡುಗೆಗೆ ಬೇಕಾದ ಹುಳಿ ಮಿಶ್ರಿತ ಅಮಟೆಕಾಯಿಗಳು, ಬೇಸಗೆಯಲ್ಲಿ ರುಚಿಕರ ಹಣ್ಣು ನೀಡುವ ಹೆಬ್ಬಲಸು, ಹುಣಿಸೇ ಹಣ್ಣಿನ ಬದಲು ಉಪಯೋಗಿಸಬಹುದಾದ ಬಿಂಬಲಿಕಾಯಿ, ಮಾವು, ಹಲಸಿನ ಮರಗಳು ಮೊದಲಾದ ಹಲವು ಮರಗಳು ನಮ್ಮ ಮನೆಯ ಅಡುಗೆಗೆ ಸಹಕಾರಿ ಎನಿಸಿ, ಮನೆಯಲ್ಲಿ ಅಡುಗೆ ಮಾಡುವ ಮಹಿಳೆಯರ ಆತ್ಮೀಯ ಗೆಳೆಯರಾಗಿಯೇ ಬೆಳೆದು ನಿಂತಿದ್ದವು. ನಮ್ಮ ಮನೆ ಅಂಗಳದಾಚೆ ಎರಡು ಅಡಿ ಅಗಲದ ಪುಟ್ಟ ತೋಡು ಒಂದಿದೆ.

ತೋಟದಾಚೆಯಿರುವ ಅಗೇಡಿಯಲ್ಲಿ ಸುಗ್ಗಿಯ ಕಾಲದಲ್ಲಿ ಬತ್ತ ಬೆಳೆಯಲು ನೀರು ಸಾಗಿಸುವ ಕಾಲುವೆ ಅದು. ಆ ತೊರೆಗೆ ತಾಗಿಕೊಂಡಂತೆ, ಎರಡು ದಾಸವಾಳ ಗಿಡಗಳು ಬೆಳೆದಿದ್ದವು. ಅವುಗಳ ವೈಶಿಷ್ಟ್ಯವೆಂದರೆ, ಗಿಡ ಎಂದು ಕರೆಯಲಾಗದಷ್ಟು ಬಲಿಷ್ಠವಾಗಿ ಬೆಳೆದಿದ್ದವು. ಅದೆಷ್ಟೋ ವರ್ಷಗಳಿಂದ ಅಲ್ಲಿ ಬೆಳೆದಿದ್ದ ಆ ಎರಡು ಗಿಡಗಳು, ಸುಮಾರು ೧೦ ಅಡಿ ಎತ್ತರದ ಎರಡು ಮರಗಳ ರೀತಿ ರೂಪುಗೊಂಡದ್ದು ಒಂದು ವಿಸ್ಮಯ. ಆ ದಾಸವಾಳದ ಮರಗಳನ್ನು ಆ ರೀತಿ ಬೆಳೆಯಗೊಟ್ಟಿದ್ದು ನಮ್ಮೂರಿನ ಮಹಿಳೆಯರು.

ಏಕೆ ಗೊತ್ತಾ? ಆ ಎರಡು ದಾಸವಾಳದ ಮರಗಳು ಅಲ್ಲೆ ತಲೆ ಎತ್ತಿ ನಿಂತಿದ್ದು, ಕೇವಲ ಹೂಗಿಡಗಳ ರೂಪದಲ್ಲಿ ಮಾತ್ರವಲ್ಲ, ಬದಲಿಗೆ ಆಹಾರಕ್ಕೆ ಎಲೆಗಳನ್ನು ಒದಗಿಸುವ ಮರಗಳ ರೀತಿ! ಆ ಎಲೆಗಳನ್ನು ಅಕ್ಕಿ ಹಿಟ್ಟಿನ ಜತೆ ಮಿಶ್ರಣಮಾಡಿ, ಅರೆದು ಇಡ್ಲಿ ಮತ್ತು ಸೆಕೆಹಿಟ್ಟು (ಇಡ್ಲಿಯ ಹಳ್ಳಿರೂಪ) ತಯಾರಿಸುತ್ತಿದ್ದ ಕಲೆಯನ್ನು ನಮ್ಮೂರಿನ ಮಹಿಳೆಯರು ಕರಗತ ಮಾಡಿಕೊಂಡಿದ್ದರು. ನಮ್ಮ ತೋಟದಲ್ಲಿದ್ದ ಆ ಎರಡು ದಾಸವಾಳದ ಪುಟಾಣಿ ಮರಗಳು ‘ಬಿಳಿ ದಾಸವಾಳ’ ಪ್ರಭೇದದವು. ವಾರಕ್ಕೆ ಒಂದು ಅಥವಾ ಎರಡು ಬಾರಿಯಾದರೂ ನಮ್ಮೂರಿನ ಕೆಲವು ಮನೆಯವರು ಬಂದು ‘ದಾಸಾನು ಸೊಪ್ಪು ಕೊಯ್ಕಂತೀವಿ’ ಎಂಬ ಮಾಹಿತಿ ನೀಡಿ, ಆ ಗಿಡದ ಎಲೆಗಳನ್ನು ಕೊಯ್ಯುತ್ತಿದ್ದರು.

ನಮ್ಮ ಮನೆಯವರು ಸಹ ಆಗಾಗ ಅದರ ಒಂದಷ್ಟು ಎಲೆಗಳನ್ನು ಕೊಯ್ದು, ಸಣ್ಣಗೆ ಹೆಚ್ಚಿ ಅಕ್ಕಿ ಹಿಟ್ಟಿನ ಜತೆ ಅರೆದು, ಇಡ್ಲಿ ಅಥವಾ ಸೆಕೆಹೆಟ್ಟು ಮಾಡಿ ತಿನ್ನುವ ಪರಿಪಾಠ. ಬಿಳಿ ದಾಸವಾಳದ ಎಲೆಗಳನ್ನು ತಿಂದರೆ ತಲೆಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ಮಹಿಳೆಯರ ಮುಟ್ಟಿನ ಸಮಸ್ಯೆಗಳು ಪರಿಹಾರವಾ
ಗುತ್ತವೆಂಬ ನಂಬಿಕೆ. ಎಲೆಗಳನ್ನು ಕೊಯ್ಯುವಾಗ, ಚಿಗುರು ಎಲೆಗಳನ್ನು ಹಾಗೆಯೇ ಇರಗೊಟ್ಟು, ಗಿಡದ ಬೆಳವಣಿಗೆಗೆ ತೊಂದರೆಯಾಗದಂತೆ ಎಲೆ ಕೊಯ್ಯು
ತ್ತಿದ್ದ ಕೌಶಲವನ್ನು ನಮ್ಮೂರಿನ ಎಲ್ಲರೂ ಕಲಿತಿದ್ದರು. ಇದೇ ರೀತಿ ಔಷಧಿಯ ಸಸ್ಯವಾಗಿ ನಮ್ಮ ಮನೆ ಪ್ರವೇಶಿಸಿದ್ದು ಹಂಗಾರ ಮರ. ಮೈತುಂಬಾ ಮುಳ್ಳುಗ
ಳಿದ್ದ ಆ ಮೆದುಮರದ ತೊಗಟೆಯು ಜ್ವರ ಕಡಿಮೆ ಮಾಡುವಲ್ಲಿ ರಾಮಬಾಣ.

ಸುತ್ತಮುತ್ತ ಯಾರಿಗೇ ಮೂಗು ಸೊರ ಸೊರವಾದರೆ, ಮೈ ಬೆಚ್ಚಗಾಗಿ ಜ್ವರ ಬಂದರೆ, ಹಂಗಾರ ಮರದ ಎರಡಿಂಚು ತೊಗಟೆಯ ನ್ನು ಕೆತ್ತಿ, ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಸುವ ಪರಿಪಾಠ. ಹಂಗಾರ ಕೆತ್ತೆ ಕಷಾಯಕ್ಕೆ ಮೆಣಸಿನ ಕಾಳನ್ನು ಪುಡಿಮಾಡಿ ಕುದಿಸಿದರಂತೂ, ಹೆಚ್ಚಿನ ಜ್ವರಗಳು ಓಡಿಹೋಗುತ್ತಿದ್ದವು. ಹಂಗಾರು ಮರವು ಮಕ್ಕಳ ಜತೆ ಬೇರೊಂದು ರೀತಿಯಲ್ಲಿ ಸ್ನೇಹಿತ – ಅರ್ಧ ಸೆಂಟಿಮೀಟರ್ ಉದ್ದನೆಯ ಅದರ ಕೆಂಪನೆಯ ಬೀಜಗಳು ಚೆನ್ನೆಮಣೆ ಆಡಲು ಚಂದವಾದ್ದರಿಂದ, ಸದಾಕಾಲ ಮಕ್ಕಳ ಜೇಬಿನಲ್ಲಿ ಅವುಗಳ ರಾಶಿ. ಇನ್ನಷ್ಟು ಗೆಳೆಯರ ಕುರಿತು ಮುಂದಿನ ವಾರ.